ಲೆನಿನ್ ದಾಸನ್ 30 ಬಗೆಯ ಭತ್ತವನ್ನು ಬೆಳೆಯುತ್ತಾರೆ. ಜೊತೆಗೆ ತಮ್ಮ ಊರಿನ ರೈತರು ಬೆಳೆದ ಇನ್ನೂ 15 ಬಗೆಯ ಭತ್ತಗಳನ್ನು ಸಹ ಮಾರುತ್ತಾರೆ. ಮತ್ತು ಅವರು 80 ರೀತಿಯ ಭತ್ತದ ಬೀಜಗಳನ್ನು ಸಂರಕ್ಷಿಸುತ್ತಾರೆ. ಇದೆಲ್ಲವೂ ಸಾಧ್ಯವಾಗಿರುವುದು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿರುವ ಅವರ ಕುಟುಂಬದ ಆರು ಎಕರೆ ಜಮೀನಿನಲ್ಲಿ.
ಹಾಗೆಂದು ಇದೊಂದು ಸಂಖ್ಯಾ ಅದ್ಭುತವಷ್ಟೇ ಅಲ್ಲ. ದೀರ್ಘಕಾಲದಿಂದ ನಿರ್ಲಕ್ಷಿಸಲ್ಪಟ್ಟ ಈ ಸಾಂಪ್ರದಾಯಿಕ ಭತ್ತದ ತಳಿಗಳು ಆ ಪ್ರದೇಶದ ಸಣ್ಣ ಮತ್ತು ಅತಿಸಣ್ಣ ಕೃಷಿಭೂಮಿಗಳಿಗೆ ಹೆಚ್ಚು ಸೂಕ್ತವಾಗಿರವವು ಸಹ ಹೌದು. ಲೆನಿನ್ ಮತ್ತು ಅವರ ಸ್ನೇಹಿತರು ಆಧುನಿಕ ಭತ್ತದ ತಳಿಗಳನ್ನು ಬದಲಾಯಿಸಲು ಮತ್ತು ಏಕಬೆಳೆ ಪದ್ಧತಿಯನ್ನು ವಿರೋಧಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದುಹೋದ ವೈವಿಧ್ಯತೆಯನ್ನು ಪುನಃಸ್ಥಾಪಿಸುವುದು ಅವರ ಯೋಜನೆಯಾಗಿದೆ. ಅದರ ಜೊತೆಗೆ ಹೊಸದೊಂದು ಭತ್ತದ ಕ್ರಾಂತಿ ನಡೆಸುವುದು ಕೂಡಾ.
ಇದು ಈ ಕಾಲದ ಲೆನಿನ್ ನಡೆಸುತ್ತಿರುವ ಕ್ರಾಂತಿ, ಮತ್ತೊಂದು ಬಗೆಯ ಕ್ರಾಂತಿ.
ಪೋಲೂರು ತಾಲ್ಲೂಕಿನ ಸೆಂಗುನಮ್ ಗ್ರಾಮದಲ್ಲಿರುವ ಅವರ ಹೊಲದ ಪಕ್ಕದಲ್ಲಿರುವ ಮೇಕೆ ಶೆಡ್ಡಿನಲ್ಲಿ ಅವರು ನೂರಾರು ಮೂಟೆ ಚೀಲಗಳನ್ನು ಸಂಗ್ರಹಿಸಿಟ್ಟಿದ್ದಾರೆ.
ಹೊರಗಿನಿಂದ ನೋಡಿದಾಗ ಆ ಸಣ್ಣ ಕಟ್ಟಡವು ಅಷ್ಟೇನೂ ಗಮನಾರ್ಹ ಎನ್ನಿಸುವುದಿಲ್ಲ. ನಾವು ಹೆಜ್ಜೆ ಹಾಕಿದಂತೆ ಆ ಅನಿಸಿಕೆ ಬೇಗನೆ ಬದಲಾಗುತ್ತದೆ. "ಇದು ಕರುಪ್ಪು ಕಾವುನಿ, ಅದು ಸೀರಗ ಸಾಂಬಾ", ಎಂದು ಲೆನಿನ್ ಅಕ್ಕಿ ಮೂಟೆಗಳನ್ನು ಕೊರೆಯಿಂದ ಚುಚ್ಚುತ್ತಾ ಮತ್ತು ಧಾನ್ಯಗಳನ್ನು ಹೊರತೆಗೆಯುತ್ತಾ ಹೇಳುತ್ತಾರೆ. ಅವರು ಈ ಎರಡು ಪಿತ್ರಾರ್ಜಿತ ಪ್ರಭೇದಗಳನ್ನು ತನ್ನ ಅಂಗೈಯಲ್ಲಿ ಹಿಡಿದಿದ್ದಾರೆ. ಮೊದಲನೆಯದು ಕಪ್ಪು ಮತ್ತು ಹೊಳೆಯುತ್ತದೆ, ಎರಡನೆಯದು ತೆಳ್ಳಗಿರುತ್ತದೆ ಮತ್ತು ಸುವಾಸನೆಯಿಂದ ಕೂಡಿರುತ್ತದೆ. ಒಂದು ಮೂಲೆಯಿಂದ, ಅವರು ಹಳೆಯ ಕಬ್ಬಿಣದ ಅಳತೆ ಸಾಮಾಗ್ರಿಗಳನ್ನು ತರುತ್ತಾರೆ: ವಿವಿಧ ಪ್ರಮಾಣದ ಭತ್ತವನ್ನು ಹಿಡಿದಿಡುವ ಪಡಿ, ಮರಕ್ಕ.
ಈ ಶೆಡ್ಡಿನಿಂದಲೇ ಹೆಚ್ಚು ಸದ್ದು ಗದ್ದಲವಿಲ್ಲದೆ ಅಕ್ಕಿಯನ್ನು ತೂಕ ಮಾಡಿ ಬೆಂಗಳೂರು, ನಾಗರಕೋಯಿಲ್ ತನಕ ಕಳುಹಿಸುತ್ತಾರೆ. ಅವರ ಕೆಲಸವನ್ನು ನೋಡುತ್ತಿದ್ದರೆ ಅವರು ದಶಕಗಳಿಂದ ಈ ಕೆಲಸ ಮಾಡುತ್ತಿರಬಹುದು ಎನ್ನಿಸುತ್ತದೆ. ಆದರೆ ಅವರು ಈ ವ್ಯವಹಾರದಲ್ಲಿ ತೊಡಗಿ ಕೇವಲ ಆರು ವರ್ಷಗಳಷ್ಟೇ ಕಳೆದಿವೆ.







































