ಅದು ಜನ್ಮಾಷ್ಟಮಿಯ ಸಂದರ್ಭವಾಗಿತ್ತು. ಶ್ರೀ ಕೃಷ್ಣನು ಆರ್ಯಾವರ್ತದಲ್ಲಿ ತನ್ನ ಜನ್ಮ ಸಮಯವನ್ನು ವಿಜೃಂಭಣೆಯಿಂದ ಮತ್ತು ಅದ್ದೂರಿಯಾಗಿ  ಆಚರಿಸುವ ಕಥೆಗಳನ್ನು ಕೇಳಿದ್ದನು. ಮಕ್ಕಳಿಗೆ ಶ್ರೀಕೃಷ್ಣನಂತೆ ಹಳದಿ ಬಟ್ಟೆ ತೊಡಿಸುವುದು, ಕೃಷ್ಣನ ಭಕ್ತರು ಶ್ರದ್ಧಾ ಭಕ್ತಿಯಿಂದ ತೇರು ಎಳೆಯುವುದು, ಕೃಷ್ಣ ಲೀಲೆಗಳನ್ನು ಓದುವುದು, ಮೊಸರು ಕುಡಿಕೆ ಆಯೋಜನೆ, ಭಕ್ತಿಯಲ್ಲಿ ಮಗ್ನರಾಗಿ ನೃತ್ಯ ಮಾಡುವುದು, ಹೀಗೆ ಸಂಭ್ರಮದ ವಾತಾವರಣವಿರುತ್ತದೆಂದು ಕೇಳಿದ್ದ. ಆದ್ದರಿಂದ ಈ ಬಾರಿ ಶ್ರೀ ಕೃಷ್ಣನು ಆರ್ಯಾವರ್ತದ ತನ್ನ ಭಕ್ತರ ನಡುವೆ ತನ್ನ ಜನ್ಮಾಷ್ಟಮಿ ಆಚರಿಸಿಕೊಳ್ಳಲು ನಿರ್ಧರಿಸಿದನು.

ಶ್ರೀಕೃಷ್ಣನು ವೇಷ ಮರೆಸಿಕೊಂಡು ಆರ್ಯಾವರ್ತಕ್ಕೆ ಬಂದು ಹಬ್ಬವನ್ನು ಆಚರಿಸುವ ಊರುಗಳಲ್ಲಿ ಸಂಭ್ರಮದಿಂದ ಓಡಾಡುತ್ತಿದ್ದನು. ಹಾಗೆ ಗೋರಖನಾಥ ನಗರವನ್ನು ದಾಟುತ್ತಿರುವಾಗ ಕಿರುಚಾಟದ ದನಿ ಕಿವಿಗೆ ಕೇಳಿಸುತ್ತಿತ್ತು. ಈ ಕೂಗು ಕೇಳಿದ ಕೃಷ್ಣನ ಗಮನ ಅತ್ತ ಸೆಳೆಯಿತು. ಆ ವ್ಯಕ್ತಿ ತನ್ನ ಭುಜದ ಮೇಲೆ ಮಗುವಿನ ದೇಹದೊಂದಿಗೆ ಆಸ್ಪತ್ರೆಯಿಂದ ಹೊರಡುತ್ತಿರುವುದನ್ನು ಅವನು ನೋಡಿದನು. ಅವನನ್ನು ನೋಡಿದ ಕೃಷ್ಣನಿಗೆ ಅವನಿಂದ ದೂರವಿರಲು ಆಗಲಿಲ್ಲ. ಅವನು ಆ ವ್ಯಕ್ತಿಯ ಬಳಿ ಹೋಗಿ ಕೇಳಿದನು, "ಏನಾಯಿತು ವತ್ಸಾ! ಯಾಕೆ ಹೀಗೆ ಅಳುತ್ತಿದ್ದೀಯ? ಮತ್ತು ನಿನ್ನ ಭುಜದ ಮೇಲಿರುವ ಈ ಮಗು ಯಾರು?" ಆ ವ್ಯಕ್ತಿ ಶ್ರೀ ಕೃಷ್ಣನನ್ನು ನೋಡಿ, "ನೀವು ತುಂಬಾ ತಡವಾಗಿ ಬಂದಿದ್ದೀರಿ, ನನ್ನ ಮಗ ಸತ್ತಿದ್ದಾನೆ." ಎಂದನು

ಶ್ರೀಕೃಷ್ಣ ಏನೂ ಹೇಳಲಿಲ್ಲ. ಅವನು ಅವನೊಂದಿಗೆ ಸ್ಮಶಾನಕ್ಕೆ ಹೋದ. ಅಲ್ಲಿ ಸ್ಮಶಾನದಲ್ಲಿ, ಸಾಲುಗಟ್ಟಿ ಮಲಗಿಸಲಾಗಿದ್ದ ಸಾವಿರಾರು ಮಕ್ಕಳ ಶವಗಳನ್ನು ನೋಡಿದ ಹಾಗೂ ಆ ಮಕ್ಕಳ ಹೆತ್ತವರು ತಮ್ಮ ಎದೆಯನ್ನು ಬಡಿದು, ಕಿರುಚುತ್ತಾ ತಮ್ಮ ಪ್ರೀತಿಯ ಮಕ್ಕಳ ತಣ್ಣನೆಯ ಶವಗಳಿಗೆ ಹುಚ್ಚುಚ್ಚಾಗಿ ಮುತ್ತಿಡುತ್ತಿದ್ದರು.

ಆ ಹಳದಿ ಫ್ಯಾನ್ಸಿ ಡ್ರೆಸ್‌ಗಳು ಎಲ್ಲಿ ಹೋದವು? ಇದು ಯಾವ ಭೀಕರ ಹಬ್ಬ? ಈ ಎಳೆಯರನ್ನು ಯಾವ ಕಂಸ ನು ಇಂತಹ ಅಧರ್ಮಕರ ವಿಧಿಗೆ ಈಡು ಮಾಡಿದ? ಇದು ಯಾರ ಶಾಪ? ಯಾರ ರಾಜ್ಯ? ಯಾರಿಗೆ ಸೇರಿದ ಅನಾಥ ಜನರಿವರು?

ದೇವೇಶ್‌ ಅವರ ದನಿಯಲ್ಲಿ ಕವಿತೆಯ ಹಿಂದಿ ಅವತರಣಿಕೆಯನ್ನು ಆಲಿಸಿ

ಪ್ರತಿಷ್ಠಾ ಪಾಂಡ್ಯ ಅವರ ದನಿಯಲ್ಲಿ ಕವಿತೆಯ ಇಂಗ್ಲಿಷ್ ಅವತರಣಿಕೆಯನ್ನು ಆಲಿಸಿ

ನಗರದ ಮಕ್ಕಳು ಅನಾಥರೇ ?

ಕ್ಯಾಲೆಂಡರ್ ಕಡೆ ನೋಡಿ
ಆಗಸ್ಟ್ ಬರುತ್ತದೆ, ಹೋಗುತ್ತದೆ
ಆದರೆ ಕೆಲವರ ಪಾಲಿಗೆ ಹಾಗಿಲ್ಲ
ಅವರ ಪಾಲಿಗೆ ಆಗಸ್ಟ್
ಕಣ್ಣೀರಾಗಿ ಹರಿಯುತ್ತದೆ
ಕೆಲವರಿಗೆ ಆಗಸ್ಟ್ ಎಂದರೆ
ಕೈ ನಡುಗುತ್ತವೆ, ಹೃದಯ ಒಡೆಯುತ್ತದೆ
ಉಸಿರುಗಟ್ಟಿದಂತಾಗಿ ಸಾಯುವ ಅನುಭವವಾಗುತ್ತದೆ.

ಕೆಲವರ ಪಾಲಿಗೆ ಅದು ಕೆಟ್ಟ ಕನಸು
ಕೆಲವರಿಗೆ ಕುತ್ತಿಗೆಯ ಸುತ್ತಲಿನ ಕುಣಿಕೆ
ಗೋರಖಪುರದ ತಾಯಂದಿರಿಗೆ
ಇದು ಗರ್ಭದೊಳಗಿನ ಭಯ
ಯಾಕೆಂದರೆ, ಅವರ ಪಾಲಿಗೆ ಆಗಸ್ಟ್
ಕೇವಲ ತಿಂಗಳಲ್ಲ ಒಂದಿಡೀ ವರ್ಷ.

ಅವರು ಹೇಳುತ್ತಾರೆ, ತಾಯಂದಿರ ಭಯ ಸುಳ್ಳೆಂದು
ಅಪ್ಪಂದಿರು ಸುಳ್ಳರೆಂದು

ಆಸ್ಪತ್ರೆಯಲ್ಲಿ ಆಮ್ಲಜನಕವಿಲ್ಲವೆನ್ನುವುದು
ಮೊಘಲರ ಹುಟ್ಟಿಸಿದ ಪಿತೂರಿ
ನಿಜವೆಂದರೆ ಎಲ್ಲೆಡೆ ಆಮ್ಲಜನಕದ ಸಮೃದ್ಧಿಯಿದೆ
ಪ್ರತಿ ಬೀದಿಯಲ್ಲೂ, ರಸ್ತೆಯಲ್ಲೂ
ಗೋಮಾತೆ ಆಮ್ಲಜನಕವನ್ನೇ ಉಸಿರಾಡಿ ಹೊರಗೆ ಬಿಡುತ್ತಾಳೆ.

ನಿಜವಾಗಿ ಕೊಲ್ಲುತ್ತಿರುವುದು ಅತಿಯಾದ ಆಮ್ಲಜನಕ
ಪ್ರತಿ ಮಾತೂ ಉಸಿರುಗಟ್ಟಿಸುತ್ತದೆ

ಅನಾಥರಂತೆ ಕಾಣುವ ಈ ಮಕ್ಕಳು ಯಾರು?
ತೆರೆದ ಚರಂಡಿಗಳ
ಸೊಳ್ಳೆಗಳಿಂದ ಕಚ್ಚಿಸಿಕೊಂಡಿರುವ ಈ ಮಕ್ಕಳು ಯಾರವು?
ಕೈಯಲ್ಲಿ ಕೊಳಲಿಲ್ಲ ಈ ಮಕ್ಕಳು ಯಾರವು?

ಯಾರ ಮಕ್ಕಳು ಇವರು?
ಎಲ್ಲಿಂದ ಬಂದರಿವರು?
ಇವರ ಸ್ಲಮ್ಮುಗಳಲ್ಲಿ ಹಾಲಿನ ಹೊಳೆ ಹರಿಯುವುದಿಲ್ಲ
ಇವರ ಮನೆಗಳಲ್ಲಿ ಕೃಷ್ಣ ಅವತಾರ ಎತ್ತುವುದಿಲ್ಲ
ತಡರಾತ್ರಿಗಳಲ್ಲಿ
ಆದರೆ ಕೇವಲ ಬೆತ್ತಲೆಯಾಗಿ ಜಗತ್ತಿಗೆ ಬರುತ್ತವೆ ಈ ಮಕ್ಕಳು

ಮತ್ತೆ ಇವರಿಗೆ ಆಕ್ಸಿಜನ್ ಬೇಕಂತೆ
ಆಸ್ಪತ್ರೆಯ ಬೆಡ್ ಬೇಕಂತೆ

ಎಷ್ಟು ವಿಚಿತ್ರವಿದು
ಗೋರಖನ ನೆಲವು ಸಿಡಿಯುವುದರಲ್ಲಿದೆ
ಕಬೀರ ನೋವಿಗೆ ಹೆಪ್ಪುಗಟ್ಟಿದ್ದಾನೆ
ರಫ್ತಿಯ ಅಲೆಗಳಲ್ಲಿ ಜ್ವಾಲೆ ತುಂಬಿಕೊಂಡಿವೆ
ಸಂಭ್ರಮದಿಂದ ನಲಿಯಬೇಕಿದ್ದ ನಗರ
ಮೌನದಲ್ಲಿ ಮುಳುಗಿದೆ

ಪ್ರಾಂತ್ಯದ ಮಹಾಂತ ಹೇಳುತ್ತಾರೆ
ಇದು ವಿಗ್ರಹದ ಪ್ರತಿಷ್ಟಾಪನೆ ಬೇಡುತ್ತಿದೆಯೆಂದು
ಇದು ನಮ್ಮ ಮಕ್ಕಳ ರಕ್ತದ ಬಲಿ ಕೇಳುತ್ತದೆಯೆಂದು

ಫಾರಿಭಾಷಿಕ ಪದಗಳ ಅರ್ಥ:

ಆರ್ಯಾ ವರ್ತ : ಇತಿಹಾಸದ ವಿವಿಧ ಹಂತಗಳಲ್ಲಿ ಭಾರತೀಯ ಸನ್ನಿವೇಶದಲ್ಲಿ ವಿಭಿನ್ನವಾಗಿ ಬಳಸಲಾದ ಮತ್ತು ಇಡೀ ಉಪಖಂಡಕ್ಕೆ ವಿಸ್ತರಿಸಿದ ಪದ. ಇದು ವೈದಿಕ ಸಂಸ್ಕೃತಿಯ, ರಾಮಾಯಣ ಮತ್ತು ಮಹಾಭಾರತದ ಭೂಮಿಯನ್ನು ಮತ್ತು ಬುದ್ಧ ಮತ್ತು ಮಹಾವೀರರ ಭೂಮಿಯನ್ನು ಪ್ರತಿನಿಧಿಸುತ್ತದೆ

ಮೊಸರು ಕುಡಿಕೆ : ಕೃಷ್ಣನ ನೆಚ್ಚಿನ ಮೊಸರಿನೊಂದಿಗೆ ತುಂಬಿದ ಮಣ್ಣಿನ ಮಡಕೆಗಳು. ಕೃಷ್ಣ ಜನ್ಮಾಷ್ಟಮಿಯ ದಿನದಂದು ಈ ಮಡಕೆಗಳನ್ನು ಎತ್ತರದಲ್ಲಿ ನೇತುಹಾಕಲಾಗುತ್ತದೆ ಮತ್ತು ಚಿಕ್ಕ ಹುಡುಗರು ಮತ್ತು ಹುಡುಗಿಯರು ಮಾನವ ಪಿರಮಿಡ್ ಗಳನ್ನು ರೂಪಿಸಿ ಮೇಲೇರಿ ಆಚರಣೆಯ ವಿಧಾನವಾಗಿ ಒಡೆಯುತ್ತಾರೆ

ಕಂಸ : ಶ್ರೀಕೃಷ್ಣನ ಚಿಕ್ಕಪ್ಪ ಮತ್ತು ಮಥುರಾದ ಆಡಳಿತಗಾರ, ತನ್ನ ಸ್ವಂತ ಸಹೋದರಿಯ ಮಕ್ಕಳು ಸೇರಿದಂತೆ ಅನೇಕ ಶಿಶುಗಳನ್ನು ಕೊಂದನು.

ಗೋರಖ : 13ನೇ ಶತಮಾನದ ನಾಯಕ ಮತ್ತು 'ನಾಥ' ಎಂದು ಕರೆಯಲ್ಪಡುವ ಸನ್ಯಾಸಿ ಪಂಥದ ಸ್ಥಾಪಕ. ಅವನಿಗೆ ಅರ್ಪಿಸಲ್ಪಟ್ಟ ಹಾಡುಗಳನ್ನು 'ಗೋರಖ್ ಬಾನಿ' ಎಂದು ಕರೆಯಲಾಗುತ್ತದೆ

ರಪ್ತಿ : ಉತ್ತರ ಪ್ರದೇಶದ ಪೂರ್ವ ವಲಯದ ಒಂದು ನದಿ, ಅದರ ದಡದಲ್ಲಿ ಗೋರಖ್ ಪುರವಿದೆ

ಕಬೀರ : 15ನೇ ಶತಮಾನದ ಒಬ್ಬ ಅನುಭಾವಿ ಕವಿ-ಸಂತ

ಸಾಂಘಿಕ ಪ್ರಯತ್ನಕ್ಕೆ ಗಮನಾರ್ಹ ಕೊಡುಗೆ ನೀಡಿದ ಸ್ಮಿತಾ ಖಟೋರ್ ಅವರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ .

ಅನುವಾದ: ಶಂಕರ. ಎನ್. ಕೆಂಚನೂರು

Poems and Text : Devesh

দেবেশ একজন কবি, সাংবাদিক, চলচ্চিত্র-নির্মাতা ও অনুবাদক। তিনি পিপলস্ আর্কাইভ অফ রুরাল ইন্ডিয়ার হিন্দি সম্পাদক ও হিন্দি অনুবাদ-সম্পাদক।

Other stories by Devesh
Paintings : Labani Jangi

২০২০ সালের পারি ফেলোশিপ প্রাপক স্ব-শিক্ষিত চিত্রশিল্পী লাবনী জঙ্গীর নিবাস পশ্চিমবঙ্গের নদিয়া জেলায়। তিনি বর্তমানে কলকাতার সেন্টার ফর স্টাডিজ ইন সোশ্যাল সায়েন্সেসে বাঙালি শ্রমিকদের পরিযান বিষয়ে গবেষণা করছেন।

Other stories by Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru