2020ರ ಮಾರ್ಚ್ 25ರಂದು ಹೇರಲಾದ ಮೊದಲ ಲಾಕ್ಡೌನ್ ಲಕ್ಷಾಂತರ ಜನರ ಬದುಕಿನಲ್ಲಿ ಸಂಕಷ್ಟಗಳನ್ನು ತಂದೊಡ್ಡಿತು.
“ನಾವು ಇದ್ದ ಹಣವನ್ನೆಲ್ಲ ಕಳೆದುಕೊಂಡು ಖಾಲಿ ಕೈಯಾದೆವು” ಎನ್ನುತ್ತಾರೆ ಜಮ್ಮುವಿನ ಕಟ್ಟಡ ಕಾರ್ಮಿಕರಾದ ಮೋಹನ್ ಲಾಲ್ ಮತ್ತು ಅವರ ಪತ್ನಿ ನರ್ಮದಾಬಾಯಿ. ಲಾಕ್ಡೌನ್ ಆರಂಭದಲ್ಲಿ ಅವರ ಬಳಿ ಎರಡು ಸಾವಿರ ರೂಪಾಯಿಗಳಷ್ಟೇ ಉಳಿದಿತ್ತು. ಅವರು ಪಡಿತರ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ತಮ್ಮ ಗುತ್ತಿಗೆದಾರರ ಬಳಿ ಸಾಲ ಮಾಡಬೇಕಾಯಿತು.
ಒಟ್ಟಾರೆಯಾಗಿ, ಭಾರತದಲ್ಲಿ ನಿರುದ್ಯೋಗ ದರವು 2020ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇಕಡಾ 23 ಕ್ಕೆ ಏರಿದೆ - ಇದು 2020ರ ಫೆಬ್ರವರಿಯಲ್ಲಿನ ದರಕ್ಕಿಂತ ಮೂರು ಪಟ್ಟು ಹೆಚ್ಚು (ಶೇಕಡಾ 7.3) ಎಂದು ಗ್ರಾಮೀಣ ಮತ್ತು ಕೃಷಿ ಭಾರತದ ಸ್ಥಿತಿ ವರದಿ 2020 ತಿಳಿಸಿದೆ. ಸಾಂಕ್ರಾಮಿಕ ಪಿಡುಗಿಗೆ ಮೊದಲು (2018-19), ಇದು ಶೇಕಡಾ 8.8 ರಷ್ಟಿತ್ತು.








