“ಪ್ರತಿ ಆತ್ಮವೂ ಒಂದು ದಿನ ಸಾವಿನ ರುಚಿಯನ್ನು ಸವಿಯುತ್ತದೆ” ಎಂದು ನವದೆಹಲಿಯ ಅತಿದೊಡ್ಡ ಸ್ಮಶಾನಗಳಲ್ಲಿ ಒಂದಾದ ಅಹ್ಲ್ -ಇ- ಇಸ್ಲಾಮ್ -ಜದೀದ್ ಕಬ್ರಿಸ್ಟಾನ್‌ನಲ್ಲಿನ ಸಮಾಧಿಯೊಂದರ ಮೇಲೆ ಕೆತ್ತಲಾಗಿತ್ತು. ಬದುಕಿನ ಕಹಿ ಸತ್ಯವನ್ನು ಹೇಳುವ ಇಂತಹ ಮಾತುಗಳನ್ನು ಬೇರೆಡೆ ನೀವು ಅಷ್ಟಾಗಿ ಕಾಣಲು ಸಾಧ್ಯವಿಲ್ಲ.
ಈ ಸಾಲು - كُلُّ نَفْسٍ ذَائِقَةُ الْمَوْتِ - ಇದು ಕುರ್‌ಆನ್‌ನ ಒಂದು ಅಯಾತ್ ಮತ್ತು ಈ ಸ್ಮಶಾನದ ಕತ್ತಲೆಯಲ್ಲಿ ಅದು ಶಾಂತಿಯ ಸಾಂತ್ವನವನ್ನು ಹೇಳುತ್ತದೆ. ಅಷ್ಟರಲ್ಲಿ ಮತ್ತೊಂದು ಆಂಬ್ಯುಲೆನ್ಸ್ ಬರುತ್ತದೆ ಮತ್ತು ಮೃತಪಟ್ಟವರ ಸಂಬಂಧಿಕರು ನಮಾಜ್-ಎ-ಜನಾಜಾ (ಕೊನೆಯ ಪ್ರಾರ್ಥನೆ) ಸಲ್ಲಿಸುತ್ತಾರೆ. ಕೆಲವೇ ಕ್ಷಣಗಳಲ್ಲಿ ವ್ಯಾನ್ ಖಾಲಿಯಾಗುತ್ತದೆ. ಯಂತ್ರವೊಂದು ಗುಂಡಿಗೆ ಮಣ್ಣು ತುಂಬಿಸುತ್ತದೆ.
ಈ ಸ್ಮಶಾನದ ಒಂದು ಮೂಲೆಯಲ್ಲಿರುವ ಬಹದ್ದೂರ್ ಷಾ ಜಾಫರ್ ಮಾರ್ಗದಲ್ಲಿರುವ ಮಾಧ್ಯಮ ಕಂಪನಿಗಳ ಕಟ್ಟಡಗಳ ಪಕ್ಕದಲ್ಲಿ 62 ವರ್ಷದ ನಿಜಾಮ್ ಅಖ್ತರ್ ಸಮಾಧಿಯ ಕಲ್ಲುಗಳ ಮೇಲೆ ಮೃತಪಟ್ಟವರ ಹೆಸರನ್ನು ಬರೆಯುತ್ತಿದ್ದಾರೆ. ಅದನ್ನುಮೆಹ್ರಾಬ್ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ತನ್ನ ಬೆರಳುಗಳ ನಡುವೆ ಪರ್ಕಜಾವನ್ನು (ಕ್ಯಾಲಿಗ್ರಫಿ ಬರೆಯಲು ಬಳಸುವ ಕುಂಚ) ಸೂಕ್ಷ್ಮವಾಗಿ ಹಿಡಿದುಕೊಂಡು, ಅಕ್ಷರವೊಂದಕ್ಕೆ ನುಕ್ತಾವನ್ನು ಸೇರಿಸುತ್ತಿದ್ದರು - ಉರ್ದು ಭಾಷೆಯ ಕೆಲವು ಅಕ್ಷರಗಳ ಮೇಲಿನ ಚುಕ್ಕೆ ಅವುಗಳ ಉಚ್ಚಾರಣೆಯನ್ನು ಬದಲಾಯಿಸುತ್ತದೆ. ನಿಜಾಮ್ ಬರೆಯುತ್ತಿದ್ದ ಪದ 'ದುರ್ದಾನಾ.' ಕರೋನಾಗೆ ಬಲಿಯಾದ ವ್ಯಕ್ತಿಯ ಹೆಸರಿದು.
ಅಲ್ಲಿ ನಿಜಾಮ್ ಅವರು ಸಮಾಧಿಯ ಕಲ್ಲಿನ ಮೇಲೆ ಕ್ಯಾಲಿಗ್ರಫಿ ಬಳಸಿ ಕುಶಲವಾಗಿ ಹೆಸರನ್ನು ಬರೆಯುತ್ತಿದ್ದರು. ಆ ಬರಹದಲ್ಲಿ ಅದ್ಭುತ ಕಲಾತ್ಮಕತೆಯಿತ್ತು. ನಂತರ ಅವರ ಸಹೋದ್ಯೋಗಿ ಸುತ್ತಿಗೆ ಮತ್ತು ಉಳಿ ಬಳಸಿ ಕಲ್ಲಿನ ಮೇಲೆ ಆ ಅಕ್ಷರಗಳನ್ನು ನಿಖರವಾಗಿ ಕೆತ್ತನೆ ಮಾಡುತ್ತಾರೆ. ಅವರು ಹಾಗೆ ಮಾಡಿದಾಗ ಅದರ ಮೇಲಿನ ಬಣ್ಣ ಹೊರಟು ಹೋಗುತ್ತದೆ.
ನಿಜಾಮ್ ಕತೀಬ್ (ಕೈಬರಹ ಕಲಾವಿದ ಅಥವಾ ಕ್ಯಾಲಿಗ್ರಾಫರ್) ಸಮಾಧಿ ಕಲ್ಲುಗಳ ಮೇಲೆ ಹೆಸರು ಬರೆಯುವ ಈ ಕೆಲಸವನ್ನು ಸುಮಾರು ನಲವತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಮಾಡುತ್ತಾ ಬಂದಿದ್ದಾರೆ. "ಇದುವರೆಗೆ ಹೆಸರು ಬರೆದ ಸಮಾಧಿ ಕಲ್ಲುಗಳ ಸಂಖ್ಯೆ ಎಷ್ಟೆನ್ನುವುದು ನನಗೆ ನೆನಪಿಲ್ಲ" ಎನ್ನುತ್ತಾರೆ ಅವರು. "ಈ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಾನು ಕೋವಿಡ್‌ನಿಂದ ಮರಣ ಹೊಂದಿದ ಸುಮಾರು 150 ಜನರ ಹೆಸರುಗಳನ್ನು ಬರೆದಿದ್ದೇನೆ ಮತ್ತು ಅಷ್ಟೇ ಸಂಖ್ಯೆಯ ಕೋವಿಡೇತರ ಕಾರಣಗಳಿಂದ ಮರಣಿಸಿದ ಜನರ ಹೆಸರುಗಳನ್ನು ಬರೆದಿದ್ದೇನೆ. ಪ್ರತಿ ದಿನ ನಾನು ಮೂರರಿಂದ ಐದು ಕಲ್ಲುಗಳನ್ನು ಪೂರ್ಣಗೊಳಿಸುತ್ತೇನೆ. ಕಲ್ಲಿನ ಒಂದು ಭಾಗದಲ್ಲಿ ಬರೆಯಲು ಸುಮಾರು ಒಂದು ಗಂಟೆಯಷ್ಟು ಸಮಯ ಹಿಡಿಯುತ್ತದೆ." ಎಂದು ಅವರು ಹೇಳುತ್ತಾರೆ. ಸಾಮಾನ್ಯವಾಗಿ ಕಲ್ಲಿನ ಮೇಲ್ಭಾಗದಲ್ಲಿ ಉರ್ದುವಿನಲ್ಲಿ ಬರೆಯಲಾಗಿದ್ದರೆ ಕೆಳ ಬದಿಯಲ್ಲಿ ಸತ್ತವರ ಹೆಸರನ್ನು ಇಂಗ್ಲೀಷಿನಲ್ಲಿ ಬರೆದಿರಲಾಗುತ್ತದೆ. "ಇದು ಸೆಕೆಂಡುಗಳಲ್ಲಿ ಪುಟ ಭರ್ತಿ ಮಾಡುವಂತಹ ಕೆಲಸವಲ್ಲ" ಎಂದು ಅಣಕಿಸುತ್ತಾ ಹೇಳುತ್ತಾರೆ.
ಈ ಸಾಂಕ್ರಾಮಿಕ ಪಿಡುಗಿನ ಮೊದಲು ಜದೀದ್ ದಿನಕ್ಕೆ ಒಂದು ಅಥವಾ ಎರಡು ಹೆಸರು ಬರೆಯುವ ಕೆಲಸಗಳನ್ನು ಹೊಂದಿರುತ್ತಿತ್ತು. ಈಗ ದಿನವೊಂದಕ್ಕೆ ನಾಲ್ಕರಿಂದ ಐದು ಹೆಸರುಗಳನ್ನು ಬರೆಯಲು ಆದೇಶ ಬರುತ್ತಿದೆ. ಕೆಲಸದ ಹೊರೆ 200%ಕ್ಕಿಂತ ಹೆಚ್ಚಾಗಿದೆ. ಈ ಕೆಲಸವನ್ನು ನಾಲ್ಕು ಜನರು ಹಂಚಿಕೊಳ್ಳುತ್ತಾರೆ. ಈ ವಾರ ಅವರು ಯಾವುದೇ ಹೊಸ ಆದೇಶಗಳನ್ನು ಸ್ವೀಕರಿಸುತ್ತಿಲ್ಲ. ಪ್ರಸ್ತುತ 120 ಕಲ್ಲುಗಳಲ್ಲಿ ಹೆಸರು ಬರೆಯಬೇಕಿದ್ದು ಅದರಲ್ಲಿ ಅರ್ಧದಷ್ಟು ಮಾತ್ರವೇ ಕೆಲಸ ನಡೆಯುತ್ತಿದೆ. 50 ಕಲ್ಲುಗಳ ಕೆಲಸ ಇನ್ನೂ ಆರಂಭವೇ ಆಗಿಲ್ಲ.
ದಿನದಿಂದ ದಿನಕ್ಕೆ ವ್ಯಾಪಾರ ಹೆಚ್ಚುತಿದೆಯಾದರೂ ಇದು ಅದರ ಮಾಲಿಕರನ್ನು ಸಂತಸಗೊಳಿಸುತ್ತಿಲ್ಲ. “ಸಾಕಷ್ಟು ಜನರು ತೀರಿಕೊಂಡಿದ್ದಾರೆ” ಎನ್ನುತ್ತಾರೆ ಮೊಹಮ್ಮದ್ ಶಮೀಮ್, ಇವರು ಈ ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವ ಅವರ ಕುಟುಂಬದ ಮೂರನೇ ತಲೆಮಾರಿನವರು. “ಜೊತೆಗೆ ಮನುಷ್ಯತ್ವವೂ ಸಾಯುತ್ತಿದೆ. ಈ ಸಾವು ನೋವುಗಳನ್ನು ನೋಡಿ ನನ್ನ ಹೃದಯ ಬಳಲಿ ಹೋಗಿದೆ.”
"ಈ ಭೂಮಿಗೆ ಬದುಕಲೆಂದು ಬರುವವರು ಒಂದು ದಿನ ಸಾಯಲೇಬೇಕು. ಸಾವೇ ಅಂತಿಮ ಸತ್ಯವೆನ್ನಿಸುತ್ತದೆ. ಇಲ್ಲಿಂದ ಎಲ್ಲರೂ ನಿರ್ಗಮಿಸುತ್ತಾರೆ" ಎನ್ನುತ್ತಾರೆ ನಿಜಾಮ್. "ಜನರು ಜೀವ ತೊರೆದು ಹೋಗುತ್ತಿದ್ದಾರೆ ನಾನು ಈ ಸಮಾಧಿ ಕಲ್ಲಿನ ಕೆಲಸ ಪಡೆಯುತ್ತಿದ್ದೇನೆ." ಎಂದು ತತ್ವಜ್ಞಾನಿಯಂತೆ ಮಾತನಾಡುತ್ತಾರೆ. "ನಾನು ಈ ಮೊದಲು ಈ ರೀತಿ ನೋಡಿರಲಿಲ್ಲ."
ಈಗ ವ್ಯಾಪಾರದಲ್ಲಿ ವಿಪರೀತ ಏರಿಕೆ ಕಂಡುಬಂದಿದ್ದರೂ ಎಲ್ಲ ಕುಟುಂಬಗಳೂ ಸಮಾಧಿ ಕಲ್ಲುಗಳನ್ನು ನಿಲ್ಲಿಸುವುದಿಲ್ಲ. ಕೆಲವರು ಕಬ್ಬಿಣದ ಬೋರ್ಡ್ ಮೇಲೆ ಪೇಂಟ್ ಮೂಲಕ ಬರೆಸುತ್ತಾರೆ. ಇನ್ನೂ ಕೆಲವು ಕುಟುಂಬಗಳು ಸಮಾಧಿಯ ಮೇಲೆ ಹೆಸರನ್ನೇ ಬರೆಸುವುದಿಲ್ಲ. ಇದೆಲ್ಲವೂ ಸತ್ತವರ ಕುಟುಂಬದ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. "ಕೆಲವೊಮ್ಮೆ ಸಮಾಧಿಯನ್ನು ಸಿದ್ಧಪಡಿಸುವ ಆದೇಶವು ಸಮಾಧಿ ಮಾಡಿದ 15ರಿಂದ 45 ದಿನಗಳ ನಂತರ ಬರುತ್ತದೆ" ಎಂದು ನಿಜಾಮ್ ಹೇಳುತ್ತಾರೆ. ನಿಜಾಮರ ಸಹೋದ್ಯೋಗಿ ಮತ್ತು ಹರಿಯಾಣದ ಫರಿದಾಬಾದ್ ಜಿಲ್ಲೆಯ ಬಲ್ಲಭಗಢ್ ನಿವಾಸಿ ಅಸೀಮ್ ಕಲ್ಲಿನ ಕೆತ್ತನೆಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಆಸೀಮ್ (ಅವರ ಕೋರಿಕೆಯ ಮೇರೆಗೆ ಹೆಸರನ್ನು ಬದಲಾಯಿಸಲಾಗಿದೆ) ಹೇಳುತ್ತಾರೆ, “ನಾವು ತೆಗೆದುಕೊಳ್ಳುವ ಪ್ರತಿಯೊಂದು ಆದೇಶಕ್ಕೂ ಕುಟುಂಬವು ಕನಿಷ್ಠ 20 ದಿನಗಳವರೆಗೆ ಕಾಯಬೇಕಾಗುತ್ತದೆ.”
35 ವರ್ಷದ ಆಸೀಮ್ ಅವರಿಗೆ ಕಳೆದ ವರ್ಷದವರೆಗೂ ಕೊರೋನಾ ಅಸ್ತಿತ್ವದ ಬಗ್ಗೆ ಸಂದೇಹವಿತ್ತು, ಆದರೆ ಈಗ ಕೊರೋನಾ ವೈರಸ್ ಇರುವ ಬಗ್ಗೆ ಅವರಿಗೆ ಮನವರಿಕೆಯಾಗಿದೆ. ಅವರು ಹೇಳುತ್ತಾರೆ, "ಶವಗಳು ಸುಳ್ಳು ಹೇಳುವುದಿಲ್ಲ. ಕೊರೋನಾ ಇದೆಯೆನ್ನುವುದನ್ನು ಸ್ವೀಕರಿಸುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲದಷ್ಟು ಶವಗಳನ್ನು ನೋಡಿದ್ದೇನೆ. ಎಂತಹ ಪರಿಸ್ಥಿತಿ ಉದ್ಭವಿಸಿತ್ತೆಂದರೆ, ಜನರು ತಮ್ಮ ಕುಟುಂಬ ಸದಸ್ಯರಿಗಾಗಿ ಸಮಾಧಿಗಳನ್ನು ಅವರೇ ಅಗೆಯಬೇಕಾಯಿತು. ಕೆಲವೊಮ್ಮೆ ಸಮಾಧಿ ಅಗೆಯುವ ಕೆಲಸಗಾರರು ಇರುವಷ್ಟು ಸಾಕಾಗುತ್ತಿರಲಿಲ್ಲ."
“ಸಾಂಕ್ರಾಮಿಕ ಪಿಡುಗು ಪ್ರಾರಂಭವಾಗುವ ಮೊದಲು, ಈ ಸ್ಮಶಾನವು ಪ್ರತಿದಿನ ಸುಮಾರು ನಾಲ್ಕರಿಂದ ಐದು ದೇಹಗಳನ್ನು ನೋಡುತ್ತಿತ್ತು. ತಿಂಗಳಿಗೆ ಹೇಳುವುದಾದರೆ ಸುಮಾರು 150,” ಎಂದು ಸ್ಮಶಾನವನ್ನು ನಡೆಸುತ್ತಿರುವ ಸಮಿತಿಯ ಉಸ್ತುವಾರಿ ನಮಗೆ ತಿಳಿಸಿದರು.
ಈ ವರ್ಷ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿಯೇ 1,068 ಶವಗಳು ದಫನಕ್ಕಾಗಿ ಬಂದಿವೆ. ಈ ಪೈಕಿ 453 ಸಾವುಗಳು ಕೊರೋನಾದಿಂದ ಮತ್ತು 615 ಇತರ ಕಾರಣಗಳಿಂದಾಗಿ ಸಂಭವಿಸಿವೆ. ಆದರೆ, ಇದು ಸ್ಮಶಾನದ ಅಧಿಕೃತ ವ್ಯಕ್ತಿಯ ಹೇಳಿಕೆ. ಇಲ್ಲಿ ಕೆಲಸ ಮಾಡುವ ಹೆಸರು ಹೇಳಲಿಚ್ಛಿಸದ ಕಾರ್ಮಿಕರು ಈ ಸಂಖ್ಯೆ ಬಹುಶಃ 50 ಪ್ರತಿಶತ ಹೆಚ್ಚಿರಬಹುದು ಎಂದು ಹೇಳುತ್ತಾರೆ.
ಆಸೀಮ್ ಹೇಳುತ್ತಾರೆ, "ಒಬ್ಬ ಮಹಿಳೆ ತನ್ನ ಒಂದೂವರೆ ವರ್ಷದ ಮಗುವಿನ ಜೊತೆ ಸ್ಮಶಾನಕ್ಕೆ ಬಂದಿದ್ದಳು. ಪತಿ ಬೇರೆ ರಾಜ್ಯದಿಂದ ಕಾರ್ಮಿಕನಾಗಿ ಕೆಲಸ ಮಾಡಲು ಈ ನಗರಕ್ಕೆ ಬಂದಿದ್ದು, ಕೊರೋನಾದಿಂದ ಸಾವನ್ನಪ್ಪಿದ್ದ. ಆ ಮಹಿಳೆಗೆ ಇಲ್ಲಿ ಯಾರೂ ಇರಲಿಲ್ಲ. ಸಮಾಧಿಗೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳನ್ನು ನಾವು ಮಾಡಿದ್ದೆವು. ಆ ಮಗು ತನ್ನ ತಂದೆಯ ಸಮಾಧಿಯ ಮೇಲೆ ಮಣ್ಣು ಸುರಿಯುತ್ತಿದ್ದ. ʼಒಂದು ಮಗು ಸತ್ತರೆ, ಅದನ್ನು ಅದರ ಸಮಾಧಿ ಹೆತ್ತವರ ಹೃದಯದಲ್ಲಿರುತ್ತದೆʼ ಎನ್ನುವ ಒಂದು ಮಾತಿದೆ. ಮಗುವೊಂದು ಹೆತ್ತವರನ್ನು ಸಮಾಧಿಯಲ್ಲಿ ಹೂಳಬೇಕಾದ ಸಂದರ್ಭ ಬರುತ್ತದಲ್ಲವೆ ಇದಕ್ಕೇನಾದರೂ ಈ ರೀತಿಯ ಹೇಳಿಕೆಗಳಿವೆಯೇ?
ಕೊರೋನಾ ಆಸೀಮ್ ಮತ್ತು ಅವರ ಕುಟುಂಬವನ್ನೂ ಬಾಧಿಸಿದೆ. ಅವರು, ಅವರ ಇಬ್ಬರು ಹೆಂಡತಿಯರು ಮತ್ತು ಅವರ ಪೋಷಕರು ಕೊರೋನದ ಎಲ್ಲಾ ರೋಗ ಲಕ್ಷಣಗಳನ್ನು ಎದುರಿಸಬೇಕಾಯಿತು. ಆದಾಗ್ಯೂ, ಅವರ ಐದು ಮಕ್ಕಳು ಸುರಕ್ಷಿತವಾಗಿ ಉಳಿದಿದ್ದರು. ಟೆಸ್ಟ್ ಮಾಡಿಸಲು ಕುಟುಂಬದಲ್ಲಿ ಯಾರೂ ಹೋಗಿರಲಿಲ್ಲ, ಆದರೆ ಎಲ್ಲರೂ ಬದುಕುಳಿದರು. ಕಲ್ಲಿನ ಚಪ್ಪಡಿಯ ಕೆತ್ತನೆ ಮಾಡುತ್ತಿದ್ದ ಅಸೀಮ್, "ನನ್ನ ಕುಟುಂಬವನ್ನು ನಡೆಸುವ ಸಲುವಾಗಿ ಇಲ್ಲಿ ಕಲ್ಲುಗಳನ್ನು ಒಡೆಯುತ್ತೇನೆ" ಎಂದು ಹೇಳುತ್ತಾರೆ. ಜದೀದ್ನಲ್ಲಿ ಮಾಸಿಕ 9,000 ರೂ ಸಂಬಳ ಪಡೆಯುವ ಅಸಿಮ್, ಸತ್ತ ನೂರಾರು ಜನರಿಗೆ ನಮಾಜ್-ಎ-ಜನಾಜಾ (ಕೊನೆಯ ಪ್ರಾರ್ಥನೆ)ಯನ್ನೂ ಅರ್ಪಿಸಿದ್ದಾರೆ. ಕೊರೋನಾದಿಂದ ಮತ್ತು ಇತರ ಕಾರಣಗಳಿಂದ ಉಂಟಾದ ಸಾವುಗಳು ಇವುಗಳಲ್ಲಿ ಸೇರಿವೆ.
"ನನ್ನ ಕುಟುಂಬವು ಇಲ್ಲಿ ಕೆಲಸ ಮಾಡುವಂತೆ ನನ್ನನ್ನು ಪ್ರೋತ್ಸಾಹಿಸುತ್ತದೆ, ಏಕೆಂದರೆ ಕೊನೆಯ ಪ್ರಯಾಣದಲ್ಲಿ ಮನುಷ್ಯನಿಗೆ ಸೇವೆ ಸಲ್ಲಿಸುವವರಿಗೆ ಮರಣಾನಂತರದ ಜೀವನದಲ್ಲಿ ಬಹುಮಾನ ಸಿಗುತ್ತದೆ" ಎಂದು ಆಸೀಮ್ ಹೇಳುತ್ತಾರೆ. ಇಲ್ಲಿ ಕೆಲಸ ಮಾಡಲು ಪ್ರೋತ್ಸಾಹಿಸಿದ ನಿಜಾಮರ ಕುಟುಂಬದವರೂ ಇದನ್ನು ನಂಬುತ್ತಾರೆ. ಇಬ್ಬರೂ ಮೊದಲಿಗೆ ಈ ಕೆಲಸದ ಬಗ್ಗೆ ಹೆದರುತ್ತಿದ್ದರು, ಆದರೆ ಶೀಘ್ರದಲ್ಲೇ ಆ ಭಯವು ಹೊರಟುಹೋಯಿತು. "ಶವವು ನೆಲದ ಮೇಲೆ ಮಲಗಿರುವಾಗ, ನೀವು ಭಯದ ಬಗ್ಗೆ ಯೋಚಿಸುವುದಿಲ್ಲ, ಆದರೆ ಸಮಾಧಿ ಮಾಡುವ ಬಗ್ಗೆ ಮಾತ್ರ ಯೋಚಿಸುತ್ತೀರಿ" ಎಂದು ಆಸೀಮ್ ಹೇಳುತ್ತಾರೆ.
ಜದೀದ್‌ನಲ್ಲಿ, ಸಮಾಧಿಯಕಲ್ಲನ್ನು ತಯಾರಿಸಲು 1500 ರೂಪಾಯಿ ಖರ್ಚಾಗುತ್ತದೆ. ಇದರಲ್ಲಿ, ನಿಜಾಮ್ 250ರಿಂದ 300 ರೂಪಾಯಿಗಳನ್ನು ಪಡೆಯುತ್ತಾರೆ, ಅದನ್ನು ಅವರ ಕೈಬರಹಕ್ಕಾಗಿ (ಕ್ಯಾಲಿಗ್ರಫಿ) ನೀಡಲಾಗುತ್ತದೆ, ಅದನ್ನು ಕಿತಾಬತ್ ಎಂದು ಕರೆಯಲಾಗುತ್ತದೆ. ಅವರು ಕೆಲಸ ಮಾಡುವ ಕಲ್ಲಿನ ಚಪ್ಪಡಿ ಸುಮಾರು 6 ಅಡಿ ಉದ್ದ ಮತ್ತು 3 ಅಡಿ ಅಗಲವಿರುತ್ತದೆ. ಇದರಲ್ಲಿ, 3 ಅಡಿ ಉದ್ದ ಮತ್ತು 1.5 ಅಡಿ ಅಗಲದ 4 ಸಮಾಧಿ ಕಲ್ಲುಗಳನ್ನು ಕತ್ತರಿಸಲಾಗುತ್ತದೆ. ಇದರ ನಂತರ, ಪ್ರತಿ ಕಲ್ಲಿನ ಮೇಲಿನ ಭಾಗಕ್ಕೆ ಗುಮ್ಮಟದ ಆಕಾರವನ್ನು ನೀಡಲಾಗುತ್ತದೆ. ಅದು ಸಂಪೂರ್ಣವಾಗಿ ಸಿದ್ಧವಾದಾಗ ಅದನ್ನು ಮೆಹ್ರಾಬ್ ಎಂದು ಕರೆಯಲಾಗುತ್ತದೆ. ಕೆಲವರು ಅಮೃತ ಶಿಲೆಯನ್ನು ಸಹ ಬಳಸುತ್ತಾರೆ. ಕಲ್ಲಿನ ಬದಲು ಕಬ್ಬಿಣದ ಹಲಗೆಯನ್ನು ಬಳಸುವವರು ಕೂಡ ಇದ್ದಾರೆ. ಇದಕ್ಕೆ 250ರಿಂದ 300 ಮಾತ್ರ ಖರ್ಚು ಮಾಡಬೇಕಾಗುತ್ತದೆ. ಇದು ಮಹ್ರಾಬ್‌ನ ವೆಚ್ಚದ ಆರನೇ ಒಂದು ಭಾಗಕ್ಕೆ ಸಮಾನವಾಗಿರುತ್ತದೆ.
ಪ್ರತಿ ಆದೇಶವನ್ನು ತೆಗೆದುಕೊಂಡ ನಂತರ, ಅಗತ್ಯವಿರುವ ಎಲ್ಲ ವಿವರಗಳನ್ನು ಕಾಗದದಲ್ಲಿ, ಸ್ಪಷ್ಟ ಭಾಷೆಯಲ್ಲಿ ಬರೆದುಕೊಡುವಂತೆ ನಿಜಾಮ್ ಆ ಕುಟುಂಬದ ಸದಸ್ಯರನ್ನು ಕೇಳುತ್ತಾರೆ. ಇದು ಸಾಮಾನ್ಯವಾಗಿ ಸತ್ತವರ ಹೆಸರು, ಗಂಡ ಅಥವಾ ತಂದೆಯ ಹೆಸರು (ಮಹಿಳೆಯರ ವಿಷಯದಲ್ಲಿ), ಜನನ ಮತ್ತು ಮರಣದ ದಿನಾಂಕ ಮತ್ತು ವಿಳಾಸವನ್ನು ಒಳಗೊಂಡಿರುತ್ತದೆ. ಇದಲ್ಲದೆ, ಕುಟುಂಬವು ಕಲ್ಲಿನ ಮೇಲೆ ದಾಖಲಿಸಲು ಬಯಸುವ ಕುರಾನ್‌ನ ಯಾವುದಾದರೂ ಪದ್ಯವನ್ನು ಸಹ ಸೇರಿಸಲಾಗುತ್ತದೆ. "ಇದು ಎರಡು ಉದ್ದೇಶಗಳನ್ನು ಪೂರೈಸುತ್ತದೆ" ಎಂದು ನಿಜಾಮ್ ವಿವರಿಸುತ್ತಾರೆ. ಮೊದಲನೆಯದಾಗಿ, ಸಂಬಂಧಿಕರು ಸತ್ತವರ ಹೆಸರನ್ನು ಬರೆಯುತ್ತಾರೆ; ಎರಡನೆಯದಾಗಿ, ಇದು ಯಾವುದೇ ತಪ್ಪುಗಳು ನಡೆಯದಂತೆ ಸಹಾಯ ಮಾಡುತ್ತದೆ. ಕೆಲವೊಮ್ಮೆ ಕೆಳಗೆ ನೀಡಲಾಗಿರುವಂತೆ ಶೇರ್ (ದ್ವಿಪದಿ)ಯನ್ನು ಸಹ ಬರೆಸಲಾಗುತ್ತದೆ. ಈ ಕೆಳಗಿನ ಶೇರ್ ಅನ್ನು ಜಹಾನ್ ಆರಾ ಹಸನ್ ಸಮಾಧಿಯ ಮೇಲೆ ಬರೆಯಲಾಗುವುದು, ಇದನ್ನು ಇತ್ತೀಚೆಗೆ ಅವರ ಕುಟುಂಬವು ನಿರ್ಮಿಸಲು ಆದೇಶಿಸಿತ್ತು.
ಆಕೆಯ ಸಮಾಧಿಯ
ಮೇಲೆ ಆಶೀರ್ವಾದದ ಸುರಿಮಳೆ ಸುರಿಯಲಿ
ಕಾಲದ ಕೊನೆಯವರೆಗೂ
ದೇವರು ಅವಳ ಕಾಳಜಿ ಮಾಡಲಿ
ನಿಜಾಮ್ 1975ರಲ್ಲಿ ಕಿತಾಬತ್ ಅಭ್ಯಾಸ ಮಾಡಲು ಪ್ರಾರಂಭಿಸಿದರು. ಅವರ ತಂದೆಯವರು ಕೂಡ ವರ್ಣಚಿತ್ರಕಾರರಾಗಿದ್ದರು, 1979ರಲ್ಲಿ ಅವರು ನಿಧನರಾದ ನಂತರ, ನಿಜಾಮ್ ಸಮಾಧಿಯ ಮೇಲೆ ಬರೆಯುವ ಕೆಲಸವನ್ನು ಪ್ರಾರಂಭಿಸಿದರು. “ನನ್ನ ತಂದೆ ಕಲಾವಿದರಾಗಿದ್ದರೂ ನಾನು ಅವರಿಂದ ಕಲಿಯಲಿಲ್ಲ. ನಾನು ಅವರ ಚಿತ್ರಕಲೆಯನ್ನು ನೋಡಿದ್ದೆ. ಚಿತ್ರಕಲೆಯೆನ್ನುವುದು ಸ್ವಾಭಾವಿಕವಾಗಿ ಜನ್ಮಜಾತ ಕಲೆಯೆಂತೆ ಆಶೀರ್ವಾದವಾಗಿ ಒಲಿಯಿತು” ಎಂದು ಅವರು ಹೇಳುತ್ತಾರೆ.
1980ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನಿಂದ ನಿಜಾಮ್ ಉರ್ದು ಭಾಷೆಯಲ್ಲಿ ಪದವಿ ಪಡೆದರು. ನಂತರ ಈ ಕೆಲಸವನ್ನು ಪ್ರಾರಂಭಿಸಿದರು. ಮತ್ತು ಏಕ ಪರದೆಯ ಚಿತ್ರಮಂದಿರವಾದ ಜಗತ್ ಸಿನೆಮಾ ಎದುರು ಅಂಗಡಿಯೊಂದನ್ನು ತೆರೆದರು. ಒಂದು ಕಾಲದಲ್ಲಿ ಐತಿಹಾಸಿಕ ಚಲನಚಿತ್ರಗಳಾದ ಪಾಕೀಜಾ ಮತ್ತು ಮೊಘಲ್-ಎ-ಅಜಮ್ ಚಿತ್ರಗಳನ್ನು ಪ್ರದರ್ಶಿಸಲು ಬಳಸಲಾಗಿದ್ದ ಈ ಚಿತ್ರಮಂದಿರವನ್ನು ಈಗ ಶಾಶ್ವತವಾಗಿ ಮುಚ್ಚಲಾಗಿದೆ. ನಿಜಾಮ್ 1986ರಲ್ಲಿ ನಸೀಮ್ ಆರಾ ಅವರನ್ನು ವಿವಾಹವಾದರು. ಈ ಪರಿಣಿತ ಕ್ಯಾಲಿಗ್ರಾಫರ್ ತನ್ನ ಹೆಂಡತಿಗೆಂದು ಒಂದೂ ಪತ್ರ ಬರೆದಿಲ್ಲ. ಅವರಿಗೆ ಅದು ಅಗತ್ಯವಿರಲಿಲ್ಲ. "ಅವಳ ಹೆತ್ತವರ ಮನೆ ಪಕ್ಕದಲ್ಲೇ ಇರುವುದರಿಂದಾಗಿ ತವರಿಗೆ ಹೋದರೂ ಬೇಗನೆ ಬರುತ್ತಿದ್ದಳು." ಅವರಿಗೆ ಒಬ್ಬ ಮಗ, ಒಬ್ಬ ಮಗಳು ಮತ್ತು ಆರು ಮೊಮ್ಮಕ್ಕಳು ಇದ್ದಾರೆ. ಅವರು ಹಳೆ ದೆಹಲಿಯ ಜಮಾ ಮಸೀದಿ ಬಳಿ ವಾಸಿಸುತ್ತಿದ್ದಾರೆ.
"ಆಗ, ನಾನು ಮುಷೈರಾಗಳಿಗೆ [ಉರ್ದು ಕಾವ್ಯ ವಾಚನದ ಕೂಟಗಳು], ಸಮಾವೇಶಗಳು, ವಾಣಿಜ್ಯ ಜಾಹೀರಾತುಗಳು, ಸೆಮಿನಾರುಗಳು, ಧಾರ್ಮಿಕ ಮತ್ತು ರಾಜಕೀಯ ಸಭೆಗಳಿಗೆ ಹೋರ್ಡಿಂಗ್‌ಗಳನ್ನು ಚಿತ್ರಿಸುತ್ತಿದ್ದೆ." ಅವರು ತಮ್ಮ ಅಂಗಡಿಯಲ್ಲಿ ಮೆಹ್ರಾಬ್ ಕಲೆಯ ಬೇಡಿಕೆಯನ್ನು ಸಹ ಪೂರೈಸುತ್ತಿದ್ದರು. ಅಂಗಡಿಯಲ್ಲಿ ಸಾಕಷ್ಟು ಪ್ರತಿಭಟನಾ ಸಾಮಗ್ರಿಗಳು, ಬ್ಯಾನರ್‌ಗಳು, ಹೋರ್ಡಿಂಗ್‌ಗಳು ಮತ್ತು ಫಲಕಗಳು ಇದ್ದವು.
ಅಂದಿನ ಭಾರತದ ಪ್ರಧಾನ ಮಂತ್ರಿ ರಾಜೀವ್ ಗಾಂಧಿ 80ರ ದಶಕದ ಮಧ್ಯದಲ್ಲಿ ಬಾಬರಿ ಮಸೀದಿಯ ಬೀಗಗಳನ್ನು ತೆರೆಯಲು ಅನುಮತಿ ನೀಡಿದ್ದರು ಎಂದು ಅವರು ಹೇಳುತ್ತಾರೆ. ನಿಜಾಮ್ ವಿವರಿಸುತ್ತಾರೆ, “ಇದನ್ನು ವಿರೋಧಿಸಿ, ಮುಸ್ಲಿಂ ಸಮುದಾಯ ಮತ್ತು ಇತರ ಅನೇಕ ಜನರು ದೊಡ್ಡ ಪ್ರಮಾಣದಲ್ಲಿ ಪ್ರದರ್ಶನ ನೀಡುತ್ತಿದ್ದರು. ನಾನು ಪ್ರತಿಭಟನೆಗೆ ಕರೆ ನೀಡುವ ಬಟ್ಟೆಯ ಮತ್ತು ಪೋಸ್ಟರ್‌ಗಳ ಚಳುವಳಿ ಬ್ಯಾನರ್‌ಗಳನ್ನು ತಯಾರಿಸುತ್ತಿದ್ದೆ. 1992ರಲ್ಲಿ ಬಾಬರಿಯನ್ನು ಉರುಳಿಸಿದ ನಂತರ, ಚಳುವಳಿ ನಿಧಾನವಾಗಿ ಸತ್ತುಹೋಯಿತು. ಜನರಲ್ಲಿ [ಮಸೀದಿ ಉರುಳಿಸಿದ್ದರ ವಿರುದ್ಧ] ಕೋಪವಿತ್ತು, ಆದರೆ ಈಗ ಅದು ವಿರಳವಾಗಿ ಹೊರಬರುತ್ತದೆ." ಸಮಾಜದಲ್ಲಿ, ಈ ರೀತಿಯ ಕೆಲಸದ ಅಗತ್ಯವಿರುವ ರಾಜಕೀಯ ಚಟುವಟಿಕೆಗಳು ಕಡಿಮೆಯಾಗಿವೆ ಎಂದು ಅವರು ಅಭಿಪ್ರಾಯಪಡುತ್ತಾರೆ. "ನಾನು ಎಂಟು ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದೆ. ಅವರೆಲ್ಲರೂ ಈ ಕೆಲಸವನ್ನು ಕ್ರಮೇಣ ಬಿಡಬೇಕಾಯಿತು. ಅವರಿಗೆ ನೀಡಲು ನನ್ನ ಬಳಿ ಹಣವಿರಲಿಲ್ಲ. ಅವರು ಈಗ ಎಲ್ಲಿದ್ದಾರೆನ್ನುವುದು ನನಗೆ ಗೊತ್ತಿಲ್ಲ. ಇದು ನನಗೆ ನೋವುಂಟು ಮಾಡುವ ಸಂಗತಿಯಾಗಿದೆ.
"2009-10ರ ಅವಧಿಯಲ್ಲಿ, ಗಂಟಲಿನ ಸೋಂಕಿನಿಂದಾಗಿ, ನಾನು ನನ್ನ ಧ್ವನಿಯನ್ನು ಕಳೆದುಕೊಂಡೆ ಮತ್ತು ಸುಮಾರು 18 ತಿಂಗಳ ನಂತರ ಅದರಲ್ಲಿ ಅರ್ಧದಷ್ಟು ಮಾತ್ರ ಮರಳಿತು. ನಿಮಗೆ ನಾನು ಹೇಳಿದ್ದು ಅರ್ಥವಾದರೆ ಸಾಕು,” ಎಂದು ಅವರು ನಗುತ್ತಾರೆ. ಅದೇ ವರ್ಷ ನಿಜಾಮರು ಅಂಗಡಿಯನ್ನು ಮುಚ್ಚಿದರು. "ಆದರೆ ನಾನು ಎಂದಿಗೂ ಮೆಹ್ರಾಬ್ ಮೇಲೆ ಹೆಸರುಗಳನ್ನು ಬರೆಯುವುದನ್ನು ನಿಲ್ಲಿಸಲಿಲ್ಲ."
"ಕೊರೋನಾ ಭಾರತಕ್ಕೆ ಬಂದ ತಕ್ಷಣ, ಈ ಸ್ಮಶಾನದ ಕಾರ್ಮಿಕರಿಗೆ ನನ್ನ ಸೇವೆಗಳು ಬೇಕಾದವು ಮತ್ತು ನನಗೆ ಅವರಿಗೆ ಇಲ್ಲವೆನ್ನಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ಜೂನ್‌ನಲ್ಲಿ ನಾನು ಇಲ್ಲಿಗೆ ಬಂದಿದ್ದೇನೆ. ನನ್ನ ಕುಟುಂಬವನ್ನು ನಡೆಸುವ ಸಲುವಾಗಿ ನಾನು ಇಲ್ಲಿಗೆ ಬಂದಿದ್ದೇನೆ. " ನಿಜಾಮ್ ಅವರ ಮಗ ಜಾಮಾ ಮಸೀದಿ ಬಳಿ ಸಣ್ಣ ಶೂ ಅಂಗಡಿಯೊಂದನ್ನು ನಡೆಸುತ್ತಿದ್ದಾನೆ. ಆದರೆ ಸಾಂಕ್ರಾಮಿಕ ಪಿಡುಗು ಮತ್ತು ಲಾಕ್‌ಡೌನ್‌ನಿಂದಾಗಿ, ಅವರ ಗಳಿಕೆಯು ಸಾಕಷ್ಟು ಕಡಿಮೆಯಾಗಿದೆ.
2004ರಲ್ಲಿ ಮುಚ್ಚಿದ ಜಗತ್ ಸಿನೆಮಾದಂತೆ, ನಿಜಾಮರ ಆ ಯುಗದ ಬದುಕಿನ ಕುರುಹುಗಳೆಲ್ಲವೂ ಈಗ ನೆನಪಿನಲ್ಲಿ ಮಾತ್ರವೇ ಬದುಕಿವೆ. ಅವರು ಸಾಹಿರ್ ಲುಧಿಯಾನ್ವಿ ಅವರ ಕಾವ್ಯವನ್ನು ಪ್ರೀತಿಸುತ್ತಾರೆ ಮತ್ತು ಅವರು ಬರೆದ ಹಾಡುಗಳನ್ನು ಕೇಳುತ್ತಾರೆ. ನಿಜಾಮ್ ತನ್ನ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವರ್ಷವೇ ಮಹಾನ್ ಕವಿ ನಿಧನರಾದರು. ಸಾಹಿರ್ ಬರೆದ ಅವರ ನೆಚ್ಚಿನ ಸಾಲು ಹೀಗಿದೆ: ಚಲೋ ಏಕ್ ಬಾರ್ ಫಿರ್ ಸೇ ಅಜನಬೀ ಬನ್ ಜಾಯೇ ಹಮ್ ದೋನೊ. (ಬಾ ನಾವಿಬ್ಬರು ಮತ್ತೆ ಅಪರಿಚಿತರಾಗೋಣ) ಬೇರೆ ರೀತಿಯಲ್ಲಿ ಹೇಳುವುದಾದರೆ, ಜೀವನ ಮತ್ತು ಸಾವು ಯಾವತ್ತೂ ಕೇವಲ ಮಾತುಗಳಲ್ಲ.
ನಿಜಾಮ್ ಹೇಳುತ್ತಾರೆ, “ಈ ಹಿಂದೆ ಉರ್ದು ಭಾಷೆಯಲ್ಲಿ ಬರೆಯಬಲ್ಲ ಕಲಾವಿದರು ಇದ್ದರು. ಈಗಿನ ಕಲಾವಿದರು ಹಿಂದಿ ಮತ್ತು ಇಂಗ್ಲಿಷಿನಲ್ಲಿ ಕಲ್ಲುಗಳ ಮೇಲೆ ಬರೆಯಬಲ್ಲರು. ಪ್ರಸ್ತುತ ದೆಹಲಿಯಲ್ಲಿ ಮೆಹ್ರಾಬ್‌ನ ಮೇಲೆ ಉರ್ದುವಿನಲ್ಲಿ ಬರೆಯಬಲ್ಲ ಒಬ್ಬರೂ ಸಿಗುವುದಿಲ್ಲ. ಉರ್ದು ಮುಸ್ಲಿಮರ ಭಾಷೆ ಮಾತ್ರವೆನ್ನುವ ಅಪಪ್ರಚಾರವನ್ನು ಹರಡುವ ಮೂಲಕ ರಾಜಕೀಯವು ಈ ಭಾಷೆಗೆ ದೊಡ್ಡ ಹಾನಿಯನ್ನು ಮಾಡಿ ಹಾಳು ಮಾಡಿದೆ. ಹಿಂದಿನ ಉರ್ದು ಕ್ಯಾಲಿಗ್ರಫಿಗೆ ಹೋಲಿಸಿದರೆ, ಈಗ ಉದ್ಯೋಗವು ತುಂಬಾ ಕಡಿಮೆಯಾಗಿದೆ.
ನಿಜಾಮ್ ಮೆಹ್ರಾಬ್ ಮೇಲೆ ಬರೆಯುವ ಕೆಲಸವನ್ನುಮುಗಿಸಿದ ನಂತರ, ಸ್ವಲ್ಪ ಸಮಯ ಅದನ್ನು ಒಣಗಲು ಬಿಡುತ್ತಾರೆ. ಅದಾದ ನಂತರ ಆಸಿಮ್, ಸುಲೇಮಾನ್ ಮತ್ತು ನಂದಕಿಶೋರ್ ಇದನ್ನು ಕೆತ್ತಲು ಪ್ರಾರಂಭಿಸುತ್ತಾರೆ. ತನ್ನ ಐವತ್ತರ ಹರೆಯದಲ್ಲಿರುವ ನಂದಕಿಶೋರ್ ಈ ಸ್ಮಶಾನದಲ್ಲಿ 30ಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರು ಕಲ್ಲುಗಳನ್ನುಉಳಿ ಸುತ್ತಿಗೆಗಳಿಂದ ಕೆತ್ತಿ ಅವುಗಳಿಗೆ ಗುಮ್ಮಟದ ಆಕಾರ ನೀಡುವುದರಲ್ಲಿ ಪರಿಣತಿ ಹೊಂದಿದ್ದಾರೆ. ಈ ಕೆಲಸಕ್ಕಾಗಿ ಅವರು ಯಂತ್ರವನ್ನು ಬಳಸುವುದಿಲ್ಲ. ಅವರು ಹೇಳುತ್ತಾರೆ: "ಈ ಸ್ಮಶಾನ ಹಿಂದೆಂದೂ ಇಂತಹ ಭೀಕರ ಪರಿಸ್ಥಿತಿಯನ್ನು ಕಂಡಿರಲಿಲ್ಲ."
ಕೊರೋನಾದಿಂದ ಮರಣ ಹೊಂದಿದವರ ಸಮಾಧಿಗೆ ನಂದಕಿಶೋರ್ ಕಲ್ಲುಗಳನ್ನು ಕೊರೆಯುವುದಿಲ್ಲ. ಹಾಗೆ ಮಾಡುವುದರಿಂದ ತಾನು ವೈರಸ್‌ನಿಂದ ರಕ್ಷಿಸಲ್ಪಡುತ್ತೇನೆ ಎಂಬ ಭರವಸೆಯೊಂದಿಗೆ ಅವರು ಅವರು ಸ್ಮಶಾನದ ಇನ್ನೊಂದು ಮೂಲೆಯಲ್ಲಿ ಕುಳಿತು ಕೆಲಸ ಮಾಡುತ್ತಾರೆ. "ನನಗೆ ಒಂದು ಕಲ್ಲನ್ನು ಕತ್ತರಿಸಿ, ಕೊರೆದು ತೊಳೆದು ಮುಗಿಸಿದರೆ 500ರೂಪಾಯಿಗಳನ್ನು ನೀಡುತ್ತಾರೆ. ದಿನಕ್ಕೆ ಒಂದು ಕಲ್ಲನ್ನು ಪೂರ್ಣಗೊಳಿಸುತ್ತೇನೆ. ಯಹ ಅಂಗ್ರೇಜಿಯೋಂ ಕೇ ಜಮಾನೆ ಕಾ ಸ್ಮಶಾನ್ ಹೈ." ಎಂದು ಅವರು ಹೇಳಿದರು. ಬ್ರಿಟಿಷರು ನಮಗೆ ಬಿಟ್ಟು ಹೋಗಿದ್ದು ಸ್ಮಶಾನವೊಂದನ್ನೇ ಅಲ್ಲವೇ? ಎಂದು ಕೇಳಿದರೆ ನಂದಕಿಶೋರ್ ನಗುತ್ತಾರೆ.
"ಒಬ್ಬ ನಂದಕಿಶೋರ್ ಮುಸ್ಲಿಮರ ಸ್ಮಶಾನದಲ್ಲಿ ಕೆಲಸ ಮಾಡುವುದು ಕೆಲವೊಮ್ಮೆ ಕೆಲವರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ ಏನು ಹೇಳುವುದೆಂದು ತಿಳಿಯದೆ ನಾನು ನಕ್ಕು ಸುಮ್ಮನಾಗಿಬಿಡುತ್ತೇನೆ. ಆದರೂ ಕೆಲವೊಮ್ಮೆ 'ನಾನು ನಿಮಗಾಗಿ ಕುರಾನ್ ಪದ್ಯಗಳನ್ನು ಕೆತ್ತಿದ್ದೇನೆ, ಮುಸ್ಲಿಮರಾಗಿದ್ದರೂ ನಿಮ್ಮ ಜೀವನದಲ್ಲಿ ನೀವು ಎಂದಿಗೂ ಈ ಕೆಲಸ ಮಾಡಿಲ್ಲ.' ಎಂದಾಗ ಅವರು ನನಗೆ ಧನ್ಯವಾದ ಹೇಳುತ್ತಾರೆ. ನನ್ನನ್ನು ನಂಬುತ್ತಾರೆ." ಎಂದು ಉತ್ತರ ದೆಹಲಿಯ ಸದರ್ ಬಜಾರಿನಲ್ಲಿ ವಾಸಿಸುವ ಮೂರು ಮಕ್ಕಳ ತಂದೆಯಾದ ನಂದಕಿಶೋರ್ ಹೇಳುತ್ತಾರೆ.
“ತಮ್ಮ ಸಮಾಧಿಯೊಳಗೆ ಮಲಗಿರುವ ಈ ಜನರು ನನ್ನವರೇ. ಒಮ್ಮೆ ನಾನು ಹೊರಗೆ ಕಾಲಿಟ್ಟರೆ, ಜಗತ್ತು ನನಗೆ ಸೇರಿದ್ದು ಎನ್ನಿಸುವುದಿಲ್ಲ. ಇಲ್ಲಿ ನನಗೆ ಸಮಾಧಾನ ಸಿಗುತ್ತದೆ,” ಎಂದು ಅವರು ಹೇಳುತ್ತಾರೆ.
ಎರಡು ತಿಂಗಳ ಹಿಂದೆ ಒಬ್ಬ ಹೊಸ ಸಹೋದ್ಯೋಗಿಯನ್ನು ಇಲ್ಲಿ ನೇಮಿಸಿಕೊಳ್ಳಲಾಗಿದೆ. ಅವರ ಹೆಸರು ಪವನ್ ಕುಮಾರ್ ಮತ್ತು ಅವರು ಬಿಹಾರದ ಬೆಗುಸರಾಯ್ ಜಿಲ್ಲೆಯಿಂದ ಬಂದವರು. ಅವರ ಪತ್ನಿ ಮತ್ತು ಮೂವರು ಮಕ್ಕಳು ಮತ್ತೆ ಬಿಹಾರಕ್ಕೆ ಹೋಗಿದ್ದಾರೆ. 31 ವರ್ಷದ ಪವನ್ ಕೂಡ ಇಲ್ಲಿ ಕಲ್ಲುಗಳನ್ನು ಕತ್ತರಿಸುತ್ತಾರೆ. ಸಣ್ಣ ಕಲ್ಲು ಕತ್ತರಿಸುವ ಯಂತ್ರದ ಸಹಾಯದಿಂದ 20 ಚಪ್ಪಡಿಗಳನ್ನು ಕತ್ತರಿಸಿದ ನಂತರ, "ನನ್ನ ಮುಖ ಕೆಂಪಾಗಿದೆ" ಎಂದು ಹೇಳಿದರು. ಕಲ್ಲು ಕತ್ತರಿಸುವಾಗ, ಹಾರುವ ಧೂಳು ಅವರ ದೇಹದಾದ್ಯಂತ ವ್ಯಾಪಿಸಿತ್ತು. ಅವರು ಹೇಳುತ್ತಾರೆ, “ಕರೋನಾ ಇರಲಿ, ಇಲ್ಲದಿರಲಿ, ನನ್ನ ಕುಟುಂಬವನ್ನು ಪೋಷಿಸಲು ನಾನು ವರ್ಷದುದ್ದಕ್ಕೂ ಕೆಲಸ ಮಾಡಲೇಬೇಕು. ಇಲ್ಲಿ, ನಾನು ಕೆಲವೊಮ್ಮೆ ದಿನಕ್ಕೆ 700 ರೂ. ಸಂಪಾದಿಸುತ್ತೇನೆ." ಈ ಮೊದಲು ಅವರಿಗೆ ಶಾಶ್ವತ ಉದ್ಯೋಗವಿರಲಿಲ್ಲ, ಮತ್ತು ನಂದಕಿಶೋರ್ ಮತ್ತು ಶಮೀಮ್ ಅವರಂತೆ ಅವರಿಗೆ ಬದುಕಿನಲ್ಲಿ ಶಾಲೆಗೆ ಅವಕಾಶ ಸಿಕ್ಕಿಲ್ಲ.
ಉತ್ತರ ಪ್ರದೇಶದ ಅಲಿಗಢ್ ನಿವಾಸಿ ಆಸ್ ಮೊಹಮ್ಮದ್ (27) ಕೂಡ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಆಲ್‌ರೌಂಡರ್ ಮತ್ತು ಸ್ಮಶಾನದ ಪ್ರತಿಯೊಂದು ಕೆಲಸಕ್ಕೂ ಸಹಾಯ ಮಾಡುತ್ತಾರೆ. ಅವರು ಸುಮಾರು ಆರು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ವಾಸಿಸುತ್ತಿರುವ ದೂರದ ಸಂಬಂಧಿಯೊಬ್ಬರ ಮಗಳ ಜೊತೆ ಆಸ್ ಅವರ ಕುಟುಂಬವು ಅವರ ಮದುವೆಯನ್ನು ನಿಗದಿಪಡಿಸಿತ್ತು.
"ನಾನು ಅವಳನ್ನು ಪ್ರೀತಿಸುತ್ತಿದ್ದೆ. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಅವಳು ಕೊರೋನಾದಿಂದ ಮೃತಪಟ್ಟಳು" ಎಂದು ಆಸ್ ಹೇಳುತ್ತಾರೆ. ಇದರ ನಂತರ ಅವರ ಕುಟುಂಬವು ಈ ವರ್ಷದ ಮಾರ್ಚಿಯಲ್ಲಿ ಮತ್ತೊಂದು ಸಂಬಂಧವನ್ನು ನೋಡಿತು. ಸ್ಮಶಾನದಲ್ಲಿ ಕೆಲಸ ಮಾಡುವ ಹುಡುಗನನ್ನು ಮದುವೆಯಾಗಲು ಇಷ್ಟಪಡದ ಕಾರಣ ಹುಡುಗಿ ಸಂಬಂಧವನ್ನು ನಿರಾಕರಿಸಿದಳು.
ಆಸ್ ಹೇಳುತ್ತಾರೆ, “ಇದರಿಂದ ನೊಂದ ನಾನು ಹೆಚ್ಚು ಕೆಲಸ ಮಾಡಲು ಪ್ರಾರಂಭಿಸಿದೆ. ಹೆಚ್ಚು ಸಮಾಧಿಗಳನ್ನು ಅಗೆಯಲು ಪ್ರಾರಂಭಿಸಿದೆ, ಹೆಚ್ಚು ಕಲ್ಲುಗಳನ್ನು ಕತ್ತರಿಸಲು ಪ್ರಾರಂಭಿಸಿದೆ. ನನಗೆ ಮುಂದೆ ಮದುವೆಯಾಗುವ ಬಯಕೆಯಿಲ್ಲ." ಕಲ್ಲನ್ನು ಕತ್ತರಿಸುತ್ತಲೇ ಮಾತನಾಡುತ್ತಿದ್ದರು. ಅವರ ದೇಹವೂ ಧೂಳಿನಿಂದ ತುಂಬಿ ಹೋಗಿತ್ತು. ಅವರಿಗೆ ತಿಂಗಳಿಗೆ 8,000 ರೂ. ವೇತನವಿದೆ.
ಹತ್ತಿರದಲ್ಲಿ, ಹಳದಿ ಚಿಟ್ಟೆಯೊಂದು ಸಮಾಧಿಗಳ ಸುತ್ತಲೂ ಸುಳಿದಾಡುತ್ತಿತ್ತು, ಅದು ಸಮಾಧಿಯ ಮೇಲಿರಿಸಲಾಗಿರುವ ಹೂವುಗಳನ್ನು ಚುಂಬಿಸಬೇಕೋ ಅಥವಾ ಸಮಾಧಿಯ ಮೇಲಿನ ಕಲ್ಲುಗಳನ್ನೋ ಎಂದು ನಿರ್ಧರಿಸಲು ಸಾಧ್ಯವಾಗದೆ ಗೊಂದಲದಲ್ಲಿದ್ದಂತಿತ್ತು.
ಸಮಾಧಿ ಬರಹದ ಕಲಾವಿದರಾದ ನಿಜಾಮ್ ಹೇಳುತ್ತಾರೆ: "ಸಾಯುವರು ಸಾಯುತ್ತಾರೆ. ಅಲ್ಲಾಹನ ಸಹಾಯದೊಂದಿಗೆ ನಾನು ಕೊನೆಯ ಬಾರಿಗೆ ಅವರ ಹೆಸರನ್ನು ಬರೆಯುವವನಾಗಿದ್ದೇನೆ. ʼಇಲ್ಲಿ ಯಾರೋ ಒಬ್ಬರು ಇದ್ದರು, ಇವರು ಒಬ್ಬರ ಪಾಲಿನ ಪ್ರೀತಿಪಾತ್ರರಾಗಿದ್ದರು ಇತ್ಯಾದಿಯಾಗಿ.ʼ" ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಅದ್ದಿದ ಅವರ ಕೈಯಲ್ಲಿದ್ದ ಕುಂಚವು ಅವರು ಹೇಳಿದಂತೆ ಮೆಹ್ರಾಬ್ ಮೇಲೆ ನರ್ತಿಸುತ್ತಿತ್ತು. ಅವರು ಬರೆಯುತ್ತಿದ್ದ ಅರೇಬಿಕ್ ಭಾಷೆಯ ಸಾಲಿನ ಅಕ್ಷರವೊಂದರ ಮೇಲೆ ಕೊನೆಯ ನುಕ್ತಾವನ್ನು ಬರೆಯುತ್ತಿದ್ದರು. ಅವರು ಬರೆಯುತ್ತಿದ್ದ ಸಾಲು ಹೀಗಿತ್ತು: ʼಪ್ರತಿಯೊಂದು ಆತ್ಮವೂ ಸಾವಿನ ರುಚಿಯನ್ನು ನೋಡುತ್ತದೆ.ʼ
ಅನುವಾದ: ಶಂಕರ ಎನ್. ಕೆಂಚನೂರು