2023 ನಮ್ಮ ಪಾಲಿಗೆ ಬಿಡುವಿಲ್ಲದ ವರ್ಷವಾಗಿತ್ತು.
ಜನವರಿ ಮತ್ತು ಸೆಪ್ಟೆಂಬರ್ ನಡುವೆ ಭಾರತವು ಪ್ರತಿದಿನ ತೀವ್ರ ಹವಾಮಾನ ವೈಪರೀತ್ಯದ ಘಟನೆಗಳಿಗೆ ಸಾಕ್ಷಿಯಾಯಿತು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲೆಂದು ಸೆಪ್ಟೆಂಬರ್ ತಿಂಗಳಿನಲ್ಲಿ ಲೋಕಸಭೆಯು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿತು, ಆದರೆ, ಇದು 2029ರ ನಂತರವೇ ಜಾರಿಗೆ ಬರಲಿದೆ. ಏತನ್ಮಧ್ಯೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿದ ಅಂಕಿಅಂಶಗಳು 2022ರಲ್ಲಿ ದೇಶದಲ್ಲಿ ಮಹಿಳೆಯರ ವಿರುದ್ಧ 445,256 ಅಪರಾಧ ಪ್ರಕರಣಗಳು ಎಸಗಲಾಗಿರುವುದನ್ನು ತೋರಿಸಿವೆ. ಆಗಸ್ಟ್ ತಿಂಗಳಿನಲ್ಲಿ, ಸುಪ್ರೀಂ ಕೋರ್ಟ್ ಲಿಂಗ ಸ್ಟೀರಿಯೊಟೈಪ್ ಮಾದರಿಗಳನ್ನು ಎದುರಿಸುವ ಕೈಪಿಡಿಯನ್ನು ಬಿಡುಗಡೆ ಮಾಡಿತು, ಇದು ಕೆಲವು 'ಸ್ಟೀರಿಯೊಟೈಪ್ ಉತ್ತೇಜಿಸುವ' ಪದಗಳಿಗೆ ಪರ್ಯಾಯಗಳನ್ನು ಸೂಚಿಸಿತು, ಆದರೆ ಸುಪ್ರೀಂ ಕೋರ್ಟಿನ ಐದು ನ್ಯಾಯಾಧೀಶರ ಪೀಠವು ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆಯ ವಿರುದ್ಧ ತೀರ್ಪು ನೀಡಿತು. ಒಂಬತ್ತು ರಾಜ್ಯಗಳು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಎದುರಿಸಿದವು ಮತ್ತು ಕೋಮು ಮತ್ತು ಜಾತಿ ಆಧಾರದ ಮೇಲೆ ಭುಗಿಲೆದ್ದ ಜ್ವಾಲೆಗಳು ಸುದ್ದಿ ಚಕ್ರದಲ್ಲಿ ಪ್ರಾಬಲ್ಯ ಸಾಧಿಸಿದವು. ಮಾರ್ಚ್ 2022 ಮತ್ತು ಜುಲೈ 2023ರ ನಡುವೆ, ಭಾರತದಲ್ಲಿ ಒಟ್ಟು ಶತಕೋಟ್ಯಧಿಪತಿಗಳ ಸಂಖ್ಯೆ 166ರಿಂದ 174 ಕ್ಕೆ ಏರಿದೆ. 15-29 ವರ್ಷ ವಯಸ್ಸಿನ ಯುವಜನರ ಸರಾಸರಿ ನಿರುದ್ಯೋಗ ದರವು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಶೇಕಡಾ 17.3 ರಷ್ಟಿದೆ.








