"ಕೊಂಡ್ರಾ ಸಮ್ಮಯ್ಯ ... ಆರ್ಥಿಕ ಸಾಲಗಳಿಗೆ ಸಂಬಂಧಿಸಿದ ಮಾನಸಿಕ ಸಂಕಟದಿಂದಾಗಿ ಕೀಟನಾಶಕ ವಿಷವನ್ನು ಸೇವಿಸಿದ್ದಾರೆ ..." ಎಂದು ಎಫ್ಐಆರ್ ಹೇಳಿದೆ.
ಎಫ್‌ಐಆರ್ (ಮೊದಲ ಮಾಹಿತಿ ವರದಿ) ಅನ್ನು ಸೆಪ್ಟೆಂಬರ್ 17, 2017ರಂದು ನರಸಾಪುರದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ತಾರಿಗೋಪುಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ, ಸಮ್ಮಯ್ಯ ಮತ್ತು ಅವರ ಪತ್ನಿ ಕೊಂಡ್ರಾ ಸಾಗರಿಕಾ ಅವರು ಆರು ಎಕರೆ ಮಳೆಯಾಶ್ರಿತ ಭೂಮಿಯಲ್ಲಿ ಬಿಟಿ-ಹತ್ತಿ ಕೃಷಿ ಮಾಡುತ್ತಿದ್ದರು.
ಅವರ ಸಾಲ ಸುಮಾರು ರೂಪಾಯಿ 5 ಲಕ್ಷದವರೆಗಿದೆ, ಮುಖ್ಯವಾಗಿ ಸಂಬಂಧಿಕರಿಂದ ವಿವಿಧ ಬಡ್ಡಿದರಗಳಲ್ಲಿ ಸಾಲ ತೆಗೆದುಕೊಳ್ಳಲಾಗಿದೆ. ಸಮ್ಮಯ್ಯ ಮತ್ತು ಸಾಗರಿಕಾ ಅವರು ಒಂದು ಎಕರೆಗಿಂತಲೂ ಸ್ವಲ್ಪ ಹೆಚ್ಚು ಭೂಮಿಯನ್ನು ಹೊಂದಿದ್ದರು ಮತ್ತು ಉಳಿದವನ್ನು ಸಂಬಂಧಿಕರಿಂದ ಗುತ್ತಿಗೆಗೆ ಪಡೆದಿದ್ದರು. "ಪ್ರತಿ ಹಂಗಾಮಿಗೆ ಮುಂಚಿತವಾಗಿ ಸಾಲ ಪಡೆಯುವುದು ಹೆಚ್ಚಿನ ಸಾಲಕ್ಕೆ ಕಾರಣವಾಗಿದೆ" ಎಂದು ಸಾಗರಿಕಾ ಹೇಳುತ್ತಾರೆ. ಬರವು ನಷ್ಟ ಇನ್ನಷ್ಟು ಹೆಚ್ಚಲು ಕಾರಣವಾಯಿತು.
ದಂಪತಿಗಳು ತಮ್ಮ ಸ್ವಂತ ಭೂಮಿಯಲ್ಲಿ ಕೃಷಿ ಮಾಡಲು ಪ್ರಯತ್ನಿಸುವ ಮೊದಲು, ಹತ್ತಿ ಹೊಲಗಳಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರು 2011ರಲ್ಲಿ ಮದುವೆಯಾದ ನಂತರ, ಸ್ವಲ್ಪ ಕಾಲ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು, ಅಲ್ಲಿ ಸಮ್ಮಯ್ಯ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸಮ್ಮಯ್ಯ ಅವರ ತಂದೆಯ ಆರೋಗ್ಯವು ಕೆಡಲು ಪ್ರಾರಂಭಿಸಿದ ನಂತರ ಅವರು 2013ರ ಸ್ವಲ್ಪ ಸಮಯದ ನಂತರ ತೆಲಂಗಾಣದ ಜಂಗಾಂವ್ ಜಿಲ್ಲೆಯ ನರಸಾಪುರಕ್ಕೆ ಮರಳಿದರು.
ಸೆಪ್ಟೆಂಬರ್ 2017ರಲ್ಲಿ ಅವರ ಆತ್ಮಹತ್ಯೆಯ ಸಮಯದಲ್ಲಿ ಸಮ್ಮಯ್ಯಾಗೆ 29 ವರ್ಷ ವಯಸ್ಸಾಗಿತ್ತು. ಸಾಗರಿಕಾಗೆ ಕೇವಲ 23 ವರ್ಷ. ಅವರ ಮಕ್ಕಳಾದ ಸ್ನೇಹಿತಾ ಮತ್ತು ಸಾತ್ವಿಕ್ 5 ಮತ್ತು 3 ವರ್ಷ ವಯಸ್ಸಿನವರಾಗಿದ್ದರು. “ಮಕ್ಕಳು ನನ್ನ ಗಂಡನೊಂದಿಗೆ ಕಳೆದ ಪ್ರತಿದಿನದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ” ಎಂದು ಅವರು ಹೇಳುತ್ತಾರೆ. “ನನ್ನ ಪತಿ ತೀರಿಕೊಂಡ ಮೊದಲ ವರ್ಷದಲ್ಲಿ ಬದುಕು ಬಹಳ ಕಷ್ಟಕರವಾಗಿತ್ತು. ನನ್ನ ಸಂಬಂಧಿಕರು ನನ್ನನ್ನು ಸಮರಾಂಭಗಳಿಗೆ ಕರೆಯುತ್ತಿರಲಿಲ್ಲ. ಈಗ ಅವರು ನನ್ನ ಬದುಕಿನ ಹೋರಾಟವನ್ನು ನೋಡಿದ್ದರಿಂದ ಮತ್ತೆ ನನ್ನನ್ನು ಕರೆಯಲು ಪ್ರಾರಂಭಿಸಿದ್ದಾರೆ… ”
ಫೆಬ್ರವರಿ 2018ರಲ್ಲಿ, ಪತಿ ತೀರಿಹೋದ ಕೆಲವು ತಿಂಗಳ ನಂತರ, ಸಾಗರಿಕಾ ತಮ್ಮ ಹೊಲದಿಂದ ಕೊಯ್ಲು ಮಾಡಿದ ಸುಮಾರು 7 ಕ್ವಿಂಟಾಲ್ಗಳಷ್ಟು ಹತ್ತಿಯನ್ನು ಸ್ಥಳೀಯ ಖರೀದಿದಾರರಿಗೆ ಮಾರಾಟ ಮಾಡುವಲ್ಲಿ ಯಶಸ್ವಿಯಾದರು. ಖರ್ಚು ಕಳೆದು ಸುಮಾರು 12,000 ರೂಪಾಯಿ ಉಳಿಯಿತು, ಮತ್ತು ಆ ಹಣವನ್ನು ತಕ್ಷಣದ ಖರ್ಚಿಗೆ ಬಳಸಿಕೊಂಡರು. 2018ರ ಮುಂದಿನ ಬಿತ್ತನೆ ಹಂಗಾಮಿನಲ್ಲಿ, ಅವರು ಮತ್ತೆ ಹತ್ತಿ ಕೃಷಿ ಮಾಡಲು ಪ್ರಯತ್ನಿಸಿದರು, ಆದರೆ ಅದರ ನಂತರ ಕಳಪೆ ಆದಾಯದಿಂದಾಗಿ ಅದನ್ನು ನಿಲ್ಲಿಸಿದರು. ಆ ಭೂಮಿ ಈಗ ಖಾಲಿ ಬಿದ್ದಿದೆ, ಮತ್ತು ಅದರಲ್ಲಿ ಮತ್ತೆ ಬೇಸಾಯ ಮಾಡುವ ಮೊದಲು ಸಾಕಷ್ಟು ಮಟ್ಟ ಮಾಡಿಸುವುದು ಮತ್ತು ಇತರ ಕೆಲಸಗಳನ್ನು ಮಾಡಿಸಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ. ಗುತ್ತಿಗೆ ಪಡೆದ ಜಮೀನಿನ ಗುತ್ತಿಗೆಯನ್ನು ನವೀಕರಿಸಲಾಗಿಲ್ಲ.
ತನ್ನ ಗಂಡನ ಮರಣದ ಕೆಲವು ವಾರಗಳ ನಂತರ, ತನ್ನ ಹೆಸರಿಗೆ ಜಮೀನು ಶೀರ್ಷಿಕೆಯನ್ನು ವರ್ಗಾವಣೆ ಮಾಡಲು ಅರ್ಜಿ ಸಲ್ಲಿಸಲು ತಾರಿಗೊಪುಲ್ಲಾದ ಮಂಡಲ್ ಕಂದಾಯ ಕಚೇರಿಗೆ (ಎಂಆರ್‌ಒ) ಹೋದರು. ಆಕೆಯ ಅತ್ತೆ ಮತ್ತು ಬಾವಮೈದುನರು ಸಾಕಷ್ಟು ವಿರೋಧ ಒಡ್ಡಿದರು. ಆದರೆ ಜುಲೈ 2020ರಲ್ಲಿ, ಸಾಗರಿಕಾ ಒಂದು ಎಕರೆ ಭೂಮಿಯನ್ನು ತನ್ನ ಹೆಸರಿಗೆ ಪಡೆಯುವಲ್ಲಿ ಯಶಸ್ವಿಯಾದರು (ಅವರ ಮಗನ ಹೆಸರಿಗೆ ನಾಮಿನಿ ಮಾಡಲಾಗಿದೆ).
ಅವರು ತನ್ನ ಗಂಡನ ಕುಟುಂಬಕ್ಕೆ ಸೇರಿದ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಅವರನ್ನು ಬಾಡಿಗೆ ಪಾವತಿಸುವಂತೆ ಕೇಳಲಾಗಿಲ್ಲ ಆದರೆ ಎಲ್ಲಾ ಮಾಸಿಕ ಖರ್ಚುಗಳನ್ನು ತನ್ನ ಸ್ವಂತ ಆದಾಯದಿಂದ ನಿರ್ವಹಿಸುತ್ತಿದ್ದಾರೆ. ಅವರ ಮಾವ ಕೊಂಡ್ರಾ ಯೆಲ್ಲಯ್ಯ ಅವರು 2014ರಲ್ಲಿ ನಿಧನರಾದರು ಮತ್ತು ಅವರ ಅತ್ತೆ ಕೊಂಡ್ರಾ ಅಂಜಮ್ಮ ಹೈದರಾಬಾದ್‌ನಲ್ಲಿ ಮನೆಕೆಲಸಗಾರರಾಗಿ ಕೆಲಸಕ್ಕೆ ಸೇರಿಕೊಂಡರು.
ಆಕೆಯ ಮಾವಂದಿರು, (ಅವರ ಮಾವನ ಸಹೋದರರು), ಇನ್ನೊಂದು ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ಇತ್ತೀಚೆಗೆ ಅವರು ನರಸಾಪುರದಲ್ಲಿ ಸಾಗರಿಕಾ ಮತ್ತು ಸಮ್ಮಯ್ಯಾಗೆ ಗುತ್ತಿಗೆ ನೀಡಿದ್ದ ಐದು ಎಕರೆ ಭೂಮಿಯಲ್ಲಿ ಕೃಷಿ ಮಾಡಲು ಪ್ರಾರಂಭಿಸಿದರು. ಈ ವರ್ಷದ ಅಕ್ಟೋಬರ್‌ನಲ್ಲಿ, ಸಾಗರಿಕಾ ವಾಸಿಸುತ್ತಿರುವ ಮನೆಯನ್ನು ತೊರೆಯುವಂತೆ ಅವರು ಕೇಳಿಕೊಂಡರು. “ಈಗ ಅವರು ಇಲ್ಲಿ [ನರಸಾಪುರದಲ್ಲಿ] ಕೃಷಿ ಮಾಡಲು ಪ್ರಾರಂಭಿಸಿದ್ದಾರೆ, ಅವರು ಬಂದಾಗ ಅವರಿಗೆ ಉಳಿದುಕೊಳ್ಳಲು ಒಂದು ಸ್ಥಳ ಬೇಕು” ಎಂದು ಸಾಗರಿಕಾ ಹೇಳುತ್ತಾರೆ. “ಅವರು ನನ್ನನ್ನು ದೀಪಾವಳಿಯ ಸಮಯದಲ್ಲಿ ಖಾಲಿ ಮಾಡುವಂತೆ ಕೇಳಿದರು, ಆದರೆ ನನಗೆ ಯಾವುದೇ ಮನೆ ಸಿಗಲಿಲ್ಲ. ಹಳ್ಳಿಗಳಲ್ಲಿ ಬಾಡಿಗೆಗೆ ಮನೆಗಳನ್ನು ಹುಡುಕುವುದು ಕಷ್ಟ. ಏನು ಮಾಡಬೇಕೆಂದು ನನಗೆ ತಿಳಿಯುತ್ತಿಲ್ಲ”
ಸಾಗರಿಕಾ ಅವರ ಪೋಷಕರು ನರಸಪುರದಲ್ಲಿ ವಾಸಿಸುತ್ತಿದ್ದಾರೆ. ಅವರ ತಾಯಿ, ಶತರ್ಲಾ ಕನಕ ಲಕ್ಷ್ಮಿ, 45, ಆಶಾ ಕಾರ್ಯಕರ್ತೆ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ). ಆಕೆಯ ತಂದೆ ಶತರ್ಲಾ ಎಲ್ಲಯ್ಯ, 60, ಅನಾರೋಗ್ಯದ ಕಾರಣ ಹಲವಾರು ವರ್ಷಗಳ ಹಿಂದೆ ನರಸಾಪುರದಲ್ಲಿ ದಿನಗೂಲಿಯ ಹಮಾಲಿ ಕೆಲಸ (ಲೋಡಿಂಗ್ ಮತ್ತು ಅನ್‌ಲೋಡಿಂಗ್) ಮಾಡುವುದನ್ನು ನಿಲ್ಲಿಸಿದರು.
ಸಮ್ಮಯ್ಯ ಆತ್ಮಹತ್ಯೆಯ ನಂತರ, ಸಾಗರಿಕಾ ಮನರೇಗಾ ಯೋಜನೆಯಡಿ ಕೆಲಸ ಲಭ್ಯವಿದ್ದಾಗ ಮಾಡುತ್ತಾ ಕೃಷಿ ಕಾರ್ಮಿಕರಾಗಿ ದುಡಿದ ಆದಾಯದಿಂದ ಎಲ್ಲಾ ಖರ್ಚುಗಳನ್ನು ನಿರ್ವಹಿಸಲು ಪ್ರಯತ್ನಿಸುತ್ತಿದ್ದಾರೆ. "ನನ್ನ ಪತಿ ಜೀವಂತವಾಗಿದ್ದಾಗ, ನಾನು ಕೂಡ ಕೆಲಸ ಮಾಡುತ್ತಿದ್ದೆ, ಆದರೆ ನಾನು ಹೊರಗೆ ಹೋಗಿ ದುಡಿದು ಮಕ್ಕಳನ್ನು ಬೆಳೆಸಬೇಕಾಗಿಲ್ಲ ಎಂದು ನನಗೆ ತಿಳಿದಿತ್ತು" ಎಂದು ಅವರು ಹೇಳುತ್ತಾರೆ, "ಈಗ ನಾನು ಅವಲಂಬಿಸಬಹುದಾದ ಒಂದು ಜೀವವೂ ಇಲ್ಲ ಎನ್ನುವುದು ತಿಳಿದಿದೆ. ಆ ತಿಳುವಳಿಕೆ ಬಹಳ ನೋವು ಕೊಡುತ್ತದೆ." ಎಂದು ಸಾಗರಿಕಾ ಹೇಳುತ್ತಾರೆ. ಸಮ್ಮಯ್ಯ ಮತ್ತು ಸಾಗರಿಕಾ ಇಬ್ಬರೂ ದಲಿತ ಸಮುದಾಯದ ಮಾಲಾ ಜಾತಿಗೆ ಸೇರಿದವರು.
ಕಳೆದ ವರ್ಷ, ಅನಾರೋಗ್ಯದ ಕಾರಣ ಮಾರ್ಚ್ ತಿಂಗಳ ನಂತರ ಹೊಲಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದರು, ಆದರೆ ಕೆಲವು ಮನರೇಗಾ ಕೆಲಸವನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾಡಿದರು. ಈ ವರ್ಷ, ಜನವರಿ ಮತ್ತು ಫೆಬ್ರವರಿಯಲ್ಲಿ ಅವರು ಮತ್ತೆ ಹೊಲಗಳಲ್ಲಿ ಕೆಲಸ ಮಾಡಿದರು, ಮತ್ತು ಮಾರ್ಚ್‌ನಲ್ಲಿ ಲಾಕ್‌ಡೌನ್ ಮಾಡಿದ ನಂತರ, ಅವರು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸುಮಾರು 30 ದಿನಗಳ ಮನರೇಗಾ ಕೆಲಸವನ್ನು ಪಡೆದರು, ಆದರೆ ಅದರಿಂದ ಕೇವಲ 1,500 ರೂಪಾಯಿಗಳಷ್ಟು ಸಂಬಳ ದೊರೆಯಿತು. ಈ ವರ್ಷದ ಆಗಸ್ಟ್‌ನಿಂದ ಅವರು ಹೆಚ್ಚು ನಿಯಮಿತವಾಗಿ ಕೆಲಸಕ್ಕೆ ಹೋಗುತ್ತಿದ್ದಾರೆ.
"ಆರೋಗ್ಯ ಸರಿಯಿಲ್ಲ, ಹೀಗಾಗಿಯೇ" ಎಂದು ಅವರು ಹೇಳುತ್ತಾರೆ. “ದಿನವಿಡೀ ನಾನು ಬಾಗಿಕೊಂಡೇ ಕೆಲಸ ಮಾಡಬೇಕಾಗುತ್ತದೆ. ಆದರೆ ವೈದ್ಯರು ಹಾಗೆ ಕೆಲಸ ಮಾಡಬಾರದು ಎಂದು ಹೇಳಿದರು. ಹಾಗಾಗಿ ಕೆಲಸವನ್ನು ನಿಲ್ಲಿಸಿದೆ." 2014ರಲ್ಲಿ ವಾರಂಗಲ್‌ನ ನರ್ಸಿಂಗ್ ಹೋಮ್ ಒಂದರಲ್ಲಿ ಸಾತ್ವಿಕ್‌ನ ಸಿ-ಸೆಕ್ಷನ್ ಹೆರಿಗೆಯ ಸಮಯದಲ್ಲಿ ಸಾಗರಿಕಾಗೆ ಹಾಕಿದ ಹೊಲಿಗೆಯ ಬಳಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ.
ಕಳೆದ ಆರು ತಿಂಗಳುಗಳಲ್ಲಿ, ಸಾಗರಿಕಾ ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ನೋವಿನೊಂದಿಗೆ, ಪುನರಾವರ್ತಿತ ಜ್ವರ ಮತ್ತು ಆಯಾಸದಿಂದ ಬಳಲುತ್ತಿದ್ದು ಇದು ಹಲವು ದಿನಗಳವರೆಗೆ ಹಾಸಿಗೆಯಲ್ಲಿರುವಂತೆ ಮಾಡುತ್ತದೆ. ನರಸಾಪುರದಿಂದ 25 ಕಿಲೋಮೀಟರ್ ದೂರದಲ್ಲಿರುವ ಜಂಗಾಂವ್ ಪಟ್ಟಣದಲ್ಲಿ ತಾನು ಭೇಟಿ ನೀಡುವ ವೈದ್ಯರಿಗೆ ಏಕೆ ಮತ್ತು ಅದನ್ನು ವಾಸಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅವರಿಗೆ ತಿಳಿದಿಲ್ಲ.
ಆದರೂ, ಅವರು ಎಲ್ಲಾ ಮನೆಕೆಲಸಗಳನ್ನು ಮಾಡುವುದನ್ನು ಮುಂದುವರಿಸಬೇಕಾಗಿದೆ, ಮತ್ತು ಕೆಲಸಗಳನ್ನು ಪ್ರಾರಂಭಿಸಲು ಬೆಳಿಗ್ಗೆ 5 ಗಂಟೆಗೆ ಎಚ್ಚರಗೊಳ್ಳುತ್ತಾರೆ. ನಂತರ ಅವರು ಸ್ನೇಹಿತಾಳನ್ನು ಎಬ್ಬಿಸಿ ಇಬ್ಬರನ್ನೂ ಕೆಲಸಕ್ಕೆ ಸಿದ್ಧವಾಗುತ್ತಾರೆ, ಆದರೆ ಸಾತ್ವಿಕ್‌ನನ್ನು ಹಗಲಿನಲ್ಲಿ ಸಾಗರಿಕಾರ ಹೆತ್ತವರ ಮನೆಗೆ ಕಳುಹಿಸಲಾಗುತ್ತದೆ. ಅವರು ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಕೆಲಸವನ್ನು ತಲುಪುತ್ತಾರೆ ಮತ್ತು ಸಂಜೆ 6 ಗಂಟೆಯ ಹೊತ್ತಿಗೆ ಮನೆಗೆ ಮರಳುತ್ತಾರೆ.
ಸಮ್ಮಯ್ಯ ನಿಧನರಾದ ನಂತರ, ತಾನು ಬಹಳಷ್ಟು ಕಲಿತಿರುವುದಾಗಿ ಸಾಗರಿಕಾ ಹೇಳುತ್ತಾರೆ. "ಜನರು ನನ್ನ ಬಗ್ಗೆ [ಕೆಟ್ಟ] ಮಾತುಗಳನ್ನು ಹೇಳಿದಾಗ ನಾನು ಬೇಸರಗೊಳ್ಳುವುದಿಲ್ಲ. ನನ್ನ ಮಕ್ಕಳಿಗಾಗಿ ನಾನು ಬದುಕಬೇಕಿದೆ ಎನ್ನುವುದು ನನಗೆ ತಿಳಿದಿದೆ. ಅವರನ್ನು ಓದಿಸಲು ನಾನು ಕೆಲಸ ಮಾಡುತ್ತೇನೆ.”
ಪತಿ ತೆಗೆದುಕೊಂಡ ಯಾವುದೇ ಸಾಲವನ್ನು ಮರುಪಾವತಿಸಲು ಆಕೆಗೆ ಸಾಧ್ಯವಾಗಲಿಲ್ಲ, ಸಣ್ಣ ಮೊತ್ತಗಳನ್ನು ತೀರಿಸುವುದಕ್ಕೂ ಸಾಧ್ಯವಾಗಿಲ್ಲ. 2020ರಲ್ಲಿ, ಅವರು ತನ್ನ ಸಹೋದರಿಯಿಂದ ಪಡೆದಿರುವ ಸಾಲವನ್ನು ಮರುಪಾವತಿಸಲು ಪ್ರಯತ್ನಿಸುತ್ತಿದ್ದಾರೆ (ಇವರು ತನ್ನ ಗಂಡನೊಂದಿಗೆ, ಅದೇ ಹಳ್ಳಿಯಲ್ಲಿ ಎರಡು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಾರೆ), ಇನ್ನೊಂದು ರೂ. 62,000 ಸಾಲವಿದ್ದು, ಮತ್ತು ರೂ. 50,000 ಮರುಪಾವತಿ ಮಾಡಿದ್ದಾರೆ. (ಎನ್‌ಎಸ್‌ಎಸ್ 70ನೇ ಸುತ್ತಿನ ವರದಿಯಲ್ಲಿ ದೇಶದಲ್ಲಿ ಸಾಲದಲ್ಲಿರುವ ಕೃಷಿ ಕುಟುಂಬಗಳಲ್ಲಿ ತೆಲಂಗಾಣದ ಪಾಲು ಶೇ. 89.1ರಷ್ಟಿದೆ, ಇದು ರಾಷ್ಟ್ರೀಯ ಮಟ್ಟ ಶೇ 51.9 ಕ್ಕಿಂತ ಹೆಚ್ಚು.)
ಸಾಗರಿಕಾಗೆ ವಿಧವೆಯರ ಪಿಂಚಣಿ ರೂ. 2,000 ದೊರೆಯುತ್ತಿದೆ, ಮತ್ತು ಸಾಂದರ್ಭಿಕವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ರೈತರ ಹಕ್ಕುಗಳ ವಕಾಲತ್ತು ಸಮೂಹ ರೈತು ಸ್ವರಾಜ್ಯ ವೇದಿಕಾದಿಂದ 2,000 ರೂ. ದೊರೆತಿದೆ, ಈ ಸಂಸ್ಥೆಯು ಜನರು ಸರ್ಕಾರದ ಯೋಜನೆಗಳಿಗೆ ಫಾರ್ಮ್‌ಗಳನ್ನು ಭರ್ತಿ ಮಾಡಲು ಸಹಾಯ ಮಾಡುವುದು ಮತ್ತು ಪರಿಶೀಲನಾ ಪ್ರಕ್ರಿಯೆಗಳಿಗಾಗಿ ಅವರೊಂದಿಗೆ ಪೊಲೀಸ್ ಠಾಣೆಗೆ ಹೋಗುವುದು ಇಂತಹ ಕೆಲಸಗಳಿಗೆ ಸಹಾಯ ಮಾಡುತ್ತದೆ.
ಸಾಗರಿಕಾ ಅವರಿಗೆ ತೆಲಂಗಾಣ ಸರಕಾರವು ತೀರಿಕೊಂಡ ರೈತನ ಕುಟುಂಬಕ್ಕೆ ನೀಡುವ 6 ಲಕ್ಷ ರೂ. ಪರಿಹಾರ ಧನವೂ ದೊರೆತಿಲ್ಲ.
“ಆರಂಭದಲ್ಲಿ ಅವರು [ಎಂಆರ್‌ಒ ಅಧಿಕಾರಿಗಳು] ನನಗೆ ಪರಿಹಾರ ಧನ ಸಿಗುತ್ತದೆಂದು ಹೇಳಿದ್ದರು. ನನ್ನನ್ನು ಮತ್ತೆ ಮತ್ತೆ ಕಚೇರಿಗೆ ಬರಲು ಹೇಳುತ್ತಿದ್ದರು. ಕೊನೆಗೆ ಅವರು [ಡಿಸೆಂಬರ್ 2018ರಲ್ಲಿ] ಅವರ ತನಿಖೆಯಲ್ಲಿ ʼನನ್ನ ಪತಿ ಹಳ್ಳಿಯಲ್ಲಿ ಯಾರೊಂದಿಗೋ ಸಂಘರ್ಷದಲ್ಲಿದ್ದರು ಎಂದು ತಿಳಿದುಬಂದಿದೆ.ʼ ಇದು ಕೃಷಿ ಆತ್ಮಹತ್ಯೆಯಲ್ಲವಾದ್ದರಿಂದ ನನ್ನ ಫೈಲ್ ಕ್ಲೋಸ್ ಮಾಡಲಾಗಿದೆಯೆಂದು ಹೇಳಿದರು”ಎಂದು ಸಾಗರಿಕಾ ನೆನಪಿಸಿಕೊಂಡರು.
ಆದರೆ ಎಫ್‌ಐಆರ್‌ನಲ್ಲಿ ಯಾವುದೇ ಜಗಳದ ಕುರಿತು ಹೇಳುವುದಿಲ್ಲ ಮತ್ತು ಸಾಗರಿಕಾ ಕೂಡ ಯಾವುದೇ ಜಗಳ ಹೊಂದಿರಲಿಲ್ಲವೆಂದು ಹೇಳುತ್ತಾರೆ. ಆತ್ಮಹತ್ಯೆಯ ನಂತರ, ಪ್ರಕರಣದ ‘ಅರ್ಹತೆ’ ಕುರಿತು ತನಿಖೆ ನಡೆಸಲು ಯಾವುದೇ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿಲ್ಲ ಎಂದು ಅವರು ಹೇಳುತ್ತಾರೆ. ಪ್ರತಿ ಬಾರಿಯೂ ಅವರು ಎಂಆರ್‌ಒಗೆ ಹೋದಾಗ, ಅವರ ಪ್ರಕರಣವನ್ನು ಏಕೆ ಕ್ಲೋಸ್ ಮಾಡಲಾಯಿತು ಎನ್ನುವುದಕ್ಕೆ ಬೇರೆ ಬೇರೆ ಕಾರಣಗಳನ್ನು ತಿಳಿಸಲಾಯಿತು.
ನವೆಂಬರ್ 2019ರಲ್ಲಿ, ಆಗಿನ್ನೂ ಪ್ರಕರಣವನ್ನು ಏಕೆ ಮುಗಿಸಲಾಗಿದೆ ಎನ್ನುವ ವಿವರಗಳನ್ನು ಹುಡುಕುತ್ತಿದ್ದ ಅವರು, ಆರ್‌ಟಿಐ ( ಮಾಹಿತಿ ಹಕ್ಕು ) ಅರ್ಜಿಯ ಮೂಲಕ ತನ್ನ ಪರಿಹಾರದ ಕುರಿತು ಮಾಹಿತಿ ಕೇಳಿದರು. ಈ ವಿಷಯದಲ್ಲಿ ಆಕೆಗೆ ರೈತು ಸ್ವರಾಜ್ಯ ವೇದಿಕಾ ನೆರವು ನೀಡಿತು. ಅವರ ಅರ್ಜಿಯನ್ನು ಫೆಬ್ರವರಿ 2020ರಲ್ಲಿ ಜಂಗಾಂವ್ ಪಟ್ಟಣದ ಕಂದಾಯ ಜಿಲ್ಲಾ ಕಚೇರಿಗೆ ಕಳುಹಿಸಲಾಗಿತ್ತು. ಆದರೆ ಇದುವರೆಗೆ ಅವರಿಗೆ ಈ ಕುರಿತು ಯಾವುದೇ ಪ್ರತಿಕ್ರಿಯೆ ದೊರಕಿಲ್ಲ.
ಮಾರ್ಚ್ 25ರಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಲಾದ ಕಾರಣ ಶಾಲೆಗಳು ಮುಚ್ಚಲ್ಪಟ್ಟವು. ಇದರ ನಂತರ ಅವರಿಗೆ ತನ್ನ ಮಕ್ಕಳ ಕುರಿತು ಕಳವಳ ಹೆಚ್ಚಾಯಿತು. ಮಗಳು ಸ್ನೇಹಿತಾಳನ್ನು ಅವಳು ಓದುತ್ತಿದ್ದ ಜಂಗಾಂವ್ ಜಿಲ್ಲೆಯ ಖಾಸಗಿ ಬೋರ್ಡಿಂಗ್ ಶಾಲೆಯಿಂದ ಮನೆಗೆ ಕಳುಹಿಸಲಾಯಿತು, ಮಗ ಸಾತ್ವಿಕ್ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದು ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಮನೆಯಲ್ಲಿದ್ದಾನೆ. “ಮಕ್ಕಳು ಸದಾ ಮನೆಯ ಹೊರಗೆ ಆಟವಾಡುತ್ತಿರುತ್ತಾರೆ ಜೊತೆಗೆ ಶಿಸ್ತನ್ನು ಕಳೆದುಕೊಳ್ಳುತ್ತಿದ್ದಾರೆ”ಎಂದು 10ನೇ ತರಗತಿವರೆಗೆ ಓದಿರುವ ಸಾಗರಿಕಾ ಕಳವಳದಿಂದ ಹೇಳುತ್ತಾರೆ.
ಲಾಕ್‌ಡೌನ್‌ನೊಂದಿಗೆ ಬಹುತೇಕ ಎಲ್ಲ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಮೊದಲು ಒಂದು ಪ್ಯಾಕೆಟ್ ಹಾಲಿನ ಬೆಲೆ 10 ರೂಪಾಯಿಯಾಗಿದ್ದು ಈಗ ಅದರ ಬೆಲೆ 12 ರೂಪಾಯಿಗೇರಿದೆ. ಬೆಲೆಯೇರಿಕೆಯ ಕಾರಣ ನನಗೆ ತರಕಾರಿಗಳನ್ನು ಖರೀದಿಸುವುದು ಕಷ್ಟವಾಯಿತು, ಹೀಗಾಗಿ ನಾವು ಈಗ ಊಟಕ್ಕೆ ಅನ್ನ ಮತ್ತು ಉಪ್ಪಿನಕಾಯಿ ಮಾತ್ರ ತಿನ್ನುತ್ತಿದ್ದೇವೆ. ಸಂಜೆ ಮಕ್ಕಳು ʼನನಗೆ ಹಸಿವೆಯಾಗುತ್ತಿದೆʼಯೆಂದು ಕೇಳಿದರೆ ಮಾತ್ರ ಏನಾದರೂ ತಿನ್ನಲು ಕೊಡುತ್ತೇನೆ. ಇಲ್ಲವಾದಲ್ಲಿ ನಾವು ಹಾಗೇ ಮಲಗುತ್ತೇವೆ."
ಈ ಲೇಖನವು ಫೋನ್ ಮೂಲಕ ಜೂನ್ ಮತ್ತು ಡಿಸೆಂಬರ್ 2020ರ ನಡುವೆ ನಡೆದ ಸಂಭಾಷಣೆಯನ್ನು ಆಧರಿಸಿದೆ.
ಈ ವರದಿಗಾರರು ಹೈದರಾಬಾದ್ ಮೂಲದ ರೈತು ಸ್ವರಾಜ್ಯ ವೇದಿಕಾದ ಲಕ್ಷ್ಮಿ ಪ್ರಿಯಾಂಕ ಬೊಲ್ಲಾವರಂ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಯಾಗಿರುವ ವಿನೀತ್ ರೆಡ್ಡಿ ಅವರಿಗೆ ತಮ್ಮ ಕೃತಜ್ಞತೆಗಳನ್ನು ತಿಳಿಸಲು ಬಯಸುತ್ತಾರೆ.
ಅನುವಾದ: ಶಂಕರ ಎನ್. ಕೆಂಚನೂರು