ನೀವು 6-14 ವರ್ಷ ವಯಸ್ಸಿನ ಮಕ್ಕಳಾಗಿದ್ದಲ್ಲಿ, ನಿಮಗೆ ನಿಮ್ಮ ನೆರೆಹೊರೆಯ ಶಾಲೆಗಳಲ್ಲಿ "ಉಚಿತ ಮತ್ತು ಕಡ್ಡಾಯ ಶಿಕ್ಷಣ" ಪಡೆಯುವ ಹಕ್ಕಿದೆ. ಇದನ್ನು ನಿರ್ಧರಿಸುವ ಕಾನೂನು - ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಮಕ್ಕಳ ಹಕ್ಕು ಕಾಯ್ದೆ (ಆರ್ ಟಿಇ) ಯನ್ನು ಭಾರತ ಸರ್ಕಾರವು 2009ರಲ್ಲಿ ಜಾರಿಗೆ ತಂದಿತು.
ಆದರೆ ಒಡಿಶಾದ ಜಜ್ಪುರ್ ಜಿಲ್ಲೆಯ ಒಂಬತ್ತು ವರ್ಷದ ಚಂದ್ರಿಕಾ ಬೆಹೆರಾ ಮನೆಗೆ ಹತ್ತಿರದಲ್ಲೆಲ್ಲೂ ಶಾಲೆಯಿಲ್ಲದಿರುವ ಕಾರಣ ಸುಮಾರು ಎರಡು ವರ್ಷಗಳಿಂದ ಶಾಲೆಯಿಂದ ಹೊರಗುಳಿದಿದ್ದಾಳೆ. ಶಾಲೆ ಅವಳ ಮನೆಯಿಂದ 3.5 ಕಿ,ಮೀ ದೂರದಲ್ಲಿದೆ.
ಗ್ರಾಮೀಣ ಪ್ರದೇಶದಲ್ಲಿ ಬೋಧನೆ ಮತ್ತು ಕಲಿಕೆಯ ಅಭ್ಯಾಸಗಳು ಸ್ಥಿರವಾಗಿಲ್ಲ. ಇಲ್ಲಿ ಕಾನೂನು ಮತ್ತು ನೀತಿಗಳು ಕೇವಲ ಕಾಗದದ ಮೇಲಷ್ಟೇ ಅಸ್ತಿತ್ವದಲ್ಲಿರುತ್ತವೆ. ಕೆಲವು ಸಂದರ್ಭಗಳಲ್ಲಿ ಶಿಕ್ಷಕರು ವೈಯಕ್ತಿಕ ಪ್ರಯತ್ನಗಳ ಮೂಲಕ ವ್ಯವಸ್ಥಿತ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತಾರೆ. ಇದು ಕೆಲವೊಮ್ಮೆ ವ್ಯವಸ್ಥೆಯಲ್ಲಿ ನಿಜವಾದ ಬದಲಾವಣೆಯನ್ನು ತರುತ್ತದೆ.
ಉದಾಹರಣೆಗೆ, ಕಾಶ್ಮೀರದ ಅನಂತನಾಗ್ ಜಿಲ್ಲೆಯ ಈ ಶಿಕ್ಷಕರನ್ನೇ ತೆಗೆದುಕೊಳ್ಳಿ, ಅವರು ಈ ಅಲೆಮಾರಿ ಸಮುದಾಯದ ಚಿಕ್ಕ ಮಕ್ಕಳಿಗೆ ಕಲಿಸುವ ಸಲುವಾಗಿ ಲಿಡ್ಡರ್ ಕಣಿವೆಯ ಗುಜ್ಜರ್ ನೆಲೆಗೆ ನಾಲ್ಕು ತಿಂಗಳ ಕಾಲ ವಲಸೆ ಹೋಗುತ್ತಾರೆ. ಹಲವೆಡೆ ಶಿಕ್ಷಕರು ತಮ್ಮ ಸೀಮಿತ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಲು ಹೊಸ ಅವಿಷ್ಕಾರಗಳನ್ನು ಪ್ರಯತ್ನಿಸುತ್ತಿದ್ದಾರೆ. ಕೊಯಮತ್ತೂರಿನ ವಿದ್ಯಾವನಂ ಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಆನುವಂಶಿಕವಾಗಿ ಮಾರ್ಪಡಿಸಿದ ಬೆಳೆಗಳ ಬಗ್ಗೆ ಚರ್ಚಿಸುವಂತೆ ತಯಾರಿಸಿದ್ದಾರೆ. ಈ ಮಕ್ಕಳಲ್ಲಿ ಅನೇಕರು ಇಂಗ್ಲಿಷ್ ಜ್ಞಾನ ಪಡೆದ ಮೊದಲ ತಲೆಮಾರು. ಆದರೆ ಅವರು ಈಗ ಇಂಗ್ಲಿಷ್ ಭಾಷೆಯಲ್ಲಿ ಚರ್ಚಿಸಬಲ್ಲರು, ಈ ವಿದ್ಯಾರ್ಥಿಗಳೀಗ ಸಾವಯವ ಅಕ್ಕಿಯ ಮೌಲ್ಯ ಇತ್ಯಾದಿಯ ಕುರಿತು ಮಾತನಾಡುತ್ತಿದ್ದಾರೆ.
ಪರಿ ಲೈಬ್ರರಿಗೆ ಕಾಲಿಡುವ ಮೂಲಕ ನೀವು ಕಲಿಕೆಯ ಫಲಿತಾಂಶಗಳ ಕುರಿತಾದ ಹಲವು ನೋಟಗಳನ್ನು ಪಡೆಯಬಹುದು. ಮತ್ತು ಈ ಮೂಲಕ ನೀವು ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತು ಸ್ಪಷ್ಟ ನೋಟವೊಂದನ್ನು ಗಳಿಸಿಕೊಳ್ಳಬಹುದು. ನಮ್ಮ ಲೈಬ್ರರಿಯಲ್ಲಿ ಗ್ರಾಮೀಣ ಶಿಕ್ಷಣದ ಸರ್ವಲಭ್ಯತೆ, ಅದರ ಗುಣಮಟ್ಟ ಮತ್ತು ಅಂತರಗಳ ಕುರಿತಾದ ವರದಿಗಳು ನಿಮ್ಮ ಓದಿ ಲಭ್ಯವಿವೆ. ಲೈಬ್ರರಿಯಲ್ಲಿನ ಪ್ರತಿ ದಾಖಲೆಯೂ ತನ್ನೊಂದಿಗೆ ಒಂದು ಸಾರಾಂಶ ರೂಪದ ಟಿಪ್ಪಣಿಯನ್ನು ಹೊಂದಿರುತ್ತದೆ. ಅದು ಆ ದಾಖಲೆಯಲ್ಲಿ ಪ್ರಮುಖ ಅಂಶಗಳನ್ನು ಎತ್ತಿ ತೋರಿಸುತ್ತದೆ.







