ಪುರಿಸೈ ಗ್ರಾಮದ ರಸ್ತೆಗಳಲ್ಲಿ ಕಲಾವಿದರು ತಮ್ಮ ಪಾತ್ರಗಳನ್ನು ರಿಹರ್ಸಲ್ ಮಾಡುತ್ತಿರುವ ಧ್ವನಿ ಪ್ರತಿಧ್ವನಿಸುತ್ತದೆ, ಈ ಊರು ಅಕ್ಟೋಬರ್ ತಿಂಗಳಲ್ಲಿ ನಿದ್ರೆ ಮಾಡುವುದಿಲ್ಲ. ಉತ್ಸಾಹಿ ಪ್ರೇಕ್ಷಕರು ಗ್ರಾಮದ ಚೌಕದಲ್ಲಿ ಜಮಾಯಿಸಿರುತ್ತಾರೆ, ವಾತಾವರಣದಲ್ಲಿ ಸಂಗೀತದ ಸದ್ದು ತುಂಬಿರುತ್ತದೆ, ಮತ್ತು ರಸ್ತೆಗಳ ಸಾಲಿನಲ್ಲಿ ಇರುವ ಸರಳ ರೂಪದ ಮನೆಗಳು ಗ್ರೀನ್ ರೂಮುಗಳಾಗಿ ಮಾರ್ಪಟ್ಟಿರುತ್ತವೆ. ಕುಪ್ಪುಸಾಮಿ ಮತ್ತು ಚಂದ್ರ ನಡೆಸುವ ಚಹಾ ಅಂಗಡಿಯಂತಹ ಸಣ್ಣ ಸ್ಥಳೀಯ ವ್ಯಾಪಾರಗಳು ರಾತ್ರಿಯಿಡೀ ಗ್ರಾಹಕರಿಗೆ ಸೇವೆ ಸಲ್ಲಿಸುತ್ತವೆ. ಈ ತಿಂಗಳಿನಲ್ಲಿ ದೇಶದೆಲ್ಲೆಡೆಯ ಕಲಾವಿದರು ಇಲ್ಲಿಗೆ ಬರುತ್ತಾರೆ — ಝಾರ್ಖಂಡ್ನ ಜಾನಪದ ರಂಗಭೂಮಿ ಕಲಾವಿದರು, ಸ್ಥಳೀಯ ತೆರುಕೂತ್ತು ಕಲಾವಿದರು, ತಮಿಳುನಾಡಿನ ಇತರ ಭಾಗಗಳ ಪರೈ ತಂಡಗಳು, ಕೇರಳ, ಪುದುಚೇರಿ ಮತ್ತು ಚೆನ್ನೈ ಹಾಗೂ ಇತರೆಡೆಯಿಂದ ಬಂದ ಆಧುನಿಕ ರಂಗಭೂಮಿ ಕಲಾವಿದರು ಇವರಲ್ಲಿ ಸೇರಿದ್ದಾರೆ. ಅಂದು ತಾರೀಖು 2024ರ ಅಕ್ಟೋಬರ್ 6, ಮತ್ತು ಆ ದಿನ ಪ್ರಸಿದ್ಧ ಕಲೈಮಾಮಣಿ ಕಣ್ಣಪ್ಪ ತಂಬಿರಾನ್ ಸ್ಮಾರಕ ರಂಗಭೂಮಿ ಹಬ್ಬ ನಡೆಯಲಿತ್ತು. ಈ ಹಬ್ಬವನ್ನು ಜನಪ್ರಿಯವಾಗಿ ಪುರಿಸೈ ಹಬ್ಬ ಎಂದು ಕರೆಯಲಾಗುತ್ತದೆ. ಇದು ಎರಡು ವರ್ಷಕ್ಕೊಮ್ಮೆ ನಡೆಯುವ ಹಬ್ಬ.
ಮೊದಲು ಈ ಹಬ್ಬ ಮೂರು ದಿನಗಳ ಕಾಲ ನಡೆಯುತ್ತಿತ್ತು. ಕೊವಿಡ್ - 19 ಪಿಡುಗಿನ ನಂತರ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಂತೆ ಇದೂ ಸಂಕಷ್ಟಗಳನ್ನು ಎದುರಿಸಿತು. ಇದೀಗ ಹಬ್ಬ ಒಂದೂವರೆ ದಿನಗಳ ಮಟ್ಟಿಗೆ ಬಂದು ನಿಂತಿದೆ. ಈ ಹಬ್ಬದ ಇತಿಹಾಸ 1989ನೇ ಇಸವಿಗೆ ತಂದು ನಿಲ್ಲಿಸುತ್ತದೆ. ಆಗ ಈ ಹಬ್ಬವನ್ನು ಕೊಡೈ ವಿಳಾ (ಬೇಸಗೆ ಹಬ್ಬ) ಎಂದು ಕರೆಯಲಾಗುತ್ತಿತ್ತು. ಈ ಹಬ್ಬವನ್ನು ಅಂದು ಆರಂಭಿಸಿದವರು ಆಧುನಿಕ ನಾಟಕಕಾರ ಎನ್. ಮುತ್ತುಸಾಮಿ ಅವರು ಪುರಿಸೈನ ಕಣ್ಣಪ್ಪ ತಂಬಿರಾನ್ ಮತ್ತು ಅವರ ಹಿರಿಯ ಮಗ ಕಾಸಿ. ತೆರುಕೂತ್ತು ಕಲಾಪ್ರಕಾರದ ಜಾನಪದ ಕಚ್ಛಾತನಕ್ಕೆ ಮಾರುಹೋದ ಮುತ್ತುಸ್ವಾಮಿಯವರು ತಂಬಿರಾನ್ ಅವರೊಂದಿಗೆ ಸೇರಿ ಈ ಕಲೆಯನ್ನು ಬಳಸಿಕೊಂಡು ಹೊಸ ಕತೆಗಳನ್ನು ಹೇಳುವ ಸಾಧ್ಯತೆಗಳನ್ನು ಅನ್ವೇಷಿಸಲು ಆರಂಭಿಸಿದರು.
ಈ ಊರಿಗೆ ತೆರುಕೂತ್ತು ಕಲಾವಿದರ ಕೇಂದ್ರವೆನ್ನುವ ಖ್ಯಾತಿಯಿದೆ. “ಇಲ್ಲಿನ ದಿನಗೂಲಿ ಕಾರ್ಮಿಕ, ರೈತ ಹೀಗೆ ಎಲ್ಲರೂ ಕಲಾವಿದರೇ” ಎಂದು ಊರಿನ ನಿವಾಸಿ, ತೆರುಕೂತ್ತು ಕಲಾವಿದ ಮತ್ತು ಹಬ್ಬದ ಆಯೋಜಕರಲ್ಲಿ ಒಬ್ಬರಾದ 49 ವರ್ಷದ ಪಳನಿ ಮುರುಗನ್ ಹೇಳುತ್ತಾರೆ. ನಗರವೊಂದರಲ್ಲಿ ಆಧುನಿಕ ರಂಗಭೂಮಿ ಮತ್ತು ಸಮಕಾಲೀನ ನೃತ್ಯದಲ್ಲಿ ದಶಕಗಳವರೆಗೆ ತೊಡಗಿಸಿಕೊಂಡಿದ್ದ ಮುರುಗನ್, ಈಗ ತೆರುಕೂತ್ತು ಕಲೆಗೆ ಮರಳಿದ್ದಾರೆ. "ರಿಹರ್ಸಲ್ ಮಾಡಿದ ನಾಟಕಗಳಿಗೆ ಹೊಂದಿಕೊಂಡಿದ್ದ ನನಗೆ, ಇದರ ಸ್ವಾಭಾವಿಕತೆಗೆ ಹೊಂದಿಕೊಳ್ಳುವುದು ಸವಾಲಿನ ಸಂಗತಿಯಾಗಿತ್ತು" ಎಂದು ಅವರು ಒಪ್ಪಿಕೊಳ್ಳುತ್ತಾರೆ, "ಆದರೆ ಮತ್ತೆ ತೆರುಕೂತ್ತು ವೇಷ ತೊಡುತ್ತಿರುವುದು ತವರಿಗೆ ಮರಳಿದಷ್ಟು ಖುಷಿ ಕೊಡುತ್ತಿದೆ."
































