“ಮನೆಯ ಮಾಡಿನಿಂದ ಇಲಿಗಳು ಬಿದ್ದು ಸಾಯುತ್ತಿದ್ದ ದಿನಗಳು ಈಗಲೂ ನೆನಪಿದೆ. ಇದು ನಾನು ಕಂಡ ಅತ್ಯಂತ ಕೆಟ್ಟ ಶಕುನವಾಗಿತ್ತು. ಇದನ್ನು ಕೇಳಿ ನೀವು ನಗಬಹುದು ಆದರೆ ಆ ದಿನಗಳಲ್ಲಿ ಹಾಗೆ ಇಲಿಗಳು ಬಿದ್ದು ಸತ್ತರೆ ನಾವು ಮನೆಯನ್ನು ತೊರೆಯಬೇಕಿತ್ತು. ಮತ್ತೆ ಮನೆಗೆ ಮರಳುವುದು ಯಾವಾಗಲೆಂದು ನಮಗೆ ತಿಳಿದಿರುತ್ತಿರಲಿಲ್ಲ.”

ಈ ಸ್ಪಷ್ಟ ಚಿತ್ರಣವನ್ನು ಕೊಟ್ಟವರು ಕೊಯಮತ್ತೂರಿನ ಕಳಪಟ್ಟಿಯ ನಿವಾಸಿಯಾದ ಕುಳಂದೈ ಅಮ್ಮಾಳ್‌ ಅವರು. ಈಗ 80ರ ಪ್ರಾಯದವರಾಗಿರುವ ಅವರು 1940ರ ದಶಕದ ಆರಂಭದಲ್ಲಿ ಕೊನೆಯ ಬಾರಿಗೆ ತಮಿಳುನಾಡಿನ ಈ ನಗರವನ್ನು ಪ್ಲೇಗ್‌ ಆಕ್ರಮಿಸಿದಾಗ ಅವರಿನ್ನೂ ಹದಿಹರೆಯ ತಲುಪಿರಲಿಲ್ಲ.

ಕೊಯಮತ್ತೂರು ಅಂಟುರೋಗಗಳ ವಿಷಯದಲ್ಲಿ ಬಹಳಷ್ಟು ನೋವಿನ ಇತಿಹಾಸವನ್ನು ಹೊಂದಿದೆ. ಇಲ್ಲಿ ಸಿಡುಬಿನಿಂದ ಹಿಡಿದು ಪ್ಲೇಗ್‌, ಕಾಲರಾ ತನಕ ಬೇರೆಡೆಗಿಂತಲೂ ಹೆಚ್ಚು ತನ್ನ ಪರಿಣಾಮ ಬೀರಿವೆ. ಈ ನಗರದಲ್ಲಿರುವ ಪ್ಲೇಗ್‌ ಮಾರಿಯಮ್ಮನ್‌ (ಕರಿ ಮಾರಿಯಮ್ಮ ಎಂದೂ ಕರೆಯಲಾಗುತ್ತದೆ) ದೇವಸ್ಥಾನಗಳ ಸಂಖ್ಯೆ ಇದಕ್ಕೆ ಇಂಬು ನೀಡುತ್ತದೆ. ಈ ನಗರದಲ್ಲಿ ಒಟ್ಟು 16 ಪ್ಲೇಗ್‌ ಮಾರಿಯಮ್ಮನ್‌ ದೇವಸ್ಥಾನಗಳಿವೆ.

ಮತ್ತು ಸಹಜವಾಗಿ ಕೊರೋನಾ ಆಗಮನದೊಂದಿಗೆ ಕೊರೋನಾ ದೇವಿಯ ಆಗಮನವೂ ಆಗಿದೆ. ಆದರೆ ಪ್ಲೇಗ್‌ ಮಾರಿಯಮ್ಮನ್ ಕೊರೋನಾ ದೇವಿಗಿಂತಲೂ ಹೆಚ್ಚಿನ ಭಕ್ತರನ್ನು ಹೊಂದಿದೆ. ಪಕ್ಕ ತಿರುಪ್ಪೂರ್‌ ಜಿಲ್ಲೆಯಲ್ಲೂ ಕೆಲವು ದೇವಸ್ಥಾನಗಳಿದ್ದು ಅಲ್ಲಿ ಈಗಲೂ ಜಾತ್ರೆಗಳನ್ನು ನಡೆಸಲಾಗುತ್ತದೆ ಮತ್ತು ಭಕ್ತರು ಅಲ್ಲಿಗೆ ಬರುತ್ತಿರುತ್ತಾರೆ.

1903ರಿಂದ 1942ರವರೆಗೆ, ಕೊಯಮತ್ತೂರು ಕನಿಷ್ಠ 10 ಪ್ಲೇಗ್ ದಾಳಿಗಳನ್ನು ಎದುರಿಸಿತು, ಸಾವಿರಾರು ಜನರನ್ನು ಈ ಕಾಯಿಲೆಗೆ ಕಳೆದುಕೊಂಡಿತು. ಅದು ಇಲ್ಲವಾದ ದಶಕಗಳ ನಂತರವೂ, ಪ್ಲೇಗ್ ಈ ನಗರದ ಜನರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಕುಳಂದೈ ಅಮ್ಮಾಳ್‌ ಅವರಂತಹ ಅನೇಕ ಹಳೆಯ ಕಾಲದ ಜನರಿಗೆ, ಪ್ಲೇಗ್ ಎನ್ನುವುದು ನಗರವು ಐತಿಹಾಸಿಕವಾಗಿ ಅನುಭವಿಸಿದ ಕರಾಳ ದಿನಗಳ ನಡುಕಹುಟ್ಟಿಸುವ ನೆನಪು.

ಸದಾ ಗಿಜಿಗುವ ಟೌನ್‌ಹಾಲ್‌ ಪ್ರದೇಶದಲ್ಲಿರುವ ಪ್ಲೇಗ್‌ ಮಾರಿಯಮ್ಮನ್‌ ದೇವಸ್ಥಾನ ಬಹುಶಃ ಈ ನಗರದ ಹೆಚ್ಚು ಹೆಸರುವಾಸಿ ದೇವಸ್ಥಾನ. ಅಲ್ಲಿ ಹೂವಿನ ವ್ಯಾಪಾರಿಯೊಬ್ಬರು ಅಂದಿನ ಗಡಿಬಿಡಿಯ ಸಂಜೆಗೆ ತಯಾರಾಗುತ್ತಿದ್ದರು. “ಇಂದು ಶುಕ್ರವಾರ. ವ್ಯಾಪಾರ ಚೆನ್ನಾಗಿ ಆಗುತ್ತದೆ,” ಎಂದು 40ರ ಹರೆಯದ ಕಣ್ಣಮ್ಮಾಳ್‌ ಕಟ್ಟುತ್ತಿದ್ದ ಹೂವಿನಿಂದ ಕಣ್ಣೆತ್ತದೆ ಹೇಳಿದರು.

“ಈ ದೇವರು ಬಹಳ ಶಕ್ತಿವಂತೆ. ಈಗ ನಮ್ಮಲ್ಲಿ ಕೊರೋನಾ ದೇವಿ ದೇವಸ್ತಾನ ಇರಬಹುದು, ಆದರೆ ಕರುಮಾರಿಯಮ್ಮ ನಮ್ಮಲ್ಲಿ ಒಬ್ಬಳು. ನಾವು ಅವಳನ್ನು ಪೂಜಿಸುವುದನ್ನು ಮುಂದುವರೆಸಿದ್ದೇವೆ. ವಿಶೇಷವಾಗಿ ನಮಗೆ ಮೈಯಲ್ಲಿ ಹುಷಾರಿಲ್ಲದ ಸಮಯಗಳಲ್ಲಿ. ಇದಲ್ಲದೆ ಸಾಮಾನ್ಯ ಪ್ರಾರ್ಥನೆಗಳನ್ನೂ ದೇವಿಗೆ ಸಲ್ಲಿಸುತ್ತೇವೆ.“ ಇಲ್ಲಿ ʼಸಾಮಾನ್ಯ ಪ್ರಾರ್ಥನೆಗಳೆಂದರೆ ಭಕ್ತರ ಮಾಮೂಲಿ ಕೋರಿಕೆಗಳಾದ ಸಮೃದ್ಧಿ, ಯಶಸ್ಸು ಮತ್ತು ದೀರ್ಘಾಯುಷ್ಯ. ಪ್ಲೇಗ್‌ ಕಾಲವು ಕೊನೆಗೊಂಡ ನಾಲ್ಕು ದಶಕಗಳ ನಂತರ ಜನಿಸಿದ ಕಣ್ಣಮ್ಮಾಳ್‌ ಅವರ ಪೀಳಿಗೆಯ ಜನರೂ ಸಹಾಯಕ್ಕಾಗಿ ಮಾರಿಯಮ್ಮನ ಮೊರೆಹೋಗುತ್ತಾರೆ.

The Plague Mariamman temple in Coimbatore’s Town Hall area is 150 years old.
PHOTO • Kavitha Muralidharan
Devotees believe that the deity can cure them when they fall sick
PHOTO • Kavitha Muralidharan

ಎಡ: ಕೊಯಮತ್ತೂರು ಟೌನ್ ಹಾಲ್ ಪ್ರದೇಶದ ಪ್ಲೇಗ್ ಮಾ ರಿಯಮ್ಮನ್ ದೇವಾಲಯವು 150 ವರ್ಷಗಳಷ್ಟು ಹಳೆಯದು. ಬಲ : ಅನಾರೋಗ್ಯಕ್ಕೆ ಒಳಗಾದಾಗ ದೇವತೆ ತಮ್ಮನ್ನು ಗುಣಪಡಿಸಬ ಲ್ಲಳು ಎಂದು ಭಕ್ತರು ನಂಬುತ್ತಾರೆ

ಇಲ್ಲಿ ಪ್ಲೇಗ್‌ನ ಪ್ರಭಾವ ಎಷ್ಟಿತ್ತೆಂದರೆ ಅದು ಕೊಯಮತ್ತೂರಿನ ಸಾಂಸ್ಕೃತಿಕ ಜನಾಂಗೀಯ ಶಾಸ್ತ್ರದ ಒಂದು ಭಾಗವಾಯಿತು. "ಪಟ್ಟಣದ ಮೂಲ ಸ್ಥಳೀಯ ನಿವಾಸಿಗಳು ಪ್ಲೇಗಿನಿಂದ ಉಂಟಾದ  ಹಾನಿಗೆ ಕೇವಲ ಸಾಕ್ಷಿಗಳಾಗಿರಲಿಲ್ಲ. ಅವರು ಬಲಿಪಶುಗಳಾಗಿದ್ದರು. ಪ್ಲೇಗಿನಿಂದ ಬಾಧಿತವಾಗಿಲ್ಲದ ಒಂದು ಕುಟುಂಬವನ್ನು ಕೂಡಾ ನೀವು ಇಲ್ಲಿ ಕಾಣಲಾಗುವುದಿಲ್ಲ" ಎಂದು ಕೊಯಮತ್ತೂರು ಮೂಲದ ಬರಹಗಾರ ಸಿ.ಆರ್. ಇಳಂಗೋವನ್ ಹೇಳುತ್ತಾರೆ.

1961ರ ಜಿಲ್ಲಾ ಜನಗಣತಿಯ ಕೈಪಿಡಿಯ ಪ್ರಕಾರ, [VM1] ಕೊಯಮತ್ತೂರು ನಗರವು 1909ರಲ್ಲಿ 5,582 ಸಾವುಗಳಿಗೆ ಮತ್ತು 1920ರಲ್ಲಿ ವಿವಿಧ ಪ್ಲೇಗ್‌ಗಳಿಂದ 3,869 ಸಾವುಗಳಿಗೆ ಸಾಕ್ಷಿಯಾಯಿತು. ಇತರ ವರದಿಗಳು [VM2] ಕೊಯಮತ್ತೂರು ಜನಸಂಖ್ಯೆಯನ್ನು ಆ ವರ್ಷದ ಪ್ಲೇಗ್ ಹರಡುವಿಕೆಯ ನಂತರ 1911ರಲ್ಲಿ 47,000ಕ್ಕೆ ಇಳಿಕೆಯಾಯಿತು ಎಂದು ಹೇಳುತ್ತವೆ. ಒಟ್ಟಾರೆಯಾಗಿ, 1901ರಲ್ಲಿ ಸುಮಾರು 53,000 ಜನಸಂಖ್ಯೆಯನ್ನು ಹೊಂದಿದ್ದ ನಗರದ ಮೇಲೆ ಈ ಕಾಯಿಲೆ ದೊಡ್ಡ ಪರಿಣಾಮವನ್ನೇ ಬಿರಿತ್ತು.

ಇಳಂಗೋವನ್‌ ಅವರ ಕುಟುಂಬವೂ ಈ ಪ್ಲೇಗ್‌ ಅಂಟುರೋಗದ “ಅಪಾಯದಿಂದ ತಪ್ಪಿಸಿಕೊ‍ಳ್ಳಲು” ಒಂದಷ್ಟು ದಿನ ಕೊಯಮತ್ತೂರು ಬಿಟ್ಟು “ಕಾಡಿನಲ್ಲಿ ಬದುಕಿದ್ದರು.” ಅದು ಇಂದಿನ ದಿನಗಳಲ್ಲಿ ಅಸಾಧ್ಯದ ಮಾತೇ ಹೌದು.

“ಆ ಕರಾಳ ದಿನಗಳಲ್ಲಿ ಯಾವುದೇ ವೈದ್ಯಕೀಯ ಸವಲತ್ತುಗಳ ಲಭ್ಯತೆಯಿಲ್ಲದ ಕಾರಣ ಜನರು ದೇವರುಗಳ ಮೊರೆಹೋದರು.” ಎನ್ನುತ್ತಾರೆ ಪಿ. ಶಿವಕುಮಾರ್.‌ ಇವರು ಜಿಲ್ಲೆಯ ಜನಾಂಗೀಯ ಶಾಸ್ತ್ರದಲ್ಲಿ ತೀವ್ರ ಆಸಕ್ತಿ ಹೊಂದಿರುವ ಕೊಯಮತ್ತೂರು ಮೂಲದ ಕೀಟಶಾಸ್ತ್ರಜ್ಞ.

ಆದರೆ ಆ ಭರವಸೆಯೂ ಆಗಾಗ ಮರುಕಳಿಸುತ್ತಿದ್ದ ಕಾಯಿಲೆಯ ಭಯದೊಡನೆ ಬಂಧಿಸಲ್ಪಟ್ಟಿತ್ತು. 1927ರಲ್ಲಿ ಈ ಪ್ಲೇಗ್‌ ಮಹಮಾರಿಯ ನಡುವೆ ನಗರ ಬದುಕುತ್ತಿದ್ದ ಸಮಯದಲ್ಲೇ ತತ್ವಜಾನಿ ಬರ್ಟಂಡ್‌ ರಸೆಲ್‌ ಧರ್ಮವನ್ನು “ಮೂಲಭೂತವಾಗಿ ಮತ್ತು ಮುಖ್ಯವಾಗಿ ಭಯದ ಮೇಲೆ ಅವಲಂಬಿತವಾಗಿದೆ. ಇದು ಭಾಗಶಃ ಅಜ್ಞಾತ ಭಯ ಮತ್ತು ನಿಮ್ಮ ಉಳಿದ ಎಲ್ಲಾ ರೀತಿಯ ತೊಂದರೆಗಳು, ಕಷ್ಟಗಳನ್ನು ಎದುರಿಸಲು ಇರುವ ಹಿರಿಯಣ್ಣನೆಂಬಂತೆ ನೀವು ದೇವರನ್ನು ನೋಡುತ್ತೀರಿ,” ಎಂದು ಘೋಷಿಸಿದ.

ಈ ಎಲ್ಲಾ ವೈವಿಧ್ಯಮಯ ಕಾರಣಗಳು ಮಾರಿಯಮ್ಮನಿಗೆ ಮೀಸಲಾದ ಆ 16 ದೇವಾಲಯಗಳ ಅಸ್ತಿತ್ವದೊಂದಿಗೆ ಒಂದಿಷ್ಟು ಸಂಬಂಧ ಹೊಂದಿವೆ - ಅದರ ಜನಪ್ರಿಯ ಹೆಸರು ಸಹ ಕಾಲದೊಂದಿಗೆ ಬದಲಾವಣೆಗೆ ಒಳಗಾಗಿದೆ. "ಜನರು ಪ್ಲೇಗ್ ಮರಿಯಮ್ಮನ್ ಅನ್ನು ಕರು(ಪ್ಪು) ಮಾರಿಯಮ್ಮನ್ ಎಂದು ಕರೆಯಲುಪ್ರಾರಂಭಿಸಿದರು" ಎಂದು  ಇಳಂಗೋವನ್ ಹೇಳುತ್ತಾರೆ. "ಮಾರಿ ಎಂದರೆ ತಮಿಳಿನಲ್ಲಿ ಕಪ್ಪು ಎಂದರ್ಥವಾದ್ದರಿಂದ, ಪರಿವರ್ತನೆಯು ತಡೆರಹಿತವಾಗಿತ್ತು."

ಮತ್ತು ಪ್ಲೇಗ್ ಸ್ವತಃ ತಾನು ಇತಿಹಾಸದ ನೆರಳಿನಲ್ಲಿ ಮರೆಯಾಗುತ್ತಿರುವಾಗ, ಅದರ ಪರಿಣಾಮದ ಕುರಿತಾದ ತಲೆಮಾರುಗಳಿಂದ ಹಸ್ತಾಂತರಿಸಿಲ್ಪಟ್ಟ ನೆನಪುಗಳು ಕೂಡಾ ವೈವಿಧ್ಯಮಯ ರೀತಿಯಲ್ಲಿ ಪ್ರಕಟವಾಗುತ್ತವೆ.

People turn to Plague Mariamman for prosperity and long life, but they also seek relief from diseases like chicken pox, skin ailments, viral infections, and now Covid-19
PHOTO • Kavitha Muralidharan

ಜನರು ಸಹಾಯ, ಸಮೃದ್ಧಿ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ಲೇಗ್ ಮಾರಿಯಮ್ಮನ ಮೊರೆ ಹೋಗುತ್ತಾರೆ . ಅವರು ಸಿಡುಬು , ಚರ್ಮದ ಕಾಯಿಲೆಗಳು, ವೈರಲ್ ಸೋಂಕುಗಳು ಮತ್ತು ಈಗ ಕೋವಿಡ್-19ನಂತಹ ರೋಗಗಳಿಂದ ಪರಿಹಾರ ಕ್ಕಾಗಿ ಕೋರುತ್ತಾರೆ

ಕೊಯಮತ್ತೂರು ನಿವಾಸಿ ಯಾದ 32 ವರ್ಷದ ನಿಕಿಲಾ ಸಿ. ಹೇಳುವಂತೆ, "ನನಗೆ ಹುಷಾರಿಲ್ಲದ ಸಮಯದಲ್ಲಿ ನನ್ನ ಹೆತ್ತವರು ನನ್ನನ್ನು ದೇವಾಲಯಕ್ಕೆ ಕರೆದೊಯ್ಯುತ್ತಿದ್ದದ್ದು ನನಗೆ ನೆನಪಿದೆ. ನನ್ನ ಅಜ್ಜಿ ದೇವಾಲಯಕ್ಕೆ ಯಾವಾಗಲೂ ಹೋಗುತ್ತಿದ್ದರು. ದೇವಾಲಯದ ಪವಿತ್ರ ನೀರು ರೋಗವನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ನನ್ನ ಪೋಷಕರು ನಂಬಿದ್ದರು. ಅವರು ದೇವಾಲಯದಲ್ಲಿ ಪೂಜೆಗಳನ್ನು ಸಲ್ಲಿಸುತ್ತಿದ್ದರು. ಇಂದು, ನನ್ನ ಮಗಳು ಹುಷಾರು ತಪ್ಪಿದಾಗ, ನಾನು ಸಹ ಅದೇ ರೀತಿ ಮಾಡುತ್ತೇನೆ. ನಾನು ಅವಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಪೂಜೆಗಳನ್ನು ಮಾಡುತ್ತೇನೆ, ಅವಳಿಗೆ ಪವಿತ್ರ ನೀರನ್ನು ಕೊಡುತ್ತೇನೆ. ನಾನು ನನ್ನ ಹೆತ್ತವರಂತೆ ನಿಯಮಿತವಾಗಿ ಅಲ್ಲಿಗೆ ಹೋಗದಿರಬಹುದು, ಆದರೆ ನಾನು ಆಗಾಗ ಹೋಗುತ್ತೇನೆ. ಹೀಗೆ ಈ ದೇವಸ್ಥಾನಕ್ಕೆ ಹೋಗುವುದು ನಗರದ ನಿವಾಸಿಯಾಗಿರುವುದರ ಒಂದು ಭಾಗವೆನ್ನುವುದು ನನ್ನ ಭಾವನೆ."

*****

"ನಾನು ಇಲ್ಲಿ ನಾಲ್ಕನೇ ತಲೆಮಾರಿನ ಪುರೋಹಿತನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಮತ್ತು ಚಿಕನ್ ಪಾಕ್ಸ್ (ಸೀತಾಳೆ ಸಿಡುಬು), ಚರ್ಮದ ರೋಗಗಳು, ಕೋವಿಡ್-19 ಮತ್ತು ವೈರಲ್ ಸೋಂಕುಗಳಿಗೆ ಪರಿಹಾರಗಳನ್ನು ಹುಡುಕಲು ಜನರು ಈಗಲೂ ಇಲ್ಲಿಗೆ ಭೇಟಿ ನೀಡುತ್ತಾರೆ" ಎಂದು ಟೌನ್ ಹಾಲ್ ಪ್ರದೇಶದ ಪ್ಲೇಗ್ ಮಾರಿಯಮ್ಮನ್ ದೇವಾಲಯದಲ್ಲಿ ಪುರೋಹಿತರಾಗಿರುವ 42 ವರ್ಷದ ಎಂ. ರಾಜೇಶ್ ಕುಮಾರ್ ಹೇಳುತ್ತಾರೆ. "ಈ ದೇವಿಯು ಇಂತಹ ರೋಗಗಳಿಂದ ಬಿಡುಗಡೆಯನ್ನು ನೀಡುತ್ತಾಳೆಂಬ ನಂಬಿಕೆ ಇದೆ."

"ಈ ದೇವಾಲಯವು 150 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಪ್ಲೇಗ್ ಕೊಯಮತ್ತೂರಿನಲ್ಲಿ [1903-1942] ಕಾಣಿಸಿಕೊಂಡಾಗ, ನನ್ನ ಮುತ್ತಜ್ಜ ಪ್ಲೇಗ್ ಮಾರಿಯಮ್ಮನ್ ಹೆಸರಿನ ಹೆಚ್ಚುವರಿ ವಿಗ್ರಹವನ್ನು ಪ್ರತಿಷ್ಠಾಪಿಸಲು ನಿರ್ಧರಿಸಿದರು. ಅವರ ನಂತರ, ನನ್ನ ಅಜ್ಜ ಮತ್ತು ನನ್ನ ತಂದೆ ಅದನ್ನು ನೋಡಿಕೊಂಡರು. ನಾನು ಇಂದು ಅದನ್ನು ಮಾಡುತ್ತೇನೆ. ಅಂದಿನಿಂದ, ದೇವಿಯ ಹಿಡಿತದಲ್ಲಿರುವ ಯಾವುದೇ ಪ್ರದೇಶವು ಪ್ಲೇಗಿನಿಂದ ಬಾಧಿತವಾಗಿಲ್ಲ. ಹೀಗಾಗಿ ಜನರು ಅವಳ ಮೇಲೆ ನಂಬಿಕೆಯನ್ನು ಮುಂದುವರಿಸಿದ್ದಾರೆ."

ಕೊಯಮತ್ತೂರಿನ ಸಾಯಿಬಾಬಾ ಕಾಲೋನಿಯಲ್ಲಿರುವ ದೇವಾಲಯವನ್ನು ಸಹ ಇದೇ ರೀತಿಯ ಕಥೆಯೊಂದು ಸುತ್ತುವರೆದಿದೆ. "ಇದನ್ನು ಮೂಲತಃ ಸುಮಾರು 150 ವರ್ಷಗಳ ಹಿಂದೆ ನಿರ್ಮಿಸಲಾಗಿದೆ" ಎಂದು ಈ ಪ್ರದೇಶದ ಪ್ಲೇಗ್ ಮಾರಿಯಮ್ಮನ್ ದೇವಾಲಯದ ಆಡಳಿತ ಸಮಿತಿ ಸದಸ್ಯರಾದ 63 ವರ್ಷದ ವಿ.ಜಿ. ರಾಜಶೇಖರನ್ ಹೇಳುತ್ತಾರೆ. ಅಂದರೆ ಪ್ಲೇಗ್ ಬರುವ ಮೊದಲು ಇದನ್ನು ನಿರ್ಮಿಸಲಾಗಿದೆ.

ಕುತೂಹಲಕಾರಿಸಂಗತಿಯೆಂದರೆ, ಈ ಎರಡೂ ಮತ್ತು ಅಂತಹ ಅನೇಕ ದೇವಾಲಯಗಳು ಮೊದಲೇ ಮಾರಿಯಮ್ಮನ್ ದೇವಾಲಯಗಳಾಗಿದ್ದವು – ಆದರೆ ಜನರು ಇತರ ಪಾತ್ರಗಳು ಅಥವಾ ಅವತಾರಗಳಲ್ಲಿ ಅವಳನ್ನು ಆಚರಿಸುತ್ತಿದ್ದರು . ಪ್ಲೇಗ್ ಈ ಪ್ರದೇಶಕ್ಕೆ ಅಪ್ಪಳಿಸಿ, ಬೆನ್ನಲ್ಲೇ ವಿನಾಶವನ್ನು ತಂದಾಗ, ಕಲ್ಲಿನಲ್ಲಿ ಕೆತ್ತಲಾದ ದೇವತೆಯ ಹೆಚ್ಚುವರಿ ಪ್ರತಿಮೆಗಳನ್ನು ಪ್ಲೇಗ್ ಮಾರಿಯಮ್ಮನ್ ಎನ್ನುವ ಹೆಸರಿನಲ್ಲಿ ಪ್ರತಿಷ್ಟಾಪಿಸಲಾಯಿತು.

ಅವರು ಸೇವೆ ಸಲ್ಲಿಸುತ್ತಿರುವ ದೇವಾಲಯ ಸ್ಥಾಪನೆಯಾದ ಸುಮಾರು ಮೂರು ದಶಕಗಳ ನಂತರ ನಗರಕ್ಕೆ ಪ್ಲೇಗ್ ಅಪ್ಪಳಿಸಿದಾಗ, "ಪ್ರತಿ ಕುಟುಂಬದಲ್ಲಿ ಕನಿಷ್ಠ ಐದು ಅಥವಾ ಆರು ಜನರು ಸತ್ತರು" ಎಂದು ರಾಜಶೇಖರನ್ ಹೇಳುತ್ತಾರೆ. "ತಮ್ಮ ಕುಟುಂಬ ಸದಸ್ಯರ ಮರಣದ ನಂತರ ಅಥವಾ ಪ್ಲೇಗ್ ಹಾವಳಿ ಮುಂದುವರೆದಂತೆ, ಮನೆಯ ಮಾಡಿನಿಂದ ಇಲಿಗಳು ಬೀಳತೊಡಗಿದಾಗ ಕುಟುಂಬಗಳು ತಮ್ಮ ಮನೆಗಳನ್ನು ತೊರೆದವು. ಅವರು ತಮ್ಮ ಮನೆಗಳಿಗೆ ಹಿಂದಿರುಗಲು ನಾಲ್ಕು ಅಥವಾ ಐದು ತಿಂಗಳು ಬೇಕಾಯಿತು."

V.G. Rajasekaran is an administrative committee member of the Plague Mariamman shrine in Coimbatore’s Saibaba Colony.
PHOTO • Kavitha Muralidharan
The temple existed from before the plague outbreaks in early to mid-20th century
PHOTO • Kavitha Muralidharan

ಎಡ: ಕೊಯಮತ್ತೂರಿನ ಸಾಯಿಬಾಬ ಕಾಲೋನಿಯ ಪ್ಲೇಗ್ ಮಾ ರಿಯಮ್ಮನ್ ದೇಗುಲದ ಆಡಳಿತ ಸಮಿತಿ ಸದಸ್ಯ ವಿ.ಜಿ. ರಾಜಶೇಖರನ್ ಬಲ: 20ನೇ ಶತಮಾನದಲ್ಲಿ ಪ್ಲೇಗ್ ಹರಡುವ ಮೊದ ಲೇ ಈ ದೇವಾಲಯ‌ ಅಸ್ತಿತ್ವದಲ್ಲಿತ್ತು

ಆಗ ಒಂದು ಸಣ್ಣ ಹಳ್ಳಿಯಾಗಿದ್ದ ಸಾಯಿಬಾಬಾ ಕಾಲೋನಿಯ ನಿವಾಸಿಗಳು ಪ್ಲೇಗಿನಿಂದ ಗುಣಮುಖರಾಗಲು ಆರಾಧನೆಗಾಗಿ ಪ್ರತ್ಯೇಕ ಮೂರ್ತಿಯನ್ನು ಪ್ರತಿಷ್ಟಾಸ್ಥಾಪಿಸಲು ನಿರ್ಧರಿಸಿದರು ಮತ್ತು ಆ ದೇವರನ್ನು ಪ್ಲೇಗ್ ಮಾರಿಯಮ್ಮನ್ ಎಂದು ಕರೆಯಲು ನಿರ್ಧರಿಸಿದರು. "ನಮ್ಮ ಕುಟುಂಬದಲ್ಲಿ ಎರಡು ಸಾವುಗಳು ಸಂಭವಿಸಿವೆ. ಚಿಕ್ಕಪ್ಪ ಅನಾರೋಗ್ಯಕ್ಕೆ ಒಳಗಾದಾಗ, ನನ್ನ ಅಜ್ಜಿ ಅವರನ್ನು ದೇವಾಲಯಕ್ಕೆ ಕರೆತಂದರು, ಪ್ಲೇಗ್ ಮಾರಿಯಮ್ಮನ್ ಮುಂದೆ ಮಲಗಿಸಿ ಅವರ ಮೇಲೆ ಬೇವು ಮತ್ತು ಅರಿಶಿನವನ್ನು ಹಚ್ಚಿದರು. ನಂತರ ಅವರ ಆರೋಗ್ಯ ಸರಿಯಾಯಿತು."

ಅಂದಿನಿಂದ, ಆ ಹಳ್ಳಿ ಮತ್ತು ಇತರ ಹಲವರು (ಈಗ ಕೊಯಮತ್ತೂರು ನಗರದ ಭಾಗವಾಗಿದೆ), ಮಾರಿಯಮ್ಮನನ್ನು ಪೂಜಿಸುವುದರಿಂದ ತಮಗೆ ಪ್ಲೇಗ್‌ ಸೋಂಕು ತಗುಲುವುದಿಲ್ಲ ಎಂದು ನಂಬತೊಡಗಿದರು.

ಪ್ಲೇಗ್ ಮಾರಿಯಮ್ಮನ್ ದೇವಾಲಯಗಳ ಸಮೃದ್ಧ ಸಂಖ್ಯೆ ಮತ್ತು ಸಾಮೀಪ್ಯದ ಹಿಂದಿರುವ ಕಾರಣ ಇದಾಗಿರಬಹುದು ಎಂದು ಇಳಂಗೋವನ್ ಹೇಳುತ್ತಾರೆ. ಸಾಯಿಬಾಬ ಕಾಲೋನಿ, ಪೀಲಾಮೇಡು, ಪಾಪನಾಯಕನ್‌ ಪಾಳ್ಯಮ್, ಟೌನ್ ಹಾಲ್ಮತ್ತು ಇತರ ಪ್ರದೇಶಗಳು ಒಂದು ಶತಮಾನದ ಹಿಂದೆ ಬೇರೆ ಬೇರೆ ಗ್ರಾಮಗಳಾಗಿದ್ದವು. ಇಂದು ಅವೆಲ್ಲವೂ ಕೊಯಮತ್ತೂರು ನಗರದ ಭಾಗವಾಗಿವೆ."

ತಮಿಳು ಸಾಂಸ್ಕೃತಿಕ ಇತಿಹಾಸದ ಬರಹಗಾರ ಮತ್ತು ಇತಿಹಾಸಕಾರ ಸ್ಟಾಲಿನ್ ರಾಜಂಗಮ್ ಹೇಳುವಂತೆ ಪ್ಲೇಗ್ ಮಾರಿಯಮ್ಮನ ಆರಾಧನೆಯು "ಬಹಳ ಸ್ವಾಭಾವಿಕ ಪರಿಣಾಮವಾಗಿರಬಹುದು, ವಿನಾಶವನ್ನುಂಟುಮಾಡಿದ ರೋಗಕ್ಕೆ ಪ್ರತಿಕ್ರಿಯೆಯಾಗಿರಬಹುದು. ನಂಬಿಕೆಯ ಪರಿಕಲ್ಪನೆ ಹೀಗಿದೆ: ನಿಮ್ಮ ಸಮಸ್ಯೆಗಳಿಗೆ, ನಿಮ್ಮ ಚಿಂತೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ನೀವು ದೇವರನ್ನು ನಂಬುತ್ತೀರಿ. ಮಾನವಕುಲದ ದೊಡ್ಡ ಸಮಸ್ಯೆ ಅನಾರೋಗ್ಯ. ಆದ್ದರಿಂದ ನಿಸ್ಸಂಶಯವಾಗಿ, ಇಲ್ಲಿ ನಂಬಿಕೆ ರೋಗಗಳಿಂದ ಪರಿಹಾರದ ಸುತ್ತ ಕೇಂದ್ರೀಕೃತವಾಗಿದೆ."

"ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ಧರ್ಮದಲ್ಲೂ ಇದು ಸಾಮಾನ್ಯವಾಗಿದೆ" ಎಂದು ರಾಜಂಗಮ್ ಮುಂದುವರೆದು ಹೇಳುತ್ತಾರೆ. "ಮಕ್ಕಳು ಆರೋಗ್ಯ ತಪ್ಪಿದಾಗ ಮಸೀದಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕ್ರೈಸ್ತ ಮತದಲ್ಲಿ ಆರೋಗ್ಯ ಮಾತಾ(ದಾ) (ಯೋಗಕ್ಷೇಮದ ತಾಯಿ) ಆರಾಧನೆಯನ್ನು ನಾವು ಹೊಂದಿದ್ದೇವೆ. ಬೌದ್ಧ ಭಿಕ್ಕುಗಳು ಔಷಧೋಪಚಾರ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತಮಿಳುನಾಡಿನಲ್ಲಿ, ನಾವು ಸಿದ್ಧರರನ್ನು ಕಾಣಬಹುದು , ಅವರು ಮೂಲತಃ ಔಷಧಿ ನೀಡುವ ವೈದ್ಯರಾಗಿದ್ದರು. ಆದ್ದರಿಂದಲೇ ನಮ್ಮಲ್ಲಿ ಸಿದ್ಧ ಔಷಧಿ ಎನ್ನುವ ವಿಭಾಗವೇ ಇದೆ . "

ತಮಿಳುನಾಡಿನ ಬಹುತೇಕ ಪ್ರತಿಯೊಂದು ಹಳ್ಳಿಯಲ್ಲೂ ಮಾರಿಯಮ್ಮನ್ ದೇವಾಲಯವಿದೆ. ಆಕೆಗೆ ಕೆಲವು ಪ್ರದೇಶಗಳಲ್ಲಿ ಬೇರೆ ಹೆಸರಿರಬಹುದು, ಆದರೆ ಅವಳ ದೇವಾಲಯಗಳಿವೆ. ನಿರ್ದಿಷ್ಟ ದೇವರುಗಳ ಕಲ್ಪನೆ ಮತ್ತು ಅವರ ಕೋಪ ಅಥವಾ ಗುಣಪಡಿಸುವ ಸಾಮರ್ಥ್ಯವು ಒಂದು ಧರ್ಮ ಅಥವಾ ಒಂದು ದೇಶಕ್ಕೆ ಸೀಮಿತವಾಗಿಲ್ಲ. ಮತ್ತು ಇತ್ತೀಚಿನ ದಶಕಗಳಲ್ಲಿ ಪ್ಲೇಗ್ ಮತ್ತು ಸಾಂಕ್ರಾಮಿಕ ರೋಗಗಳಿಗಳತ್ತ ಧಾರ್ಮಿಕ ಪ್ರತಿಕ್ರಿಯೆಯನ್ನು ಪ್ರಪಂಚದಾದ್ಯಂತದ ವಿದ್ವಾಂಸರು ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದಾರೆ.

A temple in the Pappanaickenpudur neighbourhood of Coimbatore. Painted in red, the words at the entrance say, Arulmigu Plague Mariamman Kovil ('temple of the compassionate Plague Mariamman')
PHOTO • Kavitha Muralidharan

ಕೊಯಮತ್ತೂರಿನ ನೆರೆಯ ಪಾಪನಾಯಕನ್‌ಪು ದೂರಿನಲ್ಲಿ ಒಂದು ದೇವಾಲಯ. ಪ್ರವೇಶದ್ವಾರದಲ್ಲಿ ಕೆಂಪು ಅಕ್ಷರಗಳಲ್ಲಿ ಬರೆಯಲಾಗಿರುವ 'ಅರು ಳ್ಮಿ ಗು ಪ್ಲೇಗ್ ಮಾ ರಿಯಮ್ಮನ್ ಕೋವಿಲ್' ( ಕರುಣಾಮಯಿ ಪ್ಲೇಗ್ ಮಾ ರಿಯಮ್ಮನ್ ದೇವಾಲಯ) ಎಂಬ ಪದಗಳು

ಇತಿಹಾಸಕಾರ ಡುವಾನ್ ಜೆ. ಓಶೈಮ್2008ರಲ್ಲಿ ಪ್ರಕಟವಾದ  ತನ್ನ ಪ್ರಬಂಧ, 'ರಿಲಿಜನ್ ಅಂಡ್ ಎಪಿಡೆಮಿಕ್ ಡಿಸೀಸ್' ನಲ್ಲಿ ಹೇಳುವಂತೆ: "ಸಾಂಕ್ರಾಮಿಕ ರೋಗಕ್ಕೆ ಯಾವುದೇ ಏಕೈಕ ಅಥವಾ ಊಹಿಸಬಹುದಾದ ಧಾರ್ಮಿಕ ಪ್ರತಿಕ್ರಿಯೆ ಇಲ್ಲ. ಧಾರ್ಮಿಕ ಪ್ರತಿಕ್ರಿಯೆಗಳು ಯಾವಾಗಲೂ ಒಂದೇ ರೀತಿಯಿರುತ್ತದೆಂದು ಎಂದು ಭಾವಿಸುವುದು ಸರಿಯಲ್ಲ. ಲಿಂಗ, ವರ್ಗ ಅಥವಾ ಜನಾಂಗದಂತೆ ಧರ್ಮವೂ ವಿಶ್ಲೇಷಣೆಯ ವರ್ಗವಾಗಿದೆ ಎಂದು ಗುರುತಿಸುವುದು ಒಳ್ಳೆಯದು. ಸಾಂಕ್ರಾಮಿಕ ರೋಗಕ್ಕೆ ಧಾರ್ಮಿಕ ಪ್ರತಿಕ್ರಿಯೆಯನ್ನು ಅನಾರೋಗ್ಯ ಮತ್ತು ಅದಕ್ಕೆ ಮಾನವ ಪ್ರತಿಕ್ರಿಯೆಗಳ ಮೇಲೆ ಪ್ರಭಾವ ಬೀರುವ ಅಧ್ಯಯನಕ್ಕಾಗಿ ಒಂದು ಚೌಕಟ್ಟಾಗಿ, ನಿರಂತರವಾಗಿ ಬದಲಾಗುತ್ತಿರುವ ಚೌಕಟ್ಟನ್ನಾಗಿ ಉತ್ತಮವಾಗಿ ನೋಡಬಹುದು."

*****

ವಾರ್ಷಿಕ ಅಮ್ಮನ್ ತಿರುವಿಳಗಳು (ಮಾರಿಯಮ್ಮನ್ ಜಾತ್ರೆ) ಇಂದಿಗೂ ತಮಿಳುನಾಡಿನಲ್ಲಿ ಸಾಮಾನ್ಯವಾಗಿದೆ. ಮತ್ತು ಇವು ಸಾರ್ವಜನಿಕ ಆರೋಗ್ಯ ಮತ್ತು ಧಾರ್ಮಿಕ ನಂಬಿಕೆಯ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವ ಅಗತ್ಯವನ್ನು ಬಲಪಡಿಸುತ್ತವೆ ಎಂದು ಸ್ಟಾಲಿನ್ ರಾಜಂಗಮ್ ಹೇಳುತ್ತಾರೆ. ಈ ಹಬ್ಬಗಳು ಸಾಮಾನ್ಯವಾಗಿ ತಮಿಳು ತಿಂಗಳಾದ ಆಡಿಯಲ್ಲಿ  (ಜುಲೈ ಮಧ್ಯದಿಂದ ಆಗಸ್ಟ್ ಮಧ್ಯದವರೆಗೆ) ಅಮ್ಮನ್ ದೇವಾಲಯಗಳಲ್ಲಿ ರಾಜ್ಯದಾದ್ಯಂತ ನಡೆಯುತ್ತವೆ.

"ಹಿಂದಿನ ತಿಂಗಳುಗಳು - ಚಿತ್ತಿರೈ, ವೈಗಾಸಿ  ಮತ್ತು ಆನಿ [ಕ್ರಮವಾಗಿ ಏಪ್ರಿಲ್ ಮಧ್ಯದಿಂದ ಮೇ ಮಧ್ಯದವರೆಗೆ, ಮೇ ಮಧ್ಯದಿಂದ ಜೂನ್ ಮಧ್ಯದವರೆಗೆ ಮತ್ತು ಜೂನ್ ಮಧ್ಯದಿಂದ ಜುಲೈ ಮಧ್ಯದವರೆಗೆ] ತಮಿಳುನಾಡಿನಲ್ಲಿ ತುಂಬಾ ಬಿಸಿಲಿರುತ್ತದೆ" ಎಂದು ರಾಜಂಗಮ್ ಹೇಳುತ್ತಾರೆ. "ಭೂಮಿ ಒಣಗಿರುತ್ತದೆ, ಮತ್ತು ದೇಹಗಳು ಒಣಗಿರುತ್ತವೆ. ಈ ಶುಷ್ಕತೆಯು ಅಮ್ಮೈ (ಸೀತಾಳೆ ಸಿಡುಬು/ಸಿಡುಬು) ಎಂಬ ರೋಗಕ್ಕೆ ಕಾರಣವಾಗುತ್ತದೆ. ಇವೆರಡಕ್ಕೂ ಪರಿಹಾರವೆಂದರೆ ತಂಪು. ಮತ್ತು ತಿರುವಿಳಗಳಲ್ಲಿ ಇದನ್ನೇ ಅನುಸರಿಸಲಾಗುತ್ತದೆ."

ಹಾಗೆಯೇ, 'ಮುತ್ತು ಮಾರಿಯಮ್ಮನ್' (ದೇವತೆಯ ಮತ್ತೊಂದು ಪಾತ್ರ/ಹೆಸರು) ಆರಾಧನೆಯು ಸೀತಾಳೆ ಸಿಡುಬು ಮತ್ತು ಸಿಡುಬಿನಿಂದ ದೈವಿಕ ಪರಿಹಾರವನ್ನು ಹುಡುಕುವುದಾಗಿದೆ. "ಈ ರೋಗವು ಚರ್ಮದ ಮೇಲೆ ಗುಳ್ಳೆಯಂತೆ ಏಳುತ್ತಿದ್ದ ಕಾರಣ, ದೇವತೆಯನ್ನು ಮುತ್ತು ಮರಿಯಮ್ಮನ್ ಎಂದು ಕರೆಯಲಾಗುತ್ತಿತ್ತು, ಇಂದು ತಮಿಳುನಾಡಿನಲ್ಲಿ ಸಿಡುಬುಗಳಿಗೆ ಪರಿಣಾಮಕಾರಿ ಚಿಕಿತ್ಸೆಗಳಿವೆಯಾದರೂ , ದೇವಾಲಯಗಳು ಜನಸಂದಣಿಯನ್ನು ಸೆಳೆಯುತ್ತಲೇ ಇವೆ."

ರಾಜಂಗಮ್ ಹಬ್ಬಗಳಿಗೆ ಸಂಬಂಧಿಸಿದ ಕೆಲವು ಆಚರಣೆಗಳನ್ನು ಸಹ ಉಲ್ಲೇಖಿಸುತ್ತಾರೆ, ಈ ಆಚರಣೆಗಳಲ್ಲಿ ವೈಜ್ಞಾನಿಕ ಮೌಲ್ಯವಲ್ಲದಿದ್ದರೂ ಔಷಧೀಯ ಗುಣವನ್ನು ಹೊಂದಿರಬಹುದು ಎನ್ನುತ್ತಾರೆ. "ಒಮ್ಮೆ ತಿರುವಿಳಾವನ್ನು ಹಳ್ಳಿಯಲ್ಲಿ ಘೋಷಿಸಿದ ನಂತರ, ಕಾಪು ಕಟ್ಟುತಲ್ ಎಂಬ  ಆಚರಣೆಯನ್ನು ನಡೆಸಲಾಗುತ್ತದೆ, ಅದರ ನಂತರ ಜನರು ಹಳ್ಳಿಯ ಹೊರಗೆ ಹೆಜ್ಜೆ ಇಡುವಂತಿಲ್ಲ. ತಮ್ಮ ಕುಟುಂಬಗಳಲ್ಲಿ, ತಮ್ಮ ಬೀದಿಗಳಲ್ಲಿ ಮತ್ತು ಹಳ್ಳಿಯಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಸೋಂಕು ನಿವಾರಕವೆಂದು ಪರಿಗಣಿಸಲಾದ ಬೇವಿನ ಎಲೆಗಳನ್ನು ಹಬ್ಬಗಳಲ್ಲಿ ಧಾರಾಳವಾಗಿ ಬಳಸಲಾಗುತ್ತದೆ."

ಕೊವಿಡ್‌ಗೆ ಪರಿಹಾರವೇನೆಂದು ವೈಜ್ಞಾನಿಕ ಸಮುದಾಯವು ಹೆಣಗಾಡುತ್ತಿದ್ದ ಸಮಯದಲ್ಲಿ ಹೊರಡಿಸಲಾದ ಮಾರ್ಗಸೂಚಿಗಳು ಇದೇ ರೀತಿಯಲ್ಲಿದ್ದವು ಎನ್ನುತ್ತಾರೆ ರಾಜಂಗಮ್.‌ “ಸಾಮಾಜಿಕ ಅಂತರ ಮತ್ತು ಸ್ವಚ್ಛತೆಗಾಗಿ ಸ್ಯಾನಿಟೈಸರ್‌ಗಳನ್ನು ಶಿಫಾರಸು ಮಡಲಾಗಿತ್ತು. ಕೆಲವೆಡೆ ಜನರು ಬೇವಿನ ಸೊಪ್ಪನ್ನೇ ಬೇರೇನು ಬಳಸಬೇಕೆಂದು ತಿಳಿಯದೆ ಕೊವಿಡ್‌ ಸಮಯದಲ್ಲಿ ಬಳಸಿದ್ದರು.”

ಒಬ್ಬರೇ ಇರುವುದು ಮತ್ತು ಒಂದು ರೀತಿಯ ಸ್ಯಾನಿಟೈಸರ್‌ನ ಬಳಕೆಯ ಕಲ್ಪನೆ ಸಾರ್ವತ್ರಿಕವಾಗಿದೆ. ಕೋವಿಡ್ ಹರಡುವಿಕೆಯ ಸಮಯದಲ್ಲಿ, ಒಡಿಶಾದ ಸಾರ್ವಜನಿಕ-ಆರೋಗ್ಯ ಅಧಿಕಾರಿಗಳು ಕ್ವಾರಂಟೈನ್ ಮತ್ತು ದೈಹಿಕ ಅಂತರದ ಪ್ರಾಮುಖ್ಯತೆಯನ್ನು ಮನೆಮನೆಗೆ ತಲುಪಿಸಲು ಪುರಿ ಜಗನ್ನಾಥನ  ಉದಾಹರಣೆಯನ್ನು ಬಳಸಿದರು. ವಾರ್ಷಿಕ ರಥಯಾತ್ರೆಗೆ ಮೊದಲು ಭಗವಾನ್ ಜಗನ್ನಾಥನು  ಅನಸರ್ ಘರ್ (ಪ್ರತ್ಯೇಕ ಕೋಣೆ)ನಲ್ಲಿ ಹೇಗೆ ತಾನು ಹೇಗೆ ಬೇರೆಯಿರುತ್ತಾನೆನ್ನುವುದನ್ನು ಅಧಿಕಾರಿಗಳು ಎತ್ತಿ ತೋರಿಸಿದ್ದರು.

The doorway of a Plague Mariamman temple in Coimbatore’s Peelameedu area
PHOTO • Kavitha Muralidharan

ಕೊಯಮತ್ತೂ ರಿ ನ ಪೀಲಾಮೀಡು ಪ್ರದೇಶದಲ್ಲಿರುವ ಪ್ಲೇಗ್ ಮಾ ರಿಯಮ್ಮನ್ ದೇವಾಲಯದ ಪ್ರವೇಶ ದ್ವಾರ

ಈ ದೇವಿಯು ರೋಗದ ವಿರುದ್ಧ ಹೋರಾಡುವ ಪರಿಕಲ್ಪನೆಯು ಎಷ್ಟು ಸಾರ್ವತ್ರಿಕವಾದುದೆಂದರೆ ಕರ್ನಾಟಕದಲ್ಲಿ ಏಡ್ಸ್‌ ವಿರುದ್ಧ ಹೋರಾಡುವ ಅಮ್ಮನ ದೇವಸ್ತಾನವೊಂದನ್ನು ಕಟ್ಟಿಸುವಷ್ಟು.” ಎಂದು ಬರಹಗಾರ ಮತ್ತು ನ್ಯೂಯಾರ್ಕ್ ನ ಸಿಯಾನಾ ವಿಶ್ವವಿದ್ಯಾಲಯದ ಧಾರ್ಮಿಕ ಅಧ್ಯಯನದ ಸಹ ಪ್ರಾಧ್ಯಾಪಕ ಎಸ್. ಪೆರುನ್ದೇವಿ ಹೇಳುತ್ತಾರೆ.

ಮಾರಿಯಮ್ಮನ್ ಆರಾಧನೆಯು "ಬಹಳ ವ್ಯಾಪಕವಾದ ಕಲ್ಪನೆಯಾಗಿದೆ... ವಾಸ್ತವವಾಗಿ, ತಮಿಳಿನಲ್ಲಿ ಮಾರಿ ಎಂದರೆ ಮಳೆ ಎಂದರ್ಥ. ಮಳೈ ಪರಿ (ಕೃಷಿ ಹಬ್ಬ)ಯಂತಹ ಕೆಲವು ಆಚರಣೆಗಳಲ್ಲಿ, ಮಾರಿಯಮ್ಮನನ್ನು ಬೆಳೆಗಳ ರೂಪದಲ್ಲಿ ನೋಡಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಅವಳನ್ನು ರತ್ನಗಳಾಗಿ ಪೂಜಿಸಲಾಗುತ್ತದೆ. ಆದ್ದರಿಂದ, ಅವಳು ರೋಗವನ್ನು ನೀಡುವವಳೂ, ಮತ್ತು ಅದರ ಚಿಕಿತ್ಸೆಯನ್ನು ನೀಡುವ ದೇವತೆಯಾಗಿಯೂ ಕಾಣಲ್ಪಡುತ್ತಾಳೆ. ಪ್ಲೇಗ್ ರೋಗದಲ್ಲೂ ಇದೇ ರೀತಿ ನೋಡಲಾಗಿತ್ತು." ಆದರೆ ಪೆರುನ್ದೇವಿ ರೋಗವನ್ನು ರೊಮ್ಯಾಂಟಿಕ್ ಮಾಡದಿರಿಯೆಂದು ಎಚ್ಚರಿಸುತ್ತಾರೆ. "ಮಾರಿಯಮ್ಮನ ಜಾನಪದವು ರೋಗದೊಂದಿಗಿನ ಮುಖಾಮುಖಿಯನ್ನು ಬದುಕಿನ ಭಾಗವಾಗಿ ಸ್ವೀಕರಿಸುವ ಮತ್ತು ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನವಾಗಿದೆ" ಎಂದು ಅವರು ಹೇಳುತ್ತಾರೆ.

*****

ಹಾಗಿದ್ದರೆ ಮಾರಿಯಮ್ಮ ಯಾರು?

ಈ ದ್ರಾವಿಡ ದೇವತೆಯು ಬಹಳ ಹಿಂದಿನಿಂದಲೂ ಸಂಶೋಧಕರು, ಇತಿಹಾಸಕಾರರು ಮತ್ತು ಜಾನಪದ ತಜ್ಞರನ್ನು ತನ್ನತ್ತ ಆಕರ್ಷಿಸಿದೆ.

ಮಾರಿಯಮ್ಮನ್ ಬಹುಶಃ ತಮಿಳುನಾಡಿನ ಹಳ್ಳಿಗಳಲ್ಲಿ ಅತ್ಯಂತ ಜನಪ್ರಿಯ ದೇವತೆ ಮತ್ತು ಅವಳನ್ನು ರಕ್ಷಕ ದೇವತೆಯೆಂದು ಪರಿಗಣಿಸಲಾಗುತ್ತದೆ. ಮತ್ತು ಅವಳ ಕಥೆಗಳು ಅವು ಬರುವ ಮೂಲಗಳಷ್ಟೇ ವೈವಿಧ್ಯಮಯವಾಗಿವೆ.

ಕೆಲವು ಇತಿಹಾಸಕಾರರು ಅವಳನ್ನು ನಾಗಪಟ್ಟಣಂ ಮೂಲದ ಬೌದ್ಧ ಸನ್ಯಾಸಿನಿಯೆಂದು ಗುರುತಿಸುತ್ತಾರೆ. ಅವರ ಪ್ರಕಾರ ಅವಳು ರೋಗಪೀಡಿತರಿಗೆ, ವಿಶೇಷವಾಗಿ ಸಿಡುಬು ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದಳು. ಬೇವಿನ ಎಲೆಯ ಪೇಸ್ಟ್‌ ಹಚ್ಚಿ ಅವರನ್ನು ಗುಣಮುಖರನ್ನಾಗಿ ಮಾಡಿ ಅವರ ಬಳಿ ಬುದ್ಧನನ್ನು ನಂಬುವಂತೆ ಕೇಳುತ್ತಿದ್ದಳು ಮತ್ತು ಜನರಿಗೆ ನೈರ್ಮಲ್ಯ, ಚೊಕ್ಕವಾಗಿರುವುದು ಮತ್ತು ದಾನದ ಕುರಿತು ಹೇಳಿಕೊಡುತ್ತಿದ್ದಳು. ಅವಳು ನಿರ್ವಾಣ ಹೊಂದಿದ ನಂತರ ಅವಳ ಮೂರ್ತಿಯೊಂದನ್ನು ತಯಾರಿಸಲಾಯಿತು. ನಂತರ ಅದೊಂದು ಪರಂಪರೆಯಾಗಿ, ಮಾರಮ್ಮನ ಕತೆ ಆರಂಭಗೊಳ್ಳುತ್ತದೆ.

ಇದಲ್ಲದೆ, ಇನ್ನೂ ಹಲವು ಕತೆಗಳಿವೆ, ಪೋರ್ಚುಗೀಸರೊಡನೆ ಜೋಡಿಸಲ್ಪಟ್ಟ ಕತೆಯೂ ಇದೆ. ಅವರು ನಾಗಪಟ್ಟಣಂ ಬಂದಾಗ ಅವರು ಅವಳಿಗೆ ಮೇರಿಯಮ್ಮನ್‌ ಎಂದು ಹೆಸರಿಟ್ಟು ಕ್ರಿಶ್ಚಿಯನ್‌ ದೇವತೆಯೆಂದು ಸಾರಿದರು ಎನ್ನಲಾಗುತ್ತದೆ.

Wall panels in the inner sanctum in Peelamedu temple give the details of consecration ceremonies performed in 1990 and 2018.
PHOTO • Kavitha Muralidharan
Stone figures representing three goddesses in the temple: (from the left) Panniyariamman, Plague Mariamman and Badrakaliamman
PHOTO • Kavitha Muralidharan

ಎಡ : ಪೀಲಮೇಡು ದೇವಸ್ಥಾನದ ಒಳಗಿನ ಗರ್ಭಗುಡಿಯ ಬದಿಯಲ್ಲಿರುವ ಫಲಕಗಳು 1990 ಮತ್ತು 2018 ರಲ್ಲಿ ನಡೆದ ಪ್ರತಿಷ್ಠಾಪನೆ ಸಮಾರಂಭಗಳ ವಿವರಗಳನ್ನು ನೀಡುತ್ತವೆ . ಬಲ : ಮೂರು ದೇವತೆಗಳನ್ನು ಪ್ರತಿನಿಧಿಸುವ ದೇವಾಲಯದ ಒಳಗೆ ಕಲ್ಲಿನ ಆಕೃತಿಗಳು . ಎಡದಿಂದ : ಪನ್ನಿಯಾರಿಯಮ್ಮನ್ ಪ್ಲೇಗ್ ಮಾರಿಯಮ್ಮನ್ ಮತ್ತು ಬದ್ರಕಾಳಿಯಮ್ಮನ್

ಮತ್ತು ಕೆಲವರು ಅವಳನ್ನು ಸಿಡುಬು ಮತ್ತು ಇತರ ಸಾಂಕ್ರಾಮಿಕ ರೋಗಗಳ ಉತ್ತರ-ಭಾರತೀಯ ದೇವತೆ ಶೀತಾಲಾಳ ಪ್ರತಿರೂಪ ಎಂದು ಹೇಳಿಕೊಳ್ಳುತ್ತಾರೆ. ಶೀತಲ (ಇದರ ಅಕ್ಷರಶಃ ಅರ್ಥ ಸಂಸ್ಕೃತದಲ್ಲಿ 'ತಂಪಾಗಿಸುವವಳು' ಎಂದು) ಶಿವನ ಸಂಗಾತಿಯಾದ ಪಾರ್ವತಿ ದೇವಿಯ ಅವತಾರವಾಗಿ ಕಂಡುಬರುತ್ತದೆ.

ಆದರೆ ಕಳೆದ ಕೆಲವು ದಶಕಗಳ ಸಂಶೋಧನೆಯಿಂದ ಹೊರಹೊಮ್ಮಿದ ಪುರಾವೆಗಳು ಅವಳು ಗ್ರಾಮೀಣ ಜನರ ದೇವತೆಯಾಗಿದ್ದಳು, ದಲಿತರು ಮತ್ತು ಕೆಳಜಾತಿಗಳಿಂದ ಪೂಜಿಸಲ್ಪಡುತ್ತಿದ್ದಳು - ವಾಸ್ತವವಾಗಿ, ದಲಿತ ಮೂಲದ ದೇವತೆಯೆಂದು ಸೂಚಿಸುತ್ತವೆ.

ಮಾರಿಯಮ್ಮನ ಶಕ್ತಿ ಮತ್ತು ಜನಪ್ರಿಯತೆಯ ಕಾರಣಕ್ಕಾಗಿ ಅವಳನ್ನು ತಮ್ಮವಳನ್ನಾಗಿಸಿಕೊಳ್ಳಲು ಮತ್ತು ಅವಳ ಇತಿಹಾಸವನ್ನು ತಮ್ಮ ಜಾತಿಗಳೊಡನೆ ಸೇರಿಸಲು ಮೇಲ್ಜಾತಿಗಳೂ ಪ್ರಯತ್ನಪಟ್ಟಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ

ಇತಿಹಾಸಕಾರ ಮತ್ತು ಬರಹಗಾರರಾದ ಕೆ.ಆರ್. ಹನುಮಂತನ್  1980ರಲ್ಲಿಯೇ 'ತಮಿಳುನಾಡಿನ ಮಾರಿಯಮ್ಮನ್ ಪಂಥ' [VM1] ಎನ್ನುವ ಪ್ರಬಂಧದಲ್ಲಿ ಹೀಗೆ ಹೇಳಿದ್ದಾರೆ: "ಮಾರಿಯಮ್ಮನ್ ತಮಿಳುನಾಡಿನ ಮೂಲ ನಿವಾಸಿಗಳಿಂದ ಪೂಜಿಸಲ್ಪಡುವ ಪ್ರಾಚೀನ ದ್ರಾವಿಡ ದೇವತೆ...  ಪರೈಯಾ (ಪರೈಯಾರರು, ಪರಿಶಿಷ್ಕೃತ ಜಾತಿ) ಹಿಂದಿನ 'ಅಸ್ಪೃಶ್ಯರು' ಮತ್ತು ತಮಿಳುನಾಡಿನ ದ್ರಾವಿಡ ಜನರ ಅತ್ಯಂತ ಹಳೆಯ ಪ್ರತಿನಿಧಿಗಳೊಡನೆ ಈ ದೇವತೆಯ ಇತಿಹಾಸ ತೆರೆದುಕೊಳ್ಳುತ್ತದೆ.”

ಹನುಮಂತನ್ ಹೇಳುವಂತೆ, ಈ ದೇವರ ಅನೇಕ ದೇವಾಲಯಗಳಲ್ಲಿ, ಪರಿಯಾರ್ ಸಮುದಾಯದವರು "ಬಹಳ ಸಮಯದವರೆಗೆ ಪುರೋಹಿತರಾಗಿ ಕಾರ್ಯನಿರ್ವಹಿಸಿದ್ದಾರೆಂದು ತೋರುತ್ತದೆ. ಉದಾಹರಣೆಗೆ, ಚೆನ್ನೈ ಬಳಿಯ ತಿರುವರ್‌ಕಾಡುವಿನ ಕರುಮಾರಿಯಮ್ಮನ್ ದೇವಾಲಯದಲ್ಲಿ ಮೂಲ ಪುರೋಹಿತರು ಪರಿಯಾರ್‌ ಸಮದಾಯದವರಾಗಿದ್ದರು. ಆದರೆ ನಂತರ ಧಾರ್ಮಿಕ ದತ್ತಿ ಕಾಯ್ದೆ [1863] ಆಚರಣೆಗೆ ಬಂದಾಗ ಅವರ ಬದಲಿಗೆ ಬ್ರಾಹ್ಮಣರು ಬಂದರು." ಈ ಬ್ರಿಟಿಷ್ ವಸಾಹತುಶಾಹಿ ಕಾಯ್ದೆಯು ಈಗಾಗಲೇ ನಡೆಯುತ್ತಿರುವ ಅಂಚಿನಲ್ಲಿರುವ ಸಮುದಾಯಗಳ ದೇವಾಲಯಗಳನ್ನು ಮೇಲ್ಜಾತಿಯ ಸ್ವಾಧೀನಕ್ಕೆ ಕಾನೂನು ಬದ್ಧ ಅನುಮತಿ ನೀಡಿತು. ಸ್ವಾತಂತ್ರ್ಯಾನಂತರ, ತಮಿಳುನಾಡಿನಂತಹ ರಾಜ್ಯಗಳು ಈ ಅನ್ಯಾಯವನ್ನು ರದ್ದುಗೊಳಿಸುವ ಅಥವಾ ತಗ್ಗಿಸುವ ಪ್ರಯತ್ನದಲ್ಲಿ ತಮ್ಮದೇ ಆದ ಕಾನೂನುಗಳನ್ನು ತಂದವು.

*****

ಮತ್ತೆ ಈಗ ʼಕೊರೋನಾ ದೇವಿʼ ದೇವಸ್ಥಾನ ಕಟ್ಟಿರುವುದು ನಿಜವೇ?

ಇದಕ್ಕೆ ಉತ್ತರ, ಹೌದು, ಕೊಯಮತ್ತೂರು ಉಪನಗರ ಇರಗೂರಿಲ್ಲಿರುವ ಆ ಹೆಸರಿನ ದೇವಾಲಯದ ವ್ಯವಸ್ಥಾಪಕ ಆನಂದ್ ಭಾರತಿ ಹೇಳುತ್ತಾರೆ. "ಇದು ಪ್ಲೇಗ್ ಮಾರಿಯಮ್ಮನ್ ಆರಾಧನೆಗೆ ಅನುಗುಣವಾಗಿದೆ" ಎಂದು ಅವರು ಹೇಳುತ್ತಾರೆ. "ನಾವು ಕೊರೊನಾ ದೇವಿಗಾಗಿ (ಈಗಾಗಲೇ ಅಸ್ತಿತ್ವದಲ್ಲಿರುವ ದೇವಾಲಯದಲ್ಲಿ) ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಿದಾಗ, ರೋಗವು ಉತ್ತುಂಗದಲ್ಲಿತ್ತು. ಮತ್ತು ಈ ದೇವರ ಪೂಜೆಯಿಂದಷ್ಟೇ ನಾವು ರಕ್ಷಣೆ ಹೊಂದಲು ಸಾಧ್ಯವೆನ್ನುವುದು ನಮ್ಮ ನಂಬಿಕೆ"

ಹೀಗೆ, ಕೊಯಮತ್ತೂರು ಕೂಡ ದೇಶದ ಇತರ ಕೆಲವು ಪ್ರದೇಶಗಳಂತೆ, 2020ರ ಕೊನೆಯಲ್ಲಿ ತಾನೂ ಕೊರೋನಾದಿಂದ ಬಿಡುಗಡೆಗಾಗಿ ದೇವಿಯನ್ನು ಆರಾಧಿಸಲು ಪ್ರಾರಂಭಿಸಿತು.

ಆದರೆ ಇದಕ್ಕೆ ದೇವಿಯೆನ್ನುವ ಹೆಸರೇಕೆ? ಮಾರಿಯಮ್ಮನ್ ಎಂದ್ಯಾಕೆ ಇಟ್ಟಿಲ್ಲ? ಎಂದು ನಾವು ಕೇಳಿದೆವು. ಹಾಗೆ ಹೆಸರಿಡಲು ಕಾರಣ ಹೆಸರು ಹೊದಿಕೊಳ್ಳದಿರುವುದು ಎನ್ನುತ್ತಾರೆ ಭಾರತಿ. “ಪ್ಲೇಗ್‌ ಎನ್ನುವುದರ ಜೊತೆ ಮಾರಿಯಮ್ಮನ್‌ ಹೆಸರು ಚೆನ್ನಾಗಿ ಜೋಡಿಯಾಗುತ್ತದೆ ಆದರೆ ಕೊರೋನಾ ಎದುರು ಸರಿಯಾಗಿ ಕೂರುತ್ತಿರಲಿಲ್ಲ, ಹೀಗಾಗಿ ಕೊರೋನಾ ದೇವಿಯೆಂದು ಕರೆಯಲು ನಿರ್ಧರಿಸಿದೆವು."

There is a Mariamman temple in almost every village of Tamil Nadu. She may have a different name in some regions, but her shrines are there

ತಮಿಳುನಾಡಿನ ಬಹುತೇಕ ಪ್ರತಿಯೊಂದು ಹಳ್ಳಿಯಲ್ಲೂ ಮಾರಿಯಮ್ಮನ್ ದೇವಾಲಯವಿದೆ. ಆಕೆಗೆ ಕೆಲವು ಪ್ರದೇಶಗಳಲ್ಲಿ ಬೇರೆ ಹೆಸರಿರಬಹುದು, ಆದರೆ ಅವಳ ದೇವಾಲಯಗಳಿವೆ

ವೈದ್ಯಕೀಯ ಪ್ರಗತಿಗಳ ಹೊರತಾಗಿಯೂ, ದೇವರ ಆರಾಧನೆ ಮತ್ತು ಸಂಬಂಧಿತ ಆಚರಣೆಗಳು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಸಾರ್ವಜನಿಕ ಪ್ರತಿಕ್ರಿಯೆಯ ಭಾಗವಾಗಿ ಮುಂದುವರೆದಿದೆ.

ಆದರೆ ಪ್ಲೇಗ್ ಮಾರಿಯಮ್ಮನ್ ದೇವಾಲಯಗಳಂತಲ್ಲದೆ, ಕೊರೊನಾ ದೇವಿ ದೇವಾಲಯವು ತನ್ನ ಅಸ್ತಿತ್ವದ ಬಹುಪಾಲು ಕಾಲ, ಲಾಕ್ ಡೌನ್‌ಗಳಿಂದಾಗಿ ಆರಾಧಕರಿಗೆ ವೈಯಕ್ತಿಕವಾಗಿ ಭೇಟಿ ನೀಡಲು ಅವಕಾಶ ನೀಡಿಲ್ಲ. ಏಕೆಂದರೆ, ಮಾರಣಾಂತಿಕ ವೈರಸ್ ಆಧರಿಸಿ ನಿರ್ಮಿಸಲಾದ ದೇವಾಲಯವು ತನ್ನ ದೇವತೆಯನ್ನು ಮಾತ್ರವಲ್ಲದೆ ಅಂಟುರೋಗದ ಶಿಷ್ಟಾಚಾರಗಳನ್ನು ಸಹ ದೈವಿಕವಾಗಿ ಪರಿಗಣಿಸಬೇಕಾಗುತ್ತದೆ. ದೇವಾಲಯದ ಆಡಳಿತವು 48 ದಿನಗಳ ಕಾಲ ಯಜ್ಞವನ್ನು (ಒಂದು ನಿರ್ದಿಷ್ಟ ಉದ್ದೇಶದೊಂದಿಗೆ ಧಾರ್ಮಿಕ ಪೂಜೆ ಅಥವಾ ಅರ್ಪಣೆ) ನಡೆಸಿತು ಎಂದು ಹೇಳುತ್ತದೆ, ನಂತರ ಕೊರೊನಾ ದೇವಿಯ ಮಣ್ಣಿನ ಪ್ರತಿಮೆಯನ್ನು ನದಿಯಲ್ಲಿ ವಿಸರ್ಜಿಸಲಾಯಿತು. ಈ ದೇವಾಲಯವು ಈಗ ಸಂದರ್ಶಕರಿಗೆ ತೆರೆದಿದೆ, ಆದರೆ ಪೂಜಿಸಲು ಪ್ರತಿಮೆಯ ಅನುಪಸ್ಥಿತಿಯಿಂದ ಅವರು ಅಚ್ಚರಿಗೊಳಗಾಗಬಹುದು.

ಇಳಂಗೋವನ್ ಅವರಂತಹ ಲೇಖಕರು ಕೊಯಮತ್ತೂರಿನ ಬದುಕಿನ ಭಾಗವಾಗಿರುವ ಪ್ಲೇಗ್ ಮಾರಿಯಮ್ಮನ್ ದೇವಾಲಯಗಳ ರೀತಿಯಲ್ಲಿ  ಕೊರೋನಾ ದೇವಿ ದೇವಾಲಯದ ಕಲ್ಪನೆಯನ್ನು ನೋಡುವುದನ್ನು ತಿರಸ್ಕರಿಸುತ್ತಾರೆ. "ಇದೊಂದು ಕೇವಲ ಪ್ರಚಾರ ಪಡೆಯಲು ಮಾಡಿದ ಅತ್ಯುತ್ತಮ ಸಾಹಸವಾಗಿದೆ. ಪ್ಲೇಗ್ ಮಾರಿಯಮ್ಮನ ದೇಗುಲಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ನೀವು ಅವುಗಳ ನಡುವೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಪ್ಲೇಗ್ ಮಾರಿಯಮ್ಮನ್ ದೇವಾಲಯಗಳು ಕೊಯಮತ್ತೂರಿನ ಇತಿಹಾಸ ಮತ್ತು ಸಂಸ್ಕೃತಿಯ ಒಂದು ಆಂತರಿಕ ಭಾಗವಾಗಿವೆ."

ಇಂದು ಪ್ಲೇಗ್‌ ಜನರ ನಡುವಿನಿಂದ ಮರೆಯಾಗಿ ಹೋಗಿದ್ದರೂ, ನಗರದಾದ್ಯಂತ ಪ್ಲೇಗ್ ಮಾರಿಯಮ್ಮನ್ ದೇವಾಲಯಗಳು ಇಂದಿಗೂ ಜನಸಂದಣಿಯನ್ನು ಸೆಳೆಯುತ್ತಲೇ ಇವೆ. 2019ರಲ್ಲಿ, ಕೋವಿಡ್-19 ಪ್ರಾರಂಭವಾಗುವ ಸ್ವಲ್ಪ ಮೊದಲು, ಪಾಪನಾಯಿಕನ್‌ ಪಾಳ್ಯದಲ್ಲಿರುವ ಪ್ಲೇಗ್ ಮರಿಯಮ್ಮನ್ ದೇವಾಲಯವು ಹಬ್ಬದ ಸಮಯದಲ್ಲಿ ದೇವಿಯ ಪ್ರತಿಮೆಯ ಮೇಲೆ ಗಿಳಿಯೊಂದು ಕುಳಿತ ನಂತರ ಸಣ್ಣ ಸಂಚಲನವುಂಟಾಯಿತು, ಇದು ಭಕ್ತರನ್ನು ತಲ್ಲಣಗೊಳಿಸುತ್ತು.

ಸ್ಥಳೀಯ ವರದಿಗಳ ಪ್ರಕಾರ, 'ಘಟನೆ' ಗಂಟೆಗಳ ಕಾಲ ನಡೆಯಿತು, ದೇವಾಲಯಕ್ಕೆ ಇನ್ನೂ ಹೆಚ್ಚಿನ ಸಂದರ್ಶಕರನ್ನು ಸೆಳೆಯಿತು. "ಮಾರಿಯಮ್ಮನ್ ಗ್ರಾಮದೇವತೆ. ಅವಳ ದೇವಾಲಯಗಳು ಜನಸಾಮಾನ್ಯರ ಬದುಕಿನಲ್ಲಿ ಎಂದಿಗೂ ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುವುದಿಲ್ಲ" ಎಂದು ಇಳಂಗೋವನ್ ಹೇಳುತ್ತಾರೆ. "ಉದಾಹರಣೆಗೆ, ಟೌನ್ ಹಾಲ್ ಬಳಿಯಿರುವ ಕೊನಿಯಮ್ಮನ್ ದೇವಾಲಯದ ಉತ್ಸವಕ್ಕಾಗಿ, ಪವಿತ್ರ ಅಗ್ನಿ ಕುಂಡವನ್ನು ಅದೇ ಪ್ರದೇಶದ ಪ್ಲೇಗ್ ಮರಿಯಮ್ಮನ್ ದೇವಾಲಯದಲ್ಲಿ ತಯಾರಿಸಲಾಗುತ್ತದೆ. ಇಲ್ಲಿನ ಆಚರಣೆಗಳು ಪರಸ್ಪರ ಸಂಬಂಧ ಹೊಂದಿವೆ. ಕೊನಿಯಮ್ಮನನ್ನು ಕೊಯಮತ್ತೂರಿನ ರಕ್ಷಕ ದೇವತೆ ಎಂದು ಪರಿಗಣಿಸಲಾಗುತ್ತದೆ."

ಈಗಿನ ಪೀಳಿಗೆಯ ಹೆಚ್ಚಿನ ಜನರಿಗೆ ಇಂತಹ ಸಂಕೀರ್ಣ ಇತಿಹಾಸ ಮತ್ತು ಪುರಾಣಗಳ ಬಗ್ಗೆ ತಿಳಿದಿಲ್ಲ. ಆದರೂ, ಈ ದೇವಾಲಯಗಳು ಅವರ ಪಾಲಿಗೂ ಮಹತ್ವವನ್ನು ಹೊಂದಿವೆ. ಕೊಯಮತ್ತೂರಿನ 28 ವರ್ಷದ ಉದ್ಯಮಿ ಆರ್. ನರೈನ್ ಹೇಳುವಂತೆ, "ದೇವಾಲಯಗಳು ಈ ರೀತಿಯ ಇತಿಹಾಸವನ್ನು ಹೊಂದಿದ್ದವು ಎಂದು ನನಗೆ ನಿಜವಾಗಿಯೂ ತಿಳಿದಿರಲಿಲ್ಲ." "ಆದರೆ ನಾನು ನನ್ನ ತಾಯಿಯೊಂದಿಗೆ ದೇವಾಲಯಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿರುತ್ತೇನೆ, ಮತ್ತು ಮುಂದೆಯೂ ನಾನು ಅಲ್ಲಿಗೆ ಭೇಟಿ ನೀಡುವುದನ್ನು ಮುಂದುವರಿಸುತ್ತೇನೆ. ಇದರಿಂದ ಏನೂ ವ್ಯತ್ಯಾಸವಾಗುವುದಿಲ. ನನ್ನೊಳಗಿನ ಅಚ್ಚರಿ  ಒಂದಿಷ್ಟು ಹೆಚ್ಚಾಗಬಹುದಷ್ಟೇ"

ಕವಿತಾ ಮುರಳೀಧರನ್ ಅವರು ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯ ವಿಷಯಗಳ ಕುರಿತು ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಷನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.

ಅನುವಾದ: ಶಂಕರ. ಎನ್. ಕೆಂಚನೂರು

Kavitha Muralidharan

କବିତା ମୁରଲୀଧରନ୍ ହେଉଛନ୍ତି ଚେନ୍ନାଇସ୍ଥିତ ଜଣେ ମୁକ୍ତବୃତ୍ତି ସାମ୍ବାଦିକା ଏବଂ ଅନୁବାଦିକା । ସେ ପୂର୍ବରୁ ‘ଇଣ୍ଡିଆ ଟୁଡେ’ (ତାମିଲ)ର ଜଣେ ସଂପାଦିକା ଥିଲେ ଏବଂ ତା’ ପୂର୍ବରୁ ‘ଦ ହିନ୍ଦୁ’(ତାମିଲ)ର ରିପୋର୍ଟିଂ ବିଭାଗର ମୁଖ୍ୟ ଥିଲେ । ସେ ଜଣେ ପରୀ ସ୍ୱେଚ୍ଛାସେବୀ ।

ଏହାଙ୍କ ଲିଖିତ ଅନ୍ୟ ବିଷୟଗୁଡିକ କବିତା ମୁରଲିଧରନ
Illustrations : Priyanka Borar

ପ୍ରିୟଙ୍କା ବୋରାର ହେଉଛନ୍ତି ଜଣେ ନ୍ୟୁ ମିଡିଆ କଳାକାର ଯିଏ ନୂତନ ଅର୍ଥ ଓ ଅଭିବ୍ୟକ୍ତି ଆବିଷ୍କାର କରିବା ପାଇଁ ବିଭିନ୍ନ ଟେକ୍ନୋଲୋଜି ପ୍ରୟୋଗ ସମ୍ବନ୍ଧିତ ପ୍ରୟୋଗ କରନ୍ତି। ସେ ଶିକ୍ଷାଲାଭ ଓ ଖେଳ ପାଇଁ ବିଭିନ୍ନ ଅନୁଭୂତି ଡିଜାଇନ୍‌ କରିବାକୁ ଭଲ ପାଆନ୍ତି। ସେ ଇଣ୍ଟରଆକ୍ଟିଭ୍‌ ମିଡିଆରେ କାମ କରିବାକୁ ଯେତେ ଭଲ ପାଆନ୍ତି ପାରମ୍ପରିକ କଲମ ଓ କାଗଜରେ ମଧ୍ୟ ସେତିକି ସହଜତା ସହିତ କାମ କରିପାରନ୍ତି।

ଏହାଙ୍କ ଲିଖିତ ଅନ୍ୟ ବିଷୟଗୁଡିକ Priyanka Borar
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru