ಸಥಿ ಮಣಿಯವರು, ರಾತ್ರಿಯ ಸಿದ್ಧತೆಗಳಲ್ಲಿ ತೊಡಗಿದ್ದು, ಮನೆಯ ಸುತ್ತಲೂ ಕಣ್ಣಾಡಿಸಿ, ಕ್ಷಿಪ್ರ ಪರಶೀಲನೆ ನಡೆಸಿದ್ದಾರೆ: ಅವರ ಮುಖ್ಯ ದಾಖಲೆ ಪತ್ರಗಳು ಮತ್ತು ಅತ್ಯುತ್ತಮ ಬಟ್ಟೆಗಳನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ, ಗೋಡೆಗಳ ಮೇಲೆ ನೇತುಹಾಕಲಾಗಿದೆ; ನೆಲದಿಂದ ಎರಡು ಅಡಿ ಎತ್ತರದಲ್ಲಿನ ಸಿಮೆಂಟ್‌ ಚಪ್ಪಡಿಯ ಮೇಲೆ, ಅಡಿಗೆಯ ಪಾತ್ರೆಗಳಿವೆ.

“ಅನೇಕ ಬಾರಿ ರಾತ್ರಿ ೨ ಗಂಟೆಗೆ ನನ್ನ ಮನೆಯೊಳಗೆ ನೀರು ನುಗ್ಗಿದಾಗ ಎಚ್ಚರಗೊಂಡಿದ್ದೇನೆ. ನಾನು ಬಿಸಾಡಿದ ದಿಂಬು ಹಾಗೂ ಹೊದಿಕೆಗಳಿಗೆ ಲೆಕ್ಕವೇ ಇಲ್ಲ. ಒಗೆದ ನಂತರವೂ ಅವುಗಳಲ್ಲಿನ ಕಪ್ಪು ಕಲೆ ಹಾಗೂ ಹೊಲಸು ವಾಸನೆ ಹೋಗುತ್ತಿರಲಿಲ್ಲ” ಎಂದರು ಸಥಿ. ಕೇರಳದ ಕೊಚ್ಚಿನ್‌ನಲ್ಲಿನ ಥೆವರ-ಪೆರಂದೂರ್‌ (ಟಿಪಿ) ಕಾಲುವೆಯ ಒಂದು ಭಾಗದಲ್ಲಿರುವ ಗಾಂಧಿ ನಗರದ ಪಿ ಅಂಡ್‌ ಟಿ ಕಾಲೋನಿಯ ನಿವಾಸಿಯಾದ ಇವರ ವಯಸ್ಸು ೬೫ ವರ್ಷ.

ಟಿಪಿ ಕಾಲುವೆಯು, ಉತ್ತರದ ಪೆರಂದೂರ್‌ ಪುಜದಿಂದ, ದಕ್ಷಿಣ ಕೊಚ್ಚಿನ್‌ನ ಥೆವರಕ್ಕೆ ಹರಿಯುತ್ತದೆ.  ಜಿಲ್ಲೆಯ ಹಿನ್ನೀರಿನಲ್ಲಿ ಹರಿಯುವ ಮುನ್ನ ಅದು ಸುಮಾರು 9.84 ಕಿ. ಮೀ.ಗಳಷ್ಟು ದೂರವನ್ನು ಕ್ರಮಿಸುತ್ತದೆ. ಕೊಚ್ಚಿನ್‌ ಮೂಲಕ ಹರಿಯುವ 11 ಪ್ರಮುಖ ಜಲಮಾರ್ಗಗಳಲ್ಲಿ ಈ ಕಾಲುವೆಯೂ ಒಂದೆನಿಸಿದ್ದು, ಎರ್ನಾಕುಲಂ ಹಾಗೂ ಅದರ ಸುತ್ತಮುತ್ತಲಿನ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು, ಸರ್ಕಾರವು ಇವುಗಳಲ್ಲಿನ ಕೆಲವನ್ನು ಜಲಮಾರ್ಗಗಳಾಗಿ ಉನ್ನತೀಕರಿಸುವ ಏರ್ಪಾಟಿನಲ್ಲಿದೆ.

ಕಳೆದ ಮೂರು ದಶಕಗಳಿಂದ, ಕೊಚ್ಚಿನ್‌ ಜನಸಂಖ್ಯೆ, 2.1 ಮಿಲಿಯನ್‌ನಷ್ಟು ದ್ವಿಗುಣಗೊಂಡಿದೆ. ಒಂದು ಮೀಟರ್‌ಗಿಂತಲೂ ಕಡಿಮೆ ಆಳವಿರುವ ಟಿಪಿ ಕಾಲುವೆಯು ತೆರೆದ ಗಟಾರದಂತೆ ಹದಗೆಟ್ಟಿದ್ದು; ಮೆಟ್ರೊ ನಿರ್ಮಾಣದ ಕಾಮಗಾರಿ ಹಾಗೂ ಒಳಹರಿವಿನ ಕೊರತೆಯಿಂದಾಗಿ ಎರಡು ಜಾಗಗಳಲ್ಲಿ ಅದಕ್ಕೆ ಅಡಚಣೆಯುಂಟಾಗಿದೆ. ಆಸ್ಪತ್ರೆಗಳು, ಸ್ಥಳೀಯ ಮಾರುಕಟ್ಟೆಗಳು, ಕೈಗಾರಿಕೆಗಳು ಹಾಗೂ ಮನೆಗಳ ತ್ಯಾಜ್ಯವು ಇದಕ್ಕೆ ನೇರವಾಗಿ ಬಂದು ಸೇರುತ್ತದೆ. ನಿರ್ಗಮನದ ಸುಮಾರು 632 ಪೈಪುಗಳು ಮತ್ತು ಬೀದಿಯ ೨೧೬ ಚರಂಡಿ ಮಾರ್ಗಗಳೆಲ್ಲವೂ ಸಂಸ್ಕರಿಸದ ಮಲಿನ ಪದಾರ್ಥಗಳು, ಕೈಗಾರಿಕೆಯ ಹೊರಹರಿವುಗಳು ಮತ್ತು ಮಳೆ ನೀರನ್ನು ಕಾಲುವೆಗೆ ಹರಿಸುತ್ತವೆ. ದಡದಲ್ಲಿ ಸಾಲುಗಟ್ಟಿರುವ ಒಣ ಕಸದಿಂದಾಗಿ, ಕಾಲುವೆಯ ವಿಸ್ತಾರವು, ಕೆಲವೆಡೆಗಳಲ್ಲಿ ಕೇವಲ ೮ ಮೀಟರ್‌ಗೆ ಕುಗ್ಗಿದೆ.

ಪಿ ಅಂಡ್‌ ಟಿ ಕಾಲೋನಿಯ ಇತರೆಲ್ಲರಂತೆ, ಸಥಿ ಅವರ ಮನೆಯು. ಎರ್ನಾಕುಲಂ ರೈಲು ನಿಲ್ದಾಣದ ಹಿಂದೆ, ಕಾಲುವೆಯ ದಡದಲ್ಲಿದೆ. ಕಾಲೋನಿಯು ಸುಮಾರು 250 ಮೀಟರ್‌ ವ್ಯಾಪ್ತಿಯ ಪೊರಂಬೊಕ್‌ ಜಾಗವನ್ನು ಆವರಿಸಿದೆ (ಸರ್ಕಾರಕ್ಕೆ ಸೇರಿದ ಅಥವಾ ಸಾರ್ವಜನಿಕ ಉದ್ದೇಶಗಳಿಗಾಗಿ ಮೀಸಲಾದ ಖಾಲಿ ಜಾಗ). ಬಾಡಿಗೆಯ ಮನೆಗಿಂತಲೂ ಕಡಿಮೆ ವೆಚ್ಚದಲ್ಲಿ ಪೊರಂಬೊಕ್‌ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಮನೆಯನ್ನು ನಿರ್ಮಿಸಬಹುದೆಂದು ಇಲ್ಲಿನ ನಿವಾಸಿಗಳು ತಿಳಿಸುತ್ತಾರೆ. ಎರಡು ದಶಕಗಳ ಹಿಂದೆ ಸ್ಥಳೀಯ ಜನರ ಸಹಾಯಪಡೆಯು ದಾನವಾಗಿ ನೀಡಿದ ಕಾಂಕ್ರೀಟಿನ ದೊಡ್ಡ-ತುಂಡುಗಳನ್ನು ಮತ್ತು ತಗಡಿನ ಛಾವಣಿಯನ್ನು ಬಳಸಿ ಅವರು, ತಮ್ಮ ಹುಲ್ಲುಮಾಡು ಅಥವಾ ಟಾರ್ಪಾಲಿನ್‌ ಮನೆಗಳನ್ನು ಅರೆ-ಕಚ್ಚಾ ಮನೆಗಳಾಗಿ ಬದಲಿಸಿದರು.

'I have woken up many times to find water flooding my home', says Sathi; she and her husband Mani live next to this canal where all the waste of the area is dumped
PHOTO • Adarsh B. Pradeep
'I have woken up many times to find water flooding my home', says Sathi; she and her husband Mani live next to this canal where all the waste of the area is dumped
PHOTO • Adarsh B. Pradeep

'ನನ್ನ ಮನೆಯೊಳಗೆ ನೀರು ನುಗ್ಗಿದಾಗಲೆಲ್ಲಾ, ಅನೇಕ ಬಾರಿ ಎಚ್ಚರಗೊಂಡಿದ್ದೇನೆ ʼ ಎನ್ನುತ್ತಾರೆ ಸಥಿ; ಈ ಪ್ರದೇಶದ ತ್ಯಾಜ್ಯವೆಲ್ಲವನ್ನೂ ಸುರಿಯಲಾದ ಕಾಲೋನಿಯ ಪಕ್ಕದಲ್ಲಿ ಮಣಿ ಹಾಗೂ ಆಕೆಯ ಪತಿಯು ವಾಸವಾಗಿದ್ದಾರೆ

“ನಾನಿಲ್ಲಿಗೆ ಮೊದಲ ಬಾರಿಗೆ ಬಂದಾಗ, ನೀರು ಬಹಳ ಸ್ವಚ್ಛವಾಗಿದ್ದು, ಆಗಾಗ ಮೀನುಗಳು ಹೆಚ್ಚಾಗಿ ದೊರೆಯುತ್ತಿದ್ದವು. ಕೆಲವೊಮ್ಮೆ ಜನರು ಮೀನನ್ನು ಮಾರುತ್ತಿದ್ದರು. ಇಂದು ಮೀನೇ ಇಲ್ಲದಂತಾಗಿದ್ದು, ಕೇವಲ ಚರಂಡಿಯ ಪೈಪುಗಳು ಅದರಲ್ಲಿ ಹರಿಯುತ್ತಿವೆ” ಎಂದ ಸಥಿ, ಆಕೆಯ ಮನೆಯ ಹಿಂದಿನ ಕಾಲುವೆಯಲ್ಲಿನ ಬೂದು ಬಣ್ಣದ ಕೊಳಕು ನೀರೆಡೆಗೆ ಬೊಟ್ಟುಮಾಡಿದರು. ಎಲ್ಲ ಮನೆಗಳ ಅಡಿಗೆ ಕೋಣೆ ಹಾಗೂ ಶೌಚಾಲಯದ ತ್ಯಾಜ್ಯವು ಕಾಲುವೆಗೆ ನೇರವಾಗಿ ಹರಿಯುತ್ತದೆ. “ಪ್ರತಿ ಬಾರಿ ನಾನು ಹೊಲಸು ನೀರಿಗಿಳಿದಾಗಲೂ ಕಾಲುಗಳಲ್ಲಿ ದದ್ದುಗಳುಂಟಾಗುತ್ತವೆ” ಎಂದರವರು.

ಸಥಿ, ಮನೆಕೆಲಸದ ಉದ್ಯೋಗದಲ್ಲಿದ್ದರು. “ಎರಡು ಮನೆಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದು, ಮಾಹೆಯಾನ 4,500 ರೂ.ಗಳನ್ನು ಗಳಿಸುತ್ತಿದ್ದೆ. ಕಾಲುವೆಯು ಉಕ್ಕಿ ಹರಿದಾಗ, ನಾನು ಮನೆ ಬಿಟ್ಟು ಹೋಗಲಾಗುತ್ತಿರಲಿಲ್ಲವಾಗಿ, ಅಂದಿನ ಸಂಬಳ ದೊರೆಯುತ್ತಿರಲಿಲ್ಲ. ಹತ್ತಿರದ ಬಸ್‌ ನಿಲ್ದಾಣದಿಂದ ನೀರಿನ ಮೂಲಕ ಹರಿದು ಬಂದ (ನನ್ನ ಮನೆಯೊಳಗೆ) ಹರಿದ ಪ್ಲಾಸ್ಟಿಕ್‌, ಸಂಸ್ಕರಿಸದ ಮಲಿನ ಪದಾರ್ಥಗಳು ಮತ್ತು ಜಿಡ್ಡಿನ ಕೊಳಕನ್ನು ಸ್ವಚ್ಛಗೊಳಿಸುವುದರಲ್ಲಿ ಅಂದಿನ ದಿನವು ಕಳೆದುಹೋಗುತ್ತಿತ್ತು” ಎಂದರಾಕೆ.

96 ವರ್ಷ ವಯಸ್ಸಿನ ಈಕೆಯ ಪತಿ ಕೆ. ಎಸ್‌. ಮಣಿ, ದಿನಗೂಲಿ ಕಾರ್ಮಿಕರಾಗಿದ್ದರು. ಯಾತ್ರೆಯ ಕಾಲದಲ್ಲಿ ಅವರು 160 ಕಿ. ಮೀ. ದೂರದ ಪತ್ತನಂಥಿಟ್ಟ ಜಿಲ್ಲೆಯ ಶಬರಿಮಲೆ ದೇವಸ್ಥಾನದ ಹೊರಗೆ, ಟೀ ಮತ್ತು ತಿನಿಸಿನ ಚಿಕ್ಕ ತಾತ್ಕಾಲಿಕ ಅಂಗಡಿಯೊಂದನ್ನು ಬಾಡಿಗೆಗೆ ಪಡೆಯುತ್ತಿದ್ದರು. ಯಾತ್ರೆಯ ಕಾಲವಾದ ನವೆಂಬರ್‌ನಿಂದ ಫೆಬ್ರುವರಿಯ ಕೆಲವು ತಿಂಗಳಲ್ಲಿ, ಅವರ ದಿನಗೂಲಿ ಕೆಲಸದ ನಿಯತ ಸಂಪಾದನೆಯು 3,೦೦೦ ರೂ.ಗಳಿಂದ 2೦,೦೦೦ ರೂ.ಗಳವರೆಗೆ ತಲುಪುತ್ತಿತ್ತೆಂದು ಸಥಿ ತಿಳಿಸುತ್ತಾರೆ.

ಕೆಲವು ವರ್ಷಗಳಿಂದ ಮಣಿ ಹಾಸಿಗೆ ಹಿಡಿದಿದ್ದಾರೆ. ಅವರಿಗೆ ಸಕ್ಕರೆ ಖಾಯಿಲೆ; ಕೆಲವು ವರ್ಷಗಳ ಹಿಂದೆ, ಸೋಂಕಿನಿಂದಾಗಿ ಅವರ ಎಡಗಾಲಿನ ಕೆಳಭಾಗವನ್ನು ಕತ್ತರಿಸಬೇಕಾಯಿತು. ದಂಪತಿಯು ಇವರ ಆಸ್ತಮಾ ಹಾಗೂ ಸಕ್ಕರೆ ಖಾಯಿಲೆಯ ಚಿಕಿತ್ಸೆಗಾಗಿ ಮಾಹೆಯಾನ 2,೦೦೦ ರೂ.ಗಳನ್ನು ಖರ್ಚುಮಾಡುತ್ತಾರೆ. “ನಾವಿಬ್ಬರೂ 1,400 ರೂ.ಗಳ ರಾಜ್ಯದ ವೃದ್ಧಾಪ್ಯ ಪಿಂಚಣಿಗೆ ಅರ್ಹರಿದ್ದೇವೆ. ನಾಲ್ಕು ತಿಂಗಳಿನಿಂದಲೂ ಮಣಿ, ಪಿಂಚಣಿಯನ್ನು ಪಡೆಯಲು ಸಾಧ್ಯವಾಗಿಲ್ಲ. ಅವರ ಕೈಗಳ ಸ್ನಾಯುಗಳ ಹೊಂದಾಣಿಕೆಯು ದುರ್ಬಲಗೊಂಡಿದ್ದು, ತಮ್ಮ ಹೆಸರನ್ನು ಸೂಕ್ತವಾಗಿ ಸಹಿಮಾಡಲಾಗುತ್ತಿಲ್ಲ,” ಎನ್ನುತ್ತಾರೆ ಸಥಿ. ಆಕೆಯ ವರಮಾನದ ಏಕೈಕ ಆಧಾರವಾದ ಪಿಂಚಣಿಯು 2 ಕಿ. ಮೀ. ದೂರದ ಯೂನಿಯನ್‌ ಬ್ಯಾಂಕ್‌ ಶಾಖೆಯಲ್ಲಿನ ಆಕೆಯ ಖಾತೆಗೆ ಜಮೆಯಾಗುತ್ತಿದೆ.

ಮೂಲತಃ ಉತ್ತರ ಕೊಚ್ಚಿನ್‌ನ ಪರಮೂರ್‌ ಎಂಬ ಊರಿನವರಾದ ಸಥಿ, 46 ವರ್ಷದ ಹಿಂದೆ, ಮಣಿ ಅವರನ್ನು ವಿವಾಹವಾದಾಗ ಪಿ ಅಂಡ್‌ ಟಿ ಕಾಲೋನಿಯಗೆ ಬಂದು ವಾಸಿಸತೊಡಗಿದರು. ತಮ್ಮ ಆಯ್ಕೆಯನ್ನು ವಿವರಿಸಿದ ಸಥಿ, ಹೀಗೆಂದರು: “ಈ ಪ್ರದೇಶದಿಂದ ನಗರಕ್ಕೆ ಸುಲಭವಾಗಿ ತಲುಪಬಹುದಾಗಿದ್ದು, ಪ್ರಯಾಣದ ಖರ್ಚನ್ನು ನಾವು ಉಳಿಸಿದ್ದೇವೆ.”

Left: during high tide, the canal overflows. Right: Invasive weeds grows in the stagnant water, where mosquitoes, files, snakes and rats proliferate
PHOTO • Adarsh B. Pradeep
Left: during high tide, the canal overflows. Right: Invasive weeds grows in the stagnant water, where mosquitoes, files, snakes and rats proliferate
PHOTO • Adarsh B. Pradeep

ಎಡಕ್ಕೆ: ಅಲೆಯ ಉಬ್ಬರವಿಳಿತವು ಹೆಚ್ಚಿದ್ದಾಗ, ಕಾಲುವೆಯು ಉಕ್ಕಿಹರಿಯುತ್ತದೆ. ಬಲಕ್ಕೆ: ನಿಂತ ನೀರಿನಲ್ಲಿ ಆಕ್ರಾಮಕ ಕಳೆಯು ಬೆಳೆದು, ಸೊಳ್ಳೆ, ನೊಣ, ಹಾವು ಹಾಗೂ ಇಲಿಗಳು ವೃದ್ಧಿಸುತ್ತವೆ

ಮಣಿಯ ಸಹೋದರಿ, 61ರ ವಯಸ್ಸಿನ ತುಳಸಿ ಕೃಷ್ಣನ್‌, ಈಕೆಯ ನೆರೆಯವರು. “ಸುಮಾರು 50 ವರ್ಷಗಳ ಹಿಂದೆ ನಾವು ಇಲ್ಲಿಗೆ ಮೊದಲು ಬಂದಾಗ, ಅಲ್ಲಿ ಕೇವಲ ಕೆಲವು ಮನೆಗಳಿದ್ದವು. ಈಗ ಇಲ್ಲಿ, 85 ಮನೆಗಳಿದ್ದು, 81 ಕುಟುಂಬಗಳು ವಾಸಿಸುತ್ತಿವೆ” ಎಂದರಾಕೆ. ಸ್ಥಳೀಯ ಚುನಾವಣೆಗಾಗಿ ಕೈಗೊಳ್ಳಲಾದ ಸಮೀಕ್ಷೆಯು, ಎಲ್ಲ ನಿವಾಸಿಗಳಿಗೂ ಕಾಲೋನಿಯ ವಿವರಗಳನ್ನು ನೀಡಿದೆ.

ತುಳಸಿಯವರ ಅಸ್ಥಿರಂಧ್ರತೆಯ ಖಾಯಿಲೆಯಿಂದಾಗಿ ಅವರಿಗೆ ನಿಲ್ಲುವುದು, ಓಡಾಡುವುದು ಕಷ್ಟಕರ. “ಜೋರಾಗಿ ಮಳೆ ಬಂದಾಗಲೆಲ್ಲ, ನೀರಿನ ಮೂಲಕ, ಮುಖ್ಯ ರಸ್ತೆಯನ್ನು ತಲುಪುವುದು ನನಗೆ ತ್ರಾಸದಾಯಕ (ಎತ್ತರದ ನೆಲದ ಮೇಲೆ). ಹೀಗಾಗಿ, ನಾನು ಹಾಗೂ ನನ್ನ ಪತಿ ಮಗಳ ಮನೆಗೆ ಸ್ಥಳಾಂತರಗೊಳ್ಳುತ್ತೇವೆ. ಆದರೆ ಅವರೊಂದಿಗೆ ಎಷ್ಟು ದಿನಗಳು ತಾನೆ ಇರಲು ಸಾಧ್ಯ?” ಎಂದು ಆಕೆ ಪ್ರಶ್ನಿಸುತ್ತಾರೆ. ಈಕೆಯ ಮಗಳು ರೇಖ ಸಜನ್‌, ಪಿ ಅಂಡ್‌ ಟಿ ಕಾಲೋನಿಯಿಂದ ಒಂದು ಕಿ. ಮೀ. ದೂರದಲ್ಲಿನ ಗಾಂಧಿ ನಗರದಲ್ಲಿ ವಾಸಿಸುತ್ತಾರೆ.

ಕಾಲೋನಿಯ ಭೂಮಿಯು ಪುರಸಭೆಗೆ ಸೇರಿದ್ದು, ಗ್ರೇಟರ್‌ ಕೊಚ್ಚಿನ್‌ ಡೆವಲಪ್‌ಮೆಂಟ್‌ ಅಥಾರಿಟಿ (GCDA) ಸುಪರ್ದಿನಲ್ಲಿದೆ. ನಿವಾಸಿಗಳ ಪ್ರಕಾರ, ‘ಪಿʼ ಮತ್ತು ‘ಟಿʼ ಎಂಬವುಗಳ ಅರ್ಥ, ‘ಪವರ್‌’ ಮತ್ತು ‘ಟೆಲಿಕಮ್ಯುನಿಕೇಷನ್ಸ್‌’ ಎಂದು; ಕೇವಲ 50 ಮೀಟರ್‌ಗಳ ದೂರದಲ್ಲಿ, ಭಾರತ್‌ ಸಂಚಾರ್‌ ನಿಗಮ್‌ ಲಿಮೆಟೆಡ್‌ (BSNL) ಅನ್ನು ಕಾಣಬಹುದಾಗಿದೆ.

72ರ ವಯಸ್ಸಿನ ಆಜಿರ, ತಮ್ಮ ದಿವಂಗತ ಪುತ್ರಿ ಮತ್ತು ಅಳಿಯನಿಗೆ ಸೇರಿದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ. ರಸ್ತೆಯ ಬಳಿ, ದಿನಸಿ ಸಾಮಾನುಗಳನ್ನು ಮಾರುವ ಚಿಕ್ಕ ಅಂಗಡಿಯೊಂದನ್ನು ಅವರು ಹೊಂದಿದ್ದರಾದರೂ, ಸರ್ಕಾರವು ಅದನ್ನು ಕೆಡವಿತು. ಈಗ ಅವರು ಮನೆಯಿಂದಲೇ ಕೆಲವು ವಸ್ತುಗಳನ್ನು ಮಾರಿ, ದಿನಂಪ್ರತಿ 200 ರೂ.ಗಳನ್ನು ಸಂಪಾದಿಸುತ್ತಾರೆ. “ಇಲ್ಲಿನ ಅನೇಕರು ವಸ್ತುಗಳನ್ನು ಸಾಲವಾಗಿ ಖರೀದಿಸುತ್ತಾರಾದ್ದರಿಂದ, ಅದನ್ನು ನೆನಪಿಟ್ಟುಕೊಳ್ಳುವುದು ಕಷ್ಟ. ಪಾರ್ಶ್ವವಾಯುವಿಗೀಡಾದ ನನ್ನ ಕಾಲು ಮತ್ತು ಉಸಿರಾಟದ ತೊಂದರೆಗಳಿಂದಾಗಿ, ನಡೆದಾಡುವುದು ಹಾಗೂ ಹೆಚ್ಚಿನ ದಾಸ್ತಾನನ್ನು ಕೊಳ್ಳುವುದು ತ್ರಾಸದಾಯಕ” ಎಂದರಾಕೆ.

ನೈಋತ್ಯ ಮಾನ್ಸೂನ್ ಋತುವಿನಲ್ಲಿ (ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತನಕ) ಕೇರಳದಲ್ಲಿ ಸರಾಸರಿ 2855 ಮಿ.ಮೀ ಮಳೆಯಾಗುತ್ತದೆ. ಮಾನ್ಸೂನ್ ಪ್ರಳಯವು ಕೊಚ್ಚಿಯ ಬೀದಿ ಚರಂಡಿ ವ್ಯವಸ್ಥೆಯನ್ನು ಮಣ್ಣು ಮತ್ತು ಪ್ಲಾಸ್ಟಿಕ್ ನಿಂದ ಮುಚ್ಚುತ್ತದೆ. ಪ್ರವಾಹಕ್ಕೊಳಗಾದ ರಸ್ತೆಗಳಿಂದ ಮಳೆನೀರು ಉಕ್ಕಿ ಹರಿಯುವ ಕಾಲುವೆಗಳಲ್ಲಿ ಕೊನೆಗೊಳ್ಳುತ್ತದೆ - ಕಪ್ಪು, ಕೊಳಕು ನೀರನ್ನು ಪಿ & ಟಿ ಕಾಲೋನಿಯ ನಿವಾಸಿಗಳ ಮನೆಗಳಿಗೆ ತರುತ್ತದೆ. ಹೆಚ್ಚಿನ ಉಬ್ಬರವಿಳಿತವು ನೀರಿನ ಪ್ರಮಾಣವನ್ನು ಹೆಚ್ಚಿಸಲು ಮತ್ತು ಕೊಳಚೆ ನೀರನ್ನು ದುರ್ಬಲಗೊಳಿಸಲು ಬಳಸಲಾಗುತ್ತಿತ್ತು, ಆದರೆ ದಡಗಳಲ್ಲಿ ನಿರ್ಮಿಸಲಾದ ಪ್ರದೇಶಗಳು ಮತ್ತು ಕಡಿಮೆ ಎತ್ತರದ ಅಥವಾ  ಕೆಳಮಟ್ಟದ ಸೇತುವೆಗಳಲ್ಲಿನ ಹೆಚ್ಚಳವು ಕಾಲುವೆಯ ಅನೇಕ ಭಾಗಗಳಲ್ಲಿ ಸಮುದ್ರದ ನೀರಿನ ಒಳಹರಿವನ್ನು ನಿಲ್ಲಿಸಿದೆ, ಇದರಿಂದಾಗಿ ಕೊಳಚೆ ನೀರು ನಿಂತಲ್ಲೇ ಉಳಿದಿದೆ.

Left: Mary Vijayan remembers a time when her brothers swam in the canals. Right: Aajira's small grocery store was demolished by the government
PHOTO • Adarsh B. Pradeep
Left: Mary Vijayan remembers a time when her brothers swam in the canals. Right: Aajira's small grocery store was demolished by the government
PHOTO • Adarsh B. Pradeep

ಎಡಕ್ಕೆ: ತನ್ನ ತಮ್ಮಂದಿರು ಕಾಲುವೆಗಳಲ್ಲಿ ಈಜಾಡುತ್ತಿದ್ದ ಕಾಲವು ಮೇರಿ ವಿಜಯನ್‌ ಅವರಿಗೆ ನೆನಪಿದೆ. ಬಲಕ್ಕೆ: ಆಜಿರ ಅವರ ಚಿಕ್ಕ ಅಂಗಡಿಯನ್ನು ಸರ್ಕಾರವು ಕೆಡವಿತು. ನಿಂತ ನೀರಿನಲ್ಲಿ ಆಕ್ರಾಮಕ ಕಳೆಯು ಬೆಳೆದು, ಸೊಳ್ಳೆ, ನೊಣ, ಹಾವು ಹಾಗೂ ಇಲಿಗಳು ವೃದ್ಧಿಸುತ್ತವೆ

ಮಡುಗಟ್ಟಿದ ನೀರು, water hyacinth (Eichhornia crassipes) ಅಂದರೆ, ಗಂಟೆ ಹೂವಿನ ಜೊಂಡಿನಂತಹ ಆಕ್ರಾಮಕ ಕಳೆಯ ತ್ವರಿತ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ವೇಗವಾಗಿ ಪಸರಿಸುವ ಇದು, ನೀರಿನ ಹರಿವಿಗೆ ತಡೆಯೊಡ್ಡುತ್ತದೆ. ಸೊಳ್ಳೆ ಹಾಗೂ ನೊಣಗಳ ವರ್ಧನೆಯನ್ನು ಸಹ ಇದು ಉತ್ತೇಜಿಸುತ್ತದೆ. ಶೌಚಾಲಯದ ಕೊಳವೆಗಳ ಮೂಲಕ ನುಣುಚಿಕೊಂಡು ಬರುವ ಹಾವು ಮತ್ತು ಇಲಿಗಳ ದರ್ಶನವು ಸರ್ವೇಸಾಮಾನ್ಯ. “ನನ್ನ ಉಕ್ಕಿನ ಕಪಾಟಿನ ಒಳಸೇರುವ ಇಲಿಗಳು ಅನೇಕ ಬಟ್ಟೆಗಳನ್ನು ಹಾಳುಮಾಡಿವೆ” ಎಂದರು ಸಥಿ.

ಕೇರಳ ಶಿಪ್ಪಿಂಗ್ ಎಂಡ್ ಇನ್ ಲ್ಯಾಂಡ್ ನ್ಯಾವಿಗೇಶನ್ ಕಾರ್ಪೊರೇಷನ್ ವತಿಯಿಂದ ಕೈಗೊಳ್ಳಲಾದ ಹಾಗೂ ಜನವರಿ 2017ರಲ್ಲಿ ಪ್ರಕಟಗೊಂಡ ಅಧ್ಯಯನವು, “ಹೂಳು, ಕೆಳ-ಮಟ್ಟದ ಸೇತುವೆಗಳು, ಅತಿಕ್ರಮಣ ಮತ್ತು ವಾಸಸ್ಥಳಗಳು” ಕಾಲುವೆಗೆ ಅಡ್ಡಿಪಡಿಸಿವೆಯೆಂದು ಟಿಪ್ಪಣಿಸುತ್ತದೆ. “ಸಾಗಣೆಯನ್ನು ನಿರ್ವಹಿಸಬಹುದಾದ ನೀರಿನಮಾರ್ಗಗಳ ಅಭಿವೃದ್ಧಿಗೆ ಹಾಗೂ ನೀರಿನ ಹರಿವಿಗೆ, ಕಾಲುವೆಯನ್ನು ವಿಸ್ತರಿಸುವುದು ಅವಶ್ಯಕ” ಎಂಬುದನ್ನು ಸಹ ಅದು ಗಮನಿಸಿದೆ.

ಸಥಿಯವರ ನೆರೆಯವರಾದ ಮೇರಿ ವಿಜಯನ್‌, ತಮ್ಮ ಸಹೋದರರು ಕಾಲುವೆಯಲ್ಲಿ ಈಜುತ್ತಿದ್ದುದು ನೆನಪಿಸಿಕೊಳ್ಳುತ್ತಾರೆ. ಮೇರಿ ಅವರ ಪತಿ ವಿಜಯನ್‌. ಕೆ, ಹತ್ತಿರದ ರೈಲ್ವೆ ನಿಲ್ದಾಣದಲ್ಲಿ ಸರಕುಗಳನ್ನು ಹೊರುವ ಕೆಲಸದಲ್ಲಿದ್ದು, ಅವರಿಬ್ಬರೂ 30 ವರ್ಷಗಳಿಂದಲೂ ಕಾಲೋನಿಯ ನಿವಾಸಿಗಳಾಗಿದ್ದಾರೆ. ತಮ್ಮ ವಿವಾಹದ ನಂತರ ಕೊಚ್ಚಿನ್‌ನಿಂದ ಅವರು ಇಲ್ಲಿಗೆ ಬಂದು ನೆಲೆಸಿದರು. “ಕಾಲುವೆಯು ವಾಸ್ತವವಾಗಿ ಪೆರಂದೂರ್‌ ಪುಜ಼ದ ಉಪನದಿ. ಜನರು ಸ್ನಾನ ಹಾಗೂ ತೊಳೆತಕ್ಕೆ ಅದರಲ್ಲಿಳಿಯುತ್ತಿದ್ದರು. ನೀರು ಎಷ್ಟು ಸ್ವಚ್ಛವಾಗಿತ್ತೆಂದರೆ, ಅದರ ತಳದಲ್ಲಿ ಬಿದ್ದಿರುವ ಒಂದು ರೂಪಾಯಿಯ ನಾಣ್ಯವನ್ನು ಸಹ ಕಾಣಬಹುದಿತ್ತು. ಈಗ ಶವವನ್ನು ಗುರುತಿಸುವುದೂ ಅಸಾಧ್ಯವೆನಿಸಿದೆ” ಎನ್ನುತ್ತಾರೆ 62ರ ವಯಸ್ಸಿನ ವೃದ್ಧೆ, ರಿಲಿ.

ನಾವು ಆಕೆಯನ್ನು ಭೇಟಿಮಾಡಿದಾಗ, ನೆಲದ ಮೇಲೆ ಕುಳಿತು ಲಾಟರಿ ಟಿಕೆಟ್ಟುಗಳನ್ನು ಎಣಿಸುತ್ತಿದ್ದರು. ನಮ್ಮೊಂದಿಗೆ ಮಾತನಾಡುವ ಸಲುವಾಗಿ ಬಾಗಿಲಿನ ಬಳಿಗೆ ಬಂದ ಆಕೆ, “ರೈಲ್ವೆ ನಿಲ್ದಾಣದ ಸುತ್ತಮುತ್ತ ಈ ಟಿಕೆಟ್ಟುಗಳನ್ನು ಮಾರಿ, ದಿನಂಪ್ರತಿ 100-200 ರೂ.ಗಳನ್ನು ಗಳಿಸುತ್ತಿದ್ದೆ” ಎಂದು ತಿಳಿಸಿದರು. ಆದರೆ, ಸರ್ವವ್ಯಾಪಿ ವ್ಯಾಧಿಯು ಪ್ರಾರಂಭವಾದಾಗಿನಿಂದ, ಟಿಕೆಟ್ಟುಗಳ ಮಾರಾಟವು ಅಸ್ಥಿರಗೊಂಡಿದೆ.

ದಿನಗೂಲಿ ನೌಕರರಾದ ಅಜಿತ್‌ ಸುಕುಮಾರನ್‌ ತಿಳಿಸುವಂತೆ, “ಸುಮಾರು 10 ಕಿ. ಮೀ. ದೂರದಲ್ಲಿನ ಮುಂದಮ್‌ವೆಲಿಯಲ್ಲಿ ಕಾಲೋನಿಯ ನಿವಾಸಿಗಳನ್ನು ಶಾಶ್ವತವಾಗಿ ಮರುವಸತಿಗೊಳಿಸುವ ಯೋಜನೆಯನ್ನು ಸರ್ಕಾರವು ಅನೇಕ ವರ್ಷಗಳಿಂದಲೂ ರೂಪಿಸುತ್ತಿದೆ.” “ನನಗೆ ಹತ್ತು ವರ್ಷ ವಯಸ್ಸಾಗುವ ಮುಂಚಿನಿಂದಲೂ ಪ್ರಸ್ತಾವನೆಯ ಕುರಿತ ಮಾತುಗಳನ್ನು ಕೇಳುತ್ತಲೇ ಇದ್ದೇನೆ. ನನಗೀಗ ಇಬ್ಬರು ಮಕ್ಕಳು” ಏನೊಂದೂ ಬದಲಾಗಿಲ್ಲ” ಎಂದು ಸಹ ಅವರು ತಿಳಿಸಿದರು. ಅಜಿತ್‌ ಅವರ ಪತ್ನಿ ಸೌಮ್ಯ, ಮನೆಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದು, ಮಾಹೆಯಾನ ಸುಮಾರು 6,೦೦೦ ರೂ.ಗಳನ್ನು ಗಳಿಸುತ್ತಾರೆ. ಅಜಿತ್‌ ಅವರ ವರಮಾನ ದಿನವೊಂದಕ್ಕೆ ಸುಮಾರು 800 ರೂ.ಗಳು. ಆದರೆ ಅವರಿಗೆ ತಿಂಗಳಿಗೆ 15 ದಿನಗಳಿಗಿಂತಲೂ ಹೆಚ್ಚಿನ ಕೆಲಸ ದೊರೆಯುವುದು ಅಪರೂಪ. ಇವರಿಬ್ಬರೂ ಪಕ್ಕದಲ್ಲೇ ವಾಸಿಸುತ್ತಿರುವ ಅಜಿತ್‌ ಅವರ 54 ವರ್ಷದ ತಾಯಿ ಗೀತ ಹಾಗೂ 60 ವರ್ಷದ ತಂದೆ, ಸುಬ್ರಮಣಿಯನ್‌ ಅವರಿಗೂ ಆರ್ಥಿಕ ಬೆಂಬಲವನ್ನು ನೀಡುತ್ತಿದ್ದಾರೆ.

Left: A bridge on the canal that reduces its width and slows down the flow of water. Right: Waste dumped by Kochi city residents on the canal banks
PHOTO • Adarsh B. Pradeep
Left: A bridge on the canal that reduces its width and slows down the flow of water. Right: Waste dumped by Kochi city residents on the canal banks
PHOTO • Adarsh B. Pradeep

ಎಡಕ್ಕೆ: ಕಾಲುವೆಯ ಹರವನ್ನು ಕಡಿಮೆಗೊಳಿಸುವ ಮತ್ತು ನೀರಿನ ಹರಿವನ್ನು ನಿಧಾನಿಸುವ ಕಾಲುವೆಯ ಮೇಲಿನ ಸೇತುವೆ. ಬಲಕ್ಕೆ: ಕಾಲುವೆಯ ದಡದಲ್ಲಿ ಕೊಚ್ಚಿನ್‌ ವಾಸಿಗರು ಎಸೆದಿರುವ ತ್ಯಾಜ್ಯ

“2018ರ ಜುಲೈ 31ರಂದು ಪೂರ್ಣಿಮ ನಾರಾಯಣ್ ಎಂಬ ಕೌನ್ಸಿಲರ್‌ (2015ರಿಂದ 2020ರವರೆಗಿನ ಗಾಂಧಿ ನಗರ ವಾರ್ಡ್‌ನ ಕೌನ್ಸಿಲರ್‌), ಪ್ರತಿಯೊಂದು ಕುಟುಂಬದಿಂದ ಒಬ್ಬರನ್ನು ಮುಂದಂವೇಲಿಗೆ ಕರೆದೊಯ್ಯಲು ಬಸ್ಸಿನ ವ್ಯವಸ್ಥೆಮಾಡಿದ್ದರು. ಈ ಸಾಗಣೆಗಾಗಿ, ಪ್ರತಿ ಕುಟುಂಬದಿಂದ 100 ರೂ.ಗಳನ್ನು ಅವರು ಸಂಗ್ರಹಿಸಿದ್ದರು. ನಂತರ, ನಿವೇಶನದಲ್ಲಿ ಅಡಿಗಲ್ಲನ್ನು ನೆಟ್ಟರಲ್ಲದೆ, 10 ತಿಂಗಳೊಳಗೆ ಇದು ಪೂರ್ಣಗೊಳ್ಳುತ್ತದೆಂದು ಪಿನರಾಯಿ ವಿಜಯನ್‌ (ಕೇರಳದ ಮುಖ್ಯಮಂತ್ರಿ) ವಾಗ್ದಾನವಿತ್ತರು” ಎಂಬುದಾಗಿ ಸಥಿ ನೆನಪುಮಾಡಿಕೊಂಡರು.

ಮೂರು ವರ್ಷಗಳು ಸಂದುಹೋದವು. ಆಗಾಗ್ಗೆ ಕಂಡುಬರುವ ಪರಿಹಾರ ಶಿಬಿರಗಳ ಬೆಂಬಲವಲ್ಲದೆ ಇವರಿಗೆ ಮತ್ತೇನೂ ದೊರೆಯುತ್ತಿಲ್ಲ. 2019ರಲ್ಲಿ ಎರ್ನಾಕುಲಂನಲ್ಲಿ 2375.9 ಮಿ. ಮೀ. ಮಳೆಯು ಅಪ್ಪಳಿಸಿ, (ನೈಋತ್ಯ ಮುಂಗಾರಿನ ಅವಧಿಯಲ್ಲಿ ಯಥಾಪ್ರಕಾರವಾಗಿ ಸುರಿಯುವ 2038 ಮಿ. ಮೀ. ಮಳೆಗಿಂತಲೂ ಇದು ಶೇ. 17ರಷ್ಟು ಹೆಚ್ಚಾಗಿತ್ತು) 8ರಿಂದ 15ನೇ ಆಗಸ್ಟ್‌ವರೆಗೆ ಪ್ರವಾಹವು ಭೋರ್ಗರೆಯಿತು. ತಗ್ಗು ಪ್ರದೇಶಗಳಲ್ಲಿ ನೆಲೆಸಿರುವ ಸಾವಿರಾರು ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಬೇಕಾಯಿತಲ್ಲದೆ, ಮಳೆಯಿಂದಾಗಿ ಟಿಪಿ ಕಾಲುವೆಯು ಉಕ್ಕಿ ಹರಿಯಿತು. “ನಮ್ಮ ನೆರೆಯವರು ಹಾಗೂ ನಾನು ನಮ್ಮ ಹೆಗಲ ಮೇಲೆ ಮಣಿಯನ್ನು ಪರಿಹಾರ ಕೇಂದ್ರಕ್ಕೆ ಕರೆದೊಯ್ಯಬೇಕಾಯಿತು. ದೂರ ಸಂಪರ್ಕ ಇಲಾಖೆಯ ಎತ್ತರದ ಬೇಲಿ ಹಾಗೂ ನಮ್ಮ ಮನೆಯ ನಡುವಿನ ಓಣಿಯಲ್ಲಿ ಅತ್ಯಂತ ಇಕ್ಕಟ್ಟಾದ ಜಾಗವಿದ್ದು, ಇಬ್ಬರು ಒಬ್ಬರ ಪಕ್ಕದಲ್ಲೊಬ್ಬರಂತೆ ನಡೆದುಕೊಂಡು ಹೋಗುವುದು ಅತ್ಯಂತ ತ್ರಾಸದಾಯಕವಾದ ಕಾರಣ, ಅವರನ್ನು ಸಾವಕಾಶವಾಗಿ ಕರೆದೊಯ್ಯುವುದು ಬಹಳ ಪ್ರಯಾಸಕರವಾಗಿತ್ತು” ಎಂಬುದಾಗಿ ಸಥಿ ವಿವರಿಸುತ್ತಾರೆ.

ಡಿಸೆಂಬರ್‌ 2020ರ ಸ್ಥಳೀಯ ಚುನಾವಣೆಯಲ್ಲಿ, ಉಮೇದುವಾರರು 10 ತಿಂಗಳೊಳಗೆ ಮರುವಸತಿಯನ್ನು ಕಲ್ಪಿಸುವ ಆಶ್ವಾಸನೆ ನೀಡಿದ್ದರು. ನಂತರದಲ್ಲಿ, ʼಭೂರಹಿತರುʼ ಹಾಗೂ ʼಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲು ಸಾಧ್ಯವಾಗದʼವರಿಗಾಗಿ, ಕೇರಳ ಸರ್ಕಾರದ ಲೈಫ್‌ ಮಿಶನ್‌ ಯೋಜನೆಯಡಿಯಲ್ಲಿ, ಗ್ರೇಟರ್‌ ಕೊಚ್ಚಿನ್‌ ಡೆವಲಪ್‌ಮೆಂಟ್‌ ಅಥಾರಿಟಿಯು (ಜಿಸಿಡಿಎ) ಮುಂದಮ್‌ವೆಲಿಯಲ್ಲಿ 88 ವಸತಿ ಸಮುಚ್ಚಯಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿತು. ಆದಾಗ್ಯೂ, ಯೋಜನೆಗೆ ಸಾಮಗ್ರಿಗಳನ್ನು ಒದಗಿಸುವ ಜವಾಬ್ದಾರಿಯನ್ನು ವಹಿಸಲಾಗಿದ್ದ ಸಂಸ್ಥೆಯು ದಿವಾಳಿಯಾದ ಕಾರಣ, ಎಲ್ಲ ನಿರ್ಮಾಣ ಹಾಗೂ ಯೋಜನೆಗಳು ಸ್ಥಗಿತಗೊಂಡವು. “ಈಗ ಹೊಸ ಪ್ರಸ್ತಾವನೆಯನ್ನು ರೂಪಿಸಿ, ಆಸರೆಗಂಬಗಳ ಪರೀಕ್ಷಣವನ್ನು ಪೂರೈಸಿದ್ದು, ಕೇರಳ ಸರ್ಕಾರದ ತಾಂತ್ರಿಕ ಸಮಿತಿಯ ಪರವಾನಗಿಯನ್ನು ಕಾಯುತ್ತಿದ್ದೇವೆ” ಎನ್ನುತ್ತಾರೆ ಗ್ರೇಟರ್‌ ಕೊಚ್ಚಿನ್‌ ಡೆವಲಪ್‌ಮೆಂಟ್‌ ಅಥಾರಿಟಿಯ ಅಧ್ಯಕ್ಷರಾದ ವಿ. ಸಲೀಂ.

ಆದಾಗ್ಯೂ ಕಾಲೋನಿಯ ನಿವಾಸಿಗಳಿಗೆ ಈ ಬಗ್ಗೆ ವಿಶ್ವಾಸವಿಲ್ಲ. “ನಮ್ಮನ್ನು ವಿಚಾರಿಸಲು ಯಾರೂ ಇಲ್ಲಿಗೆ ಭೇಟಿ ನೀಡುವುದಿಲ್ಲ. ಮುಂದಮ್‌ವೆಲಿಯ ಭೇಟಿಯು ನಮ್ಮ ನೆನಪಿನಿಂದ ಮಾಸಿದಂತೆ, ಅಧಿಕಾರಿಗಳಿಗೂ ನಾವು ಮರೆತುಹೋಗಿದ್ದೇವೆ” ಎನ್ನುತ್ತಾರೆ ತುಳಸಿ.

ಅನುವಾದ: ಶೈಲಜಾ ಜಿ.ಪಿ.

Adarsh B. Pradeep

Adarsh B. Pradeep is studying print journalism at the Asian College of Journalism, Chennai

यांचे इतर लिखाण Adarsh B. Pradeep
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

यांचे इतर लिखाण Shailaja G. P.