ಬಂಧನ, ಬಲವಂತದ ಮದುವೆ, ಲೈಂಗಿಕ ಮತ್ತು ದೈಹಿಕ ಹಿಂಸೆ ಮತ್ತು 'ಸರಿಪಡಿಸುವ' ಚಿಕಿತ್ಸೆಗಳು ಇವು ಎಲ್ಜಿಬಿಟಿಕ್ಯುಐಎ + ಸಮುದಾಯದ ಸದಸ್ಯರು ಆಗಾಗ ಎದುರಿಸುತ್ತಿರುವ ಬೆದರಿಕೆಗಳು ಮತ್ತು ಅನುಭವಗಳಾಗಿವೆ ಎಂದು ಇಂಟರ್‌ನ್ಯಾಷನಲ್ ಕಮಿಷನ್ ಆಫ್ ಜ್ಯೂರಿಸ್ಟ್ಸ್ ಪ್ರಕಟಿಸಿದ ಲಿವಿಂಗ್ ವಿತ್ ಡಿಗ್ನಿಟಿ ಎಂಬ 2019ರ ವರದಿ ಹೇಳುತ್ತದೆ.
ಮಹಾರಾಷ್ಟ್ರದ ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿರುವ ತಮ್ಮ ಮನೆಗಳನ್ನು ತೊರೆದು ಮುಂಬೈನಲ್ಲಿ ಒಟ್ಟಿಗೆ ವಾಸಿಸುತ್ತಿರುವ ವಿಧಿ ಮತ್ತು ಆರುಷ್ (ಹೆಸರುಗಳನ್ನು ಬದಲಾಯಿಸಲಾಗಿದೆ) ಪ್ರಕರಣವನ್ನೇ ತೆಗೆದುಕೊಳ್ಳಿ. ವಿಧಿ ಮತ್ತು ಆರುಷ್ (ಅವರು ಟ್ರಾನ್ಸ್ ಮ್ಯಾನ್ ಎಂದು ಗುರುತಿಸಿಕೊಳ್ಳುತ್ತಾರೆ) ನಗರದ ಬಾಡಿಗೆ ಕೋಣೆಗೆ ಸ್ಥಳಾಂತರಗೊಂಡರು. "ನಮ್ಮ ಸಂಬಂಧದ ಬಗ್ಗೆ ಭೂಮಾಲೀಕರಿಗೆ ತಿಳಿದಿಲ್ಲ. ಅದನ್ನು ಮರೆಮಾಚಬೇಕಿದೆ. ನಮಗೆ ಕೋಣೆಯನ್ನು ಖಾಲಿ ಮಾಡಲು ಇಷ್ಟವಿಲ್ಲ" ಎಂದು ಆರುಷ್ ಹೇಳುತ್ತಾರೆ.
ಎಲ್ಜಿಬಿಟಿಕ್ಯುಐಎ + ವ್ಯಕ್ತಿಗಳಿಗೆ ಆಗಾಗ ಮನೆ ನೀಡಲು ನಿರಾಕರಿಸಲಾಗುತ್ತದೆ, ಬಲವಂತವಾಗಿ ಹೊರಹಾಕಲಾಗುತ್ತದೆ ಮತ್ತು ಕುಟುಂಬ, ಭೂಮಾಲೀಕರು, ನೆರೆಹೊರೆಯವರು ಮತ್ತು ಪೊಲೀಸರು ಕಿರುಕುಳ ನೀಡುತ್ತಾರೆ. ಅನೇಕರು ವಸತಿಹೀನತೆಯನ್ನು ಎದುರಿಸುತ್ತಿದ್ದಾರೆ ಎಂದು ಲಿವಿಂಗ್ ವಿತ್ ಡಿಗ್ನಿಟಿ ವರದಿ ಹೇಳುತ್ತದೆ.
ಕಳಂಕ ಮತ್ತು ಕಿರುಕುಳವು ಅನೇಕ ಟ್ರಾನ್ಸ್‌ಜೆಂಡರ್ ಸಮುದಾಯದವರನ್ನು, ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ, ಮನೆಯನ್ನು ತೊರೆದು ಸುರಕ್ಷಿತ ಸ್ಥಳವನ್ನು ಹುಡುಕುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. 2021ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಬಿಡುಗಡೆ ಮಾಡಿದ ಪಶ್ಚಿಮ ಬಂಗಾಳದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಅಧ್ಯಯನವು "ಕುಟುಂಬವು ಅವರಿಗೆ ಲಿಂಗ ಅಭಿವ್ಯಕ್ತಿಯನ್ನು ಮರೆಮಾಚಲು ಒತ್ತಡ ಹೇರುತ್ತದೆ" ಎಂದು ಹೇಳಿದೆ. ಮತ್ತು ಸುಮಾರು ಅರ್ಧದಷ್ಟು ಜನರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಸಮಾಜದ ತಾರತಮ್ಯದ ನಡವಳಿಕೆಯಿಂದಾಗಿ ತಮ್ಮ ಮನೆಗಳನ್ನು ತೊರೆದಿದ್ದಾರೆ.
"ಕೇವಲ ನಾವು ಟ್ರಾನ್ಸ್‌ಜೆಂಡರ್ ಎನ್ನುವ ಕಾರಣಕ್ಕೆ ನಮಗೆ ಇಜ್ಜತ್ [ಗೌರವ] ಇಲ್ಲ ಎಂದರ್ಥವೇ?" ಎಂದು ಶಾಲೆಯಲ್ಲಿ, ಕೆಲಸದಲ್ಲಿ, ಬೀದಿಗಳಲ್ಲಿ, ಬಹುತೇಕ ಎಲ್ಲೆಡೆ ಎದುರಿಸಿದ ಹಲವಾರು ವರ್ಷಗಳ ಕಹಿ ಅನುಭವಗಳ ಹಿನ್ನೆಲೆಯಲ್ಲಿ ಮಾತನಾಡುವ ಟ್ರಾನ್ಸ್ ಮಹಿಳೆ ಶೀತಲ್ ಕೇಳುತ್ತಾರೆ. "ಎಲ್ಲರೂ ನಮ್ಮನ್ನು ಏಕೆ ತಿರಸ್ಕಾರದಿಂದ ನೋಡುತ್ತಾರೆ?" 'ಜನರು ನಮ್ಮನ್ನು ದುಷ್ಟಶಕ್ತಿಗಳಂತೆ ನೋಡುತ್ತಾರೆ' ಎಂಬ ಶೀರ್ಷಿಕೆಯ ಈ ಕಥೆಯಲ್ಲಿ ಅವರು ಕೇಳುತ್ತಾರೆ.






