2020 ರ ಡಿಸೆಂಬರ್‌ನಲ್ಲಿ, ಉತ್ತರಪ್ರದೇಶ ಮತ್ತು ದೆಹಲಿಯ ಗಡಿಯಲ್ಲಿರುವ ಘಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅಡುಗೆ ಮಾಡಲು ಸುರೇಂದ್ರ ಕುಮಾರ್ ವಾರದ ಒಂದು ದಿನದಲ್ಲಿ ತಮ್ಮ ನಾಲ್ಕು ಗಂಟೆಗಳ ಸಮಯವನ್ನು ನಿಗದಿಪಡಿಸುತ್ತಿದ್ದರು.ಇದು ಕಾಲಾಂತರದಲ್ಲಿ ಎಂಟು ಗಂಟೆಗೆ ಏರಿತು, ಈಗ ಸುರೇಂದ್ರ ಅವರು ಒಂದು ವಾರದಲ್ಲಿ ಸುಮಾರು 12 ಗಂಟೆಗಳ ಸಮಯವನ್ನು ಪ್ರತಿಭಟನಾಕಾರರಿಗೆ ಅಡುಗೆ ಮಾಡುವುದಕ್ಕಾಗಿ ವ್ಯಯಿಸುತ್ತಾರೆ.
ಘಾಜಿಪುರದಲ್ಲಿ ನಡೆಯತ್ತಿರುವ ಚಳವಳಿಗೆ ಪಶ್ಚಿಮ ಉತ್ತರ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರುತ್ತಿರುವ ಬೆನ್ನಲ್ಲೇ " ನಾನು "ನಾನು ಪ್ರತಿದಿನ ಇದೇ ರೀತಿಯಾಗಿ ಅಡುಗೆ ಮಾಡಬೇಕಾಗಬಹುದು" ಎಂದು 58 ವರ್ಷದ ಸುರೇಂದ್ರ ಹೇಳುತ್ತಾರೆ.
ಸುರೇಂದ್ರ ಅವರು ಹಲ್ವಾಯ್ (ಸಿಹಿಯಂಗಡಿ ನಡೆಸುವವರು) ವ್ಯಾಪಾರವನ್ನು ನಡೆಸುತ್ತಿದ್ದು, ಉತ್ತರ ಪ್ರದೇಶದ ಮುಜಾಫರ್ ನಗರ್ ಜಿಲ್ಲೆಯ ಶಾರೋನ್ ಗ್ರಾಮದಲ್ಲಿ (ಅಥವಾ ಸೊರಮ್) ಸ್ವಂತ ಅಂಗಡಿಯನ್ನು ಹೊಂದಿದ್ದಾರೆ. "ನಾವು ನಮ್ಮ ಗ್ರಾಮದಲ್ಲಿ ಆಹಾರವನ್ನು ಸಿದ್ಧಪಡಿಸಿ ಅದನ್ನು ಅದನ್ನು ಟ್ರಾಕ್ಟರುಗಳು ಮತ್ತು ಕಾರುಗಳ ಮೂಲಕ ಗಡಿಗೆ ಕಳುಹಿಸುತ್ತೇವೆ" ಎಂದು ಅವರು ಹೇಳುತ್ತಾರೆ. ಆ ಗ್ರಾಮದ ನಿವಾಸಿಗಳು ಪ್ರತಿವಾರಕ್ಕೊಮ್ಮೆ ಘಾಜಿಪುರಕ್ಕೆ ಆಹಾರವನ್ನು ಸಾಗಿಸುತ್ತಾರೆ.
ಆರಂಭದಲ್ಲಿ ಪಶ್ಚಿಮ ಉತ್ತರ ಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿರಲಿಲ್ಲ, ಆದ್ದರಿಂದ ನಾನು ನನ್ನ ಅಂಗಡಿಯನ್ನು ನಿರ್ವಹಿಸಬಲ್ಲೆ ಮತ್ತು ಪ್ರತಿ ವಾರದಲ್ಲಿ ಕೆಲವು ಸಮಯವನ್ನು ಅಡುಗೆ ಮಾಡಲು ಕಳೆಯಬಹುದು ಎಂದು ಭಾವಿಸಿದ್ದೆ. ಆದರೆ ದಿನ ಕಳೆದಂತೆ ಕೆಲಸದ ಹೊರೆ ಅಧಿಕಗೊಂಡಿದೆ ಮತ್ತು ಅದು ಇನ್ನೂ ಬೆಳೆಯುತ್ತಿದೆ ಎಂದು ಸುರೇಂದ್ರ ಹೇಳುತ್ತಾರೆ.
ಘಾಜಿಪುರ್, ಸುಮಾರು ಶಾರೋನ್ ನಿಂದ 95 ಕಿಲೋ ಮೀಟರ್ ದೂರದಲ್ಲಿದೆ. ಇದು 2020ರ ನವೆಂಬರ್ 26 ರಂದು ದೆಹಲಿಯ ಗಡಿಯಲ್ಲಿ ನೂತನ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯ ಮೂರು ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಸಂಘಟನೆಯ ಮುಖಂಡ ರಾಕೇಶ್ ಟಿಕಾಯತ್ ಅವರ ಭಾವನಾತ್ಮಕ ಕರೆಗೆ ಓಗೊಟ್ಟು ಜನವರಿ ಅಂತ್ಯದಿಂದ ಪಶ್ಚಿಮ ಉತ್ತರ ಪ್ರದೇಶದ ಭಾಗದ ರೈತರು ಬೃಹತ್ ಸಂಖ್ಯೆಯಲ್ಲಿ ಚಳವಳಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.









