ಇತ್ತೀಚೆಗೆ, ಮಹಾರಾಷ್ಟ್ರದ ಔರಂಗಬಾದ್‌ನಲ್ಲಿ ಮಧ್ಯಪ್ರದೇಶಕ್ಕೆ ಸೇರಿದ 16 ಕಾರ್ಮಿಕರು ರೈಲಿನಡಿ ಸಿಲುಕಿ ನಿದ್ರೆಯಲ್ಲಿರುವಾಗಲೇ ಮರಣಿಸಿದರು. ಈ ಕುರಿತು ನಮ್ಮ ಮೊದಲ ಪ್ರತಿಕ್ರಿಯೆ ಅವರನ್ನು ಹೀಗೆ ರೈಲು ಹಳಿಯ ಮೇಲೆ ನಡೆಯುವಂತೆ ಮಾಡಿದವರ್ಯಾರು ಎನ್ನುವುದಾಗಿರಬೇಕಿತ್ತು, ಆದರೆ ನಾವು ಕೇಳಿದ ಪ್ರಶ್ನೆಯೆಂದರೆ ಅವರನ್ನು ರೈಲು ಹಳಿಗಳ ಮೇಲೆ ಮಲಗಲು ಹೇಳಿದವರು ಯಾರು ಎಂದಾಗಿತ್ತು. ಈ ಪ್ರಶ್ನೆ ನಮ್ಮ ಕುರಿತು ಏನನ್ನು ಹೇಳುತ್ತದೆ?

ರೈಲಿನ ಕೆಳಗೆ ಅಪ್ಪಚ್ಚಿಯಾಗಿ ಹೋದ ಕಾರ್ಮಿಕರ ಹೆಸರುಗಳನ್ನು ಜನರೆದುರು ಇಡುವ ಕುರಿತು ಎಷ್ಟು ಇಂಗ್ಲಿಷ್‌ ಪತ್ರಿಕೆಗಳು ತಲೆಕೆಡಿಸಿಕೊಂಡವು? ಅವರು ಕೊನೆಗೂ ಹೆಸರಿಲ್ಲದವರಾಗಿ, ಮುಖವಿಲ್ಲದವರಾಗಿಯೇ ಈ ಜಗತ್ತಿನಿಂದ ಮರೆಯಾಗಬೇಕಾಯಿತು. ಇದು ನಾವು ಬಡವರನ್ನು ನಡೆಸಿಕೊಳ್ಳುವ ರೀತಿ. ಅದೇ ಒಂದು ವೇಳೆ ವಿಮಾನ ಅವಘಡವಾಗಿದ್ದರೆ, ಮಾಹಿತಿಗಳಿಗಾಗಿ ಸಹಾಯವಾಣಿಗಳನ್ನು ಪ್ರಾರಂಭಿಸಲಾಗುತ್ತಿತ್ತು. ಅದರಲ್ಲಿ 300 ಜನ ಮರಣ ಹೊಂದಿದ್ದರೂ ಅವರೆಲ್ಲರ ಹೆಸರುಗಳು ಪತ್ರಿಕೆಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಇವರು ಮಧ್ಯಪ್ರದೇಶದ 16 ಮಂದಿ, ಅವರಲ್ಲಿ ಎಂಡು ಜನರು ಗೊಂಡ್‌ ಆದಿವಾಸಿಗಳು. ಇವರ ಕುರಿತು ತಲೆ ಕೆಡಿಸಿಕೊಳ್ಳುವುದು ಯಾರಿಗೆ ಬೇಕಾಗಿದೆ? ಅವರು ಊರಿಗೆ ಹೋಗಲು ರೈಲು ನಿಲ್ದಾಣಕ್ಕೆ ಹೋದವರು ರೈಲುಗಳು ಇಲ್ಲವೆಂದು ತಿಳಿದು ಅದೇ ರೈಲುಹಾದಿಯಲ್ಲಿ ತಮ್ಮ ಮನೆಯ ದಾರಿಯನ್ನು ಸುಲಭವಾಗಿ ತಿಳಿಯಬಹುದು ಎನ್ನುವ ಕಾರಣಕ್ಕೆ ರೈಲು ಹಳಿಗಳ ಗುಂಟ ನಡೆದಿದ್ದಾರೆ. ಹೌದು ಅವರು ನಂತರ ಅದೇ ಹಳಿಗಳ ಮೇಲೆ ಮಲಗಿದ್ದಾರೆ, ಅದಕ್ಕೆ ಕಾರಣ ಅವರು ದಣಿದಿದ್ದರು. ಬಹುಶಃ ಆ ಮಾರ್ಗದಲ್ಲಿ ಯಾವುದೇ ರೈಲುಗಳು ಬರಲಿಕ್ಕಿಲ್ಲವೆನ್ನುವುದು ಅವರ ನಂಬಿಕೆಯಾಗಿದ್ದಿರಬಹುದು.


ಭಾರತದಲ್ಲಿ ಶ್ರಮಿಕ ಕಾರ್ಮಿಕರ ಸಂಖ್ಯೆಯನ್ನು ಗಮನಿಸಿದರೆ, ಸರ್ಕಾರವು ಅವರೆಲ್ಲರೊಂದಿಗೆ ಯಾವ ರೀತಿಯ ಸಂವಹನವನ್ನು ಹೊಂದಿದೆ ಎಂದು ನೀವು ಭಾವಿಸುತ್ತೀರಿ?

130 ಕೋಟಿಯಷ್ಟು ಜನಸಂಖ್ಯೆಯಿರುವ ಈ ದೇಶಕ್ಕೆ ಅದರ ದೈನಂದಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಾವು ನೀಡಿದ್ದು ಕೇವಲ ನಾಲ್ಕು ಗಂಟೆಗಳ ಸಮಯ. ಹಿರಿಯ ನಾಗರಿಕ ಸೇವಾಧಿಕಾರಿಯಾಗಿದ್ದ ಎಂ.ಜಿ. ದೇವಸಹಾಯಂ ಅವರು ಹೇಳುವಂತೆ "ಒಂದು ಸಣ್ಣ ಕಾಲಾಳು ಪಡೆಯನ್ನು ಪ್ರಮುಖ ಕಾರ್ಯವೊಂದಕ್ಕೆ ಮುನ್ನುಗ್ಗಿಸುವ ಮೊದಲು ನಾಲ್ಕು ಗಂಟೆಗಳಿಗಿಂತಲೂ ಹೆಚ್ಚಿನ ಕಾಲಾವಕಾಶ ನೀಡಲಾಗಿರುತ್ತದೆ." ಆದರೆ ಇಷ್ಟು ದೊಡ್ಡ ಜನಸಂಖ್ಯೆಗೆ ನೀಡಿದ್ದು ತೀರಾ ಕಡಿಮೆ ಸಮಯ. ನಾವು ವಲಸೆ ಕಾರ್ಮಿಕರ ತೀರ್ಮಾನವನ್ನು ಒಪ್ಪುತ್ತೇವೋ, ಬಿಡುತ್ತೇವೋ ಅದು ಬೇರೆ ವಿಷಯ, ಆದರೆ ಅವರು ಹಾಗೆ ಹೊರಡಲು ಮಾಡಿದ ತೀರ್ಮಾನ ಸರಿಯಾಗಿಯೇ ಇತ್ತು. ಯಾಕೆಂದರೆ ಸರಕಾರಗಳು, ಕಾರ್ಖಾನೆ ಮಾಲಿಕರು ಮತ್ತು ನಮ್ಮಂತಹ ಮಧ್ಯಮ ವರ್ಗದ ಉದ್ಯೋಗದಾತರು ಎಷ್ಟು ನಂಬಿಕಸ್ಥರಲ್ಲದವರು, ಕ್ರೂರಿಗಳು ಎನ್ನುವುದನ್ನು ಪ್ರತಿಕ್ಷಣವೂ ಅವರೆದುರು ಸಾಬೀತುಗೊಳಿಸುತ್ತಿದ್ದೇವೆ. ಮತ್ತು ಅವರು ಹಾಗೆ ಊರುಗಳಿಗೆ ಹೋಗುವುದನ್ನು ಕಾನೂನಿನ ಮೂಲಕ ತಡೆಯುವುದರೊಂದಿಗೆ ನಾವು ಅದನ್ನು ಮತ್ತಷ್ಟು ಸಾಬೀತುಗೊಳಿಸುತ್ತಿದ್ದೇವೆ.

ನೀವು ಭಯವನ್ನು ಸೃಷ್ಟಿಸಿದಿರಿ. ಇಡೀ ದೇಶದಲ್ಲಿ ಸಂಪೂರ್ಣ ಅವ್ಯವಸ್ಥೆಯನ್ನು ಸೃಷ್ಟಿಸಿದಿರಿ, ಅದು ಲಕ್ಷಾಂತರ ಜನರನ್ನು ಬೀದಿಗೆ ತಂದಿತು. ಮುಚ್ಚಿದ ಕಲ್ಯಾಣ ಮಂಟಪಗಳು, ಶಾಲೆಗಳು ಮತ್ತು ಕಾಲೇಜುಗಳು ಮತ್ತು ಸಮುದಾಯ ಕೇಂದ್ರಗಳನ್ನು ನಾವು ನಿರಾಶ್ರಿತರು ಮತ್ತು ಮನೆಯಿಲ್ಲದ ಜನರಿಗೆ ಆಶ್ರಯ ತಾಣಗಳಾಗಿ ಪರಿವರ್ತಿಸಬಹುದಿತ್ತು. ಆದರೆ ಬದಲಿಗೆ ನಾವು ಸ್ಟಾರ್ ಹೋಟೆಲ್‌ಗಳನ್ನು ವಿದೇಶಿಯರಿಗಾಗಿ ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಿದ್ದೇವೆ.

ನಾವು ವಲಸೆ ಕಾರ್ಮಿಕರಿಗೆಂದು ರೈಲುಗಳನ್ನು ವ್ಯವಸ್ಥೆ ಮಾಡಿ ಅದಕ್ಕೂ ಪೂರ್ಣ ಶುಲ್ಕವನ್ನು ವಿಧಿಸುತ್ತೇವೆ. ನಂತರ ನಂತರ ನಾವು ಎಸಿ ರೈಲು ಮತ್ತು ರಾಜಧಾನಿ ಕ್ಲಾಸ್ ದರವಾದ ರೂ. 4,500 ಶುಲ್ಕ ವಿಧಿಸುತ್ತೇವೆ. ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲೆಂದೇ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು ಎಂದು ಹೇಳುತ್ತೀರಿ, ಅವರೆಲ್ಲರೂ ಸ್ಮಾರ್ಟ್‌ಫೋನ್‌ ಹೊಂದಿದ್ದಾರೆ ಮತ್ತು ಅದರ ಮೂಲಕ ಟಿಕೇಟ್‌ ಖರೀದಿ ಮಾಡುತ್ತಾರೇನೋ ಎನ್ನುವಂತೆ.

ನಂತರ ಕರ್ನಾಟಕದ ಮುಖ್ಯಮಂತ್ರಿ ಬಿಲ್ಡರ್‌ಗಳನ್ನು ಭೇಟಿ ಮಾಡಿದ ನಂತರ ರೈಲುಗಳನ್ನು ರದ್ದುಗೊಳಿಸುತ್ತಾರೆ. ಇದಕ್ಕೆ ಕಾರಣ ಬಿಲ್ಡರ್‌ಗಳು ತಮ್ಮ ಗುಲಾಮರು ಓಡಿ ಹೋಗುತ್ತಿದ್ದಾರೆಂದು ದೂರು ಹೇಳಿಕೊಂಡಿದ್ದು. ಈಗ ನೀವು ಅದೇ ಗುಲಾಮರ ದಂಗೆಯ ಸಾಕ್ಷಿಗಳಾಗುತ್ತಿದ್ದೀರಿ.

ನಮ್ಮದು ಬಡವರಿಗೆ ಒಂದು ಬಗೆಯ ನೀತಿಯಾದರೆ ಉಳಿದವರಿಗೆ ಇನ್ನೊಂದು ನೀತಿ. ನೀವು ಅಗತ್ಯ ಸೇವೆಗಳ ಪಟ್ಟಿ ಮಾಡುವಾಗ ಬಡವರು ಬಹಳ ಅಗತ್ಯವೆಂದು ಪರಿಗಣಿಸುತ್ತೀರಿ. ಬಡ ದಾದಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಮಿಕರು, ವಿದ್ಯುತ್ ಕಾರ್ಮಿಕರು, ಇಂಧನ ಕಾರ್ಮಿಕರು ಮತ್ತು ಕಾರ್ಖಾನೆಯ ಕಾರ್ಮಿಕರು ಇವರೆಲ್ಲರೂ ಅಗತ್ಯವೆಂದು ಎನ್ನಿಸುತ್ತದೆ ಆದರೆ ವೈದ್ಯರಲ್ಲ. ಇದ್ದಕ್ಕಿದ್ದಂತೆ ಈ ದೇಶದ ಶ್ರೀಮಂತ ವರ್ಗ ಎಷ್ಟು ಅನಗತ್ಯ ಎಂದು ನೀವು ತಿಳಿದುಕೊಳ್ಳುತ್ತೀರಿ.

PHOTO • M. Palani Kumar ,  Jyoti Patil ,  Pallavi Prasad ,  Yashashwini & Ekta

ಕಳೆದ ಹಲವಾರು ದಶಕಗಳಿಂದ ವಲಸೆ ನಡೆಯುತ್ತಿದೆ. ಮತ್ತು ಲಾಕ್‌ಡೌನ್‌ಗೆ ಮುಂಚೆಯೇ ವಲಸಿಗರ ಪರಿಸ್ಥಿತಿ ಭೀಕರವಾಗಿತ್ತು. ಒಟ್ಟಾರೆಯಾಗಿ, ನಾವು ವಲಸೆ ಕಾರ್ಮಿಕರನ್ನು ಸಹಜ ಕಾಲದಲ್ಲಿ ನಡೆಸಿಕೊಳ್ಳುವ ರೀತಿಯನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?

ಅನೇಕ ರೀತಿಯ ವಲಸಿಗರಿದ್ದಾರೆ. ವಲಸೆಯಲ್ಲಿರುವ ವರ್ಗ ವ್ಯತ್ಯಾಸಗಳನ್ನು ನೀವು ಅರ್ಥಮಾಡಿಕೊಳ್ಳಬೇಕು. ನಾನು ಹುಟ್ಟಿದ್ದು ಚೆನ್ನೈಯಲ್ಲಿ. ಅದರ ನಂತರ ನಾನು ಮುಂಬೈಗೆ ಬಂದು ಕಳೆದ 36 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ. ನಾನು ಒಂದು ನಿರ್ದಿಷ್ಟ ಜಾತಿ ಮತ್ತು ವರ್ಗದಲ್ಲಿ ಜನಿಸಿದ್ದರಿಂದ ಈ ಪ್ರತಿಯೊಂದು ಹಂತಗಳು ನನಗೆ ಪ್ರಯೋಜನವನ್ನು ನೀಡಿವೆ. ನನಗೆ ಸಾಮಾಜಿಕ ಬಂಡವಾಳ ಮತ್ತು ಸಂಪರ್ಕಗಳಿವೆ.

ಕೆಲವು ರೀತಿಯ ವಲಸಿಗರು ದೀರ್ಘಕಾಲದ ವಲಸೆ ಹೋಗುತ್ತಾರೆ. ಅವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಿ ಅಲ್ಲಿಯೇ ನೆಲೆಸುತ್ತಾರೆ.

ನಂತರ ಸಾಂದರ್ಭಿಕ ವಲಸಿಗರಿದ್ದಾರೆ. ಉದಾಹರಣೆಗೆ, ಮಹಾರಾಷ್ಟ್ರದ ಕಬ್ಬಿನ ಕೆಲಸಗಾರರು ಕೇವಲ ಐದು ತಿಂಗಳು ಕರ್ನಾಟಕಕ್ಕೆ ವಲಸೆ ಹೋಗುತ್ತಾರೆ. ಅಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ ನಂತರ ಅವರು ಹಳ್ಳಿಗಳಿಗೆ ಮರಳುತ್ತಾರೆ. ಪ್ರವಾಸಿ ಋತುವಿನಲ್ಲಿ ರಾಯ್‌ಪುರಕ್ಕೆ ಹೋಗಿ ರಿಕ್ಷಾಗಳನ್ನು ಎಳೆಯುವ ವಲಸಿಗರು ಕಾಲಹಂಡಿಯಲ್ಲಿದ್ದಾರೆ. ಒಡಿಶಾದ ಕೊರಪುಟ್‌ನಿಂದ ಆಂಧ್ರಪ್ರದೇಶದ ವಿಜಯನಗರಕ್ಕೆ ಹೋಗಿ ಕೆಲವು ತಿಂಗಳು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವ ವಲಸಿಗರೂ ಇದ್ದಾರೆ.

ಇತರ ಗುಂಪುಗಳೂ ಇವೆ - ಆದರೆ ನಾವು ಹೆಚ್ಚು ಗಮನ ಹರಿಸಬೇಕಾಗಿರುವುದು ತಾತ್ಕಾಲಿಕ ನೆಲೆ ನಿಲ್ಲುವ, ಮುಂದಿನ ದುಡಿಮೆ ಎಲ್ಲೆಂದು ತಿಳಿದಿರದೆ ಕಷ್ಟಪಟ್ಟು ದುಡಿಯುವ ವಲಸೆ ಕಾರ್ಮಿಕರ ಕುರಿತು. ಈ ಕಾರ್ಮಿಕರಿಗೆ ಎಲ್ಲಿಗೆ ಹೋಗಬೇಕೆಂದು ತಿಳಿದಿರುವುದಿಲ್ಲ. ಅವರು ಗುತ್ತಿಗಾರನೊಂದಿಗೆ ಬರುತ್ತಾರೆ, ಮುಂಬೈನಲ್ಲಿ 90 ದಿನಗಳ ನಿರ್ಮಾಣದ ಕೆಲಸ ಮಾಡುತ್ತಾರೆ. ಮತ್ತು ಈ ಮೂರು ತಿಂಗಳ ನಂತರ, ಅವರ ಬಳಿ ಏನೂ ಉಳಿದಿರುವುದಿಲ್ಲ. ನಂತರ ಗುತ್ತಿಗೆದಾರನು ಅವರನ್ನು ಮಹಾರಾಷ್ಟ್ರದ ಇನ್ನೊಂದು ಭಾಗದಲ್ಲಿರುವ ಗುತ್ತಿಗೆದಾರನಿಗೆ ಪರಿಚಯಿಸಿ ಅಲ್ಲಿಗೆ ಕಳುಹಿಸುತ್ತಾನೆ. ಒಟ್ಟಾರೆ ಇದು ಕೊನೆಯಿಲ್ಲದ ಅಭದ್ರತೆಯಿಂದ ಕೂಡಿದ ಬಹಳ ಸಂಕಷ್ಟದಿಂದ ಕೂಡಿದ ಜೀವನ. ಈ ರೀತಿಯ ವಲಸಿಗರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ.

ವಲಸೆ ಕಾರ್ಮಿಕರ ಸ್ಥಿತಿ ಯಾವಾಗ ಹದಗೆಡಲು ಪ್ರಾರಂಭಿಸಿತು?

ವಲಸೆ ನೂರು ವರ್ಷಗಳಿಂದಲೂ ನಡೆಯುತ್ತಿದೆ. ಆದರೆ ಕಳೆದ 28 ವರ್ಷಗಳಲ್ಲಿ, ವಲಸೆಯಲ್ಲಿ ಸ್ಫೋಟಕ ಹೆಚ್ಚಳ ಕಂಡುಬಂದಿದೆ. 2011ರ ಜನಗಣತಿಯ ಪ್ರಕಾರ, 2001ರಿಂದ 2011ರವರೆಗಿನ ಅವಧಿಯಲ್ಲಿ ಭಾರತವು ಸ್ವಾತಂತ್ರ್ಯದ ನಂತರದ ಅತಿ ಹೆಚ್ಚು ವಲಸೆಯನ್ನು ಕಂಡಿದೆ.

2011ರ ಜನಗಣತಿಯಲ್ಲಿ 1921ರ ನಂತರ ಮೊದಲ ಬಾರಿಗೆ ಭಾರತದಲ್ಲಿ ನಗರ ಜನಸಂಖ್ಯೆಯ ಬೆಳವಣಿಗೆ ಗ್ರಾಮೀಣ ಜನಸಂಖ್ಯೆಯ ಬೆಳವಣಿಗೆಗಿಂತ ಹೆಚ್ಚಾಗಿದೆ ಎಂದು ತೋರಿಸಿದೆ. ನಗರ ಪ್ರದೇಶಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯ ಪ್ರಮಾಣ ತೀರಾ ಕಡಿಮೆ ಇದ್ದರೂ, ನಗರ ಪ್ರದೇಶಗಳಲ್ಲಿನ ಜನಸಂಖ್ಯೆಯು ಹೆಚ್ಚುತ್ತಿದೆ.

2011ರ ಜನಗಣತಿಯ ಕುರಿತು ತಜ್ಞರೊಂದಿಗೆ ಟಿವಿಯಲ್ಲಿ ನಡೆಸಲಾದ ಸಂದರ್ಶನಗಳು ಅಥವಾ ಚರ್ಚೆಗಗಳನ್ನು ಮತ್ತೆ ಆಲಿಸಿ. ಅವರಲ್ಲಿ ಎಷ್ಟು ಮಂದಿ ವಲಸೆ ಕಾರ್ಮಿಕರ ಬಗ್ಗೆ ಅಥವಾ ಹಳ್ಳಿಯಿಂದ ನಗರಕ್ಕೆ ಅಥವಾ ಹಳ್ಳಿಯಿಂದ ಹಳ್ಳಿಗೆ ವಲಸೆ ಹೋಗುವ ಬಗ್ಗೆ ಚರ್ಚಿಸಿದ್ದಾರೆ?

PHOTO • Parth M.N.
PHOTO • Varsha Bhargavi

ಗ್ರಾಮೀಣ ಪ್ರದೇಶದ ಬಿಕ್ಕಟ್ಟಿನ ಬಗ್ಗೆ ಮಾತನಾಡದೆ ವಲಸೆಯ ಬಗ್ಗೆ ಯಾವುದೇ ಚರ್ಚೆ ಪೂರ್ಣಗೊಳ್ಳುವುದಿಲ್ಲ ಏಕೆಂದರೆ ಅಲ್ಲಿಯೇ ವಲಸೆಯ ಮೂಲಗಳು ಅಡಗಿವೆ. ಅಲ್ಲವೆ?

ನಾವು ಕೃಷಿಯನ್ನು ಹಾಳುಮಾಡಿದ್ದೇವೆ ಮತ್ತು ಅದರೊಂದಿಗೆ ಶತಕೋಟಿ ಜನರ ಜೀವನೋಪಾಯವನ್ನೂ ಹಾಳುಮಾಡಿದ್ದೇವೆ. ಅದೇ ಸಮಯದಲ್ಲಿ, ನಾವು ಹಳ್ಳಿಯ ಎಲ್ಲಾ ಜೀವನೋಪಾಯಗಳ ಮೇಲೆ ದಾಳಿ ಮಾಡಿದ್ದೇವೆ.  ಕೈಮಗ್ಗ ಮತ್ತು ಕರಕುಶಲ ವಸ್ತುಗಳು ಕೃಷಿಯ ನಂತರ ದೇಶದ ಎರಡನೇ ಅತಿದೊಡ್ಡ ಉದ್ಯೋಗ ಮೂಲವಾಗಿದ್ದವು. ದೋಣಿಗಾರರು, ಮೀನುಗಾರರು, ಶೇಂದಿ ತಯಾರಿಸುವವರು, ಆಟಿಕೆ ತಯಾರಕರು, ನೇಕಾರರು, ವರ್ಣಚಿತ್ರಕಾರರು - ಹೀಗೆ ಎಲ್ಲವನ್ನೂ ಒಂದರ ನಂತರ ಒಂದರಂತೆ ಕೆಡವಲಾಯಿತು. ಅವರಿಗೆ ವಲಸೆಯಲ್ಲದೆ ಬೇರೆ ಆಯ್ಕೆ ಇದೆಯೇ?

ವಲಸೆ ಕಾರ್ಮಿಕರು ಮತ್ತೆ ನಗರಕ್ಕೆ ಮರಳುತ್ತಾರೆಯೇ ಎಂಬುದು ಸದ್ಯದ ಪ್ರಶ್ನೆ. ಆದರೆ ಅವರು ಮೊದಲಿಗೆ ಯಾಕೆ ಇಲ್ಲಿಗೆ ಬಂದರು?

ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ನಗರಕ್ಕೆ ಮರಳುತ್ತಾರೆ ಎಂದು ನನಗೆ ಖಾತ್ರಿಯಿದೆ. ಇದಕ್ಕೆ ಬಹಳ ಸಮಯ ಹಿಡಿಯಬಹುದು. ಆದರೆ ನಮಗಾಗಿ ಅಗ್ಗದ ಕಾರ್ಮಿಕರ ಸೈನ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಬಹಳ ಹಿಂದೆಯೇ ಹಳ್ಳಿಯಲ್ಲಿ ಅವರ ಎಲ್ಲ ಪರ್ಯಾಯ  ಆಯ್ಕೆಗಳನ್ನು ನಾಶಗೊಳಿಸಿಯಾಗಿದೆ.

ಹಲವಾರು ರಾಜ್ಯಗಳಲ್ಲಿನ ಕಾರ್ಮಿಕ ಕಾನೂನುಗಳ ಉದ್ದೇಶಿತ ಸಡಿಲಿಕೆಗಳನ್ನು ನೀವು ಹೇಗೆ ನೋಡುತ್ತೀರಿ?

ಮೊದಲನೆಯದಾಗಿ, ಈ ಕಾಯ್ದೆಯು ಸಂವಿಧಾನ ಮತ್ತು ಕಾನೂನಿನ ಉಲ್ಲಂಘನೆಯಾಗಿರುತ್ತದೆ, ಏಕೆಂದರೆ ಇದನ್ನು ಸುಗ್ರೀವಾಜ್ಞೆ ತರುವ ಮೂಲಕ ಮಾಡಲಾಗುತ್ತದೆ. ಎರಡನೆಯದಾಗಿ, ಅವರು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಜೀತ ಪದ್ಧತಿಯನ್ನು ಮತ್ತೆ ಪ್ರಾರಂಭಿಸುತ್ತಿದ್ದಾರೆ ಎಂಬ ನೇರ ಘೋಷಣೆಯಾಗಿದೆ. ಮೂರನೆಯದಾಗಿ, ಕೆಲಸದ ಸಮಯದ ಸಾರ್ವತ್ರಿಕ ನಿಯಮಕ್ಕಿಂತ ನಾವು 100 ವರ್ಷಗಳ ಹಿಂದೆ ಹೋಗಲಿದ್ದೇವೆ. ಪ್ರತಿ ಕಾರ್ಮಿಕ ಘೋಷಣೆಯಲ್ಲಿ ಎಂಟು ಗಂಟೆಗಳ ಕೆಲಸದ ಅವಧಿಯನ್ನು ಗೌರವಿಸಿ ಒಪ್ಪಿಕೊಂಡಿದೆ ಎನ್ನುವುದು ಮೂಲ ಸತ್ಯ.

ಗುಜರಾತ್ ಅಧಿಸೂಚನೆಯನ್ನು ನೋಡಿ. ಕಾರ್ಮಿಕರಿಗೆ ಯಾವುದೇ ಅಧಿಕಾವಧಿ ನೀಡಲಾಗುವುದಿಲ್ಲ ಎಂದು ಅದು ಹೇಳಿದೆ. ಅಧಿಕಾವಧಿ ಕೆಲಸಕ್ಕೆ ಹಣ ನೀಡುವುದಾಗಿ ರಾಜಸ್ಥಾನ ಸರ್ಕಾರ ಹೇಳಿದೆ. ಆದರೆ ಅದೂ ವಾರದಲ್ಲಿ 24 ಗಂಟೆಗಳವರೆಗೆ ಮಾತ್ರ. ಇದರರ್ಥ ನೌಕರರು ದಿನಕ್ಕೆ 12 ಗಂಟೆ, ವಾರದಲ್ಲಿ ಆರು ದಿನ ಕೆಲಸ ಮಾಡಬೇಕಾಗುತ್ತದೆ.

ಈ ಎಲ್ಲ ವಿಷಯಗಳನ್ನು ಕಾರ್ಖಾನೆಗಳ ಕಾಯ್ದೆಯಿಂದ ವಿನಾಯಿತಿ ನೀಡುವ ಮೂಲಕ ಮಾಡಲಾಗಿದೆ. ಓವರ್‌ಟೈಮ್ ಸೇರಿದಂತೆ ಒಬ್ಬ ಕಾರ್ಮಿಕನಿಂದ ಗರಿಷ್ಠ 60 ಗಂಟೆಗಳ ಕಾಲ ಕೆಲಸ ಮಾಡಿಸಬಹುದೆಂದು ಕಾಯ್ದೆ ಹೇಳುತ್ತದೆ. ಇನ್ನು ಮುಂದೆ ದಿನಕ್ಕೆ 12 ಗಂಟೆಗಳು ವಾರದಲ್ಲಿ 72 ಗಂಟೆಗಳ ಕೆಲಸದ ಅವಧಿಯಿರುತ್ತದೆ.

ಗಂಟೆಗಳ ಕೆಲಸ ಎಂದರೆ ಉತ್ಪಾದಕತೆಯನ್ನು ಹೆಚ್ಚಿಸುವುದು ಎಂಬ ಗ್ರಹಿಕೆಯಿದೆ. ಆದಾಗ್ಯೂ, ಈ ಗ್ರಹಿಕೆ ಇತಿಹಾಸದ ಅನೇಕ ಅಧ್ಯಯನಗಳಿಗೆ ವಿರುದ್ಧವಾಗಿದೆ. ಹಿಂದೆ, ಅನೇಕ ಕಾರ್ಖಾನೆಗಳು ಎಂಟು ಗಂಟೆಗಳ ಕೆಲಸದ ದಿನವನ್ನು ಅಳವಡಿಸಿಕೊಂಡಿವೆ ಏಕೆಂದರೆ ಅವರದೇ ಆದ ಸಮೀಕ್ಷೆಗಳು ಆಯಾಸ ಮತ್ತು ಬಳಲಿಕೆಯಿಂದಾಗಿ ಹೆಚ್ಚಿನ ಕೆಲಸದ ಸಮಯ ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿವೆ.

ಇವೆಲ್ಲವನ್ನೂ ಮೀರಿ, ಇದು ಮಾನವನ ಮೂಲಭೂತ ಹಕ್ಕುಗಳ ಮೇಲಿನ ಆಕ್ರಮಣವಾಗಿದೆ. ಈ ಮೂಲಕ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡಲಾಗುತ್ತಿದೆ. ಮತ್ತು ಇದರಲ್ಲಿ, ರಾಜ್ಯಗಳು ಕಾರ್ಪೋರೇಟ್‌ಗಳಿಗೆ ಗುಲಾಮರನ್ನು ಒದಗಿಸುವ ದಲ್ಲಾಳಿಗಳ ಪಾತ್ರವನ್ನು ನಿರ್ವಹಿಸುತ್ತಿವೆ. ಮತ್ತು ಖಂಡಿತ ಇದು ಸಮಾಜದ ದುರ್ಬಲ ವರ್ಗಗಳಾದ ದಲಿತರು, ಬುಡಕಟ್ಟು ಜನಾಂಗದವರು ಮತ್ತು ಮಹಿಳೆಯರ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎನ್ನವುದನ್ನು ಖಚಿತಪಡಿಸಿಕೊಳ್ಳುತ್ತಿವೆ.

ಭಾರತದಲ್ಲಿ ತೊಂಬತ್ತಮೂರು ಪ್ರತಿಶತ ಕಾರ್ಮಿಕರಿಗೆ ಈಗಲೂ ಯಾವುದೇ ಹಕ್ಕುಗಳಿಲ್ಲ ಏಕೆಂದರೆ ಅವರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಾರೆ. ಆದ್ದರಿಂದ ಇದೆಲ್ಲವನ್ನೂ ಮಾಡುವಾಗ, "ಉಳಿದ ಏಳು ಶೇಕಡಾ ಹಕ್ಕುಗಳನ್ನು ನಾಶ ಮಾಡೋಣ" ಎಂದು ಹೇಳುತ್ತಿದ್ದೀರಿ. ಕಾರ್ಮಿಕ ಕಾನೂನುಗಳಲ್ಲಿನ ಬದಲಾವಣೆಗಳು ಹೂಡಿಕೆಯನ್ನು ಹೆಚ್ಚಿಸುತ್ತವೆ ಎಂದು ರಾಜ್ಯಗಳು ಹೇಳಿಕೊಳ್ಳುತ್ತವೆ. ಆದರೆ ಉತ್ತಮ ಮೂಲಸೌಕರ್ಯ, ಉತ್ತಮ ಪರಿಸ್ಥಿತಿಗಳು ಮತ್ತು ಸ್ಥಿರ ಸಮಾಜ ಇರುವಲ್ಲಿ ಮಾತ್ರ ಹೂಡಿಕೆ ಬೆಳೆಯುತ್ತದೆ. ಉತ್ತರಪ್ರದೇಶದಲ್ಲಿ ಇದೆಲ್ಲವೂ ಇದ್ದಿದ್ದರೆ, ಅದು ಭಾರತದ ಉದ್ದಗಲಕ್ಕೂ ಜನರು ವಲಸೆ ಹೋಗುವ ಜನರ ರಾಜ್ಯವಾಗಿರುತ್ತಿರಲಿಲ್ಲ.

PHOTO • Guthi Himanth ,  Amrutha Kosuru ,  Sanket Jain ,  Purusottam Thakur

ಈ ನಡೆಯು ಬೀರಬಹುದಾದ ಪರಿಣಾಮಗಳು ಯಾವುವು?

ಸಾಂವಿಧಾನಿಕ ಮತ್ತು ಕಾನೂನು ಸಂಕೀರ್ಣತೆಗಳ ಕಾರಣದಿಂದಾಗಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶವು ಮೂರು ಅಥವಾ ನಾಲ್ಕು ಕಾನೂನುಗಳನ್ನು ಮೂರು ವರ್ಷಗಳವರೆಗೆ ಅಮಾನತುಗೊಳಿಸಿದೆ. ಪರಿಸ್ಥಿತಿ ಎಷ್ಟೇ ಜಟಿಲವಾಗಿದ್ದರೂ ಕಾರ್ಮಿಕರು ಕೆಲಸ ಮಾಡಬೇಕಾಗುತ್ತದೆ ಎಂದು ನೀವು ಹೇಳುತ್ತಿರುವಿರಿ. ನೀವು ಈ ಜನರೊಂದಿಗೆ ಅಮಾನವೀಯವಾಗಿ ವರ್ತಿಸುತ್ತಿದ್ದೀರಿ ಮತ್ತು ಗಾಳಿ ಸೇವಿಸುವ, ಶೌಚಾಲಯಕ್ಕೆ ಹೋಗುವ ಮತ್ತು ಹೊರಹೋಗುವ ಹಕ್ಕನ್ನು ಹೊಂದಿಲ್ಲ ಎಂದು ಹೇಳುತ್ತಿದ್ದೀರಿ. ಈ ಸುಗ್ರೀವಾಜ್ಞೆಯನ್ನು ಮುಖ್ಯಮಂತ್ರಿಗಳು ಹೊರಡಿಸಿದ್ದಾರೆ ಮತ್ತು ಇದರ ಹಿಂದೆ ಯಾವುದೇ ಸಾಂವಿಧಾನಿಕ ಕಾರ್ಯವಿಧಾನವನ್ನು ಅಳವಡಿಸಲಾಗಿಲ್ಲ.

ಮುಂದುವರಿಯಲು ನಾವು ಏನು ಮಾಡಬೇಕು?

ಈ ದೇಶದಲ್ಲಿ ಕಾರ್ಮಿಕರ ಸ್ಥಿತಿಯನ್ನು ಸುಧಾರಿಸುವುದನ್ನು ಬಿಟ್ಟು ಬೇರೆ ಪರ್ಯಾಯಗಳಿಲ್ಲ. ಸಮಾಜದಲ್ಲಿನ ಭಾರಿ ಅಸಮಾನತೆಯಿಂದಾಗಿ, ಅವರು ಇಂತಹ ಸಾಂಕ್ರಾಮಿಕ ರೋಗಗಳಿಗೆ ಹೆಚ್ಚು ಒಳಗಾಗುತ್ತಾರೆ. ನೀವು ಮಾಡಲು ಯೋಜಿಸುತ್ತಿರುವುದು ನೀವು ಅಂಗೀಕರಿಸಿದ ಅನೇಕ ಅಂತರರಾಷ್ಟ್ರೀಯ ಒಪ್ಪಂದಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಬಿ.ಆರ್.ಅಂಬೇಡ್ಕರ್ ಅವರಿಗೆ ಈ ಬಗ್ಗೆ ಸಂಪೂರ್ಣವಾಗಿ ತಿಳಿದಿತ್ತು. ನಾವು ಕೇವಲ ಸರ್ಕಾರಗಳ ಬಗ್ಗೆ ಮಾತನಾಡಬಾರದು ಎಂದು ಅವರು ಅರ್ಥಮಾಡಿಕೊಂಡಿದ್ದರು. ಶ್ರಮಕ್ಕೆ ವ್ಯವಹಾರದ ಕರುಣೆಯ ಅಗತ್ಯವಿದೆ, ಅದರ ಬಗ್ಗೆ ಮಾತನಾಡಬೇಕಾಗಿದೆ. ಈಗ ಅಂಬೇಡ್ಕರ್ ಈ ಹಿನ್ನೆಲೆಯಲ್ಲಿ ತಂದ ಕಾನೂನುಗಳನ್ನು ಸರ್ಕಾರಗಳು ರದ್ದುಪಡಿಸುತ್ತಿವೆ.

ರಾಜ್ಯ ಸರ್ಕಾರವು ಕಾರ್ಮಿಕ ಇಲಾಖೆಯನ್ನು ಹೊಂದಿದೆ. ಆ ಖಾತೆಯ ಪಾತ್ರ ಹೇಗಿರಬೇಕು?

ಯಾವುದೇ ರಾಜ್ಯದ ಕಾರ್ಮಿಕ ಇಲಾಖೆಯ ಮುಖ್ಯ ಜವಾಬ್ದಾರಿ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು. ಆದರೆ ಈಗ ಕೇಂದ್ರದ ಕಾರ್ಮಿಕ ಮಂತ್ರಿ ಕಾರ್ಪೋರೇಷನ್‌ಗಳ ಮಾತನ್ನು ಕೇಳಿ ಎಂದು ಸಲಹೆ ನೀಡುತ್ತಿದ್ದಾರೆ. ನೀವು ಬದಲಾವಣೆಯನ್ನು ಬಯಸಿದರೆ, ಮೊದಲು ಸಮಾಜವನ್ನು ಬದಲಾಯಿಸಬೇಕು. ಇಡೀ ಜಗತ್ತಿನಲ್ಲಿ ಹೆಚ್ಚು ಅಸಮಾನತೆಯನ್ನು ಹೊಂದಿರುವ ನಿಮ್ಮ ಸಮಾಜದ ವಿಷಯದಲ್ಲಿ ನೀವು ಏನನ್ನೂ ಮಾಡದಿದ್ದರೆ, ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ. ಈ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ.

ಮನೆಗೆ ಹಿಂದಿರುಗುತ್ತಿರುವ ಹೆಚ್ಚಿನ ಕಾರ್ಮಿಕರು ಯುವಕರು ಮತ್ತು ಅವರು ಕೋಪಗೊಂಡಿದ್ದಾರೆ. ನಾವು ಜ್ವಾಲಾಮುಖಿಯ ಮೇಲೆ ಕುಳಿತಿದ್ದೇವೆಯೇ?

ಜ್ವಾಲಾಮುಖಿ ಸ್ಫೋಟಿಸುತ್ತಿದೆ. ನಾವು ಅದನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತಿದ್ದೇವೆ. ಸರ್ಕಾರಗಳು, ಮಾಧ್ಯಮಗಳು, ಕಾರ್ಖಾನೆ ಮಾಲೀಕರು ಮತ್ತು ಸಮಾಜವಾಗಿ ನಮ್ಮ ಬೂಟಾಟಿಕೆಗಳನ್ನು ನೀವು ನೋಡುತ್ತೀರಿ.

ಮಾರ್ಚ್ 26 ರವರೆಗೆ ಈ ವಲಸೆ ಕಾರ್ಮಿಕರ ಬಗ್ಗೆ ನಮಗೆ ಏನೂ ತಿಳಿದಿರಲಿಲ್ಲ. ಇದ್ದಕ್ಕಿದ್ದಂತೆ, ನಾವು ಲಕ್ಷಾಂತರ ಕಾರ್ಮಿಕರನ್ನು ಬೀದಿಗಳಲ್ಲಿ ನೋಡಿದೆವು. ನಾವು ಅವರ ಸೇವೆಗಳನ್ನು ಕಳೆದುಕೊಂಡ ಕಾರಣ ನಮಗೆ ನೋವಾಯಿತು. ಮಾರ್ಚ್ 26 ರವರೆಗೆ, ನಮಗೆ ಯಾವುದೇ ಅವರ ಕುರಿತು ಯಾವುದೇ ಕಾಳಜಿಯಿರಲಿಲ್ಲ. ಅವರ ಅಸ್ತಿತ್ವ ನಮಗೆ ತಿಳಿದಿರಲಿಲ್ಲ. ನಾವು ಅವರನ್ನು ನಮ್ಮಂತೆಯೇ ಸಮಾನ ಹಕ್ಕು ಹೊಂದಿರುವ ವ್ಯಕ್ತಿ ಎಂದು ಭಾವಿಸಲಿಲ್ಲ. ಹಳೆಯ ಮಾತೊಂದು ಇದೆ: ʼಬಡವರು ಸಾಕ್ಷರರಾದಾಗ ಶ್ರೀಮಂತರು ತಮ್ಮ ಪಲ್ಲಕ್ಕಿ ಹೊರುವವರನ್ನು ಕಳೆದುಕೊಳ್ಳುತ್ತಾರೆʼ ಎಂದು. ಈಗ ಇದ್ದಕ್ಕಿದ್ದಂತೆ ನಾವು ನಮ್ಮ ಪಲ್ಲಕ್ಕಿ ಹೊರುವವರನ್ನು ಕಳೆದುಕೊಂಡಿದ್ದೇವೆ.

PHOTO • Sudarshan Sakharkar
PHOTO • Sudarshan Sakharkar

ವಲಸೆ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಇದು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ. ಪೌಷ್ಟಿಕಾಂಶದ ಕೊರತೆ ಕಂಡುಬಂದಲ್ಲೆಲ್ಲ ಅದರಿಂದ ಬಳುವವರು ಹೆಣ್ಣು ಮಕ್ಕಳು ಮತ್ತು ಮಹಿಳೆಯರೇ ಆಗಿರುತ್ತಾರೆ. ಮತ್ತು ಅವರು ಆರೋಗ್ಯದ ವಿಷಯದಲ್ಲೂ ನಂಬಲಾಗದಷ್ಟು ಹೆಚ್ಚು ದುರ್ಬಲರಾಗಿದ್ದಾರೆ. ಹೆಣ್ಣುಮಕ್ಕಳ ಆರೋಗ್ಯದ ವಿಷಯದಲ್ಲಿ ಹಲವು ವಿಧಗಳಲ್ಲಿ ಬಳಲುತ್ತಿದ್ದಾರೆ, ಅವುಗಳಲ್ಲಿ ಒಂದೆಂದರೆ ಲಕ್ಚಾಂತರ ಹೆಣ್ಣುಮಕ್ಕಳಿಗೆ ಶಾಲೆಯಲ್ಲಿ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ ದೊರೆಯುತ್ತಿತ್ತು ಆದರೆ ಈಗ ಶಾಲೆಗಳು ಮುಚ್ಚಿವೆ ಹೀಗಿದ್ದರೂ ಅವರಿಗೆ ನ್ಯಾಪ್ಕಿನ್‌ ಒದಗಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗಿಲ್ಲ. ಇದು ಹೆಣ್ಣುಮಕ್ಕಳು ತಮ್ಮ ಮುಟ್ಟಿನ ದಿನಗಳಲ್ಲಿ ಅಪಾಯಕಾರಿ ಅನೈರ್ಮಲ್ಯದಿಂದ ಕೂಡಿದ ಪರ್ಯಾಯಗಳನ್ನು ಬಳಸುವಂತೆ ಮಾಡುತ್ತದೆ.

ಕಾಲ್ನಡಿಗೆಯಲ್ಲಿ ಮನೆಗೆ ಮರಳುವ ವಲಸೆ ಕಾರ್ಮಿಕರ ದುಃಸ್ಥಿತಿಯ ಬಗ್ಗೆ ಏನು ಹೇಳುತ್ತೀರಿ?

ವಲಸೆ ಕಾರ್ಮಿಕರು ಆಗಾಗ್ಗೆ ಬಹಳ ದೂರ ನಡೆಯುವುದಿದೆ. ಉದಾಹರಣೆಗೆ, ದಕ್ಷಿಣ ರಾಜಸ್ಥಾನದ ವಲಸೆ ಕಾರ್ಮಿಕರು ತಮ್ಮ ಕಾರ್ಖಾನೆ ಅಥವಾ ಮದ್ಯಮ ವರ್ಗದ ಉದ್ಯೋಗದಾತರಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಹಳ್ಳಿಗಳಿಗೆ ಮರಳಿ ನಡೆಯುತ್ತಾರೆ. ಆದರೆ ಅವರು ಹಾಗೆ ನಡೆದ ಸಂದರ್ಭ ಬೇರೆಯಿತ್ತು.

ಅವರು 40 ಕಿಲೋಮೀಟರ್ ನಡೆದು, ನಂತರ ಧಾಬಾ ಅಥವಾ ಟೀ ಅಂಗಡಿಯಲ್ಲಿ ನಿಲ್ಲಿಸಿ, ಅಲ್ಲಿ ಕೆಲಸ ಮಾಡುತ್ತಾರೆ ಮತ್ತು ಅದಕ್ಕೆ ಪ್ರತಿಯಾಗಿ ಅವರಿಗೆ ಆಹಾರ ಸಿಗುತ್ತದೆ.ಅಲ್ಲಿಂದ ಅವರು ಬೆಳಿಗ್ಗೆ ಹೊರಡುತ್ತಾರೆ. ಮುಂದಿನ ದೊಡ್ಡ ಬಸ್ ನಿಲ್ದಾಣದಲ್ಲಿ - ಮತ್ತೆ ಹೀಗೆ ನಿಲ್ಲುತ್ತಾರೆ. ಹೀಗೆಯೇ ಮಾಡುತ್ತಾ ಮನೆಯ ದಾರಿ ಹಿಡಿದು ತಲುಪುತ್ತಾರೆ. ಈಗ ಆ ಸ್ಥಳಗಳೆಲ್ಲವೂ ಮುಚ್ಚಲ್ಪಟ್ಟಿದ್ದರಿಂದ, ಈ ಜನರು ಹಸಿವು ಮತ್ತು ಬಾಯಾರಿಕೆ, ಅತಿಸಾರ ಮತ್ತು ಇತರ ಕಾಯಿಲೆಗಳಿಗೆ ಬಲಿಯಾದರು.

ಅವರ ಸ್ಥಿತಿಯನ್ನು ಸುಧಾರಿಸಲು ಭವಿಷ್ಯದಲ್ಲಿ ನಾವೇನು ಮಾಡಬೇಕು?

ನಾವು ಅಭಿವೃದ್ಧಿವಾದವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಅಸಮಾನತೆಯನ್ನು ಬೃಹತ್ ಪ್ರಮಾಣದಲ್ಲಿ ಹೋಗಲಾಡಿಸಬೇಕು. ವಲಸೆ ಕಾರ್ಮಿಕರ ಸಂಕಟಕ್ಕೆ ಅಸಮಾನ ವಾತಾವರಣವೇ ಕಾರಣವಾಗಿದೆ.

ನಮ್ಮ ಸಂವಿಧಾನದಲ್ಲಿ ಅಡಗಿರುವ "ಎಲ್ಲರಿಗೂ: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ  ನ್ಯಾಯ..." ಇದರ ಪ್ರಾಮುಖ್ಯತೆಯನ್ನು ಅರಿತುಕೊಳ್ಳದೆ ನಾವು ಇದನ್ನು ಮಾಡಲು ಸಾಧ್ಯವಿಲ್ಲ. ಮತ್ತು ಸಾಮಾಜಿಕ ಮತ್ತು ಆರ್ಥಿಕ ನ್ಯಾಯವು ರಾಜಕೀಯ ನ್ಯಾಯಕ್ಕಿಂತ ಮುಂಚಿತವಾಗಿರುವುದು ಕಾಕತಾಳೀಯವಲ್ಲ. ಇದನ್ನು ಬರೆದ ಜನರಿಗೆ ಆದ್ಯತೆಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇತ್ತು ಎಂದು ನಾನು ಭಾವಿಸುತ್ತೇನೆ. ನಿಮ್ಮ ಸಂವಿಧಾನವು ನಿಮಗೆ ೀ ಕುರಿತು ಮಾರ್ಗದರ್ಶನ ನೀಡುತ್ತದೆ.

ಭಾರತದ ಶ್ರೀಮಂತವರ್ಗ ಮತ್ತು ಸರ್ಕಾರವು ಹಳೆಯ ಶೈಲಿಯ ಜೀವನ ವಿಧಾನಕ್ಕೆ ಮರಳುವ ಭರವಸೆಯಲ್ಲಿವೆ. ಆ ಭರವಸೆ ಹೆಚ್ಚು ಕ್ರೂರ ದಬ್ಬಾಳಿಕೆ, ದಬ್ಬಾಳಿಕೆ ಮತ್ತು ಹಿಂಸೆಗೆ ಕಾರಣವಾಗಲಿದೆ.

ಕವರ್ ಫೋಟೋ: ಸತ್ಯಪ್ರಕಾಶ್ ಪಾಂಡೆ

ಈ ಸಂದರ್ಶನವನ್ನು ಮೇ 13, 2020ರಂದು ಫಸ್ಟ್‌ಪೋಸ್ಟ್‌ನಲ್ಲಿ ಮೊದಲು ಪ್ರಕಟಿಸಲಾಯಿತು.

ಅನುವಾದ: ಶಂಕರ ಎನ್. ಕೆಂಚನೂರು

Parth M.N.

पार्थ एम एन हे पारीचे २०१७ चे फेलो आहेत. ते अनेक ऑनलाइन वृत्तवाहिन्या व वेबसाइट्ससाठी वार्तांकन करणारे मुक्त पत्रकार आहेत. क्रिकेट आणि प्रवास या दोन्हींची त्यांना आवड आहे.

यांचे इतर लिखाण Parth M.N.
Translator : Shankar N Kenchanuru

Shankar N Kenchanuru is a poet and freelance translator. He can be reached at [email protected]

यांचे इतर लिखाण Shankar N Kenchanuru