ಒಂದು ದಿನ ಬಾಲಾಜಿ ಹಟ್ಟಗಲೆ ಕಬ್ಬನ್ನು ಕತ್ತರಿಸುತ್ತಿದ್ದರು. ಮರುದಿನ ಅವರು ಕಾಣಲೇ ಇಲ್ಲ. ಆ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆಂಬುದು ಅವರ ಹೆತ್ತವರ ಆಶಯ. “ಅಸ್ಥಿರತೆ ನಮ್ಮನ್ನು ಸಾಯಿಸುತ್ತಿದೆ,” ಎನ್ನುತ್ತಾರೆ ಅವರ ತಂದೆ ಬಾಬಾಸಾಹೇಬ್‌ ಹಟ್ಟಗಲೆ. ಜುಲೈ ತಿಂಗಳ ಮೋಡಕವಿದ ಅಪರಾಹ್ನ. ಇಟ್ಟಿಗೆಯಿಂದ ಮಾಡಿದ ಒಂಟಿ ಕೊಠಡಿಯ ಮನೆಯ ಮೇಲೆ ಕಪ್ಪನೆ ಮೋಡ ಆವರಿಸಿತ್ತು, ಬಾಬಾಸಾಹೇಬ ಅವರ ಧ್ವನಿಯಲ್ಲಿ ಹತಾಶ ಭಾವನೆ ಪ್ರತಿಫಲಿಸುವಂತೆ ಮಾಡಿತ್ತು,  ಅವರು ಹೇಳಿದ್ದು: “ಆತ ಬದುಕಿದಾನೋ ಇಲ್ಲ ಸತ್ತಿದ್ದಾನೋ ಎಂಬುದನ್ನು ತಿಳಿಯಬೇಕಷ್ಟೆ,”

ಅದು 2020ರ ನವೆಂಬರ್‌ ತಿಂಗಳು, ಬಾಬಾಸಾಹೇಬ್‌ ಮತ್ತು ಅವರ ಪತ್ನಿ ಸಂಗೀತ 22 ವರ್ಷದ ತಮ್ಮ ಮಗನನ್ನು ಕಂಡಿದ್ದು ಅದೇ ಕೊನೆ. ಬಾಲಾಜಿ ಕರ್ನಾಟಕದ ಬೆಳಗಾವಿ (ಬೆಳಗಾಂ) ಜಿಲ್ಲೆಯಲ್ಲಿರು ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿರುವ ಕಾದಿವಾಡ್‌ಗಾವ್‌ನಿಂದ ಹೊರಟಿದ್ದರು.

ಮಹಾರಾಷ್ಟ್ರ ಮತ್ತು ಕರ್ನಾಟಕದ ಪಶ್ಚಿಮ ಭಾಗದಲ್ಲಿ ಕಬ್ಬು ಕತ್ತರಿಸಲು ಮರಾಠವಾಡ ವಲಯದಿಂದ ವರ್ಷದ ಆರು ತಿಂಗಳ ಅವಧಿಗೆ ನುರಿತ ಲಕ್ಷಾಂತರ ಕಾರ್ಮಿಕರು ವಲಸೆ ಹೋಗುತ್ತಿದ್ದು ಅದರಲ್ಲಿ ಅವರೂ ಒಬ್ಬರು, ಪ್ರತಿ ವರ್ಷ ದೀಪಾವಳಿ ಹಬ್ಬ ಮುಗಿದ ನಂತರ ಕೆಲಸಗಾರರು ಗ್ರಾಮವನ್ನು ತೊರೆಯುತ್ತಿದ್ದರು ಮತ್ತು ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಹಿಂದಿರುಗುತ್ತಿದ್ದರು. ಆದರೆ ಬಾಲಾಜಿ ಈ ವರ್ಷ ಹಿಂದಿರುಗಲೇ ಇಲ್ಲ.

ಬಾಲಾಜಿಯ ಹೆತ್ತವರು ಕಳೆದ ಎರಡು ದಶಕಗಳಿಂದ ಈ ಕೆಲಸವನ್ನು ಮಾಡುತ್ತಿದ್ದು, ಆದರೆ ಬಾಲಾಜಿ ಮಾತ್ರ ಇದೇ ಮೊದಲ ಬಾರಿಗೆ ಕೆಲಸಕ್ಕಾಗಿ ಮನೆಯನ್ನು ತೊರೆದಿರುವುದು.” ನನ್ನ ಪತ್ನಿ ಮತ್ತು ನಾನು ಕಳೆದ 20 ವರ್ಷಗಳಿಂದ ವಲಸೆ ಹೋಗುತ್ತಿದ್ದೇವೆ. [ಇಬ್ಬರೂ ಸೇರಿ] ಒಂದು ಋತುವಿನಲ್ಲಿ 60,000-70,000ರೂ ಗಳಿಸುತ್ತಿದ್ದೆವು,” ಎನ್ನುತ್ತಾರೆ ಬಾಬಾಸಾಹೇಬ್‌.

ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ತೋಟ ಮತ್ತು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೂಲಿ ಕೆಲಸ ಸಿಗುವುದು ಕುಟುಂಬಕ್ಕೆ ಕಷ್ಟವಾಗಿದೆ. “2020ರ ಮಾರ್ಚ್‌ ನಿಂದ ನವೆಂಬರ್‌ ವರೆಗೆ ನಮಗೆ ಯಾವುದೇ ಹಣ ಗಳಿಸುವುದು ಕಷ್ಟವಾಗಿತ್ತು,” ಎನ್ನುತ್ತಾರೆ ಬಾಬಾಸಾಹೇಬ್‌. ಕೋವಿಡ್‌19 ಕಾಣಿಸಿಕೊಳ್ಳುವುದಕ್ಕೆ ಮುನ್ನ ಬಾಬಾಸಾಹೇಬ್‌ ಬೀಡ್‌ನ ವಾದ್ವಾನಿ ಗ್ರಾಮಕ್ಕೆ ಹಿಂದಿರುಗಿದಾಗ  ವಾರದಲ್ಲಿ 2-3 ದಿನ ಕೆಲಸ ಮಾಡಿ ದಿನಕ್ಕೆ 300 ರೂ. ಗಳಿಸುತ್ತಿದ್ದರು.

ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಮತ್ತೆ ವಲಸೆ ಹೋಗುವ ಸಮಯ ಬಂದಾಗ ಬಾಬಾಸಾಹೇಬ್‌ ಮತ್ತು ಸಂಗೀತಾ ಮನೆಯಲ್ಲೇ ಉಳಿದುಕೊಳ್ಳಲು ತೀರ್ಮಾನಿಸಿದರು, ಏಕೆಂದರೆ ಬಾಬಾಸಾಹೇಬ್‌ ಅವರ ದೊಡ್ಡಮ್ಮ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಪೂರ್ಣ ಅವಧಿಯ ಆರೈಕೆ ಬೇಕಾಗಿತ್ತು. ”ಆದರೆ  ನಮ್ಮ,”ಬದುಕು ಸಾಗಬೇಕಾದರೆ ನಾವು ಏನಾದರೂ ಮಾಡಬೇಕಾಗಿತ್ತು,” ಎಂದು ಹೇಳಿದ ಬಾಬಾ ಸಾಹೇಬ್‌, “ಆದ್ದರಿಂದ ನಮ್ಮ ಬದಲಿಗೆ ಮಗನ್ನು ಕಳುಹಿಸಿದೆವು,” ಎಂದರು,

Babasaheb (left) and Sangita Hattagale are waiting for their son who went missing after he migrated to work on a sugarcane farm in Belagavi
PHOTO • Parth M.N.
Babasaheb (left) and Sangita Hattagale are waiting for their son who went missing after he migrated to work on a sugarcane farm in Belagavi
PHOTO • Parth M.N.

ಬೆಳಗಾವಿಯ ಕಬ್ಬಿನ ತೋಟದಲ್ಲಿ ಕೆಲಸ ಮಾಡಲು ಹೋಗಿ ನಾಪತ್ತೆಯಾಗಿರುವ ಮಗನಿಗಾಗಿ ಕಾಯುತ್ತಿರುವ ಬಾಬಾಸಾಹೇಬ್‌ (ಬಲ) ಹಾಗೂ ಸಂಗೀತಾ ಹಟ್ಟಗಲೆ

2020ರ ಮಾರ್ಷ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್‌-19 ಹರಡಿರುವ ಹಿನ್ನಲೆಯಲ್ಲಿ ಲಾಕ್‌ಡೌನ್‌ ಘೋಷಿಸಿದರು. ಇದಿರಿಂದಾಗಿ ಬಾಬಾಸಾಹೇಬ್‌ ಹಾಗೂ ಸಂಗೀತಾ ಅವರಂಥ ಲಕ್ಷಾಂತರ ವಲಸೆ ಕಾರ್ಮಿಕರ ಬದುಕು ಅತಂತ್ರದಲ್ಲಿ ಸಿಲುಕಿತು. ಅನೇಕರು ಕೆಲಸವನ್ನು ಕಳೆದುಕೊಂಡರು, ಮತ್ತು ಅನೇಕರು ದಿನಗೂಲಿ ಕೆಲಸವನ್ನೂ ಪಡೆಯುವಲ್ಲಿ ವಿಫಲರಾದರು. ಜೂನ್‌ನಲ್ಲಿ ಲಾಕ್‌ಡೌನ್‌ ತೆರವುಗೊಳಿಸಿದ ನಂತರವೂ ಅವರು ದಿನಗೂಲಿಗಾಗಿ ತಿಂಗಳುಗಟ್ಟಲೆ ಸಂಕಷ್ಟ ಎಸದುರಿಸಿದರು.

ಹಟ್ಟಗಲೆ ಕುಟುಂಬದವರ ಪರಿಸ್ಥಿತಿ ಭಿನ್ನವಾಗಿಲ್ಲ, 2020ರಲ್ಲಿ ಕೆಲಸ ಇಲ್ಲದ ಕಾರಣ ಕಬ್ಬು ಕತ್ತರಿಸುವ ಸಮಯ ಬರುತ್ತಿದ್ದಂತೆ ಬಾಲಾಜಿಯವರು ಬೀಡ್‌ನಿಂದ ವಲಸೆ ಹಗಬೇಕಾಯಿತು. ಅಲ್ಲಿಯವರೆಗೂ ಊರಲ್ಲಿ ಅಲ್ಲಿಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯವರೆಗೂ ಅವರು ಹಳ್ಳಿಯ ಸುತ್ತಮುತ್ತ ಕೆಲಸ ಮಾಡುತ್ತಿದ್ದರು.

ಹೊಸದಾಗಿ ಮದುವೆಯಾದ ಮನೆಯಿಂದ 550 ಕಿಮೀ ದೂರದಲ್ಲಿರುವ ಬೆಳಗಾವಿಯ ಬಸಪುರ ಗ್ರಾಮಕ್ಕೆ ಕಬ್ಬು ಕತ್ತರಿಸಲು ಆತ ತನ್ನ ಪತ್ನಿ ಮತ್ತು ಆಕೆಯ ಹೆತ್ತವರೊಂದಿಗೆ ಹೋಗಿದ್ದರು, “ಆತ ಅಲ್ಲಿಂದ ತುರ್ತಾಗಿ ಕರೆ ಮಾಡುತ್ತಿದ್ದ, ಇದರಿಂದಾಗಿ ನಮಗೆ ಭಯ ಇರುತ್ತಿರಲಿಲ್ಲ,” ಎಂದ ಸಂಗೀತಾ ಅವರ ದುಃಖದ ಕಟ್ಟೆಯೊಡೆಯಿತು.

ಡಿಸೆಂಬರ್‌ ತಿಂಗಳ ಒಂದು ಸಂಜೆ ಸಂಗೀತಾ ಅವರು ಮಗನಿಗೆ ಕರೆ ಮಾಡಿದಾಗ, ಮಗನ ಬದಲು ಅವರ ಮಾವ ಕರೆಯನ್ನೆತ್ತಿದರು.  ಅವರು ಬಾಲಾಜಿ ಹೊರಗೆ ಹೋಗಿದ್ದಾನೆ ಎಂದು ತಿಳಿಸಿದರು. “ನಂತರ ಕರೆ ಮಾಡಿದಾಗ ಆತನ ಫೋನ್‌ ಬಂದ್‌ ಆಗಿತ್ತು,” ಎಂದು ಅವರು ಹೇಳಿದರು.

ಮುಂದಿನ 2-3 ದಿನಗಳ ಕಾಲವೂ ಬಾಲಾಜಿಯ ಫೋನ್‌ ಸ್ವಿಚ್‌ ಆಫ್‌ ಆಗಿರುವುದನ್ನು ಕಂಡು ಬಾಬಾಸಾಹೇಬ್‌ ಮತ್ತು ಸಂಗೀತಾ ಅವರಿಗೆ ಚಿಂತೆ ಆವರಿಸಿತು. ಆತನ ಯೋಗಕ್ಷೇಮವನ್ನು ವಿಚಾರಿಸಲು ಅವರು ಬೆಳಗಾವಿಗೆ ಹೋಗಲು ಯೋಚಿಸಿದರು. ಆದರೆ ಅವರಲ್ಲಿ ಪ್ರಯಾಣಕ್ಕೆ ಸಾಕಾಗುವಷ್ಟು ಹಣ ಇರಲಿಲ್ಲ. ಅವರು ಕುಟುಂಬಕ್ಕೆ ಬೇಕಾಗುವ ಎರಡು ಹೊತ್ತು ಊಟವನ್ನು ಮಾತ್ರ ನಿರ್ವಹಿಸುತ್ತಿದ್ದರು. ಇದರಲ್ಲಿ 15 ವರ್ಷ ಮಗಳು ಅಲ್ಕಾ ಹಾಗೂ 13 ವರ್ಷದ ಮಗ ಜನಾಜಿಯದ್ದೂ ಸೇರಿತ್ತು. ಈ ಕುಟುಂಬವು ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ದಲಿತ ಸಮುದಾಯವಾದ ಮಾತಂಗ ಜಾತಿಗೆ ಸೇರಿತ್ತು.

ಬಾಬಾಸಾಹೇಬ್‌ ಅವರು ಸ್ಥಳೀಯ ಸಾಲಕೊಡುವವರಿಂದ 36 ಶೇಕಡಾ ಬಡ್ಡಿ ದರದಲ್ಲಿ 30,000 ರೂ. ಸಾಲ ಪಡೆದರು. ಅವರಿಗೆ ತಮ್ಮ ಮಗನನ್ನು ನೋಡಲೇಬೇಕಿತ್ತು.

Left: A photo of Balaji Hattagale. He was 22 when he left home in November 2020. Right: Babasaheb and Sangita at home in Kadiwadgaon village
PHOTO • Parth M.N.
Left: A photo of Balaji Hattagale. He was 22 when he left home in November 2020. Right: Babasaheb and Sangita at home in Kadiwadgaon village
PHOTO • Parth M.N.

ಎಡ: ಬಾಲಾಜಿ ಹಟ್ಟಗಲೆ ಅವರ ಫೋಟೋ.  2020ರ ನವೆಂಬರ್‌ನಲ್ಲಿ ಮನೆಬಿಟ್ಟಾಗ ಅವರಿಗೆ 22 ವರ್ಷ ವಯಸ್ಸಾಗಿತ್ತು.  ಬಲ: ಕಾದಿವಾಡಾಗಾಂವ್‌ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಬಾಬಾಸಾಹೇಬ್‌ ಮತ್ತು ಸಂಗೀತಾ

ಬಾಡಿಗೆ ವಾಹನವೊಂದರಲ್ಲಿ ಬಾಬಾಸಾಹೇಬ್‌ ಮತ್ತು ಸಂಗೀತಾ ಬೆಳಗಾವಿಗೆ ಹೊರಟರು. “ಅಲ್ಲಿಗೆ ತಲುಪಿದಾಗ ಆತನ ಅತ್ತೆ-ಮಾವ ನಮ್ಮನ್ನು ಅಗೌರವದಿಂದ ನೋಡಿಕೊಂಡರು. ಬಾಲಾಜಿಯ ಬಗ್ಗೆ ವಿಚಾರಿಸಿದಾಗ ಅವರಲ್ಲಿ ಉತ್ತರ ಇರಲಿಲ್ಲ,” ಎಂದರು ಬಾಬಾಸಾಹೇಬ್‌. ಇಲ್ಲೇನೋ ಮೋಸ ನಡೆದಿದೆ ಎಂದು ಸಂಶಯಿಸಿ, ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿ ನಾಪತ್ತೆ ಬಗ್ಗೆ ದೂರು ನೀಡಿದರು. “ಅವರು ಪ್ರಕರಣದ ಬಗ್ಗೆ ಈಗಲೂ ತನಿಖೆ ಮಾಡುತ್ತಿದ್ದಾರೆ,”

ಬಾಲಾಜಿಯನ್ನು ದೂರ ಕಳುಹಿಸಲು  ಒಪ್ಪಿಗೆ  ನೀಡದೇ ಇರುತ್ತಿದ್ದರೆ, ಇಂದು ತನ್ನ ಮಗ ನನ್ನ ಜೊತೆಯಲ್ಲೇ ಇರುತ್ತಿದ್ದ ಎನ್ನುತ್ತಾರೆ ಬಾಬಾಸಾಹೇಬ್‌. “ಏನು ಮಾಡುವುದು?, ನಾವು ವಲಸೆ ಕಾರ್ಮಿಕರು. ಲಾಕ್‌ಡೌನ್‌ ಆದ ತನಂತರ ಹತ್ತಿರದ ಗ್ರಾಮಗಳಲ್ಲಿ ಮತ್ತು ಪಟ್ಟಣಗಳಲ್ಲಿ ಯಾವುದೇ ಕೆಲಸಗಳು ಸಿಗುತ್ತಿಲ್ಲ. “ಕಬ್ಬು ಕತ್ತರಿಸುವುದು ಮಾತ್ರ ಉಳಿದಿರುವ ಆಯ್ಕೆ, ಎಂದು ಅವರು ಹೇಳಿದರು. “ಇಲ್ಲೇ ಹತ್ತಿರದಲ್ಲೆಲ್ಲಾದರೂ ಕೆಲಸ ಸಿಗುತ್ತದೆ ಎಂಬ ಆತ್ಮವಿಶ್ವಾಸ ನನ್ನಲ್ಲಿ ಇರುತ್ತಿದ್ದರೆ, ಅವನಿಗೆ ಇಲ್ಲೇ ಉಳಿದುಕೊಳ್ಳಲು ಹೇಳುತ್ತಿದ್ದೆ,”

ದೀರ್ಘ ಕಾಲದಿಂದ ಉಳಿದಿರುವ ಭೂ ಹಿಡುವಳಿ ಸಮಸ್ಯೆಗಳು ಮತ್ತು ಈಗಿನ ಬದಲಾಗುತ್ತಿರುವ ಹವಾಮಾನ ಇವುಗಳಿಂದಾಗಿ ಜೀವನೋಪಾಯಕ್ಕೆ ಅಗತ್ಯವಿರುವ ಅವಕಾಶಗಳು ಸಿಗದೇ ಇರುವುದು ಹೆಚ್ಚಾಯಿತು, ಇದರಿಂದಾಗಿ ಬೀಡ್‌ನ ಜನರು ಕೆಲಸಕ್ಕಾಗಿ ವಲಸೆ ಹೋಗಲಾರಂಭಿಸಿದರು. ಕಬ್ಬಿನ ಗದ್ದೆಗಳಿರುವಲ್ಲಿಗೆ ವಲಸೆ ಹೋಗುವುದರ ಜತೆಯಲ್ಲಿ ಅನೇಕರು ಕಾರ್ಮಿಕ, ಚಾಲಕ, ಕಾವಲುಗಾರ ಮತ್ತು ಮನೆಕೆಲಸಗಳನ್ನು ಹುಡುಕಿಕೊಂಡು ಮುಂಬಯಿ, ಪುಣೆ ಮತ್ತು ಔರಂಗಾಬಾದ್‌  ಮೊದಲಾದ ನಗರಗಳಿಗೂ ವಲಸೆ ಹೋದರು.

ಕಳೆದ ವರ್ಷ ದೇಶ ಹಿಂದೆಂದೂ ಕಂಡಿರದ ಎರಡು ತಿಂಗಳ ಲಾಕ್‌ ಡೌನ್‌ ಘೋಷಿಸಿದಾಗ ಅವರು ತಮ್ಮ ಊರಿಗೆ ಹಿಂದಿರುಗುವ ಪ್ರಯಾಣ ಆರಂಭಿಸಿದರು. ಕಾರ್ಮಿಕರು ಹೊಟ್ಟೆಗೆ ಆಹಾರವಿಲ್ಲದೆ, ಬಾಯಾರಿಕೆ ಹಾಗೂ ದಣಿವಿನಿಂದ ಬಹಳ ದೂರದ ಅಂತರವನ್ನು ನಡೆದೇ ಸಾಗಿ ತಮ್ಮ ಮನೆಯನ್ನು ಸೇರಿದ್ದರು. ದಾರಿ ಮಧ್ಯೆ ಅನೇಕರು ಹಸಿವು, ಬಳಲಿಕೆ ಮತ್ತು ಗಂಭೀರ ಗಾಯದಿಂದ ಸಾವನ್ನಪ್ಪಿದರು. ಅವರೆಲ್ಲ ಮನೆಗೆ ತಲುಪಿರುವುದನ್ನು ಮಾಧ್ಯಮಗಳು ವಿಸ್ತೃತ ವರದಿ ಮಾಡಿದವು, ಆದರೆ ಕಳೆದ ಒಂದೂವರೆ ವರ್ಷದಲ್ಲಿ ಅವರು ಹೇಗೆ ತಮ್ಮ ಬದುಕನ್ನು ನಿಭಾಯಿಸಿದರು ಎನ್ನುವ ಬಗ್ಗೆ ಚಿಕ್ಕ ಸುದ್ದಿಯನ್ನೂ ಬರೆದಿಲ್ಲ.

ಕಳೆದ ವರ್ಷ ಮೇ ತಿಂಗಳಲ್ಲಿ 50 ವರ್ಷ ಪ್ರಾಯದ ಸಂಜೀವನಿ ಸಾಳ್ವೆ ಪುಣೆಯಿಂದ 250 ಕಿ.ಮೀ. ದೂರದಲ್ಲಿರುವ ಬೀಡ್‌ ತನ್ನ ಊರಾದ ರಾಜೂರಿ ಘೋಡ್ಕಾಗೆ ಕುಟುಂಬದೊಂದಿಗೆ ಹಿಂದಿರುಗಿದರು. “ನಾವು ಹೇಗೋ ಒಂದು ತಿಂಗಳು ಸುಧಾರಿಸಿಕೊಂಡೆವು. ಆದರೆ ಎಲ್ಲವೂ ಸರಿಹೊಂದಲು ಇನ್ನೂ ಕೆಲವು ಸಮಯ ತೆಗೆದುಕೊಳ್ಳಬಹುದು ಎಂದು ಅರಿತು ನಾವು ಒಂದು ಟೆಂಪೋವನ್ನು ಬಾಡಿಗೆಗೆ ತೆಗೆದುಕೊಂಡು ಹಿಂದಿರುಗಿದೆವು,” ಎನ್ನುತ್ತಾರೆ ಸಂಜೀವನಿ. ಅವರು ಪುಣೆಯಲ್ಲಿ ಮನೆಗೆಲಸ ಮಾಡಿ ತಿಂಗಳಿಗೆ 5,000 ರೂ. ಗಳಿಸುತ್ತಿದ್ದರು. ಅವರ ಗಂಡು ಮಕ್ಕಳಾದ 30 ವರ್ಷದ ಅಶೋಕ್‌ ಹಾಗೂ 26ವರ್ಷದ ಅಮರ್‌ ಹಾಗೂ 33 ವರ್ಷದ ಭಾಗ್ಯಶ್ರೀ ನಗರದಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. ಅವರು ಸಂಜೀವನಿ ಜೊತೆಯಲ್ಲೇ ಹಿಂದಿರುಗಿದರು. ನವ ಬುದ್ಧ (ಹಿಂದೆ ದಲಿತರು) ಸಮುದಾಯಕ್ಕೆ ಸೇರಿರುವ ಈ ಕುಟುಂಬ ಕೆಲಸ ಪಡೆಯಲು ಹರಸಾಹಸ ಪಡುತ್ತಿದೆ.

ಭಾಗ್ಯಶ್ರೀ ಅವರು ಇತ್ತೀಚೆಗೆ ಪುಣೆಗೆ ಹಿಂದಿರುಗಿದ್ದಾರೆ, ಆದರೆ ಅವರ ಸಹೋದರರು ಬೀಡ್‌ನಲ್ಲೇ ಉಳಿದುಕೊಳ್ಳಲು ತೀರ್ಮಾನಿಸಿದ್ದಾರೆ. “ನಾವು ಮತ್ತೆ ನಗರಕ್ಕೆ ಹೋಗಲು ಬಯಸುವುದಿಲ್ಲ, ಕೆಲವೊಂದು ಅನಿವಾರ್ಯತೆ ಇರುವುದರಿಂದ [ಅವರ ಮಗನ ಶಿಕ್ಷಣ] ಭಾಗ್ಯಶ್ರೀ ಹಿಂದಿರುಗಿದ್ದಾರೆ. ಆದರೆ ಅವರಿಗೆ ಕೆಲಸ ಸುಲಭವಾಗಿ ಸಿಗುವುದಿಲ್ಲ. ಈಗ ನಗರದಲ್ಲಿ ಪರಿಸ್ಥಿತಿ ಹಿಂದಿನಂತಿಲ್ಲ,” ಎಂದರು ಅಶೋಕ್‌.

Sanjeevani Salve and her son, Ashok (right), returned to Beed from Pune after the lockdown in March 2020
PHOTO • Parth M.N.

2020ರ ಮಾರ್ಚ್‌ನಲ್ಲಿ ನಡೆದ ಲಾಕ್‌ಡೌನ್‌ ವೇಳೆ ಪುಣೆಯಿಂದ ಬೀಡ್‌ಗೆ ಹಿಂದಿರುಗಿರುವ ಸಂಜೀವಿನಿ ಸಾಳ್ವೆ ಮತ್ತು ಅವರ ಮಗ ಅಶೋಕ್‌ (ಬಲ)

ಲಾಕ್‌ಡೌನ್‌ ಸಂದರ್ಭದಲ್ಲಿ ಪುಣೆಯಲ್ಲಿ ಅನುಭವಿಸಿದ ಸಂಕಷ್ಟಗಳು ಅಶೋಕ್‌ ಅವರನ್ನು ಕೆಟ್ಟ ಕನಸಾಗಿ ಕಾಡುತ್ತಿವೆ. “ಒಂದು ವೇಳೆ ಮೂರನೇ ಅಲೆ ಬಂದರೆ ಮತ್ತೆ ನಾವು ಅದೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಯೇ?” ಎಂದು ಅವರು ಕೇಳಿದರು. “ನಾವು ನಮ್ಮದೇ ಕಾಳಜಿಯಲ್ಲಿ ಇರಬೇಕು. ನಾವು ಆಹಾರ ಅಥವಾ ನೀರು ಕುಡಿದಿದ್ದೀವಾ ಎಂದು ಯಾರೂ ಕೇಳುವುದಿಲ್ಲ. ನಾವು ಸತ್ತರೂ ಕೂಡ ಯಾರೂ ಚಿಂತಿಸುವುದಿಲ್ಲ,”

ಊರಿನಲ್ಲಿರುವ ಸಮುದಾಯದವರು ಅಶೋಕ್‌ ಅವರಲ್ಲಿ ಹೊಸ ಭರವಸೆಯ ಅರಿವನ್ನು ಮೂಡಿಸಿದ್ದಾರೆ. “ಇಲ್ಲಿ ಜನರಿದ್ದಾರೆ ನಾನು ಲೆಕ್ಕಹಾಕಬಹುದು. ಮತ್ತು ಇಲ್ಲಿ ಮುಕ್ತ ಸ್ಥಳಗಳಿವೆ, ನಗರದ ಚಿಕ್ಕ ಕೊಠಡಿಗಳಲ್ಲಿ ಮುಚ್ಚಲ್ಪಟ್ಟಿರುವಾಗ ಅಲ್ಲಿ ಉಸಿರುಗಟ್ಟಿದ ಪರಿಸ್ಥಿತಿ ಇರುತ್ತದೆ,”

ಅಶೋಕ್‌ ಹಾಗೂ ಅಮರ್‌ ಬೀಡ್‌ನಲ್ಲಿ ಬಡಗಿ ಕೆಲಸದಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. “ಕೆಸಲ ಸ್ಥಿರವಾಗಿಲ್ಲ. ಆದರೆ ಹಳ್ಳಿಗಳಲ್ಲಿ ಖರ್ಚು ಬಹಳವಾಗಿರುವುದಿಲ್ಲ, ನಾವು ಅಗತ್ಯಕ್ಕಾಗುವಷ್ಟು ಗಳಿಸುತ್ತಿದ್ದೇವೆ,” ಎಂದಿರುವ ಅಶೋಕ್‌, “ಆದಾಗ್ಯೂ ತುರ್ತುಪರಿಸ್ಥಿತಿ ನಿರ್ಮಾಣವಾದರೆ ಮತ್ತೆ ನಾವು ಸಂಕಷ್ಟಕ್ಕೆ ಸಿಲುಕುತ್ತೇವೆ,”

ಇತ್ತೀಚಿನ ತಿಂಗಳುಗಳಲ್ಲಿ ಅನೇಕ ಮಂದಿ ನಗರವನ್ನು ತೊರೆದು ಹಳ್ಳಿ ಸೇರಿದರೂ ಕೆಲವರು ಮಾತ್ರ ಕಡಿಮೆ ಕೆಲಸ ಮತ್ತು ಕಡಿಮೆ ಸಂಬಳಕ್ಕೆ ನಗರದಲ್ಲೇ ನೆಲೆಕಂಡುಕೊಂಡಿದ್ದಾರೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ (ನರೇಗಾ) ಯಡಿ ಬಿಡುಗಡೆಯಾದ ಉದ್ಯೋಗ ಕಾರ್ಡ್‌ ಪ್ರಕಾರ, ಅನೇಕ ಜನರು ಕೆಲಸದ ಅಗತ್ಯತೆಯಲ್ಲಿದ್ದಾರೆ.

2020-21ರಲ್ಲಿ ಮಹಾರಾಷ್ಟ್ರದಲ್ಲಿ ನರೇಗಾ ಯೋಜನೆಯಡಿಯಲ್ಲಿ 8.5 ಲಕ್ಷ ಜನರಿಗೆ ಉದ್ಯೋಗ ಕಾರ್ಡ್‌ ನೀಡಲಾಗಿತ್ತು . ಇದು ಹಿಂದಿನ ವರ್ಷಕ್ಕಿಂತ ಮೂರುಪಟ್ಟು ಹೆಚ್ಚಿನದು, ಹಿಂದಿನ ಹಣಕಾಸು ವರ್ಷ 2.49 ಲಕ್ಷ ಜನರಿಗೆ ಕಾರ್ಡ್‌ ನೀಡಲಾಗಿತ್ತು.

ನೀಡಿರುವ ಭರವಸೆಯಂತೆ ಲಾಕ್‌ಡೌನ್‌ ನಂತರವೂ ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ನೀಡುವಲ್ಲಿ ಯೋಜನೆ ವಿಫಲವಾಗಿತ್ತು. ಮಹಾರಾಷ್ಟ್ರದಲ್ಲಿ 2020-21ರಲ್ಲಿ 18.24ಲಕ್ಷ ಜನರು ಉದ್ಯೋಗದ ಬೇಡಿಕೆಯಲ್ಲಿದ್ದರು, ಆದರೆ ಕೇವಲ 7 ಪ್ರತಿಶತ ಜನರು -1.36 ಲಕ್ಷ ಜನರು 100 ದಿನಗಳ ಉದ್ಯೋಗವನ್ನು ಪೂರ್ಣಗೊಳಿಸಿದ್ದರು. ಬೀಡ್‌ನಲ್ಲೂ ಇದೇ ದರ.

Sanjeevani at home in Rajuri Ghodka village
PHOTO • Parth M.N.

ರಾಜೂರಿ ಘೋಡ್ಕಾ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಸಂಜೀವನಿ

ಇತ್ತೀಚಿನ ತಿಂಗಳುಗಳಲ್ಲಿ ಅನೇಕ ಮಂದಿ ನಗರವನ್ನು ತೊರೆದು ಹಳ್ಳಿ ಸೇರಿದರೂ ಕೆಲವರು ಮಾತ್ರ ಕಡಿಮೆ ಕೆಲಸ ಮತ್ತು ಕಡಿಮೆ ಸಂಬಳಕ್ಕೆ ನಗರದಲ್ಲೇ ನೆಲೆಕಂಡುಕೊಂಡಿದ್ದಾರೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ (ನರೇಗಾ) ಯಡಿ ಬಿಡುಗಡೆಯಾದ ಉದ್ಯೋಗ ಕಾರ್ಡ್‌ ಪ್ರಕಾರ, ಅನೇಕ ಜನರು ಕೆಲಸದ ಅಗತ್ಯತೆಯಲ್ಲಿದ್ದಾರೆ

ಮನೆಯಲ್ಲಿದ್ದು ಜೀವನೋಪಾಯಕ್ಕೆ ಅವಕಾಶಗಳ ಕೊರತೆ ಮತ್ತು ನಗರದಲ್ಲಿ ಸಿಕ್ಕಿಕೊಳ್ಳುತ್ತೇವೆಂಬ ಅಪಾಯ ಇವುಗಳ ನಡುವೆ ವಲಸೆ ಕಾರ್ಮಿಕರ ಬದುಕು ಅತಂತ್ರವಾಗಿದೆ- ಹೆಚ್ಚಾಗಿ ಕೆಳವರ್ಗದ ಸಮುದಾಯಕ್ಕೆ ಸೇರಿದ ವಲಸೆ ಕಾರ್ಮಿಕರಲ್ಲಿ ಸಾಂಕ್ರಮಿಕ ಕಾಲದಲ್ಲಿ  ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. “ನಾವು ಲಾಕ್‌ಡೌನ್‌ ಘೋಷಿಸಿ ಒಂದು ತಿಂಗಳು ಆದ ನಂತರ ಮನೆ ತಲುಪಿದೆವು,”  ಎಂದು ಬೀಡ್‌ ತಾಲೂಕಿನ ಮಾಹಾಸೆವಾಡಿ ಗ್ರಾಮದ ತನ್ನ ಚಿಕ್ಕ ಸೋರುವ ಗುಡಿಸಲಿನಲ್ಲಿ ಕುಳಿತ 40 ವರ್ಷ ಪ್ರಾಯದ  ಅರ್ಚನಾ ಮಾಂಡ್ವೆ ಹೇಳುತ್ತಾರೆ. ಅವರ ಕುಟುಂಬ ರಾತ್ರಿ ಸುಮಾರು 200 ಕಿಮೀ ನಡೆದಿದೆ. “ನಾವು ಐದು ಜನರು ಮೋಟಾರ್‌ ಬೈಕಿನಲ್ಲಿ ಪ್ರಯಾಣಿಸುವುದು ಅಪಾಯಕಾರಿ. ಆದರೂ ಹಾಗೆ ಮಾಡದೆ ಬೇರೆ ದಾರಿ ಇರಲಿಲ್ಲ,” ಎಂದಿರುವ ಅವರು, “ಯಾವುದೇ ಆದಾಯ ಇಲ್ಲದೆ, ಲಾಕ್‌ಡೌನ್‌ ನಂತರ ನಮ್ಮಲ್ಲಿ ಹಣ ಇಲ್ಲವಾಗಿದೆ,”

ಅರ್ಚನಾ ಮತ್ತು ಚಿಂತಾಮಣಿ, ಅವರ ಪತಿ ಮತ್ತು ಮೂವರು ಮಕ್ಕಳಾದ 18 ವರ್ಷದ ಅಕ್ಷಯ, 15 ವರ್ಷದ ವಿಶಾಲ್‌ ಮತ್ತು 12ವರ್ಷದ ಮಹೇಶ್‌ ಜೊತೆ ಔರಂಗಾಬಾದ್‌ ನಗರದಲ್ಲಿದ್ದರು. ಚಿಂತಾಮಣಿ ಟ್ರಕ್‌ ಚಾಲಕರಾಗಿದ್ದರೆ, ಅರ್ಚನಾ ಕಸೂತಿ ಕೆಲಸ ಮಾಡುತ್ತಿದ್ದರು. ಅವರಿಬ್ಬರು ಸೇರಿ ತಿಂಗಳಿಗೆ 12,000 ರೂ. ಸಂಪಾದಿಸುತ್ತಿದ್ದರು. “ನಾವು ಔರಂಗಾಬಾದ್‌ನಲ್ಲಿ ಐದು ವರ್ಷಗಳ ಕಾಲ ನೆಲೆಸಿದ್ದೆವು ಮತ್ತು ಇದಕ್ಕೂ ಮುನ್ನ ಪುಣೆಯಲ್ಲಿ 10 ವರ್ಷಗಳ ಕಾಲ ಇದ್ದೆವು,” ಎಂದಿರುವ ಅರ್ಚನಾ, “ಅವರು [ಚಿಂತಾಮಣಿ]ಯಾವಾಗಲೂ ಟ್ರಕ್‌ ಚಾಲಕನ ಕೆಲಸ ಮಾಡುತ್ತಿದ್ದರು,”

ಮಹಾಸೆವಾಡಿಯಲ್ಲಿ ಚಿಂತಾಮಣಿಗೆ ತಾನು ಸರಿಯಾದ ಸ್ಥಳದಲ್ಲಿ ಇಲ್ಲ ಎಂದೆನಿಸತೊಡಗಿದೆ. “ಅವರು ಇಲ್ಲಿಯವರೆಗೆ ಕೃಷಿಭೂಮಿಯಲ್ಲಿ ಕೆಲಸ ಮಾಡಿಲ್ಲ. ಅವರು ಪ್ರಯತ್ನಿಸಿದರು ಆದರೆ ಅಷ್ಟು ಉತ್ತಮವಾಗಿ ನಿಭಾಯಿಸಲಿಲ್ಲ. ನಾನು ಕೂಡ ಕೃಷಿ ಕೆಲಸವನ್ನು ನೋಡುತ್ತಿದ್ದೇನೆ. ಆದರೆ ಹೆಚ್ಚಿಗೆ ಏನೂ ಸಿಗುತ್ತಿಲ್ಲ,” ಎನ್ನುತ್ತಾರೆ ಅರ್ಚನಾ.

ಮನೆಯಲ್ಲಿರುವುದು ಮತ್ತು ನಿರುದ್ಯೋಗ ಇದು ಚಿಂತಾಮಣಿಯ ಚಿಂತೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುವಂತೆ ಮಾಡಿದೆ. ಮಕ್ಕಳಿಗಾಗಿ ಮತ್ತು ಅವರ ಶಿಕ್ಷಣಕ್ಕಾಗಿ ಅವರು ಅಲೆದಾಡಿದರು., “ಅವರಲ್ಲೀಗ ಅಪ್ರಯೋಜಕ ಎಂಬ ಭಾವನೆ ಬಂದಿದೆ,” ಎನ್ನುತ್ತಾರೆ ಅರ್ಚನಾ. “ನಮ್ಮ ಹಣಕಾಸಿನ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಆ ಬಗ್ಗೆ ಅವರಿಗೆ ಏನೂ ಮಾಡಲಾಗುತ್ತಿಲ್ಲ, ಅವರಲ್ಲಿ ಆತ್ಮಗೌರವ ಕುಸಿಯುತ್ತಿದೆ. ಅವರು ಖಿನ್ನತೆಗೆ ಒಳಗಾಗಿದ್ದಾರೆ,”

ಕಳೆದ ವರ್ಷ ಜುಲೈ ತಿಂಗಳ ಒಂದು ದಿನ ಸಂಜೆ ಅರ್ಚನಾ ಮನೆಗೆ ಹಿಂದಿರುಗಿದಾಗಿ, ಅವರ ಪತಿ ಮನೆಯ ಚಾವಣಿಗೆ ನೇಣುಹಾಕಿಕೊಂಡಿದ್ದರು. ಒಂದು ವರ್ಷ ಕಳೆಯಿತು, ಅವರು ಬದುಕಿಗಾಗಿ ಒಂಟಿಯಾಗಿ ಹರಸಾಹಸಪಡುತ್ತಿದ್ದಾರೆ, “ತೋಟದಲ್ಲಿ ಕೆಲಸ ಮಾಡಿ ವಾರಕ್ಕೆ ಹೆಚ್ಚೆಂದರೆ 800 ರೂ. ಗಳಿಸುತ್ತೇನೆ, ಆದರೆ ಮತ್ತೆ ಔರಂಗಾಬಾದ್‌ಗೆ ಹೋಗುವ ಮನಸ್ಸು ನನಗಿಲ್ಲ,” ಎಂದರು. “ನಗರದಲ್ಲಿ ನಾನು ಒಬ್ಬಂಟಿಯಾಗಿ ಇರಲಾರೆ. ಅವರು ಜೊತೆಯಲ್ಲಿ ಇದ್ದಾಗ ಅಡ್ಡಿರಲಿಲ್ಲ, ಹಳ್ಳಿಯಲ್ಲಿ ನಾನು ಇಲ್ಲಿಯ ಜನರನ್ನು [ಸಹಾಯಕ್ಕಾಗಿ] ಆತುಕೊಂಡಿರಬಹುದು.,”

ಅರ್ಚನಾ ಹಾಗೂ ಅವರ ಮಕ್ಕಳು ಗುಡಿಸಲಿನಿಂದ ಹೊರ ಹೋಗಲು ಬಯಸುತ್ತಾರೆ. “ನಾನು ಒಳ ಬಂದಾಗ ಯಾವಾಗಲೂ ಅವರ ನೆನಪಾಗುತ್ತದೆ,” ಎಂದು ಅವರು ಹೇಳಿದರು, “ಆ ದಿನ ಮನೆಗೆ ಬಂದಾಗ ನಾನು ಏನು ನೋಡಿದೆ ಎಂಬುದರ ಬಗ್ಗೆನೇ ಯೋಚನೆ ಮಾಡುತ್ತಿರುತ್ತೇನೆ,”

Archana.Mandwe with her children, (from the left) Akshay, Vishal and Mahesh, in Mhasewadi village
PHOTO • Parth M.N.

ಮಹಾಸೆವಾಡಿ ಗ್ರಾಮದಲ್ಲಿ ತನ್ನ ಮಕ್ಕಳಾದ (ಎಡದಿಂದ) ಅಕ್ಷಯ್‌, ವಿಶಾಲ್‌ ಮತ್ತು ಮಹೇಶ್‌ ಅವರೊಂದಿಗೆ ಅರ್ಚನಾ ಮಾಂಡ್ವೆ

ಆದರೆ ಆಕೆಗೆ ಹೊಸ ಮನೆ ಪಡೆಯುತ್ತೇನೆಂಬ ಯೋಚನೆ ಮಾಡಲು ಅಸಾಧ್ಯ. ಸ್ಥಳೀಯ ಸರಕಾರಿ ಶಾಲೆಯಲ್ಲಿ ಓದುತ್ತಿರುವ ತನ್ನ ಮಕ್ಕಳಿಗೆ ಶಿಕ್ಷಣ ಮುಂದುವರಿಸುವ ಅವಕಾಶ ಸಿಗಬಹುದೇ ಎಂಬ ಕೌತುಕ. “ಅವರ ಶುಲ್ಕವನ್ನು ಹೇಗೆ ಭರಿಸುವುದೋ ಗೊತ್ತಿಲ್ಲ,” ಎಂದರು.

ಅರ್ಚನಾ ಅವರ ಸಹೋದರ ಮೂವರು ಹುಡುಗರ ಆನ್‌ಲೈನ್‌ ತರಗತಿಗಾಗಿ ಒಂದು ಸ್ಮಾರ್ಟ್‌ಫೋನ್‌ ತಂದುಕೊಟ್ಟರು. “ಆನ್‌ಲೈನ್‌ ಪಾಠವನ್ನು ಅನುಸರಿಸುವುದು ಕಷ್ಟ,” ಎನ್ನುತ್ತಾನೆ, ಎಂಜಿನಿಯರ್‌ ಆಗಬೇಕೆಂಬ ಕನಸು ಹೊತ್ತು 12ನೇ ತರಗತಿಯಲ್ಲಿ ಓದುತ್ತಿರುವ ಅಕ್ಷಯ್‌. “ನಮ್ಮ ಊರಿನಲ್ಲಿ ಯಾವಾಗಲೂ ನೆಟ್‌ವರ್ಕ್‌ [ಮೊಬೈಲ್‌] ಕಳಪೆಯಾಗಿರುತ್ತದೆ. ನಾನು ನನ್ನ ಗೆಳೆಯನ ಮನೆಗೆ ಹೋಗಿ ಅವನ ಪುಸ್ತಕ ನೋಡಿ ಅಭ್ಯಾಸ ಮಾಡುತ್ತೇನೆ,”

ತನ್ನ ತಂದೆ ಆತ್ಮಹತ್ಯೆ ಮಾಡಿಕೊಂಡ ನಂತರ ಅಕ್ಷಯ್‌ ಧೈರ್ಯ ಮಾಡಿ ಓದಿನ ಕಡೆಗೆ ಗಮನ ಹರಿಸುತ್ತಿದ್ದರೆ, ತಾನಾಜಿ ಹಟ್ಟಗಲೆ ಸಹೋದರ ಬಾಲಾಜಿಯ ನಾಪತ್ತೆ ಪ್ರಕರಣದಿಂದ ಹೊರಬರಲು ಯತ್ನಿಸುತ್ತಿದ್ದ, “ನಾನು ನನ್ನ ಸಹೋದರನನ್ನು ಕಳೆದುಕೊಂಡೆ,” ಎಂದು ಹೇಳಿದ ಆತ ಮುಂದುವರಿದು ಮಾತನಾಡಲು ನಿರಾಕರಿಸಿದ.

ಬಾಲಾಜಿಯನ್ನು ಹುಡುಕಲು ಬಾಬಾಸಾಹೇಬ್ ಮತ್ತು ಸಂಗೀತಾ ತಮ್ಮಿಂದಾದ ಉತ್ತಮ ಪ್ರಯತ್ನವನ್ನು ಮಾಡುತ್ತಿದ್ದಾರೆ, ಆದರೆ ಈ ಪ್ರಕ್ರಿಯೆ ಅವರಿಗೆ ಸುಲಭವಾಗಿರಲಿಲ್ಲ. “ನಾವು ಬೀಡ್‌ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಈ ಕುರಿತು ಕಾರ್ಯವೆಸಗುವಂತೆ ವಿನಂತಿಸಿಕೊಂಡೆವು,” ಎನ್ನುತ್ತಾರೆ ಬಾಬಾ ಸಾಹೇಬ್‌. “ನಮ್ಮಲ್ಲಿ ಅಲ್ಪ ಮೊತ್ತದ ಹಣ ಇದೆ, ಆದ್ದರಿಂದ ನಮಗೆ ಆಗಾಗ ಬೆಳಗಾವಿ [ಬೆಳಗಾಂವ್]ಗೆ ಹೋಗಲು ಆಗುತ್ತಿಲ್ಲ,”

ಸಾಮಾನ್ಯ ಪರಿಸ್ಥಿತಿಯಲ್ಲೂ ತುಳಿತಕ್ಕೊಳಗಾದ ಸಮುದಾಯದವರಿಗೆ ಪೊಲೀಸರಿಗೆ ನೀಡಿದ ದೂರೊಂದರ  ಸ್ಥಿತಿಯನ್ನು ಅರಿತುಕೊಳ್ಳುವುದು ಕಷ್ಟದ ಕೆಲಸ. ಆದರೆ ಸಾಂಕ್ರಾಮಿಕದ ಸಮಯ ಪರಿಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸಿತು. ಅಂತರ್‌ ರಾಜ್ಯ ಪ್ರಯಾಣಕ್ಕೆ ತಡೆಇರುವುದು ಮತ್ತು ಸೌಕರ್ಯಗಳ ಕೊರತೆ ಮತ್ತು ಕೈಯಲ್ಲಿ ಹಣ ಇಲ್ಲದಿರುವುದು ಪ್ರಮುಖವಾಗಿತ್ತು.

ಡಿಸೆಂಬರ್‌ನಲ್ಲಿ ಮೊದಲ ಪ್ರಯಾಣ ಮಾಡಿದ ನಂತರ ಬಾಬಾಸಾಹೇಬ್‌ ಮತ್ತು ಸಂಗೀತಾ ಮತ್ತೊಮ್ಮೆ ಬಾಲಾಜಿಯನ್ನು ಹುಡುಕಲು ಹೊರಟರು. ಆವಾಗ ಅವರು ತಮ್ಮಲ್ಲಿದ್ದ 10 ಕುರಿಗಳನ್ನು 60,000 ರೂ.ಗಳಿಗೆ ಮಾರಿ ಪ್ರಯಾಣ ಬೆಳೆಸಿದರು. “ನಾವು ಒಟ್ಟು 1,300 ಕಿಮೀ ಪ್ರಯಾಣಿಸಿದೆವು,” ಎನ್ನುತ್ತಾರೆ ಬಾಬಾಸಾಹೇಬ್‌. ಅವರು ವಾಹನದ ಒಡೊಮೀಟರ್‌ ಮೂಲಕ ಅದನ್ನು ಗುರುತಿಸಿಕೊಂಡಿದ್ದರು. “ಅದರಲ್ಲಿ ಸ್ವಲ್ಪ ಹಣ ಇನ್ನೂ ಇದೆ, ಆದರೆ ಅದು ಬಹಳ ಸಮಯ ಉಳಿಯವುದಿಲ್ಲ,”

ಕಬ್ಬು ಕತ್ತರಿಸುವ ಹೊಸ ಋತು ನವೆಂಬರ್‌ನಿಂದ ಆರಂಭಗೊಳ್ಳಲಿದೆ. ಬಾಬಾಸಾಹೇಬ್‌ ಅವರ ತಾಯಿ ಈಗಲೂ ಅನಾರೋಗ್ಯದಲ್ಲಿದ್ದರೂ, ಸಂಗೀತಾ ಜತೆ ಸೇರಿಕೊಂಡು ಕಬ್ಬ ಕತ್ತರಿಸುವುದಕ್ಕಾಗಿ ಹೋಗಲು ಅವರು ಸಜ್ಜಾಗಿದ್ದಾರೆ. ಈಗ ಕುಟುಂಬದ ಉಳಿವವನ್ನು ಪರಿಗಣಿಸಬೇಕಾಗಿದೆ ಎನ್ನುತ್ತಾರೆ ಬಾಬಾಸಾಹೇಬ್‌. “ನಾವು ಉಳಿದಿರುವ ನಮ್ಮ ಮಕ್ಕಳ ಆರೈಕೆ ಮಾಡಬೇಕಾಗಿದೆ,”

ಈ ಕತೆಯು ವರದಿಗಾರರಿಗೆ ಪುಲಿಟ್ಜರ್‌ ಸೆಂಟರ್‌ ಮೂಲಕ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ನೆರವಿನಿಂದ ಸಿದ್ಧಗೊಂಡ ಸರಣಿಯ ಭಾಗವಾಗಿದೆ

ಅನುವಾದ: ಸೋಮಶೇಖರ ಪಡುಕರೆ

Parth M.N.

पार्थ एम एन हे पारीचे २०१७ चे फेलो आहेत. ते अनेक ऑनलाइन वृत्तवाहिन्या व वेबसाइट्ससाठी वार्तांकन करणारे मुक्त पत्रकार आहेत. क्रिकेट आणि प्रवास या दोन्हींची त्यांना आवड आहे.

यांचे इतर लिखाण Parth M.N.
Translator : Somashekar Padukare

Somashekar Padukare is a Udupi based sports journalist. From last 25 years he is working as a sports journalist in different Kannada Daily.

यांचे इतर लिखाण Somashekar Padukare