ಇಂದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನದಂದು, ಪರಿಯಲ್ಲಿ ಬೀಡ್ ಜಿಲ್ಲೆಯ ಮಜಲ್ ಗಾಂವ್ ನ ವಾಲ್ಹಾಬಾಯಿ ತಕಂಖರ್ ಮತ್ತು ರಾಧಾಬಾಯಿ ಬೋರ್ಡೆಯವರ ಎರಡು ಜೋಡಿ ಬೀಸುಕಲ್ಲಿನ ಪದಗಳನ್ನು ಇಲ್ಲಿ ನೀಡಲಾಗಿದೆ. ಈ ಆತ್ಮಗೌರವದ ಹಾಡುಗಳು, ತಮ್ಮ ನಾಯಕನ ಮೇಲಿನ ವಾತ್ಸಲ್ಯ, ಸಮೃದ್ಧಿ ಮತ್ತು ಸಂತೋಷವನ್ನು ಸಾರುತ್ತವೆ. ಈ ಹಾಡುಗಳು ಡಾ. ಅಂಬೇಡ್ಕರ್ ಮತ್ತು ಜಾತಿ ವಿಷಯಗಳ ಬಗ್ಗೆ ಪರಿಯಲ್ಲಿ ಪ್ರಕಟವಾಗುತ್ತಿರುವ ಏಪ್ರಿಲ್ ತಿಂಗಳ ದ್ವಿಪದಿಗಳ ಸರಣಿಯ ಒಂದು ಭಾಗವಾಗಿದೆ.
ಏಪ್ರಿಲ್ ಆರಂಭದಲ್ಲಿ ನಾವು ಮಜಲ್‌ಗಾಂವ್‌ನಲ್ಲಿರುವ ವಲ್ಹಬಾಯಿ ತಕಂಖರ್ ಅವರ ಮನೆಗೆ ಹೋದಾಗ, 21 ವರ್ಷಗಳ ಹಿಂದೆ 1996ರಲ್ಲಿ ನಮ್ಮ 'ಗ್ರೈಂಡ್‌ಮಿಲ್ ಸಾಂಗ್ಸ್ ಪ್ರಾಜೆಕ್ಟ್' ತಂಡಕ್ಕಾಗಿ ಅವರು ಹಾಡಿದ್ದ ಹಾಡುಗಳನ್ನು ನೆನಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಬೀಸುಕಲ್ಲಿನಲ್ಲಿ ಬೀಸುವಾಗ ಮಾತ್ರ ಆ ಹಾಡುಗಳು ನೆನಪಾಗುತ್ತವೆ ಎಂದರು.
ಇದರ ನಂತರ, ಅವರ ಸೊಸೆ ಒಂದು ತಟ್ಟೆಯಲ್ಲಿ ಗೋಧಿಯನ್ನು ತಂದು ಹಳೆಯ ಬೀಸುಕಲ್ಲು ಜೋಡಿಸಿ ವ್ಯವಸ್ಥೆ ಮಾಡಲು ಪ್ರಾರಂಭಿಸಿದರು. ನಂತರ, ವಲ್ಹಬಾಯಿ ನೆಲದ ಮೇಲೆ ಕುಳಿತು ಬೀಸುಕಲ್ಲಿಗೆ ಧಾನ್ಯವನ್ನು ಸೇರಿಸಿ ತಿರುಗಿಸಲು ಪ್ರಾರಂಭಿಸಿದರು; ಬೀಸುಕಲ್ಲನ್ನು ತಿರುಗಿಸತೊಡಗಿದಂತೆ ಅವರಿಗೆ ಕೆಲವು ಹಾಡುಗಳು ನೆನಪಿಗೆ ಬಂದವು. ಬೀಸುಕಲ್ಲು ಎರಡು ವರ್ತುಲಾಕಾರದ ಕಲ್ಲುಗಳನ್ನು ಹೊಂದಿರುತ್ತದೆ. ಕಲ್ಲನ್ನು ಒಂದರ ಮೇಲೊಂದು ಇರಿಸಿ ಮೇಲಿನ ಕಲ್ಲಿಗೆ ಗೂಟವೊಂದನ್ನು ಹಾಕಿರಲಾಗುತ್ತದೆ. ಅದನ್ನು ಹಿಡಿದು ಕಲ್ಲನ್ನು ತಿರುಗಿಸಿ ಧಾನ್ಯವನ್ನು ಬೀಸಲಾಗುತ್ತದೆ.
ವಲ್ಹಬಾಯಿ ಹಾಡಿದ ಹಾಡುಗಳನ್ನು ಇಲ್ಲಿ ಪರಿಚಯಿಸಲಾಗಿದೆ, ಜೊತೆಗೆ ರಾಧಾಬಾಯಿ ಬೋರ್ಡೆ ಹಾಡಿದ ಹಾಡುಗಳು ಸಹ ನಮ್ಮ ಓದುಗರಿಗೆ ಲಭ್ಯವಿದೆ. ಈ ಹಾಡುಗಳು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನದ ಹಲವು ಪ್ರಮುಖ ಘಟನೆಗಳನ್ನು ನಿರೂಪಿಸುತ್ತವೆ. 1996ರಲ್ಲಿ, ಈ ಹಾಡುಗಳನ್ನು ಧ್ವನಿಮುದ್ರಿಸಿದಾಗ, ವಲ್ಹಬಾಯಿ ಮತ್ತು ರಾಧಾಬಾಯಿ ಮಜಲ್‌ಗಾಂವ್‌ನ ಭೀಮ್ ನಗರ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಈಗ ರಾಧಾಬಾಯಿ ಈ ತಾಲ್ಲೂಕಿನ ಸಾವರ್‌ಗಾಂವ್‌ನಲ್ಲಿ ವಾಸಿಸುತ್ತಿದ್ದಾರೆ.
ಮಜಲ್‌ಗಾಂವ್‌ನ ಭೀಮ್ ನಗರವು ದಲಿತರೇ ಹೆಚ್ಚಾಗಿ ವಾಸಿಸುವ ಕಾಲೋನಿಯಾಗಿದೆ. ಈ ಗ್ರಾಮವು 'ಗ್ರೈಂಡ್‌ಮಿಲ್ ಸಾಂಗ್ಸ್ ಪ್ರಾಜೆಕ್ಟ್‌ಗೆ' ಒಂದು ಉತ್ತಮ ಮೂಲವಾಗಿದೆ, ಅಲ್ಲಿ ದೇಶದ ಸಂವಿಧಾನ ರಚನೆಕಾರ, ಶ್ರೇಷ್ಠ ರಾಜಕಾರಣಿ ಮತ್ತು ದೀನದಲಿತರ ದನಿಯಾದ ಬಾಬಾಸಾಹೇಬ್ ಅಂಬೇಡ್ಕರ್ ಕುರಿತ ಹಾಡುಗಳ ಖಜಾನೆಯಿದೆ. ಬಾಬಾಸಾಹೇಬ್ ಅವರ ಜಯಂತಿಯನ್ನು ಏಪ್ರಿಲ್ 14ರಂದು ಆಚರಿಸಲಾಗುತ್ತದೆ. ಈ ನೆಪದಲ್ಲಿ ಬಾಬಾಸಾಹೇಬರನ್ನು ನೆನಪಿಸಿಕೊಳ್ಳುತ್ತಾ, ಪರಿ ಈ ಇಡೀ ತಿಂಗಳು ನಿಮಗೆ ಜಾತಿ ವ್ಯವಸ್ಥೆಯಿಂದಾಗಿ ಎದುರಿಸುತ್ತಿರುವ ತೊಂದರೆಗಳನ್ನು ಮತ್ತು ವಂಚಿತರ ಧ್ವನಿಯನ್ನು ವಿವರಿಸುವ ಹಾಡುಗಳನ್ನು ದನಿ ಡಾ.ಅಂಬೇಡ್ಕರ್ ಅವರ ಕಥೆಯನ್ನು ಪ್ರಸ್ತುತಪಡಿಸಲಿದ್ದೇವೆ.
ಮೊದಲ ಆಡಿಯೊದಲ್ಲಿ, ವಲ್ಹಬಾಯಿ ಮತ್ತು ರಾಧಾಬಾಯಿ ಒಟ್ಟಿಗೆ 6 ದ್ವಿಪದಿಗಳನ್ನು (ಓವಿ) ಹಾಡಿದ್ದಾರೆ. ಮೊದಲ ಓವಿಯಲ್ಲಿ, ಡಾ|ಅಂಬೇಡ್ಕರ್ ಅವರು ಔರಂಗಾಬಾದಿನ ಸ್ಟೇಷನ್ ನಲ್ಲಿ ಚಿನ್ನದ ಲೋಟದಲ್ಲಿ ನೀರು ಕುಡಿದರು ಮತ್ತು ಆ ಲೋಟವನ್ನು ಬೆಳ್ಳಿಯ ನಾರಿನಿಂದ ತೊಳೆಯಲಾಗಿತ್ತು ಎಂದು ವರ್ಣಿಸುತ್ತದೆ. ಇಲ್ಲಿ ಚಿನ್ನ ಮತ್ತು ಬೆಳ್ಳಿ ಅಭಿವೃದ್ಧಿ ಮತ್ತು ಸಮೃದ್ಧಿಯ ಸಂಕೇತಗಳಾಗಿವೆ, ಇದನ್ನು ಶಿಕ್ಷಣದ ಮೂಲಕ ಮಾತ್ರ ಸಾಧಿಸಲು ಸಾಧ್ಯ, ಮತ್ತು ಬಾಬಾಸಾಹೇಬ್ ಕೂಡ ಶಿಕ್ಷಣಕ್ಕೆ ಗರಿಷ್ಠ ಒತ್ತು ನೀಡಿದ್ದರು ಎಂದು ಈ ಸಾಲುಗಳ ಸಾಹಿತ್ಯ ಹೇಳುತ್ತದೆ.
ಎರಡನೆಯ ದ್ವಿಪದಿಯು ಆ ಲೋಟದಲ್ಲಿ ಮಲ್ಲಿಗೆ ಮತ್ತು ಚಂಡು ಹೂಗಳನ್ನಿಡಲಾಗಿರುವ ಕುರಿತು ಹೇಳುತ್ತದೆ. (ಹೂವುಗಳು ಸೌಂದರ್ಯದ ಸಂಕೇತವಾಗಿವೆ) ಆದರೆ ಮರುಕ್ಷಣವೇ ಔರಂಗಾಬಾದಿನ ಕಾಲೇಜಿನಲ್ಲಿ ಅಂಬೇಡ್ಕರ್ ಅವರಿಗೆ ಆದ ಅವಮಾನದ ಉಲ್ಲೇಖವಿದೆ. ಅವರ ಮೇಲೆ ಕೆಟ್ಟ ಕಣ್ಣು ಬಿತ್ತೆಂದು ಈ ಸಾಲಿನಲ್ಲಿ ಸಾಂಕೇತಿಕವಾಗಿ ಹೇಳಲಾಗಿದೆ.
ಮೂರನೆಯ ದ್ವಿಪದಿಯಲ್ಲಿ ಭೀಮರಾಜನ ಕಿಸೆಯಲ್ಲಿರುವ ಚಿನ್ನದ ಪೆನ್ನಿನ ಕುರಿತು ಪ್ರಸ್ತಾಪವಿದೆ ಮತ್ತು ಇಡಿಯ ದೇಶವೇ ‘ಜೈ ಭೀಮ್’ ಎನ್ನುವುದರ ಮೂಲಕ ಬಾಬಾ ಸಾಹೇಬರಿಗೆ ವಂದಿಸುತ್ತದೆ ಎನ್ನಲಾಗಿದೆ. ಚಿನ್ನದ ಲೇಖನಿಯು ಅಂಬೇಡ್ಕರ್ ಅವರು ಪಡೆದ ಶಿಕ್ಷಣ ಮತ್ತು ಅವರ ಬೌದ್ಧಿಕ ಪ್ರಗತಿಯ ಸಂಕೇತವಾಗಿದೆ.
ನಾಲ್ಕನೆಯ ಪದ್ಯವು ಭೀಮರಾವ್ ಆಗಮನ ಮತ್ತು ಪ್ರತಿ ಮಗುವನ್ನು ಶಾಲೆಗೆ ಸೇರಿಸುವಂತೆ ಹಳ್ಳಿಯಿಂದ ಹಳ್ಳಿಗೆ ಹೋಗಿ ಸಾರುವುದನ್ನು ಹೇಳುತ್ತದೆ. ಇಲ್ಲಿ ಅಲಂಕೃತ ಛತ್ರಿಯ ಉಲ್ಲೇಖವು ಬಹುಶಃ ಪ್ರಾಸದ ರೂಪವಾಗಿದೆ.
ಐದು ಮತ್ತು ಆರನೇ ಓವಿಯಲ್ಲಿ ಬಾಬಾಸಾಹೇಬರು ತಮ್ಮ ಮನೆಗೆ ಬರುವ ಬಗ್ಗೆ ಹಾಡುಗಾರ್ತಿಯರು ಸಂಭ್ರಮದಿಂದ ಹಾಡಿಕೊಂಡಿದ್ದಾರೆ. ಅವರ ಬರವಿನಿಂದ ಸಂತಸಗೊಳ್ಳುವ ಆ ಹೆಣ್ಣುಜೀವ ಬಾಬಾ ಸಾಹೇಬರಿಗೆಂದು ಲೋಟದ ತುಂಬ ಹಾಲು ಮತ್ತು ಬಟ್ಟಲಿನ ತುಂಬ ಸಕ್ಕರೆಯನ್ನು ತರುವಂತೆ ತನ್ನ ನೆರೆಕೆರೆಯವರಿಗೆ ಹೇಳುತ್ತಾದೆ. ಹಾಡು ಕಟ್ಟಿ ಹಾಡುವವರ ಮನೆಯ ಬಡತನವನ್ನು ಹಾಲು ಮತ್ತು ಸಕ್ಕರೆ ಪಕ್ಕದ ಮನೆಯಿಂದ ತರುವುದರ ಮೂಲಕ ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ ಹಾಗೂ ಬಡವರ ಮನೆಯಲ್ಲಿ ಹಾಲು – ಸಕ್ಕರೆಗಳು ಕೂಡ ಅಮೂಲ್ಯ ವಸ್ತುಗಳು ಎನ್ನುವುದನ್ನು ಈ ಸಾಲುಗಳು ಧ್ವನಿಸುತ್ತವೆ.
ಬೆಳ್ಳಿಯ ಉಜ್ಜುಗದಿ
ತೊಳೆದ ಚಿನ್ನದ
ಲೋಟದಲ್ಲಿ
ನಮ್ಮ ಭೀಮರಾಯಗೆ
ನೀರ ಕೊಡಬನ್ನಿ
ಭೀಮರಾಯ ನೀರನು
ಕುಡಿದ ಚಿನ್ನದ
ಲೋಟದಲಿ
ಔರಂಗಬಾದ ನಗರದ ನಿಲ್ದಾಣದಲಿ
ಜಾಜಿ, ಸೇವಂತಿ
ಹೂವಿನ ಚಂದವ
ನೋಡಿರಲ್ಲಿ
ಅರಳಿ ನಿಂತಾವು
ಚಿನ್ನದ ಲೋಟದಲ್ಲಿ
ಕೆಟ್ಟ ನದರು
ಬಿತ್ತು ನೋಡು
ನಮ್ಮ ಭೀಮನ
ಮೇಲೆ
ಔರಂಗಬಾದ ನಗರದ ಕಾಲೇಜಿನಲ್ಲಿ
ಅಕ್ಕತಂಗಿಯರೇ,
ನೋಡಿ ಭೀಮರಾಯನ
ಜೇಬಿನಲ್ಲಿ
ಚಿನ್ನದ ಲೇಖನಿಯು
ಹೊಳೆವುದನು
ಚಿನ್ನದ ಲೇಖನಿ
ಹೊಳೆವುದ ಕಂಡು
ಇಡಿಯ ದೇಶವೆ
ಹೇಳುತಿದೆ, ‘ಜೈ,
ಜೈ ಭೀಮ್’
ಭೀಮರಾಯ ಬಂದ
ನೋಡಿ
ಅವನ ಛತ್ರಿಯ
ತುಂಬ ಹೂವ
ನೋಡಿ
ಹಳ್ಳಿ ಹಳ್ಳಿಯಲ್ಲೂ
ಅವನದೇ ಮಾತು
“ಶಾಲೆಗೆ ಕಳಿಸಿ
ಮಕ್ಕಳನ್ನು” ಎಂಬ
ಮಾತು
ಆಚೆ ಈಚೆ
ಮನೆಯವರೆ ಇಲ್ಲಿ
ಬನ್ನಿರೆ
ಭೀಮರಾಯಗೆ ಕುಡಿಯಲು
ಹಾಲು ತನ್ನಿರೆ
ಅಣ್ಣ ಭೀಮರಾಯ
ನಮ್ಮ ಮನೆಗೆ
ಬಂದನು
ನಮ್ಮ ಅತಿಥಿಯಾಗಿ
ಭೀಮರಾಯ ಬಂದನು
ಆಚೆ ಈಚೆ
ಮನೆಯವರೆ ಇಲ್ಲಿ
ಬನ್ನಿರೆ
ಪಿಂಗಾಣಿ ತುಂಬ
ಸಕ್ಕರೆಯ ತನ್ನಿರೆ
ಭೀಮರಾಯ ನನ್ನ
ಭೇಟಿಗೆಂದು ಬಂದನು
ಅತಿಥಿಯಾಗಿ ಭೀಮರಾಯ
ಮನೆಗೆ ಬಂದನು
ಎರಡನೇ ಆಡಿಯೊ ಕ್ಲಿಪ್‌ನಲ್ಲಿ ರಾಧಾಬಾಯಿ ಐದು ದ್ವಿಪದಿಗಳನ್ನು ಹಾಡಿದ್ದಾರೆ. ಮೊದಲ ದ್ವಿಪದಿಯಲ್ಲಿ, ರಮಾಬಾಯಿಯ ತಾಯಿಯ ಮನೆ ಕೇವಲ ದೆಹಲಿಯಲ್ಲಷ್ಟೇ ಇಲ್ಲ ಎಂದು ಹೇಳುತ್ತಾರೆ. ಇದರ ನಂತರ, ನೀಲಿ ಬಟ್ಟೆಗಳನ್ನು ಭೀಮರಾವ್ ಅವರಿಗೆ ಉಡುಗೊರೆಯಾಗಿ ನೀಡಿದ್ದನ್ನು ಉಲ್ಲೇಖಿಸುತ್ತಾರೆ. (ಗಮನಿಸಿ: ರಮಾಬಾಯಿ ಡಾ. ಅಂಬೇಡ್ಕರ್ ಅವರ ಮೊದಲ ಪತ್ನಿ. ಮತ್ತೊಂದೆಡೆ, ನೀಲಿ ಬಣ್ಣವು ದಲಿತ ಅಥವಾ ಬಹುಜನ ಗುರುತಿನೊಂದಿಗೆ ಸಂಬಂಧ ಹೊಂದಿದೆ, ಮತ್ತು ಡಾ. ಅಂಬೇಡ್ಕರ್ ಅವರನ್ನು ಆದರ್ಶವಾಗಿ ನಂಬುವ ಜನರು ತಮ್ಮ ಗುರುತನ್ನು ಈ ಬಣ್ಣದೊಂದಿಗೆ ಹಂಚಿಕೊಳ್ಳುತ್ತಾರೆ, ನೀಲಿ ಬಣ್ಣ ದಲಿತ ಚಳವಳಿಯೊಂದಿಗೂ ಸಂಬಂಧ ಹೊಂದಿದೆ).
ಎರಡನೇ ಓವಿಯಲ್ಲಿ, ಗಾಯಕಿದೆಹಲಿಯಲ್ಲಿ ನೀಲಿ ಬಣ್ಣದಲ್ಲಿ ಕಾಣುತ್ತಿರುವುದೇನದು ಎಂದು ಕೇಳುತ್ತಾರೆ. ನಂತರ ಗಾಯಕಿ ಸ್ವತಃ ಪ್ರಶ್ನೆಗೆ ಉತ್ತರಿಸುತ್ತಾರೆ - ರಮಾಬಾಯಿ ನೀಲಿ ಪೈಥಾನಿ ಸೀರೆಯನ್ನು ಧರಿಸಿದ್ದಾರೆ ಮತ್ತು ಭೀಮರಾವ್ ಪಕ್ಕದಲ್ಲಿ ನಿಂತಿದ್ದಾರೆ ಎಂದು.
ಮೂರನೆಯ ಓವಿ ದಂಪತಿಗಳ ಛಾಯಾಚಿತ್ರ ಮತ್ತು ಭೀಮರಾವ್ ಪಕ್ಕದಲ್ಲಿ ನಿಂತಾಗ ರಮಾಬಾಯಿ ಹೇಗೆ ಚಿತ್ರದ ಸೌಂದರ್ಯ ಹೆಚ್ಚಾಗಿದೆ ಎಂಬುದರ ಬಗ್ಗೆ ಹೇಳುತ್ತದೆ. ನಾಲ್ಕನೆಯ ದ್ವಿಪದಿ ಭೀಮ್ ದೆಹಲಿಯ ಎಲ್ಲಾ ದಲಿತರನ್ನು ಭೇಟಿಯಾದ ಕುರಿತು ತಿಳಿಸುತ್ತದೆ.
ಮೂರನೇ ಮತ್ತು ನಾಲ್ಕನೇ ಹಾಡಿನಲ್ಲಿ ನಾಲ್ಕು ಮತ್ತು ಎಂಟು ಗಾಜಿನ ಜಾಡಿಗಳನ್ನು ಬಹುಶಃ ಬಹುಶಃ ಪ್ರಾಸಕ್ಕಾಗಿ ಬಳಸಲಾಗಿದೆ. ಐದನೇ ಪದ್ಯದಲ್ಲಿ, ಗಾಯಕಿ ತನಗೆ ಒಂದು ಕನಸು ಬಿತ್ತು ಎಂದು ಹೇಳುತ್ತಾರೆ. ಮತ್ತು ಅವರು ತನ್ನ ಕನಸಿನಲ್ಲಿ ದೆಹಲಿಯ ನ್ಯಾಯಾಲಯದಲ್ಲಿ ಭಾರತದ ಸಂವಿಧಾನವನ್ನು ಬರೆಯುತ್ತಿರುವ ಭೀಮ್ ನನ್ನು ನೋಡಿದ್ದಾಗಿ ಹೇಳುತ್ತಾರೆ.
ದಿಲ್ಲಿಯ ಹೊರಗೆ
ಇದೆ ರಮಾಬಾಯಿಯ
ತವರು
ಅಲ್ಲಿಂದ ಭೀಮಗೆ
ಬಂತು ನೀಲಿ
ವಸ್ತ್ರದುಡುಗೊರೆಯು
ದಿಲ್ಲಿಯಲ್ಲಿ ಏನು
ನೋಡುವೆ ನೀಲಿ
ಬಣ್ಣದ ಹೊಳಪು?
ಪೈಥಾಣಿ ಸೀರೆಯುಟ್ಟು
ರಮಾ ನಿಂತಾಳೆ
ಭೀಮಗೊಪ್ಪು
ದಿಲ್ಲಿಯ ಪಟ್ಟಣದಲ್ಲಿ
ನಾಲ್ಕು ಗಾಜಿನ
ಜಾರು
ರಮಾಬಾಯಿಯ ಚಂದವು
ಭೀಮನ ಚಿತ್ರಕೆ
ಮೆರಗು
ದಿಲ್ಲಿಯ ಪಟ್ಟಣದಲ್ಲಿ
ಎಂಟು ಗಾಜಿನ
ಜಾರು
ನಮ್ಮ ರಾಜ
ಭೀಮರಾಯ ಸಿಗುತಾನೆ
ದಲಿತರಿಗು
ಕನಸೊಂದ
ಕಂಡೆ ನಾನು, ಏನು ಕನಸು
ಕೇಳು?
ಭೀಮರಾಯ ಬರೆದ
ಸಂವಿಧಾನ ಈ
ದೇಶದೊಳು
ಪ್ರದರ್ಶಕರು / ಗಾಯಕರು : ವಲ್ಹಾ ತಕಂಖರ್, ರಾಧಾ ಬೋರ್ಡೆ
ಗ್ರಾಮ : ಮಜಲ್ಗಾಂವ್
ಊರು : ಭೀಮ್ ನಗರ
ತಾಲ್ಲೂಕು : ಮಜಲ್ಗಾಂವ್
ಜಿಲ್ಲೆ : ಬೀಡ್
ಜಾತಿ : ನವ-ಬೌದ್ಧ
ದಿನಾಂಕ : ಈ ಹಾಡುಗಳನ್ನು ಏಪ್ರಿಲ್ 2, 1996 ರಂದು ರೆಕಾರ್ಡ್ ಮಾಡಲಾಯಿತು. ನಾವು ಏಪ್ರಿಲ್ 2, 2017ರಂದು ಮಜಲ್ಗಾಂವ್ ಗೆ ಮತ್ತೆ ಭೇಟಿ ನೀಡಿ ಗಾಯಕರನ್ನು ಭೇಟಿಯಾದಾಗ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.
ಪೋಸ್ಟರ್: ಶ್ರೇಯಾ ಕಾತ್ಯಾಯಿನಿ
ಓವಿ ಅನುವಾದಕರು: ಸುಧಾ ಅಡುಕಳ
ಅನುವಾದ: ಶಂಕರ ಎನ್. ಕೆಂಚನೂರು