ಹೊಲಗಳಲ್ಲಿ ನಡೆಯುವುದು, ಅಥವಾ ಕೆರೆಯಲ್ಲಿ ಈಜುವುದು, ಆಕಾಶದಲ್ಲಿ ಬೆಳಕು ಕಡಿಮೆಯಾಗುವ ಹೊತ್ತು ಬಣ್ಣಗಳು ಚೆಲ್ಲಾಡುವುದನ್ನು ಗಮನಿಸುವುದು, ಕಿವಿಗಳನ್ನು ನೆಲಕ್ಕೆ ಆನಿಸಿ ಅದರ ಸದ್ದು ಕೇಳುವುದು… ಮತ್ತು ಜನರು ತಮ್ಮ ಬದುಕು ಮತ್ತು ಪ್ರೇಮದ ಕುರಿತು ಮಾತನಾಡುವಾಗ ಅವರ ಮಾತಿಗೆ ಕಿವಿಯಾಗುವುದು, ಅವರ ಸಂಭ್ರಮ ಮತ್ತು ಲಾಭ-ನಷ್ಟಗಳಿಗೆ ತಲೆದೂಗುವುದು, ಹೀಗೆ ವರದಿ ಮಾಡುವಾಗ ಇದೆಲ್ಲವನ್ನೂ ಮಾಡುತ್ತಲೇ ಅವುಗಳಲ್ಲಿನ ಕೆಲವು ದೃಶ್ಯಗಳನ್ನು ಸೆರೆ ಹಿಡಿದು ತಂದು ಜನರೆದುರು ತಂದು ತೋರಿಸುವುದು ಬೇರೆಯದೇ ಅನುಭೂತಿ.
ಈ ಆರು ಸಚಿತ್ರ ಪ್ರಬಂಧಗಳು ನಿಮ್ಮನ್ನು ಭಾರತದ ಗ್ರಾಮೀಣ, ನಗರ ಮತ್ತು ಸಣ್ಣ ಪಟ್ಟಣದ ಹೃದಯವನ್ನು ತೆರೆದು ತೋರಲಿವೆ. ಪಶ್ಚಿಮ ಬಂಗಾಳದ ಒಂದು ಅಳಿವಿನಂಚಿನಲ್ಲಿರುವ ಕಲಾ ಪ್ರಕಾರ ಮತ್ತು ಕೊನೆಯಿಲ್ಲದ ಹಸಿವು, ಹಿಮಾಚಲ ಪ್ರದೇಶದ ಕ್ವೀರ್ ಸಂಭ್ರಮ ಮತ್ತು ಪ್ರತಿರೋಧ, ತಮ್ಮ ಸ್ವಂತ ಅನುಭವಗಳನ್ನು ದಾಖಲಿಸುವ ತಮಿಳುನಾಡಿನ ಒಂದು ಅಂಚಿನಲ್ಲಿರುವ ಸಮುದಾಯ ಮತ್ತು ಕರಾವಳಿ ಕರ್ನಾಟಕ ಪ್ರದೇಶದ ಪಿಲಿವೇಷದ ಕೆಲವು ತುಣುಕುಗಳನ್ನು ನೀವು ಈ ಪ್ರಬಂಧಗಳಲ್ಲಿ ಕಾಣಬಹುದು. ಈ ಪ್ರಬಂಧಗಳು ಭಾರತೀಯ ಸಮುದಾಯಗಳ ಕತೆ, ಪ್ರಾದೇಶಿಕತೆ, ಜೀವನೋಪಾಯಗಳ ಕುರಿತಾದ ಅಸಂಖ್ಯ ಕತೆಗಳನ್ನು ಹೇಳುತ್ತವೆ.
ಕೆಮೆರಾ ಎನ್ನುವುದು ಒಂದು ಶಕ್ತಿಶಾಲಿ ಸಾಧನ. ಅದೊಂದು ಸ್ವಯಂ ಪ್ರತಿಬಿಂಬದ ಮೂಲ. ಅದು ಅನ್ಯಾಯವನ್ನು ಸೆರೆ ಹಿಡಿಯುವುದರ ಜೊತೆಗೆ ಪರಿಹಾರ ಒದಗಿಸುವ ದಾರಿಯಾಗಿಯೂ ಒದಗಿಬರುತ್ತದೆ.
ಈ ಕೆಳಗಿನ ಕತೆಗಳು ನಿಮ್ಮ ಹೃದಯವನ್ನು ಸೆಳೆಯುತ್ತವೆ ಮತ್ತು ಕರುಳನ್ನು ಹಿಂಡುತ್ತವೆ.




















