ಅಲ್ಲಿ ನಾನು ಎಂದಿನಂತೆ ವರದಿ ಮಾಡಲು ಬಳಸುತ್ತಿದ್ದ ನೋಟ್‌ ಪುಸ್ತಕವನ್ನು ಮುಚ್ಚಿಟ್ಟು ಕಿವಿ ಮತ್ತು ಹೃದಯವನ್ನು ತೆರೆದಿಟ್ಟಿದ್ದೆ. ಅಂದು ನಾನು ದೆಹಲಿಯಲ್ಲಿ ಲೈಂಗಿಕ ಕಾರ್ಯಕರ್ತೆಯರ ತಂಡವೊಂದನ್ನು ಸಂದರ್ಶಿಸುತ್ತಿದ್ದೆ. ಅವರ ಮಾತುಗಳನ್ನು ನನ್ನ ಕಪ್ಪು ಬಣ್ಣದ ಬೈಂಡ್‌ ಇರುವ ಡೈರಿಯೊಂದರಲ್ಲಿ ದಾಖಲಿಸಿಕೊಳ್ಳುತ್ತಿದ್ದೆ. ಇದು ಕೊರೋನಾ ಸಮಯವಾಗಿದ್ದರಿಂದ ನಾವು ಸಾಧ್ಯವಿರುವ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದೇವಾದರೂ ಕೆಲವು ಕ್ಷಣಗಳಲ್ಲಿ ನಮಗೇ ಅರಿವಿಲ್ಲದಂತೆ ನಮ್ಮ ಮುಖದಲ್ಲಿದ್ದ ಮಾಸ್ಕ್‌ ಕೆಳಗಿಳಿಯಿತು. ಅವರ ಮಾಸ್ಕ್‌ ಕೆಳಗಿಳಿಯಲು ಕಾರಣ ಅವರ ಬದುಕಿನ ವಿವರಗಳನ್ನು ಹಂಚಿಕೊಳ್ಳಲು , ನಾನು ಕೆಳಗಿಳಿಸಿದ್ದು ನಿಮ್ಮ ಮಾತುಗಳಿಗೆ ನಾನು ಮಾನವೀಯವಾಗಿ ಕಿವಿಯಾಗುತ್ತಿದ್ದೇನೆ ಎನ್ನುವುದನ್ನು ಮುಖಭಾವದ ಮೂಲಕ ಅವರಿಗೆ ಖಾತರಿಪಡಿಸಲು.

ಬರವಣಿಗೆಯ ಕ್ರಿಯೆಯೆನ್ನುವುದು ಸೇತುವೆಯೂ ಹೌದು ಹಾಗೂ ದೂರವಾಗಿಸುವ ಮಾಧ್ಯಮವೂ ಹೌದು.

ನಮ್ಮ ಭೇಟಿ ಮುಗಿಯುತ್ತಿದ್ದಂತೆ ನಮ್ಮ ನಡುವೆ ಸಮನ್ವಯಕಾರರಾಗಿದ್ದವರು ಅವರಲ್ಲೊಬ್ಬರಿಗೆ ಮನೆಯವರೆಗೆ ಡ್ರಾಪ್‌ ಕೊಡಬಹುದೆ ಎಂದು ಕೇಳಿದರು. ಆಕೆ ನಾವು ಮಾತನಾಡುತ್ತಿದ್ದ ಗುಂಪಿನಲ್ಲಿರಲಿಲ್ಲ. ನಂತರ ಬಂದು ನಮ್ಮೊಂದಿಗೆ ಸೇರಿಕೊಂಡಿದ್ದರು. ನಾನು ಒಪ್ಪಿಕೊಂಡೆ. ಆತ ನಮ್ಮನ್ನು ಪರಸ್ಪರ ಪರಿಚಯಿಸಿದ ನಂತರ ಒಬ್ಬರಿಗೊಬ್ಬರು ನಗು ವಿನಿಮಯ ಮಾಡಿಕೊಂಡೆವು. ಆಕೆಯ ಹೆಸರಿಗೆ ಇಂಗ್ಲಿಷಿನಲ್ಲಿ ಗಡಿಯೆಂದು ಅರ್ಥವಿದೆ. ಆದರೆ ನಾವು ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಅದೆಲ್ಲವನ್ನೂ ಮರೆತೆವು. ಆಕೆ ತಾನು ಒಬ್ಬ ಬಹು ಮುಖ್ಯ ಕ್ಲೈಂಟ್‌ ಒಬ್ಬರನ್ನು ಕಾಣಲು ಹೋಗುತ್ತಿರುವುದಾಗಿ ತಿಳಿಸಿದರು. ಇಂದಿನ ತಂತ್ರಜ್ಞಾನ ಅಭಿವೃದ್ಧಿಯ ದಿನಗಳಲ್ಲಿ ಗ್ರಾಹಕರು ಹೇಗೆ ಲೈಂಗಿಕ ಕಾರ್ಯಕರ್ತೆಯರ ಮುಖ ನೋಡಿ ಆಯ್ದುಕೊಳ್ಳುತ್ತಾರೆನ್ನುವುದನ್ನು ಆಕೆ ನನಗೆ ತಿಳಿಸಿದರು. ನಾನು ಆಕೆಯ ಕೆಲಸದ ಕುರಿತು ಕೇಳುವ ಧೈರ್ಯ ಮಾಡಿದೆ. ಆಕೆ ಎಲ್ಲವನ್ನೂ ಹಂಚಿಕೊಂಡರು. ನಾವು ಪ್ರೇಮದ ಕುರಿತಾಗಿ ಮಾತನಾಡಿದೆವು. ನಾನು ನಿಧಾನವಾಗಿ ಕಾರು ಓಡಿಸಿದೆ. ಆಕೆಯ ಕಣ್ಣುಗಳು ಸುಂದರವಾಗಿದ್ದವು. ಹೃದಯ ಸೆಳೆಯುವಂತಿದ್ದವು.

ನನ್ನ ಕೈಗಳು ಸ್ಟಿಯರಿಂಗ್‌ ವೀಲ್‌ನ ಮೇಲಿದ್ದವು. ಆದರೆ ನಾನು ಏನನ್ನೂ ಓಡಿಸುತ್ತಿರಲಿಲ್ಲ. ಆಕೆ ತನ್ನ ಮೊಬೈಲಿನಲ್ಲಿದ್ದ ಆತನ ಫೋಟೊವನ್ನು ತೋರಿಸಿದರು. ಈ ಕತೆಯಲ್ಲಿ ನಾನು ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ ಆದರೂ ಬರೆಯಲು ಕುಳಿತೆ. ನಾನು ಗಡಿ ದಾಟುತ್ತಿದ್ದೇನೆ ಎನ್ನಿಸತೊಡಗಿತು. ತೀರಾ ಕಚ್ಚಾ ಭಾವನೆಗಳು… ಆದರೂ ಬರೆಯುತ್ತಿದ್ದೇನೆ…

ಶಾಲಿನಿ ಸಿಂಗ್ ಅವರ ದನಿಯಲ್ಲಿ ಕವಿತೆಯನ್ನು ಕೇಳಿ

ಕಾಡಿಗೆ ಹಚ್ಚಿದ ಕಣ್ಣುಗಳು

ಪ್ರಜ್ವಲಿಸುವ ಬೆಳಕಿನ ಕೋಣೆಯಿಂದ ದೂರ
ಅಲ್ಲೆಲ್ಲೋ ಕಣ್ಣು ಹಾಯಿಸುವ ಕಪ್ಪು ಬಿಳುಪು ನೋಟಗಳು
ಅದರ ಮಾತುಗಳನ್ನು
ಒಳ್ಳೆಯ ಅಥವಾ ಕೆಟ್ಟ ಪದಗಳು
ಹೊಳೆವ ಖಾಳಿ ಹಾಳೆಗಳು
ಯಾವ ಶಾಯಿಯೂ ಬರೆಯಲಾರವು...
ತೆರೆದ ರಸ್ತೆಯೊಂದರಲ್ಲಿ
ಬೆತ್ತಲೆ ಬಣ್ಣಗಳಿಂದ ತುಂಬಿದ
ನಿನ್ನ ಜಗತ್ತನ್ನು ಕಾಳಜಿಯೊಂದಿಗೆ ತೆರೆದು ತೋರಿಸಿದೆ.

ತೋರಿಸಿದೆ ನೀನು ನನಗೆ,
ಎಳೆಯ ಪ್ರಾಯಕ್ಕೆ ವಿಧವೆಯಾಗುವುದೆಂದರೆ ಹೇಗಿರುತ್ತದೆ,
ಸೈನಿಕನೊಬ್ಬನ ಹೆಂಡತಿಯಾಗಿರುವುದೆಂದರೆ ಹೇಗಿರುತ್ತದೆ,
ಹೇಗಿರುತ್ತದೆ ನಮಗಾಗಿ ಬಾಗುವ, ಆದರೆ ಕಪಟಿ ಪ್ರೇಮಿಯನ್ನು ಹೊಂದುವುದು,
ಮತ್ತು ಹೇಗಿರುತ್ತದೆ ಅಂಗಗಳನ್ನು ಕನಸುಗಳಿಗಾಗಿ ಮಾರುವುದು,
ಹಣಕ್ಕಾಗಿ ಅಂಗಗಳನ್ನು ಮಾರುವುದು.
ಹೇಗನ್ನಿಸುತ್ತದೆ ಯಾರದೋ ಡಿಜಿಟಲ್‌ ಗೂಡಿನಲ್ಲಿ
ಜೀವಂತ ಸಮಾಧಿಯಾಗುವಾಗ ಎನ್ನುವುದನ್ನು
ಮತ್ತು ಕಾಲ್ಪನಿಕ ಪ್ರಣಯವೊಂದನ್ನು ದಿನ ದಿನವೂ ಬದುಕುವಾಗ ಹೇಗಿರುತ್ತದೆನ್ನುವುದನ್ನು.
"ಉಳಿಸಿಕೊ‍ಳ್ಳಲೇಬೇಕಿದ್ದ ಎಳೆಯ ಜೀವಗಳಿದ್ದವು ನನಗೆ " ಎಂದೆ ನೀನು.

ಮುಳುಗುವ ಸೂರ್ಯ ಮೂಗು ನತ್ತಿನ ಮೇಲೆ ಹೊಳೆಯುತ್ತಿತ್ತು
ಒಂದು ಕಾಲದಲ್ಲಿ ಹಾಡುತ್ತಿದ್ದರಬಹುದಾದ ಕಂಗಳೂ ಹೊಳೆಯುತ್ತಿದ್ದವು.
ಅಗ್ಗದ ಕೋಲ್ಡ್‌ ಕ್ರೀಮ್‌ ಆಸೆಗಳಿಗೆ ಕರೆ ನೀಡುತ್ತಿತ್ತು
ದಣಿದ ಕಚ್ಚಾ ದೇಹದಲ್ಲಿ.
ಧೂಳು ಹಾರುತ್ತಿತ್ತು, ರಾತ್ರಿ ಆವರಿಸುತ್ತಿತ್ತು
ಪ್ರೇಮವಿಲ್ಲದ ಕೆಲಸದ
ಇನ್ನೊಂದು ದಿನ ಆಗಷ್ಟೇ ಮೈದೆರೆಯುತ್ತಿತ್ತು.

ಅನುವಾದ: ಶಂಕರ. ಎನ್. ಕೆಂಚನೂರು

Shalini Singh

শালিনী সিং পারি-র পরিচালনের দায়িত্বে থাকা কাউন্টারমিডিয়া ট্রাস্টের প্রতিষ্ঠাতা অছি-সদস্য। দিল্লি-ভিত্তিক এই সাংবাদিক ২০১৭-২০১৮ সালে হার্ভার্ড বিশ্ববিদ্যালয়ে নিম্যান ফেলো ফর জার্নালিজম ছিলেন। তিনি পরিবেশ, লিঙ্গ এবং সংস্কৃতি নিয়ে লেখালিখি করেন।

Other stories by শালিনী সিং
Illustration : Priyanka Borar

নিউ-মিডিয়া শিল্পী প্রিয়াঙ্কা বোরার নতুন প্রযুক্তির সাহায্যে ভাব এবং অভিব্যক্তিকে নতুন রূপে আবিষ্কার করার কাজে নিয়োজিত আছেন । তিনি শেখা তথা খেলার জন্য নতুন নতুন অভিজ্ঞতা তৈরি করছেন; ইন্টারেক্টিভ মিডিয়ায় তাঁর সমান বিচরণ এবং সেই সঙ্গে কলম আর কাগজের চিরাচরিত মাধ্যমেও তিনি একই রকম দক্ষ ।

Other stories by Priyanka Borar
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru