ದನದ ಸಗಣಿ, ಜೇಡಿಮಣ್ಣು ಮತ್ತು ಬಿದಿರನ್ನು ಒಟ್ಟುಗೂಡಿಸಿ ಮಜುಲಿಯಲ್ಲಿ ಮುಖವಾಡವನ್ನು ತಯಾರಿಸಲಾಗುತ್ತದೆ. ಇದು ಬ್ರಹ್ಮಪುತ್ರಾ ನದಿಯ ಈ ದ್ವೀಪದ ತಲೆಮಾರುಗಳ ಕುಶಲಕರ್ಮಿಗಳು ಅಭ್ಯಾಸ ಮಾಡುತ್ತಿರುವ ಕೌಶಲ. "ನಮ್ಮ ಸಂಸ್ಕೃತಿಗೆ ಮುಖವಾಡಗಳು ಮುಖ್ಯ, ಮತ್ತು ನಾವು ಗಲೂ ಅವುಗಳನ್ನು ತಯಾರಿಸುತ್ತಿರುವ ಕೆಲವು ಕೊನೆಯ ಕುಟುಂಬಗಳಲ್ಲಿ ಒಂದಾಗಿದ್ದೇವೆ" ಎಂದು ಕುಶಲಕರ್ಮಿ ಅನುಪಮ್ ಗೋಸ್ವಾಮಿ ಹೇಳುತ್ತಾರೆ. ಇಲ್ಲಿ ತಯಾರಿಸಿದ ಸರಳ ಮತ್ತು ವಿಸ್ತಾರವಾದ ಮುಖವಾಡಗಳನ್ನು ಬ್ರಹ್ಮಪುತ್ರದ ಈ ದ್ವೀಪದಲ್ಲಿ ಆಚರಿಸಲಾಗುವ ವಾರ್ಷಿಕ ನಾಟಕ ಪ್ರದರ್ಶನಗಳಿಗೆ ಮತ್ತು ದೇಶಾದ್ಯಂತದ ಉತ್ಸವಗಳಲ್ಲಿ ಧರಿಸಲಾಗುತ್ತದೆ.
"ಕುಟುಂಬದ ಸಂಪ್ರದಾಯವನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿ ನನ್ನ ಮೇಲಿದೆ" ಎಂದು 25 ವರ್ಷದ ಅನುಪಮ್ ಹೇಳುತ್ತಾರೆ. ಅವರ ಕುಟುಂಬವು ಅನೇಕ ತಲೆಮಾರುಗಳಿಂದ ಇದನ್ನು ಮಾಡುತ್ತಿದೆ ಮತ್ತು ಒಂಬತ್ತು ಜನರ ಕುಟುಂಬದಲ್ಲಿ ಪ್ರತಿಯೊಬ್ಬರೂ ಕರಕುಶಲತೆಯಲ್ಲಿ ತೊಡಗಿಸಿಕೊಂಡವರು.
"ಜಗತ್ತಿನೆಲ್ಲೆಡೆಯ ಅನೇಕ ಪ್ರವಾಸಿಗರು ಮಜುಲಿಗೆ ಭೇಟಿ ನೀಡಲು ಬರುತ್ತಾರೆ. ಅವರು ಇಲ್ಲಿನ ಮುಖವಾಡಗಳನ್ನು ಸ್ಮರಣಿಕೆಗಳಾಗಿ ಖರೀದಿಸುತ್ತಾರೆ" ಎಂದು ಧೀರೇನ್ ಗೋಸ್ವಾಮಿ ಹೇಳುತ್ತಾರೆ. ಅವರು ಅನುಪಮ್ ಅವರ 44 ವರ್ಷದ ಚಿಕ್ಕಪ್ಪ, ಕುಟುಂಬದ ಮಾಲೀಕತ್ವದ ಅಂಗಡಿಯಲ್ಲಿ ವಿವಿಧ ಗಾತ್ರದ ಮುಖವಾಡಗಳನ್ನು ಮಾರಾಟ ಮಾಡುತ್ತಾರೆ. ಒಂದು ಮುಖವಾಡದ ಬೆಲೆ 300 ರೂ., ಆದರೆ ಕಸ್ಟಮೈಸೇಶನ್ ಹೊಂದಿರುವ ವಿಶೇಷ, ದೊಡ್ಡ ಮುಖವಾಡಗಳಿಗೆ 10,000 ರೂ.ಗಳ ತನಕ ಬೆಲೆಯಿದೆ.
ಮಜುಲಿ ಭಾರತದ ಅತಿದೊಡ್ಡ ನದಿ ದ್ವೀಪವಾಗಿದೆ ಮತ್ತು ಇದನ್ನು '62 ಸತ್ರಗಳನ್ನು ಹೊಂದಿರುವ ಅಸ್ಸಾಮೀ ವೈಷ್ಣವ ಧರ್ಮ ಮತ್ತು ಸಂಸ್ಕೃತಿಯ ನರಮಂಡಲವೆಂದು ಪರಿಗಣಿಸಲಾಗಿದೆ' ಎಂದು 2011ರ ಜನಗಣತಿ ಸೂಚಿಸುತ್ತದೆ.
ಮುಖವಾಡವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳಾದ ಜೇಡಿಮಣ್ಣು ಮತ್ತು ಬಿದಿರನ್ನು ಬ್ರಹ್ಮಪುತ್ರಾ ಒದಗಿಸುತ್ತದೆ. ಮಜುಲಿ ಈ ನದಿಯಲ್ಲಿರುವ ಒಂದು ದೊಡ್ಡ ದ್ವೀಪವಾಗಿದ್ದು, ಇದು ವಿಶ್ವದ ಅತಿದೊಡ್ಡ ನದಿ ವ್ಯವಸ್ಥೆಗಳಲ್ಲಿ ಒಂದಾಗಿದೆ, ಇದು ಭಾರತದಲ್ಲಿ 194,413 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ಆಕ್ರಮಿಸಿಕೊಂಡಿದೆ. ಹಿಮಾಲಯದ ಹಿಮನದಿಯ ಹಿಮ ಕರಗುವಿಕೆ ಮತ್ತು ಭಾರಿ ಮಾನ್ಸೂನ್ ಮಳೆಯು ನದಿಯನ್ನು ಪೋಷಿಸುತ್ತದೆ ಮತ್ತು ಈ ಪ್ರದೇಶದಲ್ಲಿ ನೀರಿನ ಪ್ರವಾಹವನ್ನು ಉಂಟುಮಾಡುತ್ತದೆ: ಮಜುಲಿ ಮತ್ತು ಸುತ್ತಮುತ್ತಲಿನ ದ್ವೀಪಗಳ ವಾರ್ಷಿಕ ಸವೆತವು ನಿರಂತರ ಬೆದರಿಕೆಯಾಗಿದೆ.
ಮಾಸ್ಕ್ ತಯಾರಕರು ಸವಕಳಿಯ ಪರಿಣಾಮವನ್ನು ಅನುಭವಿಸುತ್ತಿದ್ದಾರೆ. "ಮಜುಲಿಯಲ್ಲಿನ ಭೂಮಿಯ ನಿರಂತರ ಸವೆತದಿಂದಾಗಿ [ಮುಖವಾಡ ತಯಾರಿಕೆಗೆ] ಅಗತ್ಯವಾದ ಜೇಡಿಮಣ್ಣನ್ನು ಪಡೆಯುವುದು ಕಷ್ಟಕರವಾಗುತ್ತಿದೆ" ಎಂದು ಧೀರೇನ್ ಗೋಸ್ವಾಮಿ ಇಂಡಿಯಾ ಡೆವಲಪ್ಮೆಂಟ್ ರಿವ್ಯೂನಲ್ಲಿ ಬರೆದಿದ್ದಾರೆ. ಹತ್ತಿರದ ಮಾರುಕಟ್ಟೆಯಿಂದ ಒಂದು ಕ್ವಿಂಟಾಲ್ ಕುಮ್ಹಾರ್ ಮಿಟ್ಟಿ ಅಥವಾ ಜೇಡಿಮಣ್ಣನ್ನು ಖರೀದಿಸಲು ಅವರು 1,500 ರೂ.ಗಳನ್ನು ಪಾವತಿಸುತ್ತಾರೆ. "ಈ ಹಿಂದೆ ನಾವು ಮುಖವಾಡಗಳಿಗೆ ಬಣ್ಣ ಹಚ್ಚಲು ನೈಸರ್ಗಿಕ ಬಣ್ಣಗಳನ್ನು ಬಳಸುತ್ತಿದ್ದೆವು, ಆದರೆ ಈಗ ಅವುಗಳನ್ನು ಹುಡುಕುವುದು ಕಷ್ಟವಾದೆ" ಎಂದು ಅನುಪಮ್ ಹೇಳುತ್ತಾರೆ.
ಮಹಾಪುರುಷ ಶ್ರೀಮಂತ ಶಂಕರದೇವರ ನಾಟಕಗಳಲ್ಲಿ ಒಂದರ ಪ್ರದರ್ಶನದಿಂದ ಧೀರೇನ್ ಈ ಕರಕುಶಲತೆಯ ಮೂಲವನ್ನು ಗುರುತಿಸುತ್ತಾರೆ. "ಕೇವಲ ಮೇಕಪ್ಪಿನೊಂದಿಗೆ ಕೆಲವು [ಪೌರಾಣಿಕ] ಪಾತ್ರಗಳಿಗೆ ನೋಟವನ್ನು ನೀಡುವುದು ಕಷ್ಟವಾಗಿತ್ತು. ಹೀಗಾಗಿ ಶಂಕರದೇವ ನಾಟಕಕ್ಕಾಗಿ ಮುಖವಾಡಗಳನ್ನು ತಯಾರಿಸಿದರು. ಅದು ಸಂಪ್ರದಾಯವಾಗಿ ಮುಂದುವರೆಯಿತು.”
ಗೋಸ್ವಾಮಿ ಕುಟುಂಬವು ಸಮಗುರಿ ಸತ್ರದಲ್ಲಿ ಸಂಗೀತ ಕಲಾ ಕೇಂದ್ರವನ್ನು ನಡೆಸುತ್ತಿದೆ, ಇದು 1663ನೇ ಇಸವಿಯಷ್ಟು ಹಿಂದಿನದು. ಸತ್ರಗಳು ಸಾಮಾಜಿಕ ಸುಧಾರಕ ಮತ್ತು ಸಂತ ಮಹಾಪುರುಷ ಶ್ರೀಮಂತ ಶಂಕರದೇವರಿಂದ ಸ್ಥಾಪಿಸಲ್ಪಟ್ಟ ಸಾಂಪ್ರದಾಯಿಕ ಪ್ರದರ್ಶನ ಕಲೆಗಳ ಕೇಂದ್ರಗಳಾಗಿವೆ.
'ನಮ್ಮ ಸಂಸ್ಕೃತಿಗೆ ಮುಖವಾಡಗಳು ಬಹಳ ಮುಖ್ಯ, ಮತ್ತು ನಾವು ಅವುಗಳನ್ನು ಈಗಲೂ ತಯಾರಿಸುತ್ತಿರುವ ಕೊನೆಯ ಕುಟುಂಬಗಳಲ್ಲಿ ಒಂದಾಗಿದ್ದೇವೆ' ಎಂದು ಅನುಪಮ್ ಗೋಸ್ವಾಮಿ ಹೇಳುತ್ತಾರೆ
ಅವರ ಕಾರ್ಯಾಗಾರವು ಅವರ ಮನೆಯಿಂದ 10 ಹೆಜ್ಜೆಗಳಿಗಿಂತ ಕಡಿಮೆ ದೂರದಲ್ಲಿದ್ದು, ಅದು ಎರಡು ಕೋಣೆಗಳನ್ನು ಹೊಂದಿದೆ. ಅಲ್ಲಿ ಆನೆಯ ಮುಖವಾಡದ ದೊಡ್ಡ ಮತ್ತು ಅಪೂರ್ಣ ಬಿದಿರಿನ ಅಸ್ಥಿಪಂಜರವು ಮೂಲೆಯಲ್ಲಿರುವ ಮೇಜಿನ ಮೇಲೆ ಕುಳಿತು ಪೂರ್ಣಗೊಳ್ಳಲು ಕಾಯುತ್ತಿತ್ತು. 2003ರಲ್ಲಿ, ಧೀರೇನ್ ಗೋಸ್ವಾಮಿ ಅವರ ದಿವಂಗತ ತಂದೆ ಕೋಶಾ ಕಾಂತಾ ದೇವ ಗೋಸ್ವಾಮಿ ಈ ಕಾರ್ಯಾಗಾರದ ಸ್ಥಾಪನೆಗಾಗಿ ಮತ್ತು ಈ ಕಲಾ ಪ್ರಕಾರಕ್ಕೆ ನೀಡಿದ ಕೊಡುಗೆಗಾಗಿ ಪ್ರತಿಷ್ಠಿತ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದರು.
ಕಾರ್ಯಾಗಾರದಲ್ಲಿನ ಪ್ರದರ್ಶನ ಸಭಾಂಗಣದ ಗೋಡೆಗಳು ಗಾಜಿನ ಕ್ಯಾಬಿನೆಟ್ಗಳ ಒಳಗೆ ಕುಳಿತಿರುವ ವಿವಿಧ ಆಕಾರಗಳು, ಗಾತ್ರಗಳು ಮತ್ತು ಬಣ್ಣಗಳ ಮುಖವಾಡಗಳನ್ನು ಹೊಂದಿವೆ. ಸುಮಾರು 10 ಅಡಿ ಎತ್ತರದ ಪೂರ್ಣ ದೇಹದ ಮುಖವಾಡಗಳನ್ನು, ಅವು ಕ್ಯಾಬಿನೆಟ್ ಒಳಗೆ ಹೊಂದದ ಕಾರಣ ಹೊರಗೆ ಇರಿಸಲಾಗಿದೆ. ದ್ವೀಪದಲ್ಲಿ ಭಯೋನಾ (ಧಾರ್ಮಿಕ ಸಂದೇಶಗಳ ಮನರಂಜನೆಯ ಸಾಂಪ್ರದಾಯಿಕ ರೂಪ) ಅಥವಾ ರಾಸ್ ಮಹೋತ್ಸವ್ (ಕೃಷ್ಣನ ನೃತ್ಯದ ಉತ್ಸವ) ನಂತಹ ಧಾರ್ಮಿಕ ಹಬ್ಬಗಳಲ್ಲಿ ಬಳಸುವ ಗರುಡ (ಪೌರಾಣಿಕ ಹದ್ದು) ನ ಪೂರ್ಣ ದೇಹದ ಮುಖವಾಡವನ್ನು ಧೀರೇನ್ ನಮಗೆ ತೋರಿಸಿದರು.
"2018ರಲ್ಲಿ ಈ ಗಾತ್ರದ 10 ಮುಖವಾಡಳಿಗಾಗಿ ಅಮೆರಿಕದ ವಸ್ತುಸಂಗ್ರಹಾಲಯದಿಂದ ನಮಗೆ ಆದೇಶ ಬಂದಿತ್ತು. ಸಾಗಿಸಲು ತುಂಬಾ ಭಾರವಾಗಿದ್ದರಿಂದ ನಾವು ವಿನ್ಯಾಸವನ್ನು ಬದಲಾಯಿಸಬೇಕಾಯಿತು" ಎಂದು ಅನುಪಮ್ ಹೇಳುತ್ತಾರೆ.
ಅದು ಆವಿಷ್ಕಾರಗಳ ಆರಂಭವಾಗಿತ್ತು. ಅಂದಿನಿಂದ ಕುಶಲಕರ್ಮಿಗಳು ಮಡಚಬಹುದಾದ ಮತ್ತು ಸಾಗಿಸಲು ಮತ್ತು ಮರು ಜೋಡಿಸಲು ಸುಲಭವಾದ ಮುಖವಾಡಗಳನ್ನು ತಯಾರಿಸಲು ಪ್ರಾರಂಭಿಸಿದರು. "ಮುಖವಾಡಗಳನ್ನು ಹೇಗೆ ಮುಖವಾಡಗಳನ್ನು ನಾವು ಕಾಲದ ಬೇಡಿಕೆಗೆ ತಕ್ಕಂತೆ ಮಾರ್ಪಾಟುಗೊಳಿಸಿದ್ದೇವೆ. ಕೆಲವರು ತಮ್ಮ ಮನೆಯ ಗೋಡೆಗೆ ನೇತು ಹಾಕುವ ಸಲುವಾಗಿ ಮುಖವಾಡ ಕೊಳ್ಳಲು ಬಯಸುತ್ತಾರೆ. ನಾವು ಅವರ ಬೇಡಿಕೆಯನ್ನು ಪೂರೈಸುತ್ತೇವೆ. ಸಮಯದೊಂದಿಗೆ, ಪ್ರತಿಯೊಬ್ಬರೂ ಬದಲಾಗಬೇಕಾಗಿದೆ" ಎಂದು ಸಂಪ್ರದಾಯವನ್ನು ಉಲ್ಲಂಘಿಸಲಾಗುತ್ತಿದೆಯೆಂದು ದೂರುವ ತಮ್ಮ ಟೀಕಾಕಾರರ ಮಾತುಗಳನ್ನು ತಳ್ಳಿಹಾಕುತ್ತಾ ಅನುಪಮ್ ಹೇಳುತ್ತಾರೆ.
ಈಗ ಅವರ ವ್ಯವಹಾರವು ಮುಖ್ಯವಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ. ಅನುಪಮ್ ಚಿಂತೆಯಿಂದ ಹೇಳುತ್ತಾರೆ, "ನಾವು ಈ ಹಿಂದೆ ಸಂಪಾದನೆಯತ್ತ ಗಮನ ಹರಿಸಲಿಲ್ಲ. ಪ್ರವಾಸಿ ತಿಂಗಳುಗಳಲ್ಲಿ ಸಹ [ಆರ್ಥಿಕ] ಸ್ಥಿರತೆಯಿಲ್ಲ."
ಸಮತೋಲನವನ್ನು ಕಂಡುಕೊಳ್ಳಲು ನಿರ್ಧರಿಸಿದ ಯುವ ಪದವೀಧರರು ಇತ್ತೀಚೆಗೆ ದಿಬ್ರೂಗಢ ವಿಶ್ವವಿದ್ಯಾಲಯದಿಂದ ಪ್ರವಾಸೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ, ಅವರು ಉದ್ಯಮದಲ್ಲಿ ಇತರ ಅವಕಾಶಗಳನ್ನು ಹುಡುಕುತ್ತಿದ್ದಾರೆ. "ನಮ್ಮ ಸಾಂಪ್ರದಾಯಿಕ ವ್ಯವಹಾರವನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ನನಗೆ ಅನೇಕ ಆಲೋಚನೆಗಳು ಮತ್ತು ಕನಸುಗಳಿವೆ, ಆದರೆ [ಈ ವ್ಯವಹಾರಕ್ಕೆ] ಹಾಕಲು ನಾನು ಮೊದಲು ನನ್ನ ಸ್ವಂತ ಉಳಿತಾಯವನ್ನು ಒಟ್ಟುಮಾಡಬೇಕಿದೆಯೆನ್ನುವುದು ನನಗೆ ತಿಳಿದಿದೆ."
ಕುಟುಂಬವು ಇದನ್ನು ಕಲಿಯಲು ಬಯಸುವ ಎಲ್ಲರಿಗೂ ಕಲಿಸುವುದನ್ನು ಮುಂದುವರಿಸಿದೆ. "ನಾವು ವರ್ಷಕ್ಕೆ ಕನಿಷ್ಠ 10 ವಿದ್ಯಾರ್ಥಿಗಳಿಗೆ ಕಲಿಸುತ್ತೇವೆ. ಅವರು ಹೆಚ್ಚಾಗಿ ಹತ್ತಿರದ ಹಳ್ಳಿಗಳಲ್ಲಿ ಕೃಷಿ ಮಾಡುವ ಕುಟುಂಬಗಳಿಂದ ಬರುತ್ತಾರೆ. ಆರಂಭದಲ್ಲಿ ಮಹಿಳೆಯರಿಗೆ [ಈ ಕರಕುಶಲತೆಯ] ಭಾಗವಾಗಲು ಅವಕಾಶವಿರಲಿಲ್ಲ ಆದರೆ ಈಗ ಅದು ಬದಲಾಗಿದೆ" ಎಂದು ಅನುಪಮ್ ಹೇಳುತ್ತಾರೆ. ತಮ್ಮ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಮುಖವಾಡಗಳನ್ನು ಕೇಂದ್ರದಲ್ಲಿ ಮಾರಾಟಕ್ಕಾಗಿ ಪ್ರದರ್ಶಿಸಲಾಗುತ್ತದೆ ಮತ್ತು ವಿದ್ಯಾರ್ಥಿಯು ಮಾರಾಟದಿಂದ ಬಂದ ಹಣದಲ್ಲಿ ಶೇಕಡಾವಾರು ಗಳಿಸಬಹುದು.
ವಿದ್ಯಾರ್ಥಿಗಳಲ್ಲಿ ಒಬ್ಬರಾದ ಗೌತಮ್ ಭುಯಾನ್ (22) ಪ್ರಸ್ತುತ ಕಾರ್ಯಾಗಾರದಲ್ಲಿದ್ದು, ಮುಂಬರುವ ಬೇಡಿಕಾಗಿ ಮುಖವಾಡವನ್ನು ತಯಾರಿಸುತ್ತಿದ್ದಾರೆ. ಕಮಲಾಬರಿ ಬ್ಲಾಕ್ ಹತ್ತಿರದ ಪೋಟಿಯಾರಿ ಕುಗ್ರಾಮದಲ್ಲಿ ಅವರು ವಾಸಿಸುತ್ತಿದ್ದಾರೆ, ಅಲ್ಲಿ ಅವರ ಕುಟುಂಬವು ತಮ್ಮ ಎಂಟು ಬಿಘಾ (ಸರಿಸುಮಾರು ಎರಡು ಎಕರೆ) ಭೂಮಿಯಲ್ಲಿ ಭತ್ತವನ್ನು ಬೆಳೆಯುತ್ತದೆ. "ಜನರು ಇಲ್ಲಿ ಮುಖವಾಡಗಳನ್ನು ತಯಾರಿಸುವುದನ್ನು ನಾನು ನೋಡುತ್ತಿದ್ದೆ ಮತ್ತು ಆ ಕುರಿತು ಕುತೂಹಲ ಹೊಂದಿದ್ದೆ, ಕೊನೆಗೆ ನಾನು ಹೊಲದಲ್ಲಿ ಕೆಲಸವಿಲ್ಲದ ಸಮಯದಲ್ಲಿ, ಶಾಲೆಯ ನಂತರ ಇಲ್ಲಿ ಕಲಿಯಲು ಪ್ರಾರಂಭಿಸಿದೆ" ಎಂದು ಅವರು ಹೇಳುತ್ತಾರೆ.
ಗೌತಮ್ ಈಗ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಮುಖವಾಡಗಳ ವೈಯಕ್ತಿಕ ಬೇಡಿಕೆಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಹೇಳುತ್ತಾರೆ, "ನನ್ನ ಸಂಪಾದನೆಯು ಬೇಡಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಕೆಲವೊಮ್ಮೆ ಅವರಿಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಬಂದಾಗ ನಾನು ಇಲ್ಲಿ [ಕೇಂದ್ರದಲ್ಲಿ] ಕೆಲಸ ಮಾಡುತ್ತೇನೆ." ಹಣದ ಹೊರತಾಗಿ, ಈ ಕರಕುಶಲತೆಯನ್ನು ಕಲಿತು ಅವರು ಇನ್ನೂ ಹೆಚ್ಚಿನದನ್ನು ಪಡೆದಿದ್ದಾರೆ ಎಂದು ಹೇಳುವಾಗ ಅವರ ಮುಖ ಬೆಳಗುತ್ತದೆ. "ನಾವು ಮುಖವಾಡಗಳನ್ನು ಬಳಸಿ [ರಂಗಭೂಮಿ] ಪ್ರದರ್ಶನಗಳನ್ನು ನೀಡಲು ದೇಶದೆಲ್ಲಡೆ ಪ್ರಯಾಣಿಸುತ್ತೇನೆ. ಅನೇಕ ವೀಕ್ಷಣೆಗಳನ್ನು ಹೊಂದಿರುವ ಆ ಬಾಲಿವುಡ್ ಮ್ಯೂಸಿಕ್ ವೀಡಿಯೊದಲ್ಲಿ ನಾನು ನಟಿಸಲು ಸಹ ಈ ಕಲೆಯಿಂದಲೇ ಸಾಧ್ಯವಾಗಿದ್ದು!
ಗೌತಮ್ ಮತ್ತು ಅನುಪಮ್ ಇತ್ತೀಚೆಗೆ ಬಾಲಿವುಡ್ ಮ್ಯೂಸಿಕ್ ವೀಡಿಯೊ ಒಂದರಲ್ಲಿ ಪ್ರದರ್ಶನ ನೀಡಿದರು, ಇದು ಯೂಟ್ಯೂಬಿಲ್ಲಿ 450 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಅನುಪಮ್ ರಾಮಾಯಣದ 10 ತಲೆಗಳ ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಆರಂಭಿಕ ಶಾಟ್ನಲ್ಲಿ ಅವರು ತಾನೇ ತಯಾರಿಸಿದ ಮುಖವಾಡದಲ್ಲಿ ಕಾಣಿಸಿಕೊಂಡಿದ್ದಾರೆ. "ಅದರ ಕ್ರೆಡಿಟ್ಗಳಲ್ಲಿ ನನಗೆ ಒಂದೇ ಒಂದು ಉಲ್ಲೇಖವೂ ಸಿಗಲಿಲ್ಲ" ಎಂದು ಅವರು ಗಮನಸೆಳೆದರು, ಜೊತೆಯಲ್ಲಿ ಮುಖವಾಡ ತಯಾರಿಸಿ ಇಬ್ಬರು ಸಹೋದ್ಯೋಗಿಗಳಿಗೂ ಕ್ರೆಡಿಟ್ ಸಿಕ್ಕಿಲ್ಲ.
ಈ ಲೇಖನಕ್ಕೆ ಸಹಾಯ ನೀಡಿದ ಮಾಜಿ ಪರಿ ಇಂಟರ್ನ್ಗಳಾದ ಸಬ್ಜಾರಾ ಅಲಿ, ನಂದಿನಿ ಬೋಹ್ರಾ ಮತ್ತು ವೃಂದಾ ಜೈನ್ ಅವರಿಗೆ ವರದಿಗಾರರು ಧನ್ಯವಾದ ಹೇಳಲು ಬಯಸುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು