ಭಾನ್ವರಿದೇವಿಯ 13 ರ ಪ್ರಾಯದ ಮಗಳು ಹಳ್ಳಿಯ ಕೆಲ ಮೇಲ್ಜಾತಿಯ ಪುಂಡ ಯುವಕರಿಂದ ಸಜ್ಜೆಯ ಹೊಲದಲ್ಲಿ ಅತ್ಯಾಚಾರಕ್ಕೊಳಗಾದಾಗ ಭಾನ್ವರಿದೇವಿ ಆ ಅತ್ಯಾಚಾರಿಗಳನ್ನು ಬೆಂಡೆತ್ತಲು ಸ್ವತಃ ಲಾಠಿ ಹಿಡಿದು ಹೊರಟಿದ್ದಳು. ಪೋಲೀಸ್ ಅಥವಾ ನ್ಯಾಯಾಲಯದ ಬಗ್ಗೆ ಆಕೆಗೆ ಯಾವ ನಂಬಿಕೆಯೂ ಇರಲಿಲ್ಲ. ಅಷ್ಟಕ್ಕೂ ಅಹಿರೋಂಕಾ ರಾಂಪುರ ಎಂಬ ಮೇಲ್ಜಾತಿಯ ಶಕ್ತಿಗಳಿಂದಾಗಿ ಆಕೆಗೆ ಈ ಎರಡು ಮೂಲಗಳಿಂದಲೂ ಯಾವುದೇ ಬಗೆಯ ಪರಿಹಾರವು ದೊರಕುವ ನಿರೀಕ್ಷೆಗಳಿರಲಿಲ್ಲ. "ಜಿಲ್ಲೆಯ ಜಾತಿ ಪಂಚಾಯತ್ ನನಗೆ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿತ್ತು. ಆದರೆ ಅವರು ನನ್ನನ್ನೂ, ನನ್ನ ಕುಟುಂಬವನ್ನೂ ರಾಂಪುರದಿಂದಲೇ ಹೊರಗಟ್ಟಿದರು," ಎನ್ನುತ್ತಿದ್ದಾಳೆ ಭಾನ್ವರಿದೇವಿ. ಈ ಅತ್ಯಾಚಾರವು ನಡೆದು ಬರೋಬ್ಬರಿ ಒಂದು ದಶಕವೇ ಕಳೆದಿದ್ದರೂ ಅಜ್ಮೇರ್ ಜಿಲ್ಲೆಯಲ್ಲಿ ಯಾರಿಗೂ ಶಿಕ್ಷೆಯಾಗಿರಲಿಲ್ಲ.

ರಾಜಸ್ಥಾನದಲ್ಲಿ ಇದು ಅಂಥಾ ದೊಡ್ಡ ಸಂಗತಿಯೇನಲ್ಲ. ರಾಜ್ಯದಲ್ಲಿ ಒಂದು ಸರಾಸರಿಯ ಪ್ರಕಾರ ಪ್ರತೀ 60 ತಾಸಿನಲ್ಲಿ ಓರ್ವ ದಲಿತ ಮಹಿಳೆಯ ಅತ್ಯಾಚಾರವಾಗಿರುತ್ತದೆ .

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ವರದಿಯಲ್ಲಿರುವ ಒಂದು ಮಾಹಿತಿಯ ಪ್ರಕಾರ 1991 ರಿಂದ 1996 ರ ಅವಧಿಯಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯರ ಮೇಲೆ ನಡೆದ ದೈಹಿಕ ದೌರ್ಜನ್ಯಗಳ ಸುಮಾರು 900 ಪ್ರಕರಣಗಳು ದಾಖಲಾಗಿವೆ. ಅಂದರೆ ವರ್ಷವೊಂದಕ್ಕೆ 150 ಪ್ರಕರಣಗಳು – ಪ್ರತೀ 60 ತಾಸಿಗೆ ಒಂದು ಪ್ರಕರಣ (ರಾಷ್ಟ್ರಪತಿ ಆಳ್ವಿಕೆಯು ಜಾರಿಯಲ್ಲಿದ್ದ ಕೆಲ ತಿಂಗಳುಗಳನ್ನು ಹೊರತುಪಡಿಸಿದರೆ ಈ ಅವಧಿಯಲ್ಲಿ ರಾಜ್ಯದ ಆಡಳಿತಾಧಿಕಾರವು ಸಂಪೂರ್ಣವಾಗಿ ಭಾರತೀಯ ಜನತಾ ಪಕ್ಷದ ಹಿಡಿತದಲ್ಲಿತ್ತು). ಅಷ್ಟಕ್ಕೂ ಈ ಅಂಕಿಅಂಶಗಳು ಇಲ್ಲಿಯ ನೈಜಪರಿಸ್ಥಿತಿಯನ್ನೇನೂ ಹೇಳುತ್ತಿಲ್ಲ. ದಾಖಲಾಗದೆ ಉಳಿದಿರುವ ಪ್ರಕರಣಗಳನ್ನು ಪರಿಗಣಿಸಿದರೆ ಈ ರಾಜ್ಯದಲ್ಲಾಗುತ್ತಿರುವ ಪ್ರಕರಣಗಳ ಸಂಖ್ಯೆಯು ಇಡೀ ದೇಶದಲ್ಲೇ ಅತ್ಯಂತ ಕೆಟ್ಟದ್ದೇನೋ.

ಧೋಲಪುರ್ ಜಿಲ್ಲೆಯ ನಸ್ಕೋಡಾದಲ್ಲಿ ಇಂಥಾ ದೌರ್ಜನ್ಯಕ್ಕೊಳಗಾದ ದಲಿತ ವ್ಯಕ್ತಿಯೊಬ್ಬ ಹಳ್ಳಿಯಿಂದಲೇ ಕಾಲ್ಕಿತ್ತಿದ್ದಾನೆ. ಈ ಪ್ರದೇಶಗಳಲ್ಲಿ ಆಗಿರುವ ಅತೀ ಕೀಳುಮಟ್ಟದ ಅಮಾನವೀಯ ದೌರ್ಜನ್ಯಗಳಲ್ಲಿ ಇದೂ ಒಂದು. ಎಪ್ರಿಲ್ 1998 ರಲ್ಲಿ ರಾಮೇಶ್ವರ ಜಾತವ್ ಎಂಬ ದಲಿತನೊಬ್ಬ ಮೇಲ್ಜಾತಿಯಾದ ಗುಜ್ಜರ್ ಸಮುದಾಯದ ವ್ಯಕ್ತಿಯೊಬ್ಬನಿಗೆ ನೀಡಿದ್ದ 150 ರೂಪಾಯಿಗಳ ಸಾಲವನ್ನು ಮರಳಿ ಕೇಳಿದ್ದ. ಅದು ಇಷ್ಟೆಲ್ಲಾ ರಾದ್ಧಾಂತಗಳಿಗೆ ಮೂಲವಾಗುವುದೆಂದು ಅವನಿಗಾದರೂ ಏನು ತಿಳಿದಿತ್ತು? ಆತನ ಬೇಡಿಕೆಯಿಂದ ರೊಚ್ಚಿಗೆದ್ದ ಕೆಲ ಗುಜ್ಜರ್ ಯುವಕರು ಸೇರಿಕೊಂಡು ಜಾತವನ ಮೂಗಿನಲ್ಲಿ ತೂತು ಕೊರೆದು, ಆ ತೂತಿನಿಂದ ಸುಮಾರು ಒಂದು ಮೀಟರ್ ಉದ್ದದ, 2 ಮಿಲಿಮೀಟರ್ ದಪ್ಪದ ಸೆಣಬಿನ ದಾರವನ್ನು ತೂರಿಸಿ ಮೂಗಿನ ಹೊಳ್ಳೆಗಳಿಂದ ತೆಗೆದಿದ್ದರು. ನಂತರ ಈ ಮೂಗುದಾರವನ್ನು ಹಿಡಿದುಕೊಂಡೇ ಆತನನ್ನು ಹಳ್ಳಿಯ ಗಲ್ಲಿಗಳಲ್ಲಿ ಮೆರವಣಿಗೆ ಮಾಡಿಸಲಾಯಿತು.

ಈ ಘಟನೆಯು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿ ದೇಶದೆಲ್ಲೆಡೆ ಆಕ್ರೋಶಕ್ಕೆ ಗುರಿಯಾಗಿದ್ದು ಸತ್ಯ. ಇನ್ನು ಮುದ್ರಣ ಮತ್ತು ಟೆಲಿವಿಷನ್ ಮಾಧ್ಯಮಗಳಿಂದಾಗಿ ಇದು ಹೊರದೇಶಗಳಲ್ಲೂ ವರದಿಯಾಯಿತು. ಒಟ್ಟಿನಲ್ಲಿ ಇಡೀ ಪ್ರಕರಣವು ಈ ಮಟ್ಟಿಗೆ ಸುದ್ದಿಯಾದರೂ ನ್ಯಾಯ ಸಿಗುವ ಭರವಸೆಯೇನೂ ಇರಲಿಲ್ಲ. ಹಳ್ಳಿಯೊಳಗಿರುವ ಭಯದ ವಾತಾವರಣ ಮತ್ತು ಅಧಿಕಾರಶಾಹಿಯು ಹುಟ್ಟಿಸಿರುವ ಪ್ರತಿಕೂಲ ಪರಿಸ್ಥಿತಿಗಳು ಇದನ್ನು ಕಾಯ್ದುಕೊಂಡು ಬಂದಿವೆ. ಇತ್ತ ಪ್ರಕರಣಕ್ಕಿದ್ದ ರೋಚಕತೆ ಮತ್ತು ಸುದ್ದಿ ಆಕರ್ಷಣೆಯು ಕಮ್ಮಿಯಾಗುತ್ತಾ ಹೋದಂತೆ ಕ್ರಮೇಣ ಮಾಧ್ಯಮಗಳೂ ಕೂಡ ಇದರಲ್ಲಿ ತನ್ನ ಆಸಕ್ತಿಯನ್ನು ಕಳೆದುಕೊಂಡವು. ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ಕೆಲ ಸಂಸ್ಥೆಗಳ ಕತೆಯೂ ಇದೇ ಆಗಿತ್ತು. ಮಾಧ್ಯಮಗಳು ಬಂದು ಹೋದ ನಂತರ ಉಳಿದ ರೋದನೆಯನ್ನು ಮಾತ್ರ ಈ ಪ್ರಕರಣಕ್ಕೆ ಬಲಿಯಾದವರು ಏಕಾಂಗಿಯಾಗಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು ವಿಪರ್ಯಾಸವೇ ಸರಿ. ಸ್ವತಃ ರಾಮೇಶ್ವರ್ ಕೂಡ ನ್ಯಾಯಾಲಯದಲ್ಲಿ ತನ್ನ ಧಾಟಿಯನ್ನು ಬದಲಾಯಿಸಿದ್ದ. ಹೌದು, ದೌರ್ಜನ್ಯವು ನಿಜಕ್ಕೂ ನಡೆದಿತ್ತು. ಆದರೆ ರಾಮೇಶ್ವರ್ ತನ್ನ ದೂರಿನಲ್ಲಿ ಹೆಸರಿಸಿದ್ದ ಆರು ಆರೋಪಿಗಳು ಮಾತ್ರ ಇದನ್ನು ಮಾಡಿರಲಿಲ್ಲ. ರಾಮೇಶ್ವರ್ ನ್ಯಾಯಾಲಯದಲ್ಲಿ ತಪ್ಪಿತಸ್ಥನನ್ನು ಗುರುತಿಸಲು ವಿಫಲನಾಗಿದ್ದ.

ಇತ್ತ ದೌರ್ಜನ್ಯದ ಪ್ರಕರಣದಲ್ಲಾದ ಗಾಯಗಳ ಬಗ್ಗೆ ದಾಖಲಿಸಿದ್ದ ಹಿರಿಯ ವೈದ್ಯಕೀಯ ಅಧಿಕಾರಿಯೊಬ್ಬರು ತನ್ನ ಮರೆವಿನ ಕಾರಣವನ್ನು ಮುಂದಿಟ್ಟಿದ್ದರು. ಗಾಯಾಳುವಾಗಿದ್ದ ರಾಮೇಶ್ವರ್ ಈ ವೈದ್ಯಕೀಯ ಅಧಿಕಾರಿಯನ್ನು ಸಂಪರ್ಕಿಸಿದ್ದು ಸತ್ಯವೇ ಆಗಿತ್ತು. ಆದರೆ ಅಧಿಕಾರಿ ಹೇಳುವ ಪ್ರಕಾರ ರಾಮೇಶ್ವರ್ ತನಗಾಗಿದ್ದ ವಿಚಿತ್ರ ಗಾಯಗಳಿಗೆ ಯಾವ ಕಾರಣವನ್ನು ನೀಡಿದ್ದ ಎಂಬುದು ಮಾತ್ರ ಆತನಿಗೆ ನೆನಪಿರಲಿಲ್ಲ.

Mangi Lai Jatav and his wife in Naksoda village in Dholupur district. A man and a woman standing outside a hut
PHOTO • P. Sainath

'ನಾವು ಭಯದ ಜೊತೆಗೇ ಬದುಕುತ್ತಿದ್ದೇವೆ,' ಎನ್ನುತ್ತಿದ್ದಾರೆ ನಸ್ಕೋಡಾ ಹಳ್ಳಿಯ ಮನೆಯಲ್ಲಿರುವ ರಾಮೇಶ್ವರ ಜಾತವನ ಹೆತ್ತವರು. ಈತನ ಮೂಗಿನ ಹೊಳ್ಳೆಗಳಿಗೆ ಸೆಣಬಿನ ದಾರವನ್ನು ತೂರಿಸಿ ಈ ಹಳ್ಳಿಯಲ್ಲಿ ಮೆರವಣಿಗೆ ಮಾಡಲಾಗಿತ್ತು

ರಾಮೇಶ್ವರ ಜಾತವನ ತಂದೆಯಾದ ಮಂಗಿ ಲಾಲ್ ಓರ್ವ ಸಾಕ್ಷಿಯಾಗಿ ಸ್ವತಃ ತಿರುಗಿಬಿದ್ದಿದ್ದ. "ನಾವೇನು ಮಾಡಬೇಕು ಎನ್ನುತ್ತೀರಿ ನೀವು? ನಾವಿಲ್ಲಿ ಭಯಭೀತರಾಗಿ ಬದುಕುತ್ತಿದ್ದೇವೆ. ಅಧಿಕಾರಿಗಳೆಲ್ಲಾ ನಮಗೆ ವಿರುದ್ಧವಾಗಿದ್ದರು. ಯಾವ ಕ್ಷಣದಲ್ಲಾದರೂ ಗುಜ್ಜರ್ ಜನರು ನಮ್ಮನ್ನು ಮುಗಿಸಬಹುದು. ಪೋಲೀಸರನ್ನೂ ಸೇರಿದಂತೆ ಹಲವು ಶಕ್ತಿಶಾಲಿ ವ್ಯಕ್ತಿಗಳು ಈ ಪರಿಸ್ಥಿತಿಯನ್ನು ನಮ್ಮ ಮೇಲೆ ಹೇರಿದ್ದರು," ಎನ್ನುತ್ತಾರೆ ಮಂಗಿಲಾಲ್. ರಾಮೇಶ್ವರ ಹಳ್ಳಿಯನ್ನೇ ತೊರೆದಿದ್ದ. ಇನ್ನು ಕುಟುಂಬದ ಬಳಿಯಿದ್ದ ಜುಜುಬಿ ಮೂರು ಭೀಗಾ ಜಮೀನಿನಲ್ಲಿ ಒಂದನ್ನು ಕೋರ್ಟು-ಕಚೇರಿಗಳ ಖರ್ಚನ್ನು ನಿಭಾಯಿಸಲೆಂದೇ ಮಂಗಿಲಾಲ್ ಮಾರಿದ್ದ.

ಜಗತ್ತಿನ ದೃಷ್ಟಿಯಲ್ಲಿ ಇದೊಂದು ಬರ್ಬರ ಕೃತ್ಯವಾಗಿತ್ತು. ಆದರೆ ರಾಜಸ್ಥಾನಕ್ಕೆ ಮಾತ್ರ ಇದು ಈಗಾಗಲೇ ಇರುವ ಸಾವಿರಾರು 'ಇತರ ಐ.ಪಿ.ಸಿ' (ಇಂಡಿಯನ್ ಪೀನಲ್ ಕೋಡ್) ಪ್ರಕರಣಗಳ ಪಟ್ಟಿಗೆ ಸೇರುವ ಒಂದು ಪ್ರಕರಣವಷ್ಟೇ. ಅಂದರೆ ಕೊಲೆ, ಅತ್ಯಾಚಾರ, ಅಗ್ನಿಸ್ಪರ್ಶ ಮತ್ತು ಮಾರಣಾಂತಿಕ ಹಲ್ಲೆಗಳನ್ನು ಹೊರತುಪಡಿಸಿದ ನಂತರ ಉಳಿಯುವ ಪ್ರಕರಣಗಳು. 1991 ರಿಂದ 1996 ಅವಧಿಯಲ್ಲಿ ಪ್ರತೀ ನಾಲ್ಕು ತಾಸುಗಳಿಗೆ ಇಂಥಾ ಒಂದು ಪ್ರಕರಣವು ಇಲ್ಲಿ ದಾಖಲಾಗಿದೆ .

ಭರತಪುರ ಜಿಲ್ಲೆಯ ಸೈಂತ್ರಿಪುರದ ನಿವಾಸಿಗಳು ಹೇಳುವ ಪ್ರಕಾರ ಕಳೆದ ಏಳು ವರ್ಷಗಳಿಂದ ಇಲ್ಲಿ ಯಾವ ವಿವಾಹಗಳೂ ನಡೆದಿಲ್ಲ. ಕನಿಷ್ಠಪಕ್ಷ ಗಂಡಸರ ವಿಚಾರದಲ್ಲಂತೂ ಇದು ಸತ್ಯ. ರೋಷಾವೇಶದಿಂದ ಮೆರೆದಾಡುವ ಮೇಲ್ಜಾತಿಯ ಪುಂಡರು 1992 ರ ಜೂನ್ ತಿಂಗಳಲ್ಲಿ ಇಲ್ಲಿ ಬಂದು ಸೇರಿಕೊಂಡ ನಂತರ ಹಳ್ಳಿಯ ಪರಿಸ್ಥಿತಿಯು ಹೀಗೆ ಬದಲಾಗಿಬಿಟ್ಟಿದೆ. ಈವರೆಗೆ ಆರು ಮಂದಿಯ ಕೊಲೆಗಳಾಗಿವೆ. ಅದೆಷ್ಟೋ ಮನೆಗಳು ನಾಶವಾಗಿವೆ. ಇನ್ನು ಸತ್ತವರಲ್ಲಿ ಕೆಲವರನ್ನು ಸಜೀವ ದಹನ ಮಾಡಲಾಗಿತ್ತು. ಈ ಬಡಪಾಯಿಗಳು ಬಿಟ್ಟೋರಾ (ಸೆಗಣಿ ಮತ್ತು ಸೌದೆಯ ರಾಶಿ) ದಲ್ಲಿ ಅಡಗಿಕೊಂಡಿದ್ದ ಸಂದರ್ಭದಲ್ಲಿ ಇವುಗಳಿಗೆ ಉದ್ದೇಶಪೂರ್ವಕವಾಗಿ ಬೆಂಕಿಹಚ್ಚಿ ಅಡಗಿಕೊಂಡಿದ್ದವರನ್ನು ಬರ್ಬರವಾಗಿ ಕೊಲ್ಲಲಾಗಿತ್ತು.


A pile of dung cakes
PHOTO • P. Sainath
A pile of dung cakes
PHOTO • P. Sainath

ಸೈಂತ್ರಿ ಪ್ರದೇಶದ ಶೆಡ್ಡೊಂದರಲ್ಲಿ ಇಡಲಾಗಿದ್ದ ಒಣಸೆಗಣಿ ಮತ್ತು ಸೌದೆಗಳ ರಾಶಿಗೆ   ದಾಳಿಯಿಟ್ಟಿದ್ದ ಮೇಲ್ಜಾತಿಯ ಹಿಂಸಾತ್ಮಕ ಯುವಕರ ಗುಂಪು ಆರು ಜನರ ಪ್ರಾಣವನ್ನು ಬಲಿತೆಗೆದುಕೊಂಡಿತ್ತು

"ಯುವತಿಯರಿಗೆ ವಿವಾಹವಾದಾಗ ಅವರು ಹಳ್ಳಿಯನ್ನು ತೊರೆದು ಗಂಡನ ಮನೆಗೆ ಹೋಗುತ್ತಾರೆ. ಸೈಂತ್ರಿಯಲ್ಲಿ ಒಂದಷ್ಟು ಯುವತಿಯರು ಮದುವೆಯಾಗಿದ್ದರೆ ಅದಕ್ಕಿರುವ ಕಾರಣ ಇದೊಂದೇ. ಆದರೆ ಪುರುಷರ ವಿಷಯ ಹಾಗಲ್ಲ. ಮದುವೆಯಾಗಲೆಂದೇ ಕೆಲ ಯುವಕರು ಹಳ್ಳಿಯನ್ನು ತೊರೆದಿದ್ದಾರೆ. ಯಾರೂ ತಮ್ಮ ಹೆಣ್ಣುಮಕ್ಕಳನ್ನು ಇಲ್ಲಿಗೆ ಕಳಿಸಲು ಸಿದ್ಧರಿಲ್ಲ. ನಮ್ಮ ಮೇಲೆ ಮತ್ತೊಮ್ಮೆ ದಾಳಿಯೇನಾದರೂ ಆದಲ್ಲಿ ಪೋಲೀಸರಾಗಲಿ, ನ್ಯಾಯಾಲಯಗಳಾಗಲಿ ನಮ್ಮನ್ನು ರಕ್ಷಿಸಲು ಸಾಧ್ಯವಿಲ್ಲವೆಂಬುದು ಎಲ್ಲರಿಗೂ ಗೊತ್ತು", ಎನ್ನುತ್ತಾರೆ ಭಗ್ವಾನ್ ದೇವಿ.

ಆಕೆಯ ಸಿನಿಕತನದ ಹೇಳಿಕೆಯಲ್ಲಿ ಸತ್ಯವೂ ಅಡಗಿದೆ. ಕೊಲೆಗಳಾಗಿ ಏಳು ವರ್ಷಗಳೇ ಕಳೆದಿದ್ದರೂ ಯಾವ ಆರೋಪಪಟ್ಟಿಯೂ ಈವರೆಗೆ ತಯಾರಾಗಿಲ್ಲ.

ಅಷ್ಟೇ ಅಲ್ಲ. ರಾಜ್ಯದಲ್ಲಿ ಪ್ರತೀ ತೊಂಭತ್ತು ದಿನಗಳಲ್ಲಿ ಓರ್ವ ದಲಿತ ಸಾವಿಗೀಡಾಗುತ್ತಿದ್ದಾನೆ .

ಬಿಟ್ಟೋರಾ ಅಗ್ನಿಸ್ಪರ್ಶ ಪ್ರಕರಣದಲ್ಲಿ (ಮುಖಪುಟ ಚಿತ್ರವನ್ನು ಗಮನಿಸಿ) ಬದುಕುಳಿದವರಲ್ಲಿ ಒಬ್ಬನಾದ ತಾನ್ ಸಿಂಗ್ ಇದೇ ಹಳ್ಳಿಯ ನಿವಾಸಿ. 35 ಪ್ರತಿಶತಕ್ಕೂ ಹೆಚ್ಚಿನ ಸುಟ್ಟಗಾಯಗಳು ಆತನಿಗಾಗಿವೆ ಎಂದು ವೈದ್ಯಕೀಯ ದಾಖಲೆಗಳು ತೋರಿಸುತ್ತಿವೆ. ಆತನ ಕಿವಿಗಳು ಬಹುತೇಕ ನಾಶವಾಗಿವೆ. ಈ ಪ್ರಕರಣದಲ್ಲಿ ಆತನ ಸಹೋದರನೊಬ್ಬ ಮೃತಪಟ್ಟಿದ್ದ ಪರಿಣಾಮವಾಗಿ ಸಿಕ್ಕಿದ್ದ ಪರಿಹಾರ ಧನವು ಆತನ ಚಿಕಿತ್ಸೆಗಾಗಿ ವ್ಯಯವಾಗಿದೆ. "ಇದ್ದ ಚಿಕ್ಕದೊಂದು ಜಮೀನಿನ ಭಾಗವನ್ನೂ ಕೂಡ ನಾನು ಮಾರಬೇಕಾಯಿತು," ಆದ ಬೆಳವಣಿಗೆಗಳಿಂದಾಗಿ ಕಂಗೆಟ್ಟಿರುವ ಸಿಂಗ್ ವ್ಯಥೆಪಟ್ಟು ಹೇಳುತ್ತಿದ್ದಾನೆ. ಆತ ಪ್ರತೀ ಬಾರಿ ಜೈಪುರಕ್ಕೆ ಹೋಗಿ ಬಂದಾಗಲೆಲ್ಲಾ ಕೇವಲ ಪ್ರಯಾಣಕ್ಕೆಂದೇ ನೂರಾರು ರೂಪಾಯಿಗಳು ಖರ್ಚಾಗುತ್ತಿದ್ದವು.

ದುರಾದೃಷ್ಟವಶಾತ್ ತಾನ್ ಸಿಂಗ್ ಕೇವಲ ಒಂದು ಅಂಕಿಅಂಶವಾಗಿಬಿಟ್ಟಿದ್ದಾನೆ. ರಾಜ್ಯದಲ್ಲಿ ಪ್ರತೀ 65 ತಾಸುಗಳಿಗೆ ಓರ್ವ ದಲಿತನ ಮೇಲೆ ಮಾರಣಾಂತಿಕ ಹಲ್ಲೆಯಾಗುತ್ತಿದೆ .

ಟೋಂಕ್ ಜಿಲ್ಲೆಯ ರಹೋಲಿಯ ಘಟನೆಯೊಂದರಲ್ಲಿ ಸ್ಥಳೀಯ ಶಾಲಾ ಶಿಕ್ಷಕರಿಂದ ಪ್ರಚೋದಿಸಲ್ಪಟ್ಟು ದಲಿತರ ಮೇಲೆ ಹಲ್ಲೆಗಳಾಗಿದ್ದವು. ಈ ಘಟನೆಯಲ್ಲಿ ಹಲವು ಮನೆಗಳು ಬೆಂಕಿಗೆ ಆಹುತಿಯಾಗಬೇಕಾಯಿತು. "ಈ ಘಟನೆಯಲ್ಲಾದ ನಷ್ಟವು ಬಲು ದೊಡ್ಡದು. ಹುರುಳಿಲ್ಲದ ಆರೋಪಗಳನ್ನು ಮಾಡಿ ನನ್ನನ್ನೂ ನನ್ನ ಹುದ್ದೆಯಿಂದ ಕೆಳಗಿಳಿಸಲಾಯಿತು," ಎನ್ನುತ್ತಿದ್ದಾರೆ ಈ ಪ್ರದೇಶದಲ್ಲಿ ದಲಿತ ಸರಪಂಚ್ ಆಗಿ ಚುನಾಯಿತರಾಗಿದ್ದ ಅಂಜು ಫುಲ್ವಾರಿಯಾ. ಈ ಪ್ರಕರಣದಲ್ಲಿ ಯಾರಿಗೂ ಶಿಕ್ಷೆಯಾಗಲಿಲ್ಲ ಎಂಬ ಬಗ್ಗೆ ಆಕೆಗೆ ಅಚ್ಚರಿಯೇನಿಲ್ಲ.

ರಾಜಸ್ಥಾನದಲ್ಲಿ ಪ್ರತೀ ಐದು ದಿನಗಳಿಗೊಮ್ಮೆ ಸರಾಸರಿ ಒಬ್ಬ ದಲಿತನ ಮನೆ ಅಥವಾ ಆಸ್ತಿಪಾಸ್ತಿಯು ಅಗ್ನಿಗೆ ಆಹುತಿಯಾಗುತ್ತಿದೆ . ಇನ್ನು ಇವುಗಳಿಗೆ ಕಾರಣವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಿರುವ ನಿದರ್ಶನಗಳು ತೀರಾ ಕಮ್ಮಿ.

ಆದರೆ ದಲಿತರ ಮೇಲಾಗುತ್ತಿರುವ ಪಕ್ಷಪಾತಿ ಧೋರಣೆಗಳ ಬಗ್ಗೆ ರಾಜಸ್ಥಾನ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ಅರುಣ್ ಕುಮಾರ್ ಮಾತ್ರ ಅಲ್ಲಗಳೆಯುತ್ತಾರೆ. ಈ ಅಂಕಿಅಂಶಗಳು ರಾಜ್ಯದಲ್ಲಿ ಈ ಬಗೆಯ ಪ್ರಕರಣಗಳನ್ನು ಅಧಿಕೃತವಾಗಿ ದಾಖಲಿಸುವ ವ್ಯವಸ್ಥೆಯ ಬದ್ಧತೆಯ ಬಗ್ಗೆ ಬೆಳಕು ಚೆಲ್ಲುತ್ತದೆ ಎನ್ನುತ್ತಾರೆ ಇವರು. "ಪ್ರಕರಣಗಳು ದಾಖಲಾಗದೆ ಉಳಿಯುವ ಘಟನೆಗಳು ರಾಜಸ್ಥಾನದಲ್ಲಿ ಕಾಣಸಿಗುವುದು ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿ. ಈ ಪಟ್ಟಿಯಲ್ಲಿ ಬರುವ ಕೆಲವೇ ರಾಜ್ಯಗಳಲ್ಲಿ ರಾಜಸ್ಥಾನವೂ ಒಂದು. ಈ ಬಗ್ಗೆ ನಾವು ಬದ್ಧರಾಗಿರುವ ಕಾರಣದಿಂದಲೇ ಇಲ್ಲಿ ಅಪರಾಧಗಳು ದಾಖಲಾಗುವುದೂ ಹೆಚ್ಚು, ಅಂಕಿಅಂಶಗಳೂ ಹೆಚ್ಚು," ಎನ್ನುತ್ತಾರೆ ಕುಮಾರ್. ಅವರ ಪ್ರಕಾರ ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗುವ ಉದಾಹರಣೆಗಳು ಇಡೀ ದೇಶಕ್ಕೆ ಹೋಲಿಸಿದರೆ ರಾಜಸ್ಥಾನದಲ್ಲೇ ಹೆಚ್ಚಿದೆ.

Anju Phulwaria, the persecuted sarpanch
PHOTO • P. Sainath

'ಹುರುಳಿಲ್ಲದ ಆರೋಪಗಳನ್ನು ಮಾಡಿ ನನ್ನನ್ನು ನನ್ನ ಹುದ್ದೆಯಿಂದ ಕೆಳಗಿಳಿಸಲಾಯಿತು,' ಎನ್ನುತ್ತಿದ್ದಾರೆ ಈ ಪ್ರದೇಶದಲ್ಲಿ ದಲಿತ ಸರಪಂಚ್ ಆಗಿ ಚುನಾಯಿತರಾಗಿದ್ದ ಅಂಜು ಫುಲ್ವಾರಿಯಾ.

ಅಷ್ಟಕ್ಕೂ ಈ ಅಂಕಿಅಂಶಗಳು ಏನು ಹೇಳುತ್ತಿವೆ? ಜನತಾದಳದ ಮಾಜಿ ಸಂಸತ್ ಸದಸ್ಯರಾಗಿರುವ ಥಾನ್ ಸಿಂಗ್ 90 ರ ದಶಕದ ಆರಂಭದಲ್ಲಿ ದಲಿತರ ಮೇಲಾಗುತ್ತಿದ್ದ ದೌರ್ಜನ್ಯಗಳ ತನಿಖೆಗೆಂದೇ ರಚಿಸಲಾಗಿದ್ದ ಸಮಿತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದವರು. "ಶಿಕ್ಷೆಯಾಗುತ್ತಿದ್ದ ಪ್ರಮಾಣವು ಸುಮಾರು ಮೂರು ಶೇಕಡಾದಷ್ಟಿತ್ತು," ಎಂದು ತನ್ನ ಜೈಪುರದ ನಿವಾಸದಲ್ಲಿರುವ ಥಾನ್ ಸಿಂಗ್ ನನಗೆ ಹೇಳುತ್ತಿದ್ದಾರೆ.

ಧೋಲಪುರ ಜಿಲ್ಲೆಯಲ್ಲಿ ನಾನು ನ್ಯಾಯಾಲಯಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿದರೆ ಈ ಶೇಕಡಾವಾರು ಪ್ರಮಾಣವು ಇನ್ನೂ ಕಮ್ಮಿಯಿದ್ದಿದ್ದು ನನ್ನ ಗಮನಕ್ಕೆ ಬಂದಿತ್ತು. 1996 ರಿಂದ 1998 ರ ಮಧ್ಯೆ ಒಟ್ಟು 359 ಪ್ರಕರಣಗಳು ಸೆಷನ್ಸ್ ನ್ಯಾಯಾಲಯದಡಿ ಬರುತ್ತಿದ್ದವು. ಇವುಗಳಲ್ಲಿ ಕೆಲವು ಪ್ರಕರಣಗಳು ಬೇರೆ ನ್ಯಾಯಾಲಯಗಳಿಗೆ ವರ್ಗವಾದರೆ ಮತ್ತುಳಿದವುಗಳು ಇನ್ನೂ ಬಾಕಿಯಾಗಿದ್ದವು. ಆದರೆ ಶಿಕ್ಷೆಯಾದ ಪ್ರಕರಣಗಳ ಶೇಕಡಾವಾರು ಪ್ರಮಾಣ ಮಾತ್ರ ಎರಡೂವರೆ ಪ್ರತಿಶತಕ್ಕಿಂತಲೂ ಕಮ್ಮಿಯಿತ್ತು.

"ನನ್ನ ಮಟ್ಟಿಗೆ ಬಹಳ ವಿಷಾದದ ಸಂಗತಿಯೆಂದರೆ ನ್ಯಾಯಾಲಯಗಳು ಈ ಬಗೆಯ ಸುಳ್ಳು ಪ್ರಕರಣಗಳಿಂದ ತುಂಬಿಹೋಗಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಬಂಧಿ ಪ್ರಕರಣಗಳಲ್ಲಿ 50 ಪ್ರತಿಶತಕ್ಕೂ ಹೆಚ್ಚಿನ ಪ್ರಕರಣಗಳು ಆಧಾರವಿಲ್ಲದವುಗಳು. ಇಂಥಾ ಕೇಸುಗಳಿಂದ ವಿನಾಕಾರಣ ಅದೆಷ್ಟೋ ಮಂದಿಯನ್ನು ಕಂಗೆಡಿಸಲಾಗುತ್ತಿದೆ", ಎನ್ನುತ್ತಿದ್ದಾರೆ ಧೋಲಪುರದ ಓರ್ವ ಹಿರಿಯ ಪೋಲೀಸ್ ಅಧಿಕಾರಿ.

ರಾಜಸ್ಥಾನದ ಮೇಲ್ಜಾತಿಯ ಬಹುತೇಕ ಪೋಲೀಸ್ ಅಧಿಕಾರಿಗಳಲ್ಲಿರುವ ಅಭಿಪ್ರಾಯ ಇವರದ್ದೂ ಆಗಿದೆ. (ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಇಲ್ಲಿಯ ಆರಕ್ಷಕ ದಳವನ್ನು "ಸಿ.ಆರ್.ಪಿ" ಅಥವಾ "ಚರಂಗ್-ರಾಜಪೂತ್ ಪೋಲೀಸ್" ಎಂದು ವ್ಯಂಗ್ಯವಾಗಿ ಹೇಳುತ್ತಾರೆ. 90 ರ ದಶಕದವರೆಗೂ ಈ ಜಾತಿಯವರೇ ಇಲ್ಲಿಯ ಪೋಲೀಸ್ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು)

ಜನಸಾಮಾನ್ಯರು, ಅದರಲ್ಲೂ ಬಡವರು ಮತ್ತು ದುರ್ಬಲರು ಮಹಾಸುಳ್ಳರು ಎಂಬ ಅಭಿಪ್ರಾಯವು ಇಲ್ಲಿಯ ಪೋಲೀಸರಲ್ಲಿ ಆಳವಾಗಿ ಬೇರೂರಿದೆ. ಎಲ್ಲಾ ಸಮುದಾಯಗಳಲ್ಲಿ ನಡೆಯುವ ಅತ್ಯಾಚಾರದ ಪ್ರಕರಣಗಳನ್ನೇ ಪರಿಗಣಿಸೋಣ. ಒಟ್ಟು ಪ್ರಕರಣಗಳಲ್ಲಿ ಕೇವಲ ಐದು ಪ್ರತಿಶತ ಮಾತ್ರ ತನಿಖೆಯಡಿ ಬಂದರೂ ರಾಷ್ಟ್ರೀಯ ಮಟ್ಟದಲ್ಲಿ ಸರಾಸರಿ ಪ್ರಕರಣಗಳನ್ನು ಸುಳ್ಳೆಂಬುದಾಗಿ ಘೋಷಿಸಲಾಗಿದೆ. ರಾಜಸ್ಥಾನದಲ್ಲಿ ಸರಿಸುಮಾರು 27 ಶೇಕಡಾ ಅತ್ಯಾಚಾರದ ಪ್ರಕರಣಗಳನ್ನು "ಸುಳ್ಳು ಪ್ರಕರಣ"ಗಳೆಂದು ಷರಾ ಬರೆಯಲಾಗಿದೆ.

ಇದರ ಅರ್ಥವೇನೆಂದರೆ ದೇಶದ ಇತರ ಭಾಗದ ಹೆಣ್ಣುಮಕ್ಕಳಿಗೆ ಹೋಲಿಸಿದರೆ ರಾಜಸ್ಥಾನದ ಹೆಣ್ಣುಮಕ್ಕಳು ಬರೋಬ್ಬರಿ ಐದು ಪಟ್ಟಿನಷ್ಟು ಹೆಚ್ಚು ಸುಳ್ಳು ನುಡಿಯುತ್ತಿದ್ದಾರೆ. ಇದಕ್ಕಿಂತಲೂ ವಾಸಿ ಎನ್ನಬಹುದಾದ ವಿವರಣೆಯನ್ನು ನೀಡುವುದಾದರೆ ಮಹಿಳೆಯರ ಬಗ್ಗೆ ತೀವ್ರಮಟ್ಟದ ಪಕ್ಷಪಾತಿ ಧೋರಣೆಯು ಇಲ್ಲಿಯ ವ್ಯವಸ್ಥೆಯಲ್ಲಿ ನೆಲೆಯಾಗಿಬಿಟ್ಟಿದೆ. ಈ "ಸುಳ್ಳು ಅತ್ಯಾಚಾರದ ಪ್ರಕರಣಗಳು" ಎಲ್ಲಾ ಸಮುದಾಯಗಳನ್ನೂ ಒಳಗೊಂಡಿರುವಂಥದ್ದು. ಇನ್ನು ಈ ಅಂಕಿಅಂಶಗಳ ಮತ್ತಷ್ಟು ಆಳಕ್ಕೆ ಹೋಗಿದ್ದೇ ಆದಲ್ಲಿ ಹೀಗೆ ತಾರತಮ್ಯಕ್ಕೊಳಗಾದ ಮಹಿಳೆಯರಲ್ಲಿ ದಲಿತರು ಮತ್ತು ಆದಿವಾಸಿ ಮಹಿಳೆಯರೇ ಹೆಚ್ಚಿರುವ ಸಾಧ್ಯತೆಗಳು ಇಲ್ಲದಿಲ್ಲ.

ಕಾನೂನು, ಅದರಲ್ಲೂ ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ 1989 ಅನ್ನು ದಲಿತರು ದೊಡ್ಡ ಮಟ್ಟದಲ್ಲಿ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆಂಬ ಮಾತನ್ನು ನಾನು ರಾಜಸ್ಥಾನದಲ್ಲಿ ಹೋದಲ್ಲೆಲ್ಲಾ ಕೇಳಿದ್ದೇನೆ. ಅದರಲ್ಲೂ ಈ ಕಾಯಿದೆಯ ವಿಭಾಗ 3 ರ ಪ್ರಕಾರ ದಲಿತರ ಮತ್ತು ಆದಿವಾಸಿಗಳ ಮೇಲೆ ಜಾತೀಯ ಅಪರಾಧಗಳು ನಡೆದಲ್ಲಿ ತಪ್ಪಿತಸ್ಥರಿಗೆ ದಂಡದ ಮೊತ್ತವನ್ನು ಸೇರಿದಂತೆ ಐದು ವರ್ಷಗಳವರೆಗಿನ ಜೈಲು ಸಜೆಯಾಗುವ ಸಾಧ್ಯತೆಗಳಿರುವುದರಿಂದ ಈ ಬಗ್ಗೆ ಭಯಪಡುವವರ ಸಂಖ್ಯೆ ಹೆಚ್ಚಿದೆ.

ಆದರೆ ನೈಜಸ್ಥಿತಿಯನ್ನು ಅವಲೋಕಿಸಿದರೆ, ನಿಜವಾದ ತಪ್ಪಿತಸ್ಥರಿಗೆ ಕಠಿಣ ಸಜೆ ಸಿಕ್ಕ ಒಂದೇ ಒಂದು ಪ್ರಕರಣವೂ ನನಗೆ ಸಿಗಲಿಲ್ಲ.

ಧೋಲಪುರವನ್ನೇ ಪರಿಗಣಿಸುವುದಾದರೆ, ದಲಿತರ ಮೇಲಾದ ದೌರ್ಜನ್ಯಗಳಿಗೆ ಸಂಬಂಧಪಟ್ಟಂತೆ ಶಿಕ್ಷೆಗೊಳಗಾದ ಕೆಲ ಪ್ರಕರಣಗಳನ್ನು ಗಮನಿಸಿದರೆ ಈ ಶಿಕ್ಷೆಗಳು ಅಪರಾಧವನ್ನು ತಡೆಗಟ್ಟುವಷ್ಟು ಶಕ್ತಿಯುತವಾಗಿಲ್ಲ. ದಂಡಗಳು ರೂ. 100, ರೂ. 200, ರೂ. 500 ರ ಮಿತಿಯಲ್ಲಿದ್ದರೆ ಜೈಲುಶಿಕ್ಷೆಯು ಒಂದು ತಿಂಗಳ ಮಟ್ಟಿನ ಸಾಮಾನ್ಯ ಸಜೆಯಾಗಿದೆ. ಆರು ತಿಂಗಳ ಜೈಲುಶಿಕ್ಷೆಯು ನಾನು ನೋಡಿದ್ದರಲ್ಲೇ ಅತ್ಯಂತ ಹೆಚ್ಚಿನ ಅವಧಿಯದ್ದು. ಒಂದು ಪ್ರಕರಣದಲ್ಲಂತೂ ತಪ್ಪಿತಸ್ಥನಿಗೆ ಜಾಮೀನು ಸಹಿತವಾಗಿ "ಪ್ರೊಬೇಷನ್" ನೀಡಲಾಗಿತ್ತು. ವಿಚಿತ್ರವೆಂದರೆ ಈ ಪ್ರೊಬೇಷನ್ ಪರಿಕಲ್ಪನೆಯ ಪ್ರಕರಣವೊಂದನ್ನು ನಾನು ಬೇರೆಲ್ಲೂ ಕಂಡೇ ಇಲ್ಲ.

ಅಷ್ಟಕ್ಕೂ ಧೋಲಪುರದ ಈ ಪ್ರಕರಣವು ತೀರಾ ವಿಭಿನ್ನವಾದದ್ದೇನಲ್ಲ. ಶಿಕ್ಷೆಯಾಗುತ್ತಿರುವ ಪ್ರಕರಣಗಳ ಪ್ರಮಾಣ ಎರಡು ಪ್ರತಿಶತಕ್ಕೂ ಕಮ್ಮಿಯಿರುವುದು ಟೋಂಕ್ ಜಿಲ್ಲಾ ಮುಖ್ಯಾಲಯದಲ್ಲಿರುವ ಎಸ್.ಸಿ / ಎಸ್.ಟಿ ವಿಶೇಷ ನ್ಯಾಯಾಲಯದಲ್ಲಿ ನಮಗೆ ದೊರೆತಿತ್ತು.

ಅಂಕಿಅಂಶಗಳು ಮಾತಾಡುತ್ತಲೇ ಇವೆ. ಅಷ್ಟಕ್ಕೂ ದಲಿತನೊಬ್ಬ ನ್ಯಾಯಾಲಯಕ್ಕೆ ಹೋಗುವುದೇ ಆದಲ್ಲಿ ಆತನಿಗೆ ಬರುವ ಅಡಚಣೆಗಳೇನು, ಸವಾಲುಗಳೇನು, ಪ್ರಕ್ರಿಯೆಗಳೇನು, ಅಪಾಯಗಳೆಷ್ಟು? ಬರೆದರೆ ಅವುಗಳದ್ದೇ ಒಂದು ಪ್ರತ್ಯೇಕ ಕತೆಯಾಗುತ್ತದೆ.

ಎರಡು ಭಾಗಗಳಲ್ಲಿರುವ ವರದಿಯು ಮೊದಲು ಜೂನ್ 13, 1999 "ದಿ ಹಿಂದೂ" ಪತ್ರಿಕೆಯಲ್ಲಿ ಪ್ರಕಟವಾಗಿತ್ತು . ಇದು ಮಾನವ ಹಕ್ಕು ಪತ್ರಿಕೋದ್ಯಮಕ್ಕೆ ನೀಡಲಾಗುವ ಪ್ರತಿಷ್ಠಿತ ಆಮ್ನೆಸ್ಟಿ ಗ್ಲೋಬಲ್ ಇಂಟನ್ರ್ಯಾಷನಲ್ ಪುರಸ್ಕಾರಕ್ಕೆ ಸ್ಥಾಪನೆಯಾದ ವರ್ಷ 2000 ದಲ್ಲೇ ಪಾತ್ರವಾದ ವರದಿಯೂ ಹೌದು .

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath
Translator : Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Other stories by Prasad Naik