ಒಂದು ವೇಳೆ ಪೋಲೀಸರ ಹಿಂಸಾತ್ಮಕ ಹೊಡೆತಗಳು ಹಿನ್ನಡೆಯನ್ನುಂಟು ಮಾಡದೆ ಇದ್ದಲ್ಲಿ, ಉತ್ತರ ಪ್ರದೇಶದ ಬಾಘಪತ್ ಜಿಲ್ಲೆಯಲ್ಲಿ ಚಳವಳಿ ನಡೆಸುತ್ತಿರುವ ರೈತರು ಪ್ರತಿಭಟನಾ ಸ್ಥಳವನ್ನು ತೊರೆಯುತ್ತಿರಲಿಲ್ಲ. ” 40 ದಿನಗಳಿಂದ ಚಳುವಳಿ ನಡೆಯುತ್ತಿದೆ” ಎಂದು ಬರೌತ್ ಪಟ್ಟಣದಲ್ಲಿ ಧರಣಿ ಸತ್ಯಾಗ್ರಹದಲ್ಲಿ ನಿರತರಾಗಿರುವ ಕಬ್ಬು ಬೆಳೆಗಾರರಾಗಿರುವ ಬ್ರಿಜಪಾಲ್ ಸಿಂಗ್ (52) ಹೇಳುತ್ತಾರೆ.
“ಅದು ರಾಸ್ತಾ ರೋಖೋ ಕೂಡ ಆಗಿರಲಿಲ್ಲ, ನಾವು ಶಾಂತಿ ರೀತಿಯಿಂದ ನಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸುತ್ತಿದ್ದೆವು. ಜನವರಿ 27ರ ರಾತ್ರಿ ಪೋಲಿಸರು ಏಕಾಏಕಿ ನಮ್ಮ ಮೇಲೆ ಲಾಠಿ ಪ್ರಹಾರ ನಡೆಸಿದರು. ನಮ್ಮ ಟೆಂಟ್ ಗಳನ್ನು ನಾಶಪಡಿಸಿ ಅವರು ಅಲ್ಲಿರುವ ನಮ್ಮ ಪಾತ್ರೆ ಹಾಗೂ ಬಟ್ಟೆಗಳನ್ನು ತೆಗೆದುಕೊಂಡು ಹೋದರು. ಅಲ್ಲಿದ್ದ ಹಿರಿಯರು ಮತ್ತು ಮಕ್ಕಳ ಬಗ್ಗೆಯೂ ಕೂಡ ಅವರು ತಲೆಕೆಡಿಸಿಕೊಳ್ಳಲಿಲ್ಲ” ಎಂದು ಬರೌತ್ ನಲ್ಲಿ ಐದು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ಬ್ರಿಜಪಾಲ್ ಹೇಳುತ್ತಾರೆ.
ಆ ಜನವರಿ ರಾತ್ರಿಯವರೆಗೂ, ಜಿಲ್ಲೆಯ ಎಲ್ಲೆಡೆಯಿಂದ ಸುಮಾರು 200 ರೈತರು ಹೊಸ ಕೃಷಿ ಕಾನೂನುಗಳಿಗೆ ವಿರುದ್ಧವಾಗಿ ಬರಾತ್‌ನ ಬಾಗಪತ್-ಸಹರಾನ್‌ಪುರ ಹೆದ್ದಾರಿಯಲ್ಲಿ ಚಳವಳಿ ನಡೆಸುತ್ತಿದ್ದರು. 2020ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಮೂರು ಹೊಸ ಕೃಷಿ ಕಾನೂನುಗಳನ್ನು ಜಾರಿಗೆ ತಂದಾಗಿನಿಂದಲೂ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಲಕ್ಷಾಂತರ ರೈತರಲ್ಲಿ ಅವರು ಕೂಡ ಸೇರಿದ್ದಾರೆ.
ಈ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಬಾಘ್‌ಪತ್ ಮತ್ತು ಪಶ್ಚಿಮ ಉತ್ತರ ಪ್ರದೇಶದ (ಯುಪಿ) ಇತರ ಭಾಗಗಳಲ್ಲಿನ ರೈತರು ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ನವಂಬರ್ 26ರಿಂದ ಪಂಜಾಬ್ ಮತ್ತು ಹರಿಯಾಣದಿಂದ ಬಂದಿರುವ ದೆಹಲಿಯ ಗಡಿ ಭಾಗದಲ್ಲಿ ಚಳುವಳಿಯನ್ನು ನಡೆಸುತ್ತಿದ್ದಾರೆ.
"ನಮಗೆ ಬೆದರಿಕೆಗಳು, ದೂರವಾಣಿ ಕರೆಗಳು ಬಂದಿವೆ" ಎಂದು ಬಾಗಪತ್ ಪ್ರದೇಶದ ತೋಮರ್ ಕುಲದ ಪುರುಷ ಮಂಡಳಿಯಾಗಿರುವ ದೇಶ್ ಖಾಪ್ ನ ಸ್ಥಳೀಯ ನಾಯಕರಾದ ಬ್ರಿಜ್ಪಾಲ್ ಹೇಳುತ್ತಾರೆ. ”ಜಿಲ್ಲಾ ಆಡಳಿತವು ನಮ್ಮ ಹೊಲಗಳನ್ನು ನೀರಿನಿಂದ ತುಂಬಿಸುವುದಾಗಿ ಬೆದರಿಕೆ ಹಾಕಿತು. ಇದು ಸಾಧ್ಯವಾಗದಿದ್ದರಿಂದಾಗಿ ಅವರು ನಾವು ಮಲಗಿದ್ದಾಗ ಪೋಲಿಸರ ಮೂಲಕ ಲಾಠಿ ಚಾರ್ಜ್ ಮಾಡಿದರು. ಈ ನಡೆ ನಮಗೆ ನಿಜಕ್ಕೂ ಅಚ್ಚರಿಯನ್ನು ತರಿಸಿತ್ತು.”




