ಐವತ್ತರ ಹರೆಯದಲ್ಲಿರುವ ಅಶೋಕ್ ರಾಣಿ ಗೊಂಡ್ ಅವರು ಶಾಲೆಯ ಮುಖವನ್ನೇ ನೋಡಿಲ್ಲ. ಆದರೆ ಒಂಬತ್ತು ವರ್ಷ ಪ್ರಾಯದ ತಮ್ಮ ಮೊಮ್ಮಗ ಒಂದು ದಿನವೂ ಶಾಲೆಗೆ ಚಕ್ಕರ್ ಹೊಡೆಯುವುದಿಲ್ಲ ಎಂದು ಅವರು ನಗುತ್ತಾ ಹೇಳುತ್ತಾರೆ. "ಏಕ್ ಭೀ ದಿನ್ ನಹೀಂ ಛೋಡಾ [ಒಂದೇ ಒಂದು ದಿನವೂ ಶಾಲೆ ತಪ್ಪಿಸಿಲ್ಲ,]" ಎಂದು ಅವರು ಪಾರಿಗೆ ಹೇಳುತ್ತಾರೆ.
ದಬಾದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 39 ಮಕ್ಕಳಲ್ಲಿ ಇವರ ಮೊಮ್ಮಗನೂ ಒಬ್ಬ. ಸುಮಾರು 500 ಜನರು ವಾಸವಾಗಿರುವ ಈ ಗ್ರಾಮವು (2011 ರ ಜನಗಣತಿ) ದಾಮೋಹ್ ಜಿಲ್ಲೆಯ ಒಂದು ಮೂಲೆಯಲ್ಲಿದೆ. ಈ ಗ್ರಾಮವು ತಗ್ಗು ಬೆಟ್ಟಗಳು, ತೆರೆದ ಹುಲ್ಲುಗಾವಲು ಮತ್ತು ಕೃಷಿ ಭೂಮಿಯಿಂದ ತುಂಬಿದೆ. ಗೊಂಡ ಅದಿವಾಸಿಗಳೇ ಹೆಚ್ಚಾಗಿರುವ ಊರಿನ ಬಹುತೇಕ ಕುಟುಂಬಗಳು ವ್ಯವಸಾಯ, ಹೈನುಗಾರಿಕೆ ಮಾಡುತ್ತವೆ.
ವಯಸ್ಕರಲ್ಲಿ ತುಂಬಾ ಜನ ಯಾವತ್ತೂ ಶಾಲೆಯ ಮೆಟ್ಟಿಲು ಹತ್ತಿಲ್ಲ. ಗೊಂಡ ಆದಿವಾಸಿಗಳಲ್ಲಿ ಶೇಕಡಾ 50 ರಷ್ಟು ಮಂದಿ ಅನಕ್ಷರಸ್ಥರು ಎಂದು 2013 ರ ಈ ವರದಿ ಹೇಳುತ್ತದೆ.
ಹಾಗಾಗಿ ದಬಾ ಶಾಲೆಯಲ್ಲಿ ಯಾವಾಗಲೂ ಮಕ್ಕಳ ಸಂಖ್ಯೆ ಕಡಿಮೆ ಇರುತ್ತದೆ. ಸೀಸನ್ಗೆ ಅನುಗುಣವಾಗಿ ಈ ಸಂಖ್ಯೆ ಬದಲಾಗುತ್ತಿರುತ್ತದೆ. ಊರಿನಲ್ಲಿ ಕೆಲಸ ಕಡಿಮೆ ಇದ್ದಾಗ, ಜನರು ಮಕ್ಕಳನ್ನು ಕರೆದುಕೊಂಡು ಗುಳೆ ಹೋಗುವ ಸಮಯದಲ್ಲಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಮ್ಮಿಯಿರುತ್ತದೆ. ಕೆಲವರು ಆಟವಾಡಿಕೊಂಡು ಮನೆಗಳಲ್ಲಿಯೇ ಇರುತ್ತಾರೆ. ಈ 6 ರಿಂದ 9 ವರ್ಷ ಪ್ರಾಯದ ಮಕ್ಕಳಂತೂ ಮಾವು, ಪೇರಲೆಯಂತಹ ಹಣ್ಣುಗಳ ಮರಗಳಲ್ಲಿ ಮರಕೋತಿ ಆಟವಾಡುತ್ತಾ ಶಾಲೆಯನ್ನು ಮರೆಯುತ್ತಾರೆ.
ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದಾರೆ. ಒಬ್ಬರು ಇದೇ ಊರಿನಲ್ಲಿ ಹುಟ್ಟಿ ಬೆಳೆದವರು, ತಾರಾಚಂದ್ ಯಾದವ್ ಎಂಬವರು. ಮಕ್ಕಳನ್ನು ಶಾಲೆಗೆ ಕರೆತರಲು ಇವರು ಒಂದು ತಂತ್ರವನ್ನು ಮಾಡಿದ್ದಾರೆ. ಒಂದೆರಡು ದಿನಗಳ ಕಾಲ ಕಾಯುತ್ತಾರೆ, ಆಮೇಲೆ ಚಾಕಲೇಟ್ಗಳನ್ನು ತೆಗೆದುಕೊಂಡು ಮಕ್ಕಳ ಮನೆಗೆ ಹೋಗುತ್ತಾರೆ. “ಮೊದಲು ನಾನು ಅಪ್ಪ-ಅಮ್ಮನೊಂದಿಗೆ ಮಾತನಾಡುತ್ತೇನೆ, ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಅವರನ್ನು ಕೇಳಿಕೊಳ್ಳುತ್ತೇನೆ. ಆಗ ಅವರು, ‘ಮೇಷ್ಟ್ರೇ, ನಾವ ಕೂಲಿ ಕೆಲಸಕ್ಕೆ ಹೋಗುವವರು, ಏನು ಮಾಡಬೇಕು ಹೇಳಿ?ʼ ಎಂದು ಅವರು ಕೇಳುತ್ತಾರೆ,” ಎನ್ನುತ್ತಾರೆ ತಾರಾಚಂದ್.















