ನಾರಾಯಣ ಗಾಯಕವಾಡ್ ಅವರು ತಮ್ಮ ಹೊಲದಲ್ಲಿ ಬೆಳೆಯುತ್ತಿರುವ ಬೆರಳೆಣಿಕೆಯಷ್ಟು ಹರಳು ಗಿಡಗಳನ್ನು ನೋಡುತ್ತಾ, ನೆನಪಿನಂಗಳಕ್ಕೆ ಜಾರಿದರು. ತಾನು ಆ ದಿನಗಳಲ್ಲಿ ತೊಡುತ್ತಿದ್ದ ಕೊಲ್ಹಾಪುರಿ ಚಪ್ಪಲಿಯನ್ನು ನೆನಪಿಸಿಕೊಳ್ಳುತ್ತಾ “ಅದರ [ಚಪ್ಪಲಿಯ] ಬಾಳಿಕೆಯನ್ನು ಹೆಚ್ಚಿಸುವ ಸಲುವಾಗಿ ಅದಕ್ಕೆ ಹರಳೆಣ್ಣೆ ಹಚ್ಚುತ್ತಿದ್ದೆವು” ಎಂದು ಸ್ಥಳೀಯ ಚಪ್ಪಲಿಗೂ ಹರಳೆಣ್ಣೆಗೂ ಇದ್ದ ಸಂಬಂಧವನ್ನು ವಿವರಿಸಿದರು. ಅವರು ಆ ಚಪ್ಪಲಿ ಬಳಸುವುದನ್ನು ಬಿಟ್ಟು ಈಗ 20 ವರ್ಷ ಕಳೆದಿದೆ.
ಈ ಕೊಲ್ಹಾಪುರಿ ಚಪ್ಪಲಿಗಳಿಗೆ ಬಳಿಯುವ ಸಲುವಾಗಿಯೇ ಕೊಲ್ಹಾಪುರ ಜಿಲ್ಲೆಯಲ್ಲಿ ಹರಳೆಣ್ಣೆ ತಯಾರಿಸಲಾಗುತ್ತಿತ್ತು. ಎಮ್ಮೆ ಅಥವಾ ದನದ ಚರ್ಮದಿಂದ ಮಾಡಿದ ಈ ಚಪ್ಪಲಿಯ ಮೃದುತ್ವ ಮತ್ತು ಆಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಜಿಡ್ಡು ಹಚ್ಚಲಾಗುತ್ತಿತ್ತು. ಮತ್ತು ಇದಕ್ಕೆ ಹರಳೆಣ್ಣೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿತ್ತು.
ಹರಳು ಕೊಲ್ಹಾಪುರದ ಸ್ಥಳೀಯ ಬೆಳೆಯಲ್ಲವಾದರೂ ಇಲ್ಲಿ ಈ ಬೆಳೆ ಒಂದು ಕಾಲದಲ್ಲಿ ಬಹಳ ಜನಪ್ರಿಯ ಬೆಳೆಯಾಗಿತ್ತು. ಹಸಿರು ಎಲೆಗಳನ್ನು ಹೊಂದಿರುವ ಈ ದಪ್ಪ ಕಾಂಡದ ಸಸ್ಯವನ್ನು ವರ್ಷಪೂರ್ತಿ ಬೆಳೆಸಬಹುದು. ಭಾರತವು ಜಾಗತಿಕವಾಗಿ ಅತಿ ಹೆಚ್ಚು ಹರಳೆಣ್ಣೆ ಉತ್ಪಾದಿಸುವ ದೇಶವಾಗಿದ್ದು, 2021-22ರಲ್ಲಿ ಅಂದಾಜು 16.5 ಲಕ್ಷ ಟನ್ ಹರಳು ಬೀಜವನ್ನು ಉತ್ಪಾದಿಸಿದೆ . ಭಾರತದಲ್ಲಿ ಹರಳು ಬೀಜ ಉತ್ಪಾದಿಸುವ ಪ್ರಮುಖ ರಾಜ್ಯಗಳೆಂದರೆ ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಮತ್ತು ರಾಜಸ್ಥಾನ.
“ಮಾಝೆ ವಾಡಿಲ್ 96 ವರ್ಷ್ ಜಾಗ್ಲೆ [ನನ್ನ ತಂದೆ 96 ವರ್ಷಗಳ ಕಾಲ ಬದುಕಿದ್ದರು] - ಮತ್ತು ಅವರು ಪ್ರತಿವರ್ಷ ಎರಾಂಡಿ (ಹರಳೆಣ್ಣೆ) ನೆಡುತ್ತಿದ್ದರು" ಎಂದು ತಂದೆಯ ಸಂಪ್ರದಾಯವನ್ನು ಮುಂದುವರಿಸಿರುವ ನಾರಾಯಣ್ ಗಾಯಕವಾಡ್ ಹೇಳುತ್ತಾರೆ. ಅವರ ಬಳಿ ಒಟ್ಟು 3.25 ಎಕರೆ ಹರಳು ಗಿಡದ ಹೊಲವಿದೆ. ಅವರ ಪ್ರಕಾರ ಅವರ ಕುಟುಂಬವು ಸುಮಾರು 150 ವರ್ಷಗಳಿಂದ ಹರಳು ಕೃಷಿಯಲ್ಲಿ ತೊಡಗಿಕೊಂಡಿದೆ. "ನಾವು ಈ ಸ್ಥಳೀಯ ಎರಾಂಡಿಯ ಹುರುಳಿ ಆಕಾರದ ಬೀಜಗಳನ್ನು ಸಂರಕ್ಷಿಸಿ ಇಟ್ಟಿದ್ದೇವೆ. ಇವು ಕನಿಷ್ಠ ಒಂದು ಶತಮಾನದಷ್ಟು ಹಿಂದಿನವು" ಎಂದು ನಾರಾಯಣ್ ಗಾಯಕವಾಡ್ ಅವರು ಪತ್ರಿಕೆಯಲ್ಲಿ ಸುರಕ್ಷಿತವಾಗಿ ಸುತ್ತಿಟ್ಟ ಬೀಜಗಳನ್ನು ತೋರಿಸುತ್ತಾ ಹೇಳುತ್ತಾರೆ. "ಫಕ್ತ್ ಬೈಕೊ ಆಣಿ ಮಿ ಶೆವ್ಕಿನ್ [ನನ್ನ ಹೆಂಡತಿ ಮತ್ತು ನಾನು ಮಾತ್ರ ಈಗ ಈ ಬೆಳೆಯನ್ನು ನೋಡಿಕೊಳ್ಳುತ್ತಿದ್ದೇವೆ]."
ನಾರಾಯಣ್ ಗಾಯಕವಾಡ್ ಮತ್ತು ಅವರ ಪತ್ನಿ 66 ವರ್ಷದ ಕುಸುಮ್ ಗಾಯಕವಾಡ್ ಅವರು ತಾವು ಬೆಳೆದ ಹರಳು ಬೀಜದ ಎಣ್ಣೆಯನ್ನು ಕೈ ಗಾಣದಿಂದಲೇ ತೆಗೆಯುತ್ತಿದ್ದಾರೆ. ಈಗ ಸುತ್ತಲೂ ಹಲವು ಯಂತ್ರ ಚಾಲಿತ ಗಿರಣಿಗಳಿವೆಯಾದರೂ ಅವರು ತಮ್ಮ ಸಾಂಪ್ರದಾಯಿಕ ಶೈಲಿಯನ್ನೇ ಎಣ್ಣೆ ತೆಗೆಯಲು ನೆಚ್ಚಿಕೊಂಡಿದ್ದಾರೆ. “ಹಿಂದೆಲ್ಲ ಪ್ರತಿ ಮೂರು ತಿಂಗಳಿಗೊಮ್ಮೆ ಎಣ್ಣೆ ತೆಗೆಯುತ್ತಿದ್ದೆವು” ಎನ್ನುತ್ತಾರೆ ನಾರಾಯಣ್ ಗಾಯಕವಾಡ್.
“ನಾನು ಸಣ್ಣವನಿದ್ದಾಗ, ಬಹುತೇಕ ಪ್ರತಿ ಮನೆಯಲ್ಲೂ ಹರಳು ಬೆಳೆದು, ಸ್ವತಃ ಅವರೇ ಎಣ್ಣೆ ತೆಗೆಯುತ್ತಿದ್ದರು. ಆದರೆ ಈಗ ಇಲ್ಲಿನ ಜನ ಹರಳು ಬೆಳೆಯನ್ನು ಕೈಬಿಟ್ಟು ಕಬ್ಬು ಬೆಳೆಯಲು ಆರಂಭಿಸಿದ್ದಾರೆ” ಎನ್ನುತ್ತಾರೆ ಕುಸುಮ್ ಗಾಯಕವಾಡ್ ಅವರಿಗೆ ಹರಳೆಣ್ಣೆ ತೆಗೆಯುವ ತಂತ್ರವನ್ನು ಕಲಿಸಿದವರು ಅವರ ಅತ್ತೆ.
2000ನೇ ಇಸವಿಯ ತನಕವೂ ಗಾಯಕವಾಡ್ ಕುಟುಂಬವು ಕನಿಷ್ಟ ನೂರು ಹರಳು ಗಿಡಗಳನ್ನಾದರೂ ಬೆಳೆಯುತ್ತಿತ್ತು. ಈಗ ಆ ಸಂಖ್ಯೆ ಕೇವಲ 20ಕ್ಕೆ ಬಂದು ನಿಂತಿದೆ. ಮತ್ತು ಕೊಲ್ಹಾಪುರ ಜಿಲ್ಲೆಯ ಕೆಲವೇ ಕೆಲವು ಹರಳು ಬೆಳೆಗಾರರ ಕುಟುಂಬಗಳಲ್ಲಿ ಅವರದೂ ಒಂದು. ಈಗ ಕೊಲ್ಹಾಪುರದಲ್ಲಿ ಹರಳೆಣ್ಣೆ ಉತ್ಪಾದನೆ ಯಾವ ಮಟ್ಟಕ್ಕೆ ಕುಸಿದಿದೆಯೆಂದರೆ “ನಾವು ಈಗ ನಾಲ್ಕು ವರ್ಷಗಳಿಗೊಮ್ಮೆ ಎಣ್ಣೆ ಮಾಡಿದರೆ ಅದೇ ಹೆಚ್ಚು” ಎನ್ನುತ್ತಾರೆ ಕುಸುಮ್ ಗಾಯಕವಾಡ್
ಇತ್ತೀಚಿನ ವರ್ಷಗಳಲ್ಲಿ ಕೊಲ್ಹಾಪುರಿ ಚಪ್ಪಲಿಗಳ ಬೇಡಿಕೆಯಲ್ಲಿನ ಕುಸಿತವು ಈ ಪ್ರದೇಶದಲ್ಲಿ ಹರಳೆಣ್ಣೆ ಉತ್ಪಾದನೆಯ ಮೇಲೆ ತೀವ್ರ ಪರಿಣಾಮ ಬೀರಿದೆ. "ಕೊಲ್ಹಾಪುರಿ ಚಪ್ಪಲಿಗಳು ದುಬಾರಿಯಾಗಿವೆ ಮತ್ತು ಈಗ ಕನಿಷ್ಠ 2,000 ರೂ.ಗಳಷ್ಟು ಬೆಲೆಯಿದೆ" ಬೆಲೆಯಿದೆ ಎಂದು ಗಾಯಕವಾಡ್ ವಿವರಿಸುತ್ತಾರೆ. ಈ ಚಪ್ಪಲಿಗಳು ಸುಮಾರು ಎರಡು ಕೇಜಿಯಷ್ಟು ತೂಗುತ್ತವೆ ಮತ್ತು ಇವು ರೈತರ ನಡುವೆ ಈಗ ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡಿವೆ. ಹೆಚ್ಚು ಅಗ್ಗದ ಮತ್ತು ಹಗುರವಾದ ರಬ್ಬರ್ ಚಪ್ಪಲಿಗಳಿಗೆ ಈಗ ಆದ್ಯತೆ ನೀಡಲಾಗುತ್ತಿದೆ. ದಿನಕಳೆದಂತೆ, “ನನ್ನ ಮಕ್ಕಳು ಹೆಚ್ಚು ಹೆಚ್ಚು ಜಾಗದಲ್ಲಿ ಕಬ್ಬು ಹಾಕತೊಡಗಿದರು” ಎಂದು ನಾರಾಯಣ್ ಗಾಯಕವಾಡ್ ತಮ್ಮ ಹೊಲದಲ್ಲಿ ಹರಳು ಬೇಸಾಯ ಕುಸಿಯುತ್ತಾ ಬಂದ ಕುರಿತು ವಿವರಿಸುತ್ತಾರೆ.
ನಾರಾಯಣ್ ಅವರಿಗೆ ಹರಳೆಣ್ಣೆ ತೆಗಯುವ ತಂತ್ರವನ್ನು ಮೊದಲ ಬಾರಿಗೆ ಅವರು 10 ವರ್ಷದವರಿದ್ದಾಗ ಕಲಿಸಲಾಯಿತು. ಅಂದು ಅವರ ಅಮ್ಮ ಹೊಲದಲ್ಲಿ ಬಿದ್ದ ಸುಮಾರು ಐದು ಕೇಜಿಯಷ್ಟು ಹರಳು ಕಾಯಿಗಳ ಕಡೆ ಕೈ ತೋರಿಸಿ “ಅವುಗಳನ್ನೆಲ್ಲ ಗುಡಿಸಿ ಒಟ್ಟು ಮಾಡು” ಎಂದಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಹರಳು ಗಿಡ ನೆಟ್ಟ ಮೂರ್ನಾಲ್ಕು ತಿಂಗಳಿನಲ್ಲಿ ಬೀಜ ಬಿಡುತ್ತದೆ. ಬೀಜಗಳನ್ನು ಹೆಕ್ಕಿ ತಂದ ನಂತರ ಮೂರು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ.
ಒಣಗಿದ ಬೀಜದಿಂದ ಎಣ್ಣೆ ತೆಗೆಯುವ ಪ್ರಕ್ರಿಯೆಯು ಬಹಳ ಶ್ರಮದಾಯಕ. “ನಾವು ಒಣಗಿದ ಕಾಯಿಯನ್ನು ಚಪ್ಪಲಿ ಹಾಕಿಕೊಂಡು ತುಳಿದು ಪುಡಿ ಮಾಡುತ್ತಿದ್ದೆವು. ಆಗ ಅದರ ಮುಳ್ಳಿನಿಂದ ಕೂಡಿದ ಕಾಯಿಂದ ಬೀಜಗಳು ಹೊರ ಬರುತ್ತಿದ್ದವು” ಎಂದು ನಾರಾಯಣ್ ಗಾಯಕವಾಡ್ ವಿವರಿಸುತ್ತಾರೆ. ಬೀಜಗಳನ್ನು ನಂತರ ಸಾಮಾನ್ಯವಾಗಿ ಮಣ್ಣಿನಿಂದ ಮಾಡಲಾಗುವ ಸಾಂಪ್ರದಾಯಿಕ ಒಲೆಯಾದ ಚುಲಿಯ ಮೇಲಿಟ್ಟು ಬೇಯಿಸಲಾಗುತ್ತದೆ,
ಒಮ್ಮೆ ಬೇಯಿಸಿ ಒಣಗಿಸಿದ ನಂತರ ಬೀಜ ಎಣ್ಣೆ ತೆಗೆಯಲು ಸಿದ್ಧವಾಗುತ್ತದೆ.
ನಾರಾಯಣ್ ಬುಧವಾರ ತನ್ನ ತಾಯಿ ಕಸಾಬಾಯಿಗೆ ಹರಳನ್ನು ಕೈಯಿಂದ ಪುಡಿಮಾಡಲು ಸಹಾಯ ಮಾಡುತ್ತಿದ್ದರು. "ನಾವು ಭಾನುವಾರದಿಂದ ಮಂಗಳವಾರದವರೆಗೆ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದೆವು ಮತ್ತು ಗುರುವಾರದಿಂದ ಶನಿವಾರದವರೆಗೆ ಉತ್ಪನ್ನಗಳನ್ನು [ತರಕಾರಿಗಳು ಮತ್ತು ಧಾನ್ಯ ಬೆಳೆಗಳು] ಮಾರಾಟ ಮಾಡುತ್ತಿದ್ದೆವು. ಬುಧವಾರ ಮಾತ್ರ ಖಾಲಿ ದಿನವಾಗಿತ್ತು.
ಆರು ದಶಕಗಳ ನಂತರವೂ, ಗಾಯಕ್ವಾಡ್ ಈ ಕೆಲಸವನ್ನು ಬುಧವಾರ ಮಾತ್ರ ಮಾಡುತ್ತಾರೆ. ಈ ಅಕ್ಟೋಬರ್ ಬೆಳಿಗ್ಗೆ, ಕುಸುಮ್ ಅವರ ನೆರೆಮನೆಯ ಸಂಬಂಧಿ ವಂದನಾ ಮಗ್ದುಮ್ ಅವರ ಮನೆಯಲ್ಲಿ, ಇಬ್ಬರು ಮಹಿಳೆಯರು ಬೀಜಗಳನ್ನು ಪುಡಿಮಾಡಲು ಖಾಳ್ ಮಸಲ್ ಬಳಸುತ್ತಿದ್ದಾರೆ.
ಮನೆಯ ಗಾರೆಯ ನೆಲದಲ್ಲಿ ಕಲ್ಲಿನಿಂದ ಕೆತ್ತಿದ ಒರಳಿನ ಮಾದರಿಯನ್ನು ಉಖಾಳ್ ಎಂದು ಕರೆಯುತ್ತಾರೆ. ಇದು 6-8 ಇಂಚು ಆಳವಿರುತ್ತದೆ. ಕುಸುಮ್ ನೆಲದ ಮೇಲೆ ಕುಳಿತು ತೇಗದ ಮರದಿಂದ ಮಾಡಿದ ಉದ್ದನೆಯ ಪೆಸ್ಟಲ್ ಅನ್ನು ಎತ್ತಲು ಸಹಾಯ ಮಾಡಿದರೆ, ವಂದನಾ ಎದ್ದು ನಿಂತು ಹರಳಿನ ಬೀಜಗಳನ್ನು ತೀವ್ರವಾಗಿ ಪುಡಿಮಾಡುತ್ತಾರೆ.
"ಈ ಮೊದಲು ಮಿಕ್ಸರ್ ಗ್ರೈಂಡರ್ ಎಲ್ಲ ಇರಲಿಲ್ಲ" ಎಂದು ಕುಸುಮ್ ಸಾಧನದ ಹಳೆಯ ಜನಪ್ರಿಯತೆಯ ಬಗ್ಗೆ ಹೇಳುತ್ತಾರೆ.
ಪ್ರಕ್ರಿಯೆಯ ಮೂವತ್ತು ನಿಮಿಷಗಳ ನಂತರ, ಹರಳೆಣ್ಣೆಯ ಹನಿಗಳು ರೂಪುಗೊಳ್ಳುವುದನ್ನು ಕಾಣಬಹುದು. "ಆತಾ ಯಾಚಾ ರಬ್ಡಾ ತಯಾರ್ ಹೋತೋ[ಸ್ವಲ್ಪ ಹೊತ್ತಿನಲ್ಲೇ ರಬ್ಬರಿನಂತಹ ವಸ್ತು ಸಿದ್ಧವಾಗುತ್ತದೆ] " ಎಂದು ಅವರು ತಮ್ಮ ಹೆಬ್ಬೆರಳಿನ ಮೇಲಿನ ಕಪ್ಪು ಮಿಶ್ರಣವನ್ನು ತೋರಿಸುತ್ತಾ ಹೇಳುತ್ತಾರೆ.
ಎರಡು ಗಂಟೆಗಳ ಕಾಲ ಪುಡಿಮಾಡಿದ ನಂತರ, ಕುಸುಮ್ ಉಖಲ್‌ನಿಂದ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿ ಅದಕ್ಕೆ ಕುದಿಯುವ ನೀರನ್ನು ಸೇರಿಸುತ್ತಾರೆ. ಎರಡು ಕಿಲೋ ಹರಳೆಣ್ಣೆ ಬೀಜಗಳಿಗೆ ಕನಿಷ್ಠ ಐದು ಲೀಟರ್ ಕುದಿಯುವ ನೀರು ಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ. ಮಿಶ್ರಣವನ್ನು ಹೊರಗಿನ ಚುಲಿಯ ಮೇಲೆ ಮತ್ತಷ್ಟು ಕುದಿಸಲಾಗುತ್ತದೆ. ಹೆಚ್ಚುತ್ತಿರುವ ಹೊಗೆಯ ನಡುವೆ, ಕುಸುಮ್ ತನ್ನ ಕಣ್ಣು ತೆರೆದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. "ನಾವು ಈಗ ಅದಕ್ಕೆ ಒಗ್ಗಿಕೊಂಡಿದ್ದೇವೆ" ಎಂದು ಅವರು ಕೆಮ್ಮುತ್ತಾರೆ.
ಮಿಶ್ರಣವು ಕುದಿಯಲು ಪ್ರಾರಂಭಿಸಿದ ತಕ್ಷಣ, ಕುಸುಮ್ ನನ್ನ ಅಂಗಿಯಿಂದ ದಾರವನ್ನು ಎಳೆದು ಅದರಲ್ಲಿ ಹಾಕುತ್ತಾರೆ. ಕೋಣ್ ಬಾಹಾರಿಚಾ ಆಲಾ ತಾರ್ ತ್ಯಾಚಾ ಚಿಂದುಕ್ ಗೆವೂಣ್ ಜಾತೆ " [ಎಣ್ಣೆ ತಯಾರಿಸುವಾಗ ಯಾರಾದರೂ ಹೊರಗಿನಿಂದ ಬಂದರೆ ಅವರ ಬಟ್ಟೆಯಿಂದ ಒಂದು ದಾರ ಎಳೆದು ಅದರಲ್ಲಿ. ಇಲ್ಲದಿದ್ದರೆ ಅವರು ಈ ಎಣ್ಣೆಯನ್ನು ಕದಿಯುತ್ತಾರೆ" ಎಂದು ಕುಸುಮ್ ವಿವರಿಸಿದರು. “ಇದೊಂದು ಮೂಢನಂಬಿಕೆ. ಹಿಂದಿನ ಕಾಲದಲ್ಲಿ ಬಂದವರು ಎಣ್ಣೆ ಕದಿಯುತ್ತಾರೆನ್ನುವ ನಂಬಿಕೆಯಿತ್ತು ಅದಕ್ಕೆ ಹೊರಗಿನಿಂದ ಬಂದವರ ಬಟ್ಟೆಯ ದಾರವನ್ನು ಅದಕ್ಕೆ ಹಾಕುತ್ತಿದ್ದರು” ಎಂದು ನಾರಾಯಣ್ ನಡುವೆ ಬಾಯಿ ಹಾಕಿ ವಿವರಿಸಿದರು.
ಕುಸುಮ್ ನೀರು ಮತ್ತು ನೆಲದ ಹರಳು ಬೀಜಗಳ ಮಿಶ್ರಣವನ್ನು ದಾವ್ (ದೊಡ್ಡ ಮರದ ಚಮಚ) ಬಳಸಿ ಮಗಚುತ್ತಾರೆ. ಎರಡು ಗಂಟೆಗಳ ನಂತರ, ಎಣ್ಣೆ ಬೇರ್ಪಟ್ಟು ತೇಲುತ್ತದೆ.
"ನಾವು ಎಂದೂ ಎಣ್ಣೆ ಮಾರಾಟ ಮಾಡಿಲ್ಲ ಮತ್ತು ಯಾವಾಗಲೂ ಅದನ್ನು ಉಚಿತವಾಗಿ ನೀಡುತ್ತಿದ್ದೆವು" ಎಂದು ನಾರಾಯಣ್ ಹೇಳುತ್ತಾರೆ, ಜಾಂಭಳಿಯ ನೆರೆಯ ಹಳ್ಳಿಗಳ ಜನರು ಹರಳೆಣ್ಣೆಗಾಗಿ ತಮ್ಮ ಕುಟುಂಬದ ಬಳಿ ಹೇಗೆ ಬರುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. "ಕಳೆದ ನಾಲ್ಕು ವರ್ಷಗಳಿಂದ, ಎಣ್ಣೆ ಕೇಳಲು ಯಾರೂ ಬಂದಿಲ್ಲ" ಎಂದು ಕುಸುಮ್ ಸೋಧ್ನಾ (ಜರಡಿ) ಮೂಲಕ ಎಣ್ಣೆಯನ್ನು ಬೇರ್ಪಡಿಸುತ್ತಾ ಹೇಳುತ್ತಾರೆ.
ಇಲ್ಲಿಯವರೆಗೆ, ಗಾಯಕ್ವಾಡ್ ತನ್ನ ಸ್ವಂತ ಲಾಭಕ್ಕಾಗಿ ಹರಳೆಣ್ಣೆಯನ್ನು ಮಾರಾಟ ಮಾಡುವ ಬಗ್ಗೆ ಎಂದಿಗೂ ಯೋಚಿಸಿಲ್ಲ.
ಹರಳೆಣ್ಣೆ ಉತ್ಪಾದನೆಯಿಂದ ಬರುವ ಇಳುವರಿ ಅವರ ಪಾಲಿಗೆ ನಗಣ್ಯ. "ಹತ್ತಿರದ ಜೈಸಿಂಗ್ಪುರ ಪಟ್ಟಣದ ವ್ಯಾಪಾರಿಗಳು ಹರಳೆಣ್ಣೆಯನ್ನು ಕಿಲೋಗೆ 20-25 ರೂ.ಗೆ ಖರೀದಿಸುತ್ತಾರೆ" ಎಂದು ಕುಸುಮ್ ಹೇಳುತ್ತಾರೆ. ಇದನ್ನು ಸಾಬೂನುಗಳು ಮತ್ತು ಸೌಂದರ್ಯವರ್ಧಕಗಳಲ್ಲಿಯೂ ಬಳಸಲಾಗುತ್ತದೆ.
"ಈಗ ಜನರಿಗೆ ಎಣ್ಣೆ ತಾವೇ ತಯಾರಿಸಿಕೊಳ್ಳಲು ಸಮಯವಿಲ್ಲ. ಅಗತ್ಯವಿದ್ದರೆ, ಅವರು ಮಾರುಕಟ್ಟೆಯಿಂದ ನೇರವಾಗಿ ರೆಡಿಮೇಡ್ ಹರಳೆಣ್ಣೆಯನ್ನು ಖರೀದಿಸುತ್ತಾರೆ.
ಗಾಯಕ್ವಾಡ್ ಇನ್ನೂ ಹರಳೆಣ್ಣೆಯ ಸಮಯ-ಪರೀಕ್ಷಿಸಿದ ಪ್ರಯೋಜನಗಳ ಪ್ರತಿಪಾದಕರಾಗಿದ್ದಾರೆ. ನಾರಾಯಣ್ ಹೇಳುತ್ತಾರೆ, " "ದೋಕ್ಯಾವರ್ ಎರಾಂಡಿ ಥೆವ್ಲ್ಯಾವರ್, ದೋಕಾ ಶಾಂತ್ ರಹತ್ (ನೀವು ನಿಮ್ಮ ತಲೆಯ ಮೇಲೆ ಹರಳೆಣ್ಣೆಯನ್ನು ಇಟ್ಟರೆ, ಅದು ನಿಮಗೆ ಶಾಂತವಾಗಿರಲು ಸಹಾಯ ಮಾಡುತ್ತದೆ)." ಬೆಳಗಿನ ಉಪಾಹಾರಕ್ಕೆ ಮೊದಲು ಒಂದು ಹನಿ ಹರಳೆಣ್ಣೆಯನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಎಲ್ಲಾ ಜಂತುವನ್ನು [ಬ್ಯಾಕ್ಟೀರಿಯಾ] ಕೊಲ್ಲುತ್ತದೆ.
"ಹರಳು ಸಸ್ಯವು ರೈತರಿಗೆ ಛಾವಣಿಯಂತೆ" ಎಂದು ಅವರು ಹರಳಿನ ಹೊಳೆಯುವ ಎಲೆಗಳ ತೆಳುವಾದ ತುದಿಯನ್ನು ತೋರಿಸುತ್ತಾ ಹೇಳುತ್ತಾರೆ, ಇದು ನೀರನ್ನು ಹಿಡಿದಿಡಲು ಸಹಾಯ ಮಾಡುತ್ತದೆ. ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವಿನ ದೀರ್ಘ ಮಳೆಗಾಲದಲ್ಲಿ ಇದು ವಿಶೇಷವಾಗಿ ಉಪಯುಕ್ತವಾಗಿದೆ. "ಹರಳು ಇಂಡಿ ಸಹ ಅತ್ಯುತ್ತಮ ಸಾವಯವ ಗೊಬ್ಬರಗಳಾಗಿವೆ" ಎಂದು ನಾರಾಯಣ್ ಹೇಳುತ್ತಾರೆ.
ಅವುಗಳ ಅನೇಕ ಸಾಂಪ್ರದಾಯಿಕ ಬಳಕೆಗಳ ಹೊರತಾಗಿಯೂ, ಹರಳು ಸಸ್ಯಗಳು ಕೊಲ್ಹಾಪುರದ ಹೊಲಗಳಿಂದ ವೇಗವಾಗಿ ಕಣ್ಮರೆಯಾಗುತ್ತಿವೆ.
ಕೊಲ್ಹಾಪುರದಲ್ಲಿ ಕಬ್ಬಿನ ಬೆಳೆಗೆ ಹೆಚ್ಚುತ್ತಿರುವ ಬೇಡಿಕೆಯು ಹರಳಿನ ಜನಪ್ರಿಯತೆಯನ್ನು ಮತ್ತಷ್ಟು ಕಡಿಮೆ ಮಾಡಿದೆ. ಮಹಾರಾಷ್ಟ್ರ ಸರ್ಕಾರದ ಗೆಜೆಟಿಯರ್ ಇಲಾಖೆಯ ಅಂಕಿಅಂಶಗಳ ಪ್ರಕಾರ, 1955-56ರ ಅವಧಿಯಲ್ಲಿ, ಕೊಲ್ಹಾಪುರದಲ್ಲಿ 48,361 ಎಕರೆ ಭೂಮಿಯಲ್ಲಿ ಕಬ್ಬನ್ನು ಬೆಳೆಯಲಾಗುತ್ತಿತ್ತು. 2022-23ನೇ ಸಾಲಿನಲ್ಲಿ ಕಬ್ಬು ಬೆಳೆಯುವ ಪ್ರದೇಶದ ವಿಸ್ತೀರ್ಣ 4.3 ಲಕ್ಷ ಎಕರೆ ದಾಟಿತ್ತು.
"ನನ್ನ ಮಕ್ಕಳು ಸಹ ಹರಳು ಗಿಡವನ್ನು ಹೇಗೆ ಬೆಳೆಸುವುದು ಮತ್ತು ಎಣ್ಣೆ ತೆಗೆಯುವುದು ಎಂಬುದನ್ನು ಕಲಿತಿಲ್ಲ. ಅವರ ಮಕ್ಕಳಾದ 49 ವರ್ಷದ ಮಾರುತಿ ಮತ್ತು 47 ವರ್ಷದ ಭಗತ್ ಸಿಂಗ್ ರೈತರಾಗಿದ್ದು, ಕಬ್ಬು ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುತ್ತಾರೆ. ಅವರ ಮಗಳು 48 ವರ್ಷದ ಮೀನಾ ತಾಯಿ ಗೃಹಿಣಿ.
ಎಣ್ಣೆ ತಾಯಾರಿಕೆಯಲ್ಲಿ ಅವರು ಎದುರಿಸಿದ ತೊಂದರೆಗಳ ಬಗ್ಗೆ ನಾರಾಯಣ್ ಅವರನ್ನು ಕೇಳಿದಾಗ, ಅವರು ಹೀಗೆ ಉತ್ತರಿಸಿದರು, "ಯಾವುದೇ ಸಮಸ್ಯೆ ಇಲ್ಲ. ಇದು ನಮಗೆ ಉತ್ತಮ ವ್ಯಾಯಾಮವಿದು.”
"ನನಗೆ ಸಸ್ಯಗಳನ್ನು ಸಂರಕ್ಷಿಸುವುದೆಂದರೆ ಇಷ್ಟ" ಎಂದು ಅವರು ಆತ್ಮವಿಶ್ವಾಸದಿಂದ ಹೇಳುತ್ತಾರೆ. ಅದಕ್ಕಾಗಿಯೇ ನಾನು ಪ್ರತಿವರ್ಷ ಹರಳು ಗಿಡವನ್ನು ನೆಡುತ್ತೇನೆ." ಗಾಯಕ್ವಾಡ್ ಅವರು ಹರಳು ಬೆಳೆಯುವುದರಿಂದ ಯಾವುದೇ ಹಣಕಾಸಿನ ಲಾಭವನ್ನು ಗಳಿಸುವುದಿಲ್ಲ. ಆದರೂ, ಅವರು ತಮ್ಮ ಸಂಪ್ರದಾಯವನ್ನು ಮುಂದುವರಿಸಲು ಉದ್ದೇಶಿಸಿದ್ದಾರೆ.
ನಾರಾಯಣ್ ಮತ್ತು ಕುಸುಮ್ ತಮ್ಮ ಹರಳು ಗಿಡಗಳನ್ನು 10 ಅಡಿ ಎತ್ತರದ ಕಬ್ಬಿನ ಗದ್ದೆಗಳ ನಡುವೆ ಬೆಳೆಯುತ್ತಿದ್ದಾರೆ.
ಈ ಲೇಖನವು ಸಂಕೇತ್ ಜೈನ್ ಅವರ ಗ್ರಾಮೀಣ ಕುಶಲಕರ್ಮಿಗಳ ಕುರಿತ ಬರಹಗಳ ಸರಣಿಯ ಭಾಗವಾಗಿದೆ ಮತ್ತು ಇದ ಕ್ಕೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ ಬೆಂ ಬಲ ಪಡೆಯಲಾಗಿದೆ .
ಅನುವಾದ: ಶಂಕರ. ಎನ್. ಕೆಂಚನೂರು