ಈ ವರ್ಷದ ಜೂನ್ ತಿಂಗಳ ಮೂರನೇ ಶುಕ್ರವಾರದಂದು ಕಾರ್ಮಿಕ ಸಹಾಯವಾಣಿಗೆ ಕರೆಯೊಂದು ಬಂತು.
“ನಮಗೆ ಸಹಾಯ ಮಾಡ್ತೀರಾ? ನಮಗೆ ಬಟವಾಡೆ ಸಿಕ್ಕಿಲ್ಲ.”
ಅದೊಂದು ಕುಶಾಗಢಕ್ಕೆ ಸೇರಿದ 80 ಕಾರ್ಮಿಕರ ಗುಂಪು. ಅವರು ರಾಜಸ್ಥಾನದ ಇತರ ತಾಲ್ಲೂಕುಗಳಲ್ಲಿ ಹೊರಾಂಗಣ ಕೆಲಸಕ್ಕೆಂದು ಹೋಗಿದ್ದರು. ಅವರನ್ನು ಟೆಲಿಕಾಂ ಫೈಬರ್ ಕೇಬಲ್ ಆಳವಡಿಸಲು ಎರಡು ಅಡಿ ಅಗಲ ಮತ್ತು ಆರು ಅಡಿ ಆಳದ ಕಂದಕಗಳನ್ನು ಅಗೆಯುವ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿತ್ತು. ಈ ಕೆಲಸಕ್ಕೆ ಮೀಟರ್ ಲೆಕ್ಕದಲ್ಲಿ ಸಂಬಳ ಮಾತನಾಡಲಾಗಿತ್ತು.
ಎರಡು ತಿಂಗಳ ನಂತರ ಪೂರ್ತಿ ಬಾಕಿ ಕೊಡುವಂತೆ ಕೇಳಿದಾಗ ಗುತ್ತಿಗೆದಾರ ಕೆಲಸ ಸರಿಯಾಗಿಲ್ಲವೆಂದು ನೆಪ ಹೇಳುತ್ತಾ, ಲೆಕ್ಕದಲ್ಲಿ ಆಟವಾಡಿಸತೊಡಗಿದ. ತೀರಾ ಒತ್ತಾಯಿಸಿ ಕೇಳಿದಾಗ “ದೇತಾ ಹೂಂ, ದೇತಾ ಹೂಂ[ಕೊಡ್ತೀನಿ, ಕೊಡ್ತೀನಿ]” ಎಂದು ಹೇಳಿ ಅವರಿಂದ ತಪ್ಪಿಸಿಕೊಳ್ಳಲು ನೋಡಿದ. ಆದರೆ ಕಾರ್ಮಿಕರು ಅದಕ್ಕೆ ಅವಕಾಶ ನೀಡಲಿಲ್ಲ. ತಮ್ಮ ಬಾಕಿಗಾಗಿ ಒಂದು ವಾರ ಕಾಯ್ದು ನಂತರ ಪೊಲೀಸರ ಮೊರೆ ಹೋದರು. ಅಲ್ಲಿ ಅವರಿಗೆ ಕಾರ್ಮಿಕರ ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಲಾಯಿತು.
ಕಾರ್ಮಿಕರು ಅಲ್ಲಿಗೆ ಕರೆ ಮಾಡಿದಾಗ “ನಾವು ಅವರು ಬಳಿ ಈ ಕುರಿತು ಯಾವುದಾದರೂ ಪುರಾವೆಗಳಿವೆಯೇ ಎಂದು ಕೇಳಿದೆವು. ಗುತ್ತಿಗೆದಾರನ ಹೆಸರು, ಫೋನ್ ನಂಬರ್, ಹಾಜರಾತಿ ಪುಸ್ತಕ ನಕಲು ಪ್ರತಿ ಹೀಗೆ ಏನಾದರೂ ಸಿಗಬಹುದೇ ಎಂದು ಕೇಳಿದೆವು” ಎಂದು ಜಿಲ್ಲಾ ಕೇಂದ್ರ ಬಾಣಸವಾಡದ ಸಾಮಾಜಿಕ ಕಾರ್ಯಕರ್ತ ಕಮಲೇಶ್ ಶರ್ಮಾ ಹೇಳಿದರು.
ಅದೃಷ್ಟವಶಾತ್ ಕೆಲವು ಬುದ್ಧಿವಂತ ಯುವ ಕಾರ್ಮಿಕರ ಬಳಿ ಮೊಬೈಲ್ ಇತ್ತು. ಅವರು ತಮ್ಮ ಮೊಬೈಲ್ ಬಳಸಿ ತಾವು ಕೆಲಸ ಮಾಡುತ್ತಿದ್ದ ಸ್ಥಳದ ಒಂದಷ್ಟು ಫೋಟೊಗಳನ್ನು ತೆಗೆದು ಕಳುಹಿಸಿದರು.
ವಿಪರ್ಯಾಸವೆಂದರೆ ಅವರಿಗೆ ಮೋಸವಾಗಿದ್ದು ʼಜನರ ನಡುವೆ ಪರಸ್ಪರ ಸಂಪರ್ಕ ಏರ್ಪಡಿಸಲು ಬಯಸುವʼ ದೇಶದ ಅತಿ ದೊಡ್ಡ ದೂರವಾಣಿ ಸೇವಾ ಸಂಸ್ಥೆಗೆ ಕೆಲಸ ಮಾಡುವಾಗ.
ಕಾರ್ಮಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಯಾದ ಆಜೀವಿಕಾ ಬ್ಯೂರೋದ ಪ್ರಾಜೆಕ್ಟ್ ಮ್ಯಾನೇಜರ್ ಕಮಲೇಶ್ ಮತ್ತು ಇತರರು ಕಾರ್ಮಿಕರಿಗೆ ಪ್ರಕರಣವನ್ನು ನಿರ್ವಹಿಸಲು ಸಹಾಯ ಮಾಡಿದರು. ಅವರ ಎಲ್ಲಾ ಸಂಪರ್ಕ ಸಾಮಗ್ರಿಗಳೂ ಆಜೀವಿಕಾ ಸಹಾಯವಾಣಿ ಸಂಖ್ಯೆ - 1800 1800 999 ಮತ್ತು ಸಂಸ್ಥೆಯ ಅಧಿಕಾರಿಗಳ ಫೋನ್ ನಂಬರುಗಳನ್ನು ಹೊಂದಿವೆ.
*****
ರಾಜ್ಯದಿಂದ ವಲಸೆ ಹೋಗುವ ಲಕ್ಷಾಂತರ ಜನರಂತೆ ಬಾಣಸವಾಡಾದ ಜನರೂ ಕೆಲಸ ಹುಡುಕಿಕೊಂಡು ಹೋಗುತ್ತಾರೆ. “ಕುಶಾಲಗಢ ಬಹಳಷ್ಟು ಪ್ರವಾಸಿ [ವಲಸಿಗರು] ಗಳನ್ನು ಹೊಂದಿದೆ. ಈಗೀಗ ನಾವು ಕೇವಲ ಕೃಷಿಯನ್ನು ನಂಬಿ ಬದುಕಲು ಸಾಧ್ಯವಿಲ್ಲ” ಎಂದು ಎಂದು ಜಿಲ್ಲೆಯ ಚುರಾಡಾ ಗ್ರಾಮದ ಸರಪಂಚ್ ಜೋಗ ಪಿಟ್ಟಾ ಹೇಳುತ್ತಾರೆ.
ಸಣ್ಣ ಭೂ ಹಿಡುವಳಿಗಳು, ನೀರಾವರಿಯ ಕೊರತೆ, ಉದ್ಯೋಗಗಳ ಕೊರತೆ ಮತ್ತು ಒಟ್ಟಾರೆ ಬಡತನವು ಈ ಜಿಲ್ಲೆಯನ್ನು ಇಲ್ಲಿನ ಜನಸಂಖ್ಯೆಯ ಶೇಕಡಾ 90ರಷ್ಟಿರುವ ಭಿಲ್ ಬುಡಕಟ್ಟು ಜನಾಂಗದವರನ್ನು ಸಂಕಷ್ಟದ ವಲಸೆಯ ಕೇಂದ್ರವನ್ನಾಗಿ ಮಾಡಿದೆ. ಬರಗಾಲ, ಪ್ರವಾಹ ಮತ್ತು ಬಿಸಿಗಾಳಿಗಳಂತಹ ಹವಾಮಾನ ವೈಪರೀತ್ಯ ಘಟನೆಗಳ ನಂತರ ವಲಸೆ ತೀವ್ರವಾಗಿ ಏರುತ್ತಿದೆ ಎಂದು ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಎನ್ವಿರಾನ್ಮೆಂಟ್ ಅಂಡ್ ಡೆವಲಪ್ಮೆಂಟ್ ವರ್ಕಿಂಗ್ ಪೇಪರ್ ಹೇಳುತ್ತದೆ.
ಜನನಿಬಿಡ ಕುಶಾಲನಗರ ಬಸ್ ನಿಲ್ದಾಣದಲ್ಲಿ, ವರ್ಷವಿಡೀ ಪ್ರತಿದಿನ ಸುಮಾರು 40 ಸರ್ಕಾರಿ ಬಸ್ಸುಗಳು 50-100 ಜನರನ್ನು ಒಂದೇ ಟ್ರಿಪ್ಪಿಗೆ ಕರೆದೊಯ್ಯುತ್ತವೆ. ಇದಲ್ಲದೆ ಸರಿಸುಮಾರು ಅದೇ ಸಂಖ್ಯೆಯಷ್ಟು ಖಾಸಗಿ ಬಸ್ಸುಗಳಿವೆ. ಸೂರತ್ ನಗರಕ್ಕೆ ಟಿಕೆಟ್ ಬೆಲೆ 500 ರೂಪಾಯಿ. ಸಾಮಾನ್ಯವಾಗಿ ಮಕ್ಕಳಿಗೆ ಈ ಬಸ್ಸುಗಳಿಗೆ ಟಿಕೆಟ್ ಇರುವುದಿಲ್ಲ.
ಬಸ್ಸಿನ್ಲಲಿ ಸೀಟ್ ಹಿಡಿಯಲು ನಿಲ್ದಾಣಕ್ಕೆ ಬೇಗನೆ ಬಂದ ಸುರೇಶ್ ಮೈದಾ ತನ್ನ ಹೆಂಡತಿ ಮತ್ತು ಮೂರು ಪುಟ್ಟ ಮಕ್ಕಳನ್ನು ಸೀಟಿನಲ್ಲಿ ಕೂರಿಸುತ್ತಾರೆ. ನಂತರ ಅವರು ಬಸ್ ಇಳಿದು ತನ್ನ ಲಗೇಜ್ - 5 ಕಿಲೋ ಹಿಟ್ಟಿರುವ ಒಂದು ಚೀಲ, ಕೆಲವು ಪಾತ್ರೆಗಳನ್ನು ಬಸ್ಸಿನ ಹಿಂದಿನ ಡಿಕ್ಕಿಯಲ್ಲಿ ಹಾಕಿ ಬರುತ್ತಾರೆ.
"ನಾನು ದಿನಕ್ಕೆ ಸುಮಾರು 350 [ರೂಪಾಯಿ] ಸಂಪಾದಿಸುತ್ತೇನೆ" ಎಂದು ಈ ಭಿಲ್ ಆದಿವಾಸಿ ದಿನಗೂಲಿ ಕಾರ್ಮಿಕ ಪರಿಗೆ ಹೇಳಿದರು; ಅವರ ಪತ್ನಿ 250-300 ರೂಪಾಯಿಗಳನ್ನು ಸಂಪಾದಿಸುತ್ತಾರೆ. ಒಂದು ಅಥವಾ ಎರಡು ತಿಂಗಳು ಉಳಿದು ನಂತರ ಊರಿಗೆ ಹಿಂತಿರುಗುತ್ತಾರೆ. ಬಂದ ನಂತರ ಸರಿಸುಮಾರು 10 ದಿನಗಳನ್ನು ಮನೆಯಲ್ಲಿ ಕಳೆದು ಮತ್ತೆ ಹೊರಡುವುದಾಗಿ ಸುರೇಶ್ ಹೇಳುತ್ತಾರೆ. "ನಾನು ಇದನ್ನು 10 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಮಾಡುತ್ತಿದ್ದೇನೆ" ಎಂದು 28 ವರ್ಷದ ಅವರು ಹೇಳುತ್ತಾರೆ. ಸುರೇಶ್ ಅವರಂತಹ ವಲಸಿಗರು ಸಾಮಾನ್ಯವಾಗಿ ಹೋಳಿ, ದೀಪಾವಳಿ ಮತ್ತು ರಕ್ಷಾ ಬಂಧನದಂತಹ ದೊಡ್ಡ ಹಬ್ಬಗಳ ಸಂದರ್ಭದಲ್ಲಿ ಮನೆಗೆ ಬರುತ್ತಾರೆ.
ರಾಜಸ್ಥಾನ ವಲಸೆ ಹೋಗುವವರ ಸಂಖ್ಯೆಯನ್ನೇ ಹೆಚ್ಚು ಹೊಂದಿದೆ . ಇಲ್ಲಿಗೆ ವಲಸಿಗರಾಗಿ ಹೊರಗಿನವರು ಬರುವುದು ಕಡಿಮೆ; ಉತ್ತರ ಪ್ರದೇಶ ಮತ್ತು ಬಿಹಾರವೂ ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರನ್ನು ಹೊಂದಿದೆ. “ಇಲ್ಲಿ ಕೃಷಿಯೊಂದೇ ಆಯ್ಕೆ, ಅದೂ ವರ್ಷಕ್ಕೊಮ್ಮೆ ಮಳೆ ಬಂದಾಗ” ಎಂದು ಕುಶಾಲನಗರ ತಹಸಿಲ್ ಕಚೇರಿಯ ಅಧಿಕಾರಿ ವಿ ಎಸ್ ರಾಥೋಡ್ ಹೇಳುತ್ತಾರೆ.
ಕಾರ್ಮಿಕರು ಕಾಯಂ ಕೆಲಸವನ್ನೇ ಬಯಸುತ್ತಾರೆ. ಅಲ್ಲಿ ಅವರು ಒಬ್ಬ ಗುತ್ತಿಗೆದಾರನ ಜೊತೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಪ್ರತಿದಿನ ಬೆಳಿಗ್ಗೆ ಮಜ್ದೂರ್ ಮಂಡಿಯಲ್ಲಿ (ಕಾರ್ಮಿಕ ಮಾರುಕಟ್ಟೆ) ನಿಲ್ಲುವ ರೋಕ್ಡಿ ಅಥವಾ ದೆಹಾಡಿಗೆ ಹೋಲಿಸಿದರೆ ಇದು ಉದ್ಯೋಗದಲ್ಲಿ ಹೆಚ್ಚಿನ ಸ್ಥಿರತೆಯನ್ನು ನೀಡುತ್ತದೆ.
ಜೋಗಾಜಿ ತಮ್ಮ ಎಲ್ಲ ಮಕ್ಕಳನ್ನೂ ಓದಿಸಿದ್ದಾರೆ, ಆದರೂ “ಯಹಾಂ ಬೇರೋಜಗಾರಿ ಜ್ಯಾದಾ ಹೈ. ಪಢೇ ಲಿಖೇ ಲೋಗೋಂ ಕೇ ಲಿಯೇ ಭಿ ನೌಕ್ರಿ ನಹಿ [ಇಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗವಿದೆ. ಓದಿಕೊಂಡವರಿಗೂ ಇಲ್ಲಿ ಕೆಲಸ ಸಿಗುವುದಿಲ್ಲ].”
ಹೀಗಾಗಿ ಇಲ್ಲಿನ ಜನರಿಗೆ ಉಳಿದಿರುವ ಆಯ್ಕೆಯೆಂದರೆ ವಲಸೆ ಮಾತ್ರ.
ರಾಜಾಸ್ಥಾನವು ನಿವ್ವಳ ಹೊರ-ವಲಸೆ ಹೊಂದಿರುವ ರಾಜ್ಯ. ಇಲ್ಲಿಗೆ ಜನರು ವಲಸೆ ಬರುವುದಕ್ಕಿಂತ ಹೆಚ್ಚು ವಲಸೆ ಹೋಗುತ್ತಾರೆ. ಉತ್ತರ ಪ್ರದೇಶ ಹಾಗೂ ಬಿಹಾರ ಅತಿ ಹೆಚ್ಚು ವಲಸೆಯನ್ನು ಹೊಂದಿದೆ
*****
ಮರಿಯಾ ಪಾರು ಮನೆಯಿಂದ ಹೊರಡುವಾಗ ತಮ್ಮೊಂದಿಗೆ ಮಿಟ್ಟಿ ಕಾ ತವಾ (ಜೇಡಿಮಣ್ಣಿನ ಕಾವಲಿ) ಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಾರೆ. ಇದು ಅವಳ ಲಗೇಜಿನ ನಿರ್ಣಾಯಕ ಭಾಗ. ಜೋಳದ ರೊಟ್ಟಿಗಳನ್ನು ಜೇಡಿಮಣ್ಣಿನ ಹಂಚಿನಲ್ಲಿ ತಯಾರಿಸುವುದು ಉತ್ತಮ, ಸೌದೆಯ ಬೆಂಕಿಯನ್ನು ನಿಯಂತ್ರಿಸಿ ರೊಟ್ಟಿ ಸುಡದಂತೆ ತಡೆಯುತ್ತದೆ ಎಂದು ನನಗೆ ರೊಟ್ಟಿ ಮಾಡುವುದನ್ನು ತೋರಿಸುತ್ತಾ ತಿಳಿಸಿದರು.
ಸೂರತ್, ಅಹಮದಾಬಾದ್, ವಾಪಿ ಮತ್ತು ಗುಜರಾತ್ ರಾಜ್ಯದ ನಗರಗಳು ಮತ್ತು ಇತರ ನೆರೆಯ ರಾಜ್ಯಗಳಲ್ಲಿ ದೈನಂದಿನ ಕೂಲಿ ಕೆಲಸವನ್ನು ಹುಡುಕಿಕೊಂಡು ರಾಜಸ್ಥಾನದ ಬಾಣಸವಾಡಾ ಜಿಲ್ಲೆಯ ತಮ್ಮ ಮನೆಗಳಿಂದ ಹೊರಹೋಗುವ ಲಕ್ಷಾಂತರ ಭಿಲ್ ಆದಿವಾಸಿಗಳಲ್ಲಿ ಮಾರಿಯಾ ಮತ್ತು ಅವರ ಪತಿ ಪಾರು ದಾಮೋರ್ ಕೂಡಾಸೇರಿದ್ದಾರೆ. "ಮನರೇಗಾ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಸಾಕಾಗುವುದಿಲ್ಲ" ಎಂದು 100 ದಿನಗಳ ಕೆಲಸವನ್ನು ನೀಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾತನಾಡುತ್ತಾ ಪಾರು ಹೇಳುತ್ತಾರೆ.
30 ವರ್ಷದ ಮಾರಿಯಾ ತಮ್ಮ ಜೊತೆಗೆ 10-15 ಕಿಲೋಗ್ರಾಂಗಳಷ್ಟು ಮಾಕಯಿ (ಜೋಳ) ಹಿಟ್ಟನ್ನು ಸಹ ಒಯ್ಯುತ್ತಾರೆ. "ನಮಗೆ ಇದರ ರೊಟ್ಟಿಗಳೇ ಇಷ್ಟ" ಎಂದು ಅವರು ಹೇಳುತ್ತಾರೆ. ವರ್ಷದಲ್ಲಿ ಒಂಬತ್ತು ತಿಂಗಳವರೆಗೆ ಮನೆಯಿಂದ ದೂರವಿರುವ ಅವರಿಗೆ ಕುಟುಂಬದ ಆಹಾರ ಸಂತೃಪ್ತಿಯನ್ನು ನೀಡುತ್ತದೆ.
ದಂಪತಿಗೆ 3-12 ವರ್ಷ ವಯಸ್ಸಿನ ಆರು ಮಕ್ಕಳಿದ್ದು, ಅವರು ಎರಡು ಎಕರೆ ಭೂಮಿಯನ್ನು ಹೊಂದಿದ್ದಾರೆ, ಅದರಲ್ಲಿ ತಮ್ಮ ಸ್ವಂತ ಬಳಕೆಗಾಗಿ ಗೋಧಿ, ಕಡಲೆ ಮತ್ತು ಜೋಳವನ್ನು ಬೆಳೆಯುತ್ತಾರೆ. "ಕೆಲಸಕ್ಕಾಗಿ ವಲಸೆ ಹೋಗದೆ ನಾವು ಬದುಕು ನಡೆಸಲು ಸಾಧ್ಯವಿಲ್ಲ. ನಾನು ನನ್ನ ಹೆತ್ತವರಿಗೆ ಹಣವನ್ನು ಕಳುಹಿಸಬೇಕು, ನೀರಾವರಿ ನೀರಿಗೆ ಪಾವತಿಸಬೇಕು, ಜಾನುವಾರುಗಳಿಗೆ ಮೇವು ಖರೀದಿಸಬೇಕು, ಕುಟುಂಬಕ್ಕೆ ಆಹಾರ ಖರೀದಿಸಬೇಕು ..." ಎಂದು ಪಾರು ತನ್ನ ಖರ್ಚುಗಳನ್ನು ವಿವರಿಸುತ್ತಾರೆ. "ಹೀಗಾಗಿ, ನಾವು ವಲಸೆ ಹೋಗಬೇಕಾಗಿದೆ."
ಅವರು ಮೊದಲ ಸಲ ವಲಸೆ ಹೋಗಿದ್ದು ಎಂಟು ವರ್ಷದವರಿದ್ದಾಗ. ಕುಟುಂಬದ ವೈದ್ಯಕೀಯ ವೆಚ್ಚಕ್ಕಾಗಿ 80,000 ರೂಪಾಯಿ ಸಾಲ ಮಾಡಲಾಗಿತ್ತು. ಇದನ್ನು ತೀರಿಸುವ ಸಲುವಾಗಿ ಅವರು ತಮ್ಮ ಸಹೋದರ ಮತ್ತು ಸಹೋದರಿಯೊಂದಿಗೆ ವಲಸೆ ಹೋಗಿದ್ದರು. “ಅದು ಚಳಿಗಾಲ. ಅಹಮದಾಬಾದ್ ಹೋಗಿದ್ದೆ. ದಿನಕ್ಕೆ 60 ರೂಪಾಯಿ ಸಂಪಾದಿಸುತ್ತಿದ್ದೆ.” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಒಡಹುಟ್ಟಿದವರೆಲ್ಲ ಸೇರಿ ಅಲ್ಲಿ ನಾಲ್ಕು ತಿಂಗಳ ಕಾಲ ಇದ್ದು ಸಾಲವನ್ನು ತೀರಿಸುವಲ್ಲಿ ಯಶಸ್ವಿಯಾದರು. “ಸಾಲ ತೀರಿಸಲು ನಾನೂ ಸಹಾಯ ಮಾಡಿದೆ ಎನ್ನುವ ಅಂಶವು ನನಗೆ ಸಂತೋಷ ನೀಡಿತ್ತು” ಎಂದು ಅವರು ಹೇಳುತ್ತಾರೆ. ಎರಡು ತಿಂಗಳ ನಂತರ ಅವರು ಮತ್ತೆ ವಲಸೆ ಹೋದರು. ಮೂವತ್ತು-ಮೂವತೈದರ ಆಸುಪಾಸಿನಲ್ಲಿರುವ ಅವರು 25 ವರ್ಷಗಳನ್ನು ವಲಸೆಯಲ್ಲಿ ಕಳೆದಿದ್ದಾರೆ.
*****
ವಲಸಿಗರು ʼನಿಧಿʼ ಸಿಗುವ ಆಸೆಯೊಂದಿಗೆ ಹೊರಡುತ್ತಾರೆ. ಅದು ಅವರ ಸಾಲಗಳನ್ನು ತೀರಿಸುತ್ತದೆ, ಮಕ್ಕಳನ್ನು ಶಾಲೆಗೆ ಕಳುಹಿಸಲು ಸಹಾಯ ಮಾಡುತ್ತದೆ, ಮೂರು ಹೊತ್ತಿನ ಊಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ ಎನ್ನುವುದು ಅವರು ಈ ನಿಧಿಯಿಂದ ನಿರೀಕ್ಷಿಸುವ ಫಲ. ಆದರೆ ಕೆಲವೊಮ್ಮೆ ಈ ನಿರೀಕ್ಷೆ ಹುಸಿಯಾಗುತ್ತದೆ. ಆಜೀವಿಕಾ ನಡೆಸುತ್ತಿರುವ ರಾಜ್ಯ ಕಾರ್ಮಿಕ ಸಹಾಯವಾಣಿಗೆ ಬಾಕಿ ಪಾವತಿಗೆ ಸಂಬಂಧಿಸಿದಂತೆ ಕಾನೂನು ಪರಿಹಾರ ಕೋರಿ ವಲಸೆ ಕಾರ್ಮಿಕರಿಂದ ತಿಂಗಳಿಗೆ 5,000 ಕರೆಗಳು ಬರುತ್ತವೆ.
“ಕೂಲಿ ಕಾರ್ಮಿಕರ ಒಪ್ಪಂದಗಳು ಔಪಚಾರಿಕವಾಗಿರುವುದಿಲ್ಲ. ಅವು ಬಾಯಿಮಾತಿನಲ್ಲಿರುತ್ತವೆ. ಜೊತೆಗೆ ಕಾರ್ಮಿಕರನ್ನು ಒಬ್ಬ ಗುತ್ತಿಗೆದಾರನಿಂದ ಇನ್ನೊಬ್ಬ ಗುತ್ತಿಗೆದಾರನಿಗೆ ವರ್ಗಾಯಿಸಲಾಗುತ್ತದೆ” ಎಂದು ಕಮಲೇಶ್ ಹೇಳುತ್ತಾರೆ. ಬಾಣಸವಾಡಾ ಜಿಲ್ಲೆಯೊಂದರಲ್ಲೇ ಬಟವಾಡೆ ನಿರಾಕರಣೆಯ ಪ್ರಕರಣ ಕೋಟಿ ರೂಪಾಯಿಗಳ ಮೌಲ್ಯದಲ್ಲಿದೆ.
“ಈ ಕಾರ್ಮಿಕರಿಗೆ ತಮ್ಮ ಮುಖ್ಯ ಗುತ್ತಿಗೆದಾರ ಯಾರು, ತಾವು ಯಾರಿಗಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವುದು ತಿಳಿಯುವುದಿಲ್ಲ. ಇದೇ ಕಾರಣದಿಂದಾಗಿ ಬಾಕಿ ವಸೂಲಿ ಪ್ರಕ್ರಿಯೆ ನಿರಾಶಾದಾಯಕ ಹಾಗೂ ದೀರ್ಘಕಾಲೀನ ಪ್ರಕ್ರಿಯೆಯಾಗಿರುತ್ತದೆ” ಎಂದು ಅವರು ಹೇಳುತ್ತಾರೆ. ಅವರ ಕೆಲಸದಿಂದಾಗಿ ವಲಸಿಗರನ್ನು ಹೇಗೆಲ್ಲಾ ಶೋಷಿಸಲಾಗುತ್ತಿದೆ ಎನ್ನುವುದರ ಕುರಿತು ಒಂದು ಸ್ಪಷ್ಟತೆ ಅವರಿಗೆ ಸಿಗುತ್ತಿದೆ.
ಜೂನ್ 20, 2024ರಂದು, 45 ವರ್ಷದ ಭಿಲ್ ಆದಿವಾಸಿ ರಾಜೇಶ್ ದಾಮೋರ್ ಮತ್ತು ಇತರ ಇಬ್ಬರು ಕಾರ್ಮಿಕರು ಸಹಾಯ ಕೋರಿ ಬಾಣಸವಾಡದ ಅವರ ಕಚೇರಿಗೆ ಬಂದರು. ಆ ಸಮಯದಲ್ಲಿ ರಾಜ್ಯದಲ್ಲಿ ತಾಪಮಾನವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿತ್ತು, ಆದರೆ ಸಂಕಷ್ಟದಲ್ಲಿದ್ದ ಕಾರ್ಮಿಕರ ಕಷ್ಟಕ್ಕೆ ಕಾರಣವಾಗಿದ್ದು ಅದಲ್ಲ. ಅವರನ್ನು ನೇಮಿಸಿಕೊಂಡಿದ್ದ ಕಾರ್ಮಿಕ ಗುತ್ತಿಗೆದಾರನೊಬ್ಬ ಒಟ್ಟು 226,000 ರೂಪಾಯಿ ಬಾಕಿ ಉಳಿಸಿಕೊಂಡಿದ್ದ. ಈ ನಿಟ್ಟಿನಲ್ಲಿ ಅವರು ದೂರು ನೀಡಲು ಕುಶಾಲಗಢ ತಹಸಿಲ್ ಪಟಾನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು. ಪೊಲೀಸರು ಅವರನ್ನು ಈ ಪ್ರದೇಶದ ವಲಸೆ ಕಾರ್ಮಿಕರ ಸಂಪನ್ಮೂಲ ಕೇಂದ್ರವಾದ ಆಜೀವಿಕಾದ ಶ್ರಮಿಕ್ ಸಹಾಯತಾ ಏವಮ್ ಸಂದರ್ಬ್ ಕೇಂದ್ರಕ್ಕೆ ಕಳುಹಿಸಿದರು.
ಏಪ್ರಿಲ್ ತಿಂಗಳಿನಲ್ಲಿ ರಾಜೇಶ್ ಮತ್ತು ಸುಖ್ವಾರಾ ಪಂಚಾಯತ್ ಪ್ರದೇಶಕ್ಕೆ ಸೇರಿದ 55 ಕಾರ್ಮಿಕರು 600 ಕಿಲೋಮೀಟರ್ ದೂರದಲ್ಲಿರುವ ಗುಜರಾತಿನ ಮೊರ್ಬಿಗೆ ತೆರಳಿದ್ದರು. ಅಲ್ಲಿನ ಟೈಲ್ ಕಾರ್ಖಾನೆಯ ನಿರ್ಮಾಣ ಸ್ಥಳದಲ್ಲಿ ಗಾರೆ ಮತ್ತು ಇತರ ಕೆಲಸ ಮಾಡಲು ಅವರನ್ನು ನೇಮಿಸಿಕೊಳ್ಳಲಾಗಿತ್ತು. 10 ನುರಿತ ಕಾರ್ಮಿಕರಿಗೆ 700 ರೂ.ಗಳ ದೈನಂದಿನ ವೇತನ ಮತ್ತು ಉಳಿದವರಿಗೆ 400 ರೂಪಾಯಿಂತೆ ಕೂಲಿ ತೀರ್ಮಾನವಾಗಿತ್ತು.
ಒಂದು ತಿಂಗಳ ಕೆಲಸದ ನಂತರ, "ನಮ್ಮ ಎಲ್ಲಾ ಬಾಕಿಗಳನ್ನು ಚುಕ್ತಾ ಮಾಡುವಂತೆ ನಾವು ಠೇಕೇದಾರ್ [ಗುತ್ತಿಗೆದಾರ] ಬಳಿ ಕೇಳಿದೆವು. ಆದರೆ ಅವರು ಹಣ ಕೊಡದೆ ದಿನ ದೂಡುತ್ತಿದ್ದರು" ಎಂದು ರಾಜೇಶ್ ಪರಿಯೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ ಹೇಳಿದರು. ಮಾತುಕತೆಗಳಲ್ಲಿ ಮುಂಚೂಣಿಯಲ್ಲಿದ್ದ ರಾಜೇಶ್ ಭಿಲಿ, ವಾಗ್ಡಿ, ಮೇವಾರಿ, ಹಿಂದಿ ಮತ್ತು ಗುಜರಾತಿ ಭಾಷೆಗಳನ್ನು ಮಾತನಾಡಲು ಕಲಿತಿದ್ದು ಸಹಾಯಕ್ಕೆ ಬಂದಿತು. ಅವರ ಕೂಲಿ ಬಾಕಿಯಿಟ್ಟುಕೊಂಡಿರುವ ಗುತ್ತಿಗೆದಾರ ಮಧ್ಯಪ್ರದೇಶದ ಜಬುವಾ ಮೂಲದವರಾಗಿದ್ದು, ಹಿಂದಿ ಮಾತನಾಡುತ್ತಿದ್ದರು. ಭಾಷಾ ಅಡೆತಡೆಯಿಂದಾಗಿ ಕೆಲವೊಮ್ಮೆ ಕಾರ್ಮಿಕರಿಗೆ ಅಂತಿಮ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಅವರು ಕೆಳ ಹಂತದ ಗುತ್ತಿಗೆದಾರನೊಂದಿಗೆ ಮಾತುಕತೆ ಮಾಡಬೇಕಾಗುತ್ತದೆ. ಕೆಲವು ಗುತ್ತಿಗೆದಾರರು ಕಾರ್ಮಿಕರು ಕೂಲಿ ಹಣ ಕೇಳಿದಾಗ ದೈಹಿಕ ಹಲ್ಲೆಗೆ ಮುಂದಾಗುವುದೂ ಇರುತ್ತದೆ.
ಈ 56 ಕಾರ್ಮಿಕರು ತಮ್ಮ ಭಾರಿ ಮೊತ್ತದ ಕೂಲಿ ಹಣಕ್ಕಾಗಿ ವಾರಗಟ್ಟಲೆ ಕಾಯಬೇಕಾಯಿತು. ಈ ನಡುವೆ ಅವರು ಮನೆಯಿಂದ ತಂದಿದ್ದ ಆಹಾರವೂ ಖಾಲಿಯಾಗುತ್ತಿತ್ತು. ಹೊರಗಿನ ಮಾರುಕಟ್ಟೆಯಲ್ಲಿನ ಆಹಾರ ಸಾಮಾಗ್ರಿ ಖರೀದಿ ಅವರ ಗಳಿಕೆಯನ್ನು ತಿನ್ನತೊಡಗಿತ್ತು.
"ಗುತ್ತಿಗೆ ಹಣ ಕೊಡುವ ದಿನಾಂಕವನ್ನು ಮುಂದೂಡುತ್ತಲೇ ಇದ್ದ - 20, ನಂತರ ಮೇ 24, ಜೂನ್ 4..." ದುಃಖಿತ ರಾಜೇಶ್ ನೆನಪಿಸಿಕೊಳ್ಳುತ್ತಾರೆ. “ನಾವು ಮನೆಯಿಂದ ಬಹಳ ದೂರವಿದ್ದೇವೆ, ಹೀಗಿರುವಾಗ ನೀವು ಹಣ ಕೊಡದೆ ಹೋದರೆ ನಾವು ಊಟಕ್ಕೆ ಏನು ಮಾಡುವುದುʼ ಎಂದು ಕೇಳಿದೆವು. ಕೊನೆಗೆ ನಾವು ಹತ್ತು ದಿನಗಳ ಕಾಲ ಕೆಲಸ ಮಾಡುವುದನ್ನು ಸಹ ನಿಲ್ಲಿಸಿದೆವು. ಆ ಮೂಲಕವಾದರೂ ಹಣ ಪಡೆಯಬಹುದು ಎಂದುಕೊಂಡಿದ್ದೆವು.” ಕೊನೆಗೆ ಜೂನ್ 20ರಂದು ಖಂಡಿತಾ ಕೊಡುವುದಾಗಿ ಭರವಸೆ ನೀಡಲಾಯಿತು.
ಹಣ ಸಿಗುವ ಕುರಿತು ಯಾವುದೇ ಖಾತರಿ ಇರಲಿಲ್ಲವಾದರೂ, ಅಲ್ಲೇ ಉಳಿಯಲು ಸಾಧ್ಯವಾಗದೆ ಜೂನ್ 9ರಂದು 56 ಜನರ ತಂಡವು ಕುಶಾಲಗಢದ ಬಸ್ ಹತ್ತಿತು. ಜೂನ್ 20ರಂದು ರಾಜೇಶ್ ಕರೆ ಮಾಡಿದಾಗ, “ಅವನು ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿ ನಮ್ಮೊಂದಿಗೆ ಜಗಳ ಆರಂಭಿಸಿದ. ನಂತರ ಬಯ್ಯತೊಡಗಿದ.” ಆಗ ರಾಜೇಶ್ ಮತ್ತು ಇತರರು ತಮ್ಮ ಮನೆಯ ಹತ್ತಿರದ ಪೊಲೀಸ್ ಠಾಣೆಗೆ ಹೋದರು.
ರಾಜೇಶ್ 10 ಬಿಘಾ ಭೂಮಿಯನ್ನು ಹೊಂದಿದ್ದಾರೆ, ಅದರಲ್ಲಿ ಅವರ ಕುಟುಂಬ ಸೋಯಾಬೀನ್, ಹತ್ತಿ ಮತ್ತು ಗೋಧಿಯನ್ನು ಬೆಳೆಯುತ್ತದೆ. ಅವರ ನಾಲ್ಕು ಮಕ್ಕಳೂ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಮತ್ತು ಶಾಲೆಗಳು ಮತ್ತು ಕಾಲೇಜುಗಳಿಗೆ ದಾಖಲಾಗಿದ್ದಾರೆ. ಆದರೂ, ಈ ಬೇಸಿಗೆಯಲ್ಲಿ ಅವರು ತಮ್ಮ ಹೆತ್ತವರೊಂದಿಗೆ ಕೂಲಿ ಕೆಲಸದಲ್ಲಿ ಕೈಜೋಡಿಸಿದರು. "ರಜಾದಿನಗಳಾಗಿದ್ದ ಕಾರಣ ನೀವೂ ಒಂದಷ್ಟು ಹಣ ಸಂಪಾದಿಸಬಹುದೆಂದು ನಾನು ಅವರಿಗೆ ಹೇಳಿದೆ" ಎಂದು ರಾಜೇಶ್ ಹೇಳುತ್ತಾರೆ. ಗುತ್ತಿಗೆದಾರ ಈಗ ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗುವ ಭಯ ಎದುರಿಸುತ್ತಿರುವುದರಿಂದಾಗಿ ಅವನು ತಮ್ಮ ಗಳಿಕೆಯನ್ನು ಕೊಡಬಹುದು ಎನ್ನುವ ನಿರೀಕ್ಷೆ ಕುಟುಂಬದವರಲ್ಲಿ ಮೂಡಿದೆ.
ಕಾರ್ಮಿಕ ನ್ಯಾಯಾಲಯದ ಹೆಸರು ತಪ್ಪಿತಸ್ಥ ಗುತ್ತಿಗೆದಾರರು ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಹಾಗೆ ಮಾಡುತ್ತದೆ. ಆದರೆ ಅಲ್ಲಿಗೆ ತಲುಪಲು, ಕಾರ್ಮಿಕರಿಗೆ ಪ್ರಕರಣ ದಾಖಲಿಸಲು ಸಹಾಯ ಬೇಕು. ನೆರೆಯ ಮಧ್ಯಪ್ರದೇಶದ ಅಲಿರಾಜಪುರದ ರಸ್ತೆಗಳಲ್ಲಿ ಕೆಲಸ ಮಾಡಲು ಈ ಜಿಲ್ಲೆಯಿಂದ ತೆರಳಿದ್ದ 12 ಕೂಲಿ ಕಾರ್ಮಿಕರ ಗುಂಪಿಗೆ ಮೂರು ತಿಂಗಳ ಕೆಲಸದ ನಂತರ ಪೂರ್ಣ ವೇತನವನ್ನು ನಿರಾಕರಿಸಲಾಯಿತು. ಗುತ್ತಿಗೆದಾರರು ಕಳಪೆ ಕಾಮಗಾರಿಯನ್ನು ಉಲ್ಲೇಖಿಸಿ ಅವರಿಗೆ ನೀಡಬೇಕಾದ 4-5 ಲಕ್ಷ ರೂಪಾಯಿಗಳ ಪಾವತಿಯನ್ನು ನಿರಾಕರಿಸಿದರು.
"ನಾವು ಮಧ್ಯಪ್ರದೇಶದಲ್ಲಿ ಸಿಲುಕಿಕೊಂಡಿದ್ದೇವೆ ಮತ್ತು ಕೂಲಿ ಕೊಡುತ್ತಿಲ್ಲ ಎಂದು ನಮಗೆ ಕರೆ ಬಂತು" ಎಂದು ಟೀನಾ ಗರಾಸಿಯಾ ನೆನಪಿಸಿಕೊಳ್ಳುತ್ತಾರೆ. “ನಮ್ಮ ಫೋನ್ ನಂಬರ್ ಕಾರ್ಮಿಕರ ನಡುವೆ ಪ್ರಚಲಿತವಾಗಿದೆ” ಎಂದು ಬಾಣಸವಾಡ ಜಿಲ್ಲೆಯ ಆಜೀವಿಕಾದ ಜೀವನೋಪಾಯ ಬ್ಯೂರೋದ ಮುಖ್ಯಸ್ಥರಾಗಿರುವ ವಿವರಿಸುತ್ತಾರೆ.
ಈ ಬಾರಿ ಕಾರ್ಮಿಕರ ಬಳಿ ಕೆಲಸದ ಸ್ಥಳದ ವಿವರಗಳು, ಹಾಜರಾತಿ ರಿಜಿಸ್ಟರ್ ಫೋಟೋಗಳು ಮತ್ತು ಗುತ್ತಿಗೆದಾರನ ಹೆಸರು ಮತ್ತು ಮೊಬೈಲ್ ಸಂಖ್ಯೆ ಎಲ್ಲವೂ ಇದ್ದವು.
ಆರು ತಿಂಗಳ ನಂತರ ಗುತ್ತಿಗೆದಾರ ಎರಡು ಕಂತುಗಳಲ್ಲಿ ಹಣ ಪಾವತಿಸಿದ. "ಅವರು ಹಣವನ್ನು ಇಲ್ಲಿಗೆ [ಕುಶಾಲಗಢ] ಬಂದು ಕೊಟ್ಟರು" ಎಂದು ಹಣ ಪಡೆದ ನಿರಾಳ ಕಾರ್ಮಿಕರು ಹೇಳುತ್ತಾರೆ, ಆದರೆ ಹಣ ನೀಡುವುದು ತಡವಾಗಿದ್ದಕ್ಕೆ ಯಾವುದೇ ಬಡ್ಡಿ ಕೊಡಲಿಲ್ಲ.
"ನಾವು ಮೊದಲು ಮಾತುಕತೆಗೆ ಪ್ರಯತ್ನಿಸುತ್ತೇವೆ" ಎಂದು ಕಮಲೇಶ್ ಶರ್ಮಾ ಹೇಳುತ್ತಾರೆ. "ಆದರೆ ಗುತ್ತಿಗೆದಾರನ ವಿವರಗಳು ಇದ್ದರೆ ಮಾತ್ರ ಅದು ಸಾಧ್ಯ.
ಜವಳಿ ಕಾರ್ಖಾನೆಯಲ್ಲಿ ಕೆಲಸ ಮಾಡಲು ಸೂರತ್ ನಗರಕ್ಕೆ ವಲಸೆ ಹೋಗಿದ್ದ 25 ಕಾರ್ಮಿಕರ ಬಳಿ ಯಾವುದೇ ಪುರಾವೆಗಳಿರಲಿಲ್ಲ. "ಅವುಗಳನ್ನು ಒಬ್ಬ ಗುತ್ತಿಗೆದಾರನಿಂದ ಇನ್ನೊಬ್ಬರಿಗೆ ರವಾನಿಸಲಾಗಿತ್ತು ಮತ್ತು ವ್ಯಕ್ತಿಯನ್ನು ಪತ್ತೆಹಚ್ಚಲು ಫೋನ್ನಂಬರ್ ಅಥವಾ ಹೆಸರು ಸಹ ಹೆಸರು ಇರಲಿಲ್ಲ" ಎಂದು ಟೀನಾ ಹೇಳುತ್ತಾರೆ. "ಒಂದೇ ರೀತಿ ಕಾಣುವವರ ನಡುವೆ ಅವನನ್ನು ಗುರುತಿಸಲು ಅವರಿಗೆ ಸಾಧ್ಯವಾಗಲಿಲ್ಲ."
ಕಿರುಕುಳಕ್ಕೆ ಒಳಗಾಗುವುದರ ಜೊತೆಗೆ 6 ಲಕ್ಷ ರೂಪಾಯಿ ಮೊತ್ತದ ಕೂಲಿ ಹಣವನ್ನೂ ಬಿಟ್ಟು ಅವರು ಬಾಣಸವಾಡದ ಕುಶಾಲಗಢ ಹಾಗೂ ಸಜ್ಜನಗಢದಲ್ಲಿನ ತಮ್ಮ ಮನೆಗಳಿಗೆ ತೆರಳಿದರು.
ಇಂತಹ ಸಂದರ್ಭಗಳಲ್ಲಿಯೇ ಸಾಮಾಜಿಕ ಕಾರ್ಯಕರ್ತ ಕಮಲೇಶ್ ಅವರು ಕಾನೂನ್ ಶಿಕ್ಷಾ (ಕಾನೂನು ಸಾಕ್ಷರತೆ) ಯಲ್ಲಿ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಬಾಣಸವಾಡ ಜಿಲ್ಲೆಯು ರಾಜ್ಯದ ಗಡಿಯಲ್ಲಿದೆ ಮತ್ತು ಇದು ಗರಿಷ್ಠ ವಲಸೆಯನ್ನು ಕಾಣುವ ತಾಣವಾಗಿದೆ. ಕುಶಾಲಗಢ, ಸಜ್ಜನಗಢ, ಅಂಬಾಪಾರ, ಘಟೋಲ್ ಮತ್ತು ಗಂಗರ್ ತಲಾಯಿಯ ಶೇಕಡಾ 80ರಷ್ಟು ಕುಟುಂಬಗಳಲ್ಲಿ ಕನಿಷ್ಠ ಒಬ್ಬರಾದರೂ ವಲಸಿಗರಿದ್ದಾರೆ ಎಂದು ಆಜೀವಿಕಾ ಸಮೀಕ್ಷೆಯ ಅಂಕಿ ಅಂಶಗಳು ಹೇಳುತ್ತವೆ.
“ಯುವ ಪೀಳಿಗೆಯ ಬಳಿ ಫೋನ್ ಇರುವುದರಿಂದಾಗಿ ಅವರ ಫೋನ್ ನಂಬರ್ ಇಟ್ಟುಕೊಳ್ಳಬಲ್ಲರು, ಫೋಟೊ ತೆಗೆದಿಟ್ಟುಕೊಳ್ಳಬಲ್ಲರು ಹೀಗಾಗಿ ಮೋಸ ಮಾಡು ಗುತ್ತಿಗೆದಾರರನ್ನು ಹಿಡಿಯುವುದು ಸುಲಭವಾಗುತ್ತದೆ” ಎಂದು ಕಮಲೇಶ್ ಹೇಳುತ್ತಾರೆ.
ಸೆಪ್ಟೆಂಬರ್ 17, 2020ರಂದು ದೇಶಾದ್ಯಂತ ಕೈಗಾರಿಕಾ ವಿವಾದಗಳಿಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲೆಂದು ಕೇಂದ್ರ ಸರ್ಕಾರದ ಸಮಧಾನ್ ಪೋರ್ಟಲ್ ಪ್ರಾರಂಭಿಸಲಾಯಿತು ಮತ್ತು 2022ರಲ್ಲಿ ಕಾರ್ಮಿಕರಿಗೆ ತಮ್ಮ ಹೇಳಿಕೆಗಳನ್ನು ಸಲ್ಲಿಸಲು ಅನುವು ಮಾಡಿಕೊಡಲು ಅದನ್ನು ಮರುರೂಪಿಸಲಾಯಿತು. ಆದರೆ ಇದು ಸ್ಪಷ್ಟ ಆಯ್ಕೆಯಾಗಿದ್ದರೂ ಬಾಣಸವಾಡದಲ್ಲಿ ಇದರ ಯಾವುದೇ ಕಚೇರಿ ಇಲ್ಲ.
*****
ವಲಸಿಗ ಮಹಿಳೆಯರಿಗೆ ತಮ್ಮ ಕೂಲಿಗೆ ಸಂಬಂಧಿಸಿದ ವಿಚಾರಗಳಲ್ಲಿ ಭಾಗವಹಿಸಲು ಅಷ್ಟಾಗಿ ಅವಕಾಶ ಸಿಗುವುದಿಲ್ಲ. ಅವರ ಬಳಿ ಫೋನ್ ಇರುವುದು ಸಹ ಅಪರೂಪ. ಅವರ ಕೆಲಸ ಮತ್ತು ಸಂಬಳ ಎರಡನ್ನೂ ಪುರುಷರ ಮುಖಾಂತರ ನಿಕ್ಕಿ ಮಾಡಲಾಗುತ್ತದೆ. ಮಹಿಳೆಯರು ಫೋನ್ ಹೊಂದುವುದರ ಕುರಿತು ಇಲ್ಲಿ ಗಂಭೀರ ಪ್ರತಿರೋಧಗಳಿವೆ. ಕಾಂಗ್ರೆಸ್ ಪಕ್ಷದ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜ್ಯದ ಹಿಂದಿನ ಸರ್ಕಾರವು ರಾಜ್ಯದ ಮಹಿಳೆಯರಿಗೆ 13 ಕೋಟಿಗೂ ಹೆಚ್ಚು ಉಚಿತ ಫೋನುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಗೆಹ್ಲೋಟ್ ಸರ್ಕಾರ ಅಧಿಕಾರ ಕಳೆದುಕೊಳ್ಳುವವರೆಗೂ ಸುಮಾರು 25 ಲಕ್ಷ ಫೋನುಗಳನ್ನು ಬಡ ಮಹಿಳೆಯರಿಗೆ ವಿತರಿಸಲಾಗಿತ್ತು. ಮೊದಲ ಹಂತದಲ್ಲಿ, ವಲಸೆ ಕುಟುಂಬಗಳಿಂದ ಬಂದ 12ನೇ ತರಗತಿ ಓದುತ್ತಿರುವ ಯುವತಿಯರಿಗೆ ಹಾಗೂ ಬಾಲಕಿಯರಿಗೆ ಹಂಚಲಾಗಿತ್ತು.
ಭಾರತೀಯ ಜನತಾ ಪಕ್ಷದ ಈಗಿನ ಭಜನ್ ಲಾಲ್ ಶರ್ಮಾ ಅವರ ಸರ್ಕಾರವು "ಯೋಜನೆಯ ಪ್ರಯೋಜನಗಳನ್ನು ಪರಿಶೀಲಿಸುವವರೆಗೆ" ಕಾರ್ಯಕ್ರಮವನ್ನು ತಡೆಹಿಡಿದಿದೆ. ಪ್ರಮಾಣವಚನ ಸ್ವೀಕರಿಸಿದ ಒಂದು ತಿಂಗಳ ನಂತರ ಅವರು ತೆಗೆದುಕೊಂಡ ಮೊದಲ ನಿರ್ಧಾರಗಳಲ್ಲಿ ಇದೂ ಒಂದಾಗಿದೆ. ಈ ಯೋಜನೆಯನ್ನು ಪುನರರಾಂಭಿಸುವ ಸಾಧ್ಯತೆಯಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಹೆಚ್ಚಿನ ಮಹಿಳೆಯರಿಗೆ ತಮ್ಮ ಗಳಿಕೆಯ ಮೇಲಿನ ನಿಯಂತ್ರಣದ ಕೊರತೆಯು ಅವರು ಎದುರಿಸುತ್ತಿರುವ ವಾಡಿಕೆಯ ಲಿಂಗ, ಲೈಂಗಿಕ ದೌರ್ಜನ್ಯ ಮತ್ತು ಪರಿತ್ಯಕ್ತತತೆಗೆ ಕಾರಣವಾಗುತ್ತದೆ. ಓದಿ: ಬಾಣಸವಾಡ: ಅಪಹರಣ, ಕೌಟುಂಬಿಕ ಬಂಧನ ಮತ್ತು ಹಿಂಸೆ
“ನಾನು ಗೋಧಿಯನ್ನು ಸ್ವಚ್ಛಗೊಳಿಸಿ ಇಟ್ಟಿದ್ದೆ. ಅವರ ಅದರ ಜೊತೆಗೆ 5-6 ಕಿಲೋ ಜೋಳದ ಹಿಟ್ಟನ್ನೂ ತೆಗೆದುಕೊಂಡು ಹೋದರು” ಎಂದು ಕುಶಾಲಗಢ ಬ್ಲಾಕ್ ಚುರಾಡಾದಲ್ಲಿರುವ ತಮ್ಮ ಮನೆಯಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿರುವ ಭಿಲ್ ಆದಿವಾಸಿ ಸಂಗೀತಾ ನೆನಪಿಸಿಕೊಳ್ಳುತ್ತಾರೆ. ಮದುವೆಯಾ ನಂತರ ಸಂಗೀತಾ ತನ್ನ ಪತಿಯೊಂದಿಗೆ ಸೂರತ್ ನಗರಕ್ಕೆ ವಲಸೆ ಹೋಗಿದ್ದರು.
“ನಾನು ನಿರ್ಮಾಣ ಕಾರ್ಯದಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದೆ” ಎನ್ನುವ ಅವರು ತನ್ನ ಸಂಪಾದನೆ ಗಂಡನ ಕೈ ಸೇರುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ. “ನನಗೆ ಅಲ್ಲಿರುವುದು ಇಷ್ಟವಾಗುತ್ತಿರಲಿಲ್ಲ.” ಮಕ್ಕಳು ಹುಟ್ಟಿದ ನಂತರ - ಅವರಿಗೆ ಏಳು, ಐದು ಮತ್ತು ನಾಲ್ಕು ವರ್ಷದ ಮೂವರು ಗಂಡು ಮಕ್ಕಳಿದ್ದಾರೆ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದರು. "ನಾನು ಮಕ್ಕಳು ಮತ್ತು ಮನೆಯನ್ನು ನೋಡಿಕೊಳ್ಳುತ್ತಿದ್ದೆ."
ಈಗ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ, ಅವರು ತನ್ನ ಗಂಡನನ್ನು ನೋಡಿಲ್ಲ, ಅಥವಾ ಅವನಿಂದ ಯಾವುದೇ ಹಣವನ್ನು ಸ್ವೀಕರಿಸಿಲ್ಲ. "ನನ್ನ ಮಕ್ಕಳಿಗೆ [ಗಂಡನ ಮನೆಯಲ್ಲಿ] ಊಟಕ್ಕೆ ಇಲ್ಲದ ಕಾರಣ ನಾನು ನನ್ನ ಹೆತ್ತವರ ಮನೆಗೆ ಬಂದಿದ್ದೇನೆ."
ಅಂತಿಮವಾಗಿ, ಈ ವರ್ಷದ ಜನವರಿಯಲ್ಲಿ (2024) ಅವರು ಪ್ರಕರಣ ದಾಖಲಿಸಲು ಕುಶಾಲಗಢದ ಪೊಲೀಸ್ ಠಾಣೆಗೆ ಹೋದರು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) 2020ರ ವರದಿಯ ಪ್ರಕಾರ, ರಾಜಸ್ಥಾನವು ದೇಶದಲ್ಲಿ ಮಹಿಳೆಯರ ವಿರುದ್ಧದ (ಪತಿ ಅಥವಾ ಸಂಬಂಧಿಕರಿಂದ) ಕ್ರೌರ್ಯಗಳಿಗೆ ಸಂಬಂಧಿಸಿದ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸುವ ರಾಜ್ಯಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದೆ.
ಕುಶಾಲಗಢದ ಪೊಲೀಸ್ ಠಾಣೆಯಲ್ಲಿ, ಪರಿಹಾರವನ್ನು ಕೋರಿ ಬರುವ ಮಹಿಳೆಯರ ಸಂಖ್ಯೆ ಮಾತ್ರ ಹೆಚ್ಚುತ್ತಿದೆ ಎಂದು ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಳ್ಳಿಯ ಪುರುಷರ ಗುಂಪಾದ ಬಂಜಾಡಿಯಾ ಪೊಲೀಸರು ಊರಿನಲ್ಲೇ ಪ್ರಕರಣಗಳನ್ನು ಇತ್ಯರ್ಥಗೊಳಿಸಲಯ ಬಯಸುವುದರಿಂದ ಹೆಚ್ಚಿನ ಪ್ರಕರಣಗಳು ತಮ್ಮನ್ನು ತಲುಪುವುದಿಲ್ಲ ಎಂದು ಅವರು ಒಪ್ಪಿಕೊಳ್ಳುತ್ತಾರೆ. "ಬಂಜಾಡಿಯಾ ಎರಡೂ ಕಡೆಯಿಂದ ಹಣವನ್ನು ತೆಗೆದುಕೊಳ್ಳುತ್ತಾರೆ" ಎಂದು ನಿವಾಸಿಯೊಬ್ಬರು ಹೇಳುತ್ತಾರೆ. "ನ್ಯಾಯ ಎನ್ನುವುದು ಕಣ್ಣೊರೆಸುವ ಕೆಲಸ, ಮತ್ತು ಮಹಿಳೆಯರಿಗೆ ಎಂದಿಗೂ ಸಿಗಬೇಕಾದ ನ್ಯಾಯ ಸಿಗುವುದಿಲ್ಲ."
ತನ್ನ ಪತಿ ಬೇರೊಬ್ಬ ಮಹಿಳೆಯೊಂದಿಗೆ ಇದ್ದಾನೆ ಎಂದು ಸಂಬಂಧಿಕರು ಹೇಳುತ್ತಿರುವುದರಿಂದ ಸಂಗೀತಾ ಅವರ ದುಃಖ ಹೆಚ್ಚುತ್ತಿದೆ. "ಆ ವ್ಯಕ್ತಿ ನನ್ನ ಮಕ್ಕಳನ್ನು ನೋಯಿಸಿದ್ದಾನೆ, ಒಂದು ವರ್ಷದಿಂದ ಅವರನ್ನು ನೋಡಲು ಬರುತ್ತಿಲ್ಲ ಎಂದು ನನಗೆ ಬೇಸರವಾಗಿದೆ. ಮಕ್ಕಳು ನನ್ನ ಬಳಿ 'ಅವನು ಸತ್ತಿದ್ದಾರೆಯೇ?' ಎಂದು ಕೇಳುತ್ತಾರೆ. ನನ್ನ ಹಿರಿಯ ಮಗ ಅಪ್ಪನನ್ನು ನಿಂದಿಸುತ್ತಾನೆ. ಮತ್ತು 'ಅಮ್ಮಾ, ಪೊಲೀಸರು ಅವನನ್ನು ಹಿಡಿದರೆ ನೀನು ಅವನಿಗೆ ಹೊಡೆಯಬೇಕು!' ಎಂದು ಹೇಳುತ್ತಾನೆ" ಎಂದು ಅವರು ಮುಖದ ಮೇಲೊಂದು ಸಣ್ಣ ನಗುವಿನೊಂದಿಗೆ ಹೇಳುತ್ತಾರೆ.
*****
ಖೇರ್ಪುರದ ನಿರ್ಜನ ಪಂಚಾಯತ್ ಕಚೇರಿಯಲ್ಲಿ ಶನಿವಾರ ಮಧ್ಯಾಹ್ನ, 27 ವರ್ಷದ ಸಾಮಾಜಿಕ ಕಾರ್ಯಕರ್ತರಾದ ಮೇನಕಾ ದಾಮೋರ್ ಕುಶಾಲಗಢ ಬ್ಲಾಕಿಗೆ ಸೇರಿದ ಐದು ಪಂಚಾಯತುಗಳ ಯುವತಿಯರೊಂದಿಗೆ ಮಾತನಾಡುತ್ತಿದ್ದರು.
"ನಿಮ್ಮ ಸಪ್ನಾ [ಕನಸು] ಏನು?" ಎಂದು ಅವರು ತಮ್ಮ ಸುತ್ತಲೂ ವೃತ್ತಾಕಾರದಲ್ಲಿ ಕುಳಿತಿದ್ದ 20 ಹುಡುಗಿಯರನ್ನು ಉದ್ದೇಶಿಸಿ ಕೇಳಿದರು. ಅವರೆಲ್ಲರೂ ವಲಸಿಗ ಹೆಣ್ಣುಮಕ್ಕಳು, ಎಲ್ಲರೂ ತಮ್ಮ ಹೆತ್ತವರೊಂದಿಗೆ ಪ್ರಯಾಣಿಸಿದ್ದಾರೆ ಮತ್ತು ಮತ್ತೆ ಹೋಗುವ ಸಾಧ್ಯತೆಯಿದೆ. "ನಾವು ಶಾಲೆಗೆ ಹೋದರೂ, ಕೊನೆಗೆ ವಲಸೆ ಹೋಗುವುದು ತಪ್ಪುವುದಿಲ್ಲ ಎಂದು ಅವರು ನನಗೆ ಹೇಳುತ್ತಾರೆ" ಎಂದು ಯುವತಿಯರಿಗಾಗಿ ಕಿಶೋರಿ ಶ್ರಮಿಕ್ ಕಾರ್ಯಕ್ರಮವನ್ನು ನಿರ್ವಹಿಸುವ ಮೇನಕಾ ಹೇಳುತ್ತಾರೆ.
ಈ ಮಕ್ಕಳು ವಲಸೆಯನ್ನು ಮೀರಿದ ಭವಿಷ್ಯವನ್ನು ನೋಡಬೇಕೆನ್ನುವುದು ಅವರ ಬಯಕೆ. ವಾಗ್ಡಿ ಮತ್ತು ಹಿಂದಿ ಭಾಷೆಗಳಲ್ಲಿ ಮಾತನಾಡಿದ ಅವರು ಅವರು ಒಂದಷ್ಟು ವೃತ್ತಿಗಳ ಆಯ್ಕೆಗಳನ್ನು ಆ ಹುಡುಗಿಯರ ಮುಂದಿಟ್ಟರು. ಕ್ಯಾಮೆರಾಮನ್, ವೇಟ್ ಲಿಫ್ಟರ್, ಡ್ರೆಸ್ ಡಿಸೈನರ್, ಸ್ಕೇಟ್ಬೋರ್ಡರ್, ಶಿಕ್ಷಕ ಮತ್ತು ಎಂಜಿನಿಯರ್ ಸೇರಿದಂತೆ ವಿವಿಧ ವೃತ್ತಿಗೆ ಸೇರಿದ ಜನರ ಚಿತ್ರಗಳನ್ನು ಹೊಂದಿರುವ ಕಾರ್ಡುಗಳ ಅವರ ಕೈಯಲ್ಲಿದ್ದವು. "ನೀವು ಏನು ಬೇಕಾದರೂ ಆಗಬಹುದು. ಮತ್ತು ಅದಕ್ಕಾಗಿ ನೀವು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು" ಎಂದು ಅವರು ಅಲ್ಲಿದ್ದ ದೇದಿಪ್ಯಮಾನ ಮುಖಗಳನ್ನು ಹುರಿದುಂಬಿಸಿದರು.
“ವಲಸೆಯೊಂದೇ ಆಯ್ಕೆಯಲ್ಲ.”
ಅನುವಾದ: ಶಂಕರ. ಎನ್. ಕೆಂಚನೂರು