“ಬಾಲ್ಯದಿಂದಲೂ ನನಗೆ ಚಿತ್ರಕಲೆಯೆಂದರೆ ಇಷ್ಟ. ಶಾಲೆಯಲ್ಲಿ ಕೋ ಶ್ರೇಣಿಯಲ್ಲಿ [1ನೇ ತರಗತಿ] ಇದ್ದಾಗ ಶಿಕ್ಷಕರು ಕುಂಬಳಕಾಯಿ, ಕಿತ್ತಳೆ ಹಣ್ಣಿನ ಚಿತ್ರ ಬಿಡಿಸಲು ಹೇಳುತ್ತಿದ್ದರು. ಆಗ ನಾನು ಎಲ್ಲರಿಗಿಂತಲೂ ಬೇಗ ಬಿಡಿಸುತ್ತಿದ್ದೆ.” ಎಂದು ರಮೇಶ್ ದತ್ತಾ ಹೇಳುತ್ತಾರೆ. "ಹೀಗೆ ಇವೆಲ್ಲವೂ ಪ್ರಾರಂಭವಾಯಿತು."
ಇಂದು ಅವರು ಅಸ್ಸಾಂನ ಹಲವಾರು ವೈಷ್ಣವ ಮಠಗಳಲ್ಲಿ ಒಂದಾದ ಮಜುಲಿಯ ಗರಮೂರ್ ಸರು ಸತ್ರದಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಪ್ರಾಥಮಿಕ ಸೆಟ್ ಡಿಸೈನರ್ ಮತ್ತು ಮುಖವಾಡ ತಯಾರಕರಾಗಿದ್ದಾರೆ. 52 ವರ್ಷದ ಅವರನ್ನು ಸಮುದಾಯದಲ್ಲಿ ಪ್ರೀತಿಯಿಂದ ರಮೇಶ್ ದಾ ಎಂದು ಸಂಬೋಧಿಸಲಾಗುತ್ತದೆ, ಅವರು ಕಡಿಮೆ ಮಾತಿನ ಮನುಷ್ಯ ಆದರೆ ಬ್ರಹ್ಮಪುತ್ರದ ಅತಿದೊಡ್ಡ ದ್ವೀಪವಾದ ಮಜುಲಿಯಲ್ಲಿ ಸ್ಥಳೀಯ ರಂಗಭೂಮಿ, ಕಲೆ ಮತ್ತು ಸಂಗೀತವನ್ನು ಅಭಿವೃದ್ಧಿ ಹೊಂದುವಂತೆ ಮಾಡಬಲ್ಲ ಅನೇಕ ಪ್ರತಿಭೆಗಳನ್ನು ಹೊಂದಿದ್ದಾರೆ.
"ಬಾಲ್ಯದಲ್ಲಿ ಬೊಂಬೆಯಾಟ ಪ್ರದರ್ಶನಗಳಿಂದ ಆಕರ್ಷಿತನಾಗಿದ್ದೆ" ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಬೇರೆಯವರು ಬೊಂಬೆಗಳನ್ನು ತಯಾರಿಸುವುದನ್ನು ನೋಡುತ್ತಿದ್ದೆ. ಇದು ಕಲೆಯ ಕಲಿಕೆಗೆ ದಾರಿಯಾಯಿತು. ಆ ಸಮಯದಲ್ಲಿ ನಾನು 2ನೇ ತರಗತಿಯಲ್ಲಿದ್ದೆ. ಶಾಲೆಯಲ್ಲಿ ಬೊಂಬೆಗಳನ್ನು ತಯಾರಿಸಿ ತೋರಿಸುತ್ತಿದ್ದೆ."
ಅವರು ತಯಾರಿಸಿದ ಕಲಾ ಸಾಮಾಗ್ರಿಗಳಿಗೆ ಮಜುಲಿಯ ಸುತ್ತಮುತ್ತ ಪ್ರದರ್ಶನ ಕಾರ್ಯಕ್ರಮವಿಲ್ಲದ ಸಮಯದಲ್ಲಿ, ಮನೆಯ ಪಕ್ಕದ ತೆರೆದ ಶೆಡ್ಡಿನಲ್ಲಿ ಸಂಗ್ರಹಿಸಲಾಗುತ್ತದೆ. ನಾವು ಅವರನ್ನು ಭೇಟಿ ಮಾಡಿದಾಗ, ವೇದಿಕೆ ಮೇಲೆ ನಿಂತಿರುವ ತಲೆಕೆಳಗಾಗಿರುವ ಕೈ ದೋಣಿಯನ್ನು ಸಹ ನಾವು ನೋಡಿದೆವು. ರಮೇಶ್ ದಾ ತಯಾರಿಸಿದ ಮುಖವಾಡಗಳ ಪಕ್ಕದಲ್ಲಿ ಬ್ರಶ್ಶುಗಳು ಮತ್ತು ಪೇಂಟ್ ಕ್ಯಾನುಗಳನ್ನು ಸಂಗ್ರಹಿಸಲಾಗಿತ್ತು. ಇವುಗಳಲ್ಲಿ ರಾಸ್ ಮಹೋತ್ಸವಕ್ಕಾಗಿ ತಯಾರಿಸಿದ ಕೊಕ್ಕರೆಯ ಚಲಿಸುವ ಮುಖವಾಡವೂ ಸೇರಿದೆ. (ಓದಿ: ಮಜುಲಿಯ ಅನೇಕ ಮುಖವಾಡಗಳು)






















