10 ವರ್ಷವೂ ಆಗಿರದ ಎಜಾಝ್, ಯಾಸಿರ್, ಮತ್ತು ಶಮೀಮಾ ಕೆಲವೇ ವರ್ಷಗಳನ್ನಷ್ಟೇ ಶಾಲೆಯಲ್ಲಿ ಕಳೆದಿದ್ದರು. ಪ್ರತಿ ವರ್ಷ ಅವರು ನಾಲ್ಕು ತಿಂಗಳ ಕಾಲ ತಮ್ಮ ಅಲೆಮಾರಿ ಪೋಷಕರೊಡನೆ ತೆರಳುತ್ತಿದ್ದ ಕಾರಣ ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಪ್ರಾಥಮಿಕ ಶಿಕ್ಷಣ ಕಲಿಕೆಯಲ್ಲಿ ಬಹಳ ಹಿಂದೆ ಬೀಳುತ್ತಿದ್ದರು. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಮಕ್ಕಳಿಗೆ ಬಹಳ ಮುಖ್ಯವಾಗಿರುವ ಮೂಲ ಗಣಿತ, ವಿಜ್ಞಾನ, ಮತ್ತು ಸಮಾಜ ವಿಜ್ಞಾನದ ಪಾಠಗಳನ್ನು ತಪ್ಪಿಸಿಕೊಳ್ಳುವುದರ ಜೊತೆಗೆ ಪದಜ್ಞಾನ ಮತ್ತು ಬರವಣಿಗೆಯ ಕೌಶಲಗಳಲ್ಲೂ ಹಿಂದೆ ಬೀಳುತ್ತಿದ್ದರು.
ಅವರು 10 ವರ್ಷದವರಾಗಿರುವಾಗ ಅವರು ಅದುವರೆಗೆ ಕಳೆದುಕೊಂಡ ತರಗತಿಗಳನ್ನು ಲೆಕ್ಕ ಹಾಕಿದರೆ ಅದು ಒಂದು ಶೈಕ್ಷಣಿಕ ವರ್ಷಕ್ಕೆ ಸಮಾನಾಗಿರುತ್ತದೆ. ಇದು ಮುಂದಿನ ಬೆಂಚಿನ ವಿದ್ಯಾರ್ಥಿಗಳು ಕೂಡ ಸರಿದೂಗಿಸಿಕೊಳ್ಳಲು ಸಾಧ್ಯವಿಲ್ಲದ ಕಲಿಕಾ ನಷ್ಟ.
ಆದರೆ ಪರಿಸ್ಥಿತಿ ಈಗ ಹಾಗಿಲ್ಲ. ಈಗ ಈ ಮಕ್ಕಳ ಜೊತೆ ತಾನೂ ಪಾದ ಬೆಳೆಸುತ್ತಿದ್ದಾರೆ ಅವರ ಸಂಚಾರಿ ಶಿಕ್ಷಕ ಅಲಿ ಮೊಹಮ್ಮದ್. ಈ 25 ವರ್ಷದ ಶಿಕ್ಷಕ ಈಗ ತಮ್ಮ ಸೇವೆಯ ಮೂರನೇ ವರ್ಷವನ್ನು ಕಳೆಯುತ್ತಿದ್ದಾರೆ. ಅಲಿ ಕಾಶ್ಮೀರದ ಲಿಡ್ಡರ್ ಕಣಿವೆಯಲ್ಲಿರುವ ಗುಜ್ಜರ್ ನೆಲೆಯಾದ ಖಲಾನ್ನಲ್ಲಿ ಮಕ್ಕಳಿಗೆ ಕಲಿಸಲು ಬಂದಿದ್ದಾರೆ. ಅವರು ಮುಂದಿನ ನಾಲ್ಕು ಬೇಸಗೆ ತಿಂಗಳುಗಳಲ್ಲಿ (ಜೂನ್ - ಸೆಪ್ಟೆಂಬರ್) ಇಲ್ಲಿದ್ದು, ತಮ್ಮ ಪ್ರಾಣಿಗಳನ್ನು ಮೇಯಿಸಲು ತಂಗಿರುವ ಇಲ್ಲಿನ ಗುಜ್ಜರ್ ಕುಟುಂಬಗಳ ಮಕ್ಕಳಿಗೆ ಪಾಠ ಮಾಡಲಿದ್ದಾರೆ.
“ಬಹುಶಃ ನಾನು ಕೂಡಾ ಶಿಕ್ಷಕಿಯಾಗುತ್ತೇನೆ” ಎನ್ನುತ್ತಾ ನಾಚಿಕೆ ಸ್ವಭಾವದ ಶಮೀಮಾ ಜಾನ್ ತನಗೆ ಸರ್ಕಾರ ಕೊಟ್ಟಿರುವ ನೋಟ್ ಪುಸ್ತಕದಲ್ಲಿ ಮುಖ ಮುಚ್ಚಿಕೊಂಡಳು. ಅಲಿಯವರು ಕೆಲವೊಮ್ಮೆ ತಮ್ಮ ಸ್ವಂತ ಹಣ ಉಪಯೋಗಿಸಿ ಮಕ್ಕಳಿಗೆ ಅಗತ್ಯವಿರುವ ಪಠ್ಯ ಸಾಮಾಗ್ರಿಗಳನ್ನು ತರಿಸಿಕೊಡುತ್ತಾರೆ.
ಪಶುಪಾಲಕ ಸಮುದಾಯವಾದ ಗುಜ್ಜರ್ ಜನರು ಸಾಮಾನ್ಯವಾಗಿ ದನಗಳನ್ನು ಸಾಕುತ್ತಾರೆ ಮತ್ತು ಕೆಲವೊಮ್ಮೆ ಆಡು ಮತ್ತು ಕುರಿಗಳನ್ನು ಸಹ ಸಾಕುತ್ತಾರೆ. ಪ್ರತಿ ವರ್ಷದ ಬೇಸಗೆ ತಿಂಗಳುಗಳಲ್ಲಿ ಅವರು ತಮ್ಮ ಜಾನುವಾರುಗಳಿಗೆ ಒಳ್ಳೆಯ ಮೇವು ಮಾಳಗಳನ್ನು ಹುಡುಕಿಕೊಂಡು ಹಿಮಾಲಯದೆಡೆಗೆ ಸಾಗುತ್ತಾರೆ. ಈ ವಾರ್ಷಿಕ ವಲಸೆಯು ಒಂದು ಕಾಲದಲ್ಲಿ ಮಕ್ಕಳು ಶಾಲೆ ತಪ್ಪಿಸಲು ಕಾರಣವಾಗುತ್ತಿತ್ತು. ಇದು ಅವರ ಪ್ರಾಥಮಿಕ ಶಿಕ್ಷಣದ ಅಡಿಪಾಯವನ್ನೇ ದುರ್ಬಲಗೊಳಿಸುತ್ತಿತ್ತು.
ಆದರೆ ಈಗ ಈ ಕುಟುಂಬಗಳೊಡನೆ ಚಲಿಸುವ ಅಲಿಯವರಂತಹ ಶಿಕ್ಷಕರು ಆ ತಪ್ಪು ಮತ್ತೆ ಸಂಭವಿಸದಂತೆ ನೋಡಿಕೊಳ್ಳುತ್ತಿದ್ದಾರೆ. “ಕೆಲವು ವರ್ಷಗಳ ಹಿಂದೆ ನಮ್ಮ ಸಮುದಾಯದಲ್ಲಿ ಸಾಕ್ಷರರ ಸಂಖ್ಯೆ ಬಹಳ ಕಡಿಮೆಯಿತ್ತು. ಕೆಲವರಷ್ಟೇ ಶಾಲೆಗೆ ಹೋಗುತ್ತಿದ್ದರು. ನಾವು ಈ ಬೆಟ್ಟಗಳಿಗೆ ವಲಸೆ ಬರುತ್ತಿದ್ದ ಕಾರಣ ಶಾಲೆ ಮುಂದುವರೆಸಲು ಸಾಧ್ಯವಾಗುತ್ತಿರಲಿಲ್ಲ” ಎನ್ನುವ ಈ ಯುವ ಶಿಕ್ಷಕ ಒಂದು ಕಾಲದಲ್ಲಿ ತನ್ನ ಗುಜ್ಜರ್ ಪೋಷಕರೊಡನೆ ಇಲ್ಲಿಗೆ ವಲಸೆ ಬರುತ್ತಿದ್ದರು,
“ಈಗ ಈ ಯೋಜನೆಯಿಂದಾಗಿ ಮಕ್ಕಳಿಗೆ ಶಿಕ್ಷಕರು ಸಿಗುತ್ತಿದ್ದಾರೆ. ಅವರು ತಮ್ಮ ಶಾಲಾ ಕೆಲಸಗಳಲ್ಲಿ ತೊಡಿಗಿಸಿಕೊಳ್ಳುತ್ತಾರೆ ಮತ್ತು ಇದರಿಂದ ಸಮುದಾಯವೂ ಅಭಿವೃದ್ಧಿ ಹೊಂದುತ್ತಿದೆ”ಎಂದು ಅವರು ಮುಂದುವರೆದು ಹೇಳುತ್ತಾರೆ. “ಇದೊಂದು ವ್ಯವಸ್ಥೆ ಇಲ್ಲದೆ ಹೋಗಿದ್ದರೆ ಇಲ್ಲಿಗೆ ಬರುವ ಮಕ್ಕಳು ಕಲಿಕೆಯಲ್ಲಿ ಊರಿನಲ್ಲಿರುವ [ಅನಂತ್ ನಾಗ್ ಜಿಲ್ಲೆಯಲ್ಲಿದೆ] ಮಕ್ಕಳಿಗಿಂತ ನಾಲ್ಕು ತಿಂಗಳು ಹಿಂದೆ ಉಳಿಯುತ್ತಿದ್ದರು.”
ಅಲಿ, 2018-19ರಲ್ಲಿ ಪ್ರಾರಂಭಿಸಲಾದ ಕೇಂದ್ರ ಸರ್ಕಾರದ ಸಮಗ್ರ ಶಿಕ್ಷಾ ಯೋಜನೆ ಕುರಿತು ಹೇಳುತ್ತಿದ್ದಾರೆ. ಈ ಯೋಜನೆಯು "ಸರ್ವ ಶಿಕ್ಷಣ ಅಭಿಯಾನ (ಎಸ್ಎಸ್ಎ), ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್ಎಮ್ಎಸ್ಎ) ಮತ್ತು ಶಿಕ್ಷಕರ ಶಿಕ್ಷಣ (ಟಿಇ) ಮೂರು ಯೋಜನೆಗಳನ್ನು ಒಳಗೊಂಡಿದೆ." ಇದು, "ಶಾಲಾ ಶಿಕ್ಷಣಕ್ಕೆ ಸಮಾನ ಅವಕಾಶಗಳು ಮತ್ತು ಸಮಾನ ಕಲಿಕೆಯ ಅವಕಾಶಗಳ ದೃಷ್ಟಿಯಿಂದ ಅಳೆಯಲಾಗುವ ಶಾಲಾ ಪರಿಣಾಮಕಾರಿತ್ವವನ್ನು" ಸುಧಾರಿಸುವ ಉದ್ದೇಶವನ್ನು ಹೊಂದಿದೆ.
ಇಲ್ಲಿ ಶಾಲೆಯು ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ತೆಹಸಿಲ್ನ ಲಿಡ್ಡರ್ ನದಿಯ ದಡದ ಮೇಲಿದೆ. ಆದರೆ ಶಾಲೆಯೆಂದರೆ ಒಂದು ಹಸಿರು ಟೆಂಟ್. ಬಿಸಿಲಿರುವ ದಿನಗಳಲ್ಲಿ ಅಲಿ ಇಲ್ಲಿನ ವಿಶಾಲ ಹುಲ್ಲುಗಾವಲನ್ನೇ ತನ್ನ ತರಗತಿಯಾಗಿ ಪರಿವರ್ತಿಸಿಕೊಳ್ಳುತ್ತಾರೆ. ಅಲಿಯವರು ಜೀವಶಾಸ್ತ್ರ ವಿಭಾಗದಲ್ಲಿ ಪದವಿಯನ್ನು ಹೊಂದಿದ್ದು, ಜೊತೆಗೆ ಈ ಕೆಲಸಕ್ಕಾಗಿ ಮೂರು ತಿಂಗಳ ತರಬೇತಿಯನ್ನೂ ಪೂರ್ಣಗೊಳಿಸಿದ್ದಾರೆ. “ನಮಗೆ ಅಲ್ಲಿ ಮಕ್ಕಳಿಗೆ ಹೇಗೆ ಕಲಿಸಬೇಕು, ನಮ್ಮ ಕಲಿಕಾ ಫಲಿತಾಂಶದ ಗುರಿ ಯಾವುದಿರಬೇಕು ಎನ್ನುವುದನ್ನು, ಮತ್ತು ಮಕ್ಕಳ ನೈಜ ಕಲಿಕೆಯ ಮಾದರಿಗಳನ್ನು ನಮಗೆ ತೋರಿಸಲಾಗಿತ್ತು.”
ಅಂದು ಜೂನ್ ತಿಂಗಳ ಬೇಸಗೆಯ ಬೆಳಗ್ಗೆ ಅಲ್ಲಿ ಹುಲ್ಲಿನ ಮೇಲೆ ಕುಳಿತು ತಮ್ಮ ಸುತ್ತ ಕುಳಿತಿದ್ದ 5 – 10 ವಯಸ್ಸಿನ ಮಕ್ಕಳಿಗೆ ಪಾಠ ಹೇಳುತ್ತಿದ್ದರು. ಇನ್ನೊಂದು ಗಂಟೆ ಕಳೆದರೆ ಸಮಯ 12 ಆಗುವುದರಲ್ಲಿತ್ತು. ಅದು ಅವರು ಖಲನ್ ಕುಗ್ರಾಮದ ಮಕ್ಕಳ ತರಗತಿಯನ್ನು ಮುಗಿಸುವ ಸಮಯ. ಮಣ್ಣಿನ ಗಾರೆ ಮಾಡಿದ ಮನೆಗಳು ನದಿಯ ಹತ್ತಿರದ ಸಣ್ಣ ಇಳಿಜಾರಿನಲ್ಲಿವೆ. ಇಲ್ಲಿನ ಹೆಚ್ಚಿನ ನಿವಾಸಿಗಳು ಮನೆಯ ಹೊರಗೆ ಬಿಸಿಲು ಕಾಯುತ್ತಾ ಹೋಗಿ ಬರುವವರ ಜೊತೆ ಮಾತಿನಲ್ಲಿ ತೊಡಗಿದ್ದರು. ಇಲ್ಲಿರುವ ಕುಟುಂಬಗಳು ಒಟ್ಟು 20 ದನಗಳು ಹಾಗೂ ಎಮ್ಮೆಗಳು ಮತ್ತು 50 ಆಡು ಮತ್ತು ಕುರಿಗಳನ್ನು ಹೊಂದಿದ್ದಾರೆಂದು ಅಲ್ಲಿದ್ದ ಮಕ್ಕಳು ಪರಿಗೆ ತಿಳಿಸಿದರು.
“ಈ ಜಾಗದಲ್ಲಿ ಹಿಮ ಬೀಳುವುದರಿಂದ ಇಲ್ಲಿ ಶಾಲೆ ತಡವಾಗಿ ಆರಂಭಗೊಳ್ಳುತ್ತದೆ. ನಾನು ಇಲ್ಲಿಗೆ 10 ದಿನಗಳ ಕೆಳಗಷ್ಟೇ ಬಂದೆ [ಜೂನ್ 12, 2023],” ಎಂದು ಅವರು ಹೇಳಿದರು.
ಖಲಾನ್ ಲಿಡ್ಡರ್ ಹಿಮನದಿಗೆ ಹೋಗುವ ಮಾರ್ಗದಲ್ಲಿದೆ, ಇದು ಇನ್ನೂ 15 ಕಿಲೋಮೀಟರ್ ಎತ್ತರದಲ್ಲಿದೆ, ಸುಮಾರು 4,000 ಮೀಟರ್ ಎತ್ತರದಲ್ಲಿದೆ - ಈ ಸ್ಥಳಕ್ಕೆ ಅಲಿ ಈ ಪ್ರದೇಶದ ಯುವಕನೊಡನೆ ಭೇಟಿ ನೀಡಿದ್ದಾರೆ. ಸುತ್ತಮುತ್ತಲಿನ ಪ್ರದೇಶವು ಸೊಂಪಾಗಿ ಹಸಿರಿನಿಂದ ಕೂಡಿದ್ದು, ಇಲ್ಲಿ ಪ್ರಾಣಿಗಳಿಗೆ ಸಾಕಷ್ಟು ಮೇವು ಸಿಗುತ್ತದೆ ಮತ್ತು ಗುಜ್ಜರ್ ಮತ್ತು ಬಕರ್ವಾಲ್ ಕುಟುಂಬಗಳು ಈಗಾಗಲೇ ನದಿಯ ಉದ್ದಕ್ಕೂ ಇಲ್ಲಿನ ಸ್ಥಳಗಳಲ್ಲಿ ನೆಲೆಸಿವೆ.
"ನಾನು ಮಧ್ಯಾಹ್ನ ಆ ಮಕ್ಕಳಿಗೆ ಕಲಿಸಲು ಹೋಗುತ್ತೇನೆ" ಎಂದು ಅವರು ನದಿ ಆಚೆ ದಡದಲ್ಲಿನ ನಾಲ್ಕು ಗುಜ್ಜರ್ ಕುಟುಂಬಗಳಿರುವ ಸಲಾರ್ ಎಂಬ ಕುಗ್ರಾಮವನ್ನು ತೋರಿಸುತ್ತಾ ಹೇಳುತ್ತಾರೆ. ಅಲಿ ಇನ್ನೊಂದು ಬದಿಗೆ ಹೋಗಲು ಮರದ ಸೇತುವೆಯ ಮೇಲೆ ವೇಗವಾಗಿ ಹರಿಯುವ ನೀರನ್ನು ದಾಟಬೇಕಾಗುತ್ತದೆ.
ಮೊದಲು ಎರಡೂ ಊರುಗಳಿಗೆ ಒಂದೇ ಶಾಲೆಯಿತ್ತು ಎನ್ನುತ್ತಾರೆ ಸ್ಥಳೀಯರು. ಕೆಲವು ವರ್ಷಗಳ ಕೆಳಗೆ ಮಹಿಳೆಯೊಬ್ಬರು ಸೇತುವೆಯಿಂದ ಜಾರಿ ನೀರಿಗೆ ಬಿದ್ದು ತೀರಿಕೊಂಡಿದ್ದರು. ಅದರ ನಂತರ, ಸರ್ಕಾರವು ಶಾಲಾ ಮಕ್ಕಳು ಸೇತುವೆ ದಾಟದಂತೆ ನಿಯಮ ಮಾಡಿ, ಶಿಕ್ಷಕರೇ ಸೇತುವೆ ದಾಟಿಕೊಂಡು ಹೋಗಿ ಕಲಿಸಲು ತಿಳಿಸಿತು. “ಹೀಗಾಗಿ ನಾನು ಕಳೆದ ಎರಡು ಬೇಸಗೆಗಳಿಂದ ಎರಡು ಪಾಳಿಯಲ್ಲಿ ಪಾಠಗಳನ್ನು ಕಲಿಸುತ್ತೇನೆ” ಎಂದು ಅವರು ವಿವರಿಸುತ್ತಾರೆ.
ಹಿಂದಿನ ಸೇತುವೆ ಕೊಚ್ಚಿ ಹೋಗಿರುವ ಕಾರಣ ಅಲಿಯವರು ಒಂದು ಕಿಲೋಮೀಟರ್ ಕೆಳಗೆ ಚಲಿಸಿ ಅಲ್ಲಿ ಹೊಳೆಯನ್ನು ದಾಟಬೇಕಿದೆ. ಅಂದು ಆಗಲೇ ಮಕ್ಕಳು ಅವರಿಗಾಗಿ ಕಾಯುತ್ತಿದ್ದರು.
ಅಲಿಯವರಂತಹ ಪ್ರತಿ ಸಂಚಾರಿ ಶಿಕ್ಷಕರು ನಾಲ್ಕು ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಾರೆ. ಮತ್ತು ನಾಲ್ಕು ತಿಂಗಳ ಒಟ್ಟಾರೆ ದುಡಿಮೆಗೆ ಸುಮಾರು 50,000 ರೂಪಾಯಿಗಳಷ್ಟು ಸಂಭಾವನೆ ಪಡೆಯುತ್ತಾರೆ. “ಇಲ್ಲಿ ನನ್ನ ವಸತಿ ಮತ್ತು ಊಟದ ವ್ಯವಸ್ಥೆಯನ್ನು ನಾನೇ ಮಾಡಿಕೊಳ್ಳಬೇಕು. ಹೀಗಾಗಿ ನಾನಿಲ್ಲಿ ನನ್ನ ಸಂಬಂಧಿಕರೊಡನೆ ಉಳಿದುಕೊಳ್ಳುತ್ತೇನೆ. ನಾನು ಗುಜ್ಜರ್ ಮತ್ತು ಇಲ್ಲಿರುವವರೆಲ್ಲ ನನ್ನ ಸಂಬಂಧಿಕರು. ಇಲ್ಲಿ ನನ್ನ ಸೋದರ ಸಂಬಂಧಿಯೊಬ್ಬನಿದ್ದಾನೆ. ನಾನು ಅವನ ಕುಟುಂಬದೊಡನೆ ತಂಗಿದ್ದೇನೆ” ಎಂದು ಅವರು ವಿವರಿಸುತ್ತಾರೆ.
ಅಲಿಯವರ ಸ್ವಂತ ಊರು ಅನಂತನಾಗ್ ಜಿಲ್ಲೆಯ ಹಿಲಾನ್ ಗ್ರಾಮ. ಅಲ್ಲಿ ಅವರ ಮನೆಯಿದೆ. ಅದು ಇಲ್ಲಿಂದ 40 ಕಿಲೋಮೀಟರ್ ದೂರದಲ್ಲಿದೆ. ವಾರಾಂತ್ಯದಲ್ಲಿ ಊರಿಗೆ ಹೋಗಿ ಅವರು ತನ್ನ ಮಡದಿ ನೂರ್ಜಹಾನ್ ಮತ್ತು ಮಗುವನ್ನು ನೋಡಿಕೊಂಡು ಬರುತ್ತಾರೆ. ಅವರ ಪತ್ನಿಯೂ ಶಿಕ್ಷಕಿಯಾಗಿದ್ದು ಅಕ್ಕಪಕ್ಕದ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಾರೆ. “ನಾನು ಸಣ್ಣವನಿದ್ದಾಗಿನಿಂದಲೂ ಶಿಕ್ಷಕನಾಗುವ ಕನಸು ಕಂಡಿದ್ದೆ”ಎಂದು ಅವರು ಹೇಳುತ್ತಾರೆ.
“ಸರಕಾರ ಬಹಳ ಒಳ್ಳೆಯ ಕೆಲಸ ಮಾಡಿದೆ. ಈ ಯೋಜನೆಯ ಭಾಗವಾಗಿ ನನ್ನ ಸಮುದಾಯದ ಮಕ್ಕಳಿಗೆ ಕಲಿಸುವ ಭಾಗ್ಯ ನನಗೆ ಸಿಕ್ಕಿದ ಕುರಿತು ಖುಷಿಯಿದೆ” ಎಂದು ಹೇಳುತ್ತಾ ಅವರು ನದಿಯ ಇನ್ನೊಂದು ಭಾಗಕ್ಕೆ ಹೋಗಲು ಸೇತುವೆಯ ಕಡೆ ಸಾಗಿದರು.
ಅವರ ಶಾಲೆಯ ಕಿರಿಯ ವಿದ್ಯಾರ್ಥಿ ಎಜಾಝ್ನ ತಂದೆ 50 ವರ್ಷದ ಅಜೀಬಾ ಅಮನ್ ಕೂಡಾ ಖುಷಿಯಲ್ಲಿದ್ದಾರೆ. “ನನ್ನ ಮಗ, ನನ್ನ ತಮ್ಮನ ಮಕ್ಕಳು ಎಲ್ಲರೂ ಈಗ ಶಾಲೆಗೆ ಹೋಗುತ್ತಿದ್ದಾರೆ. ನಮ್ಮ ಮಕ್ಕಳಿಗೂ ಅವಕಾಶ ಸಿಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ”ಎನ್ನುತ್ತಾರವರು.
ಅನುವಾದ: ಶಂಕರ. ಎನ್. ಕೆಂಚನೂರು