ಡಿಸೆಂಬರ್ 7, 2023 ರಂದು, ನಮ್ಮ ಸಹ ಅನುವಾದಕ, ಕವಿ, ಬರಹಗಾರ, ಶೈಕ್ಷಣಿಕ, ಅಂಕಣಕಾರ ಮತ್ತು ಪ್ಯಾಲೆಸ್ಟೈನ್ ಕಾರ್ಯಕರ್ತ ಗಾಜಾದಲ್ಲಿ ನಡೆಯುತ್ತಿರುವ ನರಮೇಧದಲ್ಲಿ ಬಾಂಬ್ ದಾಳಿಗೆ ಬಲಿಯಾದರು. ಆದರೆ ಅವರ ದನಿಯನ್ನು ಮೌನಗೊಳಿಸಿದ ದಿನದಂದೇ ಅವರು ಬರೆದ ಕವಿತೆಯೊಂದು ಜಗತ್ತಿನಾದ್ಯಂತ ಹತ್ತು ಹಲವು ಭಾಷೆಗಳಲ್ಲಿ ಪ್ರತಿಧ್ವನಿಸಿತು.
ಇಂತಹ ಜಗತ್ತಿನಲ್ಲಿ, ಇಂತಹ ದುರಿತ ಕಾಲದಲ್ಲಿ ನಾವು ಪರಿಯ ಈ ವೇದಿಕೆಯಲ್ಲಿ ಭಾಷೆಗಳ ಜಗತ್ತಿನಲ್ಲಿ ನಾವು ಮಾಡುತ್ತಿರುವ ಕೆಲಸಗಳ ಹಿನ್ನೋಟವೊಂದನ್ನು ನೋಡುವ ಪ್ರಯತ್ನವೇ ಈ ಲೇಖನ! ಮೊದಲಿಗೆ ರೆಫಾತ್ ಅವರು ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ನಮ್ಮ ಭಾಷಾ ಜಗತ್ತಿನ ಕಡೆಗೆ ಹೊರಳುತ್ತೇವೆ.
ನಮ್ಮ ಹೋರಾಟವನ್ನು ಹೊರಜಗತ್ತಿಗೆ ತಲುಪಿಸಲು ಇರುವ ಏಕೈಕ ಸಶಕ್ತ ಆಯುಧವೆಂದರೆ ಅದು ಭಾಷೆ. ಪದಗಳು ನಮ್ಮ ಅತ್ಯಮೂಲ್ಯ ನಿಧಿಯಾಗಿದ್ದು, ನಮ್ಮಲ್ಲಿ ಅರಿವು ಮೂಡಿಸಿಕೊಳ್ಳಲು ಮತ್ತು ಇತರರಿಗೆ ಅರಿವು ನೀಡಲು ನಾವು ಇದನ್ನು ಬಳಸಿಕೊಳ್ಳಬೇಕಿದೆ. ಮತ್ತು ಈ ಪದಗಳನ್ನು ಸಾಧ್ಯವಿರುವಷ್ಟು ಭಾಷೆಗಳಲ್ಲಿ ತಲುಪಿಸಬೇಕು. ಜನರ ಹೃದಯ ಮತ್ತು ಮನಸ್ಸನ್ನು ತನ್ನಿಂದ ಸಾಧ್ಯವಿರುವಷ್ಟು ಸ್ಪರ್ಶಿಸುವ ಭಾಷೆಯನ್ನು ನಾನು ನಂಬುತ್ತೇನೆ ... ಅನುವಾವೆನ್ನುವುದು ಮಾನವ ಜಗತ್ತು ಕಂಡುಕೊಂಡು ಒಂದು ಸಾಧ್ಯತೆ. ಅನುವಾದವು ಜನರ ನಡುವಿನ ಅಡೆತಡೆಗಳನ್ನು ಮುರಿಯುತ್ತದೆ ಮತ್ತು ಅವರ ನಡುವೆ ಸೇತುವೆಯೊಂದನ್ನು ನಿರ್ಮಿಸುತ್ತದೆ ಮತ್ತು ತಿಳುವಳಿಕೆಯನ್ನು ಸೃಷ್ಟಿಸುತ್ತದೆ. ಆದರೆ ಅದೇ ಸಮಯಕ್ಕೆ "ಕೆಟ್ಟ" ಅನುವಾದಗಳು ತಪ್ಪು ತಿಳುವಳಿಕೆಗಳನ್ನು ಸಹ ಸೃಷ್ಟಿಸಬಲ್ಲವು.
ಜನರನ್ನು ಒಟ್ಟುಗೂಡಿಸುವ ಮತ್ತು ಹೊಸ ಅರಿವನ್ನು ಮೂಡಿಸುವಲ್ಲಿ ಅನುವಾದಕ್ಕಿರುವ ಸಾಮರ್ಥ್ಯದ ಮೇಲಿನ ನಂಬಿಕೆಯೇ ಪರಿಭಾಷಾ ವಿಭಾಗದ ಕೆಲಸಗಳ ಹೃದಯಭಾಗ.
ಮತ್ತು ಈ ವರ್ಷ ಎಂದರೆ 2023ನೇ ಇಸವಿ ನಮ್ಮ ಮಟ್ಟಿಗೆ ಬಹಳ ಮಹತ್ವಪೂರ್ಣ ವರ್ಷವಾಗಿತ್ತು.
ನಾವು ನಮ್ಮ ಭಾಷಾ ಕುಟುಂಬಕ್ಕೆ ಛತ್ತೀಸಗಢಿ ಮತ್ತು ಭೋಜಪುರಿ ಭಾಷೆಗಳನ್ನು ಸೇರಿಸಿಕೊಂಡೆವು. ಈಗ ಪರಿ ಪ್ರಕಟಿಸುತ್ತಿರುವ 14 ಭಾಷೆಗಳ ಪಟ್ಟಿಯಲ್ಲಿ ಇವೆರಡು ಭಾಷೆಗಳೂ ಸೇರಿಕೊಂಡಿವೆ.
ಇದರೊಂದಿಗೆ ನಮಗೆ ಇನ್ನೂ ಒಂದು ಕಾರಣಕ್ಕಾಗಿ ಈ ವರ್ಷ ಬಹಳ ಮಹತ್ವವೆನ್ನಿಸುತ್ತದೆ. ಅದಕ್ಕೆ ಕಾರಣ ಪರಿಭಾಷಾ ಎನ್ನುವ ಹೆಸರು ಸಹ ಈ ವರ್ಷ ಮುನ್ನೆಲೆಗೆ ಬಂತು. ನಾವು ಈ ಹೆಸರಿನಡಿ ಇಂಗ್ಲಿಷ್ ಬರಹಗಳನ್ನು ಅನುವಾದಿಸುವುದರ ಜೊತೆಜೊತೆಗೆ ನಾವು ಮಾಡುವ ಕೆಲಸವು ಪರಿಯನ್ನು ಬಹು ಭಾಷಾ ವೇದಿಕೆಯನ್ನಾಗಿಸಿದೆ. ಇದು ಎಲ್ಲರನ್ನೂ ಒಳಗೊಳ್ಳುವ ನಮ್ಮ ಗ್ರಾಮೀಣ ಪತ್ರಿಕೋದ್ಯಮದ ಹಾದಿಯಲ್ಲಿ ದೊಡ್ಡ ಮೈಲಿಗಲ್ಲು.
ನಾವು ಜನಸಾಮಾನ್ಯರ ಬದುಕಿನಲ್ಲಿ ಮಾತು ಮತ್ತು ಭಾಷೆಗಿರುವ ಸ್ಥಾನ ಎಂತಹದ್ದು ಎನ್ನುವುದರ ಅನ್ವೇಷಣೆಯನ್ನು ಈಗಲೂ ಮುಂದುವರೆಸಿದ್ದೇವೆ. ನಾವು ಇದನ್ನು ಅನುವಾದ ಮತ್ತು ಭಾಷೆಗಳ ಸುತ್ತಲಿನ ನಮ್ಮ ವರದಿಗಳು ಮತ್ತು ಮಾತುಕತೆಗಳ ಮೂಲಕ ಸಾಧ್ಯವಾಗಿಸಲು ಪ್ರಯತ್ನಿಸುತ್ತಿದ್ದೇವೆ. ಪರಿಯ ಒಟ್ಟಾರೆ ಕೆಲಸದಲ್ಲಿ ನಮ್ಮ ಸ್ಥಾನವಿದು.




