“ಅವರು ನಾವು ದೆಹಲಿ ಪ್ರವೇಶಿಸದಂತೆ ತಡೆದಿದ್ದರು” ಎನ್ನುತ್ತಾರೆ ಬಿಟ್ಟು ಮಲನ್. ಬುಟ್ಟರ್ ಸರಿನ್ಹ್ ಗ್ರಾಮದ ಅಂಚಿನಲ್ಲಿ ನಿಂತು ನಮ್ಮೊಂದಿಗೆ ಮಾತನಾಡುತ್ತಿದ್ದ ಅವರು “ಈಗ ಪಂಜಾಬಿನ ಪ್ರತಿ ಹಳ್ಳಿಯ ಬಾಗಿಲೂ ಅವರ ಪಾಲಿಗೆ ಮುಚ್ಚಲ್ಪಟ್ಟಿವೆ” ಎಂದರು.
ರೈತರಾದ ಬಿಟ್ಟು ಮಲನ್ ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯ ಮಲನ್ ಗ್ರಾಮದಲ್ಲಿ ಐದು ಎಕರೆ ಜಮೀನು ಹೊಂದಿದ್ದಾರೆ. ಇಲ್ಲಿ ʼಅವರುʼ ಎಂದರೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಮತ್ತು ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ದಿಸಿರುವ ಬಿಜೆಪಿ. ʼನಾವುʼ ಎಂದರೆ ದೆಹಲಿಗೆ ಪ್ರವೇಶವನ್ನು ನಿರಾಕರಿಸಲ್ಪಟ್ಟಿದ್ದ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನಾ ನಿರತರಾಗಿದ್ದ ಸಾವಿರಾರು ರೈತರು.
ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿನ ಕಿಸಾನ್ ಆಂದೋಲನ ಮತ್ತು ಅದರ ಶಿಬಿರಗಳ ನೆನಪುಗಳು ಪಂಜಾಬಿನ ರೈತರ ನೆನಪಿನಲ್ಲಿ ಆಳವಾಗಿ ಬೇರೂರಿವೆ. ಈ ರಾಜ್ಯದ ಸಾವಿರಾರು ರೈತರು ಈ ಹಿಂದೆ ಮೂರು ಬೇಸಿಗೆಗಳ ಕೆಳಗೆ ಪ್ರತಿರೋಧ ಮತ್ತು ಭರವಸೆಯ ಸುದೀರ್ಘ ಮೆರವಣಿಗೆಯನ್ನು ಪ್ರಾರಂಭಿಸಿದ್ದರು. ತಮ್ಮ ಕೃಷಿ ಬದುಕಿಗೆ ಬೆದರಿಕೆಯಾಗಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆನ್ನುವ ಏಕೈಕ ಬೇಡಿಕೆಯೊಂದಿಗೆ ಸಾವಿರಾರು ರೈತರು ಸಂಘಟಿತರಾಗಿ ತಮ್ಮ ಟ್ರ್ಯಾಕ್ಟರ್ ಹಾಗೂ ಟ್ರೈಲರುಗಳ ಬೆಂಗಾವಲಿನೊಂದಿಗೆ ರಾಷ್ಟ್ರ ರಾಜಧಾನಿಗೆ ಲಗ್ಗೆಯಿಟ್ಟಿದ್ದರು.
ತಮ್ಮ ಮನವಿಗಳೊಂದಿಗೆ ದೆಹಲಿಯ ಗಡಿಯಲ್ಲಿ ಬೀಡುಬಿಟ್ಟ ರೈತರಿಗೆ ಅಲ್ಲಿ ಎದುರಾಗಿದ್ದು ತಮ್ಮ ಅಹವಾಲನ್ನು ಕೇಳುವ ಕಿವಿಯಲ್ಲ ಬದಲಿಗೆ ದೊಡ್ಡ ದೊಡ್ಡ ತಡೆ ಗೋಡೆಗಳು. ನಂತರ ಈ ಪ್ರತಿಭಟನೆ 2 ಡಿಗ್ರಿಯ ಮೈ ಕೊರೆಯುವ ಚಳಿ, 45 ಡಿಗ್ರಿ ಬಿಸಿಲನ್ನು ಲೆಕ್ಕಿಸದೆ ಸುಮಾರು ಒಂದು ವರ್ಷಗಳ ತನಕ ಸಾಗಿತು. ಅಲ್ಲಿನ ಮೈಕೊರೆಯುವ ಚಳಿ ಮತ್ತು ಸುಡುವ ಸೆಕೆಯ ನಡುವೆ ಕಬ್ಬಿಣದ ಟ್ರೈಲರುಗಳೇ ಅವರ ಮನೆಯಾಗಿದ್ದವು ಎಂದು ಈ ಹೋರಾಟದಲ್ಲಿ ಭಾಗವಹಿಸಿದ್ದವರು ಹೇಳುತ್ತಾರೆ.
ಹಲವು ಏರಿಳಿತಗಳನ್ನು ಒಳಗೊಂಡಿದ್ದ ಅವರ 358 ದಿನಗಳ ಹೋರಾಟಕ್ಕಾಗಿ ಅವರು ದೆಹಲಿಯಲ್ಲಿ ಅವರು ಸ್ಥಾಪಿಸಿದ್ದ ಬಿಡಾರಗಳಿಂದ 700ಕ್ಕೂ ಹೆಚ್ಚು ಶವಗಳನ್ನು ಪಂಜಾಬಿಗೆ ಕಳುಹಿಸಲಾಗಿತ್ತು. ಪ್ರತಿಯೊಂದು ಶವವೂ ಈ ಹೋರಾಟದ ಮೂಲಕ ಸಾಕ್ಷಿಗಳಾಗಿದ್ದವು. ಆದರೆ ಇದರಿಂದ ಹೋರಾಟ ಧೃತಿಗೆಡಲಿಲ್ಲ. ಅವರ ತ್ಯಾಗ ಮತ್ತು ಹೋರಾಟ ಮುಂದೆ ಒಂದು ವರ್ಷಗಳ ಕಾಲ ನಿರಾಕರಣೆಯ ಧೋರಣೆ ತೋರಿದ್ದ ಸರ್ಕಾರ ಮಂಡಿಯೂರಿ ಕುಳಿತಿತು. ನವೆಂಬರ್ 19, 2021ರಂದು ಕಾನೂನುಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ ಘೋಷಿಸಿದರು.
ಈಗ ಪಂಜಾಬಿನಲ್ಲಿ ಅದನ್ನೆಲ್ಲ ಮರಳಿಸುವ ಸಮಯ. ಇಂದು ಬಿಟ್ಟು ಮಲನ್ ಅವರಂತಹ ಅನೇಕ ರೈತರು ತಾವು ದೆಹಲಿಯಲ್ಲಿ ಎದುರಿಸಿದ್ದನ್ನು ತಿರುಗಿ ಕೊಡಲು ಸಿದ್ಧರಾಗಿದ್ದಾರೆ. ಎಪ್ರಿಲ್ 23ರಂದು ತನ್ನಂತಹ ರೈತರು ಎದುರಿಸಿದ ಸಂಕಷ್ಟಗಳನ್ನು ತಿರುಗಿಸಿ ಕೊಡುವುದು ತನ್ನ ಕರ್ತವ್ಯ ಎಂದು ಬಿಟ್ಟು ಭಾವಿಸಿದ್ದಾರೆ. ಇದೇ ನಿಟ್ಟಿನಲ್ಲಿ ಅವರು ಬುಟ್ಟರ್ ಸರಿನ್ಹ್ ಗ್ರಾಮದಲ್ಲಿ ಫರೀದ್‌ಕೋಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನ್ಸ್ ರಾಜ್ ಹನ್ಸ್ ಅವರನ್ನು ಧೈರ್ಯದಿಂದ ಎದುರಿಸಿದರು.







