ತೇಜಲಿಬಾಯಿ ದೇಡಿಯಾ ನಿಧಾನವಾಗಿ ಸ್ಥಳೀಯ ಬೀಜಗಳನ್ನು ಮತ್ತೆ ಗಳಿಸುತ್ತಿದ್ದಾರೆ.
ಸರಿಸುಮಾರು 15 ವರ್ಷಗಳ ಹಿಂದೆ, ಮಧ್ಯಪ್ರದೇಶದ ಅಲಿರಾಜಪುರ ಮತ್ತು ದೇವಾಸ್ ಜಿಲ್ಲೆಗಳಲ್ಲಿ ಕೃಷಿಯಲ್ಲಿ ತೊಡಗಿದ್ದ ತೇಜಲಿಬಾಯಿ ಸೇರಿದಂತೆ ಭಿಲ್ ಆದಿವಾಸಿಗಳು ಸಾವಯವ ಕೃಷಿ ಪದ್ಧತಿಗಳ ಮೂಲಕ ಬೆಳೆದ ಸ್ಥಳೀಯ ಬೀಜಗಳ ಬದಲಿಗೆ ರಾಸಾಯನಿಕ ಒಳಸುರಿಯನ್ನು ಅವಲಂಬಿಸಿರುವ ಹೈಬ್ರಿಡ್ ಬೀಜಗಳನ್ನು ಬಳಸತೊಡಗಿದರು. ಈ ಬದಲಾವಣೆಯು ಪಾರಂಪರಿಕ ಬೀಜಗಳ ಕಣ್ಮರೆಗೆ ಕಾರಣವಾಯಿತು. ತೇಜಲಿಬಾಯಿ ಈ ಪರಿವರ್ತನೆಯ ಬಗ್ಗೆ ಹೀಗೆ ವಿವರಿಸುತ್ತಾರೆ: "ಸಾಂಪ್ರದಾಯಿಕ ಕೃಷಿಗೆ ಗಮನಾರ್ಹ ಶ್ರಮದ ಅಗತ್ಯವಿತ್ತು, ಜೊತೆಗೆ ಸರಿಯಾದ ಮಾರುಕಟ್ಟೆ ಬೆಲೆಯೂ ಸಿಗುತ್ತಿರಲಿಲ್ಲ. ದುಡಿಮೆಯಲ್ಲಿ ಉಳಿಸಿದ ಸಮಯವನ್ನು ನಾವು ಗುಜರಾತ್ ರಾಜ್ಯಕ್ಕೆ ವಲಸೆ ಹೋಗಿ ಹೆಚ್ಚಿನ ಮೊತ್ತದ ಕೂಲಿ ಕೆಲಸಕ್ಕೆ ಬಳಸುತ್ತಿದ್ದೆವು" ಎಂದು 71 ವರ್ಷದ ಅವರು ಹೇಳುತ್ತಾರೆ.
ಆದರೆ ಈಗ, ಈ ಜಿಲ್ಲೆಗಳ 20 ಹಳ್ಳಿಗಳಲ್ಲಿ, ಸುಮಾರು 500 ಮಹಿಳೆಯರು ತಮ್ಮ ಊರಿನ ಪಾರಂಪರಿಕ ಬೀಜಗಳನ್ನು ಸಂರಕ್ಷಿಸುತ್ತಿದ್ದಾರೆ ಮತ್ತು ಕನ್ಸರಿ ನು ಬಡಾವ್ನೂ (ಕೆಎನ್‌ವಿ) ಮಾರ್ಗದರ್ಶನದಲ್ಲಿ ಸಾವಯವ ಕೃಷಿಯತ್ತ ಮರಳುತ್ತಿದ್ದಾರೆ. ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಲು ಮತ್ತು ಅವರ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಭಿಲ್ ಆದಿವಾಸಿ ಮಹಿಳೆಯರು ಕಟ್ಟಿಕೊಂಡ ಸಾಮೂಹಿಕ ಸಂಘಟನೆಯಾದ ಕೆಎನ್‌ವಿ ಸಂಘಟನೆಯನ್ನು 1997ರಲ್ಲಿ ಸ್ಥಾಪಿಸಲಾಯಿತು. ಆರೋಗ್ಯ ಸಮಸ್ಯೆಗಳ ಕ್ಷೇತ್ರದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ ನಂತರ, ಕೆಎನ್‌ವಿ ರಚನೆಯ ಭಾಗವಾಗಿದ್ದ ಆದಿವಾಸಿ ಮಹಿಳೆಯರು ಸಾಂಪ್ರದಾಯಿಕ ಬೆಳೆಗಳಿಗೆ ಮರಳುವ ಮೂಲಕ ತಮ್ಮ ಆಹಾರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎನ್ನುವುದನ್ನು ಅರಿತುಕೊಂಡರು.
ಕೆಎನ್‌ವಿಯಲ್ಲಿ ಜೈವಿಕ ವೈವಿಧ್ಯಮಯ ಸಾವಯವ ಕೃಷಿಯನ್ನು ದೇಶದ ಉದ್ದಗಲಕ್ಕೂ ಹರಡುವ ನಿಟ್ಟಿನಲ್ಲಿ ಆಯ್ದ ಬೀಜಗಳನ್ನು ಇತರ ರೈತರಿಗೆ ಮಾರಾಟ ಮಾಡಲು ಮತ್ತು ವಿತರಿಸಲು ಪ್ರತ್ಯೇಕವಾಗಿ ಸಂಗ್ರಹಿಸಿ, ಉಳಿದ ಬೆಳೆಯನ್ನು ಬಳಕೆಗಾಗಿ ಇಟ್ಟುಕೊಳ್ಳಲಾಗುತ್ತದೆ ಎಂದು ಕವಾಡಾ ಗ್ರಾಮದ ನಿವಾಸಿ ರಿಂಕು ಅಲವಾ ಹೇಳುತ್ತಾರೆ. “ಕೊಯ್ಲು ಮುಗಿದ ನಂತರ ನಾವು ಒಳ್ಳೆಯ ಬೀಜವನ್ನು ಆಯ್ಕೆ ಮಾಡಬೇಕು” ಎಂದು 39 ವರ್ಷದ ರಿಂಕು ಹೇಳುತ್ತಾರೆ.
ಕಕ್ರಾನಾ ಗ್ರಾಮದ ರೈತ ಮಹಿಳೆ ಮತ್ತು ಕೆಎನ್‌ವಿ ಸದಸ್ಯೆ ರಾಯ್ತಿಬಾಯಿ ಸೋಲಂಕಿ ಈ ಮಾಗತುಗಳನ್ನು ಒಪ್ಪುತ್ತಾರೆ: "ಬೀಜಗಳ ಗುಣಮಟ್ಟವನ್ನು ಸುಧಾರಿಸಲು ಮತ್ತು ಅವುಗಳ ಉತ್ಪಾದಕತೆಯನ್ನು ಹೆಚ್ಚಿಸಲು ಬೀಜದ ಆಯ್ಕೆಯು ಉತ್ತಮ ಮಾರ್ಗವಾಗಿದೆ.
40 ವರ್ಷದ ರಾಯ್ತಿಬಾಯಿ ಹೇಳುತ್ತಾರೆ, "ಸಿರಿಧಾನ್ಯಗಳು ಮತ್ತು ಜೋಳದಂತಹ ಏಕದಳ ಧಾನ್ಯಗಳು ನಮ್ಮ ಭಿಲ್ ಬುಡಕಟ್ಟು ಜನಾಂಗದ ಮುಖ್ಯ ಆಹಾರವಾಗಿತ್ತು. ಸಿರಿಧಾನ್ಯಗಳು ಎಲ್ಲಾ ಧಾನ್ಯಗಳಿಗಿಂತ ಹೆಚ್ಚು ನೀರಿನ ದಕ್ಷತೆ ಮತ್ತು ಪೌಷ್ಟಿಕತೆಯನ್ನು ಹೊಂದಿವೆ. ಭತ್ತ ಮತ್ತು ಗೋಧಿಯಂತಹ ಇತರ ಏಕದಳ ಧಾನ್ಯಗಳಿಗಿಂತ ಅವುಗಳ ಬೇಸಾಯ ಸುಲಭ." ಅವರು ಸಿರಿಧಾನ್ಯಗಳ ಪ್ರಭೇದಗಳ ಹೆಸರುಗಳನ್ನು ಪಟ್ಟಿ ಮಾಡಲು ಪ್ರಾರಂಭಿಸುತ್ತಾರೆ - ಬಟ್ಟಿ (ಊದಲು ಅಕ್ಕಿ), ಭಾಡಿ, ರಾಲಾ (ನವಣೆ), ರಾಗಿ (ರಾಗಿ), ಬಾಜ್ರಾ (ಸಜ್ಜೆ), ಕೊಡೊ, ಕುಟ್ಕಿ, ಸಾಂಗ್ರಿ (ಸಣ್ಣ ಕಿರುಧಾನ್ಯಗಳು). "ಮಣ್ಣಿನ ಫಲವತ್ತತೆಯನ್ನು ನೈಸರ್ಗಿಕವಾಗಿ ಕಾಪಾಡಿಕೊಳ್ಳಲು ಇವುಗಳನ್ನು ಬೀನ್ಸ್, ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳಂತಹ ದ್ವಿದಳ ಧಾನ್ಯಗಳೊಂದಿಗೆ ಮಿಶ್ರಬೆಳೆಯಾಗಿ ಬೆಳೆಯಲಾಗುತ್ತದೆ" ಎಂದು ಅವರು ಹೇಳುತ್ತಾರೆ.
































