ಶೀಟಿನಲ್ಲಿ ಕಟ್ಟಿದ್ದ ಜೋಪಡಿ ಮನೆಯ ನೆಲದ ಮೇಲೆ ಕುಳಿತುಕೊಂಡು ರುಬ್ಬುವ ಕಲ್ಲಿನಲ್ಲಿ ನರ್ಮದಾಬಾಯಿ ಟೊಮೆಟೋಗಳನ್ನು ರುಬ್ಬುತ್ತಿದ್ದರು. ಅವರ ಗಂಡ ಮೋಹನ್ ಲಾಲ್ ಟೊಮೆಟೋಗಳನ್ನು ಸಣ್ಣಗೆ ಕತ್ತರಿಸಿ ಪಕ್ಕದಲ್ಲಿ ಹಾಸಿದ್ದ ಬಟ್ಟೆಯ ಚೌಕದ ಮೇಲೆ ಹಾಕುತ್ತಿದ್ದರು. “ನಾವು ಇವುಗಳನ್ನು ರುಬ್ಬಿ ಚಟ್ನಿ ಮಾಡ್ಕೋತೀವಿ. ಒಮ್ಮೊಮ್ಮೆ ಹತ್ತಿರದ ಮನೆಯವರು ಅಕ್ಕಿನೋ, ಅನ್ನಾನೋ ಕೊಡ್ತಾರೆ. ಅದೂ ಇಲ್ದೇ ಇದ್ದಾಗ ಹೊಟ್ಟೆಯ ಹುಳಿತೇಗನ್ನು ಕಡಿಮೆ ಮಾಡ್ಕೊಳ್ಳೋಕೆ ಬರೀ ಚಟ್ನೀನೆ ತಿಂತೀವಿ,” ಕಳೆದ ಏಪ್ರಿಲ್ ಕೊನೆಯಲ್ಲಿ ಈ ಕುಟುಂಬವನ್ನು ಭೇಟಿ ಮಾಡಿದ್ದಾಗ ನರ್ಮದಾಬಾಯಿ ಹೇಳಿದ್ದರು. ಜಮ್ಮು ನಗರದ ಪಡುವಣದಲ್ಲಿರುವ ದುರ್ಗಾನಗರದ ಅಂಚಿನಲ್ಲಿರುವ ಮೂರು ಜೋಪಡಿಗಳಲ್ಲಿ ವಾಸವಾಗಿರುವ ಕಾರ್ಮಿಕರಿಗೆ ಹತ್ತಿರದ ಕಟ್ಟಡಗಳಲ್ಲಿ ವಾಸವಿದ್ದ ಜನರು ದಿನಸಿಗಳನ್ನು ಕೊಟ್ಟಿದ್ದರ ಕುರಿತು ಅಂದು ಮಾತಾಡಿದ್ದರು.
ಮಾರ್ಚಿ, 25ರಂದು ದೇಶಾದ್ಯಂತ ಕ್ರೂರ ಲಾಕ್ ಡೌನ್ ಹೇರಲಾಯಿತು. ಫೆಬ್ರವರಿಯವರೆಗೂ ಚಳಿಗಾಲದಲ್ಲಿ ಬಹುತೇಕ ಕೆಲಸವಿಲ್ಲದೇ ಕೂಡಿಟ್ಟುಕೊಂಡಿದ್ದ ಚಿಲ್ಲರೆ ಹಣದಲ್ಲೇ ಕಾಲಹಾಕಿದ್ದ ನರ್ಮದಾಬಾಯಿ ಚಂದ್ರ ಮತ್ತು ಮೋಹನ್ ಲಾಲ್ ಚಂದ್ರ, ಲಾಕ್ ಡೌನ್ ಹೇರಿದ ನಂತರ ಅವಶ್ಯಕ ದಿನಸಿಗಳನ್ನು ಕೊಳ್ಳಲೂ ಪರದಾಡುವಂತಾಯಿತು.
ನಲವತ್ತೆಂಟು ವರ್ಷದ ನರ್ಮದಾಬಾಯಿ ಜಮ್ಮುವಿನಲ್ಲಿ ಕಟ್ಟಡ ಕಾರ್ಮಿಕಳಾಗಿ ದುಡಿಯುತ್ತಾರೆ. ತಿಂಗಳಲ್ಲಿ ಸುಮಾರು 20-25 ದಿನ, ದಿನಕ್ಕೆ 400 ರೂಪಾಯಿಯಂತೆ ಗಳಿಸುತ್ತಾರೆ. ಗಾರೆ ಕೆಲಸ ಮಾಡುವ ಮೋಹನ್ ಲಾಲ್ ಅವರಿಗೆ 52 ವರ್ಷವಾಗಿದ್ದು ದಿನಕ್ಕೆ 600 ರೂಪಾಯಿ ಗಳಿಸುತ್ತಾರೆ. “ಚಳಿಗಾಲ ಕಳೆದು ಇನ್ನೇನು ಫೆಬ್ರವರಿಯ ಕೊನೆಗೆ ಕೆಲಸಗಳು ಸುರುವಾಗ್ಬೇಕು ಅನ್ನೋದ್ರೊಳಗೆ ಲಾಕ್ಡೌನ್ ಮಾಡಿದ್ರು. ಕೈಯಲ್ಲಿದ್ದ ಪುಡಿಗಾಸೂ ಖಾಲಿಯಾಗಿ ಪರದಾಡುವಂತಾಗಿಬಿಟ್ಟೆವು” ಎಂದು ಮೋಹನ್ ಲಾಲ್ ಹೇಳಿದರು.
ಪಕ್ಕದ ಜೋಪಡಿಯಲ್ಲಿ ಮೋಹನ್ ಲಾಲರ ತಮ್ಮ ನಲವತ್ತು ಪ್ರಾಯ ದಾಟಿದ ಅಶ್ವಿನಿ ಕುಮಾರ್ ಚಂದ್ರ ಮತ್ತು ನಲವತ್ತು ವಯಸ್ಸಿನ ರಾಜಕುಮಾರಿ ವಾಸವಿದ್ದಾರೆ. ಅಶ್ವಿನಿ ಕೂಡ ಕಟ್ಟಡ ಕಾರ್ಮಿಕನಾಗಿದ್ದು ದಿನಕ್ಕೆ 600 ರೂಪಾಯಿ ದುಡಿಯುತ್ತಾರೆ. ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮತ್ತು ಹತ್ತಿರದ ಹೊಲ ಮತ್ತು ತೋಟಗಳಲ್ಲಿ ಕೆಲಸ ಮಾಡುವ ರಾಜಕುಮಾರಿ ದಿನಕ್ಕೆ 400 ರೂಪಾಯಿ ದುಡಿಯುತ್ತಾರೆ.
ಈ ಎರಡೂ ಸಂಸಾರಗಳು ಜಮ್ಮುವಿಗೆ ಬಂದದ್ದು ಛತ್ತೀಸ್ ಗಢದ ಜಂಜಗೀರ್-ಚಂಪಾ ಜಿಲ್ಲೆಯ ನವಗಢ ತಾಲ್ಲೂಕಿನ ಬರ್ಬತಾ ಎನ್ನುವ ಹಳ್ಳಿಯಿಂದ. ನರ್ಮದಾಬಾಯಿ ಮತ್ತು ಮೋಹನ್ ಲಾಲ್ 2002ರ ಭೀಕರ ಬರಗಾಲದ ಕಾರಣದಿಂದ ವಲಸೆ ಬರಬೇಕಾಯಿತು. “ಬರ ನಮ್ಮ ಸರ್ವಸ್ವವನ್ನೂ ನಾಶ ಮಾಡ್ತು. ಜನಗಳ, ಜಾನುವಾರುಗಳ ಪ್ರತಿಯೊಬ್ಬರ ಹೊಟ್ಟೆಪಾಡಿಗೆ ಬೆಂಕಿ ಬಿತ್ತು. ಬಹುತೇಕ ಎಲ್ಲವನ್ನೂ ಕಳ್ಕೊಂಡು ನಾವು ಊರು ಬಿಡಲೇಬೇಕಾಯಿತು.” ಎಂದು ಮೋಹನ್ ಲಾಲ್ ಹೇಳಿದರು.
ಅಶ್ವಿನಿ ಮತ್ತು ರಾಜಕುಮಾರಿ (ಮೇಲಿನ ಚಿತ್ರದಲ್ಲಿ ಮಗ ಪ್ರದೀಪನ ಜೊತೆಯಲ್ಲಿರುವವರು) ಏಳು ವರ್ಷಗಳ ಕೆಳಗೆ ಇಲ್ಲಿಗೆ ಬಂದರು. ಅದಕ್ಕೂ ಮುಂಚೆ ತಮ್ಮ ಹಳ್ಳಿಯಲ್ಲಿ ಜೀವನೋಪಾಯಕ್ಕಾಗಿ ಬೇಸಾಯ, ಕಟ್ಟಡ ಕೆಲಸ, ಹೊಲಿಗೆ, ಬಟ್ಟೆಯ ಅಂಗಡಿ ಎಲ್ಲವನ್ನೂ ಪ್ರಯತ್ನಿಸಿ ಸೋತಿದ್ದರು. ಕೊನೆಗೆ ತಮ್ಮ ಇತರೆ ಮೂರು ಮಕ್ಕಳನ್ನು ಅವರ ಅಜ್ಜಿಯ ಬಳಿಯಲ್ಲಿ ಬಿಟ್ಟು ಇಲ್ಲಿಗೆ ಬಂದರು.
ಹಳ್ಳಿಯಲ್ಲಿ ಈ ಸೋದರರು ಮೂರು ಎಕರೆ ಸಾಗುವಳಿ ಮಾಡುತ್ತಿದ್ದರು. “ನಾವು ಬದನೆ, ಟೊಮೆಟೋ, ಕಾಳು ಬೆಳಿತಿದ್ವಿ. ಮಳೆ ಕೈಕೊಡ್ತು. ಬರ ಬಂದು ಬಾವಿ ಬತ್ತಿದವು. ಹಿಂಗೆ ಸುಮಾರು ವರ್ಷ ಹೊಲ ಬೀಳು ಬಿತ್ತು. ಕೊನೆಗೆ ಅದನ್ನು ವರ್ಷಕ್ಕೆ ಹತ್ತುಸಾವಿರ ರೂಪಾಯಿಗೆ ಗುತ್ತಿಗೆ ನೀಡಿದ್ವಿ.” ಎಂದರು ಮೋಹನ್ ಲಾಲ್.
ಜಮ್ಮುವಿನಲ್ಲಿ ಜೀವನ ಮಾಡುವುದು ತುಸು ಅಗ್ಗವೆಂತಲೂ, ಮತ್ತು ಮಾಡಲು ಇಲ್ಲಿ ಸಾಕಷ್ಟು ಕೆಲಸ ಸಿಗುವುದೆಂತಲೂ ನಮ್ಮೂರಿನಲ್ಲೊಬ್ಬರು ಕೇಳಲ್ಪಟ್ಟಿದ್ದರಂತೆ. ಅವರೇ ನಮಗೆ ಜಮ್ಮುವಿಗೆ ಹೋಗಿ ಅಂತ ಹೇಳಿದ್ದು. “ನಾವು ಬರ್ಭಾತಾವನ್ನು ಬಿಡುವಾಗ ನಮ್ಮ ಕೈಯಾಗೆ ಹೆಚ್ಚೇನೂ ಇರ್ಲಿಲ್ಲ, ಏನು ಮಾಡ್ಬೇಕೂಂತಾನೂ ಗೊತ್ತಿರ್ಲಿಲ್ಲ. ಕೈಯಲ್ಲಿ ಚಿಕ್ಕಾಸು ಹಿಡ್ಕೊಂಡು, ಭರವಸೆಯ ಮೂಟೆ ಹೊತ್ಕೊಂಡು ಜಮ್ಮುವಿಗೆ ಬಂದ ನಮ್ಗೆ ಇಲ್ಲಿಗೆ ಬಂದು ಏನು ಮಾಡ್ಬೇಕು, ಹೆಂಗೆ ಮಾಡ್ಬೇಕು ಅನ್ನೋ ಯಾವ ಆಲೋಚನೆಯೂ ಇರ್ಲಿಲ್ಲ. ಸುಮ್ನೆ ರೈಲು ಹತ್ಕೊಂಡು ಬಂದು ಬಿಟ್ವಿ”.
‘ಸ್ವಲ್ಪ ಸಮಯದಲ್ಲೇ ಊರಿನ ಕಾಂಟ್ರಾಕ್ಟರರೊಬ್ಬರ ಹತ್ತಿರ ಕೂಲಿ ಕೆಲಸ ಸಿಕ್ಕಿತು. ಈ ಹತ್ತಿಪ್ಪತ್ತು ವರ್ಷಗಳಲ್ಲಿ ಅನೇಕ ಕಾಂಟ್ರಾಕ್ಟರುಗಳ ಬಳಿ ಕೆಲಸ ಮಾಡಿದ್ದೇವೆ’ ಎಂದು ನೆನೆಸಿಕೊಂಡರು ಮೋಹನ್ ಲಾಲ್.
ಆದರೆ ಲಾಕ್ ಡೌನಿನಿಂದ ಕೆಲಸ ಮತ್ತು ಆದಾಯ ಎರಡಕ್ಕೂ ಸಂಚಕಾರ ಬಂದಿತು. ಏಪ್ರಿಲ್ ಕೊನೆಯ ಹೊತ್ತಿಗೆ ನಮ್ಮ ಬಳಿ ಎರಡು ಸಾವಿರ ರೂಪಾಯಿಯೂ ಇರಲಿಲ್ಲ. “ನಮಗೆ ಪ್ರತಿ ದಿನವೂ ಕೂಲಿ ಬಟವಾಡೆ ಮಾಡ್ತಿರ್ಲಿಲ್ಲ. ವಾರಕ್ಕೋ, ಹದಿನೈದು ದಿನಕ್ಕೊಂದ್ಸಲ ಖರ್ಚಿಗೇಂತ 2,000-3,000 ರೂಪಾಯಿ ತಗೋತಿದ್ವಿ. ನಾವು ತಗೊಂಡ ಕೈಗಡವನ್ನು ಕಳೆದು ಉಳಿದ ದುಡ್ಡುನ್ನಾ ತಿಂಗಳ ಕೊನೆಯಲ್ಲಿ ಕೊಡ್ತಾರೆ.” ಲಾಕ್ಡೌನ್ ಶುರುವಾದ ಮೇಲೆ ಕೈಲಿದ್ದದ್ದು ಖಾಲಿಯಾದ ಮೇಲೆ ಮೋಹನ್ ಲಾಲ್ ಕಂಟ್ರಾಕ್ಟರನ ಹತ್ತಿರ ತಿಂಗಳಿಗೆ 5 ಪರ್ಸೆಂಟ್ ಬಡ್ಡಿಯಂತೆ 5000 ರೂಪಾಯಿ ಸಾಲ ತೆಗೆದುಕೊಂಡರು. “ಕೊನೆಯಲ್ಲಿ ಇದೊಂದೇ ದಾರಿ ಉಳಿದದ್ದು” ಎಂದರು ಮೋಹನ್ ಲಾಲ್.
“ಕೈತುಂಬಾ ಕಾಸೇನೂ ಇರ್ಲಿಲ್ಲ. ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಬಿಟ್ಟು ಬಂದಿದೀವಿ. (ಇಬ್ಬರೂ ಬಿ.ಎಸ್ಸಿ. ವಿದ್ಯಾರ್ಥಿನಿಯರು) ಪ್ರತಿ ತಿಂಗಳೂ ತಲಾ 4000 ರೂಪಾಯಿ ಕಳಿಸಬೇಕು. ಉಳಿದದ್ದು ದಿನಸಿಗೆ, ಸೋಪು, ಎಣ್ಣೆ ಮತ್ತು ಇತರೆ ಖರ್ಚಿಗೆ ಆಗುತ್ತೆ” ಅಂತ ನರ್ಮದಾಬಾಯಿ ಹೇಳಿದರು.
ಅಶ್ವಿನಿ ಮತ್ತು ರಾಜಕುಮಾರಿ ಒಂದು ಕುಂಟುಬಿದ್ದ ಹೊಲಿಗೆ ಯಂತ್ರ ಇಟ್ಟುಕೊಂಡಿದ್ದಾರೆ. ಅಶ್ವಿನಿ “ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಅಷ್ಟಾಗಿ ಕೆಲಸ ಸಿಗೋಲ್ಲ. ಆಗ ಒಂದೋ ಎರಡೋ ಅಂಗಿ ಹೊಲಿದರೆ ಖರ್ಚಿಗೆ ಒಂದಿಷ್ಟು ದುಡ್ಡು ಸಿಗುತ್ತದೆ ಅಷ್ಟೆ. ಬೇರೆಯವರಂತೆ ನಾವೂ ಸಂಕಷ್ಟದಲ್ಲಿದ್ದೇವೆ. ಜೊತೆಗೆ ತೀರಿಸಲು ಒಂದಿಷ್ಟು ಸಾಲವೂ ಇದೆ” ಎಂದು ಹೇಳಿದರು. ಹದಿನೇಳು ವರ್ಷದ ಮಧ್ಯದ ಮಗ ಪ್ರತಾಪಚಂದ್ರನೂ ಕೂಲಿ ಮಾಡುತ್ತಾರೆ. ಕಳೆದ ವರ್ಷ ಹತ್ತನೇ ತರಗತಿಯಲ್ಲಿ ಪಾಸಾಗಲು ಸಾಧ್ಯವಾಗದೆ ಕಳೆದ ವರ್ಷ ಜಮ್ಮುವಿಗೆ ಬಂದವನು. ಅವನೂ ಕೆಲಸಕ್ಕೆ ಹೋದರೆ ದಿನಕ್ಕೆ 400 ರೂಪಾಯಿ ತರುತ್ತಾರೆ.
ಮೂರನೇ ಗುಡಿಸಲಿನಲ್ಲಿ 35 ವರ್ಷದ ದಿಲೀಪ್ ಕುಮಾರ್ ಮತ್ತು 30 ವರ್ಷದ ತಿಹಾರಿನಬಾಯಿ ವಾಸಿಸುತ್ತಾರೆ. ಅವರು ಕಟ್ಟಡ ನಿರ್ಮಾಣದ ಕೆಲಸ ಮಾಡುತ್ತಾರೆ ಮತ್ತು ದಿನಕ್ಕೆ ರೂ. 400ರಂತೆ ಗಳಿಸುತ್ತಾರೆ. ಸರಿಯಾಗಿ ಕೂಲಿ ಕೊಡದ, ಪದೇ ಪದೇ ಕೂಲಿಯವರನ್ನು ಬದಲಾಯಿಸುವ ಮೇಸ್ತ್ರಿಗಳ ಬಗ್ಗೆ ಎಚ್ಚರದಿಂದಿರುವ ಇವರು ಕೆಲಸಕ್ಕಾಗಿ ಇಲ್ಲಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ತಲಾಬ್- ತಿಲ್ಲೂ ಎಂಬ ಕೂಲಿಗಾರರ ಕಟ್ಟೆಯ (ಬೆಳಗ್ಗೆ ಕೂಲಿಯವರಿಗಾಗಿ ಮೇಸ್ತ್ರಿಗಳು ಬಂದು ಕರೆದುಕೊಂಡು ಹೋಗುವ ಜಾಗ) ಹತ್ತಿರ ಹೋಗುತ್ತಾರೆ.
“ನಮ್ಮ ಹಳ್ಳಿಯ ಹೊಲಗಳಲ್ಲಿ ನಾನು ಕೂಲಿಗೆ ಹೋಗುತ್ತಿದ್ದೆ. ಅನೇಕ ವರ್ಷಗಳ ಸತತ ಬರಗಾಲವು ನಾನು ಹಳ್ಳಿ ಬಿಟ್ಟು ಕೆಲಸ ಹುಡುಕಿಕೊಂಡು ಬರುವಂತೆ ಮಾಡಿತು” ಎಂದರು ದಿಲೀಪ್. ಅವರ ಸಂಸಾರವು ಎಂಟು ವರ್ಷಗಳ ಹಿಂದೆ ಜಂಜಗೀರ್- ಚಂಪಾ ಜಿಲ್ಲೆಯ ಚಂಪಾ ತಾಲೂಕಿನ ಬಹೆರಾದಿ ಎನ್ನುವ ಹಳ್ಳಿಯಿಂದ ಬಂದಿತು.
15 ವರ್ಷದ ಮಗಳು ಪೂರ್ಣಿಮಾಳನ್ನು ಜಮ್ಮುವಿನ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಗೆ ಸೇರಿಸಿದ್ದಾರೆ. (ಕೆಲವರು ಹಿಂದಿ ಮಾತಾಡಿದರೂ ಬಹುತೇಕರ ಸಂರ್ಶನಗಳನ್ನು ಬಿಲಾಸಪುರಿ ಭಾಷೆಯಿಂದ ಭಾಷಾಂತರ ಮಾಡಲು ಸಹಾಯ ಮಾಡಿದ್ದು ಇದೇ ಪೂರ್ಣಿಮಾ) ಅವಳ ಶಿಕ್ಷಣದ ಖರ್ಚಿಗಾಗಿ ಬಹೆರಾದಿಯ ಖಾಸಗಿ ಲೇವಾದೇವಿಗಾರನೊಬ್ಬನಿಂದ 10,000 ಸಾಲ ಪಡೆದಿದ್ದೆವು. ಅದರಲ್ಲಿ ಈಗ ಕೇವಲ 3,000ವಷ್ಟೆ ಉಳಿದಿದೆ. ಅವಳ ಓದಿಗಾಗಿ ಮಾಡಿದ ಸಾಲವು ಈ ಸಂಕಷ್ಟದಲ್ಲಿ ನಮ್ಮನ್ನು ಉಳಿಸಿತು. ಏಪ್ರಿಲ್ ಕೊನೆಯಲ್ಲಿ ಸಿಕ್ಕಾಗ ದಿಲೀಪ್ ಹೇಳಿದ್ದರು.
ಈ ಮೂರೂ ಕುಟುಂಬಗಳು ಜಮ್ಮುವಿನಲ್ಲಿ ರೇಶನ್ ಕಾರ್ಡು ಮಾಡಿಸಿಕೊಳ್ಳಲು ಆಗದಿರುವುದರಿಂದ ಅಲ್ಲಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ನಾಗರಿಕ ಆಹಾರ ಸರಬರಾಜು ಅಂಗಡಿಯಲ್ಲಿ (ನ್ಯಾಯ ಬೆಲೆ ಅಂಗಡಿ) ರೇಶನ್ ಸಿಗುವುದಿಲ್ಲ. ‘ಹೊರಗಿನವರಿಗೆ ರೇಶನ್ ಕೊಡುವುದಿಲ್ಲ’ ಎಂದು ನಮ್ಮನ್ನು ಬೈದಟ್ಟಿದರು. ಲಾಕ್ಡೌನಿನ ನಂತರ ಕೇವಲ ಅನ್ನಕ್ಕಾಗಿ ದಿನಪೂರ್ತಿ ಗೇಯುವುದು ಮತ್ತು ಮಾಡಿದ ಸಾಲ ತೀರಿಸುವುದು ಇವೆರಡರ ಸುತ್ತವೇ ನಮ್ಮ ಜೀವನ ತಿರುಗುತ್ತಿದೆ. ಇಲ್ಲಿ ಕಳೆದ ಏಳು ವರುಶಗಳಲ್ಲಿ ಇದು ಅತ್ಯಂತ ಕಷ್ಟಕರ ಸಮಯ. ಸುತ್ತ ಮುತ್ತಲಿನವರ ದೊಡ್ಡ ಮನಸ್ಸುಗಳೇ ಇಷ್ಟು ದಿನ ಹೊಟ್ಟೆ ಹೊರೆಯಲು ಸಹಾಯ ಮಾಡಿದ್ದು” ಎಂದು ಸಣ್ಣ ಧ್ವನಿಯಲ್ಲಿ ಆಶ್ವಿನಿ ಹೇಳಿದರು.
ಒಳ್ಳೆಯ ದೊಡ್ಡ ಬಂಗಲೆಗಳಲ್ಲಿರುವ ಮತ್ತು ಮನೆಗಳ ಜನರು ಪ್ರಾರಂಭದಲ್ಲೂ ಸಹಾಯ ಮಾಡಿದ್ದಲ್ಲದೆ ಇತ್ತೀಚಿನ ಕೆಲವು ವಾರಗಳಲ್ಲಿ ಜೋಪಡಿವಾಸಿಗಳಿಗೆ ನೀಡುವ ದಿನಸಿ, ತರಕಾರಿಗಳನ್ನು ಮುಂಚಿಗಿಂತ ಹೆಚ್ಚು ನೀಡುತ್ತಿದ್ದಾರೆ. ಈ ಸಹಾಯಗಳಿಂದ ಈ ಕುಟುಂಬಗಳ ಸಂಕಷ್ಟವು ಮೇ 18ರ ಸುಮಾರಿಗೆ ನಾನು ಮತ್ತೆ ಇವರನ್ನು ಭೇಟಿ ಮಾಡಿದಾಗ ಕೊಂಚ ಸುಧಾರಿಸಿತ್ತು.
“ಮೊದಲಿಗಿಂತಲೂ ಈಗ ಎಷ್ಟೋ ಸುಧಾರಿಸಿದೆ, ನಮ್ಮ ಸುತ್ತಲಿನ ನಾಲ್ಕು ಮನೆಯವರು ಪ್ರತಿ ಗುಡಿಸಲಿಗೆ 15 ಕಿಲೊ ಹಿಟ್ಟು, 10 ಕಿಲೋ ಅಕ್ಕಿ ಮತ್ತು 5 ಕಿಲೋ ಆಲೂಗಡ್ಡೆಯನ್ನು ದಾನ ಕೊಟ್ಟರು. ನೀವೆಲ್ಲೂ ಹೋಗಬೇಡಿ, ಇಲ್ಲಿಯೇ ಇರಿ ಎಂದೂ ಹೇಳಿದರು. ಇದೆಲ್ಲ ಖಾಲಿಯಾದ ಮೇಲೆ ಬೇಕಾದರೆ ಮತ್ತೆ ದಿನಸಿಗಳನ್ನು ಕೇಳಿ ಪಡೆದುಕೊಳ್ಳಿ ಎಂದೂ ಹೇಳಿದರು. ನಮಗೆಲ್ಲಾ ತಲೆಗೆ 500 ರೂ. ಸಿಕ್ಕಿದ್ದರಿಂದ ಎಣ್ಣೆ, ಮಸಾಲೆ, ಉಪ್ಪನ್ನು ಕೊಂಡು ಇಟ್ಟುಕೊಳ್ಳಲು ಸಾಧ್ಯವಾಯಿತು.” ಎಂದು ಮೋಹನ್ ಲಾಲ್ ಹೇಳಿದರು.
“ಇದೇ ನಮ್ಮ ಬದುಕಿನ ಬಂಡಿಯನ್ನು ಉರುಳಿಸುತ್ತಿರುವುದು. ಎರಡು ಸಲ ಶೇಠಜೀಯವರ ದಿನಸಿ ಕಿಟ್ ವಿತರಿಸುವ ವ್ಯಾನು ಬಂದಿತ್ತು. ಏನೇ ಆದರೂ ಇದೆಲ್ಲ ಖಾಲಿಯಾದ ಮೇಲೆ ಏನು ಮಾಡಬೇಕೆಂಬುದೇ ನಮಗೆ ತೋಚುತ್ತಿಲ್ಲ” ಎಂದು ಅಶ್ವಿನಿ ಹೇಳಿದನು.
ಮೇ 10ರ ಸುಮಾರಿಗೆ ಮೋಹನ್ ಲಾಲ್ ಮತ್ತು ನರ್ಮದಾಬಾಯಿ ಕೆಲಸಕ್ಕೆ ಹೋಗಲು ಶುರು ಮಾಡಿದ್ದರು. ಮೋಹನ್ ಲಾಲ್ “ಇಲ್ಲಿಯವರೆಗೂ 3,000 ರೂ.ಗಳನ್ನು ತಗೊಂಡಿದ್ದೇನೆ, ಮತ್ತೆ ಕಂಟ್ರಾಕ್ಟರು ನಾನು ತೆಗೆದುಕೊಂಡಿದ್ದ ಸಾಲವನ್ನು [ಲಾಕ್ ಡೌನ್ ಶುರುವಾದಾಗ] ಮುರಿದುಕೊಂಡು ಕೊನೆಗೆ ಉಳಿದ ಹಣ ಕೊಡುತ್ತಾನೆ. ಸದ್ಯಕ್ಕೆ ಮತ್ತೆ ಕೆಲಸಗಳು ಶುರುವಾಗಿರುವುದೇ ಸಂತೋಷದ ವಿಚಾರ, ಜೊತೆಗೆ ಮುಖ್ಯವಾದುದೆಂದರೆ ನಮ್ಮ ಸುತ್ತ ಮುತ್ತ ಸಹಾಯ ಮಾಡುವ ಮನಸ್ಸಿರುವ ದೇವರಂತ ಜನಗಳೂ ಇದ್ದಾರೆ” ಎಂದು ಹೇಳಿದರು.
ಇನ್ನುಳಿದ ಎರಡು ಸಂಸಾರಗಳೂ ನಿಧಾನವಾಗಿ ತೆರೆಯುತ್ತಿರುವ ಅಂಗಡಿಗಳಲ್ಲಿ ಗುಡಿಸಿ ಸ್ವಚ್ಚಗೊಳಿಸುವ, ತೊಳೆಯುವ ಕೆಲಸಗಳಿಗೆ ಹೋಗುತ್ತಿದ್ದಾರೆ. “ಲಾಕ್ಡೌನಿನಲ್ಲಿ ಸುಮಾರು ದಿನಗಳ ಕಾಲ ಕೆಲವು ಮನೆಗಳನ್ನು ಮತ್ತು ಅಂಗಡಿಗಳನ್ನು ಮುಚ್ಚಿದ್ದರಿಂದ ಅವುಗಳನ್ನು ಗುಡಿಸುವ, ಸ್ವಚ್ಚಗೊಳಿಸುವ ಕೆಲಸ ಸಾಕಷ್ಟಿದೆ. ಅವರು ನೇರವಾಗಿಯೇ ನಮ್ಮನ್ನು ಕರೆಯುತ್ತಾರೆ ಮತ್ತು ಅವತ್ತಿನ ಕೂಲಿ ಅವತ್ತೇ ಕೊಡುತ್ತಾರೆ. ಇಲ್ಲಿವರೆಗೂ ನಾನು 1000 ರೂ. ದುಡಿದಿದ್ದೇನೆ.” ಮೇ ತಿಂಗಳ ಆರಂಭದಲ್ಲಿ ಅಶ್ವಿನಿ ಫೋನಿನಲ್ಲಿ ಹೇಳಿದ್ದ.
ಮುಂದುವರೆದು “ನಮ್ಮ ಕುಟುಂಬಕ್ಕೆ ಜಮ್ಮು ಕಾಶ್ಮೀರ ಸರಕಾರದ ಯಾವುದೇ ಲಾಕ್ಡೌನ್ ಪರಿಹಾರವಾಗಲೀ (ಏಪ್ರಿಲ್ ನಿಂದ ಜೂನ್ ವರೆಗೆ ತಿಂಗಳಿಗೆ ರೂ. 500), ಕೇಂದ್ರ ಸರಕಾರದ ಹೆಚ್ಚುವರಿ ಪಡಿತರವಾಗಲೀ ಸಿಗಲಿಲ್ಲ. ಇದು ಸಿಕ್ಕಿದ್ದರೂ ಇಷ್ಟು ಹಣ ಸಾಕಾಗುತ್ತದೆಯೇ? ಕೃಷಿ ಸಮೃದ್ದಿ ಯೋಜನೆಯಡಿಯಲ್ಲಿ 2000 ರೂ. ಬಂದಿದೆ ಅಷ್ಟೆ.”
“ಈ ನಗರವನ್ನು ನಮ್ಮ ರಕ್ತ, ಬೆವರು ಮತ್ತು ನಮ್ಮ ಶ್ರಮದಿಂದ ಕಟ್ಟಲಾಗಿದೆ. ಆದರೆ ಇಂತಹ ಸಂಕಷ್ಟದಲ್ಲಿ ಸರಕಾರವು ನಮಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಲು ಮನಸ್ಸು ಮಾಡುತ್ತಿಲ್ಲ” ಎಂದು ಮೋಹನ್ ಲಾಲ್ ಆಕ್ರೋಶದಿಂದ ಹೇಳಿದರು.
ಇಷ್ಟಾದರೂ ಜಮ್ಮು ಕಾಶ್ಮೀರ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಆಯುಕ್ತ ಸೌರಭ್ ಭಗತ್ ಹೇಳುವುದೆಂದರೆ “ನಮ್ಮ ಕೈಲಾದಷ್ಟನ್ನು ನಾವು ಮಾಡಿದ್ದೇವೆ. ಜಮ್ಮುವಿನಲ್ಲಿ ಸುಮಾರು 30,000 ಹೊರ ರಾಜ್ಯದಿಂದ ವಲಸೆ ಬಂದವರಿದ್ದಾರೆ. ಅವರಲ್ಲಿ ಬಹುಪಾಲು ಮಂದಿ ಬಿಹಾರ, ಛತ್ತೀಸ್ ಗಢ, ಮಧ್ಯ ಪ್ರದೇಶ ಮತ್ತು ಒರಿಸ್ಸಾದಿಂದ ಬಂದವರು. ಸರಕಾರವು ಮಾರ್ಚಿಯಿಂದ ಪ್ರತಿ ತಿಂಗಳು ರೂ. 1000 ಗಳನ್ನು ಕಾರ್ಮಿಕರಿಗೆ ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ ನೀಡಲು ತೀರ್ಮಾನಿಸಿದೆ. ಕೆಲವರು ಪ್ರಚಾರಕ್ಕಾಗಿಯೋ ಇಲ್ಲಾ ಹಣ ಸಾಕಾಗುವುದಿಲ್ಲ ಎಂಬ ಕಾರಣಕ್ಕೋ ಹಣವೇ ನಮಗೆ ತಲುಪಿಲ್ಲ ಎಂದು ಹೇಳಬಹುದು”
ದುರ್ಗಾನಗರದ ಸಣ್ಣ ಮೂರು ಕೋಣೆಗಳಲ್ಲಿ ಪರಿಸ್ಥಿತಿ ಮತ್ತೆ ಮೊದಲಿನಂತಾಗಿದ್ದರೂ ಯಾವಾಗ ಏನೋ ಎಂಬ ಅನಿಶ್ಚಿತತೆ ಹಾಗೆಯೇ ಇದೆ. ಭರವಸೆ ಮತ್ತು ನಿರೀಕ್ಷೆಯೊಂದಿಗೆ ಇನ್ನು ಯಾವಾಗಲೂ ನಾವು ಜಾಗ್ರತೆಯಿಂದ ಮತ್ತು ಎಚ್ಚರದಿಂದ ಇರಬೇಕಾಗಿದೆ. ಎನ್ನುತ್ತಾರೆ ದಿಲೀಪ್.
ಅನುವಾದ: ಮಂಜಪ್ಪ ಬಿ. ಎಸ್