10 ವರ್ಷದ ಬಾಲಕಿ ನೂತನ್ ಬ್ರಾಹ್ಮಣೆಗೆ ತನ್ನ ಅಜ್ಜಿ ಮುಂಬಯಿಗೆ ಹೊರಟಿರುವ ಪ್ರತಿಭಟನಾ ಮೆರವಣಿಗೆಗೆ ಯಾಕೆ ಹೋಗುತ್ತಿದ್ದಾರೆನ್ನುವ ಕುತೂಹಲವಿತ್ತು. ಹೀಗಾಗಿ ಜೀಜಾಬಾಯಿ ಅವಳನ್ನು ತನ್ನೊಂದಿಗೆ ಕರೆತಂದರು. “ನಾನು ಅವಳನ್ನು ಕರೆತರಲು ಕಾರಣವೆಂದರೆ ಅವಳಿಗೆ ಆದಿವಾಸಿಗಳ ಸಮಸ್ಯೆ ಮತ್ತು ನೋವು ಅರ್ಥವಾಗಲಿ ಎನ್ನುವುದು,” ಎಂದು ಜೀಜಾಬಾಯಿ ಹೇಳಿದರು. ಜನವರಿ 26ರಂದು ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಸುಡುವ ಬಿಸಿಲಿನಲ್ಲಿ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು.
“ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ [ಮೂರು ಕೃಷಿ ಕಾನೂನುಗಳ ವಿರುದ್ಧ] ರೈತರಿಗೆ ಬೆಂಬಲ ಸೂಚಿಸಲು ನಾವಿಲ್ಲಿಗೆ ಬಂದಿದ್ದೇವೆ. ಜೊತೆಗೆ ನಮ್ಮದೇ ಆದ ಸ್ಥಳೀಯ ಸಮಸ್ಯೆಗಳ ಕುರಿತೂ ಗಮನಸೆಳೆಯುವ ಉದ್ದೇಶವಿದೆ.” ಎಂದು 65 ವರ್ಷದ ಜೀಜಾಬಾಯಿ ಹೇಳಿದರು. ಇವರು ಜನವರಿ 25-26ರಂದು ನೂತನ್ ಜೊತೆ ಆಜಾದ್ ಮೈದಾನದಲ್ಲೇ ಉಳಿದಿದ್ದರು.
ಅವರು ನಾಸಿಕ್ ಜಿಲ್ಲೆಯ ಅಂಬೆವಾನಿ ಎನ್ನುವ ಊರಿನಿಂದ ಜನವರಿ 23ರಂದು ಅಲ್ಲಿನ ಸ್ಥಳೀಯ ರೈತರ ತಂಡದೊಡನೆ ಹೊರಟು ಇಲ್ಲಿಗೆ ಬಂದರು.
ಕೋಲಿ ಮಹಾದೇವ್ ಆದಿವಾಸಿ ಸಮುದಾಯಕ್ಕೆ ಸೇರಿದವರಾದ ಜೀಜಾಬಾಯಿ ಮತ್ತು ಅವರ 70 ವರ್ಷದ ಪತಿ ಶ್ರವಣ್ ಹಲವು ದಶಕಗಳ ಕಾಲದಿಂದ ಐದು ಎಕರೆ ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದರು. 2006ರಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ ಜಾರಿಗೆ ಬಂದ ನಂತರ ಅವರು ಆ ಭೂಮಿಯ ಮಾಲಿಕತ್ವವನ್ನು ಹೊಂದಿರಬೇಕಿತ್ತು. "ಆದರೆ ನಮ್ಮ ಹೆಸರಿಗೆ ಒಂದು ಎಕರೆಗಿಂತ ಕಡಿಮೆ ಭೂಮಿಯನ್ನು ನೀಡಲಾಯಿತು, ಅದರಲ್ಲಿ ನಾವು ಭತ್ತ, ಗೋಧಿ, ಉದ್ದು ಮತ್ತು ತೊಗರಿ ಬೆಳೆಯುತ್ತೇವೆ" ಎಂದು ಅವರು ಹೇಳಿದರು. "ಉಳಿದಿದ್ದು [ಜಮೀನು] ಅರಣ್ಯ ಇಲಾಖೆಯ ಅಡಿಯಲ್ಲಿದೆ, ಮತ್ತು ನಾವು ಆ ಜಾಗದ ಬಳಿ ಹೋದರೆ, ಅಧಿಕಾರಿಗಳು ನಮಗೆ ಕಿರುಕುಳ ನೀಡುತ್ತಾರೆ."
ಮುಂಬೈನಲ್ಲಿ ನಡೆದ ಗಣರಾಜ್ಯೋತ್ಸವ ದಿನದ ಪ್ರತಿಭಟನೆಯಲ್ಲಿ ಭಾಗವಹಿಸಲು, ನೂತನ್ ತಂದೆ, ಜೀಜಾಬಾಯಿಯವರ ಮಗ ಸಂಜಯ್ ತನ್ನ ಮಗಳನ್ನು ಅಜ್ಜಿಯೊಂದಿಗೆ ಕಳಿಸಲು ಸುಲಭವಾಗಿ ಒಪ್ಪಿಕೊಂಡರು. "ಅವಳು 2018ರಲ್ಲಿ ನಡೆದ ರೈತರ ಸುದೀರ್ಘ ಪ್ರದರ್ಶನಾ ಮೆರವಣಿಗೆಯಲ್ಲಿ (ಕಿಸಾನ್ ಲಾಂಗ್ ಮಾರ್ಚ್) ಭಾಗವಹಿಸಲು ಬಯಸಿದ್ದಳು, ಅಂದು ನಾವು ನಾಸಿಕ್‌ನಿಂದ ಮುಂಬೈಗೆ ಒಂದು ವಾರದ ನಡೆದಿದ್ದೆವು. ಆದರೆ ಆಗ ಅವಳು ತುಂಬಾ ಚಿಕ್ಕವಳಿದ್ದಳು. ಅವಳು ಅಷ್ಟು ದೂರ ನಡೆಯಲು ಸಾಧ್ಯವಾಗುತ್ತದೆನ್ನುವ ಕುರಿತು ನನಗೆ ಖಾತ್ರಿಯಿರಲಿಲ್ಲ. ಈಗ ಅವಳು ಸಾಕಷ್ಟು ದೊಡ್ಡವಳಾಗಿದ್ದಾಳೆ. ಮತ್ತು ಈ ಬಾರಿ ಅಷ್ಟೇನೂ ಹೆಚ್ಚು ನಡೆಯುಂತಿರಲಿಲ್ಲ" ಎಂದು ಜೀಜಾಬಾಯಿ ಹೇಳಿದರು.






