ಔಚಿತ್ ಮಾತ್ರೆ ತರಗತಿಯಲ್ಲಿ ಒಬ್ಬನೇ ವಿದ್ಯಾರ್ಥಿಯಾಗಿದ್ದನು. ಆದರೆ ಈಗ ಇಡೀ ಶಾಲೆಯಲ್ಲಿ ಕೊನೆಯ ವಿದ್ಯಾರ್ಥಿಯಾಗಿ ಉಳಿದಿರುವುದು ಅವನಿಗೆ ಖಂಡಿತವಾಗಿಯೂ ಇದು ಹೊಸದು.
12 ವರ್ಷದ ಔಚಿತ್ ಕಳೆದ ವರ್ಷ ಅಕ್ಟೋಬರ್ 4ರಂದು ಸುಮಾರು 18 ತಿಂಗಳುಗಳಿಂದ ಕೊರೊನಾ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡ ನಂತರ ಸುಮಾರು 11 ಗಂಟೆಗೆ ತರಗತಿಗೆ ಕಾಲಿಟ್ಟಾಗ ಇದು ಅವನ ಅನುಭವಕ್ಕೆ ಬಂದಿತು. ಶಾಲೆಯ ಮೂರು ಕೊಠಡಿಗಳು ಖಾಲಿಯಾಗಿದ್ದವು. ಕುರ್ಚಿಯ ಮೇಲೆ ಇರಿಸಲಾದ ಪ್ರೇಮ್ ಹಾಕಿದ್ದ ಮಹಾತ್ಮ ಗಾಂಧಿಯವರ ಫೋಟೋದೊಟ್ಟಿಗೆ ಶಿಕ್ಷಕರು ಅವನಿಗಾಗಿ ಮಾತ್ರ ಕಾಯುತ್ತಿದ್ದರು.
ಔಚಿತ್ 2015ರಲ್ಲಿ 1ನೇ ತರಗತಿಗೆ ಸೇರಿದ ಸಮಯದಿಂದ, ಅವನು ಆರು ವರ್ಷದವನಾಗಿದ್ದಾಗ, ಅವನಿಗೆ ಬೇರೆ ಯಾವುದೇ ಸಹಪಾಠಿಗಳು ಇರಲಿಲ್ಲ. "ಫಕ್ತ್ ಮೀಚ್ ಹೋತೋ [ನಾನು ಮಾತ್ರ ಅಲ್ಲಿದ್ದೆ]," ಎಂದು ಅವನು ಹೇಳುತ್ತಾನೆ. ಅವನು ಆ ಶಾಲೆಗೆ ದಾಖಲಾದ ಕೊನೆಯ ವಿದ್ಯಾರ್ಥಿಯೂ ಆಗಿದ್ದನು -ಆಗ ಇನ್ನೂ ಸುಮಾರು 25 ಇತರ ವಿದ್ಯಾರ್ಥಿಗಳಿದ್ದರು. ಅವರು ಘರಪುರಿ ಗ್ರಾಮದ ಮೂರು ಕುಗ್ರಾಮಗಳಿಂದ ಬಂದವರು - ಮೊರಬಂದರ್, ರಾಜಬಂದರ್ ಮತ್ತು ಶೆಟ್ಬಂದರ್ ಹೀಗೆ ಇದು ಸುಮಾರು 1,100 ಜನರಿಗೆ ನೆಲೆಯಾಗಿದೆ. ಘರಪುರಿ ದ್ವೀಪವು ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಎಲಿಫೆಂಟಾ ಗುಹೆಗಳಿಗೆ ಹೆಸರುವಾಸಿಯಾದ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ.ದಕ್ಷಿಣ ಮುಂಬೈನ ಗೇಟ್‌ವೇ ಆಫ್ ಇಂಡಿಯಾದಿಂದ, ದೋಣಿಯಲ್ಲಿ ಸಾಗಿದರೆ ಒಂದು ಗಂಟೆ ಹಿಡಿಯುತ್ತದೆ.
ಔಚಿತ್‌ನ ಜಿಲ್ಲಾ ಪರಿಷತ್ ಶಾಲೆಯು 1ರಿಂದ 7ನೇ ತರಗತಿಗಳನ್ನು ಹೊಂದಿದ್ದು, ಈ ಶಾಲೆಯಲ್ಲಿ ಒಂದು ದಶಕದ ಹಿಂದೆ 55-60 ವಿದ್ಯಾರ್ಥಿಗಳು ಇರುತ್ತಿದ್ದರು. ಆದರೆ ವರ್ಷಗಳು ಕಳೆದಂತೆ ಸಂಖ್ಯೆಗಳು ಕಡಿಮೆಯಾಗಲು ಪ್ರಾರಂಭಿಸಿದವು ಮತ್ತು 2019ರ ಹೊತ್ತಿಗೆ ಕೇವಲ 13 ವಿದ್ಯಾರ್ಥಿಗಳು ಮಾತ್ರ ಉಳಿದಿದ್ದರು. ಮಾರ್ಚ್ 2020ರ ಹೊತ್ತಿಗೆ ಈ ಸಂಖ್ಯೆ ಏಳಕ್ಕೆ ಇಳಿಯಿತು. ಮತ್ತು 2020-21ರ ಶೈಕ್ಷಣಿಕ ವರ್ಷದಲ್ಲಿ, ಮೂವರು 7ನೇ ತರಗತಿಯನ್ನು ಪೂರ್ಣಗೊಳಿಸಿದಾಗ ಮತ್ತು ಇಬ್ಬರು ವಿದ್ಯಾರ್ಥಿಗಳು ಬಿಟ್ಟಿದ್ದರಿಂದಾಗಿ ಕೊನೆಗೆ ಶಾಲೆಯಲ್ಲಿ ಇಬ್ಬರೇ ವಿದ್ಯಾರ್ಥಿಗಳು ಉಳಿಯಬೇಕಾಯಿತು. 6ನೇ ತರಗತಿಯಲ್ಲಿ ಔಚಿತ್ ಮತ್ತು 7ನೇ ತರಗತಿಯಲ್ಲಿ ಗೌರಿ ಮಾತ್ರೆ. "ಇಲ್ಲಿ ಅಧ್ಯಯನಗಳು ಸರಿಯಾಗಿ ನಡೆಯುತ್ತಿಲ್ಲ, ಅದಕ್ಕಾಗಿಯೇ ಎಲ್ಲರೂ ಹೊರಡಲು ಪ್ರಾರಂಭಿಸಿದರು." ಎಂದು ಅವರು ಹೇಳುತ್ತಾರೆ.


















