ಲಕ್ಷ್ಮೀಬಾಯಿ ಕೇಲ್ ಪ್ರತಿ ವರ್ಷ ತಮ್ಮ ಬೆಳೆಯ ಒಂದು ಭಾಗವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಅತಿಯಾದ ಮಳೆ ಅಥವಾ ಬರ ಅಥವಾ ಕಳಪೆ ಕೃಷಿ ತಂತ್ರಜ್ಞಾನಗಳಲ್ಲ. "ನಮ್ಮ ಬೆಳೆಗಳು ನಾಶವಾಗುತ್ತಿರುವುದಕ್ಕೆ ಕಾರಣವೆಂದರೆ ಪಂಚಾಯತ್ ನನ್ನ ಕೃಷಿ ಭೂಮಿಯಲ್ಲಿ ಪ್ರಾಣಿಗಳನ್ನು ಮೇಯಿಸಲು ಅನುವು ಮಾಡಿಕೊಡುವುದು" ಎನ್ನುತ್ತಾರೆ 60 ವರ್ಷದ ಹಿರಿಯ ಮಹಿಳೆ ಲಕ್ಷ್ಮೀಬಾಯಿ ಕೇಲ್. "ನಾನು ಅನುಭವಿಸಿದ ನಷ್ಟಗಳ ಸಂಖ್ಯೆ ಎಷ್ಟೆನ್ನುವುದೂ ನನಗೆ ನೆನಪಿಲ್ಲ.”
ಲಕ್ಷ್ಮಿಬಾಯಿ ಮತ್ತು ಅವರ ಪತಿ ವಾಮನ್ ಮೂರು ದಶಕಗಳಿಂದ ನಾಸಿಕ್ ಜಿಲ್ಲೆಯ ಮೊಹಾದಿ ಗ್ರಾಮದಲ್ಲಿನ ಐದು ಎಕರೆ ಜಾಗದಲ್ಲಿ ಬೇಸಾಯ ಮಾಡುತ್ತಿದ್ದಾರೆ, ಇವರ ಭೂಮಿಯು ಗಾಯ್‌ರಾನ್ ಎಂದು ಕರೆಯಲಾಗುವ ಜಾಗದ ಭಾಗವಾಗಿದ್ದು (ಗ್ರಾಮದ ಸರ್ಕಾರಿ ನಿಯಂತ್ರಿತ ಸಾರ್ವಜನಿಕ ಭೂಮಿಯನ್ನು ಹುಲ್ಲುಗಾವಲುಗಳಾಗಿ ಬಳಸಲಾಗುತ್ತದೆ. ಅದನ್ನು ಗಾಯ್‌ರಾನ್ ಎಂದು ಕರೆಯುತ್ತಾರೆ) ಅಲ್ಲಿ ಅವರು ತೊಗರಿ, ಸಜ್ಜೆ, ಜೋಳ ಮತ್ತು ಭತ್ತವನ್ನು ಬೆಳೆಯುತ್ತಾರೆ. "ಗ್ರಾಮಸ್ಥರಿಗೆ ಪಂಚಾಯತ್ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಲು ಅನುಮತಿಸದಿದ್ದರೆ, ಅವರು ನಮ್ಮ ವಿರುದ್ಧ ಮೊಕದ್ದಮೆ ಹೂಡುತ್ತಾರೆ ಎಂದು ಪಂಚಾಯತ್ ಸದಸ್ಯರು ಹೇಳುತ್ತಾರೆ" ಎಂದು ಲಕ್ಷ್ಮಿಬಾಯಿ ಹೇಳಿದರು.
ಲಕ್ಷ್ಮಿಬಾಯಿ ಮತ್ತು ದಿಂಡೋರಿ ತಾಲ್ಲೂಕಿನ ಅವರ ಗ್ರಾಮದ ಇತರ ರೈತರು 1992ರಿಂದ ತಮ್ಮ ಭೂ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. "ನಾನು ಈ ಭೂಮಿಯನ್ನು ಉಳುತ್ತಿರುವ ಕುಟುಂಬದ ಮೂರನೇ ತಲೆಮಾರಿನವಳು, ಆದರೆ ನಮಗೆ ಇನ್ನೂ ಭೂಮಿಯ ಮೇಲಿನ ಹಕ್ಕು ದೊರೆತಿಲ್ಲ" ಎಂದು ಅವರು ಹೇಳಿದರು. "2002ರಲ್ಲಿ, ನಾವು ನಮ್ಮ ಭೂಮಿಯ ಹಕ್ಕುಗಳಿಗಾಗಿ ಸತ್ಯಾಗ್ರಹ ಮತ್ತು ಜೈಲು ಭರೋ ಆಂದೋಲನವನ್ನು ಪ್ರಾರಂಭಿಸಿದ್ದೆವು." ಆ ಸಮಯದಲ್ಲಿ, ಸುಮಾರು 1,500 ರೈತರು, ಅವರಲ್ಲಿ ಬಹುತೇಕ ಮಹಿಳೆಯರು, ನಾಸಿಕ್ ಕೇಂದ್ರ ಕಾರಾಗೃಹದಲ್ಲಿ 17 ದಿನಗಳನ್ನು ಕಳೆದಿದ್ದೆವು ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಭೂ ಮಾಲೀಕತ್ವ ಇಲ್ಲದಿರುವ ಕಾರಣ, ಮಹಾರಾಷ್ಟ್ರದಲ್ಲಿ ಇತರ ಹಿಂದುಳಿದ ವರ್ಗವಾಗಿ ಪಟ್ಟಿ ಮಾಡಲಾಗಿರುವ ಲೋಹರ್ ಜಾತಿಗೆ ಸೇರಿದ ಲಕ್ಷ್ಮಿಬಾಯಿಗೆ ಬೆಳೆ ನಷ್ಟವನ್ನು ಸರಿಹೊಂದಿಸಿಕೊಳ್ಳಲು ಯಾವುದೇ ಸಹಾಯ ದೊರೆಯುವುದಿಲ್ಲ. "ಭೂಮಿ ನಮ್ಮ ಹೆಸರಿನಲ್ಲಿಲ್ಲದ ಕಾರಣ ನಮಗೆ ಸಾಲ/ವಿಮೆ (ಬೆಳೆ) ದೊರೆಯುವುದಿಲ್ಲ" ಎಂದು ಅವರು ಹೇಳಿದರು. ಬದಲಾಗಿ, ಅವರು ಕೃಷಿ ಕಾರ್ಮಿಕರಾಗಿ ದುಡಿಯುವ ಮೂಲಕ ನಷ್ಟವನ್ನು ಸರಿದೂಗಿಸಿಕೊಳ್ಳುತ್ತಾರೆ, ಕೆಲವೊಮ್ಮೆ ಹೆಚ್ಚು ಸಂಪಾದಿಸುವ ಸಲುವಾಗಿ ದಿನಕ್ಕೆ ಎಂಟು ಗಂಟೆಗಳ ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ.
ಭಿಲ್ ಆದಿವಾಸಿ ಸಮುದಾಯದಕ್ಕೆ ಸೇರಿದವರಾದ 55 ವರ್ಷದ ವಿಜಾಬಾಯಿ ಗಂಗುರ್ಡೆ ಕೂಡ ಇಂತಹದೇ ಪರಿಸ್ಥಿತಿಯಲ್ಲಿದ್ದಾರೆ. ಮೊಹಾದಿಯಲ್ಲಿರುವ ಅವರ ಕೃಷಿ ಭೂಮಿ ಅವರ ಜೀವನಕ್ಕೆ ಸಾಲುವುದಿಲ್ಲ. "ಎಂಟು ಗಂಟೆಗಳ ಕಾಲ ನನ್ನ ಎರಡು ಎಕರೆ ಹೊಲದಲ್ಲಿ ಕೆಲಸ ಮಾಡಿದ ನಂತರ ಇನ್ನೊಂದು ಎಂಟು ಗಂಟೆಗಳ ಕಾಲ ಬೇರೆಯವರ ಹೊಲಗಳಲ್ಲಿ ಕೃಷಿ ಕಾರ್ಮಿಕಳಾಗಿ ದುಡಿಯುತ್ತೇನೆ." ಎಂದು ವಿಜಾಬಾಯಿ ಹೇಳಿದರು, ಅವರ ತನ್ನ ಪಾಲಿನ ದಿನವನ್ನು ಎರಡು ಪಾಳಿಗಳಲ್ಲಿ ವಿಂಗಡಿಸಿಕೊಂಡಿದ್ದು ಬೆಳಿಗ್ಗೆ 7 ಗಂಟೆಗೆ ಕೆಲಸ ಪ್ರಾರಂಭಿಸುತ್ತಾರೆ.
"ಆದರೆ ನಾನು ಲೇವಾದೇವಿದಾರರಿಂದ ಹಣವನ್ನು ಸಾಲವಾಗಿ ಪಡೆಯುವುದಿಲ್ಲ"ವೆಂದು ಅವರು ಹೇಳಿದರು. "ಬಡ್ಡಿ ವ್ಯವಹಾರದವರು ತಾವು ನೀಡುವ ಪ್ರತಿ 100 ರೂಪಾಯಿಗೆ 10 ರೂಪಾಯಿ ಬಡ್ಡಿಯನ್ನು ವಿಧಿಸುತ್ತಾರೆ, ಅದನ್ನು ತಿಂಗಳ ಕೊನೆಯಲ್ಲಿ ಮರುಪಾವತಿಸಬೇಕಾಗುತ್ತದೆ." ಲಕ್ಷ್ಮೀಬಾಯಿ ಕೂಡ ಖಾಸಗಿ ಸಾಲದವರಿಂದ ದೂರವಿರುತ್ತಾರೆ. "ಬಡ್ಡಿ ಸಾಲ ನೀಡುವವರು ಹತ್ತಿರದ ಹಳ್ಳಿಗಳಲ್ಲಿ ವಿಧವೆಯರಿಗೆ ಕಿರುಕುಳ ನೀಡಿದ್ದಾರೆ" ಎಂದು ಅವರು ಹೇಳಿದರು.








