ವಲಸಿಗರು ʼನಿಧಿʼ ಸಿಗುವ ಆಸೆಯೊಂದಿಗೆ ಹೊರಡುತ್ತಾರೆ. ಅದು ಅವರ ಸಾಲಗಳನ್ನು ತೀರಿಸುತ್ತದೆ, ಮಕ್ಕಳನ್ನು ಶಾಲೆಗೆ ಕಳುಹಿಸಲು ಸಹಾಯ ಮಾಡುತ್ತದೆ, ಮೂರು ಹೊತ್ತಿನ ಊಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ ಎನ್ನುವುದು ಅವರು ಈ ನಿಧಿಯಿಂದ ನಿರೀಕ್ಷಿಸುವ ಫಲ. ಆದರೆ ಕೆಲವೊಮ್ಮೆ ಈ ನಿರೀಕ್ಷೆ ಹುಸಿಯಾಗುತ್ತದೆ. ಆಜೀವಿಕಾ ನಡೆಸುತ್ತಿರುವ ರಾಜ್ಯ ಕಾರ್ಮಿಕ ಸಹಾಯವಾಣಿಗೆ ಬಾಕಿ ಪಾವತಿಗೆ ಸಂಬಂಧಿಸಿದಂತೆ ಕಾನೂನು ಪರಿಹಾರ ಕೋರಿ ವಲಸೆ ಕಾರ್ಮಿಕರಿಂದ ತಿಂಗಳಿಗೆ 5,000 ಕರೆಗಳು ಬರುತ್ತವೆ.
“ಕೂಲಿ ಕಾರ್ಮಿಕರ ಒಪ್ಪಂದಗಳು ಔಪಚಾರಿಕವಾಗಿರುವುದಿಲ್ಲ. ಅವು ಬಾಯಿಮಾತಿನಲ್ಲಿರುತ್ತವೆ. ಜೊತೆಗೆ ಕಾರ್ಮಿಕರನ್ನು ಒಬ್ಬ ಗುತ್ತಿಗೆದಾರನಿಂದ ಇನ್ನೊಬ್ಬ ಗುತ್ತಿಗೆದಾರನಿಗೆ ವರ್ಗಾಯಿಸಲಾಗುತ್ತದೆ” ಎಂದು ಕಮಲೇಶ್ ಹೇಳುತ್ತಾರೆ. ಬಾಣಸವಾಡಾ ಜಿಲ್ಲೆಯೊಂದರಲ್ಲೇ ಬಟವಾಡೆ ನಿರಾಕರಣೆಯ ಪ್ರಕರಣ ಕೋಟಿ ರೂಪಾಯಿಗಳ ಮೌಲ್ಯದಲ್ಲಿದೆ.
“ಈ ಕಾರ್ಮಿಕರಿಗೆ ತಮ್ಮ ಮುಖ್ಯ ಗುತ್ತಿಗೆದಾರ ಯಾರು, ತಾವು ಯಾರಿಗಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವುದು ತಿಳಿಯುವುದಿಲ್ಲ. ಇದೇ ಕಾರಣದಿಂದಾಗಿ ಬಾಕಿ ವಸೂಲಿ ಪ್ರಕ್ರಿಯೆ ನಿರಾಶಾದಾಯಕ ಹಾಗೂ ದೀರ್ಘಕಾಲೀನ ಪ್ರಕ್ರಿಯೆಯಾಗಿರುತ್ತದೆ” ಎಂದು ಅವರು ಹೇಳುತ್ತಾರೆ. ಅವರ ಕೆಲಸದಿಂದಾಗಿ ವಲಸಿಗರನ್ನು ಹೇಗೆಲ್ಲಾ ಶೋಷಿಸಲಾಗುತ್ತಿದೆ ಎನ್ನುವುದರ ಕುರಿತು ಒಂದು ಸ್ಪಷ್ಟತೆ ಅವರಿಗೆ ಸಿಗುತ್ತಿದೆ.
ಜೂನ್ 20, 2024ರಂದು, 45 ವರ್ಷದ ಭಿಲ್ ಆದಿವಾಸಿ ರಾಜೇಶ್ ದಾಮೋರ್ ಮತ್ತು ಇತರ ಇಬ್ಬರು ಕಾರ್ಮಿಕರು ಸಹಾಯ ಕೋರಿ ಬಾಣಸವಾಡದ ಅವರ ಕಚೇರಿಗೆ ಬಂದರು. ಆ ಸಮಯದಲ್ಲಿ ರಾಜ್ಯದಲ್ಲಿ ತಾಪಮಾನವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿತ್ತು, ಆದರೆ ಸಂಕಷ್ಟದಲ್ಲಿದ್ದ ಕಾರ್ಮಿಕರ ಕಷ್ಟಕ್ಕೆ ಕಾರಣವಾಗಿದ್ದು ಅದಲ್ಲ. ಅವರನ್ನು ನೇಮಿಸಿಕೊಂಡಿದ್ದ ಕಾರ್ಮಿಕ ಗುತ್ತಿಗೆದಾರನೊಬ್ಬ ಒಟ್ಟು 226,000 ರೂಪಾಯಿ ಬಾಕಿ ಉಳಿಸಿಕೊಂಡಿದ್ದ. ಈ ನಿಟ್ಟಿನಲ್ಲಿ ಅವರು ದೂರು ನೀಡಲು ಕುಶಾಲಗಢ ತಹಸಿಲ್ ಪಟಾನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು. ಪೊಲೀಸರು ಅವರನ್ನು ಈ ಪ್ರದೇಶದ ವಲಸೆ ಕಾರ್ಮಿಕರ ಸಂಪನ್ಮೂಲ ಕೇಂದ್ರವಾದ ಆಜೀವಿಕಾದ ಶ್ರಮಿಕ್ ಸಹಾಯತಾ ಏವಮ್ ಸಂದರ್ಬ್ ಕೇಂದ್ರಕ್ಕೆ ಕಳುಹಿಸಿದರು.
ಏಪ್ರಿಲ್ ತಿಂಗಳಿನಲ್ಲಿ ರಾಜೇಶ್ ಮತ್ತು ಸುಖ್ವಾರಾ ಪಂಚಾಯತ್ ಪ್ರದೇಶಕ್ಕೆ ಸೇರಿದ 55 ಕಾರ್ಮಿಕರು 600 ಕಿಲೋಮೀಟರ್ ದೂರದಲ್ಲಿರುವ ಗುಜರಾತಿನ ಮೊರ್ಬಿಗೆ ತೆರಳಿದ್ದರು. ಅಲ್ಲಿನ ಟೈಲ್ ಕಾರ್ಖಾನೆಯ ನಿರ್ಮಾಣ ಸ್ಥಳದಲ್ಲಿ ಗಾರೆ ಮತ್ತು ಇತರ ಕೆಲಸ ಮಾಡಲು ಅವರನ್ನು ನೇಮಿಸಿಕೊಳ್ಳಲಾಗಿತ್ತು. 10 ನುರಿತ ಕಾರ್ಮಿಕರಿಗೆ 700 ರೂ.ಗಳ ದೈನಂದಿನ ವೇತನ ಮತ್ತು ಉಳಿದವರಿಗೆ 400 ರೂಪಾಯಿಂತೆ ಕೂಲಿ ತೀರ್ಮಾನವಾಗಿತ್ತು.
ಒಂದು ತಿಂಗಳ ಕೆಲಸದ ನಂತರ, "ನಮ್ಮ ಎಲ್ಲಾ ಬಾಕಿಗಳನ್ನು ಚುಕ್ತಾ ಮಾಡುವಂತೆ ನಾವು ಠೇಕೇದಾರ್ [ಗುತ್ತಿಗೆದಾರ] ಬಳಿ ಕೇಳಿದೆವು. ಆದರೆ ಅವರು ಹಣ ಕೊಡದೆ ದಿನ ದೂಡುತ್ತಿದ್ದರು" ಎಂದು ರಾಜೇಶ್ ಪರಿಯೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ ಹೇಳಿದರು. ಮಾತುಕತೆಗಳಲ್ಲಿ ಮುಂಚೂಣಿಯಲ್ಲಿದ್ದ ರಾಜೇಶ್ ಭಿಲಿ, ವಾಗ್ಡಿ, ಮೇವಾರಿ, ಹಿಂದಿ ಮತ್ತು ಗುಜರಾತಿ ಭಾಷೆಗಳನ್ನು ಮಾತನಾಡಲು ಕಲಿತಿದ್ದು ಸಹಾಯಕ್ಕೆ ಬಂದಿತು. ಅವರ ಕೂಲಿ ಬಾಕಿಯಿಟ್ಟುಕೊಂಡಿರುವ ಗುತ್ತಿಗೆದಾರ ಮಧ್ಯಪ್ರದೇಶದ ಜಬುವಾ ಮೂಲದವರಾಗಿದ್ದು, ಹಿಂದಿ ಮಾತನಾಡುತ್ತಿದ್ದರು. ಭಾಷಾ ಅಡೆತಡೆಯಿಂದಾಗಿ ಕೆಲವೊಮ್ಮೆ ಕಾರ್ಮಿಕರಿಗೆ ಅಂತಿಮ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಅವರು ಕೆಳ ಹಂತದ ಗುತ್ತಿಗೆದಾರನೊಂದಿಗೆ ಮಾತುಕತೆ ಮಾಡಬೇಕಾಗುತ್ತದೆ. ಕೆಲವು ಗುತ್ತಿಗೆದಾರರು ಕಾರ್ಮಿಕರು ಕೂಲಿ ಹಣ ಕೇಳಿದಾಗ ದೈಹಿಕ ಹಲ್ಲೆಗೆ ಮುಂದಾಗುವುದೂ ಇರುತ್ತದೆ.
ಈ 56 ಕಾರ್ಮಿಕರು ತಮ್ಮ ಭಾರಿ ಮೊತ್ತದ ಕೂಲಿ ಹಣಕ್ಕಾಗಿ ವಾರಗಟ್ಟಲೆ ಕಾಯಬೇಕಾಯಿತು. ಈ ನಡುವೆ ಅವರು ಮನೆಯಿಂದ ತಂದಿದ್ದ ಆಹಾರವೂ ಖಾಲಿಯಾಗುತ್ತಿತ್ತು. ಹೊರಗಿನ ಮಾರುಕಟ್ಟೆಯಲ್ಲಿನ ಆಹಾರ ಸಾಮಾಗ್ರಿ ಖರೀದಿ ಅವರ ಗಳಿಕೆಯನ್ನು ತಿನ್ನತೊಡಗಿತ್ತು.