ಕಿಲಾಬಂದರ್ ನ ಪ್ರವೇಶದ್ವಾರದ ಹೊರಭಾಗದಲ್ಲೇ   ಇರುವ ಬಾವಿಯೊಂದರ ಬಳಿ ಪೂರ್ವಾಹ್ನದ 11 ಗಂಟೆಗೇ ಸುಮಾರು 20 ಹೆಂಗಸರು ಮತ್ತು ಎಳೆಯ ಹೆಣ್ಣುಮಕ್ಕಳ ಗುಂಪು ಬಂದು ನಿಂತಾಗಿದೆ. ''ಬಾವಿಯ ಮೂಲೆಯೊಂದರಲ್ಲಿ ಒಂದಿಷ್ಟು ಸ್ವಲ್ಪ ನೀರು ಕಾಣುತ್ತಿದೆ ನೋಡಿ (ಬೇಸಿಗೆಯಾದ್ದರಿಂದ). ಇಲ್ಲಿಂದ ನೀರನ್ನು ತೆಗೆದು ಒಂದು ಕಾಲ್ಶಿಯನ್ನು (ಲೋಹದ ಬಿಂದಿಗೆ) ತುಂಬಿಸುವಷ್ಟರಲ್ಲಿ ಅರ್ಧ ತಾಸು ಹಿಡಿಯುತ್ತದೆ'', ಅನ್ನುತ್ತಿದ್ದಾರೆ ಇಲ್ಲಿಯ ನಿವಾಸಿ ನೀಲಮ್ ಮನ್ಭಾಟ್. ಮುಂಬೈ ನಗರಭಾಗದ ಉತ್ತರಕ್ಕಿರುವ ವಸಾಯಿ ಕೋಟೆಯ ಸರಹದ್ದಿನಂತಿರುವ ಕಿಲಾಬಂದರ್ ಪ್ರದೇಶವು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಒಂದು ಕರಾವಳಿಯ ಹಳ್ಳಿ.

ನಾಲ್ಕರ ಪ್ರಾಯದ ಹೆಣ್ಣುಮಕ್ಕಳೂ ಸೇರಿದಂತೆ ಬಾವಿಯ ಬಳಿಯಲ್ಲಿ ಹೀಗೆ ಗುಂಪುಗಟ್ಟಿ ನಿಂತಿರುವ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರಿಗೆ ಹೀಗೆ ನೀರಿಗಾಗಿ ತಾಸುಗಟ್ಟಲೆ ಕಾಯುವುದು ನಿತ್ಯದ ಮಾತಾಗಿಬಿಟ್ಟಿದೆ. ಹಳ್ಳಿಗೆ ಹತ್ತಿರದಲ್ಲಿರುವ ಕುಡಿಯುವ ನೀರಿನ ಏಕೈಕ ಮೂಲವೆಂದರೆ ಈ ಬಾವಿ. ಮುನಿಸಿಪಾಲಿಟಿಯಿಂದ ಸರಬರಾಜಾಗುವ ನೀರಿನ ಸೌಲಭ್ಯವು ಅನಿಯಮಿತ ಮತ್ತು ಅಸಮರ್ಪಕವಾಗಿದೆ ಎನ್ನುತ್ತಾರೆ ಇಲ್ಲಿಯ ನಿವಾಸಿಗಳು. ಇನ್ನು ಇಲ್ಲಿಯ ಬಹಳಷ್ಟು ಕುಟುಂಬಗಳು ಬೇಸಿಗೆಯ ಸಮಯದಲ್ಲಿ ಈ ಬಾವಿಯನ್ನೇ ಅವಲಂಬಿಸಿರುವುದರಿಂದ ನೀರಿನ ಲಭ್ಯತೆಯೂ ಕೂಡ ತೀರಾ ಇಳಿಮುಖವಾಗಿಬಿಟ್ಟಿದೆ. ಸದ್ಯಕ್ಕಂತೂ ಮಹಿಳೆಯರ ಮತ್ತು ಮಕ್ಕಳ ಈ ಗುಂಪು ನೀರಿಗಾಗಿ ಬಾವಿಯ ತಳವನ್ನು ಅಕ್ಷರಶಃ ಕೆರೆಯಬೇಕಾದ ಪರಿಸ್ಥಿತಿಯು ಬಂದೊದಗಿದೆ.

ಸುಮಾರು 600 ಚದರ ಕಿಲೋಮೀಟರುಗಳಲ್ಲಿ ವ್ಯಾಪಿಸಿರುವ ಪಾಲಗಢ ಜಿಲ್ಲೆಯಲ್ಲಿರುವ ವಸಾಯಿ ತಾಲೂಕಾ ದ ಜನಸಂಖ್ಯೆ ಸುಮಾರು 13 ಲಕ್ಷದಷ್ಟಾಗಬಹುದು (2011 ರ ಜನಗಣತಿಯ ಪ್ರಕಾರ). ಈ ಪ್ರದೇಶದಲ್ಲಿರುವ ಎರಡು ಪಟ್ಟಣಗಳಿಗೆ ಮತ್ತು ನೂರಕ್ಕೂ ಹೆಚ್ಚಿನ ಹಳ್ಳಿಗಳಿಗೆ, ಬಸ್ತಿಗಳಿಗೆ ಸಮರ್ಪಕವಾಗಿ ನೀರನ್ನು ಒದಗಿಸುವ ಜವಾಬ್ದಾರಿಯು ವಸಾಯಿ ವಿರಾರ್ ನಗರಸಭಾ ಪಾಲಿಕೆಯದ್ದು. ಆದರೆ ದುರಾದೃಷ್ಟವಶಾತ್ ಹಾಗಾಗುತ್ತಿಲ್ಲ.

ತಾವು ನೀರಿಗಾಗಿ ಇನ್ನೂ ಬಾವಿ ಮತ್ತು ಟ್ಯಾಂಕರುಗಳನ್ನು ಅವಲಂಬಿಸಿದ್ದರೆ ಪಾಲಗಢಕ್ಕೆ ಬರಬೇಕಾಗಿರುವ ನೀರನ್ನು ಮುಂಬೈ ಮೆಟ್ರೋಪಾಲಿಟನ್ ಭಾಗಕ್ಕೆ ತಿರುಗಿಸಿರುವ ಬಗ್ಗೆ ಕಿಲಾಬಂದರಿನ ನಿವಾಸಿಗಳಿಗೆ ಅಸಮಾಧಾನವಿದೆ. ''ಆಕೆ ಇದನ್ನೆಲ್ಲಾ ಮಾಡಬೇಕಿಲ್ಲ'', ಪ್ರಿಯಾ ಘಾಟ್ಯಾ ಎಂಬಾಕೆ ನನ್ನೆಡೆಗೆ ಬೊಟ್ಟುಮಾಡುತ್ತಾ ಮಹಿಳೆಯೊಬ್ಬಳಲ್ಲಿ ಹೇಳುತ್ತಿದ್ದಾಳೆ. ''ಅವಳ ಬಳಿ ಯಂತ್ರ ಇದೆ ಅನಿಸುತ್ತೆ (ಬಟ್ಟೆ ಒಗೆಯಲು). ಇದೆಲ್ಲಾ ನೀನು ಮಾಡಬೇಕಿಲ್ಲ. ನಮಗಷ್ಟೇ ಇಲ್ಲಿ ನೀರು ಸಿಗುವುದಿಲ್ಲ, ಆದರೆ ನಿಮಗಿದೆ'', ಎನ್ನುತ್ತಿದ್ದಾಳೆ ಆಕೆ.

ವಸಾಯಿ ಕೋಟೆಯ 109 ಎಕರೆಯ ಭೂಮಿಯ ಆವರಣದಲ್ಲಿ ಮತ್ತು ಆಸುಪಾಸಿನಲ್ಲಿ 75 ಕ್ಕಿಂತಲೂ ಹೆಚ್ಚಿನ ಬಾವಿಗಳಿವೆ. ''ಆದರೆ ಅವುಗಳಲ್ಲಿ ಬಹಳಷ್ಟು ಉಪಯೋಗಿಸುವ ಸ್ಥಿತಿಯಲ್ಲಿಲ್ಲ'', ಎನ್ನುತ್ತಿದ್ದಾರೆ ಕೋಟೆಯ ಮೇಲ್ವಿಚಾರಣೆಯನ್ನು ವಹಿಸಿರುವ, ಪುರಾತತ್ವ ಶಾಸ್ತ್ರ ಸಮೀಕ್ಷೆಯ (ಆರ್ಕಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ) ಸಂರಕ್ಷಣಾ ಸಹಾಯಕರಾದ ಕೈಲಾಸ್ ಶಿಂಧೆಯವರು. ಇದರಲ್ಲಿ 5-6 ಬಾವಿಗಳು ಮಾತ್ರ ಉಪಯೋಗಿಸುವ ಸ್ಥಿತಿಯಲ್ಲಿವೆಯಂತೆ.


PHOTO • Samyukta Shastri

ವಸಾಯಿ ಕೋಟೆಯ ಬೇಲ್ ಕಿಲ್ಲಾದ ಭಾಗದಲ್ಲಿರುವ ಬಾವಿಯೊಂದರ ಬಳಿ ಶಿಲ್ಪಾ ಅಲಿಬಾಘ್ (ಎಡ) ಮತ್ತು ಜೊಸೆಫಿನ್ ಮಸ್ತಾನ್ (ಬಲ) ಬಟ್ಟೆ ಒಗೆಯುತ್ತಿದ್ದಾರೆ. ತಮ್ಮೊಂದಿಗೆ ಬಟ್ಟೆಗಳ ಒಂದು ದೊಡ್ಡ ರಾಶಿ, ಡಿಟರ್ಜಂಟ್ ಮತ್ತು ಮೇಲ್ಭಾಗವನ್ನು ಕತ್ತರಿಸಿದ ಪ್ಲಾಸ್ಟಿಕ್ ಕ್ಯಾನುಗಳನ್ನು ಹಿಡಿದುಕೊಂಡು ಬರುತ್ತಾರೆ ಇವರು. ಇಂಥಾ ಕ್ಯಾನುಗಳಿಗೆ ಹಗ್ಗವನ್ನು ಕಟ್ಟಿ, ಬಾವಿಯೊಳಗೆ ಇಳಿಸಿ ನೀರನ್ನು ಸೇದುವುದು ಇವರ ರೂಢಿ. ''ನಮ್ಮ ಇತರ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ನಾವು ನಿತ್ಯವೂ ಇಲ್ಲಿಗೆ ಬರುತ್ತೇವೆ. ಹೌದು, ಪ್ರತಿನಿತ್ಯವೂ. ನಮಗೆ ರಜೆಯೆಂಬುದೇ ಇಲ್ಲ'', ಎಂದು ನಗುತ್ತಾ ಹೇಳುತ್ತಿದ್ದಾಳೆ ಶಿಲ್ಪಾ.

PHOTO • Samyukta Shastri

ಇಲ್ಲಿಂದ ಸ್ವಲ್ಪವೇ ದೂರದಲ್ಲಿರುವ ಮತ್ತೊಂದು ಬಾವಿಯೊಂದರ ಬಳಿ ಮಹಿಳೆಯರು ಮತ್ತು ಎಳೆಯ ಹೆಣ್ಣುಮಕ್ಕಳ ಗುಂಪೊಂದು ಇಂಥದ್ದೇ ಕ್ಯಾನುಗಳನ್ನು ಬಳಸಿ, ನೀರನ್ನೆತ್ತಿ ತಮ್ಮ ಸ್ಟೇಯ್ನ್ ಲೆಸ್ ಸ್ಟೀಲ್ ಮತ್ತು ತಾಮ್ರದ ಬಿಂದಿಗೆಗಳಿಗೆ ಸುರಿಯುತ್ತಿದ್ದಾರೆ. ಅಂದಹಾಗೆ ಈ ಬಾವಿಗೆ ಸುಮಾರು ಕೋಟೆಯಷ್ಟೇ ವಯಸ್ಸಾಗಿರಬಹುದು. ಕೋಟೆಯನ್ನು 16 ನೇ ಶತಮಾನದಲ್ಲಿ ಕಟ್ಟಿಸಲಾಗಿತ್ತು

PHOTO • Samyukta Shastri

''ಈ ಬಾವಿಗೆ 400 ವರ್ಷ ವಯಸ್ಸಾಗಿದೆ. ಏನಾದರೂ ರಿಪೇರಿ ಕೆಲಸಗಳಿದ್ದಲ್ಲಿ ನಾವೆಲ್ಲರೂ ನಮ್ಮ ಕೈಲಾದಷ್ಟು ಹಣವನ್ನು ಹಾಕಿ ಮಾಡಿಸುತ್ತೇವೆ'', ಬಾವಿಯ ಬಳಿಯಲ್ಲಿಟ್ಟಿರುವ ತನ್ನ ಮೀನಿನ ಬುಟ್ಟಿಯ ಮೇಲೆ ಕುಳಿತುಕೊಂಡು ಬಸ್ಸಿಗಾಗಿ ಕಾಯುತ್ತಿರುವ ರೆಗೀನಾ ಜಂಗ್ಲಿ ಹೇಳುತ್ತಿದ್ದಾಳೆ. ''ಹಳ್ಳಿಯ ವಿವಿಧ ಭಾಗಗಳಲ್ಲಿ ಹಲವಾರು ನಲ್ಲಿಗಳಿವೆ. ಆದರೆ ಅವುಗಳಿಂದ ಹೆಚ್ಚಿನ ಪ್ರಯೋಜನವೇನೂ   ಇಲ್ಲ. ಮುನಿಸಿಪಾಲಿಟಿಯಿಂದ ಸರಬರಾಜಾಗುವ ನೀರು ಒಂದೊಂದು ದಿನ ಬಿಟ್ಟು ಸುಮಾರು ಒಂದೂವರೆ ತಾಸುಗಳ ಕಾಲ ಬರುತ್ತದೆ. ಹಳ್ಳಿಯಲ್ಲಿರುವ ಟ್ಯಾಂಕ್ ಗಳಲ್ಲಿ ನೀರಿದೆಯೋ ಇಲ್ಲವೋ ಎಂಬುದನ್ನು ನೋಡುವಷ್ಟೂ ಅವರಿಗೆ ವ್ಯವಧಾನವಿಲ್ಲ'', ಎಂದು ತಮ್ಮ ಅಭಿಪ್ರಾಯವನ್ನೂ ಸೇರಿಸುತ್ತಿದ್ದಾರೆ ನೀಲಮ್ ಮನ್ಭಾಟ್.

PHOTO • Samyukta Shastri

ಹೀಗೆ ನಿತ್ಯದ ಗೃಹಬಳಕೆಗೆ ಬೇಕಾಗಿರುವ ನೀರನ್ನು ತರುವಷ್ಟರಲ್ಲಿ ಇವರೆಲ್ಲರ ಹಲವು ತಾಸುಗಳೇ ಕಳೆದುಹೋಗಿರುತ್ತವೆ. ಕತ್ತಲಾದ ನಂತರವೂ ತಮ್ಮ ಪಾಲಿನ ನೀರಿಗಾಗಿ ಕಾಯುತ್ತಾ ಬಾವಿಯ ಬಳಿ ನಿಂತಿರುವ ಕೆಲವು ಮಹಿಳೆಯರನ್ನು ನಾವು ಕಾಣಬಹುದು. ನಂತರ ಅವುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಅವರು ತಮ್ಮ ತಮ್ಮ ಮನೆಗಳಿಗೂ ಮರಳಬೇಕು. ನೀರಿನ ಮಡಿಕೆ, ಬಿಂದಿಗೆ ಮತ್ತು ತುಂಬಿಸಲು ಬಳಸಲಾಗುವ ಇತರ ವಸ್ತುಗಳು 5 ರಿಂದ 15 ಲೀಟರುಗಳಷ್ಟಿನ ನೀರನ್ನು ತಮ್ಮಲ್ಲಿ ತುಂಬಿಸಿಡಬಲ್ಲವು. ಇನ್ನು ದೊಡ್ಡ ಗಾತ್ರದ ಜೆರ್ರಿ ಕ್ಯಾನುಗಳು ಸುಮಾರು 50 ಲೀಟರ್ ಗಳಷ್ಟಿನ ನೀರನ್ನು ತುಂಬಿಸಿಟ್ಟುಕೊಳ್ಳಲು ಸಹಕಾರಿ.

PHOTO • Samyukta Shastri

''ಮುಂಜಾನೆ ಎರಡರ ಜಾವಕ್ಕೆ ಎದ್ದು ನಾವು ನೀರನ್ನು ತುಂಬಿಸುತ್ತೇವೆ. ಆ ಹೊತ್ತಿಗೆ ಜನರು ಸಿಗುವುದು ಕಮ್ಮಿ. ನಮಗಾದರೂ ಬೇರೆ ಯಾವ ಆಯ್ಕೆಯಿದೆ? ನೀರಿನ ಅವಶ್ಯಕತೆಯಂತೂ ಇದ್ದೇ ಇದೆ. ನೀರು ನಿಮಗೆ ಸಿಗುತ್ತದೆ, ಆದರೆ ನಮಗಿಲ್ಲ. ಕೆಲವರಿಗೆ ದಕ್ಕುತ್ತದೆ, ಇನ್ನು ಕೆಲವರಿಗಿಲ್ಲ. ಮುನಿಸಿಪಾಲಿಟಿಯ ನೀರನ್ನು ನಂಬಿಕೊಂಡು ಕೂರುವಂತಿಲ್ಲ. ಹಲವು ವರ್ಷಗಳಿಂದ ನೀರಿನ ಸಂಪರ್ಕವೇನೋ ಇದೆ. ಆದರೆ ಅದರಲ್ಲಿ ನೀರು ಮಾತ್ರ ಇನ್ನೂ ಬಂದಿಲ್ಲ'', ಎನ್ನುತ್ತಿದ್ದಾರೆ ಸುನೀತಾ ಮೋಸಸ್ ಇಟೂರ್ (ಎಡ).

ತಮ್ಮ ಮನೆಯಲ್ಲಿ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರುವ ಕೊಳವೆಗಳ ಸಮೇತವಾಗಿ ನೀರಿನ ಸಂಪರ್ಕವನ್ನು ಹೊಂದಿರುವ ನಾದಿನಿಯರಾದ ಅವೀಟಾ ಮತ್ತು ಪ್ರಿಸಿಲ್ಲಾ ಪಕ್ಯಾ ನಿಜಕ್ಕೂ ಅದೃಷ್ಟವಂತರು. ಬಾವಿಯಿಂದ ನಾವು ಕುಡಿಯುವ ನೀರನ್ನಷ್ಟೇ ತರುತ್ತೇವೆ ಎನ್ನುತ್ತಿದ್ದಾಳೆ ಪ್ರಿಸಿಲ್ಲಾ. ಅವರು ಮುನಿಸಿಪಾಲಿಟಿಯ ನೀರನ್ನು ಕುಡಿಯುವುದಿಲ್ಲವಂತೆ. ಇನ್ನು ಇಷ್ಟು ಕಡಿಮೆ ಪ್ರಮಾಣದ ನೀರನ್ನು ಪಡೆಯಲೂ ಕೂಡ ಇವರ ಬಹಳಷ್ಟು ಸಮಯವು ವ್ಯರ್ಥವಾಗುತ್ತಿದೆ. ''ನೀರು ಅದೆಷ್ಟು ಕಮ್ಮಿಯಿದೆಯೆಂದರೆ ಎರಡು ಹಾಂಡಿಗಳನ್ನು ತುಂಬಿಸಲು ಒಂದು ತಾಸು ಬೇಕಾಗುತ್ತದೆ'', ತನ್ನ ಕೈಗಳಿಂದ ಪಾತ್ರೆಯ ಗಾತ್ರವನ್ನು ತೋರಿಸಲು ಪ್ರಯತ್ನಿಸುತ್ತಾ ಆಕೆ ಹೇಳುತ್ತಿದ್ದಾಳೆ.

ಇಲ್ಲಿ ದಿನವಿಡೀ ಬಾವಿಯಿಂದ ನೀರು ತೆಗೆಯುವ ಪರಿಣಾಮವಾಗಿ ಅಂತರ್ಜಲವು ಮತ್ತೆ ಜೀವಂತಗೊಳ್ಳುವ ಪ್ರಕ್ರಿಯೆಗೆ ಸಮಯವೇ ಇಲ್ಲದಂತಾಗಿದೆ. ಬಾವಿಯಲ್ಲಿ ಉಳಿದ ಒಂದಿಷ್ಟು ನೀರನ್ನೂ ತೆಗೆದರೆ ಅಲ್ಲಿ ಸಿಗುವುದು ಮಣ್ಣು ತುಂಬಿದ ನೀರು ಮತ್ತು ಕೆಲ ಚಿಕ್ಕ ಕಲ್ಲುಗಳಷ್ಟೇ. ಹೀಗೆ ತೆಗೆದ ನೀರನ್ನು ಕಲ್ಲು, ಮಣ್ಣುಗಳಿಂದ ಮುಕ್ತಗೊಳಿಸಲು ಈ ಹೆಣ್ಣುಮಕ್ಕಳು ನೀರನ್ನು ಜರಡಿಗಳಿಂದ ಭಟ್ಟಿಯಿಳಿಸಿ ತಮ್ಮ ತಮ್ಮ ಹಾಂಡಿಗಳಿಗೆ ಸುರಿದ ನಂತರ ಮನೆಗಳಿಗೆ ಮರಳುತ್ತಾರೆ (ಬಲ).

PHOTO • Samyukta Shastri

ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಮತ್ತೊಂದು ಬಾವಿಯ ಬಳಿ ಕೆಲ ಹೆಂಗಸರು ತಮ್ಮ ಬಟ್ಟೆಗಳನ್ನು ಒಗೆಯುತ್ತಿದ್ದಾರೆ. ಈ ಬಾರಿಯ ಭಯಂಕರ ಬೇಸಿಗೆಗೆ ಈ ಬಾವಿಯು ಕೊಂಚ ಹೆಚ್ಚೇ ವೇಗದಲ್ಲಿ ಒಣಗುತ್ತಿದೆ. ಎಳೆಯ ಹೆಣ್ಣುಮಕ್ಕಳು ನೀರನ್ನು ತುಂಬಿಸುವುದಷ್ಟೇ ಅಲ್ಲದೆ ಇತರ ಮನೆಕೆಲಸಗಳಲ್ಲೂ ಅಮ್ಮಂದಿರಿಗೆ ನೆರವಾಗುತ್ತಾರೆ. ''ಅವಳು ಎರಡೂವರೆ ವರ್ಷದ ಪ್ರಾಯದಿಂದಲೂ ಬಟ್ಟೆಗಳನ್ನು ಒಗೆಯುತ್ತಿದ್ದಾಳೆ'', ಎಂದು ಹೆಮ್ಮೆಯಿಂದ ತನ್ನ ಮಗಳಾದ ನೆರಿಸ್ಸಾಳ ಬಗ್ಗೆ ಹೇಳುತ್ತಿದ್ದಾರೆ ಪ್ರಿಯಾ ಘಾಟ್ಯಾ. ''ತನ್ನ ಬಟ್ಟೆಗಳನ್ನು ತಾನೇ ಅದೆಷ್ಟು ಚೆಂದ ಒಗೆಯುತ್ತಿದ್ದಾಳೆ ನೋಡಿ. ಈ ಜುಲೈನಲ್ಲಿ ಅವಳಿಗೆ ನಾಲ್ಕು ವರ್ಷವಾಗುತ್ತದೆ'', ಎನ್ನುತ್ತಾಳೆ ಆಕೆ.

PHOTO • Samyukta Shastri

ಅಲ್ಲಿ ಕೆಲಸ ಮಾಡುತ್ತಿರುವ ಏಕೈಕ ಮಗುವೆಂದರೆ ನೆರಿಸ್ಸಾ. ನೀರಿನ ತೀವ್ರ ಅಭಾವವು ಹೆಚ್ಚಿನ ಮನೆಗಳಲ್ಲಿ ಎಳೆಯ ಮಕ್ಕಳನ್ನೂ ಕೂಡ ನಿತ್ಯದ ಕೆಲಸಗಳಿಗೆ ಹಚ್ಚಿಬಿಟ್ಟಿದೆ. ಅದರಲ್ಲೂ ಹೆಚ್ಚಿನ ಸಂದರ್ಭಗಳಲ್ಲಿ ಇಂಥಾ ಕೆಲಸಗಳು ಬೀಳುವುದು ಮನೆಯಲ್ಲಿರುವ ಹೆಣ್ಣುಮಕ್ಕಳ ಹೆಗಲ ಮೇಲೆ.

PHOTO • Samyukta Shastri

4 ನೇ ತರಗತಿಯಲ್ಲಿ ಓದುತ್ತಿರುವ ವನೆಸ್ಸಾ ತನ್ನ ಗೆಳತಿಯಾದ ಸಾನಿಯಾಳೊಂದಿಗೆ ಪ್ರತಿನಿತ್ಯವೂ ಮುಂಜಾನೆ ಕಿಲಾಬಂದರಿನ ಬಾವಿಯತ್ತ ನಡೆಯುತ್ತಾಳೆ. ''ನಾನು 7 ಕ್ಕೆ ಎದ್ದು, ಸುಮಾರು 10-10:30 ರ ವರೆಗೆ ನೀರು ತುಂಬಿಸುತ್ತೇನೆ. ನಂತರ ಮಧ್ಯಾಹ್ನ ಶಾಲೆಗೆ ಹೋಗುತ್ತೇನೆ'', ಎನ್ನುತ್ತಿದ್ದಾಳೆ 11 ರ ಬಾಲೆ ಸಾನಿಯಾ ಭೀಮಾವಾಘ್ರಿ. ಸಾನಿಯಾಳ ಮನೆಯಲ್ಲಿರುವ ಇತರ ಸದಸ್ಯರೆಂದರೆ ಹೆತ್ತವರು, ಹಿರಿಯಕ್ಕ ಮತ್ತು ಮೂವರು ತಮ್ಮಂದಿರು. ಬಟ್ಟೆ ವ್ಯಾಪಾರಿಯಾಗಿರುವ ಸಾನಿಯಾಳ ತಾಯಿ ಮತ್ತು ಮೀನುಗಾರಿಕೆಯ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸಾನಿಯಾಳ ತಂದೆ ಉದ್ಯೋಗಕ್ಕೆಂದು ಹೊರಗೆ ಹೋದರೆ, ಸಾನಿಯಾಳಿಗಿಂತ ಒಂದು ವರ್ಷ ಹಿರಿಯಳಾದ ಆಕೆಯ ಸಹೋದರಿ ಕುಟುಂಬಕ್ಕಾಗಿ ಅಡುಗೆ ಮಾಡುತ್ತಾಳೆ. ಇತ್ತ ಸಾನಿಯಾ ಮನೆಗೆ ನೀರು ತುಂಬಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಾಳೆ. ನೀರನ್ನು ತರಲು ಬಾವಿಯಿಂದ ಮನೆಗೆ ಮತ್ತು ಮನೆಯಿಂದ ಬಾವಿಗೆ ಸಾನಿಯಾಳ ಹಲವು ಪ್ರಯಾಣಗಳಾಗುತ್ತವೆ. ಆಕೆಯ ಮನೆ ಬೇರೆ ಕಿಲಾಬಂದರ್ ಹಳ್ಳಿಯ ಸಾಕಷ್ಟು ಒಳಭಾಗದಲ್ಲಿದೆ. ಆದರೆ ಒಮ್ಮೆಗೆ ಎರಡೇ ಬಿಂದಿಗೆ ನೀರನ್ನು ಕೊಂಡುಹೋಗಲು ಅವಳಿಗೆ ಸಾಧ್ಯವಂತೆ. ಹೀಗಾಗಿ ನೀರನ್ನು ತರಲು ಹಲವು ಪ್ರಯಾಣಗಳನ್ನು ಮಾಡಲೇಬೇಕಾದ ಅನಿವಾರ್ಯತೆ ಅವಳಿಗೆ. ಮೇಲಿನ ಚಿತ್ರದಲ್ಲಿ ತೋರಿಸಲಾಗಿರುವ ತಳ್ಳುಗಾಡಿಗಳನ್ನು ಕೆಲ ಕುಟುಂಬಗಳು ನೀರನ್ನು ಹೊತ್ತು ತರಿಸಲೆಂದೇ ಬಾಡಿಗೆಗೆಂದು ಪಡೆದುಕೊಳ್ಳುತ್ತಾರೆ. ಸಾನಿಯಾಳ ಕುಟುಂಬವು ಅಂಥಾ ಕುಟುಂಬಗಳಲ್ಲಂತೂ ಬರುವುದಿಲ್ಲ

PHOTO • Samyukta Shastri

ಕೆಲವೊಮ್ಮೆ ಒಂದು ದಿನದ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರನ್ನು ಕೆಲವು ಕುಟುಂಬಗಳು ತರಿಸಿಕೊಳ್ಳುವುದೂ ಉಂಟು. ಈ ನೀರನ್ನು ದೊಡ್ಡ ಗಾತ್ರದ ಜೆರ್ರಿ ಕ್ಯಾನುಗಳಲ್ಲಿ ಇವರುಗಳು ತುಂಬಿಸಿಡುತ್ತಾರೆ. ಕ್ಯಾನ್ ಹೊಂದಿರುವ ಕುಟುಂಬದ ಮಾಲಕರು ತಮ್ಮ ಹೆಸರಿನ ಮೊದಲೆರಡು ಅಕ್ಷರಗಳನ್ನು ಪ್ರತೀ ಕ್ಯಾನ್ ಗಳಲ್ಲೂ ಗುರುತಿಗಾಗಿ ಪೈಂಟ್ ನಲ್ಲಿ ಬರೆಸಿಟ್ಟಿರುತ್ತಾರೆ. ಬಾವಿಯ ಬಳಿಯಲ್ಲಿ ಸರತಿಯಲ್ಲೇ ಎಲ್ಲರಂತೆ ಕಾದ ನಂತರ ಈ ತುಂಬಿದ ಕ್ಯಾನುಗಳು ಆಟೋರಿಕ್ಷಾಗಳಲ್ಲಿ ತಲುಪಬೇಕಾದವರ ಮನೆಗೆ ಬಂದು ತಲುಪುತ್ತದೆ.

PHOTO • Samyukta Shastri

''ಈಗ ನಮಗೆ ಹಸಿವಾಗುತ್ತಿದೆ. ಹೀಗಾಗಿ ಮನೆಗೆ ಮರಳುತ್ತಿದ್ದೇವೆ. ನಾವು ನಂತರ ಮತ್ತೆ ಬರುತ್ತೇವೆ'', ಎಂದಿರುವ ವನೆಸ್ಸಾ ತನ್ನ ಮನೆಯತ್ತ ಸಾಗುವ ಇಕ್ಕಟ್ಟಾದ ಓಣಿಯ ಕಡೆಗೆ ದಾಪುಗಾಲಿಟ್ಟಾಗಿದೆ. ಇತ್ತ ನಾನು ಸಾನಿಯಾಳ ಹಿಂದೆ ಅವಳ ಮನೆಯ ಕಡೆಗೆ ನಡೆಯತೊಡಗಿದ್ದೇನೆ. ಆಕೆಯ ಮನೆಯು ಆ ಕಟ್ಟಡದ ಒಂದನೇ ಮಹಡಿಯಲ್ಲಿದೆ. ಅಷ್ಟು ಭಾರದ ಬಿಂದಿಗೆಗಳನ್ನು ತನ್ನ ಪುಟ್ಟ ಕೈಗಳಲ್ಲಿ ಹಿಡಿದುಕೊಂಡು ಒಂದು ಹನಿ ನೀರೂ ಕೆಳಕ್ಕೆ ಚೆಲ್ಲದಂತೆ ಮೆಟ್ಟಿಲೇರುತ್ತಾ ಮನೆಯತ್ತ ಸಾಗುತ್ತಿದ್ದಾಳೆ ಸಾನಿಯಾ.

Samyukta Shastri

संयुक्ता शास्त्री पीपुल्स आर्काइव ऑफ रूरल इंडिया (पारी) की सामग्री समन्वयक हैं. उनके पास सिंबायोसिस सेंटर फॉर मीडिया ऐंड कम्युनिकेशन, पुणे से मीडिया स्टडीज में स्नातक, तथा मुंबई के एसएनडीटी महिला विश्वविद्यालय से अंग्रेजी साहित्य में स्नातकोत्तर की डिग्री है.

की अन्य स्टोरी संयुक्ता शास्त्री
Translator : Prasad Naik

Currently working as a Senior Engineer at Gurugram (Haryana), Prasad Naik has served in Uige of Republic of Angola (Africa) for a drinking water supply project. Prasad Naik is a freelance writer and columnist. He can be contacted at [email protected]. This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

की अन्य स्टोरी प्रसाद नायक