ಜಮ್ಮು ಮತ್ತು ಕಾಶ್ಮೀರದ ಎತ್ತರದ ಪರ್ವತಗಳಲ್ಲಿ ಬಕರ್‌ವಾಲ್‌ಗಳು ಒಂಟಿಯಾಗಿ ಕಾಣಿಸುವುದು ಅಪರೂಪ.
ಈ ಪಶುಪಾಲಕ ಸಮುದಾಯದ ಜನರು ತಮ್ಮ ಜಾನುವಾರುಗಳಿಗಾಗಿ ಮೇವು ಹುಡುಕುತ್ತಾ ಹಿಮಾಲಯದ ಎಲ್ಲೆಡೆ ದೊಡ್ಡ ಗುಂಪುಗಳಲ್ಲಿ ಚಲಿಸುತ್ತಿರುತ್ತಾರೆ. “ಮೂರ್ನಾಲ್ಕು ಜನ ಅಣ್ಣ ತಮ್ಮಂದಿರು ತಮ್ಮ ಕುಟುಂಬಗಳೊಡನೆ ಚಲಿಸುತ್ತಿರುತ್ತಾರೆ,” ಎಂದು ಮುಹಮ್ಮದ್ ಲತೀಫ್ ಹೇಳುತ್ತಾರೆ. ಅವರು ಪ್ರತಿ ವರ್ಷ ಎತ್ತದರ ಪ್ರದೇಶಗಳ ಹುಲ್ಲುಗಾವಲಿಗೆ ಅಥವಾ ಬಹಕ್‌ಗೆ ಹೋಗುತ್ತಿರುತ್ತಾರೆ. "ಆಡು ಮತ್ತು ಕುರಿಗಳನ್ನು ಒಟ್ಟುಗೂಡಿಸುವುದರಿಂದ ಹಿಂಡನ್ನು ನಿರ್ವಹಿಸುವುದು ಸುಲಭ" ಎಂದು ಅವರು ಹೇಳುತ್ತಾರೆ, ವಾರ್ಷಿಕವಾಗಿ ತಮ್ಮೊಂದಿಗೆ ಪ್ರಯಾಣಿಸುವ ಸುಮಾರು 5,000 ಕುರಿಗಳು, ಆಡುಗಳು, ಕುದುರೆಗಳು ಮತ್ತು ಒಂದೆರಡು ಸುಂದರ ನಾಯಿಗಳು ಅವರೊಡನೆ ಇರುತ್ತವೆ.
ಜಮ್ಮುವಿನ ಬಯಲು ಪ್ರದೇಶದಿಂದ ಪೀರ್ ಪಂಜಾಲ್ ಮತ್ತು ಇತರ ಹಿಮಾಲಯ ಶ್ರೇಣಿಗಳಲ್ಲಿನ ಎತ್ತರದ ಹುಲ್ಲುಗಾವಲುಗಳಿಗೆ ಬಕರ್‌ವಾಲ್ ಜನರ ಪ್ರಯಾಣವು ಕ್ರಮೇಣ ಸುಮಾರು 3,000 ಮೀಟರುಗಳಷ್ಟು ಎತ್ತರಕ್ಕೆ ಏರುವುದನ್ನು ಒಳಗೊಳ್ಳುತ್ತದೆ. ಬೇಸಿಗೆ ಪ್ರಾರಂಭವಾಗುವ ಮೊದಲು ಮಾರ್ಚ್ ಕೊನೆಯಲ್ಲಿ ಅವರು ಮೇಲಕ್ಕೆ ಏರತೊಡಗುತ್ತಾರೆ, ಮತ್ತು ಚಳಿಗಾಲವು ಪ್ರಾರಂಭವಾಗುವ ಮೊದಲು ಸೆಪ್ಟೆಂಬರ್ ತಿಂಗಳಿನಲ್ಲಿ ತಮ್ಮ ಮರು ಪ್ರಯಾಣವನ್ನು ಪ್ರಾರಂಭಿಸುತ್ತಾರೆ.
ಪ್ರತಿ ಪ್ರಯಾಣಕ್ಕೆ ಸುಮಾರು 6ರಿಂದ 8 ವಾರ ಹಿಡಿಯುತ್ತದೆ. ಮಹಿಳೆಯರು, ಮಕ್ಕಳು, ಮತ್ತು ಕೆಲವು ಗಂಡಸರು ಮೊದಲು ಹೋಗಿ ತಲುಪುತ್ತಾರೆ. “ಅವರು ಮುಂದೆ ಹೋಗಿ ಅಲ್ಲಿನ ಪ್ರಮುಖ ಹುಲ್ಲುಗಾವಲುಗಳನ್ನು ತಲುಪಿ, ಅಲ್ಲಿ ನಮಗಾಗಿ ಡೇರಾ [ಡೇರೆ] ಸಿದ್ಧಪಡಿಸುತ್ತಾರೆ,” ಎಂದು ಮುಹಮ್ಮದ್ ಲತೀಫ್ ಹೇಳುತ್ತಾರೆ. ಅವರ ಗುಂಪು ರಜೌರಿ ಬಳಿಯ ಬಯಲು ಪ್ರದೇಶದಿಂದ ಲಡಾಖ್‌ನ ಜೋಜಿಲಾ ಪಾಸ್ ಬಳಿಯಿರುವ ಮೀನಾಮಾರ್ಗಕ್ಕೆ ಪ್ರಯಾಣಿಸುತ್ತಿತ್ತು.
ತನ್ನ ಬದುಕಿನ 30ರ ಹರೆಯದ ಉತ್ತರಾರ್ಧದಲ್ಲಿರುವ ಶೌಕತ್ ಅಲಿ ಕಂಡಲ್ ಜಮ್ಮುವಿನ ಕಥುವಾ ಜಿಲ್ಲೆಯ 20 ಬಕರ್ವಾಲ್ ಕುಟುಂಬಗಳ ಮತ್ತೊಂದು ಗುಂಪಿನ ಭಾಗವಾಗಿದ್ದಾರೆ. ಇದು ಸೆಪ್ಟೆಂಬರ್ 2022, ಮತ್ತು ಅವರ ಗುಂಪು ಕಿಶ್ತ್ವಾರ್ ಜಿಲ್ಲೆಯ ದೊಡ್ಡೈ ಬಹಾಕ್ (ಎತ್ತರದ ಹುಲ್ಲುಗಾವಲು) ನಿಂದ ಹಿಂದಿರುಗುತ್ತಿದೆ - ಇದು ಅನೇಕ ತಲೆಮಾರುಗಳಿಂದ ಅವರ ಬೇಸಿಗೆ ಮನೆಯಾಗಿದೆ. ಅವರು ವಾರ್ವಾನ್ ಕಣಿವೆಯಲ್ಲಿನ ಹಿಮ ಕಣಿವೆಗಳ ಮೂಲಕ ಬಂದಿದ್ದಾರೆ. "ನಾವು ಇನ್ನೊಂದು ತಿಂಗಳಲ್ಲಿ ಕಥುವಾ ತಲುಪುತ್ತೇವೆ. ದಾರಿಯುದ್ದಕ್ಕೂ ಇನ್ನೂ ನಾಲ್ಕು ಅಥವಾ ಐದು ನಿಲುಗಡೆಗಳಿವೆ" ಎಂದು ಶೌಕತ್ ಹೇಳುತ್ತಾರೆ.
ಬಕರ್‌ವಾಲ್ ಸಮುದಾಯ ಸದಾ ಚಲನೆಯಲ್ಲಿರಲು ಕಾರಣವೆಂದರೆ, ಅವರು ತಮ್ಮ ಕುರಿಗಳನ್ನು ಒಂದೆಡೆ ನಿಲ್ಲಿಸಲು ಸಾಧ್ಯವಿಲ್ಲ. ಅವು ಬಯಲಿನಲ್ಲಿ ಮೇಯಬೇಕು. ಪ್ರಾಣಿಗಳು ಅವರ ಆದಾಯದ ಪ್ರಾಥಮಿಕ ಮೂಲವಾಗಿರುವುದರಿಂದ ಹಿಂಡಿನ ಆರಾಮ ಮತ್ತು ಆಹಾರವು ಅತ್ಯಂತ ಮಹತ್ವದ್ದಾಗಿದೆ - ಎಲ್ಲಾ ಕಾಶ್ಮೀರಿ ಹಬ್ಬಗಳಲ್ಲಿ ಆಡು ಮತ್ತು ಕುರಿಯ ಮಾಂಸವು ಹೆಚ್ಚು ಮೌಲ್ಯಯುತವಾಗಿದೆ. "ನಮ್ಮ ಕುರಿ ಮತ್ತು ಮೇಕೆಗಳು ನಮಗೆ ಮುಖ್ಯ. [ಸ್ಥಳೀಯ] ಕಾಶ್ಮೀರಿಗಳು ವಾಲ್ನಟ್ ಮತ್ತು ಸೇಬಿನ ಮರಗಳನ್ನು [ಆದಾಯ ಗಳಿಸಲು] ಹೊಂದಿದ್ದಾರೆ," ಎಂದು ಶೌಕತ್ ಅವರ ಹಳೆಯ ಸಂಬಂಧಿಕರಲ್ಲಿ ಒಬ್ಬರನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ. ಕುದುರೆಗಳು ಮತ್ತು ಹೇಸರಗತ್ತೆಗಳು ಸಹ ಅವರ ಪ್ರಯಾಣದಲ್ಲಿ ಪ್ರಮುಖವಾಗಿವೆ: ಸಾಂದರ್ಭಿಕ ಪ್ರವಾಸಿಗಳಿಗಾಗಿ ಮಾತ್ರವಲ್ಲ, ಕುಟುಂಬ ಸದಸ್ಯರು, ಕುರಿಮರಿಗಳು, ಉಣ್ಣೆ, ನೀರು ಮತ್ತು ದೈನಂದಿನ ಅಗತ್ಯಗಳನ್ನು ಅವುಗಳ ಮೂಲಕ ಸಾಗಿಸಲಾಗುತ್ತದೆ.
ದಿನದ ಆರಂಭದಲ್ಲೇ ಶೌಕತ್ ಅವರ ಹೆಂಡತಿ ಶಾಮಾ ಬಾನೋ ಅವರೊಂದಿಗೆ ಪರ್ವತದ ಕಡಿದಾದ ಇಳಿಜಾರಿನಲ್ಲಿ ನಡೆದು ಅವರ ಶಿಬಿರವನ್ನು ತಲುಪಿದ್ದೆವು. ಅವರ ತಲೆಯ ಮೇಲೆ ನದಿಯಿಂದ ತಂದ ನೀರಿನ ದೊಡ್ಡ ಮಡಕೆ ಇತ್ತು. ನೀರನ್ನು ತರುವ ಕೆಲಸವು ಆಗಾಗ್ಗೆ ಮಹಿಳಾ ದನಗಾಹಿಗಳ ಮೇಲೆ ಬೀಳುತ್ತದೆ, ಅವರು ಪ್ರತಿದಿನ ಅದನ್ನು ಮಾಡಬೇಕು, ವಲಸೆಯಲ್ಲಿರುವಾಗ ಸಹ.
ಪಶುಪಾಲಕ ಸಮುದಾಯವಾದ ಬಕರ್‌ವಾಲ್ ಸಮುದಾಯವನ್ನು ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಎಂದು ಪಟ್ಟಿ ಮಾಡಲಾಗಿದೆ. 2013ರ ವರದಿಯು ಅವರ ಜನಸಂಖ್ಯೆ 1,13,198 ಎಂದು ಹೇಳುತ್ತದೆ. ಅವರು ಜಮ್ಮು ಮತ್ತು ಕಾಶ್ಮೀರ ರಾಜ್ಯದಾದ್ಯಂತ ಪ್ರಯಾಣಿಸುವಾಗ ಅವರು ತೋಟಗಳಲ್ಲಿ ಋತುಮಾನದ ಕೆಲಸದ ಅವಕಾಶಗಳನ್ನು ಸಹ ಪಡೆಯುತ್ತಾರೆ. ಒಂದೇ ಸ್ಥಳಗಳಿಗೆ ಅವರ ವಾರ್ಷಿಕ ವಲಸೆಯು ನಿವಾಸಿ ಕಾಶ್ಮೀರಿಗಳೊಂದಿಗೆ ಸ್ನೇಹದ ಬಲವಾದ ಬಂಧವನ್ನು ಸೃಷ್ಟಿಸಿದೆ. ಆಗಾಗ್ಗೆ ಹತ್ತಿರದ ಹಳ್ಳಿಗಳಿಂದ ತಮ್ಮ ಜಾನುವಾರುಗಳನ್ನು ಮೇಯಿಸಲು ಬರುವ ಮಹಿಳೆಯರು, ತಮ್ಮ ಡೇರೆಗಳಲ್ಲಿ ಸಂದರ್ಶಕರೊಂದಿಗೆ ಹರಟೆ ಹೊಡೆಯಲು ಸೇರಿಕೊಳ್ಳುತ್ತಾರೆ.
ನಮ್ಮಲ್ಲಿ ಇರುವುದು ಸಣ್ಣ ಹಿಂಡು, ಆದರೆ ನಮ್ಮ ಗಂಡಸರು ಇಲ್ಲಿ [ಪ್ರಯಾಣದಲ್ಲಿರುವಾಗ] ಒಂದಷ್ಟು ಹೆಚ್ಚುವರಿ ಕೆಲಸವನ್ನು ಗಳಿಸುತ್ತಾರೆಯಾದ್ದರಿಂದ ನಾವು ಪ್ರತಿ ವರ್ಷವೂ ಗುಳೇ ಹೋಗುತ್ತೇವೆ. ಯುವಕರು ಮರಕಡಿಯಲು ಅಥವಾ ಸ್ಥಳೀಯ ಕಾಶ್ಮೀರಿಗಳಿಗೆ ವಾಲ್‌ನಟ್ ಅಥವಾ ಸೇಬು ಕೊಯ್ಲಿಗೆ ಸಹಾಯ ಮಾಡಲು ಹೋಗುತ್ತಾರೆ,” ಎಂದು ಜೊಹ್ರಾ ಹೇಳುತ್ತಾರೆ. 70ರ ಪ್ರಾಯದ ಅವರು ಅವರು ಕೆಲವು ಬಕರ್ವಾಲ್ ಮಹಿಳೆಯರು ಧರಿಸುವ ಸಾಂಪ್ರದಾಯಿಕ ಕೈಯಿಂದ ಮಾಡಿದ ಕಸೂತಿ ಟೋಪಿಯನ್ನು ಧರಿಸಿದ್ದರು. ಜಮ್ಮುವಿನಲ್ಲಿರುವ ತಮ್ಮ ಮನೆಗಳಿಗೆ ಮರಳುವ ಮಾರ್ಗಮಧ್ಯೆಯಿರುವ ಗುಡ್ಡಗಾಡು ಪ್ರದೇಶವಾದ ಗಂದೇರ್ಬಾಲ್ ಜಿಲ್ಲೆಯ ಕಂಗನ್ ಎಂಬ ಹಳ್ಳಿಯಲ್ಲಿ ನೀರಿನ ಕಾಲುವೆಯ ಬಳಿ ಅವರು ತಮ್ಮ ಕುಟುಂಬದ ಉಳಿದ ಸದಸ್ಯರೊಂದಿಗೆ ವಾಸಿಸುತ್ತಿದ್ದಾರೆ. "ಏನೂ ಇಲ್ಲದಿದ್ದರೂ, ನಾವು ವಲಸೆ ಹೋಗುತ್ತೇವೆ, ಏಕೆ ಗೊತ್ತೇ? ಬೇಸಿಗೆಯಲ್ಲಿ ಬಯಲು ಪ್ರದೇಶಗಳಲ್ಲಿ ನನಗೆ ನನಗೆ ಬಹಳ ಸೆಕೆಯೆನ್ನಿಸುತ್ತದೆ!" ಎಂದು ಅವರು ಮುಗುಳ್ನಗೆಯೊಂದಿಗೆ ಹೇಳುತ್ತಾರೆ.
*****
"ಆ ಬೇಲಿಗಳನ್ನು ನೋಡಿ."
ಮೇಕೆ-ಹಾಲಿನ ಗುಲಾಬಿ ಬಣ್ಣದ ಕೆನೆಭರಿತ ಚಹಾ ಹೀರುತ್ತಾ, ಗುಲಾಮ್ ನಬಿ ಕಂದಲ್ ಅವರು "ಹಳೆಯ ಕಾಲ ಈಗಿಲ್ಲ," ಎಂದು ಅವರು ಬಳಸುತ್ತಿದ್ದ ಬೇಲಿಯಿಲ್ಲದ ಭೂಪ್ರದೇಶವನ್ನು ಉಲ್ಲೇಖಿಸುತ್ತಾರೆ. ಈಗ ಅವರು ಹುಲ್ಲುಗಾವಲಿಗೆ ಪ್ರವೇಶ ಮತ್ತು ಕ್ಯಾಂಪ್ ಹಾಕುವ ಸ್ಥಳದ ಕುರಿತು ಸದಾ ಅನಿಶ್ಚಿತ ಭಾವ ಹೊಂದಿರುತ್ತಾರೆ.
"ಮುಂದಿನ ವರ್ಷ ಸೈನ್ಯವು ಈ ಸ್ಥಳವನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ," ಎಂದು ಅವರು ಮುಂದಿನ ಪರ್ವತದ ಮೇಲೆ ಹೊಸದಾಗಿ ನಿರ್ಮಿಸಲಾದ ಬೇಲಿಗಳ ಸಾಲಿನತ್ತ ಬೊಟ್ಟು ಮಾಡಿ ಹೇಳುತ್ತಾರೆ. ನಮ್ಮೊಡನೆ ಕುಳಿತು ಸಮುದಾಯದ ಹಿರಿಯನ ಮಾತು ಕೇಳುತ್ತಿದ್ದ ಬಕರ್ವಾಲ್ ಸಮುದಾಯದ ಉಳಿದ ಜನರ ಮುಖದಲ್ಲಿ ಚಿಂತೆಯ ಗೆರೆ ಎದ್ದು ಕಾಣುತ್ತಿತ್ತು.
ಅದಷ್ಟೇ ಅಲ್ಲ. ಅನೇಕ ಹುಲ್ಲುಗಾವಲುಗಳನ್ನು ಪ್ರವಾಸೋದ್ಯಮಕ್ಕಾಗಿ ಬಳಸಲಾಗುತ್ತಿದೆ; ಜನಪ್ರಿಯ ಪ್ರವಾಸಿ ತಾಣಗಳಾದ ಸೋನಾಮಾರ್ಗ್ ಮತ್ತು ಪಹಲ್ಗಾಮ್ ಈ ವರ್ಷ ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಈ ಸ್ಥಳಗಳು ತಮ್ಮ ಜಾನುವಾರುಗಳಿಗೆ ಪ್ರಮುಖ ಬೇಸಿಗೆಯ ಹುಲ್ಲುಗಾವಲುಗಳಾಗಿವೆ ಎಂದು ಅವರು ಹೇಳುತ್ತಾರೆ.
"ಅವರು [ಸರ್ಕಾರ] ಸುರಂಗಗಳು ಮತ್ತು ರಸ್ತೆಗಳಲ್ಲಿ ಎಷ್ಟು ಹೂಡಿಕೆ ಮಾಡುತ್ತಿದ್ದಾರೆಂದು ನೋಡಿ. ಈಗ ಎಲ್ಲೆಡೆ ಉತ್ತಮ ರಸ್ತೆಗಳು ಇರಲಿವೆ, ಇದು ಪ್ರವಾಸಿಗರಿಗೆ ಮತ್ತು ಪ್ರಯಾಣಿಕರಿಗೆ ಒಳ್ಳೆಯದು ಆದರೆ ನಮಗೆ ಒಳ್ಳೆಯದಲ್ಲ," ಎಂದು ಹೆಸರು ಹೇಳಲಿಚ್ಛಿಸದ ಸಮುದಾಯದ ಹಿರಿಯರೊಬ್ಬರು ನಮಗೆ ತಿಳಿಸಿದರು.
ಇಲ್ಲಿ ಅವರು ಬಕರ್ವಾಲ್‌ಗಳು ಮೋಟಾರು ರಸ್ತೆಗಳಿಲ್ಲದ ಪ್ರದೇಶಗಳಲ್ಲಿ ಕುದುರೆಗಳನ್ನು ಬಾಡಿಗೆಗೆ ನೀಡುವುದರಿಂದ ಗಳಿಸುತ್ತಾರೆ ಎಂಬ ಅಂಶವನ್ನು ಅವರು ಉಲ್ಲೇಖಿಸುತ್ತಿದ್ದಾರೆ. "ಇದು ಪ್ರವಾಸಿ ಋತುವಿನಲ್ಲಿ ನಮ್ಮ ಪ್ರಮುಖ ಆದಾಯದ ಮೂಲಗಳಲ್ಲಿ ಒಂದಾಗಿದೆ," ಎಂದು ಅವರು ಹೇಳುತ್ತಾರೆ. ಆದರೆ ಅವರು ಕೇವಲ ಕುದುರೆಗಳನ್ನು ಬಾಡಿಗೆಗೆ ನೀಡುವುದಲ್ಲದೆ, ಪ್ರವಾಸಿ ಅಥವಾ ಚಾರಣಿಗರಿಗೆ ಮಾರ್ಗದರ್ಶಿಗಳಾಗಿ ಮತ್ತು ಸ್ಥಳೀಯ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಹುಡುಕುವಾಗ ಮಧ್ಯವರ್ತಿಗಳು ಮತ್ತು ಸ್ಥಳೀಯರೊಂದಿಗೆ ಸ್ಪರ್ಧಿಸಬೇಕು. ಈ 2013ರ ವರದಿಯ ಪ್ರಕಾರ ಬಕರ್ವಾಲ್‌ಗಳ ಸರಾಸರಿ ಸಾಕ್ಷರತೆಯು ಶೇಕಡಾ 32ರಷ್ಟಿದ್ದು, ಅವರಿಗೆ ಇತರ ಉದ್ಯೋಗಗಳು ಹೆಚ್ಚಾಗಿ ಕೈಗೆಟುಕುವುದಿಲ್ಲ.
ಈ ಸಮುದಾಯವು ಕಾಶ್ಮೀರಿ ಶಾಲು ಮತ್ತು ರತ್ನಗಂಬಳಿಯ ಕಚ್ಚಾ ವಸ್ತುವಾದ ಉಣ್ಣೆಯ ವ್ಯವಹಾರವನ್ನು ಸಹ ಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರ್ ವ್ಯಾಲಿ ಮತ್ತು ಗುರೇಜಿಯಂತಹ ಸ್ಥಳೀಯ ತಳಿಗಳನ್ನು ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಮರಿನೊದಂತಹ ತಳಿಗಳ ಜೊತೆ ಕ್ರಾಸ್ ಮಾಡಲಾಗುತ್ತಿದೆ. ಈ ವಿಷಯದಲ್ಲೂ ಬಕರ್ವಾಲಗಳು ಬಿಕ್ಕಟ್ಟು ಎದುರಿಸುತ್ತಿದ್ದಾರೆ. "ಕೆಲವು ವರ್ಷಗಳ ಹಿಂದೆ ಉಣ್ಣೆಯ ಬೆಲೆ ಕಿಲೋಗೆ ಸುಮಾರು 100 ರೂಪಾಯಿಗಳಷ್ಟಿತ್ತು. ಈಗ ನಮಗೆ 30 ರೂಪಾಯಿ ಕೂಡ ಸಿಗುವುದಿಲ್ಲ" ಎಂದು ಅನೇಕ ಜನರು ಹೇಳಿದರು.
ಬೆಲೆಯ ತೀವ್ರ ಕುಸಿತಕ್ಕೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸಂಸ್ಕರಣಾ ಘಟಕಗಳ ಕೊರತೆಯಾಗಿರುವುದೇ ಕಾರಣ ಎಂದು ಅವರು ಹೇಳುತ್ತಾರೆ. ಅವರು ಮಾರುವ ನೈಸರ್ಗಿಕ ಉಣ್ಣೆಯ ಜಾಗಕ್ಕೆ ಬಂದಿರುವ ಅಕ್ರಿಲಿಕ್ ಉಣ್ಣೆಯಂತಹ ಅಗ್ಗದ ಸಂಶ್ಲೇಷಿತ ಪರ್ಯಾಯಗಳಿಂದ ತೊಂದರೆಯಾಗುತ್ತಿದೆ. ಅನೇಕ ಹುಲ್ಲುಗಾವಲುಗಳಿಗೆ ವ್ಯಾಪಾರಿಗಳು ಅಥವಾ ಅಂಗಡಿಗಳಿಗೆ ಪ್ರವೇಶವಿಲ್ಲದ ಕಾರಣ, ಬಕರ್ವಾಲ್‌ಗಳು ಉಣ್ಣೆಯನ್ನು ಕುದುರೆಯ ಮೇಲೆ ಅಥವಾ ಹೇಸರಗತ್ತೆಗಳ ಮೇಲೆ ಸಾಗಣೆ ಮಾಡಬೇಕಿರುವ ಸ್ಥಳದ ಒಂದು ಭಾಗಕ್ಕೆ ಸಾಗಿಸುತ್ತಾರೆ ಮತ್ತು ನಂತರ ಅದನ್ನು ಮಾರುಕಟ್ಟೆಗೆ ಕೊಂಡೊಯ್ಯಲು ವಾಹನವನ್ನು ಬಾಡಿಗೆಗೆ ಪಡೆಯುತ್ತಾರೆ. ಈ ಬಾರಿ ಅನೇಕ ಬಕರ್ವಾಲ್‌ಗಳು ತಾವು ಕತ್ತರಿಸಿದ ಉಣ್ಣೆಯನ್ನು ಹುಲ್ಲುಗಾವಲಿನಲ್ಲೇ ವ್ಯರ್ಥಗೊಳಿಸಿದರು. ಸಾಗಾಟದ ಖರ್ಚು ಕೂಡಾ ಮಾರಾಟದಿಂದ ಹುಟ್ಟದಿರುವುದೇ ಇದಕ್ಕೆ ಕಾರಣ.
ಮತ್ತೊಂದೆಡೆ, ಆಡಿನ ಕೂದಲನ್ನು ಅವರು ಡೇರೆಗಳು ಮತ್ತು ಹಗ್ಗಗಳನ್ನು ಮಾಡಲು ಬಳಸುತ್ತಾರೆ. ಅವರು ಮತ್ತು ಅವರ ಸಹೋದರ ಶೌಕತ್ ನಡುವೆ ಚಾಚಿರುವ ಹಗ್ಗವನ್ನು ಎಳೆಯುತ್ತಾ ನಮಗೆ ಹೇಳುತ್ತಾರೆ, "ಕಗಾನಿ ಆಡುಗಳ ಕೂದಲು ಇದಕ್ಕೆ ಒಳ್ಳೆಯದು, ಅವುಗಳಿಗೆ ಉದ್ದವಾದ ಕೂದಲಿದೆ." ಕಗಾನಿ ಹೆಚ್ಚು ಬೆಲೆಬಾಳುವ ಕಾಶ್ಮೀರಿ ಉಣ್ಣೆಯನ್ನು ನೀಡುವ ತಳಿಯಾಗಿದೆ.
ಬಕರ್ವಾಲ್ ಜನರು ತಮ್ಮ ಗಮ್ಯಸ್ಥಾನಗಳನ್ನು ವೇಗವಾಗಿ ತಲುಪುವುದ್ಕೆಕ ಸಹಾಯ ಮಾಡಲೆಂದು, 2022ರಲ್ಲಿ ಸರ್ಕಾರವು ಅವರು ಮತ್ತು ಅವರ ಜಾನುವಾರುಗಳಿಗೆ ಪ್ರಯಾಣದ ವ್ಯವಸ್ಥೆಯನ್ನು ಮಾಡಿಸಿತು. ಇದರಿಂದಾಗಿ ಅವರಿಗೆ ವಾರಗಟ್ಟಲೆ ಹಿಡಿಯುವ ಪ್ರಯಾಣ ಒಂದು ದಿನದಲ್ಲಿ ಮುಗಿಯಿತು. ಆದರೆ ಟ್ರಕ್‌ಗಳಿಗೆ ನೋಂದಾಯಿಸಿಕೊಂಡ ಅನೇಕರು ಅವುಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಏಕೆಂದರೆ ಟ್ರಕ್‌ಗಳು ಕಡಿಮೆಯಿದ್ದವು. ಇನ್ನೂ ಕೆಲವರಿಗೆ ಈ ಕುರಿತು ತಿಳಿಯುವಾಗ ಅವರು ಹೊರಟಾಗಿತ್ತು. ಕುರಿ ಸಾಕಾಣಿಕೆ ಅಧಿಕಾರಿಯೊಬ್ಬರು ಒಪ್ಪಿಕೊಂಡಂತೆ, “ಸಾವಿರಾರು ಬಕರ್ವಾಲ್ ಕುಟುಂಬಗಳಿವೆ ಮತ್ತು ಬೆರಳೆಣಿಕೆಯಷ್ಟು ಟ್ರಕ್‌ಗಳಿವೆ. ಹೆಚ್ಚಿನ ಜನರು ಈ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ."
*****
“ಇವನು ಇಪ್ಪತ್ತು ದಿನಗಳ ಹಿಂದೆ ಜನಿಸಿದ.”
ಟೆಂಟಿನ ಮೂಲೆಯಲ್ಲಿದ್ದ ಬಟ್ಟೆಗಳ ರಾಶಿಯತ್ತ ತೋರಿಸುತ್ತಾ ಮೀನಾ ಅಖ್ತರ್ ಹೇಳಿದರು. ಆ ಬಟ್ಟೆಯ ರಾಶಿಯಲ್ಲಿ ಮಗುವಿದೆಯೆನ್ನುವುದು ಅದು ಅಳುವ ತನಕ ಯಾರಿಗಾದರೂ ತಿಳಿಯುವುದು ಬಹಳ ಕಷ್ಟವಿತ್ತು. ಮೀನಾ ಆ ಮಗುವಿಗೆ ಬೆಟ್ಟದ ತಪ್ಪಲಿನಲ್ಲಿರುವ ಆಸ್ಪತ್ರೆಯೊಂದರಲ್ಲಿ ಜನ್ಮ ನೀಡಿದರು. ಹೆರಿಗೆ ದಿನ ಮೀರಿದರೂ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳದ ಕಾರಣ ಅವರನ್ನು ಅಲ್ಲಿಗೆ ಕರೆದೊಯ್ಯಬೇಕಾಯಿತು.
“ನಾನು ದುರ್ಬಳಾಗಿದ್ದೆ. ಮೊನ್ನೆಯವರೆಗೂ ಶಕ್ತಿ ಮರಳಿ ಪಡೆಯುವ ಸಲುವಾಗಿ ಹಲ್ವಾ [ರವೆ ಗಂಜಿ] ತಿನ್ನುತ್ತಿದ್ದೆ. ಈಗೊಂದು ಎರಡು ದಿನದಿಂದ ರೊಟ್ಟಿ ತಿನ್ನುತ್ತಿದ್ದೇನೆ,” ಎನ್ನುತ್ತಾರಾಕೆ. ಮೀನಾರ ಪತಿ ಹತ್ತಿರದ ಹಳ್ಳಿಯೊಂದರಲ್ಲಿ ಮರ ಕತ್ತರಿಸುವ ಕೆಲಸದ ಮೂಲಕ ಸಂಸಾರ ನಡೆಸಲು ಬೇಕಾಗುವ ಹಣವನ್ನು ಸಂಪಾದಿಸುತ್ತಾರೆ.
ಚಹಾ ತಯಾರಿಸುವ ಸಲುವಾಗಿ ಪ್ಲಾಸ್ಟಿಕ್ ಪ್ಯಾಕೆಟಿನಿಂದ ಹಾಲು ಸುರಿಯುತ್ತಾ, “ಸದ್ಯಕ್ಕೆ ನಮಗೆ ಹಾಲು ಸಿಗುತ್ತಿಲ್ಲ, ಕುರಿಗಳು ಮರಿ ಹಾಕಿ ಅವು ನಡೆಯಲು ಆರಂಭಿಸಿದರೆ ನಮಗೆ ಹಾಲು ದೊರಕುತ್ತದೆ.” ತುಪ್ಪ, ಹಾಲು, ಮತ್ತು ಚೀಸ್ ಬುಕರ್ವಾಲ್ ಸಮುದಾಯಕ್ಕೆ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಟಿಕಾಂಶದ ಅತ್ಯಗತ್ಯ ಮೂಲಗಳಾಗಿವೆ.
ಎತ್ತರದ ಪರ್ವತಗಳಲ್ಲಿ ಮತ್ತು ಟೆಂಟ್ ಹೊದಿಕೆಯಿಂದ ಮಾತ್ರವೇ ಚಳಿಯಿಂದ ರಕ್ಷಿಸಲ್ಪಟ್ಟ, ತುಂಬಾ ಚಿಕ್ಕ ಮಕ್ಕಳನ್ನು ಆಗಾಗ್ಗೆ ಅಡುಗೆ ಬೆಂಕಿ ಮತ್ತು ಕಂಬಳಿಗಳ ಶಾಖದಿಂದ ಒಳಗೆ ಬೆಚ್ಚಗಿಡಲಾಗುತ್ತದೆ. ಹೊರಗೆ ಹೋಗಬಲ್ಲ ಮಕ್ಕಳು ಶಿಬಿರದ ಸುತ್ತಲೂ ಮುಕ್ತವಾಗಿ ತಿರುಗಾಡುತ್ತಾರೆ ಮತ್ತು ಜೊತೆಯಾಗಿ ಆಟವಾಡುತ್ತಾರೆ. ನಾಯಿಗಳನ್ನು ನೋಡಿಕೊಳ್ಳುವುದು ಅಥವಾ ಉರುವಲು ಮತ್ತು ನೀರನ್ನು ತರುವುದು ಮುಂತಾದ ಸಣ್ಣ ಕೆಲಸಗಳನ್ನು ಅವರಿಗೆ ನೀಡಲಾಗುತ್ತದೆ. "ಮಕ್ಕಳು ದಿನವಿಡೀ ಪರ್ವತದ ಚಿಲುಮೆಯ ನೀರಿನಲ್ಲಿ ಆಟವಾಡುತ್ತಾರೆ," ಎಂದು ಮೀನಾ ಹೇಳುತ್ತಾರೆ. ಲಡಾಖ್ ಗಡಿಯಿಂದ ಅನತಿ ದೂರದಲ್ಲಿರುವ ಮೀನಾಮಾರ್ಗದ ತಮ್ಮ ಚಳಿಗಾಲದ ಬಹಕ್ ಬಿಟ್ಟು ಹೋಗಲು ಅವರಿಗೆ ಮನಸ್ಸಿಲ್ಲ. “ಇಲ್ಲಿ ಬದುಕು ಉತ್ತಮವಾಗಿದೆ.”
ಶೌಕತ್ ಅವರ ಡೇರಾದಲ್ಲಿರುವ ಖಲ್ದಾ ಬೇಗಂ ಕೂಡಾ ತನ್ನ ಸಣ್ಣ ಮಕ್ಕಳೊಡನೆ ಪ್ರಯಾಣದಲ್ಲಿದ್ದಾರೆ. ಆದರೆ ಅವರ ಹದಿಹರೆಯದ ಮಗಳು ಅವರ ಸಂಬಂಧಿಯೊಡನೆ ಜಮ್ಮುವಿನಲ್ಲಿದ್ದುಕೊಂಡು ಓದುತ್ತಿದ್ದಾಳೆ. “ನನ್ನ ಮಗಳು ಅಲ್ಲಿದ್ದು ಇನ್ನೂ ಚೆನ್ನಾಗಿ ಓದಬೇಕು,” ಎಂದು ಹೇಳುತ್ತಾ, ಅದರ ಕಲ್ಪನೆಯಲ್ಲಿ ಮುಗುಳ್ನಕ್ಕರು. ಅನೇಕ ಮಕ್ಕಳಿಗೆ ಇಂತಹ ಆಯ್ಕೆಯಿಲ್ಲದ ಕಾರಣ ಅವರು ತಮ್ಮ ಕುಟುಂಬದೊಡನೆ ಗುಳೇ ಹೋಗಬೇಕಾಗುತ್ತದೆ. ಈ ಮಕ್ಕಳಿಗಾಗಿ ಸರಕಾರವು ಸಂಚಾರಿ ಶಾಲೆಗಳನ್ನು ತೆರೆಯುವ ಪ್ರಯತ್ನ ಇದುವರೆಗೆ ಯಶಸ್ಸು ಕಂಡಿಲ್ಲ. ಕೆಲವೇ ಬಕರ್ವಾಲ್ ಮಕ್ಕಳಿಗಷ್ಟೇ ಇದಕ್ಕೆ ಬರಲು ಸಾಧ್ಯವಾಗಿದ್ದೆ ಇದಕ್ಕೆ ಕಾರಣ.
ಮೊಬೈಲ್ ಶಾಲೆಗಳಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟ ಶಿಕ್ಷಕರು ಅಲ್ಲಿಗೆ ಬರುವುದು ಅಪರೂಪ. "ಅವರು ಇಲ್ಲಿಗೆ ಬರುವುದಿಲ್ಲ, ಆದರೆ ಅವರಿಗೆ ಸಂಬಳ ಸಿಗುತ್ತದೆ," ಎಂದು 30ರ ಹರೆಯದ ಖದೀಮ್ ಹುಸೇನ್ ಹೇಳುತ್ತಾರೆ. ಅವರು ಕಾಶ್ಮೀರವನ್ನು ಲಡಾಖಿಗೆ ಸಂಪರ್ಕಿಸುವ ಜೋಜಿ ಲಾ ಪಾಸ್ ಬಳಿ ಶಿಬಿರ ಹೂಡಿರುವ ಬಕರ್ವಾಲ್ ಗುಂಪಿಗೆ ಸೇರಿದವರು.
"ಯುವ ಪೀಳಿಗೆಯು ಹೆಚ್ಚಿನ ಶಿಕ್ಷಣವನ್ನು ಪಡೆಯುತ್ತಿದೆ. ಅವರು ಅಲೆಮಾರಿ ಜೀವನಕ್ಕೆ ಬದಲಾಗಿ ಇತರ ಅವಕಾಶಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ [ಅಲೆಮಾರಿ] ಜೀವನವನ್ನು ಅವರಿಗೆ ಕಷ್ಟಕರವಾಗಿ ಕಾಣುತ್ತದೆ," ಎಂದು ಫೈಸಲ್ ರಾಜಾ ಬೊಕ್ಡಾ ಹೇಳುತ್ತಾರೆ. ಜಮ್ಮುವಿನಲ್ಲಿ ಗುಜ್ಜರ್ ಬಕರ್ವಾಲ್ ಯುವಜನ ಕಲ್ಯಾಣ ಸಮ್ಮೇಳನದ ಪ್ರಾಂತೀಯ ಅಧ್ಯಕ್ಷರಾಗಿರುವ ಅವರು, ಒಕ್ಕಲೆಬ್ಬಿಸುವಿಕೆ ಮತ್ತು ಅನ್ಯಾಯದ ವಿರುದ್ಧ ದನಿ ಎತ್ತಲು ಪೀರ್ ಪಂಜಾಲ್ ಶ್ರೇಣಿಗಳ ಮೂಲಕ ನಡಿಗೆ ಮಾಡಲು ಯೋಜಿಸುತ್ತಿದ್ದರು. "ಇದು ನಮ್ಮ ಯುವಕರಿಗೆ ಸುಲಭವಲ್ಲ. ನಾವು ಇತರ ಜನರೊಂದಿಗೆ ಸಂವಹನ ನಡೆಸುವಾಗ ನಾವು ಈಗಲೂ ಸಾಕಷ್ಟು ನಿಂದನೆಯನ್ನು ಎದುರಿಸುತ್ತೇವೆ, ಹೆಚ್ಚು ಹೆಚ್ಚಾಗಿ ಪಟ್ಟಣಗಳಲ್ಲಿ. [ತಾರತಮ್ಯ] ನಮ್ಮ ಮೇಲೆ ಗಾಢವಾಗಿ ಪರಿಣಾಮ ಬೀರುತ್ತದೆ," ಎಂದು ಅವರು ಹೇಳುತ್ತಾರೆ. ಗುಜ್ಜರ್ ಮತ್ತು ಬಕರ್ವಾಲ್ ಸಮುದಾಯಗಳಿಗೆ ಪರಿಶಿಷ್ಟ ಪಂಗಡಗಳಾಗಿ ತಮ್ಮ ಹಕ್ಕುಗಳ ಕುರಿತು ಹೆಚ್ಚು ಅರಿವು ಮೂಡಿಸಲು ಬೊಕ್ಡಾ ಕೆಲಸ ಮಾಡುತ್ತಿದ್ದಾರೆ.
ಶ್ರೀನಗರ ನಗರದ ಹೊರವಲಯದಲ್ಲಿ ಝಕುರಾ ಎಂಬ ಪ್ರದೇಶದಲ್ಲಿ 12 ಬಕರ್ವಾಲ್ ಕುಟುಂಬಗಳು ವಾಸಿಸುತ್ತವೆ - ಅವರ ಚಳಿಗಾಲದ ಬಹಕ್‌ಗಳು ಜಲವಿದ್ಯುತ್ ಅಣೆಕಟ್ಟಿನ ಯೋಜನೆಯಿಂದ ಸ್ಥಳಾಂತರಗೊಂಡವು, ಹೀಗಾಗಿ ಅವರು ಇಲ್ಲಿ ನೆಲೆಸಿದ್ದಾರೆ. ಅಲ್ತಾಫ್ (ಹೆಸರು ಬದಲಾಯಿಸಲಾಗಿದೆ) ಇಲ್ಲಿ ಜನಿಸಿದವರು ಮತ್ತು ಶ್ರೀನಗರದಲ್ಲಿ ಶಾಲಾ ಬಸ್ ಓಡಿಸುತ್ತಾರೆ. "ನನ್ನ ವಯಸ್ಸಾದ ಅನಾರೋಗ್ಯ ಪೀಡಿತ ಪೋಷಕರು ಮತ್ತು ಮಕ್ಕಳಿಗಾಗಿ ನಾನು ಇಲ್ಲಿಯೇ ಉಳಿಯಲು ನಿರ್ಧರಿಸಿದೆ," ಅವರು ತಮ್ಮ ಸಮುದಾಯದ ಇತರರಂತೆ ಏಕೆ ವಲಸೆ ಹೋಗುವುದಿಲ್ಲ ಎಂದು ವಿವರಿಸುತ್ತಾ ಅವರು ಹೇಳುತ್ತಾರೆ.
ಸಮುದಾಯದ ಅನಿಶ್ಚಿತ ಭವಿಷ್ಯ ಮತ್ತು ಬೇಲಿ ಹಾಕುವಿಕೆ, ಪ್ರವಾಸೋದ್ಯಮ ಮತ್ತು ಬದಲಾಗುತ್ತಿರುವ ಬದುಕು ಒಡ್ಡುತ್ತಿರುವ ಅನೇಕ ಬೆದರಿಕೆಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾ, ತನ್ನ ಇಡೀ ಜೀವನವನ್ನು ಪರ್ವತಗಳಾದ್ಯಂತ ಮುಕ್ತವಾಗಿ ಚಲಿಸುತ್ತಾ ಕಳೆದ ಗುಲಾಮ್ ನಬಿ ಹೇಳುತ್ತಾರೆ, "ನನ್ನ ನೋವು ನಿಮಗೆ ಹೇಗೆ ಅರ್ಥವಾಗುತ್ತದೆ?"
ವರದಿಗಾರರು ಫೈಸಲ್ ಬೊಕ್ಡಾ, ಶೌಕತ್ ಕಂಡಲ್ ಮತ್ತು ಇಶ್ಫಾಕ್ ಕಂಡಲ್ ಅವರ ಉದಾರ ಸಹಾಯ ಮತ್ತು ಆತಿಥ್ಯಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತಾರೆ.
ರಿತಾಯನ್ ಮುಖರ್ಜಿ ಅವರು ಪಶುಪಾಲನಾ ಕೇಂದ್ರದಿಂದ ಸ್ವತಂತ್ರ ಪ್ರಯಾಣ ಅನುದಾನದ ಮೂಲಕ ಗ್ರಾಮೀಣ ಮತ್ತು ಅಲೆಮಾರಿ ಸಮುದಾಯಗಳ ಬಗ್ಗೆ ವರದಿ ಮಾಡುತ್ತಾರೆ. ಈ ವರದಿಯ ವಿಷಯಗಳ ಮೇಲೆ ಕೇಂದ್ರವು ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಚಲಾಯಿಸಿಲ್ಲ.
ಅನುವಾದ: ಶಂಕರ. ಎನ್. ಕೆಂಚನೂರು