“ಮನೆಗೆಲಸಗಳಲ್ಲಿ ನಿರತರಾಗಿರುವ ಇವರ ದಿನನಿತ್ಯದ ಸಂಪಾದನೆಯಿಂದ, ಆಯಾ ದಿನದ ಖರ್ಚನ್ನು ಮಾತ್ರ ಭರಿಸಲು ಸಾ‍ಧ್ಯ. ಆದರೀಗ ಆ ಕೆಲಸವೂ ಇಲ್ಲದಂತಾಗಿದ್ದು, ನಮಗೆ ಹಣವು ದೊರೆಯುವುದಾದರೂ ಎಲ್ಲಿಂದ?” ಎಂಬುದಾಗಿ ಪುಣೆ ನಗರದ ಕೊಥುರ್ಡ್ ಆರಕ್ಷಕ ಠಾಣೆಯ ಸಮೀಪದ ಲಕ್ಷ್ಮಿ ನಗರದ ನಿವಾಸಿಯಾದ ಅಬೊಲಿ ಕಾಂಬ್ಲೆ ಪ್ರಶ್ನಿಸುತ್ತಾರೆ. “ಪಡಿತರ ಧಾನ್ಯಗಳೇ ದೊರೆಯುತ್ತಿಲ್ಲ. ಊಟವೇ ದೊರೆಯದಿದ್ದಲ್ಲಿ ಮಕ್ಕಳು ಬದುಕುವುದಾದರೂ ಹೇಗೆ?”

ಕೋವಿಡ್‌-19 ಲಾಕ್‌ಡೌನ್‌ ಘೋಷಣೆಯಾದ ಐದು ದಿನಗಳ ನಂತರ ಅಬೊಲಿಯವರ ಮಾತಿಯಲ್ಲಿ ಸಿಟ್ಟು ಹಾಗೂ ನಿರಾಸೆಯು ಸ್ಪಷ್ಟವಾಗಿ ಕಾಣಬಹುದಿತ್ತು. ಮಾರ್ಚ್‌ 30ರಂದು ಆಕೆಯು ವಾಸವಿರುವ ಕಾಲೋನಿಗೆ ನಾನು ಭೇಟಿ ನೀಡಿದ್ದೆ. “ಕನಿಷ್ಟ, ಇಂತಹ ಸಮಯದಲ್ಲಾದರೂ ನಮಗೆ ಆಹಾರ ಧಾನ್ಯಗಳು ಪಡಿತರದ ಅಂಗಡಿಯಲ್ಲಿ ದೊರೆಯಬೇಕಿತ್ತು. ಎಲ್ಲ ಹೆಂಗಸರೂ ಮನೆಯಲ್ಲೇ ಇದ್ದಾರೆ. ಪೊಲೀಸರು ನಮ್ಮನ್ನು ಹೊರಗೆ ಹೋಗಲು ಬಿಡುತ್ತಿಲ್ಲ. ನಾವು ಹೊರಗೆ ಹೋಗಿ ಕೆಲಸ ಮಾಡದಿದ್ದಲ್ಲಿ, ದಿನಸಿ ಸಾಮಾನುಗಳನ್ನು  ಕೊಳ್ಳಲಾರೆವು. 1 ಮನೆಯನ್ನು ನಿಭಾಯಿಸುವುದಾದರೂ ಹೇಗೆಂಬ ಬಗ್ಗೆ ನಮಗೆ ಚಿಂತೆಯಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ, ನಮಗೆ ಆಹಾರ ಧಾನ್ಯಗಳು ದೊರೆಯದಿದ್ದಲ್ಲಿ, ಪ್ರಯೋಜನವಾದರೂ ಏನು? ಪಡಿತರವೇ ದೊರೆಯದೆ ನಾವು ನೇಣುಹಾಕಿಕೊಳ್ಳಬೇಕೇ?” ಎಂಬುದಾಗಿ 23ರ ಆಕೆ ಪ್ರಶ್ನಿಸುತ್ತಾರೆ. 995ರಲ್ಲಿ ಸೋಲಾಪುರ್‌ ಜಿಲ್ಲೆಯ ಅಕೊಲೆಕಟಿ ಹಳ್ಳಿಯಿಂದ ಅಬೊಲಿಯವರ ಕುಟುಂಬವು ಪುಣೆಗೆ ಬಂದಿತು. ಇವರ ವಿವಾಹವು ಏಪ್ರಿಲ್‌ 16ರಂದು ನೆರವೇರಬೇಕಿತ್ತು.  ಆದರೀಗ ಅದು ಮುಂದೂಡಲ್ಪಟ್ಟಿದೆ.

ಏಳು ಛಾಳುಗಳಲ್ಲಿ 850 ಜನರು (ಸರ್ಕಾರೇತರ ಸಮೀಕ್ಷೆಯ ಅನುಸಾರ) ವಾಸಿಸುತ್ತಿರುವ ಕಾಲೋನಿಗೆ ನಾನು ಭೇಟಿಯಿತ್ತಾಗ, ಮನೆಗೆಲಸಗಳಲ್ಲಿ ನಿರತರಾಗಿರುವ ಅಲ್ಲಿನ ಬಹುತೇಕ ಮಹಿಳೆಯರು, ಆಹಾರ ಹಾಗೂ ಹಣದ ಅಭಾವಕ್ಕೆ ಪರಿಹಾರವನ್ನು ಕಂಡುಕೊಳ್ಳಲು, ಸಭೆಯೊಂದನ್ನು ಆಯೋಜಿಸಿದ್ದರು. ಲಕ್ಷ್ಮಿ ನಗರದ 190 ಕುಟುಂಬಗಳಲ್ಲಿನ ಬಹಳಷ್ಟು ಜನ, ಮಹಾರಾಷ್ಟ್ರದ ಅಹ್ಮದ್‌ನಗರ, ಬೀಡ್‌, ಸೋಲಾಪುರ್‌ ಹಾಗೂ ಲಾತೂರ್‌ ಜಿಲ್ಲೆಗಳು ಮತ್ತು ನೆರೆಯ ಕರ್ನಾಟಕದಿಂದ ಬಂದ ವಲಸೆಗಾರರು. ಇವರಲ್ಲಿನ ಅನೇಕರು, ಮಾತಂಗ ದಲಿತ ಸಮುದಾಯಕ್ಕೆ ಸೇರಿದವರು.

ಮಹಾರಾಷ್ಟ್ರದ ಹೊಸ ವರ್ಷ, ಗುಡಿ ಪಡ್ವದ ಹಿಂದಿನ ರಾತ್ರಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 21 ದಿನಗಳ ಲಾಕ್‌ಡೌನ್‌ ಘೋಷಿಸಿದಾಗ, ಮಾರನೆಯ ದಿನದಂದು ಅಗತ್ಯ ವಸ್ತುಗಳು ದೊರೆಯುವ ಬಗ್ಗೆ ಯಾವುದೇ ಸ್ಪಷ್ಟತೆಯಿರಲಿಲ್ಲ. ಇನ್ನೂ ಬಾಗಿಲು ತೆರೆದಿದ್ದ ಅಂಗಡಿಗಳಿಂದ ಜನರು, ತಮಗೆ ಸಾಧ್ಯವಿರುವ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರಾದರೂ, ಅದಾಗಲೇ ಬೆಲೆಗಳು ಗಗನಕ್ಕೇರಿದ್ದವು.

ನಂತರದಲ್ಲಿ, ಆಹಾರ ಮತ್ತು ಇತರೆ ಅವಶ್ಯಕ ವಸ್ತುಗಳನ್ನು ಲಭ್ಯಗೊಳಿಸುವುದಾಗಿ ಮತ್ತು ಬಡತನ ರೇಖೆಯಿಂದ ಕೆಳಗಿರುವ ಕುಟುಂಬಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಹೆಚ್ಚುವರಿಯಾಗಿ ಮೂರು ತಿಂಗಳ ಉಚಿತ ಪಡಿತರವನ್ನು ಪಡೆಯುತ್ತಾರೆಂಬುದಾಗಿ ಸರ್ಕಾರವು ಘೋಷಿಸಿತು.

ಈ ಹಿಂದೆ, ಲಕ್ಷ್ಮಿ ನಗರದ ಕುಟುಂಬಗಳಿಗೆ ನಿಯತವಾಗಿ ಪಡಿತರವು ದೊರೆತಿಲ್ಲದ ಕಾರಣ, ಉಚಿತ ಪಡಿತರದ ವಾಗ್ದಾನದ ಬಗ್ಗೆ ಅವರಿಗೆ ಖಾತರಿಯಿರಲಿಲ್ಲ

ವಿಡಿಯೋ ವೀಕ್ಷಿಸಿ: ‘ಈಗಿನ ಆಹಾರದ ಅಭಾವದಿಂದಾಗಿ, ಜನರು ನೇಣುಹಾಕಿಕೊಳ್ಳಬೇಕೇ?’

ಈ ಹಿಂದೆಯೂ ಸಹ, ಲಕ್ಷ್ಮಿ ನಗರದ ಬಹುತೇಕ ಕುಟುಂಬಗಳಿಗೆ ನಿಯಮಿತವಾಗಿ ಪಡಿತರವು ದೊರೆತಿಲ್ಲದ ಕಾರಣ, ಉಚಿತ ಪಡಿತರದ ವಾಗ್ದಾನದ ಬಗ್ಗೆ ಅವರಿಗೆ ಭರವಸೆಯಿರಲಿಲ್ಲ. ಬಡತನ ರೇಖಿಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾದ ಹಳದಿ ಬಣ್ಣದ ಕಾರ್ಡುಗಳನ್ನು ಉಲ್ಲೇಖಿಸುತ್ತ, ಅಲ್ಲಿನ ಮಹಿಳೆಯೊಬ್ಬರು, “ಹಳದಿ ಕಾರ್ಡನ್ನು ಹೊಂದಿರುವ ಕುಟುಂಬಗಳಿಗೂ ಇದು ದೊರೆಯುತ್ತಿಲ್ಲ”ಎಂಬುದಾಗಿ ತಿಳಿಸಿದರು.

ಪಡಿತರ ಕಾರ್ಡನ್ನು ಹೊಂದಿದ್ದಾಗ್ಯೂ, ಪಡಿತರ ಅಂಗಡಿಗಳಿಂದ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯಲು ಅನೇಕ ಅಡಚಣೆಗಳಿವೆ. ಪತಿಯ ಸಾವಿನ ಬಳಿಕ, ಮುಂಬೈನಿಂದ ಪುಣೆಗೆ ಬಂದ ಸುನಿತ ಶಿಂದೆ, “ನನ್ನ ಬಳಿ ಕಾರ್ಡು ಇದೆಯಾದರೂ, ಅದರ ಮೇಲೆ ನನ್ನ ಹೆಸರಿಲ್ಲವೆಂದು ಅಂಗಡಿಯಾತ ಹೇಳುತ್ತಾನೆ. ಇಂದಿನವರೆಗೂ ನನಗೆ ಪಡಿತರಗಳು ದೊರೆತಿರುವುದಿಲ್ಲ” ಎಂದರು.

ಸಬ್ಸಿಡಿ ದರದಲ್ಲಿ ಅಕ್ಕಿ ಮತ್ತು ಗೋಧಿಯನ್ನು ಪಡೆಯಲು ತಾವು ಅರ್ಹರೆಂದು ತಿಳಿಸುವ ಮೊಹರನ್ನು ಹೊಂದಿದ ಪಡಿತರ ಚೀಟಿಯನ್ನು ಮಹಿಳೆಯೊಬ್ಬರು ನನಗೆ ತೋರಿಸಿ, “ಆದರೆ, ಅಂಗಡಿಯಾತನು ನನ್ನ ಪಡಿತರ ಚೀಟಿಗೆ ಪಡಿತರವನ್ನು ನಿಲ್ಲಿಸಲಾಗಿದೆಯೆಂದು ಹೇಳುತ್ತಾನೆ. ಎರಡು ವರ್ಷಗಳಿಂದಲೂ ನಮಗೆ ಪಡಿತರವು ದೊರೆತಿಲ್ಲವೆಂಬುದಾಗಿ”ತಿಳಿಸಿದರು. “ಅವರಲ್ಲಿರುವ ಆಧಾರ್‌ ಬೆರಳಚ್ಚಿನ ಗುರುತಿಗೆ ನನ್ನ ಬೆರಳಚ್ಚು ಹೊಂದಿಕೆಯಾಗುತ್ತಿಲ್ಲವಾದ ಕಾರಣ ನನಗೆ ಪಡಿತರವು ದೊರೆಯುತ್ತಿಲ್ಲವೆಂದು”ಹಿರಿಯ ವಯಸ್ಸಿನ ಮಹಿಳೆಯೊಬ್ಬರು ತಿಳಿಸಿದರು.

ಪಡಿತರಗಳು, ಕೆಲಸ, ಮಜೂರಿಯು ದೊರೆಯದ ಕಾರಣ, ಲಕ್ಷ್ಮಿ ನಗರದ ಮಹಿಳೆಯರು ಹಾಗೂ ಅಲ್ಲಿನ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ನಂದ ಶಿಂದೆ ಎಂಬ ವಿಧವೆಯು, “ಈ ಹಿಂದೆ ನಾನು ದುಡಿಯುತ್ತಿದ್ದೆ. ಕೊರೊನಾದ ಕಾರಣದಿಂದಾಗಿ ದುಡಿಮೆಯು ನಿಂತುಹೋಗಿದೆ. ಹೀಗಾಗಿ, ಊಟವನ್ನು ದೊರಕಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ನಾನು ಅಂಗಡಿಗೆ ತೆರಳಿದಾಗಲೆಲ್ಲ, ಅಂಗಡಿಯಾತನು ನನ್ನ ಪಡಿತರ ಚೀಟಿಯನ್ನು ಎಸೆಯುತ್ತಾನೆ” ಎಂದರು. ಭೋಜನ ಮಂದಿರವೊಂದರಲ್ಲಿ ಅಡಿಗೆಯ ಪಾತ್ರೆಗಳನ್ನು ತೊಳೆಯುವ ನಂದ ವಾಘ್ಮಾರೆ, “ಈಗ ನಾನು ಯಾವುದೇ ಕೆಲಸವನ್ನೂ ಮಾಡುತ್ತಿಲ್ಲ. ಪಡಿತರ ಚೀಟಿಯೊಂದಿಗೆ ಅಂಗಡಿಗಳಿಗೆ ತೆರಳುತ್ತೇನಾದರೂ, ಅವರು, ಇಲ್ಲಿಂದ ತೊಲಗು ಎನ್ನುತ್ತಾರೆ” ಎಂಬುದಾಗಿ ಅಲವತ್ತುಕೊಂಡರು.

Left: Laxmi Nagar colony in Kothurd. Right: A ration shop in the area, where subsidised food grains are purchased
PHOTO • Jitendra Maid
Left: Laxmi Nagar colony in Kothurd. Right: A ration shop in the area, where subsidised food grains are purchased
PHOTO • Jitendra Maid

ಎಡಕ್ಕೆ: ಕೊಥುರ್ಡ್‌ನಲ್ಲಿನ ಲಕ್ಷ್ಮಿ ನಗರ್‌ ಕಾಲೋನಿ. ಬಲಕ್ಕೆ: ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಕೊಳ್ಳುವ ಈ ಪ್ರದೇಶದಲ್ಲಿನ ಪಡಿತರ ಅಂಗಡಿ

ಪಡಿತರ ಚೀಟಿಯನ್ನು ಹೊಂದಿಲ್ಲದ ಸುಮಾರು 12 ಕುಟುಂಬಗಳಿಗೆ ಊಟವನ್ನು ದೊರಕಿಸಿಕೊಳ್ಳುವುದು ಮತ್ತಷ್ಟು ತ್ರಾಸದಾಯಕ. ಇವರಿಗೆ ಪಡಿತರವನ್ನು ಪಡೆಯುವ ಯಾವುದೇ ದಾರಿಗಳಿಲ್ಲ. ಸರ್ಕಾರದ ಪರಿಹಾರದ ಪ್ಯಾಕೇಜ್‌ನಡಿಯಲ್ಲಿ ನೀಡಿದ ಉಚಿತ ಆಹಾರ ಧಾನ್ಯಗಳ ವಾಗ್ದಾನವೂ ಇವರಿಗಿಲ್ಲ. “ಪ್ರತಿಯೊಬ್ಬರಿಗೂ ಆಹಾರ ಧಾನ್ಯಗಳು ದೊರೆಯುತ್ತವೆಂಬುದಾಗಿ ಮೋದಿ ಪ್ರಕಟಿಸಿದರಾದರೂ, ನಮ್ಮ ಬಳಿ ಪಡಿತರ ಚೀಟಿಯಿಲ್ಲ. ಹೀಗಾಗಿ, ನಾವು ಅದನ್ನು ಪಡೆಯುವುದಾದರೂ ಹೇಗೆ?” ಎಂದರು ರಾಧ ಕಾಂಬ್ಳೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಗಳಿಂದ ಆಹಾರ ಪದಾರ್ಥಗಳನ್ನು ಖರೀದಿಸಬಲ್ಲವರು, ಪಡೆಯಬಹುದಾದ ಪದಾರ್ಥಗಳ ಪ್ರಮಾಣವು ಸಾಲುವಷ್ಟಿಲ್ಲ. “ನಾಲ್ಕು ಜನರ ನಮ್ಮ ಕುಟುಂಬಕ್ಕೆ, 5 ಕೆ.ಜಿ. ಗೋಧಿ ಮತ್ತು 4 ಕೆ.ಜಿ. ಅಕ್ಕಿ ದೊರೆಯುತ್ತದೆ. ಅದು ಸಾಕಾಗುವುದಿಲ್ಲ. ನಮಗೆ ಪ್ರತಿ ತಿಂಗಳು, 10 ಕೆ.ಜಿ. ಗೋಧಿ ಮತ್ತು 10 ಕೆ.ಜಿ. ಅಕ್ಕಿ ದೊರೆಯಬೇಕು. ಪಡಿತರವು ಸಾಲುವುದಿಲ್ಲವಾದ ಕಾರಣ, ಮಾರುಕಟ್ಟೆಯಿಂದ ಹೆಚ್ಚಿನ ದರದಲ್ಲಿ ಇವನ್ನು ನಾವು ಖರೀದಿಸುತ್ತೇವೆ”ಎಂದರು ಲಕ್ಷ್ಮಿ ಭಂಡಾರೆ.

ಹತ್ತಿರದಲ್ಲಿನ ಶಾಸ್ತ್ರಿ ನಗರದ ಪಡಿತರ ಅಂಗಡಿಯ ಮಾಲೀಕರಾದ ಯೋಗೇಶ್‌ ಪಟೋಲೆಯವರು, “ಪಡಿತರ ಚೀಟಿದಾರರಾದ ಪತಿಯೊಬ್ಬ ವ್ಯಕ್ತಿಗೂ ನಾನೀಗ, ಮೂರು ಕೆ.ಜಿ. ಗೋಧಿ ಹಾಗೂ ಎರಡು ಕೆ.ಜಿ. ಅಕ್ಕಿಯನ್ನು ನೀಡುತ್ತಿದ್ದೇನೆ. ಮೂರು ತಿಂಗಳವರೆಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಲಾಗುವುದೆಂದು ನೀಡಿದ ವಾಗ್ದಾನದಂತೆ, ನಮಗಿನ್ನೂ ಆಹಾರ ಧಾನ್ಯಗಳು ತಲುಪಿರುವುದಿಲ್ಲ.” ಸ್ಥಳೀಯ ಪುರಸಭೆಯ ಕಾರ್ಪೊರೇಟರ್‌ ಅವರು ಏಪ್ರಿಲ್‌ 10ರ ಹೊತ್ತಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುವುದೆಂಬುದಾಗಿ ರವಾನಿಸಿದ ಸಂದೇಶದಿಂದ ಲಕ್ಷ್ಮಿ ನಗರದ ನಿವಾಸಿಗಳಿಗೆ ಯಾವುದೇ ಪ್ರಯೋಜನವಾಗಿರುವುದಿಲ್ಲ. “ಅಲ್ಲಿಯವರೆಗೂ ಜನರು ಬದುಕುಳಿಯುವುದಾದರೂ ಹೇಗೆ?” ಆಗ ಅವರ ಮೊಬೈಲ್‌ ಫೋನುಗಳಲ್ಲಿ ಟಾಕ್‌ಟೈಂ ಬಾಕಿಯುಳಿದಿರುತ್ತದೆಯೇ? ಎನ್ನುತ್ತಾ ಸಂದೇಶವನ್ನು ತೋರಿಸಿದ ವ್ಯಕ್ತಿಯು ಆಶ್ಚರ್ಯವನ್ನು ವ್ಯಕ್ತಪಡಿಸಿದರು.

ಅವರ ಮನೆಗಳು ಚಿಕ್ಕದಾಗಿದ್ದು, ಇಕ್ಕಟ್ಟಾಗಿವೆ. ಆಹಾರ ಧಾನ್ಯಗಳನ್ನು ಶೇಖರಿಸಲು ಅಲ್ಲಿ ಜಾಗವೇ ಇಲ್ಲ. ಕೆಲವರಿಗೆ ಅಡಿಗೆ ಮನೆಯೂ ಲಭ್ಯವಿಲ್ಲ

ವಿಡಿಯೋ ವೀಕ್ಷಿಸಿ: ನಮಗೆ 3 ತಿಂಗಳಿನಿಂದಲೂ ಸಂಬಳವಿಲ್ಲ. ನಾವು ತಿನ್ನುವುದಾದರೂ ಏನನ್ನು?

ಲಕ್ಷ್ಮಿ ನಗರದ ಪಕ್ಕದಲ್ಲಿರುವ ಲೋಕಮಾನ್ಯ ಕಾಲೋನಿಯಲ್ಲಿನ 810 ಕುಟುಂಬಗಳ ಪೈಕಿ, ೨೦೦ಕ್ಕೂ ಹೆಚ್ಚಿನ ಕುಟುಂಬಗಳು ಪಡಿತರ ಚೀಟಿಯನ್ನು ಹೊಂದಿವೆಯಾದರೂ, ಅವರಿಗೆ ಪಡಿತರವನ್ನು ಪಡೆಯಲಾಗುತ್ತಿಲ್ಲ. ಕಾಲೋನಿಯಲ್ಲಿನ 3 ಸಾವಿರ ಜನರಲ್ಲಿನ ಬಹುತೇಕರು ಸಫಾಯಿ ಕರ್ಮಚಾರಿಗಳು, ರದ್ದಿಯನ್ನು ಸಂಗ್ರಹಿಸುವವರು, ದಿನಗೂಲಿ ಕಾರ್ಮಿಕರು, ಕಟ್ಟಡ ನಿರ್ಮಾಣದಲ್ಲಿ ತೊಡಗಿರುವವರು, ಮನೆಗೆಲಸದವರು ಹಾಗೂ ಚೌಕಿದಾರರು.

ಇವರ ಮನೆಗಳು ಚಿಕ್ಕದಿದ್ದು, ಇಕ್ಕಟ್ಟಾಗಿವೆಯಲ್ಲದೆ, ಆಹಾರ ಧಾನ್ಯವನ್ನು ಶೇಖರಿಸಿಡಲು ಜಾಗವೇ ಇಲ್ಲ. ಕೆಲವರಿಗೆ ಅಡಿಗೆ ಮನೆಯೂ ಲಭ್ಯವಿಲ್ಲ. ಹೀಗಾಗಿ, ಅವರು ಭೋಜನಶಾಲೆಗಳು, ಉಪಹಾರ ಗೃಹಗಳಲ್ಲಿ ಉಳಿದ ಆಹಾರ ಪದಾರ್ಥಗಳು ಹಾಗೂ ಆ ಪ್ರದೇಶದ ಇತರೆ ಕುಟುಂಬಗಳು ನೀಡುವ ತಿನಿಸುಗಳನ್ನು ಅವಲಂಬಿಸಿದ್ದಾರೆ. ಪ್ರತಿ ದಿನ ದುಡಿಮೆಗಾಗಿ ಹೊರ ಹೋಗುವವರು, ವಾಪಸ್ಸಾದ ನಂತರ, ತಮ್ಮ ಮನೆಯ ಹೊರಗಿನ ತೆರೆದ ಜಾಗದಲ್ಲಿ ಕುಳಿತುಕೊಳ್ಳುತ್ತಾರೆ. ರಕ್ಷಣಾ ಮುಖಗವಸುಗಳು ಅವರಿಗೆ ಎಟುಕಲಾರದ ಭೋಗವಸ್ತುಗಳೆನಿಸಿವೆ. ಪುಣೆ ನಗರಪಾಲಿಕಾ ನಿಗಮದ (ಪಿ.ಎಂ.ಸಿ) ಗುತ್ತಿಗೆ ನೌಕರರಿಗೆ, ಸರ್ಕಾರೇತರ ಸಂಸ್ಥೆಯೊಂದು, ಮುಖಗವಸುಗಳನ್ನು ಒದಗಿಸಿದ್ದು, ಅವನ್ನೇ ತೊಳೆದು, ಮರುಬಳಕೆ ಮಾಡುತ್ತಿದ್ದಾರೆ.

ನಗರದ ವರ್ಜೆ, ತಿಲಕ್‌ ರಸ್ತೆ ಹಾಗೂ ಹರ್ದಾಸ್‌ಪುರ ಪ್ರದೇಶಗಳಲ್ಲಿನ ಒಂದು ಸಾವಿರಕ್ಕೂ ಹೆಚ್ಚಿನ ಗುತ್ತಿಗೆ ನೌಕರರಿಗೆ ಮೂರು ತಿಂಗಳಿನಿಂದಲೂ ಮಜೂರಿಯನ್ನು ನೀಡಿರುವುದಿಲ್ಲವೆಂಬುದಾಗಿ ವೈಜಿನಾಥ್‌ ಗಾಯಕ್‌ವಾಡ್‌ ಅವರು ತಿಳಿಸಿದರು. ಇವರು, ನಗರಪಾಲಿಕೆಯ ಮುಕದ್ದಮ್‌ (ಮೇಲ್ವಿಚಾರಕರು) ಹಾಗೂ ಮಹಾಪಾಲಿಕಾ ಕಾಮ್‌ಗಾರ್‌ ಯೂನಿಯನ್‌ ಸದಸ್ಯರು. ಮಜೂರಿ ದೊರೆಯುವ ಸಾಧ್ಯತೆ ಕಡಿಮೆಯೆಂಬುದಾಗಿ ಅವರು ತಿಳಿಸುತ್ತಾರೆ.

ಪುಣೆ ನಗರಪಾಲಿಕಾ ನಿಗಮದ ಆಹಾರ ಮತ್ತು ಸ್ವಚ್ಛತಾ ವಿಭಾಗದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದು, ತಮ್ಮ ಹೆಸರನ್ನು ತಿಳಿಸಲಿಚ್ಛಿಸದ ಗುತ್ತಿಗೆ ನೌಕರರೊಬ್ಬರು, ತಮ್ಮ ಕುಟುಂಬದ ಅಡಿಗೆ ಮನೆಯಲ್ಲಿನ ಆಹಾರದ ಡಬ್ಬಗಳು ಖಾಲಿಯಾಗಿರುವುದನ್ನು ತೋರಿಸಿದರು. “ನಾವು ನಮ್ಮೆಲ್ಲ ಉಳಿತಾಯವನ್ನೂ ಖರ್ಚುಮಾಡಿದ್ದು, ನಗರಪಾಲಿಕಾ ನಿಗಮವು ನಮಗೆ ಸಂದಾಯವಾಗದ ಮಜೂರಿಯನ್ನು ಪಾವತಿಸದಿದ್ದಲ್ಲಿ, ನಾವಿನ್ನು ಬದುಕುಳಿಯಲಾರೆವು. ದುಡಿಮೆಯಿಲ್ಲದೆ, ಮನೆಯಲ್ಲಿ ಕುಳಿತುಕೊಳ್ಳಬೇಕಾದ ಒತ್ತಾಯದಿಂದಾಗಿ, ನಾವು ಸಾವಿಗೀಡಾಗುತ್ತೇವೆ” ಎಂದರು.

ಅನುವಾದ: ಶೈಲಜಾ ಜಿ.ಪಿ.

Jitendra Maid

जितेंद्र मैड एक स्वतंत्र पत्रकार हैं और वाचिक परंपराओं पर शोध करते रहे हैं. उन्होंने कुछ साल पहले पुणे के सेंटर फ़ॉर कोऑपरेटिव रिसर्च इन सोशल साइंसेज़ में गी पॉइटवां और हेमा राइरकर के साथ रिसर्च कोऑर्डिनेटर के तौर पर काम किया था.

की अन्य स्टोरी Jitendra Maid
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

की अन्य स्टोरी Shailaja G. P.