"ಇದು ಶಾಲೆ" ಎಂದ ಅತುಲ್ ಭೋಸಲೆ ಅವರ ತೋರು ಬೆರಳು ಮಹಾರಾಷ್ಟ್ರದ ಗುಂಡೇಗಾಂವ್ ಗ್ರಾಮದ ಅಂಚಿನಲ್ಲಿರುವ ಬಂಜರು ಹೊಲಗಳ ಮಧ್ಯೆ ನಿಂತಿರುವ ಸಣ್ಣ, ಎರಡು ಕೋಣೆಗಳ ಕಾಂಕ್ರೀಟ್ ರಚನೆಯನ್ನು ತೋರಿಸುತ್ತಿದ್ದವು. ಈ ಹಳ್ಳಿಯ ಕೆಸರು ರಸ್ತೆಯ ಮೂಲಕ ನಡೆದುಕೊಂಡು ಹೋಗುವಾಗ ನೀವು ಅದನ್ನು ನೋಡದೆ ಇರಲಾಗದು. ಈ ದಾರಿಯ ಇನ್ನೊಂದು ಕೊನೆ ನಿಮ್ಮನ್ನು ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಸಣ್ಣ ಪಾರ್ಧಿ ನೆಲೆಯ ಪ್ರದೇಶಕ್ಕೆ ಕರೆದೊಯ್ಯುತ್ತದೆ.
ನೀಲಿ ಕಿಟಕಿಗಳು, ವರ್ಣರಂಜಿತ ಕಾರ್ಟೂನ್ ಚಿತ್ರಗಳು ಮತ್ತು ಗೋಡೆಗಳ ಮೇಲೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ವರ್ಣರಂಜಿತ ಮುಖಗಳ ಸಾಲುಗಳನ್ನು ಹೊಂದಿರುವ ತಿಳಿ-ಹಳದಿ ಕಾಂಕ್ರೀಟ್ ರಚನೆಯು ನಿಮ್ಮ ಗಮನವನ್ನು ಸೆಳೆಯುತ್ತದೆ. ಇಲ್ಲಿನ 20 ಪಾರ್ಧಿ ಕುಟುಂಬಗಳ ಮನೆಗಳಾದ ಟಾರ್ಪಾಲಿನ್ ಛಾವಣಿಗಳನ್ನು ಹೊಂದಿರುವ ತಾತ್ಕಾಲಿಕ ಗುಡಿಸಲುಗಳು ಮತ್ತು ಮಣ್ಣಿನ ಮನೆಗಳಿಗೆ ವಿರುದ್ಧವಾಗಿ ಇದು ಇನ್ನೂ ಎದ್ದು ಕಾಣುತ್ತದೆ.
“ಅತಾ ಅಮ್ಚ್ಯಾಕಡೆ ವಿಕಾಸ್ ಮಂಜೆ ನಿ ಶಲಾಚ್ ಆಹೆ. ವಿಕಾಸಾಚಿ ನಿಶಾನಿ [ಅಭಿವೃದ್ಧಿಯ ಹೆಸರಿನಲ್ಲಿ ನಮಗೆ ಸಿಕ್ಕಿರುವ ಏಕೈಕ ಸೌಲಭ್ಯವೆಂದರೆ ಈ ಶಾಲೆ]" ಎಂದು 46 ವರ್ಷದ ಅತುಲ್ ಭೋಸಲೆ ಹೇಳುತ್ತಾರೆ. ಅವರು ಅಹ್ಮದ್ ನಗರ ಜಿಲ್ಲೆಯ ನಗರ ತಾಲ್ಲೂಕಿನ ಪೌಟ್ಕವಸ್ತಿ ಎನ್ನುವ ಕುಗ್ರಾಮಕ್ಕೆ ಸೇರಿದವರು.
“ದೂಸ್ರಾ ಕಾಯ್ ನಾಯ್. ವಸ್ತಿತ್ ಯಾಯ್ಲಾ ರಾಸ್ತಾ ನಾಯ್, ಪಾನಿ ನಾಯ್, ಲೈಟ್ ನಾಯ್ ಕಾಯ್, ಪಕ್ಕಿ ಘರ್ ನಾಅಯಿ [ಬೇರೆ ಏನೂ ಇಲ್ಲ. ರಸ್ತೆಗಳಿಲ್ಲ. ನೀರಿಲ್ಲ. ವಿದ್ಯುತ್ ಇಲ್ಲ. ಪಕ್ಕಾ ಮನೆಗಳು ಇಲ್ಲ]. ಶಾಲೆಯು ಹತ್ತಿರದಲ್ಲಿದೆ, ಹಾಗಾಗಿ ನಮ್ಮ ಮಕ್ಕಳು ಕನಿಷ್ಠ ಓದಲು ಮತ್ತು ಬರೆಯಲು ಕಲಿಯುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ. ಈ ಸಣ್ಣ ಕಲಿಕೆಯ ಸ್ಥಳದ ಬಗ್ಗೆ ಅತುಲ್ ಹೆಮ್ಮೆಪಡುತ್ತಾರೆ. ಅವರ ಮಕ್ಕಳಾದ ಸಾಹಿಲ್ ಮತ್ತು ಶಬ್ನಮ್ ಇತರ 16 ವಿದ್ಯಾರ್ಥಿಗಳೊಂದಿಗೆ ಅಧ್ಯಯನ ಮಾಡುತ್ತಿರುವ ಸ್ಥಳ ಇದು - ಏಳು ಹುಡುಗಿಯರು ಮತ್ತು ಒಂಬತ್ತು ಹುಡುಗರು.
ಈಗ ಇದೇ ಶಾಲೆಯನ್ನು ರಾಜ್ಯ ಸರ್ಕಾರವು ಬೇರೆಡೆಗೆ ಸ್ಥಳಾಂತರಿಸಿ ವಿಲೀನಗೊಳಿಸಲು ಯೋಜಿಸುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಈ ಸಮುದಾಯಕ್ಕೆ ಇದು ಆಘಾತಕಾರಿ ಸುದ್ದಿ. ಅಲೆಮಾರಿ ಗುಂಪು ಮತ್ತು ಡಿನೋಟಿಫೈಡ್ ಬುಡಕಟ್ಟು ಜನಾಂಗವಾದ ಪಾರ್ಧಿ ಸಮುದಾಯನ್ನು ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ.
ಈ ಬುಡಕಟ್ಟು ಜನಾಂಗವು ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲದಿಂದ ತೀವ್ರ ತಾರತಮ್ಯ ಮತ್ತು ವಂಚನೆಗೆ ಒಳಗಾಗಿದೆ. 1871ರಲ್ಲಿ, ಬ್ರಿಟಿಷ್ ಆಡಳಿತವು ಸುಮಾರು 200 ಆದಿವಾಸಿ ಗುಂಪುಗಳು ಮತ್ತು ಇತರ ಜಾತಿಗಳನ್ನು ದಮನಿಸುವ ಉದ್ದೇಶದಿಂದ 'ಕ್ರಿಮಿನಲ್ ಬುಡಕಟ್ಟುಗಳ ಕಾಯ್ದೆ' (ಸಿಟಿಎ) ಜಾರಿಗೆ ತಂದಿತು . ಅದರಡಿಯಲ್ಲಿ ಪಾರ್ಧಿ ಸಮುದಾಯವನ್ನೂ ಪಟ್ಟಿ ಮಾಡಲಾಗಿತ್ತು. ಈ ಕಾಯಿದೆಯ ಮೂಲ ಕಲ್ಪನೆಯೆಂದರೆ, ಈ ಪಟ್ಟಿಯಲ್ಲಿನ ಯಾವುದೇ ಗುಂಪಿನಲ್ಲಿ ಜನಿಸಿದರೆ ನೀವು ಹುಟ್ಟಿನಿಂದಲೇ ಅಪರಾಧಿ. ಸ್ವತಂತ್ರ ಭಾರತದಲ್ಲಿ 1952ರಲ್ಲಿ ಸಿಟಿಎ ಕಾಯ್ದೆಯನ್ನು ರದ್ದುಪಡಿಸಲಾಯಿತು, ಬಲಿಪಶು ಸಮುದಾಯಗಳನ್ನು ಡಿನೋಟಿಫೈ ಮಾಡಲಾಯಿತು. ಆದರೆ ಆ ಹಳೆಯ ಕಳಂಕ ಇಂದಿಗೂ ಕಡಿಮೆಯಾಗಿಲ್ಲ. ಪಾರ್ಧಿಗಳಿಗೆ ನಿಯಮಿತ ಉದ್ಯೋಗ ಸಿಗುವುದಿಲ್ಲ. ಸಾಮಾನ್ಯ ಶಾಲೆಗಳಿಗೆ ಹಾಜರಾಗಲು ಪ್ರಯತ್ನಿಸುವ ಅವರ ಮಕ್ಕಳನ್ನು ಬೆದರಿಸಲಾಗುತ್ತದೆ ಮತ್ತು ಕೆಲವೊಮ್ಮೆ ಹೊಡೆಯಲಾಗುತ್ತದೆ.
















