ಆಗಸ್ಟ್ 2020ರಲ್ಲಿ, ತನ್ನ ಎರಡನೇ ಮಗುವಿನ ಜನನದ ನಂತರ, ಅಂಜನಿ ಯಾದವ್ ತನ್ನ ತವರಿಗೆ ಬಂದರು. ಅವರು ಇಂದಿಗೂ ತನ್ನ ಅತ್ತೆಯ ಮನೆಗೆ ಮರಳಿಲ್ಲ. 31 ವರ್ಷದ ಅಂಜನಿ ಈಗ ತನ್ನ ಇಬ್ಬರು ಮಕ್ಕಳೊಂದಿಗೆ ಬಿಹಾರದ ಗಯಾ ಜಿಲ್ಲೆಯ ಬೋಧ್ ಗಯಾ ಬ್ಲಾಕ್‌ನ ಬಕ್ರೌರ್ ಎನ್ನುವ ಹಳ್ಳಿಯಲ್ಲಿರುವ ತವರು ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ತನ್ನ ಗಂಡನ ಮನೆಯಿರುವ ಊರಿನ ಹೆಸರನ್ನು ಹೇಳಲು ಬಯಸಲಿಲ್ಲವಾದರೂ, ಅವರ ಗಂಡನ ಮನೆಗೆ ಅಲ್ಲಿಂದ ಅರ್ಧ ಗಂಟೆಯ ದೂರದ ದಾರಿ.

ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ಮನೆಗೆ ಬಂದ ಎರಡು ದಿನಗಳಲ್ಲೇ ನನ್ನ ಬಾಭಿ [ಗಂಡನ ಅತ್ತಿಗೆ] ಅಡುಗೆ ಮತ್ತು ಇತರ ಮನೆಗೆಲಸಗಳನ್ನು ಮಾಡಲು ಹೇಳಿದರು. ತಾನೂ ಹೆರಿಗೆ ಮಾಡಿಸಿಕೊಂಡು ಬಂದ ದಿನದಿಂದಲೇ ಇದನ್ನೆಲ್ಲ ಮಾಡಿದ್ದಾಗಿ ಹೇಳಿದರು. ಅವರು ನನಗಿಂತಲೂ ಹತ್ತು ವರ್ಷ ದೊಡ್ಡವರು. ಹೆರಿಗೆಯ ಸಮಯದಲ್ಲಿ ನನಗೆ ಬಹಳ ರಕ್ತಸ್ರಾವವಾಗಿತ್ತು. ಅಲ್ಲದೆ ಹೆರಿಗೆಗೆ ಮೊದಲೇ ನರ್ಸ್‌ ನನಗೆ ಖೂನ್‌ ಕೀ ಕಮೀ [ತೀವ್ರ ರಕ್ತ ಹೀನತೆ] ಇದ್ದು ಹೆಚ್ಚು ಹೆಚ್ಚು ಹಾಲು, ಹಣ್ಣು ಮತ್ತು ತರಕಾರಿಗಳನ್ನು ಸೇವಿಸಲು ಹೇಳಿದ್ದರು. ನಾನಿನ್ನೂ ನನ್ನ ಅತ್ತೆಯ ಮನೆಯಲ್ಲೇ ಉಳಿದಿದ್ದರೆ ನನ್ನ ಆರೋಗ್ಯ ಇನ್ನಷ್ಟು ಹದಗೆಡುತ್ತಿತ್ತು.

ಮಕ್ಕಳು ಮತ್ತು ಮಹಿಳೆಯರಲ್ಲಿ ರಕ್ತಹೀನತೆಯ ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಪರೀತ ಹೆಚ್ಚಾಗಿದೆಯೆಂದು ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್-5) ಹೇಳಿದೆ.

ಅಂಜನಿ ಮುಂದುವರೆದು ಹೇಳುತ್ತಾರೆ. ಆಕೆಯ ಪತಿ ಸುಖಿರಾಮ್‌, 32, ಗುಜರಾತಿನ ಸೂರತ್‌ನಲ್ಲಿ ಬಟ್ಟೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾರೆ. ಅವರ ಗಂಡ ಕಳೆದ ಒಂದೂವರೆ ವರ್ಷಗಳಿಂದ ಮನೆಗೆ ಬಂದಿಲ್ಲ. “ಅವರು ನನ್ನ ಹೆರಿಗೆಗೆ ಬರಬೇಕಿತ್ತು ಆದರೆ ಕಂಪನಿಯವರು ಎರಡು ದಿನಗಳಿಗಿಂತಲೂ ಹೆಚ್ಚಿನ ರಜೆ ತೆಗದುಕೊಂಡರೆ ಕೆಲಸದಿಂದ ತೆಗೆದುಹಾಕುವುದಾಗಿ ಹೆದರಿಸಿದ ಕಾರಣ ಬರಲಿಲ್ಲ. ಹೀಗಾಗಿ ನಾನು ಒಬ್ಬಳೇ ಇದ್ದುಕೊಂಡು ಇದೆಲ್ಲವನ್ನೂ ನಿಭಾಯಿಸಬೇಕಾಯಿತು. ಈ ಕೊರೋನಾ ಕಾಯಿಲೆಯಂತೂ ನಮ್ಮಂತಹ ಬಡವರ ಬದುಕನ್ನು ಇನ್ನಷ್ಟು ಹದಗೆಡಿಸಿದೆ. ನಾವು ಆರ್ಥಿಕ, ಭಾವನಾತ್ಮಕ ಮತ್ತು ಆರೋಗ್ಯದ ವಿಷಯಗಳಲ್ಲಿ ಕುಸಿದು ಹೋಗಿದ್ದೇವೆ.

“ಇದೇ ಕಾರಣಕ್ಕಾಗಿ ನಾನು ನರಕದಂತಹ ವಾತಾವರಣದಿಂದ ತಪ್ಪಿಸಿಕೊಂಡು ಬರಬೇಕಾಯಿತು. ಬಾಣಂತಿ ಆರೈಕೆಯ ಮಾತು ಬಿಡಿ, ದಿನದ ಕೆಲಸಗಳಿಗೆ ಹಾಗೂ ಮಗುವನ್ನು ನೋಡಿಕೊಳ್ಳಲು ಸಹ ಯಾರೂ ಸಹಾಯ ಮಾಡುತ್ತಿರಲಿಲ್ಲ.” ಎಂದು ʼಪರಿʼಗೆ ಹೇಳಿದರು. ಅಂಜನಿ ಯಾದವ್‌ ರಾಜ್ಯದಲ್ಲಿರುವ ಇತರ ಲಕ್ಷಾಂತರ ಮಹಿಳೆಯರಂತೆ ಈಗಲೂ ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಬಿಹಾರದಲ್ಲಿ ಸುಮಾರು 64 ಶೇಕಡಾದಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆಂದು ಎನ್‌ಎಫ್‌ಎಚ್‌ಎಸ್-5ರ ವರದಿ ಹೇಳುತ್ತದೆ.

2020ರ ಜಾಗತಿಕ ಪೌಷ್ಟಿಕಾಂಶ ವರದಿ ಯ ಪ್ರಕಾರ, ಕೊರೋನಾ ಪಿಡುಗಿನ ಸಂದರ್ಭದಲ್ಲಿ "ಮಹಿಳೆಯರಲ್ಲಿನ ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡುವ ಗುರಿಯಲ್ಲಿ ಭಾರತವು ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ ಮತ್ತು ದೇಶದ 15ರಿಂದ 49ರ ವಯೋಮಾನದ 51.4%ದಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ."

PHOTO • Jigyasa Mishra

ಅಂಜನಿ ಯಾದವ್ ಕಳೆದ ವರ್ಷ ತನ್ನ ಎರಡನೇ ಮಗುವಿನ ಹೆರಿಗೆಯಾದಾಗಿನಿಂದ ತನ್ನ ತವರಿನಲ್ಲಿ ವಾಸಿಸುತ್ತಿದ್ದರು. ಅತ್ತೆಯ ಮನೆಯಲ್ಲಿ ಅವರಿಗೆ ಯಾವುದೇ ಸಹಾಯ ಮತ್ತು ಆರೈಕೆ ಸಿಗುತ್ತಿರಲಿಲ್ಲ, ಮತ್ತು ಆಕೆಯ ಪತಿ ಬೇರೊಂದು ನಗರದಲ್ಲಿ ವಾಸಿಸುತ್ತಿದ್ದಾರೆ

6 ವರ್ಷಗಳ ಹಿಂದೆ ತನ್ನ ಮದುವೆಯ ನಂತರ, ಅಂಜನಿಯೂ ಹೆಚ್ಚಿನ ಭಾರತೀಯ ವಿವಾಹಿತ ಮಹಿಳೆಯರಂತೆ, ಹತ್ತಿರದ ಹಳ್ಳಿಯಲ್ಲಿರುವ ತನ್ನ ಅತ್ತೆಯ ಮನೆಗೆ ತೆರಳಿದರು. ಅವರ ಗಂಡನ ಕುಟುಂಬವು ಅವರ ಹೆತ್ತವರು, ಇಬ್ಬರು ಅಣ್ಣಂದಿರು, ಅವರ ಹೆಂಡತಿಯರು ಮತ್ತು ಅವರ ಮಕ್ಕಳನ್ನು ಒಳಗೊಂಡಿತ್ತು. 8ನೇ ತರಗತಿಯ ನಂತರ, ಅಂಜನಿಯ ಮತ್ತು 12ನೇ ತರಗತಿಯ ನಂತರ ಆಕೆಯ ಪತಿಯ ಓದು ನಿಂತು ಹೋಗಿತ್ತು.

ಎನ್‌ಎಫ್‌ಎಚ್‌ಎಸ್-5 ರ ಪ್ರಕಾರ, ಬಿಹಾರದಲ್ಲಿ 15-19 ವರ್ಷದೊಳಗಿನ ಹದಿಹರೆಯದ ಹೆಣ್ಣು ಮಕ್ಕಳ ಫಲವತ್ತತೆ ದರವು 77% ಆಗಿದೆ. ರಾಜ್ಯದ ಶೇಕಡಾ 25ರಷ್ಟು ಮಹಿಳೆಯರು ಸರಾಸರಿಗಿಂತ ಕಡಿಮೆ ತೂಕ ಹೊಂದಿದ್ದಾರೆ. ಮತ್ತು ಸಮೀಕ್ಷೆಯ ಪ್ರಕಾರ, 15ರಿಂದ 49 ವಯಸ್ಸಿನ 63 ಪ್ರತಿಶತ ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ .

ಪ್ರಸ್ತುತ ಅಂಜನಿ ತನ್ನ ತಾಯಿ, ಅಣ್ಣ, ಅವರ ಪತ್ನಿ ಮತ್ತು ಅವರಿಬ್ಬರ ಇಬ್ಬರು ಮಕ್ಕಳೊಂದಿಗೆ ಬಕ್ರೌರ್‌ನಲ್ಲಿರುವ ತನ್ನ ತವರಿನಲ್ಲಿ ವಾಸಿಸುತ್ತಿದ್ದಾರೆ. ಅವರ 28 ವರ್ಷದ ಅಣ್ಣ ಅಭಿಷೇಕ್ ಗಯಾ ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಅವರ ತಾಯಿ ಮನೆಗೆಲಸ ಮಾಡುತ್ತಾರೆ. "ಒಟ್ಟಾರೆಯಾಗಿ, ನಮ್ಮ ಇಡೀ ಕುಟುಂಬದ ಮಾಸಿಕ ಆದಾಯ ರೂ 15,000" ಎಂದು ಅವರು ಹೇಳುತ್ತಾರೆ. ನಾನು ಇಲ್ಲಿ ಉಳಿದಿರುವುದರಿಂದ ಯಾರಿಗೂ ಯಾವುದೇ ಸಮಸ್ಯೆ ಇಲ್ಲದಿದ್ದರೂ, ನನಗೆ ನಾಣು ಅವರಿಗೆ ಹೆಚ್ಚುವರಿ ಹೊರೆಯಾಗಿರುವಂತೆ ಅನ್ನಿಸುತ್ತಿರುತ್ತದೆ.

ಅಂಜನಿ ಹೇಳುತ್ತಾರೆ, "ನನ್ನ ಗಂಡ ತನ್ನ ಮೂವರು ಸಹೋದ್ಯೋಗಿಗಳೊಂದಿಗೆ ಸೂರತ್‌ನ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದಾರೆ. ನಾವು ಸೂರತ್‌ನಲ್ಲಿ ಒಟ್ಟಿಗೆ ಇರಲು ನಮ್ಮದೇ ಬಾಡಿಗೆ ಮನೆಗೆ ಸಾಕಾಗುವಷ್ಟು ಹಣವನ್ನು ಅವರು ಒಟ್ಟು ಮಾಡುವ ದಿನಕ್ಕಾಗಿ ಕಾಯುತ್ತಿದ್ದೇನೆ."

*****

"ಬನ್ನಿ - ನಾನು ನಿಮ್ಮನ್ನು ನನ್ನ ಸ್ನೇಹಿತೆಯೊಬ್ಬಳ ಬಳಿ ಕರೆದೊಯ್ಯುತ್ತೇನೆ, ಅವರ ಅತ್ತೆ ಅವಳ ಬದುಕನ್ನೂ ನರಕವಾಗಿಸಿದ್ದಾರೆ," ಎಂದು ಅಂಜನಿ ಹೇಳಿದರು, ಮತ್ತು ನಾನು ಅವರ ಹಿಂದೆ ಗುಡಿಯಾ ಮನೆಗೆಂದು ಹೊರಟೆ. ವಾಸ್ತವವಾಗಿ ಆ ಮನೆ ಆಕೆಯ ಗಂಡನದು. 29 ವರ್ಷದ ಗುಡಿಯಾ ನಾಲ್ಕು ಮಕ್ಕಳ ತಾಯಿ. ಅವರ ಕಿರಿಯ ಮಗು ಗಂಡು, ಆದರೆ ಆಕೆಯ ಅತ್ತೆ ಸಂತಾನಹರಣ ಚಿಕಿತ್ಸೆಗೆ ಅನುಮತಿಸುತ್ತಿಲ್ಲ. ಆಕೆ ಇನ್ನೊಂದು ಗಂಡು ಮಗುವನ್ನು ಹೆರಬೇಕೆನ್ನುವುದು ಅವರ ಒತ್ತಾಯ. ದಲಿತ ಸಮುದಾಯಕ್ಕೆ ಸೇರಿದವರಾದ ಗುಡಿಯಾ ತಮ್ಮ ಮೊದಲ ಹೆಸರನ್ನಷ್ಟೇ ಬಳಸುತ್ತಾರೆ.

ಎನ್‌ಎಫ್‌ಎಚ್‌ಎಸ್-5 ಪ್ರಕಾರ, ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ ಅರ್ಧ ದಶಕದಲ್ಲಿ ಮಕ್ಕಳು ಮತ್ತು ಮಹಿಳೆಯರಲ್ಲಿ ರಕ್ತಹೀನತೆ ಅತಿಹೆಚ್ಚು ಪ್ರಮಾಣದಲ್ಲಿ ಏರಿಕೆಯಾಗಿದೆ

“ನನಗೆ ಮೂವರು ಹೆಣ್ಣುಮಕ್ಕಳಿದ್ದವು. ಆದರೂ ನನ್ನ ಅತ್ತೆಗೆ ಒಬ್ಬ ಗಂಡು ಮಗು ಬೇಕಿತ್ತು. ನಂತರ ಒಬ್ಬ ಮಗ ಹುಟ್ಟಿದ್ದ. ಅಲ್ಲಿಗೆ ಇನ್ನು ನನ್ನ ಬದುಕು ಸುಗಮವಾಗಬಹುದೆಂದು ಭಾವಿಸಿದ್ದೆ. ಆದರೆ ಅತ್ತೆ ಈಗ ನಿನಗೆ ಮೂವರು ಹೆಣ್ಣು ಮಕ್ಕಳಿದ್ದಾರೆ ಕನಿಷ್ಟ ಎರಡಾದರೂ ಗಂಡು ಮಕ್ಕಳನ್ನು ಹೊಂದಬೇಕೆಂದು ಹೇಳುತ್ತಿದ್ದಾರೆ,” ಎಂದು ಗುಡಿಯಾ ʼಪರಿʼಗೆ ಹೇಳಿದರು.

2011ರ ಜನಗಣತಿಯ ಪ್ರಕಾರ, ಮಕ್ಕಳ ಲಿಂಗಾನುಪಾತದ ವಿಷಯದಲ್ಲಿ ಗಯಾ ಬಿಹಾರದಲ್ಲಿ ಮೂರನೇ ಸ್ಥಾನದಲ್ಲಿದೆ. ಜಿಲ್ಲೆಯ ಅನುಪಾತವು ರಾಜ್ಯದ ಸರಾಸರಿ 935ಕ್ಕೆ ವಿರುದ್ಧವಾಗಿ 0-6 ವಯೋಮಾನದವರಲ್ಲಿ 960.

ಗುಡಿಯಾ ತಗಡು ಮತ್ತು ಕಲ್ನಾರು ಶೀಟುಗಳ ಛಾವಣಿಯ ಎರಡು ಕೋಣೆಗಳ ಮನೆಯಲ್ಲಿ ವಾಸಿಸುತ್ತಾರೆ, ಅದು ಮಣ್ಣಿನ ಗೋಡೆಗಳನ್ನು ಹೊಂದಿದೆ ಮತ್ತು ಅಲ್ಲಿ ಶೌಚಾಲಯವಿಲ್ಲ. ಅವರ ಪತಿ, 34 ವರ್ಷದ ಶಿವಸಾಗರ್, ಅವರ ತಾಯಿ ಮತ್ತು ಅವರ ಮಕ್ಕಳು ಈ ಸಣ್ಣ ಮನೆಯಲ್ಲಿ ವಾಸಿಸುವ ಇತರರು. ಶಿವಸಾಗರ್ ಸ್ಥಳೀಯ ಧಾಬಾದಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಾರೆ.

ತನ್ನ 17ನೇ ವಯಸ್ಸಿನಲ್ಲಿ ಮದುವೆಯಾದ ಗುಡಿಯಾ ಎಂದಿಗೂ ಶಾಲೆಯ ಮೆಟ್ಟಿಲು ಹತ್ತಿಲ್ಲ. "ನಮ್ಮ ಕುಟುಂಬದ ಐದು ಹೆಣ್ಣುಮಕ್ಕಳಲ್ಲಿ ನಾನು ದೊಡ್ಡವಳಾಗಿದ್ದೆ ಮತ್ತು ನನ್ನ ಪೋಷಕರಿಗೆ ನನ್ನನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗಲಿಲ್ಲ" ಎಂದು ಅವರು ನಮಗೆ ಹೇಳಿದರು. "ಆದರೆ ನನ್ನ ಇಬ್ಬರು ತಂಗಿಯರು ಮತ್ತು ನಮ್ಮೆಲ್ಲರ ಒಬ್ಬನೇ ತಮ್ಮ ಶಾಲೆಗೆ ಹೋಗಿದ್ದಾರೆ."

ಗುಡಿಯಾರ ಮನೆಯ ಮುಖ್ಯ ಕೋಣೆಯು ಕಿರಿದಾದ ಬೀದಿಯೊಂದಕ್ಕೆ ತೆರೆದುಕೊಳ್ಳುತ್ತದೆ, ಎದುರು ಮನೆಗೂ ಅವರ ಮನೆಗೂ ನಡುವೆ ಇರುವ ಈ ಬೀದಿ ಕೇವಲ ನಾಲ್ಕು ಅಡಿಗಳಷ್ಟು ಅಗಲವಿದೆ. ಪುಸ್ತಕಗಳಿಂದ ತುಂಬಿದ್ದ ಎರಡು ಶಾಲಾ ಚೀಲಗಳು ಕೋಣೆಯ ಗೋಡೆಯ ಮೇಲೆ ನೇತಾಡುತ್ತಿದ್ದವು. "ಇವು ನನ್ನ ಹಿರಿಯ ಹೆಣ್ಣುಮಕ್ಕಳಿಗೆ ಸೇರಿದವು. ಅವರು ಕಳೆದ ಒಂದು ವರ್ಷದಿಂದ ಅವುಗಳನ್ನು ಮುಟ್ಟಿಲ್ಲ" ಎಂದು ಗುಡಿಯಾ ಹೇಳುತ್ತಾರೆ. ಆ ಹೆಣ್ಣುಮಕ್ಕಳು, 10 ವರ್ಷದ ಖುಷ್ಬೂ ಮತ್ತು 8 ವರ್ಷದ ವರ್ಷಾ, ಇಬ್ಬರೂ ಕಲಿಕೆಯ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಲೇ ಇದ್ದಾರೆ. ಕೋವಿಡ್-19 ಪಿಡುಗಿನ ಪರಿಣಾಮವಾಗಿ ಮೊದಲ ರಾಷ್ಟ್ರೀಯ ಲಾಕ್ ಡೌನ್ ಸಮಯದಲ್ಲಿ ಮುಚ್ಚಲ್ಪಟ್ಟ ನಂತರ ಇಲ್ಲಿನ ಶಾಲೆಗಳು ಇನ್ನಷ್ಟೇ ತೆರೆಯಬೇಕಿವೆ.

PHOTO • Jigyasa Mishra

ಗುಡಿಯಾರ ಅತ್ತೆ ಅವರಿಗೆ ಸಂತಾನಹರಣ ಚಿಕಿತ್ಸೆಗೆ ಒಳಗಾಗಲು ಬಿಟ್ಟಿಲ್ಲ, ಯಾಕೆಂದರೆ ಅವರು ಸೊಸೆ ಇನ್ನೊಂದು ಗಂಡು ಮಗುವನ್ನು ಹೊಂದಬೇಕೆಂದು ಬಯಸುತ್ತಿದ್ದಾರೆ

"ನನ್ನ ಇಬ್ಬರು ಮಕ್ಕಳಾದರೂ ದಿನಕ್ಕೆ ಒಮ್ಮೆ ತಮ್ಮ ಮಧ್ಯಾಹ್ನದ ಊಟವಾಗಿ ಸರಿಯಾದ ಆಹಾರವನ್ನು ಪಡೆಯುತ್ತಿದ್ದರು. ಆದರೆ ಈಗ ಎಲ್ಲರೂ ಇರುವುದನ್ನು ತಿಂದು ಸುಮ್ಮನಾಗುತ್ತಿದ್ದೇವೆ" ಎಂದು ಗುಡಿಯಾ ಹೇಳುತ್ತಾರೆ.

ಶಾಲೆಗಳ ಮುಚ್ಚುವಿಕೆ ಮಕ್ಕಳ ಹಸಿವಿನ ಹೆಚ್ಚಳಕ್ಕೆ ಕಾರಣವಾಗಿದೆ. ಗುಡಿಯಾರ ಇಬ್ಬರು ದೊಡ್ಡ ಹೆಣ್ಣುಮಕ್ಕಳು ಮಧ್ಯಾಹ್ನದ ಬಿಸಿಯೂಟವಿಲ್ಲದ ಕಾರಣ ಅವರು ಮನೆಯ ಸುತ್ತಮುತ್ತಲೂ ಆಡುತ್ತಾ ಓಡಾಡುವುದನ್ನು ಕಡಿಮೆಗೊಳಿಸಿದ್ದಾರೆ. ಅಂಜನಿಯ ಕುಟುಂಬದಂತೆಯೇ, ಗುಡಿಯಾ ಕುಟುಂಬಕ್ಕೂ ಸ್ಥಿರವಾದ ಉದ್ಯೋಗವಾಗಲಿ ಅಥವಾ ಆಹಾರ ಭದ್ರತೆಯಾಗಲಿ ಇಲ್ಲ. ಈ ಏಳು ಸದಸ್ಯರ ಕುಟುಂಬವು ಸಂಪೂರ್ಣವಾಗಿ ಗುಡಿಯಾರ ಪತಿ ತನ್ನ ಅನಿಶ್ಚಿತ ಕೆಲಸದಿಂದ ತಿಂಗಳೊಂದಕ್ಕೆ ಸಂಪಾದಿಸುವ ರೂಪಾಯಿ 9,000ದ ಮೇಲೆ ಅವಲಂಬಿತವಾಗಿದೆ.

2020ರ ಜಾಗತಿಕ ಪೌಷ್ಠಿಕಾಂಶ ವರದಿ ಯ ಪ್ರಕಾರ "ಅನೌಪಚಾರಿಕ ಆರ್ಥಿಕ ವಲಯದ ಕಾರ್ಮಿಕರು ವಿಶೇಷವಾಗಿ ದುರ್ಬಲರಾಗಿದ್ದಾರೆ ಏಕೆಂದರೆ ಹೆಚ್ಚಿನವರು ಸಾಮಾಜಿಕ ರಕ್ಷಣೆ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಯ ಸೌಲಭ್ಯವನ್ನು ಹೊಂದಿಲ್ಲ ಮತ್ತು ಉತ್ಪಾದಕ ಸ್ವತ್ತುಗಳನ್ನು ಪಡೆಯುವ ಅವಕಾಶವೂ ಅವರಿಗಿಲ್ಲ. ಲಾಕ್ ಡೌನ್ ಸಮಯದಲ್ಲಿ ಆದಾಯ ಗಳಿಕೆಯ ಮಾರ್ಗವಿಲ್ಲದೆ, ಅನೇಕರಿಗೆ ತಮ್ಮನ್ನು ಮತ್ತು ತಮ್ಮ ಕುಟುಂಬಗಳನ್ನು ಪೋಷಿಸಲು ಸಾಧ್ಯವಾಗಿಲ್ಲ. ಹೆಚ್ಚಿನವರ ಪಾಲಿಗೆ, ಯಾವುದೇ ಆದಾಯವಿಲ್ಲದಿರುವುದೆಂದರೆ ಆಹಾರವಿಲ್ಲದಿರುವುದು, ಅಥವಾ ಹೆಚ್ಚೆಂದರೆ, ಕಡಿಮೆ ಮತ್ತು ಅಪೌಷ್ಟಿಕ ಆಹಾರ."

ಗುಡಿಯಾ ಅವರ ಕುಟುಂಬವು ವರದಿಯು ಹೇಳುವ ಸನ್ನಿವೇಶಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಅವರು ಹಸಿವಿನ ವಿರುದ್ಧ ಹೋರಾಡುತ್ತಿದ್ದಾರೆ ಮತ್ತು ದಲಿತರಾಗಿ, ಜನರ ಪೂರ್ವಗ್ರಹಕ್ಕೆ ಒಳಗಾಗುವವರೂ ಹೌದು. ಅವರ ಗಂಡನ ಕೆಲಸವು ಸುರಕ್ಷಿತವಲ್ಲ. ಮತ್ತು ಕುಟುಂಬಕ್ಕೆ ಆರೋಗ್ಯ ರಕ್ಷಣೆಯ ಸೌಲಭ್ಯಕ್ಕೆ ಪ್ರವೇಶವಿಲ್ಲ.

*****

ಸೂರ್ಯ ಮುಳುಗುತ್ತಿದ್ದಂತೆ,  ಬೋಧಗಯಾ ಬ್ಲಾಕ್ ನ ಮುಸಹರ್ ಟೋಲಾ (ಬಸ್ತಿ ಅಥವಾ  ಕಾಲೋನಿ)ದಲ್ಲಿ ಬದುಕು ಮತ್ತೆ ಮುಂದುವರಿಯುತ್ತದೆ.  ದಿನದ  ಎಲ್ಲಾ  ಕೆಲಸಗಳನ್ನು ಮುಗಿಸಿದ ನಂತರ, ನಮ್ಮ ದೇಶದ    ಪರಿಶಿಷ್ಟ ಜಾತಿಗಳ ಪಟ್ಟಿಯ ತಳದಲ್ಲಿರುವ ಈ ಕಾಲೋನಿಯ ಮಹಿಳೆಯರು ಸಂಜೆಗಳಲ್ಲಿ ಒಟ್ಟುಗೂಡಿ ಹರಟೆ ಹೊಡೆಯುತ್ತಾ,  ಪರಸ್ಪರರ ತಲೆಗಳಲ್ಲಿ ಅಥವಾ ಮಕ್ಕಳ ತಲೆಯಲ್ಲಿ ಹೇನು ತೆಗೆಯುತ್ತಾರೆ.

ಎಲ್ಲರೂ ತಮ್ಮ ಪುಟ್ಟ ಮನೆಯ ಹೊರಗಿನ ಬಾಗಿಲಿನಲ್ಲಿ ಕುಳಿತಿದ್ದರು. ಇದು ಕಿರಿದಾದ ದಾರಿಯಾಗಿದ್ದು, ಎರಡೂ ಬದಿಯಲ್ಲಿ ಚರಂಡಿಯಿದೆ. "ಮುಷಹರ್ ತೋಲಾಗಳು ಹೀಗಿರುತ್ತವೆ ಎಂದು ನಿಮಗೆ ‌ಈಗಾಗಲೇ ಯಾರಾದರೂ ಹೇಳಿರಬಹುದಲ್ಲವೆ? ನಾವು ನಾಯಿಗಳು ಮತ್ತು ಹಂದಿಗಳ ನಡುವಿನ ಬದುಕಿಗೆ ಹೊಂದಿಕೊಂಡುಬಿಟ್ಟಿದ್ದೇವೆ,” ಎಂದು 32 ವರ್ಷದ ಮಾಲಾ ದೇವಿ ಹೇಳಿದರು. ಆಕೆಗೆ ಮದುವೆಯಾಗಿ 15 ವರ್ಷಗಳಾಗಿವೆ. ಅಂದಿನಿಂದ ಇಲ್ಲಿ ವಾಸವಿದ್ದಾರೆ.

ಅವರ ಪತಿ, 40 ವರ್ಷದ ಲಲ್ಲನ್ ಆದಿಬಾಸಿ, ಗಯಾ ಜಿಲ್ಲಾ ಕೇಂದ್ರದಲ್ಲಿರುವ ಖಾಸಗಿ ಕ್ಲಿನಿಕ್ಕಿನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಾರೆ. ಮಾಲಾ ಅವರು ತನಗೆ ಟ್ಯೂಬಲ್ ಲಿಗೇಶನ್ ಮಾಡಿಸಿಕೊಳ್ಳುವ ಅವಕಾಶವೇ ಸಿಗಲಿಲ್ಲ ಎಂದು ಹೇಳುತ್ತಾರೆ ಮತ್ತು ಈಗ ಅವರು ನಾಲ್ಕು ಮಕ್ಕಳ ಬದಲಿಗೆ ಕೇವಲ ಒಂದು ಮಗುವನ್ನು ಹೊಂದಿರಬೇಕಿತ್ತೆಂದು ಎಂದುಕೊಳ್ಳುತ್ತಾರೆ.

ಅವರ ಹಿರಿಯ ಮಗ, 16 ವರ್ಷದ ಶಿಂಬು ಮಾತ್ರವೇ ಶಾಲೆಗೆ ದಾಖಲಾಗಿದ್ದು 9ನೇ ತರಗತಿ ಓದುತ್ತಿದ್ದಾನೆ. "ನನ್ನ ಹೆಣ್ಣು ಮಕ್ಕಳನ್ನು ಮೂರನೇ ತರಗತಿಗಿಂತಲೂ ಹೆಚ್ಚು ಓದಿಸಲು ನನಗೆ ಧೈರ್ಯ ಸಾಕಾಗಲಿಲ್ಲ. ಲಲ್ಲನ್ ತಿಂಗಳಿಗೆ 5,500 ರೂ.ಗಳನ್ನು ಸಂಬಳವಾಗಿ ಪಡೆಯುತ್ತಾರೆ ಮತ್ತು ಮನೆಯಲ್ಲಿ ನಾವು ಆರು ಮಂದಿ ಇದ್ದೇವೆ. ನಾವು ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಹೇಗೆ?”, ಅವರು ಕೇಳಿದರು. ಮಾಲಾರ ಹಿರಿಯ ಮಗು, ಚಿಕ್ಕ ಮಗು- ಇಬ್ಬರೂ ಗಂಡು, ನಡುವಿನಲ್ಲಿ ಇಬ್ಬರು ಹುಡುಗಿಯರು.

PHOTO • Jigyasa Mishra

ಮಾಲಾ ಅವರು ತನಗೆ ಟ್ಯೂಬಲ್ ಲಿಗೇಶನ್ ಮಾಡಿಸಿಕೊಳ್ಳುವ ಅವಕಾಶವೇ ಸಿಗಲಿಲ್ಲ ಎಂದು ಹೇಳುತ್ತಾರೆ ಮತ್ತು ಈಗ ಅವರು ನಾಲ್ಕು ಮಕ್ಕಳ ಬದಲಿಗೆ ಕೇವಲ ಒಂದು ಮಗುವನ್ನು ಹೊಂದಿರಬೇಕಿತ್ತೆಂದು ಎಂದುಕೊಳ್ಳುತ್ತಾರೆ

ಇಲ್ಲಿಯೂ ಸಹ, ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿದ ನಂತರ, ಟೋಲಾದಲ್ಲಿನ ಶಾಲೆಗೆ ಹೋಗುತ್ತಿದ್ದ ಕೆಲವು ಮಕ್ಕಳು ಸಹ ಹೋಗುವುದನ್ನು ನಿಲ್ಲಿಸಿದರು. ಇದರರ್ಥ ಅವರಿಗೆ ಮಧ್ಯಾಹ್ನದ ಊಟ ಸಿಗುವುದಿಲ್ಲ ಮತ್ತು ಹಸಿವು ಇನ್ನಷ್ಟು ತೀವ್ರಗೊಳ್ಳುತ್ತದೆ. ಎಲ್ಲವೂ ಚೆನ್ನಾಗಿರುವಾಗಲೂ, ಕೆಲವೇ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಸಾಮಾಜಿಕ ಕಳಂಕ, ತಾರತಮ್ಯ ಮತ್ತು ಆರ್ಥಿಕ ಒತ್ತಡಗಳು ಹದಿಹರೆಯದ ಮಕ್ಕಳು, ವಿಶೇಷವಾಗಿ ಹುಡುಗಿಯರು, ಇತರೇ ಜಾತಿಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಶಾಲೆಯಿಂದ ಹೊರಗುಳಿಯಲು ಕಾರಣವಾಗುತ್ತಿವೆ.

2011ರ ಜನಗಣತಿಯಲ್ಲಿ, ಬಿಹಾರದಲ್ಲಿ ಸುಮಾರು 2.72 ‌ ಮಿಲಿಯನ್ ಮುಸಹರ್‌ ಸಮುದಾಯದ ಜನರಿದ್ದರು. ದುಸಾಡ್ ಮತ್ತು ಚಾಮರ್ ಸಮುದಾಯಗಳ ನಂತರ, ಇವರು ಮೂರನೇ ಅತಿದೊಡ್ಡ ಪರಿಶಿಷ್ಟ ಜಾತಿ ಗುಂಪು. ಅವರ ಜನಸಂಖ್ಯೆಯು ರಾಜ್ಯದ ಒಟ್ಟು 16.57 ದಶಲಕ್ಷ ದಲಿತರಲ್ಲಿ ಆರನೇ ಒಂದುಭಾಗದಷ್ಟಿದೆ. 2011ರ ಜನಗಣತಿಯ ಪ್ರಕಾರ, ಇದು ಬಿಹಾರದ ಒಟ್ಟು 104 ದಶಲಕ್ಷ ಜನಸಂಖ್ಯೆಯಲ್ಲಿ ಶೇಕಡಾ 2.6ರಷ್ಟು ಮಾತ್ರವೇ.

ಆಕ್ಸ್ ಫಾಮ್ ವರದಿ 2018 ರ ಪ್ರಕಾರ, "ಮುಸಾಹರ್ ಸಮುದಾಯದ ಶೇಕಡಾ 96.3ಕ್ಕಿಂತಲೂ ಹೆಚ್ಚಿನ ಜನರ ಭೂಮಿಯಿಲ್ಲ ಮತ್ತು ಶೇಕಡಾ 92.5ರಷ್ಟು ಜನರು ರೈತ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಮೇಲ್ಜಾತಿಯ ಹಿಂದೂಗಳು ಈಗಲೂ ಅಸ್ಪೃಶ್ಯರು ಎಂದು ಪರಿಗಣಿಸುವ ಈ ವರ್ಗದಲ್ಲಿ ಸಾಕ್ಷರತೆಯ ಪ್ರಮಾಣ ಕೇವಲ ಶೇಕಡಾ 9.8ರಷ್ಟಿದೆ. ಇದು ದೇಶದ ಎಲ್ಲ ದಲಿತರಿಗಿಂತಲೂ ಕಡಿಮೆ. ಮಹಿಳೆಯರಲ್ಲಿ ಸಾಕ್ಷರತೆ ಶೇ 1-2ರಷ್ಟಿದೆ'ʼ

ಇಷ್ಟು ಕಡಿಮೆ ಮಟ್ಟದ ಸಾಕ್ಷರತೆ ಹೊಂದಿರುವ ಈ ಬೋಧಗಯಾ ಒಂದು ಕಾಲದಲ್ಲಿ ಗೌತಮ ಜ್ಞಾನೋದಯ ಹೊಂದಿದ ತಾಣವೆನ್ನುವುದು ದುರಂತ ಸತ್ಯ.

"ನಾವು ಮಕ್ಕಳನ್ನು ಉತ್ಪಾದಿಸಲು ಮತ್ತು ಅವರಿಗೆ ಆಹಾರ ತಯಾರಿಸಲೆಂದೇ ಜನ್ಮ ಪಡೆದಿದ್ದೇವೆ, ಆದರೆ ಕೈಯಲ್ಲಿ ಬಿಡಿಗಾಸೂ ಇಲ್ಲದೆ ಅದನ್ನಾದರೂ ಹೇಗೆ ಮಾಡುವುದು?" ಎಂದು ತನ್ನ ಕಿರಿಯ ಮಗನಿಗೆ ನಿನ್ನೆ ರಾತ್ರಿಯ ಮಿಕ್ಕ ಅನ್ನವನ್ನು ಬಟ್ಟಲಿನಲ್ಲಿ ಹಾಕಿ ಕೊಡುತ್ತಾ ನಿಸ್ಸಹಾಯಕರಾಗಿ ಕೇಳಿದರು. “ಈಗ ಇದೇ ಇರುವುದು ಬೇಕಾದರೆ ತಿನ್ನು ಬೇಡವಾದರೆ ಬಿಡು.” ಎಂದು ಸಿಟ್ಟು ಮತ್ತು ಅಸಹಾಯಕತೆಯಿಂದ ಮಗನಿಗೆ ಬಯ್ಯುತ್ತಿದ್ದರು.

PHOTO • Jigyasa Mishra
PHOTO • Jigyasa Mishra

ಎಡ ಚಿತ್ರ: ತನ್ನ ಗಂಡನ ಮರಣದ ನಂತರ, ಶಿಬಾನಿ ತನ್ನ ಬದುಕಿನ ಅಗತ್ಯಗಳಿಗಾಗಿ ಸಹೋದರನ ಮೇಲೆ ಅವಲಂಬಿತರಾಗಿದ್ದಾರೆ. ಬಲ: ಬೋಧಗಯಾದ ಮುಸಾಹರ್ ಕಾಲೋನಿಯ ಮಹಿಳೆಯರು ತಮ್ಮ ಸಂಜೆಗಳನ್ನು ತಮ್ಮ ಮನೆಗಳ ಹೊರಗಿನ ಕಿರಿದಾದ ಬೀದಿಯಲ್ಲಿ ಒಟ್ಟಿಗೆ ಕಳೆಯುತ್ತಾರೆ

ಗುಂಪಿನಲ್ಲಿದ್ದ ಇನ್ನೊಬ್ಬ ಮಹಿಳೆ ಶಿಬಾನಿ ಆದಿಬಾಸಿ, 29. ಶ್ವಾಸಕೋಶದ ಕ್ಯಾನ್ಸರಿನಿಂದ ಪತಿಯ ಮರಣ ಹೊಂದಿದ ನಂತರ, ಶಿಬಾನಿ ತನ್ನ ಇಬ್ಬರು ಮಕ್ಕಳು ಮತ್ತು ಅವರ ಗಂಡನ ಕುಟುಂಬದೊಂದಿಗೆ ಎಂಟು ಸದಸ್ಯರ ಮನೆಯಲ್ಲಿ ವಾಸಿಸುತ್ತಾರೆ. ಅವರು ಯಾವುದೇ ನೇರ ಆದಾಯದ ಮೂಲವನ್ನು ಹೊಂದಿಲ್ಲ ಹೀಗಾಗಿ ತನ್ನ ಖರ್ಚುಗಳಿಗಾಗಿ ತನ್ನ ಗಂಡನ ಸಹೋದರನನ್ನು ಅವಲಂಬಿಸಿದ್ದಾರೆ. "ನನ್ನ ಮಕ್ಕಳು ಮತ್ತು ನನಗೆಂದು ತರಕಾರಿ, ಹಾಲು ಮತ್ತು ಹಣ್ಣುಗಳನ್ನು ಪ್ರತ್ಯೇಕವಾಗಿ ತರುವಂತೆ ಅವರಿಗೆ ಹೇಳಲು ಸಾಧ್ಯವಿಲ್ಲ. ಅವನು ನಮಗೆ ಆಹಾರವಾಗಿ ಏನನ್ನೇ ನೀಡಿದರೂ, ಅದಕ್ಕಾಗಿ ನಾವು ಆಭಾರಿಯಾಗಿರುತ್ತೇವೆ. ಹೆಚ್ಚಿನ ದಿನಗಳಲ್ಲಿ ನಾವು ಮಾರ್-ಭಾತ್ (ಉಪ್ಪು ಬೆರೆಸಿದ ಅಕ್ಕಿಯ ಗಂಜಿ) ತಿಂದು ದಿನ ಕಳೆಯುತ್ತೇವೆ," ಎಂದು ಶಿಬಾನಿ ʼಪರಿʼಗೆ ಹೇಳಿದರು.

"ಬಿಹಾರದ ಮುಸಾಹರ್ ಜನಸಂಖ್ಯೆಯ ಸುಮಾರು 85 ಪ್ರತಿಶತದಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ..." ಎಂದು ಆಕ್ಸ್ ಫಾಮ್ ವರದಿ ಹೇಳುತ್ತದೆ.

ಮಾಲಾ ಮತ್ತು ಶಿಬಾನಿಯವರ ಕಥೆಗಳು ಬಿಹಾರದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅಸಂಖ್ಯಾತ ಇತರ ದಲಿತ ಮಹಿಳೆಯರ ಕಥೆಗಳಿಗಿಂತ ಸ್ವಲ್ಪ ಮಟ್ಟಿಗೆ ಮಾತ್ರವೇ ಭಿನ್ನವಾಗಿವೆ.

ಬಿಹಾರದ ಪರಿಶಿಷ್ಟ ಜಾತಿಯ ಜನಸಂಖ್ಯೆಯ ಶೇಕಡಾ 93ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ರಾಜ್ಯದ ಜಿಲ್ಲೆಗಳಲ್ಲಿ ಗಯಾದಲ್ಲಿ ಅತಿ ಹೆಚ್ಚು ದಲಿತರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ ಎಂದರೆ ಶೇ.30.39. ಮುಸಾಹರ್ ಸಮುದಾಯವು 'ಮಹಾದಲಿತ' ಅಥವಾ ಪರಿಶಿಷ್ಟ ಜಾತಿಗಳೊಳಗಿನ ಅತ್ಯಂತ ಬಡ ಸಾಮಾಜಿಕ ಗುಂಪುಗಳ ರಾಜ್ಯ ವರ್ಗಕ್ಕೆ ಸೇರುತ್ತದೆ.

ಅಂಜನಿ, ಗುಡಿಯಾ, ಮಾಲಾ, ಶಿಬಾನಿ - ಎಲ್ಲರೂ ವಿಭಿನ್ನ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯಿಂದ ಬಂದವರು. ಆದರೆ ಯಾರಿಗೂ ಅವರ ದೇಹದ ಮೇಲೆ ಹಕ್ಕಿಲ್ಲ. ಇದಲ್ಲದೇ ಅವರು ವಿವಿಧ ಹಂತಗಳಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಂಜನಿ ತನ್ನ ಕೊನೆಯ ಹೆರಿಗೆಯ ನಂತರ ರಕ್ತಹೀನತೆಯೊಂದಿಗೆ ಹೋರಾಡುತ್ತಿದ್ದಾರೆ. ಗುಡಿಯಾ ತನಗೆ ಗಂಡು ಮಗುವಾಗದೆ ಆಪರೇಷನ್‌ ಮಾಡಿಸಿಕೊಳ್ಳಲು ಸಾಧ್ಯವಿಲ್ಲವೆನ್ನುವ ವಾಸ್ತವವನ್ನು ಒಪ್ಪಿಕೊಂಡಿದ್ದಾರೆ. ಮಾಲಾ ಮತ್ತು ಶಿಬಾನಿ ತಮ್ಮ ಜೀವನವು ಮೊದಲಿಗಿಂತಲೂ ಉತ್ತಮವಾಗಿರುತ್ತದೆ ಎಂಬ ಕಲ್ಪನೆಯನ್ನು ತೊರೆದಿದ್ದಾರೆ. ಅವರ ಪಾಲಿಗೆ ಎರಡು ಹೊತ್ತು ಉಂಡು ಜೀವ ಉಳಿಸಿಕೊಂಡರೆ ಅದೇ ದೊಡ್ಡ ಸಾಧನೆ.

ಈ ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಪ್ರತಿಯೊಬ್ಬ ವ್ಯಕ್ತಿಯ ಹೆಸರುಗಳನ್ನೂ ಬದಲಾಯಿಸಲಾಗಿದೆ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected]. ಈ ವಿಳಾಸಕ್ಕೆ ಕಳುಹಿಸಿ

ಜಿಗ್ಯಾಸ ಮಿಶ್ರಾ ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.

ಅನುವಾದ: ಶಂಕರ. ಎನ್. ಕೆಂಚನೂರು

Jigyasa Mishra

जिज्ञासा मिश्रा, उत्तर प्रदेश के चित्रकूट ज़िले की एक स्वतंत्र पत्रकार हैं.

की अन्य स्टोरी Jigyasa Mishra
Illustration : Priyanka Borar

प्रियंका बोरार न्यू मीडिया की कलाकार हैं, जो अर्थ और अभिव्यक्ति के नए रूपों की खोज करने के लिए तकनीक के साथ प्रयोग कर रही हैं. वह सीखने और खेलने के लिए, अनुभवों को डिज़ाइन करती हैं. साथ ही, इंटरैक्टिव मीडिया के साथ अपना हाथ आज़माती हैं, और क़लम तथा कागज़ के पारंपरिक माध्यम के साथ भी सहज महसूस करती हैं व अपनी कला दिखाती हैं.

की अन्य स्टोरी Priyanka Borar
Editor : P. Sainath

पी. साईनाथ, पीपल्स ऑर्काइव ऑफ़ रूरल इंडिया के संस्थापक संपादक हैं. वह दशकों से ग्रामीण भारत की समस्याओं की रिपोर्टिंग करते रहे हैं और उन्होंने ‘एवरीबडी लव्स अ गुड ड्रॉट’ तथा 'द लास्ट हीरोज़: फ़ुट सोल्ज़र्स ऑफ़ इंडियन फ़्रीडम' नामक किताबें भी लिखी हैं.

की अन्य स्टोरी पी. साईनाथ
Series Editor : Sharmila Joshi

शर्मिला जोशी, पूर्व में पीपल्स आर्काइव ऑफ़ रूरल इंडिया के लिए बतौर कार्यकारी संपादक काम कर चुकी हैं. वह एक लेखक व रिसर्चर हैं और कई दफ़ा शिक्षक की भूमिका में भी होती हैं.

की अन्य स्टोरी शर्मिला जोशी
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru