“ಓದಲೆಂದು ಕುಳಿತಾಗ ನೋಟ್‌ಬುಕ್, ಪುಸ್ತಕಗಳ ಮೇಲೆ ನೀರು ಬೀಳುತ್ತಲೇ ಇರುತ್ತದೆ. ಬರವಣಿಗೆಯೆಲ್ಲ ಅಳಿಸಿ, ಪುಸ್ತಕದ ತುಂಬಾ ಶಾಯಿ ಹರಡುತ್ತದೆ" ಎಂದು ಎಂಟು ವರ್ಷದ ವಿಶಾಲ್ ಚವಾಣ್ ಹೇಳುತ್ತಾನೆ. ಇದು ಬಿದಿರು ಮತ್ತು ಭಾರದ ಕಲ್ಲುಗಳನ್ನು ಬಳಸಿ ಕಟ್ಟಿದ ಅವನ ಮನೆಯ ಕತೆ.
ಅಲೆಗಾಂವ್ ಜಿಲ್ಲಾ ಪರಿಷತ್ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿರುವ ವಿಶಾಲ್‌ನ ಕುಟುಂಬವು ಮಹಾರಾಷ್ಟ್ರದಲ್ಲಿ ಅಲೆಮಾರಿ ಬುಡಕಟ್ಟು ಜನಾಂಗಗಳಡಿ ಪಟ್ಟಿ ಮಾಡಲಾಗಿರುವ ಬೆಲ್ದಾರ್ ಸಮುದಾಯಕ್ಕೆ ಸೇರಿದೆ.
"ಮಳೆ ಬಂದಾಗ ಗುಡಿಸಲಿನ ಒಳಗೆ ಇರುವುದು ವಿಶೇಷವಾಗಿ ಕಷ್ಟ... ವಿವಿಧ ಸ್ಥಳಗಳಿಂದ ನೀರು ಹನಿಯಾಗುತ್ತದೆ" ಎಂದು ಅವನು ಹೇಳುತ್ತಾನೆ. ಇದೇ ಸಲುವಾಗಿ ಮತ್ತು ಅವನ ಒಂಬತ್ತು ವರ್ಷದ ಅಕ್ಕ ವೈಶಾಲಿ, ಶಿರೂರ್ ತಾಲ್ಲೂಕಿನ ಅಲೆಗಾಂವ್ ಪಾಗಾ ಗ್ರಾಮದಲ್ಲಿನ ತಮ್ಮ ಮನೆಯ ಛಾವಣಿ ಸೋರುತ್ತಿದೆಯೇ ಎಂದು ಛಾವಣಿಯನ್ನು ಆಗಾಗ ಪರೀಕ್ಷಿಸುತ್ತಿರುತ್ತಾರೆ.
ಅಕ್ಕ-ತಮ್ಮನ ಶೈಕ್ಷಣಿಕ ಆಸಕ್ತಿಯ ಕುರಿತು ಅವರ ಅಜ್ಜಿ ಶಾಂತಾಬಾಯಿ ಚವಾಣ್ ಅವರರಿಗೆ ಬಹಳ ಹೆಮ್ಮೆಯಿದೆ. "ನಮ್ಮ ಇಡೀ ಖಾಂದಾನಿನ [ಕುಟುಂಬದಲ್ಲಿ] ಯಾರೂ ಶಾಲೆಗೆ ಹೋಗಿಲ್ಲ, ನನ್ನ ಮೊಮ್ಮಕ್ಕಳು ಓದಲು ಮತ್ತು ಬರೆಯಲು ಕಲಿಯುತ್ತಿರುವವರಲ್ಲಿ ಮೊದಲಿಗರು" ಎಂದು 80 ವರ್ಷದ ಅವರು ಹೇಳುತ್ತಾರೆ.
ಆದರೆ ಶಾಂತಾಬಾಯಿ ಮೆಚ್ಚುಗೆಯ ಜೊತೆಗೆ ಹೃದಯ ವಿದ್ರಾವಕ ವಿಷಾದದ ಬಗ್ಗೆಯೂ ಮಾತನಾಡುತ್ತಾರೆ. "ಈಗ ಹುಡುಗರಿಗೆ ಸರಿಯಾಗಿ ಓದಲು ಮಾಡಲು ಒಂದು ಒಳ್ಳೆಯ ಮನೆಯಾಗಲೀ, ದೀಪವಾಗಲೀ ಇಲ್ಲ" ಎಂದು ಅವರು ತಮ್ಮ ಟಾರ್ಪಾಲಿನ್ ಮನೆಯ ಬಗ್ಗೆ ಬೇಸರದಿಂದ ಹೇಳುತ್ತಾರೆ.












