“ʼನಿಮ್ಮ ಮನೆಯ ಹುಡುಗಿಯೊಬ್ಬಳು ಮನೆಯಿಂದ ಹೊರಗೆ ಹೋಗಿ ಹಣ ಸಂಪಾದನೆ ಮಾಡುವುದೇ?ʼ ಇದು ನಮ್ಮ ಮಾವನವರನ್ನು ಜನರು ಕೇಳುತ್ತಿದ್ದ ಪ್ರಶ್ನೆ. ನಾನೊಬ್ಬಳು ಪೇಟೆಯಲ್ಲಿ ಬೆಳೆಸಲ್ಪಟ್ಟ ಮಗಳಲ್ಲ, ಹೀಗಾಗಿ ನಮಗೆ ನಿಯಮಗಳು ಸಾಕಷ್ಟು ಬಿಗಿಯಿರುತ್ತವೆ,” ಎನ್ನುತ್ತಾರೆ ಫಾತಿಮಾ ಬೀಬಿ.

ತನ್ನ ಕಪ್ಪು ನಿಕಾ ಬಿ ನಿಂದ ಜಾಣ್ಮೆಯಿಂದ ಹೊರಬಂದ ಫಾತಿಮಾ ಅದನ್ನು ಮುಂಬಾಗಿಲಿನ ಬಳಿಯ ಮೊಳೆಗೆ ನೇತುಹಾಕಿ, ಮಾತನಾಡುತ್ತಲೇ ತನ್ನ ಮನೆಯನ್ನು ಹೊಕ್ಕರು.  "ನಾನು ಚಿಕ್ಕ ಹುಡುಗಿಯಾಗಿದ್ದಾಗ, ನನ್ನ ವ್ಯಾಪ್ತಿ ಅಡುಗೆಮನೆಯಷ್ಟೇ ಎಂದು ಭಾವಿಸಿದ್ದೆ - ಅಡುಗೆ ಮಾಡುವುದು ಮತ್ತು ಮನೆಯನ್ನು ನಿರ್ವಹಿಸುವುದು," ಎಂದು ಅವರು ಹಿಂದಿನ ದಿನಗಳನ್ನು ನೆನೆಸಿಕೊಂಡು ನಗುತ್ತಾ ಹೇಳುತ್ತಾರೆ. "ನಾನು ಏನನ್ನಾದರೂ ಮಾಡಬೇಕೆಂದು ಪ್ರಯತ್ನಿಸಲು ನಿರ್ಧರಿಸಿದಾಗ, ನನ್ನ ಕುಟುಂಬವು ಹೊರಗೆ ಹೋಗಿ ಏನಾದರೂ ಸಾಧಿಸಲು ನನಗೆ ಎಲ್ಲಾ ಸ್ವಾತಂತ್ರ್ಯವನ್ನು ನೀಡಿತು. ನಾನು ಮುಸ್ಲಿಂ ಯುವತಿ ಇರಬಹುದು, ಆದರೆ ನಾನು ನಾನು ಮಾಡಲು ಸಾಧ್ಯವಿಲ್ಲದಿರುವುದು ಯಾವುದೂ ಇಲ್ಲ", ಎಂದು ಈ 28 ವರ್ಷದ ಧೈರ್ಯವಂತ ಮಹಿಳೆ ಹೇಳುವಾಗ ಆಕೆಯ ದುಪ್ಪಟ್ಟಾದಲ್ಲಿದ್ದ ಬೆಳ್ಳಿ ಬಣ್ಣದ ಚುಕ್ಕಿಗಳು ಮಧ್ಯಾಹ್ನದ ಬೆಳಕಿಗೆ ಫಳಫಳನೆ ಹೊಳೆಯುತ್ತಿದ್ದವು.

ಫಾತಿಮಾ ಉತ್ತರ ಪ್ರದೇಶದ ಪ್ರಯಾಗರಾಜ್ (ಹಿಂದಿನ ಅಲಹಾಬಾದ್) ಜಿಲ್ಲೆಯ ಮಾಹೆವಾ ಪಟ್ಟಣದ ನಿವಾಸಿ, ಅಲ್ಲಿನ ಬದುಕಿಗೆ ಆ ಊರಿನಲ್ಲಿ ಹರಿಯುವ ಯಮುನಾ ನದಿಯದೇ ವೇಗ. ಇಂದು ಫಾತಿಮಾ ಬದುಕಿನ ಓಟದಲ್ಲಿ ಓಡುತ್ತಾ ಓರ್ವ ನುರಿತ ಕುಶಲಕರ್ಮಿ ಮತ್ತು ಕರಕುಶಲ ಉದ್ಯಮಿಯಾಗಿದ್ದಾರೆ. ಮೂಂಜ್‌ ಎನ್ನುವ ವಿವಿಧ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸುತ್ತಾರೆ ಮತ್ತು ಮಾರಾಟ ಮಾಡುತ್ತಾರೆ. ಇದು ಮೊನಚಾದ ಜೊಂಡು ಮಾದರಿಯ ಸರ್ಪತ್ ಹುಲ್ಲಿನ ಎಸಳಿಂದ ತಯಾರಿಸಿದ ಉತ್ಪನ್ನಗಳ ಶ್ರೇಣಿ.

ಬಾಲಕಿ ಫಾತಿಮಾಳಿಗೆ ತಾನು ಮುಂದೆ ಏನಾಗಬೇಕು ಎನ್ನುವುದರ ಕುರಿತು ಯಾವುದೇ ಕಲ್ಪನೆ ಇದ್ದಿರಲಿಲ್ಲ. ಆದರೆ ಮೊಹಮ್ಮದ್ ಶಕೀಲ್ ಅವರೊಂದಿಗಿನ ವಿವಾಹವು ಅವರನ್ನು ಮಾಹೆವಾಗೆ ಮತ್ತು ಅನುಭವಿ ಮೂಂಜ್ ಕುಶಲಕರ್ಮಿ, ಅತ್ತೆ, ಆಯೇಷಾ ಬೇಗಂ ಅವರ ಮನೆಗೆ ಕರೆತಂದಿತು.

PHOTO • Priti David
PHOTO • Priti David

ಎಡ: ಆಯೇಷಾ ಬೇಗಂ ಮೂಂಜ್ ಬುಟ್ಟಿಯ ಮುಚ್ಚಳವನ್ನು ನೇಯುತ್ತಿರುವುದು. ಒಣಗಿದ ಹುಲ್ಲಿನಿಂದ ಬುಟ್ಟಿಗಳು, ತೊಟ್ಟಿಗಳು, ಕೋಸ್ಟರ್‌ಗಳು, ಆಭರಣಗಳು ಮತ್ತು ಅಲಂಕಾರಿಕ ವಸ್ತುಗಳಂತಹ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಾರೆ. ಬಲ: ಫಾತಿಮಾ ಬೀಬಿ, ಆಯೇಷಾರ ಸೊಸೆ, ಸಿದ್ಧಪಡಿಸಿದ ಬುಟ್ಟಿಗಳ ಒಂದು ಶ್ರೇಣಿಯೊಂದಿಗೆ, ಅವುಗಳನ್ನು ಅಂಗಡಿಗಳು ಮತ್ತು ಕರಕುಶಲ ಪ್ರದರ್ಶನಗಳಲ್ಲಿ ಮಾರಾಟ ಮಾಡಲಾಗುತ್ತದೆ

ಹೊಸದಾಗಿ ಮದುವೆಯಾಗಿ ಬಂದಿದ್ದ ಫಾತಿಮಾ ತನ್ನ ಅತ್ತೆಯ ಪಳಗಿದ ಕೈಗಳು ಈ ಜೊಂಡು ಹುಲ್ಲನ್ನು ಹೇಗೆ ಪಳಗಿಸಿ ವಿವಿಧ ವಸ್ತುಗಳನ್ನು ತಯಾರಿಸುತ್ತಾರೆ ಎನ್ನುವುದನ್ನು ಗಮನಿಸತೊಡಗಿದರು. ಅವರ ಅತ್ತೆ ಹಲವು ಬಗೆಯ, ಹಲವು ವಿಧದ, ಆಕಾರದ ಮುಚ್ಚಳವಿರುವ, ಮುಚ್ಚಳವಿಲ್ಲದ ಬುಟ್ಟಿಗಳು ಮತ್ತು ಟ್ರೇಗಳು; ಪೆನ್ ಸ್ಟ್ಯಾಂಡ್ಗಳು; ಚೀಲಗಳು; ಕಸದ ತೊಟ್ಟಿಗಳು; ಮತ್ತು ಸಣ್ಣ ಜೋಕಾಲಿಗಳು, ಟ್ರಾಕ್ಟರ್‌ಗಳು ಮತ್ತು ಇನ್ನೂ ಹೆಚ್ಚಿನ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದರು. ಈ ಉತ್ಪನ್ನಗಳ ಮಾರಾಟವು ಸ್ಥಿರವಾದ ಆದಾಯವನ್ನು ತರುತ್ತಿತ್ತು, ಇದು ಮನೆಯ ಮಹಿಳೆಯರಿಗೆ ತಮಗೆ ಸೂಕ್ತವೆನ್ನಿಸುವುದಕ್ಕೆ ಖರ್ಚು ಮಾಡಲು ಸಿಗುವ ಆದಾಯವಾಗಿದೆ.

"ಪಿಪಿರಾಸಾದಲ್ಲಿರುವ ನಮ್ಮ ಮನೆಯಲ್ಲಿ ನನ್ನ ತಾಯಿಯೂ ಇದನ್ನು [ಮೂಂಜ್ ಉತ್ಪನ್ನಗಳನ್ನು] ತಯಾರಿಸುವುದನ್ನು ನೋಡಿದ್ದೇನೆ" ಎಂದು ಅವರು ಹೇಳುತ್ತಾರೆ. ಸ್ವಲ್ಪ ಸಮಯದಲ್ಲೇ ಫಾತಿಮಾ ಕೂಡ ಈ ಕೆಲಸವನ್ನು ಕೈಗೆತ್ತಿಕೊಂಡರು. “ನಾನು ಗೃಹಿಣಿಯಾಗಿದ್ದೆ, ಮನೆಯಲ್ಲಿ ಕೆಲಸ ಮಾಡುತ್ತಿದ್ದೆ, ಆದರೆ ನನಗೆ ಇನ್ನೂ ಹೆಚ್ಚಿನದು ಏನಾದರೂ ಮಾಡಬೇಕೆಂಬ ಅಪೇಕ್ಷೆ ಇತ್ತು. ಈಗ [ಈ ಕೆಲಸದಿಂದ] ನಾನು ತಿಂಗಳಿಗೆ ಸುಮಾರು 7,000 ರೂಪಾಯಿಗಳನ್ನು ಗಳಿಸಬಲ್ಲೆ,” ಎಂದು ಒಂಬತ್ತು ವರ್ಷದ ಆಫಿಯಾ ಮತ್ತು ಐದು ವರ್ಷದ ಅಲಿಯಾನ್‌ ಎನ್ನುವ ಮಕ್ಕಳ ತಾಯಿ ಹೇಳುತ್ತಾರೆ.

ಫಾತಿಮಾ ತನ್ನ ಮೂಂಜ್ ಕಲಾಕೃತಿಗಳ‌ ತಯಾರಿಕೆಯಿಂದ ಬಿಡುವು ದೊರೆತಾಗ, ಕರಕುಶಲತೆಯನ್ನು ವಿವಿಧ ರೀತಿಯಲ್ಲಿ ಪ್ರಚಾರ ಮಾಡುವಲ್ಲಿ ನಿರತರಾಗುತ್ತಾರೆ: ಮೂಂಜ್ ಉತ್ಪನ್ನಗಳನ್ನು ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು, ಹೊಸ ಖರೀದಿದಾರರನ್ನು ಹುಡುಕುವುದು, ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವುದು ಮತ್ತು ನಡೆಸುವುದು ಮತ್ತು ಕರಕುಶಲತೆಯ ಸುತ್ತ ನೀತಿಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ತಮ್ಮ ಸ್ವಂತ ಮಹಿಳಾ ಸ್ವ-ಸಹಾಯ ಗುಂಪನ್ನು (SHG) ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ, ಅದಕ್ಕೆ ಅವರು 'ಏಂಜೆಲ್' ಎಂದು ಹೆಸರಿಸಿದ್ದಾರೆ - ಇತರ ಮಹಿಳೆಯರನ್ನು ಕರೆದುಕೊಂಡು ಜೊತೆಯಲ್ಲಿ ಸಾಗುವ ಹೋಗುವ ಬಲವಾದ, ಸಹಾನುಭೂತಿಯ ಮಹಿಳೆಯರ ಕಥೆಗಳಿಂದ ಪ್ರೇರಿತರಾಗಿದ್ದಾರೆ. "ಮಹಿಳೆಯರು ಇತರ ಮಹಿಳೆಯರೊಂದಿಗೆ ಸ್ಪರ್ಧಿಸದೆ ಸಂತೋಷವಾಗಿರುವ ಕಥೆಗಳು ಮತ್ತು ಚಲನಚಿತ್ರಗಳನ್ನು ನಾನು ಆನಂದಿಸುತ್ತೇನೆ," ಎಂದು ಅವರು ವಿವರಿಸುತ್ತಾರೆ.

ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿಯಾಗುವುದು ಸೇರಿದಂತೆ ಆಕೆಗೆ ಸಿಗುವ ಮನ್ನಣೆ ಮತ್ತು ಗೌರವ ದೊಡ್ಡ ಆಕೆಯ ಪಾಲಿಗೆ ಥ್ರಿಲ್ ಆಗಿದೆ. “ಮೊದಲು ನನ್ನ ಪತಿ [ಮೋಟಾರ್ ಮೆಕ್ಯಾನಿಕ್] ನನ್ನ ಬರುವಿಕೆ ಮತ್ತು ಹೋಗುವಿಕೆಯ ಬಗ್ಗೆ ಅಚ್ಚರಿಪಡುತ್ತಿದ್ದರು, ಆದರೆ ಈಗ ನನಗೆ ಸಿಕ್ಕಿರುವ ಮನ್ನಣೆಯನ್ನು ನೋಡಿ ಅವರು ನನ್ನ ಬಗ್ಗೆ ಹೆಮ್ಮೆಪಡುತ್ತಾರೆ. ಕಳೆದ ಎರಡು ವರ್ಷಗಳಲ್ಲಿ, ನಾನು ವಾರದಲ್ಲಿ ಎರಡು ದಿನ ಮಾತ್ರ ಮನೆಯಲ್ಲಿದ್ದೆ,” ಎಂದು ಅವರು ತಮ್ಮ ಸ್ವಾತಂತ್ರ್ಯದ ಭಾವನೆಯನ್ನು ಹಂಚಿಕೊಳ್ಳುತ್ತಾರೆ. ಆಕೆಯ SHG ಸದಸ್ಯರು ಮತ್ತು ಖರೀದಿದಾರರನ್ನು ಭೇಟಿ ಮಾಡುವುದು, ಇತರರಿಗೆ ತರಬೇತಿ ನೀಡುವುದು ಮತ್ತು ತನ್ನ ಮಕ್ಕಳನ್ನು ನೋಡಿಕೊಳ್ಳುವುದು ಅವರ ಪಾಲಿನ ಎಲ್ಲಾ ಸಮಯವನ್ನು ತೆಗೆದುಕೊಳ್ಳುತ್ತದೆ.

ಮಾಹೆವಾದ ಉದ್ಯಮಶೀಲ ಮಹಿಳೆಯರು ಮೂಂಜ್ ಉತ್ತೇಜಿಸುವ ಕ್ರಮವನ್ನು ತುಂಬು ಹೃದಯದಿಂದ ಸ್ವಾಗತಿಸಿದರು ಮತ್ತು ತಮ್ಮ ಆದಾಯವನ್ನು ಪೂರೈಸಿಕೊಳ್ಳುವ ಅವಕಾಶವನ್ನು ಪಡೆದರು

ವಿಡಿಯೋ ನೋಡಿ: ಪ್ರಯಾಗ್‌ರಾಜ್‌ ನ ಹಸನಾದ ಹುಲ್ಲು

ಆದರ ಜನರ ನಾಲಿಗೆಗಳು ಆಡಿಕೊಳ್ಳುವುದನ್ನು ಇನ್ನೂಈ ನಿಲ್ಲಿಸಿಲ್ಲ. "ನಾನು ಟ್ರೈನಿಂಗ್‌ ಮೀಟಿಂಗುಗಳಿಗೆ ಹೋದಾಗ ಪುರುಷರೊಡನೆ ಗ್ರೂಪ್‌ ಫೋಟೊ ತೆಗೆಸಿಕೊಂಡರೆ ಜನರು ನನ್ನ ಅತ್ತೆಯ ಬಳಿ ಬಂದು, ʼಅವಳು ನೋಡು ಗಂಡಸರ ಜೊತೆಯೆಲ್ಲ ಫೋಟೊ ತೆಗೆಸಿಕೊಳ್ಳುತ್ತಾಳೆ!ʼ ಎಂದು ಚಾಡಿ ಹೇಳುತ್ತಾರೆ. ಆದರೆ ನಾನು ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸ ನಾನು ಮಾಡುತ್ತೇನೆ." ಉತ್ತರ ಪ್ರದೇಶದಂತಹ ಸಣ್ಣ ಪಟ್ಟಣದ ಸಣ್ಣ ಮನಸಿನ ಜನರ ಮಾತುಗಳಿಗೆ ನನ್ನ ಸ್ಥೈರ್ಯ ಕಸಿಯುವ ಶಕ್ತಿಯಿಲ್ಲ ಎನ್ನುತ್ತಾರವರು.

ಯುಪಿಯಲ್ಲಿನ ಮಾಹೆವಾ ಪಟ್ಟಿ ಪಶ್ಚಿಮ್ ಉಪರ್ಹಾರ್ 6,408 ಜನರ ಜನಗಣತಿಯ ಪಟ್ಟಣವಾಗಿ (ಜನಗಣತಿ 2011) ಸ್ಥಾನ ಪಡೆದಿದೆ, ಆದರೆ ಸ್ಥಳೀಯರು ಇದನ್ನು ಇನ್ನೂ 'ಮಹೇವಾ ಗ್ರಾಮ' ಎಂದು ಕರೆಯುತ್ತಾರೆ. ಕರ್ಚನಾ ತಹಸಿಲ್‌ನಲ್ಲಿರುವ ಇದು ಸಂಗಮ್‌ನಿಂದ ಕೆಲವು ಕಿಲೋಮೀಟರ್ ದೂರದಲ್ಲಿದೆ - ಯಮುನಾ ಮತ್ತು ಗಂಗಾ ನದಿಗಳ ಸಂಗಮ ಮತ್ತು ಹಿಂದೂಗಳ ತೀರ್ಥಯಾತ್ರೆಯ ಪ್ರಮುಖ ಸ್ಥಳವಾಗಿದೆ.

ಯಮುನಾ ನದಿಯ ಹರಿವು ಮಾಹೆವಾದ ಜನರ ಜೀವನ ಮತ್ತು ಜೀವನೋಪಾಯದ ಪ್ರಮುಖ ಕೊಂಡಿಯಾಗಿದೆ. ಇಲ್ಲಿನ ಕುಶಲಕರ್ಮಿಗಳು ತಾಳೆ ಎಲೆಗಳಿಂದ ನೇಯ್ದ ಸಣ್ಣ ಬುಟ್ಟಿಗಳನ್ನು ಹೂವುಗಳು ಮತ್ತು ಇತರ ಅರ್ಪಣೆಗಳೊಂದಿಗೆ ಸಂಗಮ್‌ನಲ್ಲಿ ಯಾತ್ರಾರ್ಥಿಗಳಿಗೆ ಪೂರೈಸುತ್ತಾರೆ. ಪುರುಷರು ಪ್ರಯಾಗರಾಜ್ ನಗರದಲ್ಲಿ ಮೆಕ್ಯಾನಿಕ್ ಮತ್ತು ಡ್ರೈವರ್‌ಗಳಾಗಿ ಕೆಲಸ ಮಾಡಲು ಹೋಗುತ್ತಾರೆ, ಹತ್ತಿರದಲ್ಲಿ ಸಣ್ಣ ಅಂಗಡಿಗಳನ್ನು ನಡೆಸುತ್ತಾರೆ ಅಥವಾ ಹೋಟೆಲುಗಳಲ್ಲಿ ಕೆಲಸ ಮಾಡುತ್ತಾರೆ.

ಕುತೂಹಲಕಾರಿಯಾಗಿ, ಪ್ರಯಾಗ್ರಾಜ್ ಜಿಲ್ಲೆಯಲ್ಲಿ (ಜನಗಣತಿ 2011) ಮುಸ್ಲಿಂ ಸಮುದಾಯವು ಜನಸಂಖ್ಯೆಯ ಶೇಕಡಾ 13ರಷ್ಟಿದ್ದರೆ, ಮಹೇವಾದಲ್ಲಿ ಮುಸ್ಲಿಂ ಜನಸಂಖ್ಯೆಯು ಕೇವಲ ಶೇಕಡಾ ಒಂದಕ್ಕಿಂತ ಒಂದಷ್ಟು ಹೆಚ್ಚು. ಆದರೂ, ಕರಕುಶಲತೆಯ ಪುನರುಜ್ಜೀವನವನ್ನು ಮುನ್ನಡೆಸುತ್ತಿರುವವರು ಪ್ರಾಥಮಿಕವಾಗಿ ಮತ್ತು ಬಹುತೇಕ ಮುಸ್ಲಿಂ ಮಹಿಳೆಯರೇ ಆದ ಫಾತಿಮಾ ಮತ್ತು ಆಯೇಷಾ. "ನಾವು ಎಲ್ಲಾ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದೇವೆ, ಆದರೆ ಅಂತಿಮವಾಗಿ, ಕರಕುಶಲತೆಯನ್ನು ಅಭ್ಯಾಸ ಮಾಡುವ ಎಲ್ಲಾ ಮಹಿಳೆಯರು ಒಂದೇ ಸಮುದಾಯದಿಂದ ಬಂದವರು. ಇತರರು ಕೆಲಸವನ್ನು ಪೂರ್ಣಗೊಳಿಸಲು ನಿರಂತರ ಬರುವುದಿಲ್ಲ. ಬಹುಶಃ ಅವರು ಇತರ ಕೆಲಸಗಳಲ್ಲಿ ನಿರತರಾಗಿರಬಹುದು,” ಎಂದು ಫಾತಿಮಾ ಹೇಳುತ್ತಾರೆ.

*****

PHOTO • Priti David
PHOTO • Priti David

ಎಡ: ಫಾತಿಮಾ ಮತ್ತು ಆಯೇಷಾ ತಮ್ಮ ತಾರಸಿಯ ಮೇಲಿನ ಕೋಣೆಯ ಪಕ್ಕದಲ್ಲಿ ಒಣಗಿದ ಹುಲ್ಲನ್ನು ಶೇಖರಿಸಿಡುತ್ತಾರೆ. ಬಲ: ಹೊಸದಾಗಿ ಕತ್ತರಿಸಿದ ಮೂಂಜ್ ಹುಲ್ಲನ್ನು ಕೆನೆ ಬಣ್ಣಕ್ಕೆ ತಿರುಗುವವರೆಗೆ ಒಂದು ವಾರ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ನಂತರ ಅದನ್ನು ಒಣಗಿದ ಕಾಸಾದೊಂದಿಗೆ ಕಟ್ಟುಗಳಾಗಿ ಕಟ್ಟಲಾಗುತ್ತದೆ, ಇದು ಮೂಂಜ್ ಎಳೆಯನ್ನು ಬಂಧಿಸಲು ಬಳಸುವ ತೆಳುವಾದ ಜೊಂಡು

ಫಾತಿಮಾ, ಮಾಹೆವಾದಲ್ಲಿನ ತನ್ನ ಮನೆಯ ಟೆರೇಸ್‌ ಮೇಲಿದ್ದ ತಮ್ಮ ಸ್ಟೋರ್‌ ರೂಮಿಗೆ ಕರೆದೊಯ್ದರು. ಅಲ್ಲಿ ಅಮೂಲ್ಯವಾದ ಒಣಗಿದ ಮೂಂಜ್‌ನ ಎಳೆಗಳನ್ನು ಮನೆಯ ಅನುಪಯೋಗಿ ವಸ್ತುಗಳ ರಾಶಿಯ ಮೇಲೆ ಜೋಡಿಸಿದ್ದರು. "ಚಳಿಗಾಲದಲ್ಲಿ ಮಾತ್ರವೇ ನಮಗೆ ಮೂಂಜ್‌ ಸಿಗುತ್ತದೆ. ನಾವು ಹಸಿರು ಹುಲ್ಲನ್ನು ಪಟ್ಟಿಗಳಾಗಿ ಕತ್ತರಿಸಿ ಒಣಗಿಸಿ ಇಲ್ಲಿ ಸಂಗ್ರಹಿಡುತ್ತೇವೆ. ಇದು ಮನೆಯಲ್ಲಿನ ಒಣ ಸ್ಥಳವಾಗಿದೆ ಮತ್ತು ಇಲ್ಲಿ ಗಾಳಿಯಾಡುವುದಿಲ್ಲ. ಮಳೆ ಮತ್ತು ಗಾಳಿಯು ಅದರ ಬಣ್ಣವನ್ನು ಬದಲಾಯಿಸುತ್ತದೆ ಮತ್ತು ಹುಲ್ಲು ಹಳದಿ ಬಣ್ಣಕ್ಕೆ ತಿರುಗುತ್ತದೆ,” ಎಂದು ಅವರು ಹೇಳುತ್ತಾರೆ.

ಈ ಕೆಲಸದಲ್ಲಿ ಹಳದಿ ಹುಲ್ಲು ಅಪೇಕ್ಷಣೀಯವಲ್ಲ ಏಕೆಂದರೆ ಇದು ಹುಲ್ಲು ತುಂಬಾ ದುರ್ಬಲವಾಗಿರುವುದರ ಸಂಕೇತವಾಗಿದೆ ಮತ್ತು ಅದು ಬಣ್ಣ ಹಚ್ಚಲು ಅಡ್ಡಿಪಡಿಪಡಿಸುತ್ತದೆ. ತಿಳಿ ಕೆನೆ ಬಣ್ಣದ ಮೂಂಜ್ ಹುಲ್ಲು ಕುಶಲಕರ್ಮಿಗಳಿಗೆ ಅವರು ಬಯಸಿದ ಬಣ್ಣವನ್ನು ಬಣ್ಣವನ್ನು ಹಚ್ಚಲು ಅನುವು ಮಾಡಿಕೊಡುತ್ತದೆ. ಇದನ್ನು ಸಾಧಿಸಲು, ಹೊಸದಾಗಿ ಕತ್ತರಿಸಿದ ಮೂಂಜ್‌ ಹುಲ್ಲನ್ನು ಕಟ್ಟುಗಳಾಗಿ ಕಟ್ಟಬೇಕು ಮತ್ತು ಒಂದು ವಾರದವರೆಗೆ ಎಚ್ಚರಿಕೆಯಿಂದ ಒಣಗಿಸಬೇಕು - ತೆರೆದ ಸ್ಥಳದಲ್ಲಿ, ಬಿಸಿಲು, ಗಾಳಿಯಿಲ್ಲದ ದಿನಗಳಲ್ಲಿ.

ಫಾತಿಮಾ ಅವರ ಅತ್ತೆ, ಆಯೇಷಾ ಬೇಗಂ ಕೂಡ ಸ್ಟಾಕ್ ಪರಿಶೀಲಿಸಲು ಮೇಲೆ ಬಂದಿದ್ದರು. ಈಗ ತನ್ನ 50 ರ ಹರೆಯದಲ್ಲಿರುವ, ಪಳಗಿದ ಕುಶಲಕರ್ಮಿ ಆಯೇಷಾ ಅವರು ಯಮುನೆಯ ದಡದಲ್ಲಿ ಸ್ವಲ್ಪ ದೂರ ನಡೆಯಲು ಮತ್ತು ಅಗತ್ಯವಿರುವಷ್ಟು ಹುಲ್ಲು ಸಂಗ್ರಹಿಸುವ ಸಮಯವನ್ನು ನೆನಪಿಸಿಕೊಳ್ಳುತ್ತಾರೆ. ಕಳೆದ ಕೆಲವು ದಶಕಗಳಲ್ಲಿ, ಅತಿರೇಕದ ಅಭಿವೃದ್ಧಿ ಮತ್ತು ನಗರದ ಹರಡುವಿಕೆಯು ನದಿ ತೀರದ ಖಾಲಿ ಭೂಮಿಯ ಲಭ್ಯತೆಯನ್ನು ಕುಗ್ಗಿಸಿದೆ, ಮೊದಲು ಅಲ್ಲಿ ಕಾಡು ಹುಲ್ಲು ಅಪೇಕ್ಷಿಸದೆ ಬೆಳೆಯುತ್ತಿತ್ತು.

"ಈಗ, ಯಮುನಾ ನದಿಯ ದಡವನ್ನು ದಾಟಿಸುವ ಮಲ್ಲಾಗಳು [ದೋಣಿಗಳು] ನಮಗೆ ಮೂಂಜ್‌ ಹುಲ್ಲನ್ನು ತಂದು 300-400 ರೂಪಾಯಿಗಳಿಗೆ ಒಂದು ಗಟ್ಟಾದಂತೆ [ಒಂದು ಗಟ್ಟಾ ಸುಮಾರು 2-3 ಕಿಲೋಗಳಷ್ಟು ತೂಗುತ್ತದೆ] ನಮಗೆ ಮಾರುತ್ತಾರೆ," ಎಂದು ನಾವು ಮತ್ತೆ ಅವರು ಕೆಲಸ ಮಾಡುವ ಅಂಗಳಕ್ಕೆ ಇಳಿಯುವಾಗ ಆಯೇಷಾ ಹೇಳುತ್ತಾರೆ. ಒಂದು ಮೂಂಜ್‌ ಗಟ್ಟಾದಿಂದ, ಒಬ್ಬ ಕುಶಲಕರ್ಮಿಯು ಸರಿಸುಮಾರು ಎರಡು 12 x 12 ಇಂಚಿನ ಬುಟ್ಟಿಗಳನ್ನು ಮಾಡಲು ಸಾಧ್ಯ, ಅದನ್ನು ಒಟ್ಟು 1,500 ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ; ಈ ಗಾತ್ರದ ಬುಟ್ಟಿಗಳನ್ನು ಸಾಮಾನ್ಯವಾಗಿ ಸಸ್ಯಗಳನ್ನು ಬೆಳೆಸಲು ಅಥವಾ ಬಟ್ಟೆಗಳನ್ನು ಸಂಗ್ರಹಿಸಲು ಬಳಸಲಾಗುತ್ತದೆ.

7 ರಿಂದ 12 ಅಡಿ ಎತ್ತರದವರೆಗೆ ಬೆಳೆಯುವ ಸರ್ಪತ್ ಹುಲ್ಲು ಮೂಂಜ್ ಕಲೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪೋಷಕ, ಆದರೆ ಪ್ರಮುಖವಾದ ಪಾತ್ರದಲ್ಲಿ ಬರುವುದು, ಮತ್ತೊಂದು ಹುಲ್ಲು, ಅದು ಕಾಸ ಎಂಬ ತೆಳುವಾದ ಜೊಂಡು, ಇದನ್ನು ಕಠಿಣವಾದ ಮೂಜ್ ಅನ್ನು ಬಂಧಿಸಲು ಬಳಸಲಾಗುತ್ತದೆ; ಅಂತಿಮ ಉತ್ಪನ್ನದಲ್ಲಿ ಕಾಸಾ‌ ಅಷ್ಟಾಗಿ ಗೋಚರಿಸುವುದಿಲ್ಲ. ಬಿಗಿಯಾಗಿ ಕಟ್ಟಿದ ಹಿಡಿಯಲ್ಲಿ ಮಾರಾಟವಾಗುವ ಈ ಹುಲ್ಲು ನದಿ ದಡದಲ್ಲಿ ಯಥೇಚ್ಛವಾಗಿ ಲಭ್ಯವಿದ್ದು ಕಟ್ಟಿಗೆ ರೂ. 5-10 ಬೆಲೆಯಿರುತ್ತದೆ.

PHOTO • Priti David
PHOTO • Priti David

ಎಡ: ಆಯೇಷಾ ಬೇಗಂ ಸಿರಾಹಿ ಬಳಸಿ ಹರಿತವಾದ ಸೂಜಿಯಿಂದ ಬುಗುಟು ನೇಯುತ್ತಿರುವುದು. ಬಲ: ಆಕಾರವನ್ನು ರಚಿಸಲು ಅವರು ಕಾಸಾ ಸುತ್ತಲೂ ದಪ್ಪವಾದ ಮೂಂಜ್ ಪಟ್ಟಿಗಳನ್ನು ಸುರುಳಿ ಸುತ್ತುತ್ತಾರೆ

ತಮ್ಮ ಮನೆಯ ಅಂಗಳದಲ್ಲಿ ಕುಳಿತ ಆಯೇಷಾ ಮತ್ತೆ ಕೆಲಸ ಆರಂಭಿಸಿದರು. ಅವರು ಬುಟ್ಟಿಗಳ ಮುಚ್ಚಳಗಳ ಮೇಲಿನ ಹಿಡಿಕೆಗಳನ್ನು ತಯಾರಿಸುತ್ತಿದ್ದರು. ಕೇವಲ ಒಂದು ಜೋಡಿ ಕತ್ತರಿ ಮತ್ತು ಹರಿತವಾದ ಚಾಕುವಿನಿಂದ, ಹುಲ್ಲಿನ ಸೂಕ್ಷ್ಮವಾದ ಎಳೆಗಳನ್ನು, ಎಳೆದು, ತಳ್ಳಿ ಬಿಗಿಗೊಳಿಸುತ್ತಾರೆ, ಕೆಲವೊಮ್ಮೆ ಒರಟಾಗಿರುವುದನ್ನು ಬಕೆಟ್ ನೀರಿನಲ್ಲಿ ಅದ್ದಿ ಅವುಗಳನ್ನು ಹೆಚ್ಚು ಬಗ್ಗುವಂತೆ ಮಾಡುತ್ತಾರೆ.

“ನಾನು ನನ್ನ ಅತ್ತೆ ಮಾಡುವುದನ್ನು ನೋಡುವ ಮೂಲಕ [ಈ ಕೆಲಸವನ್ನು] ಪ್ರಾರಂಭಿಸಿದೆ. 30 ವರ್ಷಗಳ ಹಿಂದೆ ನವವಧುವಾಗಿ ಬಂದಾಗ ನಾನು ಮಾಡಿದ ಮೊದಲ ಐಟಂ ರೋಟಿ ಕಾ ಡಬ್ಬಾ,” ಎಂದು ಆಯೇಶಾ ಹೇಳುತ್ತಾರೆ. ಒಮ್ಮೆ ಅವರು ಜನ್ಮಾಷ್ಠಮಿಯಂದು ಯುವ ಕೃಷ್ಣನ ವಿಗ್ರಹವನ್ನು ಇರಿಸಲು ಸಣ್ಣ ಉಯ್ಯಾಲೆಯನ್ನು ಮಾಡಿದರು.

ತನ್ನ ಕೈಗಳಲ್ಲಿ ಜಡ್ಡುಗಟ್ಟಿದ ಆಳದ ಗಾಯಗಳನ್ನು ತೋರಿಸುತ್ತಾ, "ಈ ಚಾಕುವಿನಿಂದ ತೆಳಗಿರುವ ಆದರೆ ಗಟ್ಟಿಯಿರುವ ಹುಲ್ಲನ್ನು ಕತ್ತರಿಸುವಾಗ ಕೈಗಳಲ್ಲಿ ಗಾಯವಾಗುತ್ತವೆ," ಎನ್ನುತ್ತಾರೆ. ತನ್ನ ಕೆಲಸದ ಆರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಅವರು ಮುಂದುವರೆದು ಹೇಳುತ್ತಾರೆ, "[ಆಗ] ಮನೆಯವರೆಲ್ಲರೂ ಒಟ್ಟು ಸೇರಿ ಕೆಲಸ ಮಾಡುತ್ತಿದ್ದರು. ಮಹಿಳೆಯರು ಮತ್ತು ಮಕ್ಕಳು ಮೂಂಜ್‌ ಉತ್ಪನ್ನಗಳನ್ನು ತಯಾರಿಸಿದರೆ ಗಂಡಸರು ಅದನ್ನು ಮಾರುಕಟ್ಟೆಗೆ ಒಯ್ದು ಮಾರುತ್ತಿದ್ದರು. ಮನೆಯಲ್ಲಿ ಎರಡರಿಂದ ಮೂರು ಮಹಿಳೆಯರು ಒಟ್ಟಿಗೆ ಕೆಲಸ ಮಾಡಿದರೆ, ದಿನಕ್ಕೆ ಸುಮಾರು 30 ರೂಪಾಯಿಗಳನ್ನು ಗಳಿಸಬಹುದಿತ್ತು, ಅದು ಮನೆಗಳನ್ನು ನಡೆಸಲು ಸಾಕಾಗುತ್ತಿತ್ತು.”

ಸುಮಾರು ಒಂದು ದಶಕದ ಹಿಂದೆ, ಮೂಂಜ್‌ ಕಲೆಗೆ ಬೇಡಿಕೆ ಬತ್ತಿಹೋಗಿತ್ತು; ಕರಕುಶಲತೆಯನ್ನು ಅಭ್ಯಾಸ ಮಾಡುವ ಮಹಿಳೆಯರ ಸಂಖ್ಯೆಯು ಕುಸಿದಿತ್ತು ಮತ್ತು ಕೆಲವೇ ಉತ್ಪನ್ನಗಳು ಮಾರಾಟದಲ್ಲಿದ್ದವು. ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಸಹಾಯವು ಒದಗಿಬಂದಿತು - 2013ರಲ್ಲಿ, UP ಸರ್ಕಾರವು ತನ್ನ ಒಂದು ಜಿಲ್ಲೆ ಒಂದು ಉತ್ಪನ್ನ (ODOP) ಯೋಜನೆಯನ್ನು ಪ್ರಾರಂಭಿಸಿತು ಮತ್ತು ಪ್ರಯಾಗರಾಜ್ ಜಿಲ್ಲೆಯ ವಿಶಿಷ್ಟ ಉತ್ಪನ್ನವಾಗಿ ಮೂಂಜ್‌ ಕಲೆಯನ್ನು ಆಯ್ಕೆ ಮಾಡಲಾಯಿತು, ಅದರ ಇತಿಹಾಸವು ಕನಿಷ್ಠ ಏಳು ದಶಕಗಳಷ್ಟು ಹಿಂದಿನದು.

PHOTO • Priti David
PHOTO • Priti David

ಎಡ: 50ರ ಹರೆಯದ ಆಯೇಷಾ ಬೇಗಂ ಮೂಂಜ್ ಕಲೆಯ ಅನುಭವಿ ಕುಶಲಕರ್ಮಿ. ʼನಾನು ನನ್ನ ಅತ್ತೆಯನ್ನು ನೋಡಿ ಕೆಲಸ ಕಲಿತೆ. ಮೊದಲಿಗೆ ಒಂದು ರೊಟ್ಟಿ ಹಾಕುವ ಬುಟ್ಟಿಯನ್ನು ನೇಯ್ದಿದ್ದೆ.ʼ ಬಲ: ಇತ್ತೀಚೆಗೆ ಆಯೇಷಾ ನೇಯ್ದಿರುವ ತೊಟ್ಟಿಗಳು ಮತ್ತು ಬುಟ್ಟಿಗಳು

"ODOP ಗೌರವವು [ಮೂಂಜ್ ಉತ್ಪನ್ನಗಳ] ಬೇಡಿಕೆ ಮತ್ತು ಮಾರಾಟವನ್ನು ಹೆಚ್ಚಿಸಿದೆ ಮತ್ತು ಹಲವಾರು ಕುಶಲಕರ್ಮಿಗಳು‌ ಕೆಲಸಕ್ಕೆ ಹಿಂದಿರುಗುತ್ತಿದ್ದಾರೆ ಮತ್ತು ಹೊಸ ಜನರು ಸಹ [ಕೆಲಸಕ್ಕೆ] ಸೇರುತ್ತಿದ್ದಾರೆ" ಎಂದು ಪ್ರಯಾಗರಾಜ್ ಜಿಲ್ಲೆಯ ಕೈಗಾರಿಕಾ ಉಪ ಆಯುಕ್ತರಾದ ಅಜಯ್ ಚೌರಾಸಿಯಾ ಹೇಳುತ್ತಾರೆ. ಅವರು ಜಿಲ್ಲಾ ಉದ್ಯೋಗ ಕೇಂದ್ರದ ಮುಖ್ಯಸ್ಥರೂ ಆಗಿದ್ದಾರೆ, ಇದು ಸರ್ಕಾರಿ ಸಂಸ್ಥೆಯಾದ ODOP ಯೋಜನೆಯ ಪ್ರಯೋಜನಗಳನ್ನು ಕುಶಲಕರ್ಮಿಗಳಿಗೆ ರವಾನಿಸುತ್ತದೆ. "ನಾವು ಈ ಕೆಲಸವನ್ನು ಮಾಡಲು ಮುಂದೆ ಬರುವ ಮಹಿಳೆಯರಿಗೆ ತರಬೇತಿ ಮತ್ತು ಕಿಟ್‌ಗಳನ್ನು ವಿತರಿಸುತ್ತಿದ್ದೇವೆ ಮತ್ತು ವಾರ್ಷಿಕವಾಗಿ 400 ಮಹಿಳೆಯರಿಗೆ ತರಬೇತಿ ನೀಡುವುದು ನಮ್ಮ ಗುರಿಯಾಗಿದೆ" ಎಂದು ಅವರು ಹೇಳುತ್ತಾರೆ. ಕೇಂದ್ರವು ರಾಜ್ಯಾದ್ಯಂತ ಮತ್ತು ರಾಷ್ಟ್ರಮಟ್ಟದಲ್ಲಿ ನಿಯಮಿತ ಮೇಳಗಳನ್ನು ಆಯೋಜಿಸುವ ಮೂಲಕ ಕರಕುಶಲತೆಯನ್ನು ಬೆಂಬಲಿಸುತ್ತದೆ.

ಮಾಹೆವದ ಉದ್ಯಮಶೀಲ ಮಹಿಳೆಯರು ಮೂಂಜ್ ಕಲೆಯನ್ನು ಉತ್ತೇಜಿಸುವ ಕ್ರಮವನ್ನು ಪೂರ್ಣ ಹೃದಯದಿಂದ ಸ್ವಾಗತಿಸಿದರು ಮತ್ತು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಪಡೆದರು. ಅವರು ಈಗ ವಾಟ್ಸಾಪ್‌ನಲ್ಲಿ ಆರ್ಡರ್‌ಗಳನ್ನು ಪಡೆಯುತ್ತಾರೆ ಮತ್ತು ಕೆಲಸ ಮತ್ತು ಗಳಿಕೆಯನ್ನು ಮಹಿಳೆಯರಿಗೆ ಸಮಾನವಾಗಿ ವಿತರಿಸಲಾಗುತ್ತದೆ ಎಂದು ಫಾತಿಮಾ ಹೇಳುತ್ತಾರೆ.

ODOP ಯೋಜನೆಯು ಹಣವನ್ನು ಅವರ ಮನೆ ಬಾಗಿಲಿಗೆ ತಂದಿದೆ. “ಈ ಯೋಜನೆಯು ನಮಗೆ ಸಾಲಗಳಿಗೆ ಪ್ರವೇಶವನ್ನು ನೀಡುತ್ತದೆ. ನನ್ನ ಸ್ವಸಹಾಯ ಸಂಘದಲ್ಲಿ ಅನೇಕರು 10,000 ದಿಂದ 40,000 ರೂಪಾಯಿಗಳವರೆಗೆ ಕೆಲಸವನ್ನು ಪ್ರಾರಂಭಿಸಲು ತೆಗೆದುಕೊಂಡಿದ್ದಾರೆ,” ಎಂದು ಫಾತಿಮಾ ಹೇಳುತ್ತಾರೆ. ಯೋಜನೆಯು ಒಟ್ಟು ಸಾಲದ ಮೊತ್ತದ ಮೇಲೆ 25 ಪ್ರತಿಶತ ಸಬ್ಸಿಡಿಯನ್ನು ನೀಡುತ್ತದೆ - ಅಂದರೆ, ಸಾಲದ ಮೊತ್ತದ ಶೇಕಡಾ 25ರಷ್ಟು ಮನ್ನಾ. ಬಾಕಿ, ಮೂರು ತಿಂಗಳೊಳಗೆ ಮರುಪಾವತಿಸಿದರೆ, ಬಡ್ಡಿರಹಿತವಾಗಿರುತ್ತದೆ ಮತ್ತು ಅದರ ನಂತರ ವಾರ್ಷಿಕವಾಗಿ ಶೇಕಡಾ ಐದು ಬಡ್ಡಿಯನ್ನು ವಿಧಿಸಲಾಗುತ್ತದೆ.

ಈ ಯೋಜನೆಯು ಇತರ ಸ್ಥಳಗಳಿಂದ ಮಹಿಳೆಯರನ್ನು ಈ ಕಲೆಯತ್ತ ಸೆಳೆಯಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಆಯೇಷಾ ಅವರ ವಿವಾಹಿತ ಪುತ್ರಿ ನಸ್ರೀನ್ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಫುಲ್ಪುರ್ ತೆಹಸಿಲ್‌ನ ಅಂಡವಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. "ಇಲ್ಲಿ [ಅಂಡವಾದಲ್ಲಿ] ಅದೇ ಹುಲ್ಲನ್ನು ಹೆಂಚುಗಳನ್ನು ಹಾಕುವ ಮೊದಲು ಮೇಲ್ಛಾವಣಿಗಳನ್ನು ಮುಚ್ಚಲು ಮಾತ್ರ ಬಳಸಲಾಗುತ್ತದೆ" ಎಂದು ಶಿಕ್ಷಣ ಮತ್ತು ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವ 26 ವರ್ಷ ವಯಸ್ಸಿನ ಅವರು ಹೇಳುತ್ತಾರೆ. ತನ್ನ ಮನೆಯಲ್ಲಿ ಮೂಂಜ್ ಕೆಲಸದ ಆರ್ಥಿಕ ಸಾಮರ್ಥ್ಯವನ್ನು ನೋಡಿದ ಅವರು, ಕ್ರಾಫ್ಟ್ ಕೆಲಸವನ್ನು ಇಲ್ಲಿಯೂ ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದಾರೆ.

PHOTO • Priti David
PHOTO • Priti David

ಆಯೇಷಾ ಬೇಗಂ ಮತ್ತು ಫಾತಿಮಾ ಬೀಬಿಯ ನೆರೆಹೊರೆಯವರಾದ ಆಯೇಷಾ ಬೇಗಂ, ಅವರು ತಯಾರಿಸುವ ಪ್ರತಿಯೊಂದು ಮೂಂಜ್ ಉತ್ಪನ್ನಕ್ಕೆ 150-200 ರೂ. ಗಳಿಸುತ್ತಾರೆ. 'ಸುಮ್ಮನೆ ಕುಳಿತುಕೊಳ್ಳುವ ಬದಲು, ನಾನು ಹಣವನ್ನು ಸಂಪಾದಿಸುತ್ತಾ ನನ್ನ ಸಮಯವನ್ನು ಕಳೆಯುತ್ತಿದ್ದೇನೆ'

ಇಪ್ಪತ್ತು ವರ್ಷಗಳ ಹಿಂದೆ ರೊಟ್ಟಿ ಇಡುವ ಬುಟ್ಟಿಯಾಗಿ ಮೂಂಜ್ ಬುಟ್ಟಿ 20 ರೂ.ಗೆ ಮಾರಾಟವಾಗುತ್ತಿತ್ತು.  ಇಂದು ಅದೇ ಬುಟ್ಟಿಗೆ ರೂ. 150 ಅಥವಾ ಹೆಚ್ಚಿನ ಬೆಲೆಯಿದೆ, ಮತ್ತು ಹಣದುಬ್ಬರದ ಹೊರತಾಗಿಯೂ, ಇದು ಗೌರವಾನ್ವಿತ ಗಳಿಕೆಯಾಗಿ ಕಂಡುಬರುತ್ತದೆ. ಅದಕ್ಕಾಗಿಯೇ 60ನೇ ವರ್ಷದಲ್ಲೂ, ಫಾತಿಮಾ ಅವರ ನೆರೆಹೊರೆಯವರಾದ ಆಯೇಶಾ ಬೇಗಂ, ಅವರು ಕುಶಲತೆಯ ಬಗ್ಗೆ ಒಲವು ಹೊಂದಿದ್ದಾರೆ. ಅವರ ಕಣ್ಣು ಒಂದಷ್ಟು ಮಸುಕಾಗಿದೆ. “ನಾನು ತಯಾರಿಸುವ ಪ್ರತಿ ವಸ್ತುವಿಗೆ ಸುಮಾರು 150-200 ರೂಪಾಯಿ ಗಳಿಸಬಹುದು. ಸುಮ್ಮನೆ ಕೂರುವ ಬದಲು ಹಣ ಸಂಪಾದಿಸಿ ಸಮಯ ಕಳೆಯುತ್ತಿದ್ದೇನೆ'' ಎಂದು ಹೇಳುತ್ತಾರವರು. ಅವಳು ತನ್ನ ಮನೆಯ ಮುಂಭಾಗದ ಅಂಗಳದಲ್ಲಿ ನೆಲಹಾಸಿನ ಮೇಲೆ ಕುಳಿತಿದ್ದರು, ಅವರ ಬೆರಳುಗಳು ಒಳಗೆ ಮತ್ತು ಹೊರಗೆ ಹಾಯುತ್ತಾ ಬುಟ್ಟಿಯ ಮುಚ್ಚಳವನ್ನು ತಯಾರಿಸುತ್ತಿದ್ದವು.

"ಇದಾದ ನಂತರ ಅವರು ತನ್ನ ಬೆನ್ನಿನ ನೋವಿನ ಬಗ್ಗೆ ದೂರು ಹೇಳುತ್ತಾರೆ" ಎಂದು ಅವರ ಮಾತನ್ನು ಕೇಳುತ್ತಿರುವ ಅವಳ ಪತಿ ಹೇಳುತ್ತಾರೆ. ಟೀ ಅಂಗಡಿಯ ನಿವೃತ್ತ ಮಾಲೀಕ ಮಹಮ್ಮದ್ ಮತೀನ್, ಪುರುಷರು ಈ ಕೆಲಸ ಮಾಡುತ್ತಾರೆಯೇ ಎಂದು ನಾವು ಕೇಳಿದಾಗ ಮುಗುಳ್ನಗುತ್ತಾರೆ. "ಕೆಲವು ಪುರುಷರು ಇದನ್ನು ಮಾಡಬಹುದು, ಆದರೆ ನನಗೆ ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ.

ಮಧ್ಯಾಹ್ನ ಸಮೀಪಿಸುತ್ತಿತ್ತು ಮತ್ತು ಫಾತಿಮಾ ಅವರ ತಾಯಿ ಆಸ್ಮಾ ಬೇಗಂ ಅವರು ಸಿದ್ಧಪಡಿಸಿದ ವಸ್ತುಗಳೊಂದಿಗೆ ಮಗಳ ಮನೆಗೆ ಬಂದರು. ಮರುದಿನ ಪ್ರಯಾಗ್‌ರಾಜ್‌ನ ಸರ್ಕ್ಯೂಟ್ ಹೌಸ್‌ನಲ್ಲಿ ನಡೆಯಲಿರುವ ಸಣ್ಣ ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಫಾತಿಮಾ ಅವುಗಳನ್ನು ಕೊಂಡೊಯ್ಯುತ್ತಾರೆ. ಆಸ್ಮಾ ತಾನು ಮಾಡಿದ ಕೆಲಸವನ್ನು ತೋರಿಸಲು ಅಗಲವಾದ ಮುಚ್ಚಳವನ್ನು ಹೊಂದಿರುವ ಬುಟ್ಟಿಯನ್ನು ಎತ್ತಿಕೊಂಡರು. "ಬಿಸಿ ಭಕ್ಷ್ಯಗಳಿಗಾಗಿ ಉತ್ತಮವಾದ ಕೋಸ್ಟರ್ ತಯಾರಿಸಲು ಮೂರು ದಿನಗಳವರೆಗೆ ತೆಗೆದುಕೊಳ್ಳಬಹುದು. ನೀವು ಅದನ್ನು ನಿಧಾನವಾಗಿ ಮಾಡಬೇಕು ಇಲ್ಲದಿದ್ದರೆ ಹುಲ್ಲು ಹರಿದುಹೋಗುತ್ತದೆ,” ಅವರು ವಿವರಿಸುತ್ತಾರೆ. ಕುಶಲಕರ್ಮಿಗಳು ಹೆಚ್ಚು ಮೃದುವಾದ, ತೆಳ್ಳಗಿನ ವಸ್ತುವನ್ನು ಉತ್ಪಾದಿಸಲು ಕಿರಿದಾದ ಹುಲ್ಲಿನ ಪಟ್ಟಿಗಳನ್ನು ಬಳಸುತ್ತಾರೆ, ಅದು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಹೆಚ್ಚಿನ ಬೆಲೆಯನ್ನು ಬಯಸುತ್ತದೆ.

ತನ್ನ 50ರ ದಶಕದ ಆರಂಭದಲ್ಲಿ, ಮಾಹೆವಾದಿಂದ ಸುಮಾರು 25 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಪಿಪಿರಾಸಾದಲ್ಲಿರುವ ತನ್ನ ಮನೆಯಲ್ಲಿ ಇತ್ತೀಚೆಗೆ 90 ಮಹಿಳೆಯರಿಗೆ ಮೂಂಜ್ ನೇಯ್ಗೆಯ ತರಬೇತಿ ನೀಡಿದ ಆಸ್ಮಾ ಉತ್ತಮ ಕುಶಲಕರ್ಮಿ. ಅವರ ವಿದ್ಯಾರ್ಥಿಗಳ ವಯಸ್ಸು 14ರಿಂದ 50 ವರ್ಷಗಳು. “ಇದು ಒಳ್ಳೆಯ ಕೆಲಸ. ಯಾರಾದರೂ ಕಲಿಯಬಹುದು, ಹಣ ಸಂಪಾದಿಸಬಹುದು ಮತ್ತು ಇದನ್ನು ಮಾಡುವುದರಿಂದ ಜೀವನದಲ್ಲಿ ಮುಂದೆ ಬರಬಹುದು,” ಎಂದು ಅವರು ಹೇಳುತ್ತಾರೆ, “ನಾನು ಎಷ್ಟು ಸಾಧ್ಯವೋ ಅಲ್ಲಿಯವರೆಗೆ ನಾನು ಈ ಕೆಲಸವನ್ನು ಮಾಡುತ್ತೇನೆ. ನನ್ನ ಮಗಳು ಫಾತಿಮಾ ಮಾಡುತ್ತಿರುವ ಕೆಲಸದಿಂದ ನನಗೆ ತುಂಬಾ ಸಂತೋಷವಾಗಿದೆ."

PHOTO • Priti David
PHOTO • Priti David

ಫಾತಿಮಾ ಅವರ ತಾಯಿ, ಆಸ್ಮಾ ಬೇಗಂ (ಎಡಕ್ಕೆ, ಹಸಿರು ದುಪಟ್ಟಾದಲ್ಲಿ), ಮೂಂಜ್ ಕರಕುಶಲತೆಯಲ್ಲಿ ಮಹಿಳೆಯರಿಗೆ ತರಬೇತಿ ನೀಡುವ ಪರಿಣತ ಕುಶಲಕರ್ಮಿ. 'ಯಾರು ಬೇಕಾದರೂ ಇದನ್ನು ಕಲಿಯಬಹುದು, ಹಣವನ್ನು ಸಂಪಾದಿಸಬಹುದು ಮತ್ತು ಇದನ್ನು ಮಾಡುತ್ತಾ ಜೀವನದಲ್ಲಿ ಮುಂದುವರಿಯಬಹುದು.' ಬಲ: ಆಸ್ಮಾ ತನ್ನ ಕೌಶಲದ ಸಾಕ್ಷಿಯಾಗಿರುವ ಮುಚ್ಚಳ ಹೊಂದಿರುವ ವರ್ಣರಂಜಿತ ಬುಟ್ಟಿಯೊಂದಿಗೆ

ಆಸ್ಮಾ ಅವರು 4ನೇ ತರಗತಿಯವರೆಗೆ ಓದಿದ್ದಾರೆ ಮತ್ತು 18ನೇ ವಯಸ್ಸಿನಲ್ಲಿ ಸುಮಾರು ಎರಡು ಎಕರೆ ಜಮೀನು ಹೊಂದಿರುವ ರೈತರಾಗಿರುವ ಫಾತಿಮಾ ಅವರ ತಂದೆಯೊಂದಿಗೆ ವಿವಾಹವಾದರು. ತರಬೇತುದಾರರಾಗಿ, ಆಸ್ಮಾ ಅವರಿಗೆ ಮಾಸಿಕ 5,000 ರೂ., ಮತ್ತು ಆರು ತಿಂಗಳ ತರಬೇತಿ ಅವಧಿಗೆ ಹಾಜರಾಗುವ ಹುಡುಗಿಯರಿಗೆ ರೂ. ತಿಂಗಳಿಗೆ 3,000 ಜಿಲ್ಲಾ ಉದ್ಯೋಗ ಕೇಂದ್ರದಿಂದ ದೊರೆಯುತ್ತದೆ “ಈ ಹುಡುಗಿಯರು ಸ್ವತಂತ್ರರಾಗಿದ್ದಾರೆ ಮತ್ತು ಈಗ ಅವರು ಮನೆಯಲ್ಲಿ ಒಂದಷ್ಟು ಕಲಿಯುತ್ತಿದ್ದಾರೆ ಮತ್ತು ಹಣವನ್ನು ಗಳಿಸುತ್ತಿದ್ದಾರೆ. ಕೆಲವರು ಆ ಹಣವನ್ನು ಹೆಚ್ಚಿನ ಓದಿಗೆ ಬಳಸುತ್ತಾರೆ,” ಎಂದು ಅವರು ಹೇಳುತ್ತಾರೆ.

ಮೂಂಜ್ ಕುಶಲಕರ್ಮಿಗಳಿಗಾಗಿ, ವಸ್ತುಸಂಗ್ರಹಾಲಯ ಮತ್ತು ವರ್ಕ್‌ಶಾಪ್‌ ನಿರ್ಮಿಸುವುದು ಮುಂದಿನ ಯೋಜನೆಗಳಾಗಿವೆ. "ನಾವು ವಸ್ತುಸಂಗ್ರಹಾಲಯಕ್ಕಾಗಿ ಕಾಯುತ್ತಿದ್ದೇವೆ ಇದರಿಂದ ಸಂದರ್ಶಕರು ನಾವು ಮಾಡುವ ಕೆಲಸವನ್ನು ನೋಡಬಹುದು ಮತ್ತು ಪ್ರಶಂಸಿಸಬಹುದು. ಪ್ರದರ್ಶನದಲ್ಲಿ ಅತ್ಯಂತ ಸೂಕ್ಷ್ಮವಾಗಿ ರಚಿಸಲಾದ ಉತ್ಪನ್ನಗಳನ್ನು ಹೊಂದಿರುತ್ತದೆ ಮತ್ತು ನೀವು ಪ್ರಕ್ರಿಯೆಯನ್ನು ನೋಡಲು ಸಾಧ್ಯವಾಗುತ್ತದೆ,” ಎಂದು ಫಾತಿಮಾ ಹೇಳುತ್ತಾರೆ. ಮ್ಯೂಸಿಯಂಗೆ ಲಗತ್ತಿಸಲಾದ ಕಾರ್ಯಾಗಾರವು ಹೆಚ್ಚಿನ ಮಹಿಳೆಯರನ್ನು ಮುನ್ನಡೆಸಲು ಉತ್ತೇಜಿಸುತ್ತದೆ. ಕಳೆದ ವರ್ಷ, ಚೌರಾಸಿಯಾ ಹೇಳುವ ಪ್ರಕಾರ, ಕೇಂದ್ರ ಸರ್ಕಾರವು ಈ ವಸ್ತುಸಂಗ್ರಹಾಲಯವನ್ನು ಹೊಂದಿರುವ ಕರಕುಶಲ ಗ್ರಾಮಕ್ಕೆ 3 ಕೋಟಿ ರೂ. ನೀಡಿದೆ. "ಕೆಲಸ ಪ್ರಾರಂಭವಾಗಿದೆ ಆದರೆ ಪೂರ್ಣಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ," ಅವರು ಹೇಳುತ್ತಾರೆ.

“ಕಾರ್ಯಾಗಾರದಲ್ಲಿ, ಕೆಲವರು ನೇಯ್ಗೆ ಮಾತ್ರ ಮಾಡುತ್ತಾರೆ, ಕೆಲವರು ಬಣ್ಣ ಮಾಡುವ ಕೆಲಸವನ್ನು ಮಾತ್ರ ಮಾಡುತ್ತಾರೆ - ಕೆಲಸಗಳನ್ನು ವಿಂಗಡಿಸಲಾಗುತ್ತದೆ. ಮೂಂಜ್ ಕುಶಲಕರ್ಮಿಗಳ ಸಮುದಾಯವಾದ ನಾವೆಲ್ಲರೂ ಒಟ್ಟಿಗೆ ಕುಳಿತು ಕೆಲಸ ಮಾಡುವುದು ಒಳ್ಳೆಯದು,” ಎಂದು ಫಾತಿಮಾ ಹೇಳುತ್ತಾರೆ, ಭವಿಷ್ಯದ ಕುರಿತಾದ ಅವರ ದೃಷ್ಟಿ ಗಟ್ಟಿಮುಟ್ಟಾದ ಹುಲ್ಲಿನಿಂದ ಬಿಗಿಯಾಗಿ ನೇಯ್ದಂತಿದೆ.

ಪ್ರಯಾಗ್ ರಾಜ್ ಸ್ಯಾಮ್ ಹಿಗ್ಗಿನ್ ಬಾಥಮ್ ಕೃಷಿ , ತಂತ್ರಜ್ಞಾನ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ (SHUATS) ಪ್ರೊ . ಜಹಾನಾರಾ ಮತ್ತು ಪ್ರೊ ಆರಿಫ್ ಬ್ರಾಡ್ ವೇ ಅವರಿಗೆ ವರದಿ ತಯಾರಿಕೆಯಲ್ಲಿ ನೀಡಿದ ಉದಾರ ಸಹಾಯಕ್ಕಾಗಿ ವರದಿಗಾರರು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಾರೆ .

ಅನುವಾದ: ಶಂಕರ. ಎನ್. ಕೆಂಚನೂರು

Reporter : Priti David

प्रीती डेव्हिड पारीची वार्ताहर व शिक्षण विभागाची संपादक आहे. ग्रामीण भागांचे प्रश्न शाळा आणि महाविद्यालयांच्या वर्गांमध्ये आणि अभ्यासक्रमांमध्ये यावेत यासाठी ती काम करते.

यांचे इतर लिखाण Priti David
Editor : Sangeeta Menon

Sangeeta Menon is a Mumbai-based writer, editor and communications consultant.

यांचे इतर लिखाण Sangeeta Menon
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

यांचे इतर लिखाण Shankar N. Kenchanuru