5 ರೂ.ಗಳಿಗಾಗಿ ಪಟ್ಟುಹಿಡಿದಿರುವ ತನ್ನ 7 ವರ್ಷದ ಮೊಮ್ಮಗಳತ್ತ ಗಮನಸೆಳೆದ ವಂದನ ಉಂಬರ್ಸದ, “ಸೋಮವಾರದಿಂದಲೂ (ಮಾರ್ಚ್‍ 16) ನಮಗೆ ಯಾವುದೇ ಕೆಲಸ ದೊರೆತಿಲ್ಲ”, ನಾನು ಹಣವನ್ನು ತರುವುದಾದರೂ ಎಲ್ಲಿಂದ? ಎಂದು ಅಲವತ್ತುಕೊಂಡರು.

ಮಹಾರಾಷ್ಟ್ರದ ವಾಡಾ ತಾಲ್ಲೂಕಿನ ಹಲವಾರು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ದುಡಿಯುತ್ತಿರುವ 55ರ ವಯಸ್ಸಿನ ವಂದನ, ಪಾಲ್ಘರ್‍ ಜಿಲ್ಲೆಯ ಕವಟೆಪಾಡಾದಲ್ಲಿನ ತನ್ನ ಮನೆಯ ಅಂಗಳದಲ್ಲಿ ಕುಳಿತು ಹೀಗೆಂದರು: “ಏನು ನಡೆಯುತ್ತಿದೆಯೆಂಬುದು ನಮಗೆ ತಿಳಿದಿಲ್ಲ. ನಮ್ಮ ಸುತ್ತಮುತ್ತ ರೋಗವೊಂದು ಹಬ್ಬುತ್ತಿದ್ದು, ಸರ್ಕಾರವು ಮನೆಯಿಂದ ಹೊರಬರದಂತೆ ತಿಳಿಸಿರುವ ಕಾರಣ ಮನೆಯಲ್ಲೇ ಇರಬೇಕೆಂದು ನನ್ನ ಮಗನು ತಿಳಿಸಿದ.”

ಆಗ 4ರ ಸಮಯ. ವಂದನಾರ ನೆರೆಹೊರೆಯ ಅನೇಕರು ವಿವಿಧ ವಿಷಯಗಳನ್ನು ಚರ್ಚಿಸಲು ಅದರಲ್ಲೂ ಮುಖ್ಯವಾಗಿ ಪ್ತಸ್ತುತದಲ್ಲಿನ ಕೊವಿಡ್‍-19 ಆಪತ್ತಿನ ಬಗ್ಗೆ ಚರ್ಚಿಸಲು ಆಕೆಯ ಮನೆಯ ಹೊರಗೆ ಸೇರಿದ್ದರು. ಅವರಲ್ಲಿನ ಒಬ್ಬ ತರುಣಿ ಮಾತ್ರ, ಮಾತನಾಡುವಾಗ ಪ್ರತಿಯೊಬ್ಬರೂ ಪರಸ್ಪರ ಅಂತರವನ್ನು ಕಾಯ್ದುಕೊಳ್ಳತಕ್ಕದ್ದೆಂದು ತಿಳಿಸಿದಳು. ಇಲ್ಲಿನ ಜನರ ಅಂದಾಜಿನಂತೆ, ಕವಟೆಪಾಡಾದಲ್ಲಿ ಸುಮಾರು 70 ಮನೆಗಳಿದ್ದು, ಪ್ರತಿಯೊಂದು ಕುಟುಂಬವೂ ಆದಿವಾಸಿಗಳ ವರ್ಲಿ ಸಮುದಾಯಕ್ಕೆ ಸೇರಿದೆ.

ರಾಜ್ಯಾದ್ಯಂತದ ಲಾಕ್‍ಡೌನ್ ಪ್ರಾರಂಭಗೊಳ್ಳುವವರೆಗೂ, ವಂದನ ಮತ್ತು ಆಕೆಯ ನೆರೆಯಲ್ಲಿನ ಮನಿತ ಉಂಬರ್ಸದ, ಮುಂಜಾನೆ 8ಕ್ಕೆ ತಮ್ಮ ದಿನಚರಿಯನ್ನು ಪ್ರಾರಂಭಿಸಿ, ಒಂದು ಗಂಟೆಯ ಅವಧಿಯಲ್ಲಿ 10 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿ ಸವೆಸಿ, ವಾಡಾ ಪಟ್ಟಣದ ಕಟ್ಟಡ ನಿರ್ಮಾಣ ಸ್ಥಳಗಳಿಗೆ ತೆರಳುತ್ತಿದ್ದರು. ಅಲ್ಲಿ 9ರಿಂದ 6ರವರೆಗಿನ ತಮ್ಮ ದುಡಿಮೆಗೆ ಅವರು, 200 ರೂ.ಗಳನ್ನು ಗಳಿಸುತ್ತಿದ್ದರು. ಇದರಿಂದಾಗಿ ಮಾಹೆಯಾನ ಸುಮಾರು 4 ಸಾವಿರ ರೂ.ಗಳನ್ನು ಗಳಿಸುತ್ತಿದ್ದೆಯೆಂಬುದಾಗಿ ವಂದನ ತಿಳಿಸಿದರು. ಆದರೆ ನಿರ್ಮಾಣ ಕಾಮಗಾರಿಯ ಗುತ್ತಿಗೆದಾರರ ಬಳಿ ಈಗ ಆಕೆಗೆ ಯಾವುದೇ ಕೆಲಸವಿಲ್ಲ.

“ನನ್ನ ಮಕ್ಕಳಿಗೂ ಯಾವುದೇ ಕೆಲಸವು ದೊರೆಯುತ್ತಿಲ್ಲ. ನಾವು ಆಹಾರ ಪದಾರ್ಥಗಳನ್ನು ಖರೀದಿಸಬೇಕಿದೆ. ದುಡಿಮೆಯೇ ಇಲ್ಲದೆ ನಮಗೆ ಹಣವು ದೊರೆಯುವುದಾದರೂ ಹೇಗೆ? ನಮ್ಮ ಪಡಿತರ ಇನ್ನೇನು ಮುಗಿಯುವುದರಲ್ಲಿದೆ. ಕೇವಲ ಚಟ್ನಿಯನ್ನಷ್ಟೇ ತಯಾರಿಸಿ ಅದನ್ನೇ ನಮ್ಮ ಮಕ್ಕಳಿಗೆ ಉಣಬಡಿಸಬೇಕೆ? ಇದು ಶೀಘ್ರದಲ್ಲೇ ಕೊನೆಗೊಳ್ಳಲೆಂದು ನಾನು ಆಶಿಸುತ್ತೇನೆ”, ಎಂಬುದು ಆಕೆಯ ಪ್ರಶ್ನೆ.

ವಂದನ ಅವರಿಗೆ ಮೂರು ಜನ ಗಂಡು ಮಕ್ಕಳಿದ್ದು 11 ಮೊಮ್ಮಕ್ಕಳಿದ್ದಾರೆ. 168 ಜಿಲ್ಲೆಗಳನ್ನು ಹೊಂದಿದ್ದು, 154,416ರಷ್ಟು ಜನಸಂಖ್ಯೆಯಿರುವ ವಾಡಾ ತಾಲ್ಲೂಕಿನ ಇಟ್ಟಿಗೆಯ ಗೂಡುಗಳು ಅಥವ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಆಕೆಯ ಮಕ್ಕಳು ದುಡಿಯುತ್ತಾರೆ. ಅತಿಯಾದ ಮದ್ಯಪಾನದಿಂದ ಉಂಟಾದ ಸಮಸ್ಯೆಗಳಿಂದಾಗಿ 15 ವರ್ಷಗಳ ಹಿಂದೆ ಸ್ಥಳೀಯ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದ ಈಕೆಯ ಪತಿ ಲಕ್ಷ್ಮಣ್‍ ಸಾವಿಗೀಡಾದರು.

'We need to buy food, but without working how will we get any money?' asks Vandana Umbarsada (left), a construction labourer. Her son Maruti (right) is also out of work since March 16
PHOTO • Shraddha Agarwal
'We need to buy food, but without working how will we get any money?' asks Vandana Umbarsada (left), a construction labourer. Her son Maruti (right) is also out of work since March 16
PHOTO • Shraddha Agarwal

‘ನಾವು ಆಹಾರ ಪದಾರ್ಥಗಳನ್ನು ಖರೀದಿಸಬೇಕಿದೆ. ಆದರೆ ದುಡಿಮೆಯೇ ಇಲ್ಲದೆ ನಮಗೆ ಹಣವು ಸಿಗುವುದಾದರೂ ಹೇಗೆ?’, ಎಂಬುದು ಕಟ್ಟಡ ನಿರ್ಮಾಣದ ಕಾರ್ಮಿಕರಾದ ವಂದನಾ ಉಂಬರ್ಸದ ಅವರ ಪ್ರಶ್ನೆ (ಎಡಕ್ಕೆ), ಈಕೆಯ ಮಗ ಮಾರುತಿ (ಬಲಕ್ಕೆ) ಅವರಿಗೂ ಮಾರ್ಚ್‍ 16ರಿಂದ ಕೆಲಸವು ದೊರೆಯುತ್ತಿಲ್ಲ

ಕವಟೆಪಾಡಾದ ಅನೇಕರು ತಮ್ಮ ಕುಟುಂಬವನ್ನು ಊರಿನಲ್ಲಿಯೇ ಬಿಟ್ಟು, ಋತುಕಾಲಿಕವಾಗಿ ಸುಮಾರು 90 ಕಿ.ಮೀ. ದೂರದ ಮುಂಬೈಗೆ ದುಡಿಮೆಯ ಸಲುವಾಗಿ ವಲಸೆ ಹೋಗುತ್ತಾರೆ. “ಮೂರು ತಿಂಗಳ ದಿನಗೂಲಿಯ ಕೆಲಸದ ಸಲುವಾಗಿ ನನ್ನ ಮಗ ಹಾಗೂ ಸೊಸೆ ಭಿವಂಡಿಯ (ಪಾಡಾದಿಂದ ಸುಮಾರು 45 ಕಿ.ಮೀ.) ಕಟ್ಟಡ ನಿರ್ಮಾಣ ಸ್ಥಳದಲ್ಲಿದ್ದಾರೆ. ಅವರ ಮಕ್ಕಳ ಊಟ ಹಾಗೂ ಯೋಗಕ್ಷೇಮದ ಜವಾಬ್ದಾರಿಯನ್ನು ನಾನು ನಿರ್ವಹಿಸಬೇಕಿದೆ. ಈಗ ಶಾಲೆಗಳು ಮುಚ್ಚಿರುವುದರಿಂದ ಅವರಿಗೆ ಮಧ್ಯಾಹ್ನದ ಊಟ ದೊರೆಯುತ್ತಿಲ್ಲ,” ಎಂಬುದಾಗಿ ವಂದನ ತಿಳಿಸಿದರು.

ವಾಡಾ ಪಟ್ಟಣದಲ್ಲಿನ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ದುಡಿಯುವ 32 ವರ್ಷದ ಆಕೆಯ ಮಧ್ಯದ ಮಗ ಮಾರುತಿ, “ಎಲ್ಲ ಕಡೆಗಳಲ್ಲೂ ಈ ರೋಗವು ಹಬ್ಬುವುದನ್ನು ತಡೆಯುವ ಸಲುವಾಗಿ ಸರ್ಕಾರವು ಎಲ್ಲವನ್ನೂ ಬಂದ್‍ ಮಾಡಿದೆ” ಎನ್ನುತ್ತಾರೆ. ಇವರಿಗೂ ಸಹ ಮಾರ್ಚ್ 16ರಿಂದ ಕೆಲಸವು ದೊರೆತಿರುವುದಿಲ್ಲ.

“ಈ ರೋಗದೊಂದಿಗೆ ಹೋರಾಡುವ ಸಲುವಾಗಿ, ಗಂಟೆಗೊಮ್ಮೆ ನಾವು ಸಾಬೂನಿನಿಂದ ಕೈಗಳನ್ನು ಸ್ವಚ್ಛಗೊಳಿಸಿ, ಯಥೇಚ್ಛವಾಗಿ ನೀರು ಕುಡಿಯತಕ್ಕದ್ದೆಂದು ವಾರ್ತಾ ವಾಹಿನಿಗಳು ತಿಳಿಸುತ್ತಿವೆ. ಆದರೆ ಹಸಿವಿನಿಂದ ಮೊದಲೇ ನಾವು ಸತ್ತಲ್ಲಿ, ಸಾಬೂನು ನಮ್ಮ ಜೀವವನ್ನು ಉಳಿಸಲಾರದು”, ಎನ್ನುತ್ತಾರೆ ಆತ.

ಇವರು ತನ್ನ ತಾಯಿ, ಅತ್ತಿಗೆ ವೈಶಾಲಿ, ಪತ್ನಿ ಮನಿಶಾ (ಈ ಇಬ್ಬರೂ ಗೃಹಿಣಿಯರು) ಹಾಗೂ ಇಬ್ಬರು ಮಕ್ಕಳೊಂದಿಗೆ 12 ಅಡಿ ಉದ್ದ, 12 ಅಡಿ ಅಗಲವಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. “ನನ್ನ ಅತ್ತಿಗೆಯನ್ನು ಪ್ರತಿ ವಾರ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಬೇಕು. ಅವರಿಗೆ ತೀವ್ರ ಸ್ವರೂಪದ ಸಕ್ಕರೆ ಖಾಯಿಲೆಯಿದ್ದು, ನಿಯತವಾಗಿ ಚುಚ್ಚುಮದ್ದನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಸಹ ಅವರು ತಿಳಿಸಿದರು. ಪ್ರತಿ ಇನ್ಸುಲಿನ್‍ ಚುಚ್ಚುಮದ್ದಿಗೂ 15 ರೂ. ವೆಚ್ಚವಾಗುತ್ತದೆ. “ನಾವು ನನ್ನ ದಿನಗೂಲಿಯನ್ನೇ ಅವಲಂಬಿಸಿದ್ದೇವೆ. ಕೆಲಸವೇ ಇಲ್ಲದಿದ್ದಲ್ಲಿ ನಾನು ನನ್ನ ಕುಟುಂಬದ ಕಾಳಜಿ ವಹಿಸುವುದಾದರೂ ಹೇಗೆ?”, ಎನ್ನುತ್ತಾರೆ ಆತ.

ವಂದನ ಅವರ ಪಕ್ಕದ ಮನೆಯಲ್ಲಿ ವಾಸಿಸುವ 48 ವರ್ಷದ ಮನಿತ ಉಂಬರ್ಸದ ಸಹ ಅಂದು ಮಧ್ಯಾಹ್ನ ಸೇರಿದ್ದ ಗುಂಪಿನಲ್ಲಿದ್ದರು. ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಭಾರದ ವಸ್ತುಗಳನ್ನು ತುಂಬಿಸುವ ಹಾಗೂ ಅವನ್ನು ಇಳಿಸುವ 8 ಗಂಟೆಗಳ ದುಡಿಮೆಗೆ ಈಕೆಯೂ ಸಹ 200 ರೂ.ಗಳನ್ನು ಗಳಿಸುತ್ತಾರೆ. “ಕೃಷಿ ಭೂಮಿಯ ಕೆಲಸಕ್ಕಿಂತ ಇದು ಎಷ್ಟೋ ವಾಸಿ. ಇಲ್ಲಿ ನಮಗೆ ಸಮಯಕ್ಕೆ ಸರಿಯಾಗಿ ಹಣವನ್ನು ನೀಡುತ್ತಾರೆಯಲ್ಲದೆ, ದಿನವಿಡೀ ಉರಿಬಿಸಿಲಿನಲ್ಲಿ ದುಡಿಯಬೇಕೆಂದೇನಿಲ್ಲ. ಆದರೀಗ ವಾಡಾದಲ್ಲಿ ಯಾರೂ ನಮಗೆ ಕೆಲಸವನ್ನು ನೀಡುತ್ತಿಲ್ಲ. ಹೀಗಾಗಿ ನಾವು ಹತ್ತಿರದ ಕೃಷಿ-ಭೂಮಿಯ ಕೆಲಸಗಳನ್ನು ಅರಸಬೇಕಿದೆ”, ಎಂದು ಆಕೆ ತಿಳಿಸುತ್ತಾರೆ.

ಇವರು ಶೇಖರಿಸಿಟ್ಟಿರುವ ದಿನಸಿಯು ಈ ತಿಂಗಳಿಗೆ ಸಾಲುವಷ್ಟಿದ್ದು, ಅದರಲ್ಲಿಯೇ ಈಗ ನಿಭಾಯಿಸುತ್ತಿದ್ದಾರಾದರೂ, ಕೆಲಸ ಅಥವ ಹಣವಿಲ್ಲದೆ ಮುಂಬರುವ ದಿನಗಳಲ್ಲಿ  ಬದುಕುಳಿಯುವುದು ಹೇಗೆಂಬ ಬಗ್ಗೆ ಇವರಲ್ಲಿ ಅನಿಶ್ಚಿತತೆಯಿದೆ

ವೀಡಿಯೋ ವೀಕ್ಷಿಸಿ: ‘ನಾವು ಹಸಿದುಕೊಂಡಿರಬೇಕೇ?’

ಮನಿತಾರ ಪತಿ, 50 ವರ್ಷದ ಬಾಬು; ಸಕ್ಕರೆ ಖಾಯಿಲೆಯಿಂದಾಗಿ 10 ವರ್ಷಗಳ ಹಿಂದೆ ತಮ್ಮ ಕಾಲುಗಳನ್ನು ಕಳೆದುಕೊಂಡಾಗಿನಿಂದ ದುಡಿಯುವುದನ್ನು ನಿಲ್ಲಿಸಿದ್ದಾರೆ. ಅವರು ಒಕ್ಕಲು ರೈತರಾಗಿದ್ದರು. ಇವರಿಗೆ ಐದು ಜನ ಗಂಡುಮಕ್ಕಳಿದ್ದು, ಅವರೂ ಸಹ ವಾಡಾದಲ್ಲಿನ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಅಥವ ಚಿಕ್ಕ ಕಾರ್ಖಾನೆಗಳಲ್ಲಿ ದುಡಿಯುತ್ತಾರೆ. ಇವರ ಚಿಕ್ಕ ಮಗ, 23ರ ಕಲ್ಪೇಶ್‍ ಪೈಪ್‍ಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಮಾಹೆಯಾನ 7 ಸಾವಿರ ರೂ.ಗಳ ದುಡಿಮೆಯಲ್ಲಿ ತೊಡಗಿದ್ದಾರೆ. “ಅವರು ನಮಗೆ ಕೆಲಸಕ್ಕೆ ಬರುವುದು ಬೇಡವೆಂದು ಹೇಳಿದ್ದಾರೆ. ನಮ್ಮ ಸಂಬಳವನ್ನು ಕಡಿತಗೊಳಿಸುತ್ತಾರೋ ಇಲ್ಲವೋ ಎಂಬುದು ತಿಳಿದಿಲ್ಲ”, ಎಂದು ಅವರು ಚಿಂತಾಕ್ರಾಂತರಾಗಿ ನುಡಿದರು.

ಆರು ಮೊಮ್ಮಕ್ಕಳನ್ನೂ ಒಳಗೊಂಡಂತೆ ಈ ಕುಟುಂಬದಲ್ಲಿ 15 ಜನರಿದ್ದಾರೆ. ಪ್ರಸ್ತುತ ಇಲ್ಲಿ ಯಾರಿಗೂ ಆದಾಯವಿಲ್ಲ. ಈ ತಿಂಗಳಿಗಾಗುವಷ್ಟಿರುವ ದಿನಸಿಯ ದಾಸ್ತಾನಿನಿಂದಲೇ ಈಗ ಇವರು ನಿಭಾಯಿಸುತ್ತಿದ್ದಾರಾದರೂ, ಕೆಲಸ ಅಥವ ಹಣವಿಲ್ಲದೆ ಮುಂಬರುವ ದಿನಗಳಲ್ಲಿ ಬದುಕುಳಿಯುವ ಬಗ್ಗೆ ಇವರಲ್ಲಿ ಅನಿಶ್ಚಿತತೆಯಿದೆ.

ಮೂರು ಮನೆಗಳಾಚೆಗೆ ವಾಸಿಸುತ್ತಿರುವ 18ರ ಸಂಜಯ್‍ ತುಮ್ಡ, ಮಾರ್ಚ್‍ 17ರಿಂದ ತಮಗೆ ಯಾವುದೇ ಸಂಪಾದನೆಯಿಲ್ಲವೆಂದು ಹೇಳುತ್ತಾರೆ. ಇವರು ಪಾಲ್ಘರ್‍ ಜಿಲ್ಲೆಯ ಇಟ್ಟಿಗೆ ಗೂಡುಗಳಲ್ಲಿ, ಮಾಹೆಯಾನ ಸುಮಾರು 20 ದಿನಗಳು ಕೆಲಸವನ್ನು ನಿರ್ವಹಿಸಿ 300-400 ರೂ.ಗಳ ದಿನಗೂಲಿಯನ್ನು ಗಳಿಸುತ್ತಾರೆ. ವಾಡಾದಲ್ಲಿನ ಕೆಲಸಗಾರರನ್ನು ನೇಮಿಸುವ ಗುತ್ತಿಗೆದಾರನು ಯಾವುದಾದರೂ ಕೆಲಸವು ಲಭ್ಯವಿದೆಯೇ ಎಂಬ ಬಗ್ಗೆ ಇವರಿಗೆ ಮಾಹಿತಿ ನೀಡುತ್ತಾನೆ. ಆತನು ಒಂದು ವಾರದಿಂದಲೂ ಇವರಲ್ಲಿಗೆ ಬಂದಿರುವುದಿಲ್ಲ. ವಾರ್ತೆಯನ್ನು ವೀಕ್ಷಿಸಿದಾಗ, “ಈ ತಿಂಗಳು ಎಲ್ಲ ಅಂಗಡಿಗಳನ್ನೂ ಮುಚ್ಚಲಾಗುತ್ತದೆ ಎಂಬುದಾಗಿ ತಿಳಿದುಬಂತು. ಈಗಾಗಲೇ ದಿನಸಿಯ ದಾಸ್ತಾನು ನಮ್ಮಲ್ಲಿ ಕಡಿಮೆಯಿದೆ. ಮುಂದಿನ ವಾರದಿಂದ ನಮ್ಮ ಆಹಾರ ಧಾನ್ಯಗಳು ಖಾಲಿಯಾಗಲು ಪ್ರಾರಂಭವಾಗುತ್ತವೆ”, ಎನ್ನುತ್ತಾರೆ ಸಂಜಯ್.

ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿಯೇ ಕೆಲಸವನ್ನು ನಿರ್ವಹಿಸುವ 20ರ ವಯಸ್ಸಿನ ಅಜಯ್‍ ಬೊಛಲ್ ಇದೇ ಚಿಂತೆಯನ್ನು ವ್ಯಕ್ತಪಡಿಸುತ್ತಾರೆ: “ನಮ್ಮ ತಾಯಿಯು ಎರಡು ದಿನಗಳಿಂದಲೂ ಸೆವಗ ಸಬ್ಜಿಯನ್ನು (ನುಗ್ಗೆಕಾಯಿ) ಮಾತ್ರವೇ ಮಾಡುತ್ತಿದ್ದಾರೆ. ಕೆಲಸವು ಬೇಗನೇ ದೊರೆಯದಿದ್ದಲ್ಲಿ ಹಣಕ್ಕಾಗಿ ಇತರರನ್ನು ಕೇಳಬೇಕಾಗುತ್ತದೆ”, ಎನ್ನುತ್ತಾರೆ ಅಜಯ್‍ ಬೊಛಲ್. ಅಜಯ್‍ ಅವರ ತಾಯಿ, 42 ವರ್ಷದ ಸುರೇಖ; ಬಳಲಿಕೆಯಿಂದಾಗಿ, ಕೆಲವು ತಿಂಗಳ ಹಿಂದೆ ವಾಡಾ ಪಟ್ಟಣದಲ್ಲಿನ ಮನೆಗೆಲಸದ ಉದ್ಯೋಗವನ್ನು ತ್ಯಜಿಸಿದ್ದಾರೆ. ಆಕೆಯ ಪತಿ ಸುರೇಶ್‍ ಮದ್ಯವ್ಯಸನಿಯಾಗಿದ್ದು ಸ್ವಲ್ಪ ಸಮಯದಿಂದ ಯಾವ ಕೆಲಸವನ್ನೂ ಮಾಡುತ್ತಿಲ್ಲ.

Left: Sanjay Tumda, a brick kiln worker, hasn’t earned anything since March 17; he says, 'From next week our food will start getting over'. Right: Ajay Bochal, a construction labourer says, 'If I don’t get work soon, we will have to ask for money from others'
PHOTO • Shraddha Agarwal
Left: Sanjay Tumda, a brick kiln worker, hasn’t earned anything since March 17; he says, 'From next week our food will start getting over'. Right: Ajay Bochal, a construction labourer says, 'If I don’t get work soon, we will have to ask for money from others'
PHOTO • Shraddha Agarwal
Left: Sanjay Tumda, a brick kiln worker, hasn’t earned anything since March 17; he says, 'From next week our food will start getting over'. Right: Ajay Bochal, a construction labourer says, 'If I don’t get work soon, we will have to ask for money from others'
PHOTO • Shraddha Agarwal

ಎಡಕ್ಕೆ: ಇಟ್ಟಿಗೆ ಗೂಡಿನಲ್ಲಿ ಕೆಲಸವನ್ನು ನಿರ್ವಹಿಸುವ ಸಂಜಯ್‍ ತುಮ್ಡ ಅವರಿಗೆ ಮಾರ್ಚ್‍ 17ರಿಂದ ಯಾವುದೇ ಸಂಪಾದನೆಯಿಲ್ಲ. ‘ಮುಂದಿನ ವಾರದಿಂದ ನಮ್ಮ ಆಹಾರದ ದಾಸ್ತಾನು ಖಾಲಿಯಾಗತೊಡಗುತ್ತದೆ’, ಎನ್ನುತ್ತಾರವರು. ಬಲಕ್ಕೆ: ‘ನನಗೆ ಬೇಗನೇ ಕೆಲಸವು ದೊರೆಯದಿದ್ದಲ್ಲಿ, ಇತರರಲ್ಲಿ ಹಣವನ್ನು ಕೇಳಬೇಕಾಗುತ್ತದೆ’, ಎನ್ನುತ್ತಾರೆ ಕಟ್ಟಡ ನಿರ್ಮಾಣ ಕಾರ್ಮಿಕರಾದ ಅಜಯ್‍ ಬೊಛಲ್

ಕುಟುಂಬದಲ್ಲಿನ ದಿನಸಿ ಬಹುತೇಕ ಖಾಲಿಯಾಗಿದೆ. “ಸರ್ಕಾರದ ಯೋಜನೆಯಡಿಯಲ್ಲಿ (ಸಾರ್ವಜನಿಕ ವಿತರಣಾ ವ್ಯವಸ್ಥೆ) ಪ್ರತಿ ತಿಂಗಳು ನಮಗೆ 12 ಕೆ.ಜಿ. ಗೋಧಿ (ಒಂದು ಕೆ.ಜಿ.ಗೆ 2 ರೂ.ಗಳಂತೆ) ಹಾಗೂ 8 ಕೆ.ಜಿ. ಅಕ್ಕಿ (ಒಂದು ಕೆ.ಜಿ.ಗೆ 3 ರೂ.ಗಳಂತೆ) ದೊರೆಯುತ್ತದೆ. ಈಗ ನಮಗೆ ಈ ತಿಂಗಳ ದಿನಸಿಯನ್ನು ಖರೀದಿಸಲು ಹಣದ ಅವಶ್ಯಕತೆಯಿದೆ”, ಎಂಬುದಾಗಿ ಅಜಯ್‍ ತಿಳಿಸಿದರು. ವಾಡಾದಲ್ಲಿನ ಸಾರ್ವನಿಕ ವಿತರಣಾ ವ್ಯವಸ್ಥೆಯ ಅಂಗಡಿಯಲ್ಲಿ ಪ್ರತಿ ತಿಂಗಳ 10ನೇ ತಾರೀಖಿನಂದು ದಿನಸಿಯ ದಾಸ್ತಾನು ಲಭ್ಯವಿರುತ್ತದೆ. ತಮ್ಮ ದಿನಸಿಯು ಖಾಲಿಯಾಗುತ್ತಿದ್ದಂತೆ, ಈ ದಿನಾಂಕದ ನಂತರ ಅಂಗಡಿಗೆ ತೆರಳುತ್ತೇವೆಂದು ಅಜಯ್‍ ತಿಳಿಸಿದರು. ಕಳೆದ ವಾರ ಮಾರ್ಚ್‍ 20ರ ವೇಳೆಗೆ ಕುಟುಂಬದಲ್ಲಿನ ದಿನಸಿಯ ದಾಸ್ತಾನು ಬಹುತೇಕ ಮುಗಿದಿತ್ತು. ಎರಡು ದಿನಗಳ ಹಿಂದೆ, ಅಜಯ್‍ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದಾಗ ಕುಟುಂಬಕ್ಕೆ ಇನ್ನೂ ಯಾವುದೇ ದಿನಸಿ ದೊರೆತಿರಲಿಲ್ಲ. ರಾತ್ರಿಯೂಟಕ್ಕೆ ಸ್ವಲ್ಪ ಅಕ್ಕಿ, ಬೇಳೆಯು ಉಳಿದಿತ್ತು. ತನ್ನ ತಾಯಿಗೆ ಹತ್ತಿರದ ತೋಟದ ಮನೆಯಲ್ಲಿ ಕೆಲಸವು ದೊರೆಯಬಹುದೆಂಬ ಆಸೆಯಲ್ಲಿದ್ದರು ಅಜಯ್.

ಜಠರಗರುಳಿನ ತಜ್ಞ ಹಾಗೂ ಮುಂಬೈನ ಪರೇಲ್‍ನಲ್ಲಿನ ಕೆ.ಇ.ಎಂ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿರುವ ಡಾ. ಅವಿನಾಶ್‍ ಸುಪೆ, “ದಿನಗೂಲಿ ನೌಕರರ ತಕ್ಷಣದ ಸಮಸ್ಯೆಯು ಕೊವಿಡ್‍-19 ಅಲ್ಲ. ತಮಗೆ ಊಟವು ದೊರೆಯಲಾರದೆಂಬುದು ಅವರಿಗಿರುವ ಭಯ,” ಎನ್ನುತ್ತಾರೆ. “ಕಾರ್ಮಿಕರ ದಿನನಿತ್ಯದ ಬದುಕಿಗೆ ಅವರಿಗೆ ದಿನಗೂಲಿಯ ಅಗತ್ಯವಿದೆ, ಆದರೆ ಈಗಲೇ ವಲಸೆ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ವಾಪಸ್ಸು ತೆರಳತಕ್ಕದ್ದಲ್ಲವೆಂಬುದು ಬಹಳ ಮುಖ್ಯ. ಗ್ರಾಮಗಳಿಂದ ನಗರಗಳೆಡೆಗಿನ ಅಥವ ನಗರಗಳಿಂದ ಗ್ರಾಮಗಳೆಡೆಗಿನ ಚಲನೆಯು ಸಮುದಾಯದಲ್ಲಿನ ಹರಡುವಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆಯಷ್ಟೇ. ವೈರಸ್‍ ಹಾಗೂ ವ್ಯಕ್ತಿಯು ಕೈಗೊಳ್ಳತಕ್ಕ ಮುನ್ನೆಚ್ಚರಿಕೆಯ ಬಗ್ಗೆ ನಾವು ಸಮಸ್ತರನ್ನೂ ಶಿಕ್ಷಿತರನ್ನಾಗಿಸಲು ಪ್ರಾರಂಭಿಸಬೇಕು”, ಎನ್ನುತ್ತಾರೆ ಡಾ.  ಸುಪೆ.

ವಾಡಾ ಪಟ್ಟಣದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವು ಕವಟೆಪಾಡಾ ನಿವಾಸಿಗಳ ಅತ್ಯಂತ ಸಮೀಪದ ಆರೋಗ್ಯ ಕೇಂದ್ರವೆನಿಸಿದೆ. “ಏನಾಗುತ್ತಿದೆಯೆಂಬ ಬಗ್ಗೆ ನಮಗೆ ಅರಿವಿಲ್ಲ. ಕೊರೊನ ವೈರಸ್‍ ಸಂಬಂಧಿತ ತಪಾಸಣೆಗೆ ಇಲ್ಲಿ ಯಾವ ಸೌಲಭ್ಯಗಳೂ ಇಲ್ಲ. ನಾವು ಸಾಧಾರಣ ರಕ್ತ ಪರೀಕ್ಷೆಯನ್ನಷ್ಟೇ ಮಾಡಲು ಸಾಧ್ಯ. ನಾವು ಈ ವೈರಸ್‍ನ ಮತ್ತಷ್ಟು ಹರಡುವಿಕೆಯನ್ನು ತಡೆಗಟ್ಟಬೇಕಿದೆ. ಸ್ವಯಂ-ಪ್ರತ್ಯೇಕತೆಯು ಇದಕ್ಕಿರುವ ಏಕೈಕ ಮಾರ್ಗ”, ಎನ್ನುತ್ತಾರೆ ವಾಡಾ ಸರ್ಕಾರಿ ಗ್ರಾಮೀಣ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿರುವ ಡಾ. ಶೈಲ ಅಧವ್.

ಆದರೆ ಕವಟೆಪಾಡಾ ನಿವಾಸಿಗಳಿಗೆ ದುಡಿಮೆ, ಆದಾಯ ಮತ್ತು ಊಟಕ್ಕಿಂತಲೂ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುವುದು ಅಷ್ಟೇನು ತುರ್ತಿನ ವಿಷಯವೆನಿಸಿಲ್ಲ. “ಮೋದಿ ಸರ್ಕಾರವು ವೈರಸ್‍ನ ಹರಡುವಿಕೆಯಿಂದಾಗಿ; ಎಲ್ಲವನ್ನೂ ಬಂದ್‍ ಮಾಡಿ ಮನೆಯಲ್ಲೇ ಉಳಿಯಬೇಕೆಂದು ಹೇಳಿದೆ. ಆದರೆ ನಾವು ಮನೆಯಲ್ಲಿ ಉಳಿಯುವುದಾದರೂ ಹೇಗೆ?”, ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ ವಂದನ.

ಅನುವಾದ: ಶೈಲಜ ಜಿ. ಪಿ.

Shraddha Agarwal

श्रद्धा अग्रवाल 'पीपल्स आर्काइव ऑफ़ रूरल इंडिया (पारी)' के लिए बतौर रिपोर्टर और कॉन्टेंट एडिटर काम करती हैं.

की अन्य स्टोरी Shraddha Agarwal
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

की अन्य स्टोरी Shailaja G. P.