ಅದು ಕಳ್ಳತನ

- 1970ರಲ್ಲಿ ಗಂಧಮಾರ್ದನ ಬಿ ಬ್ಲಾಕಿನಲ್ಲಿ ಗಣಿಗಾರಿಕೆಯನ್ನು ಓಡಿಷಾ ಮೈನಿಂಗ್ ಕಾರ್ಪೋರೇಷನ್ನಿಗೆ (OMC) ಗುತ್ತಿಗೆ ನೀಡಲಾಯಿತು.

- 2013ರಲ್ಲಿ ಷಾ ಆಯೋಗವು ತನ್ನ ವರದಿಯಲ್ಲಿ 2000 ದಿಂದ 2006 ನೇ ಇಸವಿಗಳ ನಡುವೆ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ 12 ಲಕ್ಷ ಟನ್ ಗಣಿಗಾರಿಕೆ ನಡೆದದ್ದೂ ಸೇರಿದಂತೆ ಹಲವಾರು ಅಕ್ರಮಗಳ ಬಗ್ಗೆ ಬೊಟ್ಟು ಮಾಡಿ ತೋರಿಸಿತ್ತು. ಕಿಯೋಂಜಾರ್ ಜಿಲ್ಲಾ ನ್ಯಾಯಾಲಯದಲ್ಲಿ ಈ ಬಗ್ಗೆ ಅರಣ್ಯಾಪರಾಧ ಕಾಯಿದೆಯಡಿ ಎರಡು ಪ್ರಕರಣಗಳ  ವಿಚಾರಣೆ ನಡೆಯುತ್ತಿದೆ.

- ಜನವರಿಯಲ್ಲಿ ರಾಜ್ಯ ಸರಕಾರವು OMC ಪರವಾಗಿ ಅದರ ವಾರ್ಷಿಕ ಉತ್ಪಾದನೆಯನ್ನು 92 ಲಕ್ಷ ಟನ್ನುಗಳಿಗೆ ಏರಿಸಲು ಮತ್ತು ಗಣಿಗಾರಿಕೆ ಪ್ರದೇಶವನ್ನು 1590 ಹೆಕ್ಟೇರುಗಳಿಗೆ ವಿಸ್ತರಿಸಲು ಅರಣ್ಯ ಇಲಾಖೆಯ ಅನುಮತಿಗಾಗಿ ಅರ್ಜಿ ಸಲ್ಲಿಸಿತು. ಈ ವಿಸ್ತರಣಾ ಪ್ರದೇಶದಲ್ಲಿ ಏಳು ಆದಿವಾಸಿ ಗ್ರಾಮಗಳ ಸಹಿತ 1400 ಹೆಕ್ಟೇರ್ ಅರಣ್ಯಭೂಮಿ ಸೇರಿದೆ.

- OMC ತನ್ನ ವಾರ್ಷಿಕ ಮಾರಾಟದ ಮೌಲ್ಯವನ್ನು 2416 ಕೋಟಿ ರೂಪಾಯಿಗಳೆಂದು ಅಂದಾಜಿಸಿದೆ. ಇಲ್ಲಿ ಮುಂದಿನ 33 ವರ್ಷಗಳಲ್ಲಿ ಅಂದಾಜು 3000 ಲಕ್ಷ ಟನ್ ಅದಿರು ಗಣಿಗಾರಿಕೆ ಮಾಡುವ ಗುರಿ ಇದೆ.

- ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗಳು ಈ ಯೋಜನೆಗೆ ಒಪ್ಪಿಗೆ ನೀಡುವಲ್ಲಿ ಪರಿಶೀಲನೆ ನಡೆಸಿವೆ.

ಮೂಲ : ಅಕ್ರಮ ಗಣಿಗಾರಿಕೆಯ ಬಗ್ಗೆ ನ್ಯಾಯಮೂರ್ತಿ ಎಂ . ಬಿ . ಷಾ ಸಮಿತಿಯ ವರದಿ ; ಗಂಧಮಾರ್ದನ ಬ್ಲಾಕ್ ಬಿ ಬಗ್ಗೆ ಅರಣ್ಯ ಇಲಾಖೆಗೆ ಸಲ್ಲಿಸಿದ ಅರ್ಜಿ

“ನಾನು ಒಡಿಯಾ ಭಾಷೆಯಲ್ಲಿ ಹೀಗೆ ಸಹಿಮಾಡ್ತೇನೆ. ನನ್ನ ಜೀವನದಲ್ಲಿ ನಾನು ಯಾವತ್ತೂ ಇಂಗ್ಲೀಷ್ ಕಲಿತದ್ದಿಲ್ಲ. ಹಾಗಿರುವಾಗ ನಾನು ಇಂಗ್ಲೀಷಿನಲ್ಲಿ ಸಹಿ ಮಾಡುವುದು ಹೇಗೆ ಸಾಧ್ಯ?” ಎಂದು ಗಾಬರಿಯಿಂದ ಕೇಳುತ್ತಾರೆ ಗೋಪಿನಾಥ್ ನಾಯ್ಕ್. ಉರುಮುಂದಾ ಗ್ರಾಮದ ಅವರು ಈಗಷ್ಟೇ ಅಲ್ಲಿಂದ ಸೈಕಲ್ಲಿನಲ್ಲಿ ಬಂದಿಳಿದಿದ್ದರು.

ಹಳ್ಳಿಗಳ ಅರಣ್ಯ ಹಕ್ಕುಗಳ ಸಮಿತಿಯ ಸದಸ್ಯರಾಗಿರುವ ನಾಯ್ಕ್, ಅವರದ್ದೆಂದು ಹೇಳಲಾಗಿರುವ ಇಂಗ್ಲಿಷ್ ಸಹಿಯನ್ನು ಆಗಷ್ಟೇ ನೋಡಿದ್ದರು. ಅವರ ಹಳ್ಳಿಯ ಗ್ರಾಮಸಭೆಯ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿ ಅವರು ಮಾಡಿರುವರೆನ್ನಲಾದ ಸಹಿ ಅದಾಗಿತ್ತು.

ನಿರ್ಣಯದಲ್ಲಿ ಉರುಮಂದಾ ಗ್ರಾಮದ ಗ್ರಾಮಸ್ಥರು ತಮ್ಮ 853 ಹೆಕ್ಟೇರ್ ಅರಣ್ಯ ಭೂಮಿಯನ್ನು ಓಡಿಷಾ ಮೈನಿಂಗ್ ಕಾರ್ಪೋರೇಷನ್ನಿಗೆ (OMC) ಬಿಟ್ಟುಕೊಡಲು ಒಪ್ಪಿದ್ದಾರೆಂದು ಹೇಳಲಾಗಿತ್ತು. ಜನವರಿ 2015 ರಲ್ಲಿ ಓಡಿಷಾ ರಾಜ್ಯ ಸರಕಾರ ಮತ್ತು OMC ಗಳು ಕೇಂದ್ರ ಪರಿಸರ, ಅರಣ್ಯ ಮತ್ತು ವಾತಾವರಣ ಬದಲಾವಣೆ ಇಲಾಖೆಗೆ (MoEFCC) ಗೆ ಸಲ್ಲಿಸಿದ್ದ ಒಪ್ಪಿಗೆ ಕೋರುವ ಅರ್ಜಿಯಲ್ಲಿ ಏಳು ಗ್ರಾಮಗಳ ವತಿಯಿಂದ ಈ ರೀತಿಯ ಒಂದೇ ವಿಧದ  ಗ್ರಾಮಸಭಾ ನಿರ್ಣಯಗಳ ಪ್ರತಿಗಳನ್ನು ಇರಿಸಲಾಗಿತ್ತು.

PHOTO • Chitrangada Choudhury

ಉರುಮುಂದಾ ಗ್ರಾಮದ ಗೋಪಿನಾಥ್ ನಾಯ್ಕ್: “ನನಗೆ ಇಂಗ್ಲೀಷ್ ಬರುವುದೇ ಇಲ್ಲ… ನಾನು ಇಂಗ್ಲೀಷಿನಲ್ಲಿ ಸಹಿ ಮಾಡುವುದಾದರೂ ಹೇಗೆ?”

ತನ್ನನ್ನು ತಾನು “ಭಾರತದ ಸಾರ್ವಜನಿಕ ರಂಗದ ಅತಿದೊಡ್ಡ ಗಣಿಗಾರಿಕೆ ಕಂಪನಿ” ಎಂದು ಕರೆದುಕೊಳ್ಳುವ OMC, ಉರುಮಂದಾ ಸೇರಿದಂತೆ ಆಸುಪಾಸಿನ ಏಳು ಗ್ರಾಮಗಳಲ್ಲಿನ 1409 ಹೆಕ್ಟೇರ್ ಅರಣ್ಯ ಭೂಮಿ ಸೇರಿದಂತೆ 1590 ಹೆಕ್ಟೇರ್ ಭೂಮಿಯಲ್ಲಿ ಗಣಿಗಾರಿಕೆ ಆರಂಭಿಸಲು ಅನುಮತಿ ಕೋರುತ್ತಿದೆ. (ಇದು ಸುಮಾರು 45 ಲೋಧಿ ಗಾರ್ಡನ್ ಗಳಷ್ಟು ವಿಸ್ತೀರ್ಣದ್ದಾಗುತ್ತದೆ). ಈ ಗಂಧಮಾರ್ದನ ಬಿ ಕಬ್ಬಿಣದ ಗಣಿಯಿಂದ 3000 ಲಕ್ಷ ಟನ್ ಕಬ್ಬಿಣದ ಅದಿರಿನ ಗಣಿಗಾರಿಕೆ ನಡೆಸಲು ಸಂಸ್ಥೆ ಉದ್ದೇಶಿಸಿದೆ.

ಈ ಗಣಿಯನ್ನು 33 ವರ್ಷಗಳ ತನಕ ಗಣಿಗಾರಿಕೆಗೆ ಬಳಸಲು OMC  ಉದ್ದೇಶಿಸಿದ್ದು, ಪ್ರತೀ ವರ್ಷ ಅಲ್ಲಿ 92 ಲಕ್ಷ ಟನ್ ಕಬ್ಬಿಣದ ಅದಿರನ್ನು ಗಣಿಗಾರಿಕೆ ಮಾಡಬಹುದೆಂದು ಸಂಸ್ಥೆಯ ದಾಖಲೆಗಳು ಹೇಳುತ್ತಿವೆ. ವಾರ್ಷಿಕ 2416 ಕೋಟಿ ರೂಪಾಯಿ ಆದಾಯ ತರುವ ಈ ಗಣಿಗಳು ಮತ್ತು ಅರಣ್ಯದ ಒಟ್ಟು ಅಂದಾಜು ಮೌಲ್ಯ ಸುಮಾರು 79,000 ಕೋಟಿ ರೂಪಾಯಿಗಳಾಗುತ್ತವೆ.

PHOTO • Chitrangada Choudhury

ಗಂಧಮಾರ್ದನದಲ್ಲಿ ಓಡಿಷಾ ಮೈನಿಂಗ್ ಕಾರ್ಪೋರೇಷನ್ 1590 ಹೆಕ್ಟೇರ್ ಅರಣ್ಯ ಭೂಮಿಯಿಂದ 3000 ಲಕ್ಷ ಟನ್ ಕಬ್ಬಿಣದ ಅದಿರು ಗಣಿಗಾರಿಕೆ ಮಾಡಲುದ್ದೇಶಿಸಿದೆ

ನಾವಿರುವ ಜಾಗ ಓಡಿಷಾದ ರಾಜಧಾನಿ ಭುವನೇಶ್ವರದಿಂದ 250 ಕಿಮೀ ದೂರದಲ್ಲಿರುವ ಕಿಯೋಂಜಾರ್ ಜಿಲ್ಲೆಯ ಗಂಧಮಾರ್ದನ ಬೆಟ್ಟಗಳಲ್ಲಿದೆ. ಆದಿವಾಸಿ ಮುಂಡಾ ಮತ್ತು ಭುಯಿಯಾನ್ ಹಳ್ಳಿಗಳಿಗೆ ಸೇರಿದ ಪ್ರಾಕೃತಿಕವಾಗಿ ಸಿರಿವಂತ ಭೂಪ್ರದೇಶವು ಇದಾಗಿದ್ದು, ಹರಿದ್ವರ್ಣ ಕಾಡು, ಬೆಟ್ಟದ ತಪ್ಪಲಿನಲ್ಲಿ ಧಾನ್ಯಗಳು, ರಾಗಿ, ಎಳ್ಳು ಬೆಳೆಯಲು ನೈಸರ್ಗಿಕ ತೊರೆಗಳ ಕೃಪೆ ಇದೆ. ಆನೆ  ಹಿಂಡುಗಳೂ ಸೇರಿದಂತೆ ಹಲವಾರು ವನ್ಯಜೀವಿಗಳು ಇಲ್ಲಿನ ಅರಣ್ಯಗಳಲ್ಲಿ ಅಡ್ಡಾಡಿಕೊಂಡಿವೆ ಎಂದು ಸ್ಥಳೀಯರು ಮಾತ್ರವಲ್ಲದೇ ಅರಣ್ಯ ಇಲಾಖೆಯ ದಾಖಲೆಗಳೂ ತಿಳಿಸುತ್ತವೆ.

ಭಾರತದಲ್ಲಿ ಲಭ್ಯವಿರುವ ಹೆಮಾಟೈಟ್ ಕಬ್ಬಿಣದ ಅದಿರಿನ ನಿಕ್ಷೇಪಗಳಲ್ಲಿ ಮೂರನೇ ಒಂದು ಭಾಗ ಇಲ್ಲಿದೆ.

2005-2012 ರ ನಡುವೆ ಚೀನಾಕ್ಕೆ ಕಬ್ಬಿಣದ ಅದಿರು ಸಾಗಿಸಲು ಭಾರೀ ಪೈಪೋಟಿಯಿದ್ದ ದಿನಗಳಲ್ಲಿ ಕಿಯೋಂಜಾರ್ ಮತ್ತು ಸುಂದರ್ಗಡ್ ಆಸುಪಾಸಿನ ಜಿಲ್ಲೆಗಳಲ್ಲಿ ಅರಣ್ಯ ಮತ್ತು ಗುಡ್ಡಗಳನ್ನು ಬಗೆದು ಕಬ್ಬಿಣದ ಅದಿರು ತೆಗೆಯುವ ಹಪಾಹಪಿ ತೀವ್ರ ಸ್ವರೂಪದಲ್ಲಿತ್ತು. ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ, ಸ್ಥಳೀಯ ಆದಿವಾಸಿ ಕಾರ್ಮಿಕರನ್ನು ಶೋಷಿಸಿ “ಅತಿಯೆನ್ನಿಸುವ ಲಾಭ” ಮಾಡಿಕೊಂಡವರು ಕೆಲವೇ ಕೆಲವು ಮಂದಿ ರಾಜಕೀಯದ ದೊಡ್ಡವರು ಎಂದು ಹೇಳುತ್ತದೆ, ಅಕ್ರಮ ಗಣಿಗಾರಿಕೆಯ ಬಗ್ಗೆ ಸುಪ್ರೀಂ ಕೋರ್ಟಿನ ಮಾಜೀ ನ್ಯಾಯಮೂರ್ತಿ ಎಂ.ಬಿ. ಷಾ ನೇತೃತ್ವದ ಆಯೋಗದ ತನಿಖಾವರದಿ. ಈ ತನಿಖಾ ಆಯೋಗವು 2011-13 ಅವಧಿಯಲ್ಲಿ ತನಿಖೆಯನ್ನು ನಡೆಸಿತ್ತು.

2013ರಲ್ಲಿ ಈ ಅಕ್ರಮಗಳ ಬಗ್ಗೆ ಪ್ರಶ್ನೆಗಳು ಕಾವೇರತೊಡಗಿದಾಗ ನವೀನ್ ಪಠ್ನಾಯಕ್ ನೇತೃತ್ವದ ಓಡಿಷಾ ಸರ್ಕಾರ ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಗಣಿ ಕಂಪನಿಗಳಿಗೆ 59203 ಕೋಟಿ ರೂಪಾಯಿಗಳನ್ನು ಹಿಂದಿರುಗಿಸಲು ವಸೂಲಿ ನೋಟೀಸು ನೀಡಿತ್ತು. ಒಂದು ಅಂದಾಜಿನ ಪ್ರಕಾರ ಈ ಮೊತ್ತವು ರಾಜ್ಯದ  ಜಿಡಿಪಿಯ ನಾಲ್ಕನೇ ಒಂದು ಭಾಗದಷ್ಟಾಗುತ್ತದೆ. ಆದರೆ ಈವತ್ತಿನವರೆಗೂ  ಗಣಿಧಣಿಗಳು ಇದರಲ್ಲಿ ಒಂದೇ ಒಂದು ರೂಪಾಯಿಯನ್ನೂ ಕೂಡ ಸರಕಾರದ ಬೊಕ್ಕಸಕ್ಕೆ ಹಿಂದಿರುಗಿಸಿಲ್ಲ.

PHOTO • Chitrangada Choudhury

ಹಲವು ಮಂದಿ ಆದಿವಾಸಿಗಳ ಹೊಲಗಳಲ್ಲಿ ಓಡಿಷಾ ಮೈನಿಂಗ್ ಕಾರ್ಪೋರೇಷನ್ನಿನ ಈ ಪ್ರಸ್ತಾಪಿತ ಗಂಧಮಾರ್ದನ ಗಣಿಗಳ ಗುತ್ತಿಗೆ ಪ್ರದೇಶದ ವ್ಯಾಪ್ತಿಯನ್ನು ಸೂಚಿಸುವ ಗಡಿಕಲ್ಲುಗಳಿವೆ

ಓಡಿಷಾದ ಈ ಅತಿದೊಡ್ಡ ಭ್ರಷ್ಟಾಚಾರ ಹಗರಣದಲ್ಲಿ ಅಕ್ರಮಗಳು ಎಷ್ಟು ವ್ಯಾಪಕವಾಗಿದ್ದವೆಂದರೆ, ಅದರ ತನಿಖೆ ನಡೆಸಿದ ಷಾ ಆಯೋಗವು ತನ್ನ ತನಿಖಾವರದಿಯಲ್ಲಿ, “ಅಲ್ಲಿ ಕಾನೂನೇ ಇಲ್ಲ. ಗಣಿಧಣಿಗಳು ನಿರ್ಧರಿಸಿದ್ದೇ ಕಾನೂನು. ಸಂಬಂಧಪಟ್ಟ ಇಲಾಖೆಗಳು ಅವರ ಸುಪರ್ಧಿಯೊಳಗೇ ಇವೆ”, ಎಂದು ವಿಷಾದದಿಂದ ದಾಖಲಿಸಿತ್ತು.

ಈಗ ಇದು 2016. ಆದಿವಾಸಿಗಳು ಮಾತ್ರ ಆವತ್ತೂ ಲೆಕ್ಕಕ್ಕಿರಲಿಲ್ಲ; ಈವತ್ತಿಗೂ ಲೆಕ್ಕಕ್ಕಿಲ್ಲ.

ಉರುಮಂದಾದಲ್ಲಿ, ನಿರ್ಣಯದಲ್ಲಿ ಮೂರು ಬಾರಿ ಹೆಸರು ದಾಖಲಾಗಿರುವ ನಾಯ್ಕ್ ಅವರಲ್ಲದೆ ಇತರ ಹಲವು ಮಂದಿ ಕೂಡ ತಮ್ಮ ಸಹಿಯನ್ನು ಫೋರ್ಜರಿ ಮಾಡಿರುವ ಬಗ್ಗೆ ಮತ್ತು ತಮ್ಮ ಹೆಸರುಗಳು ಮತ್ತೆ ಮತ್ತೆ ಕಾಣಿಸಿಕೊಂಡಿರುವ ಬಗ್ಗೆ ದೂರುತ್ತಿದ್ದಾರೆ. ತನ್ನ ಹೆಸರು ಮೂರು ಸಾರಿ ಕಾಣಿಸಿಕೊಂಡಿರುವ ವೈದ್ಯನಾಥ್ ಸಾಹೂ “ನನ್ನನ್ನು ಅವರು ಮೂರು ಸಾರಿ ಮಾರಿದ್ದಾರೆ” ಎಂದು ತಮಾಷೆಯಾಗಿ ಹೇಳುತ್ತಾರೆ.

PHOTO • Chitrangada Choudhury

ಉರುಮಂದಾದ ಬೈದ್ಯನಾಥ್ ಸಾಹೂ: “ನನ್ನನ್ನು ಅವರು ಮೂರು ಸಾರಿ ಮಾರಿದ್ದಾರೆ”

ಅರಣ್ಯದಲ್ಲಿ ಗಣಿಗಾರಿಕೆಯ ಅನುಮತಿಗಾಗಿ ಪರಿಸರ ಇಲಾಖೆಗೆ ಸಲ್ಲಿಸಿದ ಅರ್ಜಿಯಲ್ಲಿ, ಗಂಧಮಾರ್ದನ ಅರಣ್ಯದ ಉರುಮಂದಾ ಮತ್ತಿತರ ಆರು ಗ್ರಾಮಗಳಲ್ಲಿ – ಮೇಲಿನ ಜಾಗಾರ, ದೋನ್ಲಾ, ಅಂಬದಹಾರ, ನಿತಿಗೋತಾ, ಮೇಲಿನ ಕೈಂಸಾರಿ ಮತ್ತು ಇಚಿಂದಾ ಗ್ರಾಮಸಭೆಗಳನ್ನು 2011 ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ನಡೆಸಲಾಗಿದ್ದು, ಆ ಸಭೆಗಳ ನಿರ್ಣಯ ಪ್ರತಿಗಳನ್ನು ನೋಡಿದಾಗ, ಅದರಲ್ಲಿ 2000ಕ್ಕೂ ಮಿಕ್ಕಿ ಸಹಿಗಳು ಮತ್ತು ಹೆಬ್ಬೆಟ್ಟು ಗುರುತುಗಳು ಇದ್ದವು ಮತ್ತು ಒಂದಾದ ಮೇಲೆ ಒಂದು ಗ್ರಾಮದಲ್ಲಿ ಸಭೆಗಳನ್ನು ನಡೆಸಲಾಗಿತ್ತು ಎಂದು ಹೇಳಲಾಗಿತ್ತು. ಆದರೆ ಗ್ರಾಮಸ್ಥರ ಪ್ರಕಾರ ಅಂತಹ  ಯಾವುದೇ ಸಭೆಗಳು ನಡೆದಿಲ್ಲ ಮತ್ತು ಇಲ್ಲಿ ದಾಖಲಿಸಿರುವಂತೆ ಅಂತಹ ಯಾವುದೇ ನಿರ್ಣಯಗಳನ್ನು ಮಾಡಲಾಗಿಲ್ಲ.

ನಿತಿಗೋತಾದಲ್ಲಿ ಪಂಚಾಯತಿ ಸಮಿತಿಯ ಸದಸ್ಯೆ ಶಕುಂತಲಾ ದೆಹೂರಿ ಅವರು ಅವರ ಹಳ್ಳಿಯದೆನ್ನಲಾದ ನಿರ್ಣಯಗಳ ಪ್ರತಿಯನ್ನು ಓದಿದ ಬಳಿಕ ವಾಚಾಮಗೋಚರ ಬೈಗಳನ್ನು ಸುರಿಸಿದರು. ಆರೂ ಗ್ರಾಮಗಳಲ್ಲಿ ಸ್ವೀಕರಿಸಲಾದ ನಿರ್ಣಯಗಳು ಒಂದೇ ರೀತಿ ಇದ್ದು, ನಿತಿಗೋತಾ ಹಳ್ಳಿಯ ನಿರ್ಣಯದಲ್ಲಿ ಅಲ್ಲಿನ ಗ್ರಾಮಸ್ಥರು ಸಭೆಯಲ್ಲಿ, ಅವರು ಅರಣ್ಯ ಭೂಮಿಯನ್ನು ಕೃಷಿಗೆ, ವಾಸ್ತವ್ಯಕ್ಕೆ ಅಥವಾ ಬದುಕಿನ ಬೇರ್ಯಾವುದೇ ವಹಿವಾಟುಗಳಿಗೆ  ಉಪಯೋಗಿಸುತ್ತಿಲ್ಲ ಮತ್ತು ಅವರಿಗೆ ವೈಯಕ್ತಿಕವಾಗಿಯಾಗಲೀ ಸಮುದಾಯವಾಗಿಯಾಗಲೀ ಆ ಭೂಮಿಯ ಮೇಲೆ ಯಾವುದೇ ಕ್ಲೇಮುಗಳಿಲ್ಲ ಎನ್ನುತ್ತದೆ. ಉಳಿದ ನಿರ್ಣಯಗಳೂ ಇದೇ ಹಾದಿಯಲ್ಲಿದ್ದು, ಇಲ್ಲಿ ಗಣಿಗಾರಿಕೆ ಆರಂಭಿಸಿದರೆ, ತಮಗೆ ಬದುಕಲೊಂದು ದಾರಿ ಸಿಗುತ್ತದೆ ಎಂದು ಹಳ್ಳಿಯ ಜನ ಹೇಳಿದ್ದಾರೆ ಮತ್ತು ಅರಣ್ಯವನ್ನು ಗಣಿಗಳಾಗಿ ಪರಿವರ್ತಿಸಲು ಸರಕಾರವು ಒಪ್ಪಿಗೆ ನೀಡಬೇಕೆಂದು ನಿರ್ಣಯಿಸಿದ್ದಾರೆ.

ಸಿಟ್ಟಿನಿಂದ ಶಕುಂತಲಾ ಅವರು ನಿರ್ಣಯವನ್ನು ಓದುತ್ತಾ ಹೋದಂತೆ, ಹಳ್ಳಿಗರಿಗೆ ಅಚ್ಚರಿ, ಸಿಟ್ಟು ಎಲ್ಲವೂ ಉಮ್ಮಳಿಸಿ ಬಂದು, ಶಕುಂತಲಾರವರ ಸುತ್ತ ನೆರೆದು ಆಕ್ರೋಶ ವ್ಯಕ್ತಪಡಿಸಿದರು. ಅವರಲ್ಲೊಬ್ಬ ಎಳೆಯ ಮಹಿಳೆ ಸಿಟ್ಟಿನಿಂದ “ಇದನ್ನು ಬರೆದಿರುವ ಆ ಹರಾಮ್ಜಾದಾ ಅಧಿಕಾರಿಯನ್ನು ನಮ್ಮೆದುರು ಕರೆತಂದು ನಿಲ್ಲಿಸಿ.” ಎಂದರು.

ನಿತಿಗೋತಾ ಮತ್ತು ಅಂಬದಹಾರ ಹಳ್ಳಿಗಳಲ್ಲಿ ಓಡಿಶಾದಾದ್ಯಂತ ಇರುವ 15,000 ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಇರುವಂತೆ, ಅರಣ್ಯಗಳನ್ನು ಸಾಮುದಾಯಿಕವಾಗಿ ಸಂರಕ್ಷಿಸುವ ಒಂದು ಸಂಪ್ರದಾಯವೇ ಇದೆ. ಇದನ್ನು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಸ್ವತಃ ಅಧ್ಯಯನ ಮಾಡಬಹುದು. ಉದಾಹರಣೆಗೆ, ಹಳ್ಳಿಯಲ್ಲೇ ಇವರುಗಳು ಒಂದು ಪಾಳಿ ರಚಿಸಿಕೊಂಡಿದ್ದು, ಪ್ರತಿದಿನ ಐದು ಮಂದಿ ಹಳ್ಳಿಗರು ಅವರ ವ್ಯಾಪ್ತಿಯ ಕಾಡನ್ನು ಕಾಯುವ ಕಾಯಕ ಮಾಡುತ್ತಾರೆ ಮತ್ತು ಅಲ್ಲಿ ಯಾವುದೇ ಮರ ಕಡಿಯುವ, ಮರ ಕಳ್ಳಸಾಗಣೆ ಮಾಡುವ ದಂಧೆಗಳು ನಡೆಯದಂತೆ ಎಚ್ಚರ ವಹಿಸುತ್ತಾರೆ.

PHOTO • Chitrangada Choudhury

ನಿತಿಗೋತಾದ ಅರಣ್ಯ ಸಂರಕ್ಷಣಾ ತಂಡದ ಪಾಳಿ ವ್ಯವಸ್ಥೆಯನ್ನು ತೋರಿಸುತ್ತಿರುವ ಪಂಚಾಯತಿ ಸಮಿತಿಯ ಸದಸ್ಯೆ ಶಕುಂತಲಾ ದೆಹೂರಿ

“ನಾವು ಕಾಡನ್ನು ಕಾಪಾಡಿಕೊಂಡರೆ, ಕಾಡು ನಮಗೆ ಅನ್ನ ನೀಡುತ್ತದೆ”, ಎನ್ನುತ್ತಾರೆ ನಾವು ಭೇಟಿ ನೀಡಿದ ದಿನ ಅರಣ್ಯ ರಕ್ಷಣೆಯ ಪಾಳಿಯಲ್ಲಿ ಕಾರ್ಯ ನಿರತರಾಗಿದ್ದ ಕವಿರಾಜ್ ದೆಹೂರಿ. “ನಮಗೆ ಅರಣ್ಯದ ಮೇಲೆ ಯಾವುದೇ ಹಕ್ಕಿಲ್ಲ ಎಂದು ಗ್ರಾಮಸಭೆಯಲ್ಲಿ ಕುಳಿತು ಯಾವ ಬಾಯಿಯಲ್ಲಿ ನಮಗೆ ಹೇಳಲು ಸಾಧ್ಯ ಮತ್ತು ಅದನ್ನು OMC ಗೆ ಕೊಡಿ ಎಂದು ನಾವು ಸರಕಾರಕ್ಕೆ ಹೇಳುವುದು ಸಾಧ್ಯವೇ?” ಎಂದು ಪ್ರಶ್ನಿಸುವ ಅವರು, ಗ್ರಾಮಸ್ಥರ ಒಪ್ಪಿಗೆ ಇದೆ ಎನ್ನಲಾಗುವ ಕಾಗದ ಪತ್ರಗಳಲ್ಲಿರುವ ಹಲವು ಸುಳ್ಳುಗಳತ್ತ ಬೊಟ್ಟು ಮಾಡುತ್ತಾರೆ.

PHOTO • Chitrangada Choudhury

ಹಳ್ಳಿಯ ಪಂಚಾಯತಿ ನಿರ್ಣಯದಲ್ಲಿ ಸುಜಿತ್ ದುಬೆ ಮತ್ತು ಹೇಮಲತಾ ಅವರ ಹೆಸರುಗಳಿವೆ. ಆ ದಾಖಲೆ ಹೇಳುವ ಗ್ರಾಮಸಭೆ ನಡೆದ ದಿನ ಅವರಿಬ್ಬರು ಕ್ರಮವಾಗಿ ನಾಲ್ಕನೇ ಮತ್ತು ಐದನೇ ತರಗತಿಗಳಲ್ಲಿದ್ದರು

ಮೇಲಿನ ಜಾಗರ ಹಳ್ಳಿಯಲ್ಲಿ, ಹಳ್ಳಿಗರು ಗುಂಪು ಸೇರಿ ಅವರದೆನ್ನಲಾದ ನಿರ್ಣಯದ ಪ್ರತಿಯನ್ನು ನೋಡುವಾಗ ‘ಫೋರ್ಜರಿ’ ‘ಫೋರ್ಜರಿ’ ಎಂದು ಗೊಣಗುತ್ತಿದ್ದರು. ಗೋವಿಂದ ಮುಂಡಾ ಅವರಿಗಂತೂ ಅವರ ಹೆಸರು ಎರಡೆರಡು ಬಾರಿ ಬಂದಿರುವುದು ಅಚ್ಚರಿ ತಂದಿತ್ತು; ಅಲ್ಲದೆ ಎರಡೂ ಬಾರಿ ಸಹಿಗಳು ಬೇರೆ ಬೇರೆ ರೀತಿ ಇದ್ದವು. “ನಾನು ಸಹಿ ಮಾಡುವುದು ಹೀಗೆ” ಎಂದು ಅವರು ತಮ್ಮ ಸರಿಯಾದ ಸಹಿಯನ್ನು ತೋರಿಸುತ್ತಾರೆ.

ಸೇರಿದ ಜನ ಅವರ ಗ್ರಾಮದ್ದೆನ್ನಲಾದ ನಿರ್ಣಯದ ಪ್ರತಿಯಲ್ಲಿರುವ ಹೆಸರುಗಳನ್ನು ಓದುತ್ತಾ ಹೋದಂತೆ, ಅದರಲ್ಲಿರುವ ಅರ್ಧದಷ್ಟು ಹೆಸರುಗಳು ಅವರ ಗ್ರಾಮದವರದ್ದೇ ಅಲ್ಲ ಎಂದು ತಿಳಿದುಕೊಳ್ಳುತ್ತಾರೆ. ಗ್ರಾಮಸ್ಥರಲ್ಲೊಬ್ಬರಾದ ಖಾಗೇಶ್ವರ ಪುರ್ತಿಯವರು “OMC ನಮ್ಮ ಹೊಲಗಳನ್ನು ಹಾಳು ಮಾಡಿದೆ, ತೊರೆಗಳನ್ನು ನಾಶಗೊಳಿಸಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಹಲವು ಬಾರಿ ದೂರು ಕೊಟ್ಟಿದ್ದೇವೆ. ಆದರೆ ನಮ್ಮ ಮಾತು ಯಾರು ಕೇಳ್ತಾರೆ? ಅವರ ಪ್ರಸ್ತಾಪವನ್ನು ಚರ್ಚೆ ಮಾಡುವುದಕ್ಕೆ ನಾವು ಗ್ರಾಮಸಭೆ ಸೇರಿದ್ದೇ ಆದರೆ ಇಂತಹ ತಲೆಕೆಟ್ಟ ನಿರ್ಣಯ ತೆಗೆದುಕೊಳ್ಳುತ್ತೇವೆಯೇ?”, ಎಂದು ಪ್ರಶ್ನಿಸುತ್ತಾರೆ.

PHOTO • Chitrangada Choudhury

ಗೋವಿಂದ ಮುಂಡಾ ಅವರ ಹೆಸರು ಒಂದಕ್ಕಿಂತ ಹೆಚ್ಚು ಬಾರಿ ಬೇರೆ ಬೇರೆ ರೀತಿಯ ಸಹಿ ಮತ್ತು ಹೆಬ್ಬೆಟ್ಟಿನ ಗುರುತುಗಳೊಂದಿಗೆ  ಕಾಣಿಸಿಕೊಂಡಿದೆ

ಅಂಬದಹಾರದಲ್ಲಿ ಮಾಜಿ ಸರಪಂಚ ಗೋಪಾಲ್ ಮುಂಡಾ ಅವರು, ನಿರ್ಣಯದಲ್ಲಿ ಅವರ ವ್ಯಾಪ್ತಿಯಲ್ಲಿ ಬರುವ ನಾಲ್ಕು ಗ್ರಾಮಗಳಲ್ಲಿ ನಾಲ್ಕು ಬಾರಿ ಅವರ ಹೆಸರು ಕಾಣಿಸಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಪ್ರತಿಯೊಂದು ನಿರ್ಣಯವೂ ಕೂಡ ಅವರ “ಅಧ್ಯಕ್ಷತೆಯ” ಸಭೆಯಲ್ಲೇ ಈ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳುತ್ತಿದೆ. “ನನ್ನ ಹೆಸರಲ್ಲಿ ಹೀಗೆ ಹಸಿಹಸಿ ಸುಳ್ಳು ಹೇಳುತ್ತಿರುವವರು ಯಾರು? ನನ್ನನ್ನು ಭುವನೇಶ್ವರ ಅಥವಾ ದಿಲ್ಲಿಯ ನ್ಯಾಯಾಲಯಕ್ಕೆ ಕರೆದುಕೊಂಡು ಹೋದರೆ, ನಮ್ಮ ಹಳ್ಳಿಗಳಲ್ಲಿ ಇಂತಹ ಸಭೆಗಳು ಆಗಿಯೇ ಇಲ್ಲ ಎಂದು ನಾನು ತಲೆ ಎತ್ತಿ ಧೈರ್ಯದಿಂದ ಹೇಳುತ್ತೇನೆ. ಈ ಕಾಡುಗಳ ಕಾರಣದಿಂದಾಗಿ ನಮಗೆ ನೀರು, ಆಹಾರ ಸಿಗುತ್ತಿದೆ. ಅವರು ನಮ್ಮ ಸಂಪತ್ತು ಕಸಿದು ಶ್ರೀಮಂತರಾಗುತ್ತಿದ್ದಾರೆ. ನಾವಿಲ್ಲಿ ದುಸ್ಥಿತಿಯಲ್ಲಿದ್ದೇವೆ”, ಎಂದವರು ಸಿಟ್ಟಿನಿಂದ ಹೇಳುತ್ತಾರೆ.

ದೋನ್ಲಾದಲ್ಲಿ, ಹತಾಶ ಮುಖ ಹೊತ್ತ ಮಸೂರಿ ಬೆಹ್ರಾ ಹೇಳುತ್ತಾರೆ, “ಅವರು ಹೀಗ್ಯಾಕೆ ನಮ್ಮ ಹೊಟ್ಟೆಗೆ ಹೊಡೆಯುತ್ತಿದ್ದಾರೆ? ನಮ್ಮಲ್ಲಿರುವುದೇ ಇಷ್ಟು ಸ್ವಲ್ಪ”. ಅಂದಹಾಗೆ ಎಲ್ಲಾ ಹಳ್ಳಿಗರ ಪ್ರಶ್ನೆಯೂ ಒಂದೇ “ಇಷ್ಟೊಂದು ಜನ ಸೇರಿ, ಈ ರೀತಿಯ ಸಭೆ ಆದದ್ದು ಯಾವಾಗ? ಅದು ಆಗಿದ್ದಿದ್ದರೆ, ನಮಗೆ ಗೊತ್ತಾಗುತ್ತಿರಲಿಲ್ಲವೇ?”

PHOTO • Chitrangada Choudhury

ದೋನ್ಲಾ ಹಳ್ಳಿಯ ಮಸೂರಿ ಬೆಹ್ರಾ ಹೇಳುತ್ತಾರೆ, “ಅವರು ಹೀಗ್ಯಾಕೆ ನಮ್ಮ ಹೊಟ್ಟೆಗೆ ಹೊಡೆಯುತ್ತಿದ್ದಾರೆ? ನಮ್ಮಲ್ಲಿರುವುದೇ ಇಷ್ಟು ಸ್ವಲ್ಪ.”

ಹಳ್ಳಿಗರ ಕಥೆ ಬಿಡಿ. ಪ್ರತ್ಯೇಕವಾಗಿ ನಡೆದಿದೆ ಎನ್ನಲಾದ ಏಳು ಹಳ್ಳಿಗಳ ನಿರ್ಣಯ ಪ್ರತಿಗಳೆಲ್ಲವೂ ನೊಣಂಪ್ರತಿಯಂತೆ ಒಂದೇ ರೀತಿ ಇರುವುದರಲ್ಲೇ ಇಲ್ಲೇನೋ ಗೋಲ್-ಮಾಲ್ ಆಗಿದೆ ಎಂಬ ಸಂಶಯವು ಹುಟ್ಟುವುದು ಸಹಜ. ಈ ಓರಿಯಾ ಭಾಷೆಯ ನಿರ್ಣಯಗಳ ಆಂಗ್ಲ ಭಾಷಾಂತರವೂ ಕೂಡ ಒಂದೇ ರೀತಿ ಇದೆ – ಈ ವಿಚಾರವು ಸೆಪ್ಟಂಬರ್ 2015 ರಲ್ಲಿ ಅನುಮತಿ ನೀಡಿಕೆಗಾಗಿ ನಡೆದ ಅರಣ್ಯ ಸಲಹಾ ಸಮಿತಿಯ ಸಭೆಯಲ್ಲಿ (FAC) ಯಾವುದೇ ಸಂಶಯ ಮೂಡಿಸದಿರುವುದು ಆಶ್ಚರ್ಯಕರ.

PHOTO • Chitrangada Choudhury

ಏಳು ಹಳ್ಳಿಗಳ ನಿರ್ಣಯಗಳಲ್ಲಿ ಎರಡು ಹಳ್ಳಿಗಳ ನಿರ್ಣಯಗಳು ಇಲ್ಲಿವೆ. ಅರಣ್ಯ ಅನುಮತಿಗಾಗಿ ಸಲ್ಲಿಸಲಾಗಿರುವ ಈ ದಾಖಲೆಗಳನ್ನು ನಿಜವೆಂದು ನಂಬುವುದಾದರೆ, ಏಳು ವಿಭಿನ್ನ ಹಳ್ಳಿಗಳಲ್ಲಿ ನಡೆದ ಏಳು ಪ್ರತ್ಯೇಕ ಸಭೆಗಳ ಎಲ್ಲಾ ನಿರ್ಣಯಗಳು ಅಕ್ಷರಶಃ ಒಂದೇ ಆಗಿದ್ದವು

ಗುರುತು ಬಹಿರಂಗಪಡಿಸಲಿಚ್ಛಿಸದ FAC ಸದಸ್ಯರೊಬ್ಬರ ಪ್ರಕಾರ, “ಈ ವ್ಯವಸ್ಥೆಯಲ್ಲಿ, ಗಣಿಗಾರಿಕೆಗೆ ಅನುಮತಿ ನೀಡಲು ತುಂಬಾ ಒತ್ತಡ ಇದೆ.  ಹಿಂದೆ ಈ ಬಗ್ಗೆ ಪ್ರಶ್ನಿಸಲು, ಉಸ್ತುವಾರಿ ನೋಡಿಕೊಳ್ಳಲು ಜನ ಇದ್ದರು. ಆದರೆ ಈಗ ಅದಕ್ಕೆಲ್ಲ ಸಮಯವೂ ಇಲ್ಲ. ನಾವು ಕೆಲಸ ಮಾಡುವುದನ್ನೂ ಅವರು ಬಯಸುವುದಿಲ್ಲ’’.

*****

ದೊಡ್ಡ ಪ್ರಶ್ನೆ ಎಂದರೆ: ಹಳ್ಳಿಗರನ್ನು ಯಾಕೆ ಹೀಗೆ ಮೋಸಗೊಳಿಸಬೇಕು? ಭಾರತದಲ್ಲಿರುವ ಸುಮಾರು ಒಂದೂವರೆ ಕೋಟಿ ಅರಣ್ಯವಾಸಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಜಾರಿಗೆ ತಂದಿರುವ ಅರಣ್ಯ ಹಕ್ಕುಗಳ ಕಾಯಿದೆಯಡಿ (FRA), ಅವರ ಸಾಂಪ್ರದಾಯಿಕ ಅರಣ್ಯವನ್ನು ಅರಣ್ಯೇತರ ಬಳಕೆಗಳಿಗಾಗಿ ‘ಪಥ ಬದಲಿಸಲು (ಕಾಡು ಕಡಿಯಲು ಬದಲಾಯಿಸುವ ಸರ್ಕಾರಿ ಭಾಷೆ), ಗ್ರಾಮದ 50% ವಯಸ್ಕರ ಒಪ್ಪಿಗೆ ಬೇಕಾಗುತ್ತದೆ. ಈ ಪ್ರಕರಣದಲ್ಲಿ OMC ಯು 1409 ಹೆಕ್ಟೇರ್ ಅರಣ್ಯ ಭೂಮಿಯನ್ನು ಗಣಿಗಾರಿಕೆಗಾಗಿ ಬಳಸಿಕೊಂಡು, ಅಲ್ಲಿಂದ 300 ಮಿಲಿಯನ್ ಟನ್ ಕಬ್ಬಿಣದ ಅದಿರು ಹೊರತೆಗೆಯಲು ನಿರ್ಧರಿಸಿದೆ.

2006 ರಲ್ಲಿ ಜಾರಿಗೆ ಬಂದ FRA ಅರಣ್ಯ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಲಕ್ಷಾಂತರ ಮಂದಿಗೆ ವಿಳಂಬವಾಗಿ ದೊರೆತ ಸವಲತ್ತಾಗಿದ್ದು, ಅದಕ್ಕಿಂತ ಮೊದಲು ಅವರ ಮನೆ, ಬದುಕು ಮತ್ತು ಭೂಮಿಗೆ ಯಾವುದೇ ಕಾನೂನುಬದ್ಧತೆ ಇರಲಿಲ್ಲ. ವಸಾಹತುಶಾಹಿ ಯುಗದ ‘ಚಾರಿತ್ರಿಕ ಅನ್ಯಾಯ’ ವನ್ನು ಸರಿಪಡಿಸಲು ಈ ಕಾಯಿದೆಯನ್ನು ಜಾರಿಗೆ ತರುವ ಮೂಲಕ ತಮ್ಮದೇ ನೆಲದಲ್ಲಿ ಅತಿಕ್ರಮಣಕಾರರಾಗಿ ಬದುಕುತ್ತಿದ್ದ ಅರಣ್ಯವಾಸಿ ಸಮುದಾಯಗಳಿಗೆ ನ್ಯಾಯ ದೊರಕಿತ್ತು.

FRA ಅಡಿ, ಹಳ್ಳಿಗರು ಸಾಂಪ್ರದಾಯಿಕವಾಗಿ ಬದುಕುತ್ತಾ ಬಂದಿರುವ ಅರಣ್ಯಗಳಲ್ಲಿ ಅವರ ಹಕ್ಕುಗಳನ್ನು ಗುರುತಿಸಿದ ಬಳಿಕವಷ್ಟೇ ಆ ಜಾಗವನ್ನು ಕೈಗಾರಿಕೆಗಳು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಅವರಿಗೆ ವೈಯಕ್ತಿಕವಾಗಿ (ಸ್ಥ್ರೀಯರ ಮತ್ತು ಪುರುಷರ ಹೆಸರುಗಳಲ್ಲಿ) ಭೂಮಿಯ ಹಕ್ಕುಪತ್ರಗಳನ್ನು ಮತ್ತು ಸಮುದಾಯವಾಗಿ ಹಳ್ಳಿಗೆ ಹಕ್ಕುಪತ್ರವನ್ನು ನೀಡಿದ ಬಳಿಕ ಇದು ಸಾಧ್ಯವಾಯಿತು.

ಓಡಿಶಾದ ಸಮಾಜ ಸೇವಾ ಸಂಸ್ಥೆ ವಸುಂಧರಾ ನಡೆಸಿದ ಅಧ್ಯಯನವನ್ನು ಆಧರಿಸಿದ ಚಿತ್ರ ಇದಾಗಿದ್ದು, ಕಿಯೋಂಜಾರ್ ಜಿಲ್ಲೆಯಲ್ಲಿ 336615 ಹೆಕ್ಟೇರ್ ಜಾಗದಲ್ಲಿ ಸಮುದಾಯ ಅರಣ್ಯಗಳಿದ್ದು, ಅಲ್ಲಿಗೆ ಸಮುದಾಯ ಅರಣ್ಯದ ಹಕ್ಕುಗಳನ್ನು ನೀಡಬಹುದಾಗಿದೆ. (ಕೃಪೆ: ವಸುಂಧರಾ)

ಇದು ಯಾಕೆ ಮುಖ್ಯವಾಗುತ್ತದೆ ಎಂದರೆ, ತಾವು ಸಾಂಪ್ರದಾಯಿಕವಾಗಿ ಬಳಸುತ್ತಾ ಬಂದಿರುವ ಅರಣ್ಯಕ್ಕೆ ಯಾವುದೇ ಪ್ರಸ್ತಾವಿತ ಹಾನಿಗಳ ಕುರಿತು ನಿರ್ಧಾರ ಕೈಗೊಳ್ಳುವ ಶಕ್ತಿ ಅವರಲ್ಲಿರುತ್ತದೆ. ಇನ್ನು ಈ ಅರಣ್ಯಭಾಗವನ್ನು ಕೈಗಾರಿಕೆಗಳಿಗೆ ಹಸ್ತಾಂತರಿಸಲು ಅವರು ನಿರ್ಧರಿಸಿದರೆ, ಅವರು ಅದಕ್ಕೆ ಸೂಕ್ತ ಪರಿಹಾರಕ್ಕೂ ಅರ್ಹತೆ ಪಡೆದಿರುತ್ತಾರೆ.

ಅಂತಹ ಗುರುತಿಸುವಿಕೆ ಇಲ್ಲದಿದ್ದರೆ, ಅವರ ಸಿರಿವಂತ ಸಂಪನ್ಮೂಲವನ್ನು ಕಾಸಿನ ಕಾರಣದಿಂದಾಗಿ ಬೇರೆ ಉದ್ದೇಶಗಳಿಗೆ ಬಳಸಿದಾಗಲೂ ಅವರು ಹೊರಗುಳಿದಿರುತ್ತಾರೆ. ಉದಾಹರಣೆಗೆ, OMC ಪ್ರತೀ ವರ್ಷ ಈ ಜಾಗಗಳಿಂದ ಕಬ್ಬಿಣದ ಅದಿರು ತೆಗೆದು ಮಾರುವ ಮೂಲಕ 2000 ಕೋಟಿ ರೂಪಾಯಿಗಳ ಆದಾಯವನ್ನು ನಿರೀಕ್ಷಿಸುತ್ತಿದೆ. ಇದು ಒಟ್ಟು ಗಣಿಯ ಜೀವನಾವಧಿಯಲ್ಲಿ ಅಂದಾಜು 79,000 ಕೋಟಿ ರೂಪಾಯಿಗಳಷ್ಟಾಗಬಹುದು. “ಆದರೆ, ಈ ವ್ಯವಸ್ಥೆಯಿಂದ ಸ್ಥಳೀಯ ಬುಡಕಟ್ಟುವಾಸಿಗಳಿಗೆ ಏನು ಅನುಕೂಲವಾಗುತ್ತದೆ?” ಎಂದು ಪ್ರಶ್ನಿಸುತ್ತಾರೆ ಒಬ್ಬರು ಹಿರಿಯ ಅರಣ್ಯಾಧಿಕಾರಿ.

ಜನವರಿ 2016 ರಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟು ಪಂಗಡಗಳ (ದೌರ್ಜನ್ಯ ನಿರೋಧಕ) ಕಾಯಿದೆಗೆ ತಿದ್ದುಪಡಿ ತರಲಾಗಿದ್ದು, ಅದು FRA ಕಾನೂನನ್ನು ಇನ್ನಷ್ಟು ಬಲಪಡಿಸಿದೆ ಹಾಗೂ ಅರಣ್ಯ ಹಕ್ಕುಗಳ ನಿರಾಕರಣೆ ಶಿಕ್ಷಾರ್ಹ ಅಪರಾಧ ಎಂದು ಹೇಳಿದೆ.

ಆದರೆ, ಈ ಏಳು ಹಳ್ಳಿಗಳಲ್ಲಿ ಅರಣ್ಯ ಭೂಮಿಯ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಹಲವರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಹಕ್ಕುಪತ್ರ ಸಿಕ್ಕ ಕೆಲವರಿಗೂ ಅವರಿಗೆ ಏನನ್ನು ಹೇಳಲಾಗಿತ್ತೋ ಅದಕ್ಕಿಂತ ಕಡಿಮೆ ಪ್ರಮಾಣದ ಭೂಮಿಗೆ (25 ರಿಂದ 80 ಡೆಸಿಮಲ್ ಗಳು) ಹಕ್ಕುಪತ್ರ ಪಡೆದಿದ್ದಾರೆ. ಇದಲ್ಲದೆ, ದೋನ್ಲಾ ಮತ್ತು ಮೇಲಿನ ಕೈನ್ಸಾರಿಗಳಲ್ಲಿ ಜಿಲ್ಲಾಡಳಿತವು ಯಾವುದೇ ಹಕ್ಕುಪತ್ರಗಳನ್ನು ಈ ತನಕ ವಿತರಿಸಿಲ್ಲ. ಕಿಯೋಂಜಾರ್ ಪ್ರದೇಶದಲ್ಲಿ FRA ಕ್ಲೇಮುಗಳನ್ನು ಇತ್ಯರ್ಥ ಮಾಡಲು ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರು ಹೆಸರು ಬಹಿರಂಗಪಡಿಸಲು ಇಚ್ಛಿಸದೇ ಮಾತನಾಡುತ್ತಾ, “ದೋನ್ಲಾ ಹಳ್ಳಿಯ ಅರಣ್ಯಭೂಮಿಯನ್ನು ಗಣಿಗಾರಿಕೆ ಮಾಡಲು OMC ಗೆ ಕೊಡಲಾಗುತ್ತದೆ ಎಂದು ನನ್ನ ಮೇಲಧಿಕಾರಿಗಳು ನನಗೆ ಹೇಳಿದ್ದಾರೆ. ಹಾಗಾಗಿ ಈ ಹಳ್ಳಿಗಳ ಜನರ ಕ್ಲೇಮುಗಳನ್ನು ನಿರ್ಲಕ್ಷಿಸಲು ನನಗೆ ಸೂಚಿಸಲಾಗಿದೆ”, ಎಂದರು.

ಇಂತಹದೇ ಇನ್ನೊಂದು ಅಕ್ರಮವೆಂದರೆ ಏಳು ಹಳ್ಳಿಗಳಲ್ಲಿ ಈ ತನಕ ಯಾವುದೇ ಹಳ್ಳಿಗೆ ಸಾಮುದಾಯಿಕ ಹಕ್ಕುಪತ್ರ ಸಿಕ್ಕಿಲ್ಲ. ಅವರ ಸಾಂಪ್ರದಾಯಿಕ ಪರಿಧಿಯ ಒಳಗೇ ಅರಣ್ಯ ಭೂಮಿಯನ್ನು ಹೊಂದಿದ್ದು, ಕಟ್ಟಿಗೆಯಂತಹ ಸಣ್ಣಪುಟ್ಟ ಅರಣ್ಯ ಉತ್ಪನ್ನಗಳನ್ನಾಧರಿಸಿಯೇ ಬದುಕುತ್ತಿದ್ದರೂ, ಕಾನೂನು ಬದ್ಧವಾಗಿ ಅರಣ್ಯ ಸಂಪನ್ಮೂಲದ ಹಕ್ಕನ್ನು ಹೊಂದಿದ್ದರೂ, ಸಂಪ್ರದಾಯಕ್ಕನುಗುಣವಾಗಿ ಅವರು ತಮ್ಮ ಅರಣ್ಯವನ್ನು ತಾವೇ ರಕ್ಷಿಸುತ್ತಿದ್ದರೂ ಅವರಿಗೆ ಈ ಹಕ್ಕುಗಳನ್ನು ನೀಡಲಾಗಿಲ್ಲ.

FRA ಕಾನೂನಿನ ಪ್ರಕಾರ ಸಕಾರಣವಾಗಿ ವಿವರಿಸಬೇಕೆಂದು ಸ್ಪಷ್ಟವಾಗಿದ್ದರೂ, ಕಿಯೋಂಜಾರ್ ನ ಅಂದಿನ ಜಿಲ್ಲಾಧಿಕಾರಿ ವಿಷ್ಣು ಸಾಹು ಅವರು, ಸಮುದಾಯದ ಕ್ಲೇಮುಗಳನ್ನು ಯಾಕೆ ಇತ್ಯರ್ಥ ಮಾಡಿಲ್ಲ ಎಂಬುದನ್ನು ದಾಖಲಿಸಿಲ್ಲ. ಬದಲಿಗೆ ಜನವರಿ 19, 2003 ರಂದು ಅವರು ಆ ಅರಣ್ಯ ಭೂಮಿಯನ್ನು OMC ಗೆ ಗಣಿಗಾರಿಕೆಗೆ ಒಪ್ಪಿಸುವುದಕ್ಕಾಗಿ ಸಲ್ಲಿಸಲಾಗಿರುವ ಖೊಟ್ಟಿ ಪ್ರಮಾಣಪತ್ರವೊಂದರಲ್ಲಿ, ಎಲ್ಲ ಏಳು ಹಳ್ಳಿಗಳಿಗೆ ಅವರ ಅರಣ್ಯ ಹಕ್ಕುಗಳನ್ನು ನೀಡಲಾಗಿದೆ ಎಂದು ದಾಖಲಿಸಿದ್ದಾರೆ.

OMC ಯ ಪರವಾಗಿ ಕೇಂದ್ರ ಪರಿಸರ ಖಾತೆಗೆ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ ಓಡಿಶಾ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಕಾರ್ಯದರ್ಶಿ ಎಸ್ ಸಿ ಮೋಹಪಾತ್ರ ಅವರನ್ನು ಸಂಪರ್ಕಿಸಿದಾಗ, ಅವರು “ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ” ಎಂದು ದೂರವಾಣಿ ಸಂಪರ್ಕ ತುಂಡರಿಸಿದರು ಮತ್ತು ನಮ್ಮ ಆ ಬಳಿಕದ ಯಾವುದೇ ಕರೆಗಳನ್ನು ಸ್ವೀಕರಿಸಲಿಲ್ಲ.

PHOTO • Chitrangada Choudhury

ನಿತಿಗೋತಾದಂತಹ ಓಡಿಶಾದ ಸಾವಿರಾರು ಹಳ್ಳಿಗಳಲ್ಲಿ ಜನಸಮುದಾಯಗಳು ಅರಣ್ಯ ಸಂರಕ್ಷಣೆಯಲ್ಲಿ ಸಕ್ರಿಯವಾಗಿವೆ

2015ರ ಆದಿಭಾಗದಲ್ಲಿ, ಹಳ್ಳಿಗರಿಗೆ ಈ ಮೋಸದ ಬಗ್ಗೆ ಅರಿವಾದಾಗ, ಏಳರಲ್ಲಿ ಎರಡು ಹಳ್ಳಿಗಳಾದ ನಿತಿಗೋತಾ ಮತ್ತು ಅಂಬದಹಾರ ಗ್ರಾಮಸ್ಥರು ಈ ಎಲ್ಲ ಅಕ್ರಮಗಳ ಬಗ್ಗೆ ವಿವರವಾಗಿ ಬರೆದು, ಪರಿಸರ ಮತ್ತು ಬುಡಕಟ್ಟು ವ್ಯವಹಾರಗಳ ಇಲಾಖೆಗೆ ದೂರು ನೀಡಿದ್ದರು. ಆದಿವಾಸಿಗಳ ಸಮುದಾಯಿಕ ಹಕ್ಕುಗಳನ್ನು ಸಂರಕ್ಷಿಸುವ ಸಾಂವಿಧಾನಿಕ ಜವಾಬ್ದಾರಿಯನ್ನು ಹೊತ್ತಿರುವ ಓಡಿಶಾದ ರಾಜ್ಯಪಾಲರಿಗೂ ಈ ಬಗ್ಗೆ ದೂರು ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಕಳೆದ ಮೂರು ತಿಂಗಳುಗಳಲ್ಲಿ ಈ ಯಾವುದೇ ಪ್ರಾಧಿಕಾರಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ.

ಬದಲಿಗೆ ಪರಿಸ್ಥಿತಿಯು ಹದಗೆಡುತ್ತಾ ಸಾಗಿದ್ದು, ಡಿಸೆಂಬರ್ 2015, 28-30 ರ ನಡುವೆ ಕೇಂದ್ರ ಪರಿಸರ ಇಲಾಖೆಯ ಅರಣ್ಯ ಸಲಹಾ ಸಮಿತಿಯ ಮೂವರು ಸದಸ್ಯರ ಸಮಿತಿಯು ಗಣಿಗಾಗಿಕೆಗಾಗಿ ಸ್ಥಳ ಪರಿಶೀಲನೆಗೆ ಕಿಯೋಂಜಾರ್ ಗೆ ಬಂದಿದೆ. ಅವರಿಗೆ ಕೊಡಲಾಗಿದ್ದ ಜವಾಬ್ದಾರಿಯಲ್ಲಿ OMC ಯ ಪ್ರಸ್ತಾಪಿತ ಗಣಿಗಾರಿಕೆ ವಲಯದಲ್ಲಿ FRA ಅನುಷ್ಠಾನದ ಬಗ್ಗೆ ಪರಿಶೀಲಿಸುವುದು ಸೇರಿತ್ತು.

ಡಿಸೆಂಬರ್ 29 ರಂದು ನಾವು ತಂಡದ ಮುಖ್ಯಸ್ಥರು ಮತ್ತು ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯ ಡೈರೆಕ್ಟರ್ ಜನರಲ್ ಅನಿಲ್ ಕುಮಾರ್ ಅವರನ್ನು ಭೇಟಿ ಮಾಡಿದೆವು. ಅವರು ಕಿಯೋಂಜಾರಿನ ಹೊಟೇಲಿನಲ್ಲಿ ತಂಗಿದ್ದರು. ನಾವು OMC ಅಧಿಕಾರಿಗಳ ಉಪಸ್ಥಿತಿಯಲ್ಲೇ ಅವರೊಂದಿಗೆ ಮಾತನಾಡಬೇಕೆಂದು ಅವರು ಒತ್ತಾಯಿಸಿದರು. ಅವರು ಅಲ್ಲಿ ಎಲ್ಲ ಒಟ್ಟಾಗಿ ಬೆಳಗಿನ ಉಪಹಾರ ಸೇವಿಸುತ್ತಿದ್ದರು. ಅವರ ಭೇಟಿಗೆ ಸಂಬಂಧಿಸಿ ಯಾವುದೇ ಪ್ರಶ್ನೆಗೆ ಉತ್ತರಿಸಲು ಕುಮಾರ್ ನಿರಾಕರಿಸಿದರು. FRA ಅನುಷ್ಠಾನವನ್ನು ಹೇಗೆ ಮಾಡಲಾಗುತ್ತಿದೆ ಎಂಬುದನ್ನು ಹೇಳುವುದಕ್ಕೂ ಅವರು ನಿರಾಕರಿಸಿದರು. “FAC ನ ಕೆಲಸ ಗೌಪ್ಯವಾಗಿರುತ್ತದೆ” ಎಂದವರು ಹೇಳಿದರು.

ಹಳ್ಳಿಗಳ ಜನರು ದಾಖಲೆಗಳಲ್ಲಿ ಫೋರ್ಜರಿ ಮಾಡಲಾಗಿದೆ ಎಂದು ದೂರಿರುವ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಲಿದ್ದೀರಿ, ಆ ಸ್ಥಳಗಳಿಗೆ ಭೇಟಿ ನೀಡುವಿರಾ ಎಂದು ಒತ್ತಾಯಪೂರ್ವಕವಾಗಿ ಕೇಳಿದಾಗ, ಅವರು ಉತ್ತರಿಸುವ ಬದಲು, ಆ ಬಗ್ಗೆ ತಮಗೆ ಇ-ಮೇಲ್ ನಲ್ಲಿ ವಿವರಗಳನ್ನು ನೀಡುವಂತೆ ಹೇಳಿದರು.

ಕೆಲವು ದಿನಗಳ ಹಿಂದೆ ದೇಶದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಸರಕಾರದ ಸಾಧನೆಗಳ ಬಗ್ಗೆ ವಿವರಿಸುವಾಗ, “ಪರಿಸರ ಸಂಬಂಧಿ ಅನುಮತಿಗಳನ್ನು ನಿಯಮಪೂರ್ವಕವಾಗಿ ನೀಡುವಂತೆ ಮಾಡಲಾಗಿದೆ” ಎಂದಿದ್ದರು.

ಡಿಸೆಂಬರ್ 30 ರಂದು, ಮೂರು ದಿನಗಳ ಸ್ಥಳ ಪರಿಶೀಲನೆ ಮುಗಿಸಿದ FAC ತಂಡವು ಕಿಯೊಂಜಾರ್ ನಿಂದ ಹೊರಟಿತು. ಅವರು ಯಾವುದೇ ಹಳ್ಳಿಗರ ಜೊತೆ ಮಾತನಾಡಲಿಲ್ಲ ಮತ್ತು ಯಾವುದೇ ಹಳ್ಳಿಗಳನ್ನು ಭೇಟಿ ಮಾಡಲಿಲ್ಲ.

ಅಲ್ಲಿಗೆ ಅವರ ‘ಸ್ಥಳ ಪರಿಶೀಲನೆ’ ಯು ಪೂರ್ಣಗೊಂಡಿತ್ತು.

ಅನುವಾದ : ರಾಜಾರಾಂ ತಲ್ಲೂರು

Chitrangada Choudhury

ಚಿತ್ರಾಂಗದಾ ಚೌಧರಿ ಅವರು ಹವ್ಯಾಸಿ ಪತ್ರಕರ್ತರು ಹಾಗೂ ನಮ್ಮ 'ಪರಿ'ಯ ಕೇಂದ್ರ ತಂಡದಲ್ಲಿ ಒಬ್ಬರು.

Other stories by Chitrangada Choudhury
Translator : Rajaram Tallur

ಅನುವಾದಕರು: ರಾಜಾರಾಂ ತಲ್ಲೂರು ಫ್ರೀಲಾನ್ಸ್ ಪತ್ರಕರ್ತ ಭಾಷಾಂತರಕಾರ. ಮುದ್ರಣ ಮತ್ತು ವೆಬ್ ಪತ್ರಿಕೋದ್ಯಮಗಳಲ್ಲಿ ಒಟ್ಟು 25 ವರ್ಷಗಳಿಗೂ ಹೆಚ್ಚು ಅನುಭವ ಇದೆ; ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಭಾಷಾಂತರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಆರೋಗ್ಯ, ವಿಜ್ಞಾನ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಆಸಕ್ತಿ.

Other stories by Rajaram Tallur