“ಸೌಮ್ಯ ಕೋಪವನ್ನು ತೋರಿಸುವುದಕ್ಕೆ, ಕಣ್ಣುಗಳನ್ನು ಸ್ವಲ್ಪ ಮೇಲ್ಭಾಗಕ್ಕೆತ್ತಿರುವಂತೆ ಚಿತ್ರಿಸಬೇಕು… ಉಗ್ರ ಕೋಪಕ್ಕೆ ಕಣ್ಣುಗಳು ದೊಡ್ಡದಾಗಿರಬೇಕು ಹುಬ್ಬುಗಳು ಗಂಟಿಕ್ಕಿರಬೇಕು. ಸಂತೋಷವನ್ನು ಪ್ರದರ್ಶಿಸಲು ಕೆನ್ನೆಯ ಮೇಲೆ ಮುಗುಳ್ನಗೆ ಕಾಣಬೇಕು.
ಇಂತಹ ಸೂಕ್ಷ್ಮ ವಿವರಗಳಿಗೆ ಗಮನ ಕೊಡುವುದರಿಂದಲೇ ದಿಲೀಪ್ ಪಟ್ನಾಯಕ್ ಜಾರ್ಖಂಡ್ ರಾಜ್ಯದ ಸರಾಯ್ ಕೇಲ ಛಾವು ನೃತ್ಯದಲ್ಲಿ ಬಳಸುವ ಮುಖವಾಡಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. “ಮುಖವಾಡ ಪಾತ್ರವನ್ನು ಬಿಂಬಿಸುವಂತಿರಬೇಕು” ಎಂದು ಅವರು ಹೇಳುತ್ತಾರೆ. ಸರಾಯ್ ಕೇಲ ಛಾವು ಕಲೆಯ ಮುಖವಾಡಗಳು ವಿಶಿಷ್ಟವಾದದ್ದು. ಅವು ನವರಸ ಭಾವವನ್ನು ಸಾಕಾರಗೊಳಿಸುತ್ತವೆ. ಇದು ಬೇರೆ ಛಾವು ಶೈಲಿಗಳಲ್ಲಿ ನೀವು ಕಾಣಲು ಸಾಧ್ಯವಿಲ್ಲ.”
ಅವರ ಕೆಲಸದ ಸ್ಥಳದಲ್ಲಿ ಸಿದ್ಧತೆಯ ಹಂತದಲ್ಲಿದ್ದ ಹಲವು ಮುಖವಾಡಗಳು ಸುತ್ತಲೂ ಹರಡಿಕೊಂಡಿದ್ದವು. ಅವು ನೋಡಲು ವಿಶಿಷ್ಟವಾಗಿದ್ದವು. ಈ ಮುಖವಾಡಗಳ ಅಗಲವಾದ ಕಣ್ಣು, ತೀಡಿದ ತೆಳು ಹುಬ್ಬುಗಳು, ಗಾಢ ಬಣ್ಣದ ಚರ್ಮದ ಟೋನ್, ಇವೆಲ್ಲವೂ ಸೇರಿ ಒಂದು ವೈವಿಧ್ಯಮಯವಾದ ಅಭಿವ್ಯಕ್ತಿಯನ್ನು ಸೆರೆಹಿಡಿಯುವಂತಿದ್ದವು.
ಈ ಕಲಾ ಪ್ರಕಾರ ನೃತ್ಯ ಮತ್ತು ಸಮರ ಕಲೆಯ ಸಂಗಮ. ಇದರಲ್ಲಿ ಕಲಾವಿದರು ಈ ಮುಖವಾಡಗಳನ್ನು ಧರಿಸಿ ರಾಮಾಯಣ, ಮಹಾಭಾರತ ಮತ್ತು ಸ್ಥಳೀಯ ಜಾನಪದದ ಕಥೆಗಳನ್ನು ಅಭಿನಯಿಸುತ್ತಾರೆ. ದಿಲೀಪ್ ಈ ಎಲ್ಲಾ ಪ್ರದರ್ಶನಗಳಿಗೂ ಬೇಕಾಗುವ ಮುಖವಾಡಗಳನ್ನು ತಯಾರಿಸಬಲ್ಲರು. ಆದರೆ ಅವುಗಳಲ್ಲಿ ಅವರ ನೆಚ್ಚಿನ ಮುಖವಾಡವೆಂದರೆ ಕೃಷ್ಣನದು. “ಕೋಪವನ್ನು ಪ್ರದರ್ಶಿಸಲು ದೊಡ್ಡ ಕಣ್ಣುಗಳು ಹಾಗೂ ಹುಬ್ಬು ಮೇಲಕೆತ್ತಿರುವಂತೆ ಚಿತ್ರಿಸಿದರೆ ಮುಗಿಯಿತು. ಆದರೆ ಕಿಡಿಗೇಡಿತನವನ್ನು ಮುಖವಾಡದಲ್ಲಿ ತೋರಿಸುವುದು ಸುಲಭದ ಕೆಲಸವಲ್ಲ.”
ಸ್ವತಃ ದಿಲೀಪ್ ಅವರು ಪ್ರದರ್ಶನ ಕಲಾವಿದರಾಗಿರುವುದರಿಂದ ಅವರಿಗೆ ಈ ಕಲೆಯ ಆಳ ಅಗಲವನ್ನು ಇನ್ನಷ್ಟು ಖಚಿತವಾಗಿ ತಿಳಿದುಕೊಳ್ಳಲು ಸಾಧ್ಯವಾಗಿದೆ. ಬಾಲ್ಯದಲ್ಲಿ ಛಾವು ತಂಡದ ಭಾಗವಾಗಿದ್ದ ಅವರು, ಛಾವು ಹಬ್ಬದ ಸಮಯದಲ್ಲಿ ಶಿವನ ದೇಗುಲದಲ್ಲಿ ನಡೆಯುವ ನೃತ್ಯವನ್ನು ನೋಡುವ ಮೂಲಕ ಈ ನೃತ್ಯ ಕಲೆಯ ಅ ಆ ಇ ಕಲಿತಿದ್ದರು. ಕೃಷ್ಣನ ನೃತ್ಯ ಅವರ ಇಷ್ಟದ ನೃತ್ಯ. ಇಂದು ಧೋಲ್ ನುಡಿಸುವ ಅವರು ಸರಾಯ್ ಕೇಲ ಛಾವು ತಂಡದ ಭಾಗವಾಗಿ ಕೆಲಸ ಮಾಡುತ್ತಾರೆ.










