ಲಾಡ್ ಹೈಕೋ ಅತ್ಯಂತ ಸರಳವಾಗಿ ತಯಾರಿಸುವ ಒಂದು ಅಡುಗೆ. ಇದನ್ನು ತಯಾರಿಸಲು ಕೇವಲ ಎರಡು ಸಾಮಗ್ರಿಗಳು ಇದ್ದರೆ ಸಾಕು - ಬುಲಮ್ (ಉಪ್ಪು) ಮತ್ತು ಸಸಾಂಗ್ (ಅರಿಶಿನ)]. ಆದರೆ ನಿಜವಾದ ಸವಾಲು ಇರುವುದು ಇದನ್ನು ತಯಾರಿಸುವ ವಿಧಾನದಲ್ಲಿ ಎಂದು ಅಡುಗೆಯವರು ಹೇಳುತ್ತಾರೆ.
ಅಡುಗೆ ತಯಾರಿಸುವ ಜಾರ್ಖಂಡ್ನ ಹೋ ಆದಿವಾಸಿ ಬಿರ್ಸಾ ಹೆಂಬ್ರೋಮ್. ಲಾಡ್ ಹೈಕೋ ಇಲ್ಲದೆ ಮಾನ್ಸೂನ್ ಕಳೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಅವರು ಈ ಸಾಂಪ್ರದಾಯಿಕ ಮೀನಿನ ಅಡುಗೆ ತಯಾರಿಸುವುದನ್ನು ತಮ್ಮ ಮುದೈ (ಹೆತ್ತವರಿಂದ) ಯಿಂದ ಕಲಿತರು.
71 ವರ್ಷ ಪ್ರಾಯದ ಈ ಮೀನುಗಾರ ಮತ್ತು ರೈತ ಖೋಂಟ್ಪಾನಿ ಬ್ಲಾಕ್ನ ಜಾಂಕೋಸಾಸನ್ ಗ್ರಾಮದಲ್ಲಿ ವಾಸಿಸುತ್ತಾರೆ. ಇವರ ತಾಯಿನುಡಿ ಹೋ. ಇದು ಸಮುದಾಯದ ಜನರು ಮಾತನಾಡುವ ಆಸ್ಟ್ರೋಯಾಸಿಯಾಟಿಕ್ ಬುಡಕಟ್ಟು ಭಾಷೆ. 2013 ರ ಕೊನೆಯ ಜನಗಣತಿಯ ಪ್ರಕಾರ ಜಾರ್ಖಂಡ್ನಲ್ಲಿ ಈ ಸಮುದಾಯದ ಜನಸಂಖ್ಯೆ ಕೇವಲ ಒಂಬತ್ತು ಲಕ್ಷ ಇತ್ತು. ಕಡಿಮೆ ಸಂಖ್ಯೆಯಲ್ಲಿ ಹೋ ಸಮುದಾಯದವರು ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ವಾಸಿಸುತ್ತಿದ್ದಾರೆ ( ಭಾರತದಲ್ಲಿನ ಪರಿಶಿಷ್ಟ ಪಂಗಡಗಳ ಅಂಕಿಅಂಶಗಳ ವಿವರ , 2013).
ಬಿರ್ಸಾ ಮಾನ್ಸೂನ್ ಸಮಯದಲ್ಲಿ ಹತ್ತಿರದ ನೀರು ತುಂಬಿದ ಗದ್ದೆಗಳಿಂದ ತಾಜಾ ಹಾಡ್ ಹೈಕೋ (ಪೂಲ್ ಬಾರ್ಬ್), ಇಚೆ ಹೈಕೋ (ಸೀಗಡಿಗಳು), ಬಮ್ ಬುಯಿ, ದಾಂಡಿಕೆ ಮತ್ತು ದುಡಿ ಮೀನುಗಳನ್ನು ಹಿಡಿದು ತಂದು, ಅವುಗಳನ್ನು ಸ್ವಚ್ಚಮಾಡುತ್ತಾರೆ. ನಂತರ, ಅವರು ಅವುಗಳನ್ನು ಒಂದು ಕಾಕರು ಪಟ್ಟಾ (ಕುಂಬಳಕಾಯಿ ಎಲೆಗಳು) ಮೇಲೆ ಇಡುತ್ತಾರೆ. ಸರಿಯಾದ ಪ್ರಮಾಣದಲ್ಲಿ ಉಪ್ಪು ಮತ್ತು ಅರಿಶಿನವನ್ನು ಬೆರೆಸುವುದು ತುಂಬಾ ಮುಖ್ಯ, “ತುಂಬಾ ಹೆಚ್ಚು ಹಾಕಿದರೆ ಉಪ್ಪಾಗುತ್ತದೆ ಮತ್ತು ತುಂಬಾ ಕಡಿಮೆ ಹಾಕಿದರೆ ಸಪ್ಪೆಯಾಗುತ್ತದೆ. ಒಳ್ಳೆಯ ರುಚಿ ಬರಲು ಸರಿಯಾಗಿ ಹಾಕಬೇಕು!" ಹೆಂಬ್ರೊಮ್ ಹೇಳುತ್ತಾರೆ.
ಮೀನು ಸುಟ್ಟು ಕರಕಲಾಗದಂತೆ ತಡೆಯಲು ತೆಳುವಾದ ಕುಂಬಳಕಾಯಿ ಎಲೆಯ ಮೇಲೆ ದಪ್ಪನೆಯ ಸಾಲ್ ಎಲೆಗಳನ್ನು ಸುತ್ತುತ್ತಾರೆ. ಇದು ಕುಂಬಳಕಾಯಿ ಎಲೆ ಮತ್ತು ಹಸಿ ಮೀನುಗಳನ್ನು ಕರಕಲಾಗದಂತೆ ರಕ್ಷಿಸುತ್ತದೆ ಎಂದು ಅವರು ಹೇಳುತ್ತಾರೆ. ಮೀನು ಬೆಂದ ಮೇಲೆ ಅದನ್ನು ಕುಂಬಳಕಾಯಿ ಎಲೆಗಳ ಸಮೇತ ತಿನ್ನಲು ಇಷ್ಟಪಡುತ್ತಾರೆ. “ಸಾಮಾನ್ಯವಾಗಿ ಮೀನು ಮುಚ್ಚಲು ಬಳಸುವ ಎಲೆಗಳನ್ನು ಬಿಸಾಡುತ್ತೇನೆ, ಆದರೆ ಇವು ಕುಂಬಳಕಾಯಿ ಎಲೆಗಳು, ಆದ್ದರಿಂದ ನಾನು ಅದನ್ನು ತಿನ್ನುತ್ತೇನೆ, ಸರಿಯಾಗಿ ಮಾಡಿದರೆ ಎಲೆಗಳು ಸಹ ರುಚಿಯಾಗಿರುತ್ತವೆ,” ಎಂದು ಅವರು ವಿವರಿಸುತ್ತಾರೆ.
ಈ ವೀಡಿಯೊಗಾಗಿ ಹೋ ಭಾಷೆಯಿಂದ ಹಿಂದಿಗೆ ಅನುವಾದಿಸಿದ್ದಕ್ಕಾಗಿ ಅರ್ಮಾನ್ ಜಮುದಾ ಅವರಿಗೆ ಪರಿ ಧನ್ಯವಾದಗಳನ್ನು ಸಲ್ಲಿಸುತ್ತದೆ .
ಅಳಿವಿನಂಚಿನಲ್ಲಿರುವ ಭಾಷೆಗಳ ಬಗೆಗಿನ ಪರಿಯ ಈ ಯೋಜನೆಯ ಮೂಲಕ ಭಾರತದಲ್ಲಿ ದುರ್ಬಲ ಭಾಷೆಗಳನ್ನು ಮಾತನಾಡುವ ಸಾಮಾನ್ಯ ಜನರ ಧ್ವನಿಗಳನ್ನು ಮತ್ತು ಲೈವ್ ಅನುಭವಗಳನ್ನು ದಾಖಲಿಸಲಾಗುತ್ತದೆ.
ಹೋ ಭಾಷೆ ಮಧ್ಯ ಭಾರತ ಮತ್ತು ಪೂರ್ವ ಭಾರತದ ಆದಿವಾಸಿಗಳು ಮಾತನಾಡುವ ಆಸ್ಟ್ರೋಯಾಸಿಯಾಟಿಕ್ ಭಾಷೆಗಳ ಮುಂಡಾ ಶಾಖೆಗೆ ಸೇರಿದೆ . ಹೋ ಭಾಷೆಯನ್ನು ಯುನೆಸ್ಕೋದ ಅಟ್ಲಾಸ್ ಆಫ್ ಲ್ಯಾಂಗ್ವೇಜ್ನಲ್ಲಿ ಭಾರತದಲ್ಲಿರುವ ಸಂಭಾವ್ಯ ದುರ್ಬಲ ಭಾಷೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಇದು ಜಾರ್ಖಂಡ್ ನ ಪಶ್ಚಿಮ ಸಿಂಗ್ ಭೂಮ್ ಜಿಲ್ಲೆಯಲ್ಲಿ ಮಾತನಾಡುವ ಭಾಷೆಯ ದಾಖಲಾತಿಯಾಗಿದೆ.
ಅನುವಾದಕರು: ಚರಣ್ ಐವರ್ನಾಡು