ಇಸವಿ 2000ದ ನಂತರದ ದಿನಗಳಲ್ಲಿ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಮಾಡಲು ಸಿಗುತ್ತಿದ್ದ ಕೆಲಸಗಳೆಂದರೆ ವಿಸ್ಕಿ ಪೇರಿಂಗ್, ಸಾಕು ಪ್ರಾಣಿಗಳ ಮದುವೆಯಂತಹ ವಿಷಯಗಳ ಕುರಿತು ಲೇಖನ ಬರೆಯುವುದು. ಇಲ್ಲಿ ನಿಮಗೆ ಜನ ಸಾಮಾನ್ಯರ ಬದುಕಿನ ಸಮಸ್ಯೆಗಳ ಕುರಿತು ಬರೆಯಲು ಅವಕಾಶಗಳೇ ಇಲ್ಲ. ನೀವು ನಿಮ್ಮ ಆದರ್ಶಗಳಿಗೆ ಕಟ್ಟುಬಿದ್ದಿರೆಂದರೆ ನಿಮ್ಮ ಪಾಲಿಗೆ ʼಜೋಲಾವಾಲಾʼ ಎನ್ನುವ ಹಣೆಪಟ್ಟಿ ಸಿದ್ಧವಾಗುತ್ತದೆ (ಜೋಲಾವಾಲ ಎನ್ನುವುದು ಉತ್ತರ ಭಾರತದಲ್ಲಿ ಕಮ್ಯೂನಿಸ್ಟ್ ಕಾರ್ಯಕರ್ತರಿಗೆ ಬಳಸುವ ಲೇವಡಿ ಪದ).
ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ 2014ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ದೇಶದ ಶೇಕಡಾ 69 ಭಾಗ ಗ್ರಾಮೀಣ ಪ್ರದೇಶ – ಇಲ್ಲಿನ 80.33 ಕೋಟಿ ಜನರು ಸುಮಾರು 800 ಭಾಷೆಗಳನ್ನು ಮಾತನಾಡುತ್ತಾರೆ – ಆದರೆ ಮಾಧ್ಯಮಗಳಲ್ಲಿ ಈ ಪ್ರದೇಶಗಳಿಗೆ ಮುಖಪುಟದಲ್ಲಿ ಸಿಕ್ಕಿರುವ ಸ್ಥಳ ಕೇವಲ 0.67 ಪ್ರತಿಶತ. ರಾಷ್ಟ್ರೀಯ ದಿನಪತ್ರಿಕೆಗಳ ಮುಖ್ಯ ಪುಟದಲ್ಲಿ ಬರುವ ಸುದ್ದಿ ವರದಿಗಳಲ್ಲಿ ಶೇಕಡಾ 66ರಷ್ಟು ವರದಿಗಳು ದಿಲ್ಲಿ ಮೂಲದ ವರದಿಗಳಾಗಿರುತ್ತವೆ.
“ನನ್ನ 35 ವರ್ಷಗಳ ಪತ್ರಿಕೋದ್ಯಮದ ಅನುಭವದಲ್ಲಿ ಹೇಳುವುದಾದರೆ ಒಂದೇ ಒಂದು ದಿನಪತ್ರಿಕೆಯಾಗಲೀ, ಟಿವಿ ವಾಹಿನಿಯಾಗಲೀ ಓರ್ವ ಪೂರ್ಣಕಾಲಿಕ ಕೃಷಿಕ, ಕಾರ್ಮಿಕರು ಮತ್ತು ಇತರ ಪ್ರಮುಖ ಸಾಮಜಿಕ ಕ್ಷೇತ್ರಗಳ ಕುರಿತ ವರದಿಗಾರರನ್ನು ಹೊಂದಿರುವುದನ್ನು ನಾನು ನೋಡಿಲ್ಲ. ಅವರ ಬಳಿ ಬಾಲಿವುಡ್, ಶ್ರೀಮಂತರ ಸಮಾರಂಭಗಳು, ವ್ಯವಹಾರಗಳ ಕುರಿತು ವರದಿ ಮಾಡಲು ಪೂರ್ಣಕಾಲಿಕ ವರದಿಗಾರರಿರುತ್ತಾರೆ. ಆದರೆ ಕೃಷಿ ಮತ್ತು ಕಾರ್ಮಿಕರಿಗೆ ಸಂಬಂಧಿಸಿದಂತೆ ವರದಿ ಮಾಡಲು ವರದಿಗಾರರಿರುವುದಿಲ್ಲ. ಈ ಹಿನ್ನೆಲೆಯಲ್ಲಿಯೇ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ಕಲ್ಪನೆ ಹುಟ್ಟಿಕೊಂಡಿತು" ಎಂದು ಪರಿಯ ಸ್ಥಾಪಕ-ಸಂಪಾದಕ, ಪ್ರಸಿದ್ಧ ಪತ್ರಕರ್ತ ಪಾಲಗುಮ್ಮಿ ಸಾಯಿನಾಥ್ ಹೇಳುತ್ತಾರೆ. 43 ವರ್ಷಗಳ ಗ್ರಾಮೀಣ ವರದಿಗಾರಿಕೆಯ ಅನುಭವವನ್ನು ಹೊಂದಿರುವ ಅವರು 60ಕ್ಕೂ ಹೆಚ್ಚು ಪತ್ರಿಕೋದ್ಯಮ ಸಂಬಂಧಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪರಿ ಎನ್ನುವುದು ಒಂದು ಬಹುಮಾಧ್ಯಮ ಭಂಡಾರ. ಇದು ಜನಸಾಮಾನ್ಯರ ದೈನಂದಿನ ಬದುಕಿನ ಕುರಿತ ಒಂದು ಜೀವಂತ ಜರ್ನಲ್ ಮತ್ತು ಆರ್ಕೈವ್. ಕೌಂಟರ್ ಮೀಡಿಯಾ ಟ್ರಸ್ಟ್ ಆರಂಭಿಸಿದ ಈ ಆರ್ಕೈವ್ 2014ರಲ್ಲಿ ಹತ್ತು-ಹನ್ನೆರಡು ಜನರ ತಂಡದೊಂದಿಗೆ ಆರಂಭಗೊಂಡಿತು. ಗ್ರಾಮೀಣ ಪತ್ರಿಕೋದ್ಯಮ ಗುರಿಯೊಂದಿಗೆ ಆರಂಭಗೊಂಡ ಈ ಬಹುಮಾಧ್ಯಮ ವೇದಿಕೆಯು ಇಂದು ಗ್ರಾಮೀಣ ಭಾರತದ ಬಗೆಗಿನ ಅಧಿಕೃತ ವರದಿಗಳು ಮತ್ತು ಅಪರೂಪದ ದಾಖಲೆಗಳ ಆನ್ಲೈನ್ ಗ್ರಂಥಾಲಯ, ಗ್ರಾಮೀಣ ಜೀವನ ಮತ್ತು ಅದರ ಬಗ್ಗೆ ಕಲೆಗಳು ಮತ್ತು ಶಿಕ್ಷಣ ಉಪಕ್ರಮವನ್ನು ಒಳಗೊಂಡಿದೆ. ಪರಿ ಮೂಲ ಕ್ಷೇತ್ರ ವರದಿಗಳನ್ನು ಪಠ್ಯ, ಛಾಯಾಚಿತ್ರಗಳು, ಚಿತ್ರಗಳು, ಆಡಿಯೋ, ವೀಡಿಯೊಗಳು ಮತ್ತು ಸಾಕ್ಷ್ಯಚಿತ್ರಗಳ ರೂಪದಲ್ಲಿ ರಚಿಸುತ್ತದೆ. ಅವು ಸಾಮಾನ್ಯ ಭಾರತೀಯರ ಜೀವನವನ್ನು ಒಳಗೊಂಡಿರುತ್ತವೆ ಮತ್ತು ಶ್ರಮ, ಜೀವನೋಪಾಯ, ಕರಕುಶಲತೆ, ಬಿಕ್ಕಟ್ಟು, ಕಥೆಗಳು, ಹಾಡುಗಳು ಮತ್ತು ಹೆಚ್ಚಿನವುಗಳನ್ನು ಒಳಗೊಳ್ಳುತ್ತವೆ.












