ನನ್ನ ಎಸ್‌ಎಸ್‌ಸಿ (ಸೆಕೆಂಡರಿ ಸ್ಕೂಲ್‌ ಸರ್ಟಿಫಿಕೇಟ್)‌ ಫಲಿತಾಂಶ ಬರುವುದರಲ್ಲಿತ್ತು ಆಗ ನನ್ನ ಸ್ಥಿತಿ ಹೇಗಿತ್ತೆಂದರೆ, ಬ್ಯಾಟ್‌ಮ್ಯಾನ್‌ ಒಬ್ಬನಿಂದ ಹೊಡೆಸಿಕೊಂಡ ಚೆಂಡಿನಂತಿತ್ತು ನನ್ನ ಪರಿಸ್ಥಿತಿ. ಆ ಚೆಂಡನ್ನು ಎಲ್ಲರೂ ಹೇಗೆ ಕುತೂಹಲದಿಂದ ಗಮನಿಸುತ್ತಿರುತ್ತಾರೆಂದು ನಿಮಗೆ ತಿಳಿದರಬಹುದು. ಅದು ಸಿಕ್ಸ್‌ ಹೋಗುತ್ತದೋ, ಫೋರ್‌ ಹೋಗುತ್ತದೋ ಎನ್ನುವುದರತ್ತಲೇ ಎಲ್ಲರ ಗಮನವಿರುತ್ತದೆ. ಒಂದು ವೇಳೆ ನಾನು ಫೇಲ್‌ ಆಗಿದ್ದರೆ ಏನಾಗಿರುತ್ತಿತ್ತು? ನನ್ನ ತಂದೆ ನನಗೆ ತಕ್ಷಣ ಮದುವೆ ಮಾಡಿಸುತ್ತಿದ್ದರು.

ಫಲಿತಾಂಶ ಹೊರಬಂದಾಗ ನಾನು ನಾನು 79.06 ಶೇಕಡಾ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದೆ ಮತ್ತು ಕೇವಲ ಒಂದು ಅಂಕದಿಂದ ಶಾಲೆಯಲ್ಲಿ ಹೆಚ್ಚು ಅಂಕ ಪಡೆದವರಲ್ಲಿ ಮೂರನೇ ಅತ್ಯುನ್ನತ ಸ್ಥಾನವನ್ನು ಕಳೆದುಕೊಂಡಿದ್ದೆ. ನನ್ನ ಈ ಯಶಸ್ಸು ನನ್ನಲ್ಲಿ ಬಹಳ ಸಂತೋಷವನ್ನು ಮೂಡಿಸಿತು. ನಮ್ಮ ನಾಥ್‌ಜೋಗಿ ಅಲೆಮಾರಿ ಸಮುದಾಯದಲ್ಲಿ 10 ನೇ ತರಗತಿ ಉತ್ತೀರ್ಣಳಾದ ಮೊದಲ ವಿದ್ಯಾರ್ಥಿನಿಯಾಗಿದ್ದೆ ನಾನು.

ನಾನು ಜಲ್ಗಾಂವ್ ಜಾಮೋದ್ ತಹಸಿಲ್, ಬುಲ್ಡಾನಾ ಜಿಲ್ಲೆ‌ಯ ನವ್‌ ಖ ಎನ್ನುವ ಸಣ್ಣ ಹಳ್ಳಿಯೊಂದರ ನಿವಾಸಿ ಇಲ್ಲಿ ನನ್ನ ಸಮುದಾಯದ ಜನರು ಮಾತ್ರ ವಾಸಿಸುತ್ತಾರೆ. ಇಲ್ಲಿನ ಅನೇಕ ಜನರು ಪುಣೆ, ಮುಂಬೈ ಮತ್ತು ನಾಗ್ಪುರಕ್ಕೆ ಹೋಗಿ ಅಲ್ಲಿ ಭಿಕ್ಷೆ ಬೇಡುತ್ತಾರೆ. ಉಳಿದವರು ನನ್ನ ಅಪ್ಪ ಅಮ್ಮನಂತೆ ದಿನಗೂಲಿಗಳಾಗಿ ಕೆಲಸ ಮಾಡುತ್ತಾರೆ.

ನನ್ನ ಹೆತ್ತವರು - ಭಾವುಲಾಲ್ ಸಾಹೇಬರಾವ್ ಸೋಳಂಕೆ, ವಯಸ್ಸು 45 ಮತ್ತು ತಾಯಿ ದ್ರೌಪದ ಸೋಳಂಕೆ, ವಯಸ್ಸು 36 - ಅವರು ಊರಿನ ಇತರರ ಹೊಲಗಳಲ್ಲಿ ಕೆಲಸಕ್ಕೆ ಹೋಗುತ್ತಾರೆ. ಗೋಧಿ, ಜೋಳ, ಹತ್ತಿ ಅಥವಾ ಸೋಯಾಬೀನ್ ಬೀನ್‌ ಹೊಲಗಳಲ್ಲಿ ದುಡಿಯುತ್ತಾರೆ. ದಿನದ ಎಂಟು ಗಂಟೆ ದುಡಿದರೆ ತಲಾ ಇನ್ನೂರು ರೂಪಾಯಿಗಳ ದಿನಗೂಲಿ ದೊರೆಯುತ್ತದೆ. ಈಗಂತೂ ಎಲ್ಲರೂ ಕೆಲಸ ಹುಡುಕುತ್ತಿದ್ದಾರೆ, ನನ್ನ ಪೋಷಕರಿಗೆ ತಿಂಗಳಿಗೆ ಅಂದಾಜು ಹತ್ತರಿಂದ ಹನ್ನೆರಡು ಕೆಲಸ ಸಿಕ್ಕಿದರೆ ಹೆಚ್ಚು. ಈಗ ಕೆಲಸದ ಲಭ್ಯತೆ ಕಡಿಮೆಯಾಗಿದೆ.

ನನ್ನ ತಂದೆ 5ನೇ ತರಗತಿಯ ತನಕ ಓದಿ ನಂತರ ಕೆಲಸ ಮಾಡಲು ಪ್ರಾರಂಭಿಸಿದರು. ನನಗೆ ಇಬ್ಬರು ಅಕ್ಕಂದಿರಿದ್ದಾರೆ ದೊಡ್ಡ ಅಕ್ಕ ರುಕ್ಮಾ, 24 ವರ್ಷ, ಅವಳು ಶಾಲೆಗೆ ಹೋಗಿಲ್ಲ. 22 ವರ್ಷದ ಕಿರಿಯ ಅಕ್ಕ ನೀನಾ 5ನೇ ತರಗತಿ ಓದಿದ್ದಾಳೆ. 20 ವರ್ಷದ ಅಣ್ಣ ದೇವಲಾಲ್ ಕೂಲಿ ಕೆಲಸ ಮಾಡುತ್ತಿದ್ದು ಅವನು 9ನೇ ತರಗತಿಗೆ ಶಾಲೆ ಬಿಟ್ಟನು. ನಾನು 10 ವರ್ಷದವಳಿರುವಾಗ ನನ್ನ ತಂದೆ "ನೀನಿನ್ನು ಓದಿದ್ದು ಸಾಕು ಕೆಲಸಕ್ಕೆ ಹೋಗು." ಎಂದಿದ್ದರು. ಅಪ್ಪನಷ್ಟೇ ಅಲ್ಲ ನಾನು ದಿನಾಲೂ ಶಾಲೆಗೆ ಹೋಗುವ ದಾರಿಯಲ್ಲಿ ಸಿಗುವ ಹಿರಿಯ ಮಹಿಳೆಯೊಬ್ಬರು ಕೂಡಾ "ನಿನ್ನ ಅಕ್ಕಂದಿರು ಓದಿಲ್ಲ ನಿನಗೆ ಮಾತ್ರ ಶಾಲೆ ಯಾಕೆ? ನೀನು ಓದಿದ ತಕ್ಷಣ ನಿನಗೆ ಕೆಲಸ ಸಿಗುತ್ತೆ ಅಂದುಕೊಂಡಿದ್ದೀಯಾ" ಎಂದು ಗದರಿಸಿದ್ದಳು.‌
Jamuna with her family at their home in Nav Kh, a Nathjogi village: 'I was thrilled with my achievement: in our community, no girl has ever passed Class 10'
PHOTO • Anjali Shinde
Jamuna with her family at their home in Nav Kh, a Nathjogi village: 'I was thrilled with my achievement: in our community, no girl has ever passed Class 10'
PHOTO • Anjali Shinde

ನಾಥ್‌ಜೋಗಿ ಸಮುದಾಯದ ಹಳ್ಳಿ ನವ್‌ ಖದಲ್ಲಿರುವ ಮನೆಯೆದುರು ತನ್ನ ಕುಟುಂಬದೊಡನೆ ಜಮುನಾ. ನನ್ನ ಸಾಧನೆಯಿಂದ ನಾನು ರೋಮಾಮಂಚನಗೊಂಡೆ: ʼನಮ್ಮ ಸುಮುದಾಯದಲ್ಲಿ ಇದುವರೆಗೂ ಯಾವುದೇ ಹುಡುಗಿ 10ನೇ ತರಗತಿ ತೇರ್ಗಡೆ ಹೊಂದಿರಲಿಲ್ಲʼ

ನನ್ನ ಚಿಕ್ಕಪ್ಪ ಕೂಡ ನನಗೆ ಬೇಗನೆ ಮದುವೆ ಮಾಡಿಸುವಂತೆ ಆಗಾಗ ತಂದೆಯ ಬಳಿ ಹೇಳುತ್ತಿದ್ದರು. ಚಿಕ್ಕಪ್ಪನ ಕಾರಣದಿಂದಾಗಿ ಅಪ್ಪ ಮದುವೆ ತಯಾರಿಗಳನ್ನು ಮಾಡಲು ಪ್ರಾರಂಭಿಸಿದ್ದರು. ಆಗ ನಾನು ನನ್ನ ಅಮ್ಮನ ಬಳಿ ʼನಾನು ಇನ್ನೂ ಓದಬೇಕು ಈಗಲೇ ಮದುವೆ ಬೇಡ, ಯಾರ ಜೊತೆಗೂ ಮದುವೆ ಕುರಿತು ಮಾತನಾಡದಿರುವಂತೆ ಹೇಳುʼ ಎಂದೆ. ಆದರೆ ಅಮ್ಮ ಅವರ ಬಳಿ ಈ ವಿಷಯ ಹೇಳಿದರೆ ಅವರ ಅಮ್ಮನೊಡನೆ ಜಗಳವಾಡುತ್ತಿದ್ದರು.

ನಂತರ, ನಾನು 10 ತರಗತಿಯಲ್ಲಿ ಉತ್ತಮ ಅಂಕ ಪಡೆದು ಪಾಸ್‌ ಆದಾಗ ನನ್ನನ್ನು ಸಂದರ್ಶನ ಮಾಡಲೆಂದು ಒಬ್ಬ ಪತ್ರಕರ್ತ ಬಂದಿದ್ದರು. ಅಂದು ಅಳುತ್ತಾ "ನನ್ನ ಮಗಳು ನನ್ನ ಮಾತು ಕೇಳದೆ ಒಳ್ಳೆಯ ಕೆಲಸ ಮಾಡಿದಳು. ಅವಳು ಓದಿ ಸಾಧನೆ ಮಾಡಿರುವುದು ಸಂತಸ ತಂದಿದೆ" ಎಂದಿದ್ದರು.

ನಾನು ಶಾಲೆಗೆ ಸೇರಿದಾಗ ನನಗೆ ಏಳು ವರ್ಷವಾಗಿತ್ತು. ಪಕ್ಕದ ಹಳ್ಳಿಯಾದ ಸುಪೋದ ಇಬ್ಬರು ಶಿಕ್ಷಕರು ಶಾಲೆಗೆ ಹೋಗುವ ಎಲ್ಲ ಮಕ್ಕಳ ಹೆಸರನ್ನು ಬರೆದುಕೊಳ್ಳಲು ನನ್ನ ಗ್ರಾಮಕ್ಕೆ ಬಂದಿದ್ದರು. ಯಾರೋ ನನ್ನ ಹೆಸರನ್ನು ನೀಡಿದ್ದರು, ಹೀಗೆ ನಾನು ಅಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಗೆ ಸೇರಿಕೊಂಡೆ.

ಅದಾಗಿ ಒಂದು ವರ್ಷದ ನಂತರ, ನಮ್ಮ ಊರಿನಲ್ಲಿಯೇ ಒಂದು ಪ್ರಾಥಮಿಕ ಶಾಲೆ ಪ್ರಾರಂಭವಾಯಿತು. ನಾನೂ ಅದೇ ಶಾಲೆ ಸೇರಿಕೊಂಡೆ. 5ನೇ ತರಗತಿಗೆ, 14 ಕಿಲೋಮೀಟರ್ ದೂರದಲ್ಲಿರುವ ತಾಲೂಕು ಕೇಂದ್ರವಾದ ಜಲ್ಗಾಂವ್ ಜಾಮೋದ್‌ನ ಮಹಾತ್ಮ ಫುಲೆ ನಗರ ಪರಿಷತ್ ವಿದ್ಯಾಲಯಕ್ಕೆ ತೆರಳಿದೆ. ಆ ಶಾಲೆಗೆ ತಲುಪಲು ಎರಡು ಕಿಲೋಮೀಟರ್‌ ನಡೆದ ನಂತರ ಅಲ್ಲಿಂದ ಶೇರ್‌ ಆಟೊ ಮೂಲಕ ಟೌನ್‌ ಬಸ್‌ ನಿಲ್ದಾಣ ತಲುಪಿ ಮತ್ತೆ ಅಲ್ಲಿಂದ ಒಂದು ಕಿಲೋಮೀಟರ್‌ ನಡೆಯಬೇಕಿತ್ತು. ರಿಕ್ಷಾದಲ್ಲಿ ಒಂದು ಬದಿಯ ಪ್ರಯಾಣಕ್ಕೆ 30 ರೂಪಾಯಿ ತಗುಲುತ್ತಿತ್ತು. ನಮ್ಮ ಊರಿನ ಆರು ಹುಡುಗಿಯರು ಒಂದೇ ಶಾಲೆಗೆ ಹೋಗುತ್ತಿದ್ದೆವು. ನಾವೆಲ್ಲರೂ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದೆವು.

ಒಂದು ದಿನ ಮಳೆಗಾಲದಲ್ಲಿ, ನಮ್ಮ ಹಳ್ಳಿಯ ಬಳಿಯಿರುವ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ನಾವು ಅದನ್ನು ದಾಟಿ ಮುಖ್ಯ ರಸ್ತೆಯನ್ನು ತಲುಪಬೇಕಾಗಿತ್ತು. ಸಾಮಾನ್ಯವಾಗಿ, ನದಿಯನ್ನು ದಾಟುವಾಗ, ನಮ್ಮ ಕಾಲುಗಳು ಮಾತ್ರ ಒದ್ದೆಯಾಗಿರುತ್ತವೆ, ನಾವು ನಮ್ಮ ಪೈಜಾಮಾವನ್ನು ಮೇಲಕ್ಕೆ ಎಳೆದುಕೊಂಡು ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಳ್ಳುತ್ತೇವೆ.

ಆದರೆ, ಆ ದಿನ ನೀರು ನಮ್ಮ ಸೊಂಟದ ತನಕ ಬರುವಷ್ಟಿತ್ತು. ನಮ್ಮ ಹಳ್ಳಿಯ ವ್ಯಕ್ತಿಯೊಬ್ಬರು ತೀರದಲ್ಲಿ ನಿಂತಿದ್ದರು, "ಕಾಕಾ, ನದಿ ದಾಟಲು ನಮಗೆ ಸಹಾಯ ಮಾಡಿ" ಎಂದು ಕೇಳಿದೆವು. ಆಗ ಅವರು ಕೋಪದಿಂದ "ನೀವೆಲ್ಲರೂ ವಾಪಸ್‌ ಹೋಗಿ! ನೀವು ಯಾಕೆ ಶಾಲೆಗೆ ಹೋಗಬೇಕು? ಹೆಣ್ಣು ಮಕ್ಕಳಿಗೆ ಶಾಲೆ ಯಾಕೆ ಸುಮ್ಮನೆ ಮನೆಯಲ್ಲಿರಿ" ಎಂದು ಕಿರುಚಿದರು. ನಾವು ಆ ದಿನ ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. ಮರುದಿನ ತರಗತಿಯಲ್ಲಿದ್ದ ನಮ್ಮ ಶಿಕ್ಷಕರು ನಾವೆಲ್ಲರೂ ಸುಳ್ಳು ಹೇಳುತ್ತಿದ್ದೇವೆ ಎಂದು ಭಾವಿಸಿ ಅದಕ್ಕೆ ಶಿಕ್ಷೆಯಾಗಿ ತರಗತಿಯ ಹೊರಗೆ ನಿಲ್ಲಿಸಿದರು.
Left: Jamuna has to travel long distances to go to school, the situation worsens during the monsoon season. Right: Archana Solanke, Jamuna Solanke, Anjali Shinde and Mamta Solanke are the first batch from the Nathjogi community to pass Class 10
PHOTO • Anjali Shinde
Left: Jamuna has to travel long distances to go to school, the situation worsens during the monsoon season. Right: Archana Solanke, Jamuna Solanke, Anjali Shinde and Mamta Solanke are the first batch from the Nathjogi community to pass Class 10
PHOTO • Rajesh Salunke

ಎಡ: ಶಾಲೆಗೆ ಹೋಗಲು ಜಮುನಾ ಬಹಳ ದೂರ ಪ್ರಯಾಣಿಸಬೇಕಾಗುತ್ತದೆ ಮತ್ತು ಮಳೆಗಾಲದಲ್ಲಿ ಪರಿಸ್ಥಿತಿ ಹದಗೆಟ್ಟಿರುತ್ತದೆ. ಬಲ: ಅರ್ಚನಾ ಸೋಳಂಕೆ, ಜಮುನಾ ಸೋಳಂಕೆ, ಅಂಜಲಿ ಶಿಂಧೆ ಮತ್ತು ಮಮತಾ ಸೋಳಂಕೆ ನಾಥ್‌ಜೋಗಿ ಸಮುದಾಯದಲ್ಲಿ 10ನೇ ತರಗತಿ ಉತ್ತೀರ್ಣರಾದ ಮೊದಲ ವಿದ್ಯಾರ್ಥಿನಿಯರು

ಮತ್ತೊಮ್ಮೆ ಇದೇ ರೀತಿಯ ಘಟನೆ ಸಂಭವಿಸಿದಾಗ, ನಾನು ನನ್ನ ತಾಯಿಗೆ ಕರೆ ಮಾಡಿ ಮಾತನಾಡಲು ಹೇಳಿದೆ. ಆಗ ಅವರು ನಮ್ಮನ್ನು ನಂಬಿದರು. ನಂತರ ಶಿಕ್ಷಕರು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ನಾವು ವಿವರಿಸಿದ್ದನ್ನು ಪ್ರತ್ಯಕ್ಷ ನೋಡಿದರು.

ನಂತರ ನಾನು ಬೆಳಿಗ್ಗೆ 9 ಗಂಟೆಗೆ ನಮ್ಮ ಗ್ರಾಮಕ್ಕೆ ಬಸ್ ಕಳುಹಿಸಲು‌ ಕೋರಿ ಜಲ್‌ಗಾಂವ್ ಜಾಮೋದ್ ಬಸ್ ನಿಲ್ದಾಣದ ರಾಜ್ಯ ಸಾರಿಗೆ ಕಚೇರಿಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ. 4 ಕಿ.ಮೀ ದೂರದಲ್ಲಿರುವ ಇಸ್ಲಾಂಪುರ ಗ್ರಾಮದಲ್ಲಿ ವಾಸಿಸುವ ಇಬ್ಬರು ಬಾಲಕಿಯರು ಸೇರಿದಂತೆ ಈ ಬಸ್ ಮೂಲಕ ಪ್ರಯಾಣಿಸುವ ಎಲ್ಲಾ 16 ಹುಡುಗಿಯರು ಅರ್ಜಿಗೆ ಸಹಿ ಹಾಕಿದ್ದರು. ಮಾನವ್ ವಿಕಾಸ್ ಬಸ್ ಹುಡುಗಿಯರಿಗೆ ಮಾತ್ರ ಮೀಸಲಾಗಿದ್ದು ಇದರಲ್ಲಿ ಸವಾರಿ ಉಚಿತ.

ಅಧಿಕಾರಿ ನಮ್ಮ ಕೋರಿಕೆಯನ್ನು ಮನ್ನಿಸಿ ಮರುದಿನ ಬೆಳಿಗ್ಗೆ ಬಸ್‌ ಬರಲಿದೆ ಎಂದು ಹೇಳಿದರು. ಅವರು ಹೇಳಿದಂತೆ ಮರುದಿನ ಬೆಳಿಗ್ಗೆ 9 ಗಂಟೆಗೆ ಬಸ್‌ ಬಂದಿತ್ತು, ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ! ಆ ಆದರೆ ಆ ಸಂತೋಷ ಕೇವಲ ಒಂದು ದಿನ ಉಳಿದಿತ್ತು. ಮರುದಿನ ಬಸ್ ಬರದಿದ್ದಾಗ, ನಾನು ಅಧಿಕಾರಿಯ ಬಳಿಗೆ ಹೋದೆ ಮತ್ತು ಅವರು "ಬಸ್ಸು ಇನ್ನೊಂದು ಹಳ್ಳಿಯ ಮೂಲಕ ಬರುತ್ತದೆ ಅವರು ಬಸ್‌ನ ಸಮಯ ಬದಲಿಸಲು ಒಪ್ಪುತ್ತಿಲ್ಲ ಹೀಗಾಗಿ ನಿಮ್ಮ ಸಮಯಕ್ಕೆ ಅನುಗುಣವಾಗಿ ನಾನು ಬಸ್ ಕಳುಹಿಸಲು ಸಾಧ್ಯವಿಲ್ಲ." ಎಂದು ಹೇಳಿದರು. ಜೊತೆಗೆ ನಮ್ಮ ತರಗತಿಯ ಸಮಯವನ್ನು ಬದಲಾಯಿಸುವಂತೆ ಅವರು ನಮಗೆ ಸಲಹೆ ನೀಡಿದರು, ಆದರೆ ಅದು ಸಾಧ್ಯವೇ?

ಬಸ್‌ ಪ್ರಯಾಣದಲ್ಲಿ ಇತರ ಸಮಸ್ಯೆಗಳೂ ಇವೆ. ಒಮ್ಮೆ ನಾನು ಮತ್ತು ಸ್ನೇಹಿತೆಯರು ಬಸ್‌ ಹತ್ತಿದಾಗ ಬಸ್ಸಿನಲ್ಲಿದ್ದ ಹುಡುಗನೊಬ್ಬ ಸ್ನೇಹಿತೆಯ ದುಪ್ಪಟ್ಟಾ ಎಳೆದು "ಮೊಹಿದಿಪುರದ ಹುಡುಗಿಯರೇ ಇಲ್ಲಿಂದ ಹೋಗಿ!" ಎಂದು ಕೆಣಕಿದ. ಆಗ ಅವನೊಂದಿಗೆ ಇತರ ಹುಡುಗರೂ ಸೇರಿಕೊಂಡು ದೊಡ್ಡ ಗಲಾಟೆಯಾಯಿತು. ಮೊಹಿದಿಪುರ ನಮ್ಮ ನಾಥ್‌ಜೋಗಿ ಸಮುದಾಯ ವಾಸಿಸುವ ಊರಿನ ಹೆಸರು. ಆ ಹುಡುಗರಿಗೆ ನಾವು ಬಸ್ಸಿನಲ್ಲಿ ಪ್ರಯಾಣಿಸುವುದು ಇಷ್ಟವಿರಲಿಲ್ಲ. ನನಗೆ ಕೋಪ ಬಂದಿತು. ಬಸ್‌ ಜಲ್‌ಗಾಂವ್‌ ಜಾಮೋದ ತಲುಪಿದಾಗ ನಾನು ಸ್ನೇಹಿತೆಯೊಂದಿಗೆ ರಾಜ್ಯ ಸಾರಿಗೆ ಕಚೇರಿಗೆ ಹೋದೆ. ಅಲ್ಲಿ ಕಂಡಕ್ಟರ್‌ ಮಧ್ಯಪ್ರವೇಶಿಸಿ ಹುಡುಗರ ಬಳಿ ಹಾಗೆಲ್ಲ ಮಾಡುವಂತಿಲ್ಲ ಬಸ್‌ ಎಲ್ಲರಿಗೂ ಸೇರಿದ್ದು ಎಂದು ಹೇಳಿದರು. ಆದರೆ ಇಂತಹ ಸಂಗತಿಗಳು ಜರುಗತ್ತಲೇ ಇರುತ್ತವೆ. ಇದರಿಂದಾಗಿ ಹೆಚ್ಚು ಆಟೋಗಳಲ್ಲೇ ಪ್ರಯಾಣಿಸುತ್ತೇವೆ.

ನಾನು 15 ವರ್ಷದವಳಾಗಿದ್ದ ಸಮಯದಲ್ಲಿ ನಮ್ಮ  ಮನೆ ನಿರ್ಮಿಸಿರುವ ಜಮೀನನ್ನು ನನ್ನ ತಂದೆ ತನ್ನ  ಹೆಸರಿಗೆ ವರ್ಗಾಯಿಸಿಕೊಳ್ಳಲು ಪ್ರಯತ್ನಿಸಿದರು. ಅದು ಅಜ್ಜನ ಹೆಸರಿನಲ್ಲಿತ್ತು ಅದನ್ನುಅವರು ಅಪ್ಪನನಿಗೆ ಉಡುಗೊರೆಯಾಗಿ ನೀಡಿದ್ದರು. ಆದರೆ ವರ್ಗಾವಣೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಕೊಡಬೇಕಿದ್ದ ವ್ಯಕ್ತಿ ಅದನ್ನು ಮಾಡಿಕೊಡಲು 5,000 ರೂಪಾಯಿ ನೀಡಬೇಕೆಂದು ಕೇಳಿದ. ಅಪ್ಪನ ಬಳಿ ಅಷ್ಟೊಂದು ಹಣವಿಲ್ಲ. ನಾವು ಆ ವ್ಯಕ್ತಿಯ ಬಳಿ ಸಾಕಷ್ಟು ಬಾರಿ ವಿನಂತಿಸಿದ್ದೇವೆ ಆದರೆ ಅವನು ಹಣವಿಲ್ಲದೆ ಕೆಲಸ ಮಾಡಿಕೊಡಲು ಒಪ್ಪಲಿಲ್ಲ. ಮನೆ ನಮ್ಮ ಹೆಸರಿನಲ್ಲಿ ಇಲ್ಲದೆ ಹೋದರೆ ನಾವು ಸರಕಾರದಿಂದ ಹೊಸ ಮನೆ ನಿರ್ಮಿಸಲು ಧನ ಸಹಾಯ ಪಡೆಯಲು  ಸಾಧ್ಯವಿಲ್ಲ.
Left: Jamuna would cook and join her parents to work in the fields. Right: They cannot avail state funds to build a pucca house
PHOTO • Anjali Shinde
Left: Jamuna would cook and join her parents to work in the fields. Right: They cannot avail state funds to build a pucca house
PHOTO • Anjali Shinde

ಎಡ: ಜಮುನಾ ಅಡುಗೆ ಮಾಡಿ ಹೊಲಗಳಲ್ಲಿ ಕೆಲಸ ಮಾಡುತ್ತಿರುವ ತನ್ನ ಹೆತ್ತವರ ಬಳಿಗೆ ಹೋಗುತ್ತಾಳೆ. ಬಲ: ಪಕ್ಕಾ ಮನೆ ನಿರ್ಮಿಸಲು ಅವರು ಸರಕಾರದಿಂದ ಸಹಾಯಧನ ಪಡೆಯಲು ಸಾಧ್ಯವಾಗುತ್ತಿಲ್ಲ

ನಮ್ಮದೇ ಮನೆಯನ್ನು ನಮ್ಮ ಹೆಸರಲ್ಲಿ ಹೊಂದಲು ನಾವು ಯಾಕೆ ಹಣ ನೀಡಬೇಕು? ಇಂತಹ ಸಮಸ್ಯೆಗಳನ್ನು ಯಾರೂ ಎದುರಿಸಬಾರದು. ನಾನು ಸಾಕಷ್ಟು ಓದಿ ದೊಡ್ಡ ಅಧಿಕಾರಿಯಾಗಲು ಬಯಸುತ್ತೇನೆ. ಆಗ ನಮ್ಮಂತಹ ಬಡವರು ತಮ್ಮ ಕೆಲಸಗಳಿಗಾಗಿ ಲಂಚ ಪಾವತಿಸಬೇಕಾಗಿಲ್ಲ. ನನ್ನ ಸಮುದಾಯದ ಜನರಿಗೆ ಅವರ ಹಕ್ಕುಗಳನ್ನು ಮನವರಿಕೆ ಮಾಡಿಸುತ್ತೇನೆ. ಅವರು ಇಂತಹ ಪ್ರಬಲ ಜನರಿಗೆ ಭಯಪಡದಂತೆ ಮಾಡುತ್ತೇನೆ.

8ನೇ ತರಗತಿಯವರೆಗಿನ ಪುಸ್ತಕಗಳನ್ನು ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ ಮತ್ತು ಸಮವಸ್ತ್ರದ ಅಗತ್ಯವಿರುವುದಿಲ್ಲ. ಆದರೆ ಪ್ರತಿಯೊಬ್ಬರೂ 9ನೇ ತರಗತಿಯಿಂದ ಪುಸ್ತಕಗಳು ಮತ್ತು ನೋಟ್‌ಬುಕ್‌ಗಳನ್ನು ಖರೀದಿಸಬೇಕಾಗಿದ್ದು, ಇದರ ಬೆಲೆ ಸುಮಾರು 1,000 ರೂ ಆಗುತ್ತದೆ. ಮತ್ತೆ ಶಾಲಾ ಸಮವಸ್ತ್ರಕ್ಕೆ 550 ರೂ. ಒಂದು ಬಾರಿಯ ಖಾಸಗಿ ಟ್ಯೂಷನ್ ವೆಚ್ಚ 3,000 ರೂ. ನಾನು ಒಂದು ಬಾರಿ ಮಾತ್ರ ಟ್ಯೂಷನ್ ತೆಗೆದುಕೊಂಡಿದ್ದೇನೆ. ಎರಡನೇ ಬಾರಿಗೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರಿಗೆ ಸಹಾಯ ಮಾಡುವಂತೆ ವಿನಂತಿಸಿದೆ. ನನ್ನ ಖರ್ಚುಗಳನ್ನು ಹೊಂದಿಸಲು, ನಾನು 9 ನೇ ತರಗತಿಗೆ ಹೋಗುವ ಮೊದಲು ಬೇಸಿಗೆಯಲ್ಲಿ ನನ್ನ ಹೆತ್ತವರೊಂದಿಗೆ ಹೊಲಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ನಾನು ಬೆಳಿಗ್ಗೆ 4 ಗಂಟೆಗೆ ಎದ್ದು ಒಂದು ಗಂಟೆ ಓದುತ್ತಿದ್ದೆ. ನನ್ನ ಪೋಷಕರು ಮತ್ತು ಸಹೋದರರು ಒಟ್ಟಿಗೆ ಕೆಲಸಕ್ಕೆ ತೆರಳುತ್ತಿದ್ದರು. ನಾನು ಒಂದು ಗಂಟೆ ಓದಿದ ನಂತರ ಭಕ್ರಿ ಮತ್ತು ಭಾಜಿಯನ್ನು ತಯಾರಿಸಿ ಅವುಗಳನ್ನು ಹೊಲಗಳಿಗೆ ಕೊಂಡೊಯ್ಯುತ್ತಿದ್ದೆ.

ನಾನು ಹೊಲದಲ್ಲಿ ಅವರೊಂದಿಗೆ ಬೆಳಿಗ್ಗೆ 7ರಿಂದ 9ರವರೆಗೆ ಕೆಲಸ ಮಾಡುತ್ತಿದ್ದೆ ಮತ್ತು ಈ ಕೆಲಸಕ್ಕಾಗಿ ಗಂಟೆಗೆ 25 ರೂಪಾಯಿಗಳನ್ನು ನೀಡುತ್ತಿದ್ದರು. 9: 30ಕ್ಕೆ ನಾನು ಮನೆಗೆ ಹಿಂತಿರುಗಿ ಶಾಲೆಗೆ ತಯಾರಿ ನಡೆಸುತ್ತಿದ್ದೆ. ಶಾಲೆಯಿಂದ ಹಿಂತಿರುಗಿದ ನಂತರ, ನಾನು ಮತ್ತೆ ಕೆಲಸಕ್ಕೆ ಹೋಗುತ್ತಿದ್ದೆ. ರಜಾದಿನಗಳಲ್ಲಿಯೂ ಕೆಲಸ ಮಾಡುತ್ತಿದ್ದೆ. ಈ ಹಣವು ಶಾಲಾ ಸಮವಸ್ತ್ರವನ್ನು ಖರೀದಿಸಲು ನನಗೆ ಸಹಾಯ ಮಾಡಿತು.

Jamuna with Bhaulal Babar, her supportive primary school teacher
PHOTO • Anjali Shinde

ತನ್ನ ಓದಿನ ವಿಷಯದಲ್ಲಿ ಸದಾ ಬೆಂಬಲವಾಗಿ ನಿಂತ ಪ್ರಾಥಮಿಕ ಶಾಲಾ ಶಿಕ್ಷಕರಾದ ಭಾವುಲಾಲ್‌ ಅವರೊಂದಿಗೆ ಜಮುನಾ

ಕಳೆದ ವರ್ಷ [2019] ಜಲಶಕ್ತಿ ಅಭಿಯಾನ [ಕೇಂದ್ರ ಜಲಸಂಪನ್ಮೂಲ ಸಚಿವಾಲಯ] ಆಯೋಜಿಸಿದ್ದ ಬ್ಲಾಕ್ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ನಾನು ಟ್ರೋಫಿಯನ್ನು ಗೆದ್ದಿದ್ದೇನೆ. ಸಾವಯವ ಗೊಬ್ಬರದ ಕುರಿತ ನನ್ನ ಪ್ರಾಜೆಕ್ಟ್‌ಗಗಾಗಿ ಬುಲ್ಖಾನದಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ದ್ವಿತೀಯ ಬಹುಮಾನ ಸಿಕ್ಕಿತು. ಶಾಲಾ ರೇಸ್ ಸ್ಪರ್ಧೆಯಲ್ಲಿ ನಾನು ಎರಡನೇ ಬಹುಮಾನವನ್ನೂ ಪಡೆದಿದ್ದೇನೆ. ನಾನು ಗೆಲ್ಲಲು ಇಷ್ಟಪಡುತ್ತೇನೆ. ನಾಥ್‌ಜೋಗಿ ಸಮುದಾಯದ ಹುಡುಗಿಯರು ಎಂದಿಗೂ ಗೆಲ್ಲುವ ಅವಕಾಶವನ್ನೇ ಪಡೆಯುವುದಿಲ್ಲ.

ಆಗಸ್ಟ್‌ನಲ್ಲಿ ನಾನು ಜಲಗಾಂವ್‌ ಜಾಮೋದ್‌ನಲ್ಲಿ 11 ಮತ್ತು 12ನೇ ತರಗತಿಗಳಿಗೆ ನ್ಯೂ ಎರಾ ಹೈಸ್ಕೂಲ್‌ಗೆ ಸೇರಿಕೊಂಡೆ. ಅದು ಖಾಸಗಿ ಶಾಲೆಯಾಗಿದ್ದು, ವಾರ್ಷಿಕ 5,000 ರೂ ಶುಲ್ಕವಿರುತ್ತದೆ. ನಾನು ವಿಜ್ಞಾನವನ್ನು ಆರಿಸಿಕೊಂಡಿದ್ದೇನೆ - ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ನಾಗರಿಕ ಸೇವೆಗಳ ಪ್ರವೇಶ ಪರೀಕ್ಷೆಯಲ್ಲಿ ಇತಿಹಾಸವು ಬಹಳಷ್ಟು ಸಹಾಯ ಮಾಡುತ್ತದೆ ಎಂದು ಹೇಳಿದ್ದರಿಂದ ನಾನು ಇತಿಹಾಸವನ್ನು ಸಹ ಆರಿಸಿಕೊಂಡಿದ್ದೇನೆ. ಭಾರತೀಯ ಆಡಳಿತ ಸೇವೆಗೆ ಸೇರಬೇಕೆಂಬುದು ನನ್ನ ಕನಸು.

ಪದವಿ ಓದಲು ನಾನು ವಿಶ್ವವಿದ್ಯಾಲಯಗಳಿರುವ ಪುಣೆ ಅಥವಾ ಬುಲ್ಖಾನಾಗೆ ಹೋಗಬೇಕು. ನಾನು ಬಸ್ ಕಂಡಕ್ಟರ್ ಅಥವಾ ಅಂಗನವಾಡಿ ಕಾರ್ಯಕರ್ತೆಯಾಗಬೇಕು ಎಂದು ಜನರು ಹೇಳುತ್ತಾರೆ ಏಕೆಂದರೆ ಆ ಕೆಲಸ ಬೇಗನೆ ಸಿಗುತ್ತದೆ. ಆದರೆ ಸಾಧಿಸಬೇಕೆಂದುಕೊಂಡಿರುವುದನ್ನು ಸಾಧಿಸಿ ನಾನು ಏನಾಗಬೇಕೆಂದು ಬಯಸುತ್ತಿದ್ದೇನೋ ಅದೇ ಆಗುತ್ತೇನೆ.

ನನ್ನ ಸಮುದಾಯದ ಭಿಕ್ಷಾಟನೆಯ ಅವಲಂಬನೆ ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಹುಡುಗಿಯರು ಮದುವೆಯಾಗಬೇಕೆಂದು ಒತ್ತಾಯಿಸುವ ಮನಸ್ಥಿತಿಯನ್ನು ಬದಲಾಯಿಸಲು ಬಯಸುತ್ತೇನೆ. ನಿಮ್ಮ ಹೊಟ್ಟೆಯನ್ನು ತುಂಬಲು ಭಿಕ್ಷಾಟನೆಯೊಂದೇ ಆಯ್ಕೆಯಲ್ಲ; ಶಿಕ್ಷಣವೂ ನಿಮಗೆ ಉದ್ಯೋಗದ ಮೂಲಕ ಆಹಾರವನ್ನು ನೀಡುತ್ತದೆ.

ಲಾಕ್‌ಡೌನ್ ಕಾರಣದಿಂದಾಗಿ ಅನೇಕ ಜನರು ಮತ್ತೆ ಊರಿಗೆ ಮರಳಿ ಬಂದಿದ್ದಾರೆ ಅಲ್ಲದೆ ಎಲ್ಲರೂ ಕೆಲಸ ಹುಡುಕುತ್ತಿದ್ದಾರೆ. ನನ್ನ ಕುಟುಂಬ ಕೂಡ ಮನೆಯಲ್ಲಿದೆ. ಅವರಿಗೂ ಯಾವುದೇ ಕೆಲಸ ಸಿಗುತ್ತಿಲ್ಲ. ನನ್ನ ತಂದೆ ನನ್ನನ್ನು ಶಾಲೆಗೆ ಸೇರಿಸಲು ಹಳ್ಳಿಯ ಹಿರಿಯರಿಂದ ಹಣವನ್ನು ಸಾಲವಾಗಿ ಪಡೆದಿದ್ದಾರೆ. ಹಣವನ್ನು ಹಿಂದಿರುಗಿಸುವುದಕ್ಕೆ ಬಹಳ ಕಷ್ಟವಾಗಿದೆ. ನಾವು ಯಾವುದೇ ಕೆಲಸ ಮಾಡಲು ಸಿದ್ಧರಿದ್ದೇವೆ, ಆದರೆ ಯಾವುದೇ ಕಾರಣಕ್ಕೂ ನಾವ್ಯಾರೂ ಭಿಕ್ಷೆ ಬೇಡುವುದಿಲ್ಲ.

ಪುಣೆ ಮೂಲದ ಸ್ವತಂತ್ರ ಮರಾಠಿ ಪತ್ರಕರ್ತ ಪ್ರಶಾಂತ್ ಖುಂಟೆ ಅವರ ಸಹಾಯದೊಂದಿಗೆ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.

ಕವರ್‌ ಫೋಟೊ: ಅಂಜಲಿ ಶಿಂಧೆ

ಅನುವಾದ: ಶಂಕರ ಎನ್. ಕೆಂಚನೂರು

Jamuna Solanke

जमुना सोळंके महाराष्ट्राच्या बुलडाणा जिल्ह्यातील नाव खुर्द गावची रहिवासी आहे. ती सध्या जळगाव जामोद तालुक्यातील न्यू इरा हाय स्कूलमध्ये इयत्ता ११ वीत शिक्षण घेत आहे.

यांचे इतर लिखाण Jamuna Solanke
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

यांचे इतर लिखाण Shankar N. Kenchanuru