“ಓಶೋಬ್ ವೋಟ್-ಟೋಟ್ ಚ್ಚಾರೋ. ಸಂಧ್ಯಾ ನಾಮರ್ ಆಗೆ ಅನೇಕ್ ಕಾಜ್ ಗೋ… [ವೋಟು-ಗೀಟು ಬಿಡಿ. ಕತ್ತಲಾಗೋ ಮೊದಲು ಮುಗಿಸೋದಕ್ಕೆ ಸಾವಿರ ಕೆಲಸಗಳಿವೆ…]” ಬನ್ನಿ, ವಾಸನೆಯನ್ನು ಸಹಿಸಲು ಸಾಧ್ಯವಾದರೆ ಇಲ್ಲಿ ನಮ್ಮೊಂದಿಗೆ ಕುಳಿತುಕೊಳ್ಳಿ" ಎಂದು ಮಾಲತಿ ಮಾಲ್ ತನ್ನ ಪಕ್ಕದ ನೆಲದ ಮೇಲಿನ ಜಾಗವನ್ನು ತೋರಿಸುತ್ತಾ ಹೇಳಿದರು. ಬಿಸಿಲು ಮತ್ತು ಧೂಳಿನ ಕುರಿತು ತಲೆ ಕೆಡಿಸಿಕೊಳ್ಳದೆ ದೊಡ್ಡ ಈರುಳ್ಳಿ ರಾಶಿಯ ಸುತ್ತ ಕೆಲಸ ಮಾಡುತ್ತಿದ್ದ ಮಹಿಳೆಯರ ಗುಂಪಿನೊಡನೆ ಸೇರಿಕೊಳ್ಳುವಂತೆ ಅವರು ನನ್ನನ್ನು ಆಹ್ವಾನಿಸಿದರು. ನಾನು ಸುಮಾರು ಒಂದು ವಾರದಿಂದ ಚುನಾವಣೆಗಳ ಕುರಿತು ಪ್ರಶ್ನಿಸುತ್ತಾ ಈ ಹಳ್ಳಿಯ ಮಹಿಳೆಯರ ಸುತ್ತ ಸುತ್ತುತ್ತಿದ್ದೆ.
ಅದು ಎಪ್ರಿಲ್ ತಿಂಗಳ ಆರಂಭಿಕ ದಿನಗಳು. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಈ ಭಾಗದಲ್ಲಿ ಬಿಸಿಲು ಪ್ರತಿದಿನ 41 ಡಿಗ್ರಿಯವರೆಗೆ ತಲುಪುತ್ತಿತ್ತು. ನಾನು ಇದ್ದ ಮಾಲ್ ಪಹಾಡಿಯಾ ಗುಡಿಸಲಿನಲ್ಲಿ ಸಂಜೆ 5 ಗಂಟೆಯಾದರೂ ಸುಡುವ ಬಿಸಿಲಿನ ಅನುಭವವಾಗುತ್ತಿತ್ತು. ಈ ಪ್ರದೇಶದಲ್ಲಿನ ಮರಗಳ ಒಂದು ಎಲೆಯೂ ಅಲುಗಾಡುತ್ತಿರಲಿಲ್ಲ. ತಾಜಾ ಈರುಳ್ಳಿಯ ಗಾಢ ಕಟು ವಾಸನೆಯಷ್ಟೇ ಗಾಳಿಯಲ್ಲಿ ತೇಲುತ್ತಿತ್ತು.
ಈ ಮಹಿಳೆಯರು ತಮ್ಮ ಮನೆಗಳಿಂದ ಕೇವಲ 50 ಮೀಟರ್ ದೂರದಲ್ಲಿರುವ ತೆರದ ಸ್ಥಳದಲ್ಲಿ ರಾಶಿ ಹಾಕಲಾಗಿದ್ದ ಈರುಳ್ಳಿ ಗುಡ್ಡೆಯ ಸುತ್ತಲೂ ಅರ್ಧ ವೃತ್ತಾಕಾರದಲ್ಲಿ ಕುಳಿತಿದ್ದರು. ಅವರು ಅಲ್ಲಿ ಕುಡುಗೋಲಿನಿಂದ ಈರುಳ್ಳಿಯನ್ನು ಅದರ ಗಿಡದಿಂದ ಬೇರ್ಪಡಿಸುವ ಕೆಲಸವನ್ನು ಮಾಡುತ್ತಿದ್ದರು. ಮಧ್ಯಾಹ್ನದ ಬಿರುಬಿಸಿಲು ಮತ್ತು ಈರುಳ್ಳಿಯಿಂದ ಚಿಮ್ಮುತ್ತಿದ್ದ ಆವಿಯ ರಸದಿಂದಾಗಿ ಅವರ ಮುಖವು ಕಠಿಣ ಶ್ರಮವಷ್ಟೇ ತರಬಹುದಾದ ಹೊಳಪೊಂದರಲ್ಲಿ ಹೊಳೆಯುತ್ತಿತ್ತು.
“ಇದು ನಮ್ಮ ದೇಶ್ [ಊರು] ಅಲ್ಲ. ಕಳೆದ ಏಳೆಂಟು ವರ್ಷಗಳಿಂದ ನಾವು ಇಲ್ಲಿಗೆ ಬರುತ್ತಿದ್ದೇವೆ” ಎಂದು ಮಾಲತಿ (60) ಹೇಳುತ್ತಾರೆ. ಅವರು ಮತ್ತು ಗುಂಪಿನಲ್ಲಿದ್ದ ಇತರ ಮಹಿಳೆಯರು ಮಾಲ್ ಪಹಾಡಿ ಆದಿವಾಸಿ ಸಮುದಾಯಕ್ಕೆ ಸೇರಿದವರು. ಈ ರಾಜ್ಯದಲ್ಲಿ ಅವರನ್ನು ಪರಿಶಿಷ್ಟ ಪಂಗಡಗಳಡಿ ಪಟ್ಟಿ ಮಾಡಲಾಗಿದೆ. ಮತ್ತು ಇದು ಇಲ್ಲಿನ ಅತ್ಯಂತ ದುರ್ಬಲ ಬುಡಕಟ್ಟು ಗುಂಪುಗಳಲ್ಲಿ ಒಂದು.
“ನಮ್ಮ ಊರು ಗೋವಾಸ್ ಕಾಳಿಕಾಪುರ. ಅಲ್ಲಿ ಯಾವುದೇ ಕೆಲಸ ಸಿಗುವುದಿಲ್ಲ” ಎಂದು ಅವರು ಹೇಳುತ್ತಾರೆ. ಮುರ್ಷಿದಾಬಾದ್ ಜಿಲ್ಲೆಯ ರಾಣಿನಗರ 1 ಬ್ಲಾಕ್ ಗೋವಾದ 30ಕ್ಕೂ ಹೆಚ್ಚು ಕುಟುಂಬಗಳು ಈಗ ಬಿಶುಪುರ್‌ಕುರ್ ಗ್ರಾಮದ ಅಂಚಿನಲ್ಲಿ ತಾತ್ಕಾಲಿಕ ಗುಡಿಸಲುಗಳ ಗುಂಪಿನಲ್ಲಿ ವಾಸಿಸುತ್ತಿತ್ತಾ ಸ್ಥಳೀಯ ಹೊಲಗಳಲ್ಲಿ ಕೆಲಸ ಮಾಡುತ್ತಿವೆ.
“ನಮ್ಮ ಊರು ಗೋವಾಸ್ ಕಾಳಿಕಾಪುರ. ಅಲ್ಲಿ ಯಾವುದೇ ಕೆಲಸ ಸಿಗುವುದಿಲ್ಲ” ಎಂದು ಅವರು ಹೇಳುತ್ತಾರೆ. ಮುರ್ಷಿದಾಬಾದ್ ಜಿಲ್ಲೆಯ ರಾಣಿನಗರ 1 ಬ್ಲಾಕ್ ಗೋವಾದ 30ಕ್ಕೂ ಹೆಚ್ಚು ಕುಟುಂಬಗಳು ಈಗ ಬಿಶುಪುರ್‌ಕುರ್ ಗ್ರಾಮದ ಅಂಚಿನಲ್ಲಿ ತಾತ್ಕಾಲಿಕ ಗುಡಿಸಲುಗಳ ಗುಂಪಿನಲ್ಲಿ ವಾಸಿಸುತ್ತಿತ್ತಾ ಸ್ಥಳೀಯ ಹೊಲಗಳಲ್ಲಿ ಕೆಲಸ ಮಾಡುತ್ತಿವೆ.
ರಾಣಿನಗರ ಬ್ಲಾಕ್ 1ರಿಂದ ಬೆಲ್ದಂಗಾ 1ನೇ ಬ್ಲಾಕಿನಲ್ಲಿರುವ ಸ್ಥಳಕ್ಕೆ ಮಾಲ್ ಪಹಾಡಿಯಾ ಮಹಿಳೆಯರ ಅಂತರ ತಾಲ್ಲೂಕು ಮಟ್ಟದಲ್ಲಿ ಪುನರಾವರ್ತಿತ ವಲಸೆಯು ಇಲ್ಲಿನ ವಲಸೆಯ ಅನಿಶ್ಚಿತ ಸ್ವರೂಪವನ್ನು ತೋರಿಸುತ್ತದೆ.
ಮಾಲ್ ಪಹಾರಿಯಾ ಆದಿವಾಸಿಗಳು ಪಶ್ಚಿಮ ಬಂಗಾಳದ ಅನೇಕ ಜಿಲ್ಲೆಗಳಲ್ಲಿ ಚದುರಿದಂತೆ ನೆಲೆಸಿದ್ದಾರೆ, ಮತ್ತು ಮುರ್ಷಿದಾಬಾದ್ ಜಿಲ್ಲೆಯೊಂದೇ ಅವರಲ್ಲಿ 14,064 ಜನರಿಗೆ ನೆಲೆಯಾಗಿದೆ. "ನಮ್ಮ ಸಮುದಾಯದ ಮೂಲ ಸ್ಥಳ ರಾಜಮಹಲ್ ಬೆಟ್ಟಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿದೆ. ನಂತರ ನಮ್ಮ ಜನರು ಜಾರ್ಖಂಡ್ [ರಾಜಮಹಲ್ ಪ್ರದೇಶ ಇರುವ ರಾಜ್ಯ] ಮತ್ತು ಪಶ್ಚಿಮ ಬಂಗಾಳದ ವಿವಿಧ ಪ್ರದೇಶಗಳಿಗೆ ವಲಸೆ ಹೋದರು" ಎಂದು ಜಾರ್ಖಂಡ್ ರಾಜ್ಯದ ದುಮ್ಕಾ ಮೂಲದ ವಿದ್ವಾಂಸ ಮತ್ತು ಸಮುದಾಯ ಕಾರ್ಯಕರ್ತ ರಾಮಜೀವನ್ ಆಹರಿ ಹೇಳುತ್ತಾರೆ.
ಪಶ್ಚಿಮ ಬಂಗಾಳದಲ್ಲಿ ಇವರನ್ನು ಪರಿಶಿಷ್ಟ ಪಂಗಡಗಳಡಿ ಪಟ್ಟಿ ಮಾಡಲಾಗಿದ್ದರೂ, ಜಾರ್ಖಂಡ್ ರಾಜ್ಯದಲ್ಲಿ ಮಾಲ್ ಪಹಾಡಿ ಸಮುದಾಯವನ್ನು ವಿಶೇಷ ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ಎಂದು ಪಟ್ಟಿ ಮಾಡಲಾಗಿದೆಯೆಂದು ರಾಮಜೀವನ್ ಹೇಳುತ್ತಾರೆ. "ಒಂದೇ ಸಮುದಾಯಕ್ಕೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಸ್ಥಾನಮಾನ ನೀಡಿರುವುದು ಸಮುದಾಯದ ದುರ್ಬಲತೆಯ ವಿಷಯದಲ್ಲಿ ಆಯಾ ಸರ್ಕಾರದ ನಿಲುವನ್ನು ಪ್ರತಿಬಿಂಬಿಸುತ್ತದೆ" ಎಂದು ಅವರು ಹೇಳುತ್ತಾರೆ.
“ಇಲ್ಲಿನ ಜನರಿಗೆ ಅವರ ಹೊಲದಲ್ಲಿ ಕೆಲಸ ಮಾಡಲು ಕೆಲಸದವರ ಅಗತ್ಯವಿದೆ” ಎಂದು ಅವರು ತಾವು ಮನೆಯಿಂದ ಇಷ್ಟು ದೂರದ ತಾತ್ಕಾಲಿಕ ನೆಲೆಯಲ್ಲಿ ವಾಸಿಸುವುದಕ್ಕೆ ಕಾರಣವನ್ನು ವಿವರಿಸುತ್ತಾರೆ. “ಬಿತ್ತನೆ ಮತ್ತು ಕೊಯ್ಲಿನ ಸಮಯದಲ್ಲಿ 250 ರೂಪಾಯಿ ಕೂಲಿ ಕೊಡುತ್ತಾರೆ.” ಕೆಲವೊಮ್ಮೆ ಕೆಲವು ಉದಾರ ಮನೋಭಾವದ ರೈತರು ತಾವು ಬೆಳೆದ ಬೆಳೆಯಲ್ಲಿ ಒಂದು ಸಣ್ಣ ಪಾಲನ್ನೂ ಕೊಡುತ್ತಾರೆ ಎಂದು ಅವರು ಹೇಳುತ್ತಾರೆ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ಸ್ಥಳೀಯ ಕಾರ್ಮಿಕರ ಕೊರತೆಯಿದೆ. ಏಕೆಂದರೆ ಇಲ್ಲಿನ ದೊಡ್ಡ ಸಂಖ್ಯೆಯ ಕೂಲಿ ಕಾರ್ಮಿಕರು ಕೆಲಸ ಹುಡುಕಿಕೊಂಡು ಹೊರಗಿನ ಪ್ರದೇಶಗಳಿಗೆ ಹೋಗುತ್ತಾರೆ. ಆದಿವಾಸಿ ರೈತರು ಈ ಕೆಲಸಗಾರರ ಕೊರತೆಯನ್ನು ಒಂದು ಹಂತಕ್ಕೆ ಸರಿದೂಗಿಸುತ್ತಾರೆ. ಬೆಲ್ದಂಗಾ ಬ್ಲಾಕ್ 1ರ ಕೂಲಿಯವರು ದಿನವೊಂದಕ್ಕೆ 600 ರೂಪಾಯಿಗಳ ತನಕ ಕೂಲಿ ಕೇಳುತ್ತಾರೆ. ಅದೇ ಕೆಲಸವನ್ನು ಅಂತರ - ತಾಲ್ಲೂಕು ವಲಸೆ ಆದಿವಾಸಿ ಕೂಲಿ ಹೆಂಗಸರು ಆ ಕೂಲಿಯ ಅರ್ಧದಷ್ಟು ಮೊತ್ತಕ್ಕೆ ಮಾಡಿಕೊಡುತ್ತಾರೆ.
"ಕೊಯ್ಲು ಮಾಡಿದ ಈರುಳ್ಳಿಯನ್ನು ಹೊಲಗಳಿಂದ ಹಳ್ಳಿಗೆ ತಂದ ನಂತರ, ನಾವು ಮುಂದಿನ ಹಂತದ ಕೆಲಸವನ್ನು ಆರಂಭಿಸುತ್ತೇವೆ” ಎಂದು ಅಂಜಲಿ ಮಾಲ್ ವಿವರಿಸಿದರು. ತೆಳ್ಳಗೆ ಕಾಣುವ ಈ ಕಾರ್ಮಿಕ ಯುವತಿಗೆ ಈಗ 19 ವರ್ಷ.
ಅವರು ಬಿಡಿಸಿದ ಈರುಳ್ಳಿಯನ್ನು ಫರಿಯಾಗಳಿಗೆ (ಮಧ್ಯವರ್ತಿಗಳಿಗೆ) ಮಾರಾಟ ಮಾಡಲು ಮತ್ತು ರಾಜ್ಯದೆಲ್ಲೆಡೆಯ ಮತ್ತು ಮತ್ತು ಹೊರಗಿನ ದೂರದ ಸ್ಥಳಗಳಿಗೆ ಸಾಗಿಸಲಾಗುತ್ತದೆ. “ನಾವು ಕುಡುಗೋಲು ಬಳಸಿ ಈರುಳ್ಳಿಯನ್ನು ಗಿಡದಿಂದ ಬೇರ್ಪಡಿಸುತ್ತೇವೆ. ಅದರಲ್ಲಿನ ಸಡಿಲವಾದ ಸಿಪ್ಪೆಗಳು, ಮಣ್ಣು ಮತ್ತು ಬೇರುಗಳನ್ನು ಎಸೆಯುತ್ತೇವೆ. ನಂತರ ಅವುಗಳನ್ನು ಒಟ್ಟುಗೂಡಿಸಿ ಚೀಲಗಳಲ್ಲಿ ತುಂಬುತ್ತೇವೆ." 40 ಕಿಲೋಗ್ರಾಂ ತೂಕದ ಚೀಲಕ್ಕೆ ಅವರು 20 ರೂಪಾಯಿಗಳನ್ನು ಗಳಿಸುತ್ತಾರೆ. “ಹೆಚ್ಚು ಹೆಚ್ಚು ಕೆಲಸ ಮಾಡಿದಷ್ಟೂ ಹೆಚ್ಚು ಸಂಪಾದಿಸಬಹುದು. ಇದೇ ಕಾರಣಕ್ಕಾಗಿ ನಾವು ಎಲ್ಲ ಸಮಯದಲ್ಲೂ ದುಡಿಯುತ್ತೇವೆ. ಈ ಕೆಲಸ ಹೊಲದ ದುಡಿಮೆಯಂತಲ್ಲ.” ಅಲ್ಲಾದರೆ ನಿಗದಿತ ಸಮಯವಿರುತ್ತದೆ ಕೆಲಸಕ್ಕೆ.
ಸಾಧನ್ ಮೊಂಡಲ್, ಸುರೇಶ್ ಮೊಂಡಲ್, ಧೋನು ಮೊಂಡಲ್ ಮತ್ತು ರಾಖೋಹೋರಿ ಬಿಸ್ವಾಸ್ ತಮ್ಮ 40ರ ದಶಕದ ಉತ್ತರಾರ್ಧದಲ್ಲಿರುವ, ಆದಿವಾಸಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಬಿಶುರ್ಪುಕುರ್ ಗ್ರಾಮದ ಕೆಲವು ರೈತರು. ವರ್ಷವಿಡೀ "ಹೊಲದಲ್ಲಿ ಮತ್ತು ಹೊಲದ ಹೊರಗೆ" ಕೃಷಿ ಕಾರ್ಮಿಕರ ಅವಶ್ಯಕತೆಯಿರುತ್ತದೆ ಎಂದು ಅವರು ಹೇಳುತ್ತಾರೆ. ಬೆಳೆ ಹಂಗಾಮಿನಲ್ಲಿ ಈ ಬೇಡಿಕೆ ಉತ್ತುಂಗದಲ್ಲಿರುತ್ತದೆ. ಹೆಚ್ಚಾಗಿ ಮಾಲ್ ಪಹಾಡಿಯಾ ಮತ್ತು ಸಂತಾಲ್ ಆದಿವಾಸಿ ಮಹಿಳೆಯರು ಕೆಲಸಕ್ಕಾಗಿ ಈ ಪ್ರದೇಶಗಳಲ್ಲಿನ ಹಳ್ಳಿಗಳಿಗೆ ಬರುತ್ತಾರೆ ಎಂದು ರೈತರು ನಮಗೆ ಹೇಳಿದರು. ಮತ್ತು ಅವರು ಈ ಬಗ್ಗೆ ಸರ್ವಾನುಮತ ಹೊಂದಿರುವಂತೆ ಕಾಣುತ್ತದೆ: "ಅವರಿಲ್ಲದೆ, ನಾವು ಬೇಸಾಯ ಮಾಡುವುದು ಸಾಧ್ಯವೇ ಇಲ್ಲ."
ಈ ಕೆಲಸ ಬಹಳಷ್ಟು ಸಮಯವನ್ನು ಬೇಡುತ್ತದೆ. “ನಮಗೆ ಮಧ್ಯಾಹ್ನದ ಅಡುಗೆಗೂ ಸಮಯ ಸಿಗುವುದಿಲ್ಲ…” ಎನ್ನುವಾಗಲೂ ಮಾಲತಿಯವರ ಕೈಗಳು ಈರುಳ್ಳಿ ಬಿಡಿಸುವುದರಲ್ಲಿ ನಿರತವಾಗಿದ್ದವು. “ಬೇಲಾ ಹೋಯೇ ಜಾಯ್. ಕೋನೊಮೊಟೆ ದುಟೋ ಚಲ್ ಫುಟಿಯೇ ನಿ. ಖಬರ್ -ದಬಾರೆರ್ ಅನೇಕ್ ದಾಮ್ ಗೋ. “ಊಟ ಮಾಡುವಾಗ ಬಹಳ ಹೊತ್ತಾಗಿರುತ್ತದೆ. ಹೇಗೋ ಒಂದಷ್ಟು ಅನ್ನ ಮಾಡಿಕೊಳ್ಳುತ್ತೇವೆ. ಈಗ ಆಹಾರ ಪದಾರ್ಥಗಳು ಬಹಳ ದುಬಾರಿಯಾಗಿವೆ].” ಈರುಳ್ಳಿ ಕೆಲಸ ಮುಗಿದ ನಂತರ ಹೆಂಗಸರು ಗಡಿಬಿಡಿಯಿಂದ ಮನೆಕೆಲಸಗಳಿಗೆ ಓಡಬೇಕಾಗುತ್ತದೆ: ಗುಡಿಸುವುದು, ತೊಳೆಯುವುದು, ಸ್ವಚ್ಛಗೊಳಿಸುವುದು, ಮತ್ತೆ ಸ್ನಾನ ಮಾಡಿ ಗಡಿಬಿಡಿಯಿಂದ ರಾತ್ರಿಯ ಅಡುಗೆ ಮಾಡುವುದು.
“ಸದಾ ನಮ್ಮನ್ನು ದಣಿವು ಕಾಡುತ್ತಿರುತ್ತದೆ” ಎಂದು ಅವರು ಹೇಳುತ್ತಾರೆ. ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್ -5) ಇದಕ್ಕೆ ಕಾರಣವನ್ನು ತಿಳಿಸುತ್ತದೆ. ಇದು ಜಿಲ್ಲೆಯ ಎಲ್ಲಾ ಮಹಿಳೆಯರು ಮತ್ತು ಮಕ್ಕಳಲ್ಲಿ ರಕ್ತಹೀನತೆಯ ಮಟ್ಟ ಹೆಚ್ಚುತ್ತಿರುವುದಾಗಿ ಹೇಳುತ್ತದೆ. ಅಲ್ಲದೆ, ಇಲ್ಲಿನ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 40ರಷ್ಟು ಮಕ್ಕಳು ಕುಂಠಿತ ಬೆಳವಣಿಗೆ ಹೊಂದಿದ್ದಾರೆ.
ಅವರಿಗೆ ಇಲ್ಲಿ ಪಡಿತರ ದೊರೆಯುತ್ತದೆಯೇ?
“ಇಲ್ಲ, ನಮ್ಮ ಪಡಿತರ ಚೀಟಿ ಹಳ್ಳಿಯಲ್ಲಿದೆ. ಅಲ್ಲಿ ನಮ್ಮ ಕುಟುಂಬದವರು ಪಡಿತರ ತೆಗೆದುಕೊಳ್ಳುತ್ತಾರೆ. ನಾವು ಊರಿಗೆ ಹೋದ ಸಂದರ್ಭದಲ್ಲಿ ಒಂದಷ್ಟು ಆಹಾರ ಧಾನ್ಯಗಳನ್ನು ನಮ್ಮೊಂದಿಗೆ ತರುತ್ತೇವೆ” ಎಂದು ಮಾಲತಿ ವಿವರಿಸುತ್ತಾರೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಸಿಗುವ ಆಹಾರ ಧಾನ್ಯಗಳ ಕುರಿತು ಅವರು ವಿವರಿಸುತ್ತಿದ್ದಾರೆ. “ನಾವು ಆದಷ್ಟೂ ಇಲ್ಲಿ ಖರ್ಚು ಮಾಡದಿರಲು ಪ್ರಯತ್ನಿಸುತ್ತೇವೆ. ಆ ಮೂಲಕ ಸಾಧ್ಯವಿರುವಷ್ಟು ಹಣವನ್ನು ಮನೆಗಾಗಿ ಉಳಿಸುತ್ತೇವೆ” ಎಂದು ಅವರು ಹೇಳುತ್ತಾರೆ.
ಒನ್ ನೇಷನ್ ಒನ್ ರೇಷನ್ ಕಾರ್ಡ್ (ಒಎನ್ಒಆರ್‌ಸಿ) ರೀತಿಯ ರಾಷ್ಟ್ರವ್ಯಾಪಿ ಆಹಾರ ಭದ್ರತಾ ಯೋಜನೆಗಳು ವರಂತಹ ಆಂತರಿಕ ವಲಸಿಗರಿಗೆ ಪ್ರಯೋಜನವನ್ನು ನೀಡುತ್ತವೆ ಎಂದು ತಿಳಿಸಿದಾಗ ಅವರು ಅದನ್ನು ಕೇಳಿ ಆಶ್ಚರ್ಯಕ್ಕೆ ಒಳಗಾದರು. "ಈ ಬಗ್ಗೆ ನಮಗೆ ಯಾರೂ ಹೇಳಿಲ್ಲ. ನಾವು ವಿದ್ಯಾವಂತರಲ್ಲ. ನಮಗೆ ಹೇಗೆ ತಿಳಿಯುತ್ತದೆ?" ಎಂದು ಮಾಲತಿ ಕೇಳುತ್ತಾರೆ.
“ನಾನು ಶಾಲೆಯ ಮೆಟ್ಟಿಲು ಹತ್ತಿದವಳಲ್ಲ” ಎನ್ನುತ್ತಾರೆ ಅಂಜಲಿ. “ನನಗೆ ಕೇವಲ ಐದು ವರ್ಷವಿರುವಾಗ ಅಮ್ಮ ತೀರಿಕೊಂಡರು. ತಂದೆ ನಾವು ಮೂವರು ಹೆಣ್ಣುಮಕ್ಕಳನ್ನು ಬಿಟ್ಟು ಹೋದರು. ನಮ್ಮ ನೆರೆಹೊರೆಯವರೇ ನಮ್ಮನ್ನು ಸಾಕಿದರು” ಎಂದು ಅವರು ಹೇಳುತ್ತಾರೆ. ಹೀಗಾಗಿ ಮೂವರು ಸಹೋದರಿಯರು ಚಿಕ್ಕ ವಯಸ್ಸಿನಲ್ಲಿಯೇ ಕೃಷಿ ಕಾರ್ಮಿಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಮತ್ತು ಹದಿಹರೆಯದಲ್ಲೇ ಅವರ ಮದುವೆಯೂ ಆಯಿತು. 19 ವರ್ಷದ ಅಂಜಲಿ ಈಗ 3 ವರ್ಷದ ಅಂಕಿತಾ ಎಂಬ ಮಗುವಿನ ತಾಯಿ. “ಎಂದೂ ಶಾಲೆಗೆ ಹೋಗದ ನಾನು ಹೇಗೋ ನಾಮ್ ಸೊಯಿ (ಸಹಿ) ಹಾಕುವುದನ್ನು ಕಲಿತಿದ್ದೇನೆ” ಎಂದು ಅವರು ಹೇಳುತ್ತಾರೆ. ಸಮುದಾಯದ ಹೆಚ್ಚಿನ ಹದಿಹರೆಯದ ಮಕ್ಕಳು ಶಾಲೆಯಿಂದ ಹೊರಗಿದ್ದು, ತನ್ನ ಪೀಳಿಗೆಯ ಬಹಳಷ್ಟು ಯುವಜನರು ಅನಕ್ಷರಸ್ಥರು ಎನ್ನುತ್ತಾರೆ.
“ನನ್ನ ಮಗಳು ನನ್ನಂತೆ ಆಗಬಾರದು. ಹೀಗಾಗಿ ಮುಂದಿನ ವರ್ಷ ಅವಳನ್ನು ಶಾಲೆಗೆ ಸೇರಿಸಬೇಕು ಎಂದುಕೊಂಡಿದ್ದೇನೆ. ಇಲ್ಲದೆ ಹೋದರೆ ಅವಳೂ ಏನನ್ನೂ ಕಲಿಯಲು ಸಾಧ್ಯವಾಗುವುದಿಲ್ಲ” ಎನ್ನುವಾಗ ಅವರ ದನಿಯಲ್ಲಿದ್ದ ಆತಂಕ ಎದ್ದು ಕಾಣುತ್ತಿತ್ತು.
ಯಾವ ಶಾಲೆ? ಬಿಶುರ್‌ಪುಕುರ್ ಪ್ರಾಥಮಿಕ ಶಾಲೆ?
"ಇಲ್ಲ, ನಮ್ಮ ಮಕ್ಕಳು ಇಲ್ಲಿನ ಶಾಲೆಗಳಿಗೆ ಹೋಗುವುದಿಲ್ಲ. ಚಿಕ್ಕ ಮಕ್ಕಳೂ ಖಿಚೂರಿ ಶಾಲೆಗೆ [ಅಂಗನವಾಡಿ] ಹೋಗುವುದಿಲ್ಲ" ಎಂದು ಅವರು ಹೇಳುತ್ತಾರೆ. ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿಇ) ಜಾರಿಯಲ್ಲಿದ್ದರೂ ಸಮುದಾಯ ಎದುರಿಸುತ್ತಿರುವ ತಾರತಮ್ಯ ಮತ್ತು ಕಳಂಕ ಅಂಜಲಿಯವರ ಮಾತುಗಳಲ್ಲಿ ಧ್ವನಿಸುತ್ತಿದೆ. “ಇಲ್ಲಿ ನೀವು ಕಾಣುವ ಹೆಚ್ಚಿನ ಮಕ್ಕಳು ಶಾಲೆಗೆ ಹೋಗುವುದಿಲ್ಲ. ಅವರಲ್ಲಿ ಕೆಲವರು ಗೋವಾಸ್ ಕಾಳಿಕಾಪುರ ಶಾಲೆಯ ವಿದ್ಯಾರ್ಥಿಗಳು. ಆದರೆ ಅವರು ಇಲ್ಲಿ ನಮ್ಮ ಸಹಾಯಕ್ಕಾಗಿ ಬರುವ ಕಾರಣ ತರಗತಿಗಳಿಂದ ಹೊರಗುಳಿದಿದ್ದಾರೆ.”
2022ರ ಅಧ್ಯಯನವೊಂದು ಮಾಲ್ ಪಹಾಡಿಯಾ ಸಮುದಾಯದಲ್ಲಿ ಮತ್ತು ವಿಶೇಷವಾಗಿ ಮಹಿಳೆಯರಲ್ಲಿ ಸಾಕ್ಷರತೆಯ ಪ್ರಮಾಣವು ಕ್ರಮವಾಗಿ ಶೇಕಡಾ 49.10 ಮತ್ತು ಶೇಕಡಾ 36.50ರಷ್ಟಿದೆ ಎಂದು ಹೇಳುತ್ತದೆ. ಪಶ್ಚಿಮ ಬಂಗಾಳದಲ್ಲಿ ಆದಿವಾಸಿಗಳ ರಾಜ್ಯವ್ಯಾಪಿ ಸಾಕ್ಷರತಾ ಪ್ರಮಾಣವು ಪುರುಷರಲ್ಲಿ ಶೇಕಡಾ 68.17 ಮತ್ತು ಮಹಿಳೆಯರಲ್ಲಿ ಶೇಕಡಾ 47.71ರಷ್ಟಿದೆ.
ಐದಾರು ವರ್ಷದ ಹೆಣ್ಣು ಮಕ್ಕಳು ಇಲ್ಲಿ ತಮ್ಮ ತಾಯಿ ಅಥವಾ ಅಜ್ಜಿಗೆ ಈರುಳ್ಳಿಯನ್ನು ಹೆಕ್ಕಿ ಬಿದಿರಿನ ಬುಟ್ಟಿಗೆ ಹಾಕಲು ಸಹಾಯ ಮಾಡುತ್ತಿರುವುದನ್ನು ನಾನು ನೋಡಿದೆ. ಹದಿಹರೆಯದ ಇಬ್ಬರು ಹುಡುಗರು ಬುಟ್ಟಿಗಳಲ್ಲಿದ್ದ ಈರುಳ್ಳಿಯನ್ನು ಚೀಲಕ್ಕೆ ತುಂಬಿಸುತ್ತಿರುವುದನ್ನು ಸಹ ನೋಡಿದೆ. ಇಲ್ಲಿನ ಶ್ರಮ ವಿಭಜನೆಯು ವಯಸ್ಸು, ಲಿಂಗ ಮತ್ತು ಕೆಲಸ ಬೇಡುವ ಶ್ರಮಶಕ್ತಿಯನ್ನು ಅವಲಂಬಿಸಿದೆ. “ಜೋಟೊ ಹಾತ್, ಟೋಟೊ ಬೊಸ್ತಾ, ಟೋಟೊ ಟಕಾ [ಹೆಚ್ಚು ಕೈಗಳು, ಹೆಚ್ಚು ಚೀಲಗಳು, ಹೆಚ್ಚು ಹಣ]” ಎಂದು ಅಂಜಲಿ ನನಗೆ ಸರಳವಾಗಿ ಅರ್ಥವಾಗುವ ಹಾಗೆ ವಿವರಿಸುತ್ತಾರೆ.
ಈ ಸಲದ ಲೋಕಸಭಾ ಚುನಾವಣೆಯಲ್ಲಿ ಅಂಜಲಿ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. "ನಾನು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇನೆ. ಆದರೆ ಮೊದಲ ಬಾರಿಗೆ ದೊಡ್ಡ ಚುನಾವಣೆಗೆ ಮತ ಚಲಾಯಿಸುತ್ತಿದ್ದೇನೆ!" ಎಂದು ಮುಗುಳ್ನಕ್ಕರು. "ನಾನು ಹೋಗುತ್ತೇನೆ. ಈ ಬಸ್ತಿಯಲ್ಲಿರುವ ನಾವೆಲ್ಲರೂ ಮತ ಚಲಾಯಿಸಲು ನಮ್ಮ ಊರಿಗೆ ಹೋಗುತ್ತೇವೆ. ಇಲ್ಲದಿದ್ದರೆ ಅವರು ನಮ್ಮನ್ನು ಮರೆತುಬಿಡುತ್ತಾರೆ..."
ನಿಮ್ಮ ಬೇಡಿಕೆಯೇನು? ಮಕ್ಕಳಿಗೆ ಶಿಕ್ಷಣ ಸೌಲಭ್ಯವೇ?
“ಯಾರಲ್ಲಿ ಬೇಡಿಕೆಯಿಡುವುದು?” ಎಂದು ಕೇಳಿದ ಅಂಜಲಿ ಒಂದರೆ ಕ್ಷಣ ಮೌನವಾಗಿ ನಂತರ ತಮ್ಮ ಪ್ರಶ್ನೆಗೆ ತಾವೇ ಉತ್ತರಿಸಿದರು. “ನಮಗೆ ಇಲ್ಲಿ [ಬಿಶುಪುರ್‌ಕುರ್] ಮತದಾನದ ಹಕ್ಕಿಲ್ಲ. ಹೀಗಾಗಿ ಇಲ್ಲಿನ ಯಾರೂ ನಮ್ಮ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ಮತ್ತು ನಾವು ಅಲ್ಲಿಯೂ [ಗೋವಾಸ್] ವರ್ಷಪೂರ್ತಿ ಇರುವುದಿಲ್ಲ. ಹೀಗಾಗಿ ಅಲ್ಲಿಯೂ ನಮಗೆ ದೊಡ್ಡ ಮಟ್ಟದಲ್ಲಿ ಹಕ್ಕು ಮಂಡಿಸಲು ಸಾಧ್ಯವಾಗುವುದಿಲ್ಲ. ಅಮ್ರಾ ನಾ ಏಖಾನೇರ್, ನಾ ಓಖಾನೇರ್ [ನಾವು ಅಲ್ಲಿಗೂ ಸೇರಿದವರಲ್ಲ ಇಲ್ಲಿಗೂ ಸೇರಿದವರಲ್ಲ].”
ಚುನಾವಣೆಯಲ್ಲಿ ಅಭ್ಯರ್ಥಿಗಳಿಂದ ಏನನ್ನು ನಿರೀಕ್ಷಿಸಬೇಕು ಎಂಬುದರ ಬಗ್ಗೆ ತನಗೆ ಹೆಚ್ಚು ತಿಳಿದಿಲ್ಲ ಎಂದು ಅವರು ಹೇಳುತ್ತಾರೆ. “ಅಂಕಿತಾಳಿಗೆ ಐದು ವರ್ಷ ತುಂಬಿದ ಕೂಡಲೇ ಶಾಲೆಗೆ ಸೇರಿಸಿ ನಾನೂ ಊರಲ್ಲೇ ಉಳಿಯಬೇಕೆನ್ನುವುದು ನನ್ನ ಆಸೆ. ನನಗೆ ಇಲ್ಲಿಗೆ ಬರುವುದು ಇಷ್ಟವಿಲ್ಲ. ಆದರೆ ಮುಂದಿನ ಕತೆ ಯಾರಿಗೆ ಗೊತ್ತು?” ಎಂದು ಅವರು ನಿಟ್ಟುಸಿರು ಬಿಡುತ್ತಾರೆ.
“ನಮ್ಮಿಂದ ಕೆಲಸವಿಲ್ಲದೆ ಬದುಕಲು ಸಾಧ್ಯವಿಲ್ಲ” ಎಂದು ಇನ್ನೊಬ್ಬ ಯುವ ತಾಯಿ ಮಧುರಿಮಾ ಮಾಲ್ (19) ಹೇಳುತ್ತಾರೆ. ಅವರೂ ಅಂಜಲಿಯವರ ಅನುಮಾನವನ್ನೇ ಪ್ರತಿಧ್ವನಿಸಿದರು. “ಮಕ್ಕಳನ್ನು ಶಾಲೆಗೆ ಸೇರಿಸದೆ ಹೋದರೆ ಅವರೂ ನಮ್ಮಂತೆಯೇ ಉಳಿದುಬಿಡುತ್ತಾರೆ” ಎಂದು ತಮ್ಮ ಮಕ್ಕಳ ಭವಿಷ್ಯದ ಕುರಿತು ಹೇಳುವಾಗ ಅವರ ದನಿಯಲ್ಲಿ ಆಳವಾದ ನೋವಿತ್ತು. ಈ ಯುವ ತಾಯಂದಿರಿಗೆ ರಾಜ್ಯ ಸರ್ಕಾರದಿಂದ ಲಭ್ಯವಿರುವ ಆಶ್ರಮ ಹಾಸ್ಟೆಲ್ , ಅಥವಾ ಶಿಕ್ಷಾಶ್ರೀ ಅಥವಾ ಕೇಂದ್ರ ಸರ್ಕಾರ ನಡೆಸುವ ಏಕಲವ್ಯ ಮಾದರಿ ಹಗಲು ವಸತಿ ಶಾಲೆಯಂತಹ (ಇಎಮ್‌ಡಿಬಿಎಸ್) ವಿಶೇಷ ಯೋಜನೆಗಳ ಕುರಿತು ತಿಳಿದಿಲ್ಲ. ಇದನ್ನು ಕೇಂದ್ರ ಸರ್ಕಾರವು ಆದಿವಾಸಿ ಮಕ್ಕಳು ಹೆಚ್ಚು ಹೆಚ್ಚು ಶಾಲೆಗೆ ಬರುವಂತೆ ಮಾಡಲು ಜಾರಿಗೆ ತರಲಾಗಿದೆ.
ಬಿಶುಪುರ್‌ಕುರ್ ಗ್ರಾಮವು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. 1999ರಿಂದ ಕಾಂಗ್ರೆಸ್ ಇಲ್ಲಿ ಗೆಲ್ಲುತ್ತಿದೆ. ಆದರೆ ಆ ಪಕ್ಷವು ಇಲ್ಲಿನ ಆದಿವಾಸಿ ಮಕ್ಕಳ ಶಿಕ್ಷಣಕ್ಕಾಗಿ ಏನೂ ಮಾಡಿಲ್ಲ. ಈಗ ತಮ್ಮ 2024ರ ಪ್ರಣಾಳಿಕೆಯಲ್ಲಿ ಅವರು ಬಡವರಿಗೆ, ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಪ್ರತಿ ಬ್ಲಾಕಿಗೆ ಒಂದರಂತೆ ವಸತಿ ಶಾಲೆಗಳನ್ನು ನೀಡುವ ಭರವಸೆ ನೀಡಿದ್ದಾರೆ. ಆದರೆ ಮಹಿಳೆಯರಿಗೆ ಇವುಗಳಲ್ಲಿ ಯಾವುದರ ಬಗ್ಗೆಯೂ ತಿಳಿದಿಲ್ಲ.
“ಈ ಕುರಿತು ಯಾರದಾರೂ ತಿಳಿಸಿದರಷ್ಟೇ ನಮಗೆ ತಿಳಿಯಲು ಸಾಧ್ಯ” ಎನ್ನುತ್ತಾರೆ ಮಧುಮಿತಾ.
"ದೀದಿ, ನಮ್ಮಲ್ಲಿ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಜಾಬ್ ಕಾರ್ಡ್, ಸ್ವಾಸ್ಥ್ಯ ಸಾತಿ ವಿಮಾ ಕಾರ್ಡ್, ಪಡಿತರ ಚೀಟಿ - ಎಲ್ಲಾ ಕಾರ್ಡುಗಳಿವೆ" ಎಂದು 19 ವರ್ಷದ ಸೋನಾಮೋನಿ ಮಾಲ್ ಹೇಳುತ್ತಾರೆ. ಅವರು ತನ್ನ ಇಬ್ಬರು ಮಕ್ಕಳನ್ನು ಶಾಲೆಗೆ ಸೇರಿಸುವ ಹತಾಶ ಹತಾಶ ಪ್ರಯತ್ನದಲ್ಲಿರುವ ಇನ್ನೊಬ್ಬ ಯುವ ತಾಯಿ. "ನಾನು ಮತ ಹಾಕುತ್ತಿದ್ದೆ. ಆದರೆ ಈ ಬಾರಿ ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿಲ್ಲ.”
"ವೋಟ್ ದಿಯೇ ಅಬರ್ ಕಿ ಲಾಭ್ ಹೋಬೆ? [ಮತ ಹಾಕಿದರೆ ಏನು ಸಿಗುತ್ತದೆ?] ನಾನು ಎಷ್ಟೋ ವರ್ಷಗಳಿಂದ ಮತ ಚಲಾಯಿಸುತ್ತಿದ್ದೇನೆ" ಎಂದು 70 ವರ್ಷಕ್ಕೂ ಮೇಲ್ಪಟ್ಟ ಸಾವಿತ್ರಿ ಮಾಲ್ (ಹೆಸರು ಬದಲಾಯಿಸಲಾಗಿದೆ) ಉತ್ತರಿಸುತ್ತಾರೆ, ಅವರ ಮಾತನ್ನು ಅಲ್ಲಿ ಅಲ್ಲಿದ್ದ ಮಹಿಳೆಯರು ಸಣ್ಣಗೆ ನಕ್ಕರು.
“ನನಗೆ ಸಿಕ್ಕುವುದು 1,000 ರೂಪಾಯಿಗಳ ವೃದ್ಧಾಪ್ಯ ಪಿಂಚಣಿ ಮಾತ್ರ. ಊರಿನಲ್ಲಿ ಕೆಲಸವೂ ಇಲ್ಲ. ಅಲ್ಲಿರುವುದು ಮತ ಮಾತ್ರ” ಎಂದು ಈ ಹಿರಿಯ ಮಹಿಳೆ ಹೇಳುತ್ತಾರೆ. “ಕಳೆದ ಮೂರು ವರ್ಷಗಳಿಂದ ನಮ್ಮೂರಿನಲ್ಲಿ ಎಕ್ಶೋ ದಿನರ್ ಕಾಜ್ ಕೂಡಾ ಕೊಡುತ್ತಿಲ್ಲ” ಎಂದು ನರೇಗಾ ಕೆಲಸವಿಲ್ಲದ ಕುರಿತು ದೂರುತ್ತಾರೆ ಸಾವಿತ್ರಿ. ಮನರೇಗಾ ಕೆಲಸಗಳನ್ನು ಸ್ಥಳೀಯವಾಗಿ ʼ100 ದಿನಗಳ ಕೆಲಸʼ ಎಂದು ಕರೆಯಲಾಗುತ್ತದೆ.
"ಸರ್ಕಾರ ನನ್ನ ಕುಟುಂಬಕ್ಕೆ ಮನೆಯನ್ನು ನೀಡಿದೆ" ಎಂದು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಉಲ್ಲೇಖಿಸಿ ಅಂಜಲಿ ಹೇಳುತ್ತಾರೆ. "ಆದರೆ ಅಲ್ಲಿ ಕೆಲಸವಿಲ್ಲದ ಕಾರಣ ನಾನು ಅದರಲ್ಲಿ ಉಳಿಯಲು ಸಾಧ್ಯವಿಲ್ಲ. ಏಕ್ಶೋ ದಿನರ್ ಕಾಜ್ ಸಿಕ್ಕಿದ್ದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ" ಎಂದು ಅವರು ಹೇಳುತ್ತಾರೆ.
ಅತ್ಯಂತ ಸೀಮಿತ ಜೀವನೋಪಾಯದ ಲಭ್ಯತೆ ಭೂರಹಿತ ಸಮುದಾಯದ ಅನೇಕರನ್ನು ದೂರದ ಸ್ಥಳಗಳಿಗೆ ವಲಸೆ ಹೋಗುವಂತೆ ಮಾಡಿದೆ. ಗೋವಾಸ್ ಕಾಳಿಕಾಪುರದ ಹೆಚ್ಚಿನ ಯುವಕರು ಕೆಲಸವನ್ನು ಹುಡುಕಿಕೊಂಡು ಬೆಂಗಳೂರು ಅಥವಾ ಕೇರಳದವರೆಗೆ ಹೋಗುತ್ತಾರೆ ಎಂದು ಸಾಬಿತ್ರಿ ಹೇಳುತ್ತಾರೆ. ಒಂದು ನಿರ್ದಿಷ್ಟ ವಯಸ್ಸಿನ ನಂತರ ಗಂಡಸರು ತಮ್ಮ ಹಳ್ಳಿಗೆ ಹತ್ತಿರದಲ್ಲಿ ಕೆಲಸ ಮಾಡಲು ಬಯಸುತ್ತಾರೆ, ಆದರೆ ಅಲ್ಲಿ ಸಾಕಷ್ಟು ಕೃಷಿ ಉದ್ಯೋಗಗಳಿಲ್ಲ. ಅನೇಕರು ತಮ್ಮ ಬ್ಲಾಕ್ ಆಗಿರುವ ರಾಣಿನಗರ ಒಂದರಲ್ಲಿನ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವ ಮೂಲಕ ಸಂಪಾದಿಸುತ್ತಾರೆ.
"ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ಬಯಸದ ಮಹಿಳೆಯರು ಚಿಕ್ಕ ಮಕ್ಕಳೊಂದಿಗೆ ಇತರ ಹಳ್ಳಿಗಳಿಗೆ ಹೋಗುತ್ತಾರೆ" ಎಂದು ಸಾವಿತ್ರಿ ಹೇಳುತ್ತಾರೆ. "ಈ ವಯಸ್ಸಿನಲ್ಲಿ ನಾನು ಭಟಾ [ಇಟ್ಟಿಗೆ ಗೂಡುಗಳಲ್ಲಿ] ಕೆಲಸ ಮಾಡಲು ಸಾಧ್ಯವಿಲ್ಲ. ಹೊಟ್ಟೆಪಾಡಿಗಾಗಿ ಇಲ್ಲಿ ಬರುತ್ತಿದ್ದೇನೆ. ನಮ್ಮ ಶಿಬಿರದಲ್ಲಿ ನನ್ನಂತಹ ವಯಸ್ಸಾದ ಕೆಲವರು ಒಂದಷ್ಟು ಆಡುಗಳನ್ನು ಸಹ ಸಾಕಿಕೊಂಡಿದ್ದೇವೆ. ನಾನು ಅವುಗಳನ್ನು ಮೇಯಿಸಲು ಕರೆದೊಯ್ಯುತ್ತೇನೆ" ಎಂದು ಅವರು ಹೇಳುತ್ತಾರೆ. ಸಾಧ್ಯವಿದ್ದಾಗಲೆಲ್ಲ ಅವರ ಗುಂಪಿನಲ್ಲಿ ಒಬ್ಬರು ಬಿಡುವು ಮಾಡಿಕೊಂಡು ಗೋವಾಸ್‌ಗೆ ಹೋಗಿ ಆಹಾರ ಧಾನ್ಯಗಳನ್ನು ತರುತ್ತಾರೆ. “ನಾವು ಬಡವರು ಏನನ್ನಾದರೂ ಖರೀದಿಸಿ ತಿನ್ನುವ ಶಕ್ತಿ ನಮ್ಮಲ್ಲಿಲ್ಲ.”
ಈರುಳ್ಳಿ ಹಂಗಾಮು ಮುಗಿದ ನಂತರ ಅವರು ಏನು ಮಾಡುತ್ತಾರೆ? ಮರಳಿ ತಮ್ಮ ಊರಿಗೆ ಹೋಗುತ್ತಾರೆಯೇ?
"ಈರುಳ್ಳಿ ಕೆಲಸ ಮಗಿದ ನಂತರ ಎಳ್ಳು, ಸೆಣಬು ಮತ್ತು ಸ್ವಲ್ಪ ಖೋರಾರ್ ಧಾನ್ (ಒಣ ಋತುವಿನಲ್ಲಿ ಬೆಳೆಯುವ ಭತ್ತ) ಬಿತ್ತನೆ ಮಾಡುವ ಸಮಯ" ಎಂದು ಅಂಜಲಿ ಹೇಳುತ್ತಾರೆ. ವರ್ಷದ ಈ ಸಮಯದಿಂದ ಜೂನ್ ಮಧ್ಯದವರೆಗೆ "ಮಕ್ಕಳು ಸೇರಿದಂತೆ ಹೆಚ್ಚು ಹೆಚ್ಚು ಆದಿವಾಸಿಗಳು ತಕ್ಷಣದ ಹಣ ಸಂಪಾದನೆಗಾಗಿ ತಮ್ಮ ಊರುಗಳಿಗೆ ಹೋಗುತ್ತಾರೆ" ಈ ಸಮಯದಲ್ಲಿ ಬೇಸಾಯದ ಕೆಲಸಕ್ಕೆ ಬೇಡಿಕೆ ಹೆಚ್ಚಿರುತ್ತದೆ ಎಂದು ಅವರು ಹೇಳುತ್ತಾರೆ.
ಬೆಳೆ ಚಕ್ರಗಳ ನಡುವೆ ಕೃಷಿ ಕೆಲಸವಿಲ್ಲದ ದಿನಗಳೂ ಬರುತ್ತವೆ. ಆ ದಿನಗಳಲ್ಲಿ ಕೆಲಸ ಸಿಗುವುದು ಬಹಳ ಕಡಿಮೆ ಎಂದು ಈ ಯುವ ಕಾರ್ಮಿಕ ಮಹಿಳೆ ಹೇಳುತ್ತಾರೆ. ಆದರೆ ಅವರು ಇತರ ಮಹಿಳೆಯರಂತೆ ಈ ದಿನಗಳಲ್ಲಿ ಊರಿಗೆ ತೆರಳುವುದಿಲ್ಲ. “ಈ ಸಮಯದಲ್ಲಿ ನಾವು ಜೋಗರೇರ್ ಕಾಜ್, ಠೀಕೆ ಕಾಜ್ [ಗಾರೆ ಮೇಸ್ತ್ರಿಗೆ ಸಹಾಯಕರಾಗಿ, ಗುತ್ತಿಗೆ ಕಾರ್ಮಿಕರಾಗಿ] ಕೆಲಸ ಮಾಡುತ್ತೇವೆ. ಅಥವಾ ಸಿಕ್ಕಿದ್ದನ್ನು ಮಾಡುತ್ತೇವೆ. ನಾವು ಇಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡಿ ಇಲ್ಲಿಯೇ ಉಳಿಯುತ್ತೇವೆ. ಪ್ರತಿ ಗುಡಿಸಲಿಗೆ ನಾವು ತಿಂಗಳಿಗೆ 250 ರೂಪಾಯಿಗಳನ್ನು ಬಾಡಿಗೆಯಾಗಿ ಕಟ್ಟುತ್ತೇವೆ” ಎನ್ನುತ್ತಾರೆ ಅಂಜಲಿ.
“ನಮ್ಮನ್ನು ವಿಚಾರಿಸಲು ಇಲ್ಲಿಗೆ ಯಾರೆಂದರೆ ಯಾರೂ ಬರುವುದಿಲ್ಲ. ಯಾವ ನಾಯಕನೂ ಬರುವುದಿಲ್ಲ. ನೀವಾದರೂ ನೋಡಿ” ಎಂದು ಸಾವಿತ್ರಿ ಹೇಳಿದರು.
ನಂತರ ನಾನು ಕಿರಿದಾದ ರಸ್ತೆಯ ಮೂಲಕ ಗುಡಿಸಲಿನ ಕಡೆಗೆ ನಡೆದೆ. 14 ವರ್ಷದ ಸೋನಾಲಿ ನನ್ನ ಮಾರ್ಗದರ್ಶಿಯಾಗಿದ್ದಳು. ಅವಳು ತನ್ನ ಗುಡಿಸಲಿಗೆ 20 ಲೀಟರ್ ಬಕೆಟಿನಲ್ಲಿ ನೀರು ಸಾಗಿಸುತ್ತಿದ್ದಳು. "ನಾನು ಕೊಳದಲ್ಲಿ ಸ್ನಾನ ಮಾಡಲು ಹೋದವಳು ಹಾಗೇ ನೀರು ತುಂಬಿಸಿಕೊಂಡು ಬಂದೆ. ನಮ್ಮ ಬಸ್ತಿಯಲ್ಲಿ ಹರಿಯುವ ನೀರಿಲ್ಲ. ಕೊಳದ ನೀರು ಕೊಳಕಾಗಿದೆ. ಆದರೆ ಏನು ಮಾಡುವುದು?" ಎಂದ ಅವಳು ಹೇಳಿದ ಜಲಮೂಲವು ಗುಡಿಸಲುಗಳಿಂದ ಸುಮಾರು 200 ಮೀಟರ್ ದೂರದಲ್ಲಿದೆ. ಇಲ್ಲಿಯೇ ಕೊಯ್ಲು ಮಾಡಿದ ಸೆಣಬಿನ ಬೆಳೆಯನ್ನು ಕತ್ತರಿಸುವುದು, ಕಾಂಡದಿಂದ ನಾರುಗಳನ್ನು ಬೇರ್ಪಡಿಸುವುದು ಮಳೆಗಾಲದಲ್ಲಿ ನಡೆಯುತ್ತದೆ. ಈ ನೀರು ಮಾನವರಿಗೆ ಹಾನಿಕಾರಕವಾದ ಬ್ಯಾಕ್ಟೀರಿಯಾ ಮತ್ತು ರಾಸಾಯನಿಕಗಳಿಂದ ಕಲುಷಿತವಾಗಿದೆ.
“ಇದು ನಮ್ಮ ಮನೆ. ಇಲ್ಲಿ ನಾನು ನನ್ನ ಬಾಬಾ ಜೊತೆ ಇರುತ್ತೇನೆ” ಎಂದ ಅವಳು ಒಣಗಿದ ಬಟ್ಟೆಗಳನ್ನು ಧರಿಸಲೆಂದು ಗುಡಿಸಲಿನ ಒಳಗೆ ನಡೆದಳು. ನಾನು ಹೊರಗೆ ಕಾಯತೊಡಗಿದೆ. ಗೋಡೆಯಾಗಿ ಬಿದಿರಿನ ಕೊಂಬೆಗಳು ಮತ್ತು ಸೆಣಬಿನ ಕಡ್ಡಿಗಳಿಂದ ಮಾಡಿದ ತಟ್ಟಿಗೆ ಮಣ್ಣು ಮತ್ತು ಸಗಣಿಯ ಮಿಶ್ರಣವನ್ನು ಮೆತ್ತಲಾಗಿತ್ತು. ಇಲ್ಲಿ ಖಾಸಗಿತನವೆನ್ನುವುದು ದೂರದ ಮಾತಾಗಿತ್ತು. ಬಿದಿರಿನ ಕಂಬಗಳ ಮೇಲೆ ಸೀಳಿದ ಬಿದಿರಿನ ಅಡ್ಡೆಗಳನ್ನು ಹಾಕಿ ಹುಲ್ಲು ಹಾಕಿ ಅದರ ಮೇಲೆ ಟಾರ್ಪಲಿನ್ ಶೀಟ್ ಹೊದೆಸುವ ಮೂಲಕ ಗುಡಿಸಲಿಗೆ ಛಾವಣಿ ನಿರ್ಮಿಸಲಾಗಿತ್ತು.
“ಒಳಗೆ ಬರ್ತೀರಾ? ಸೋನಾಲಿ ತನ್ನ ಕೂದಲನ್ನು ಬಾಚಿಕೊಳ್ಳುತ್ತಾ ಕೇಳಿದಳು. ಕೋಲುಗಳ ನಡುವಿನಿಂದ ಹಾದು ಬರುತ್ತಿದ್ದ ಬಿಸಿಲುಕೋಲಿನ ಬೆಳಕಿನಲ್ಲಿ 10 x 10 ಅಡಿ ವಿಸ್ತೀರ್ಣದ ಗುಡಿಸಲಿನ ಒಳಭಾಗವು ಖಾಲಿಯಾಗಿ ಖಾಲಿಯಾಗಿ ನಿಂತಿತ್ತು. "ಅಮ್ಮ ನನ್ನ ಸಹೋದರ ಸಹೋದರಿಯರೊಂದಿಗೆ ಗೋವಾಸ್‌ನಲ್ಲಿದ್ದಾರೆ" ಎಂದು ಅವಳು ತಿಳಿಸಿದಳು. ಅವಳ ಅಮ್ಮ ರಾಣಿನಗರ ಬ್ಲಾಕ್ 1 ಪ್ರದೇಶದ ಇಟ್ಟಿಗೆ ಭಟ್ಟಿಯೊಂದರಲ್ಲಿ ಕೆಲಸ ಮಾಡುತ್ತಾರೆ.
“ಮನೆಯ ನೆನಪು ಬಹಳವಾಗಿ ಕಾಡುತ್ತದೆ. ನನ್ನ ಚಿಕ್ಕಮ್ಮ ಕೂಡ ತನ್ನ ಹೆಣ್ಣುಮಕ್ಕಳೊಂದಿಗೆ ಇಲ್ಲಿಗೆ ಬಂದಿದ್ದಾರೆ. ರಾತ್ರಿಯಲ್ಲಿ ನಾನು ಅವಳೊಂದಿಗೆ ಮಲಗುತ್ತೇನೆ" ಎಂದು ಸೋನಾಲಿ ಹೇಳುತ್ತಾಳೆ. ಅವಳು ಹೊಲದಲ್ಲಿ ದುಡಿಯುವ ಸಲುವಾಗಿ 8ನೇ ತರಗತಿಯ ನಂತರ ಶಾಲೆಯನ್ನು ಬಿಡಬೇಕಾಯಿತು.
ಸೋನಾಲಿ ಕೊಳದಲ್ಲಿ ಒಗೆದ ಬಟ್ಟೆಗಳನ್ನು ಒಣಗಿಸಲೆಂದು ಹೋದ ನಂತರ ನಾನು ಗುಡಿಸಲನ್ನು ಗಮನಿಸಿದೆ. ಮೂಲೆಯಲ್ಲಿದ್ದ ಮುರುಕಲು ಬೆಂಚಿನ ಮೇಲೆ ಕೆಲವು ಪಾತ್ರೆಗಳಿದ್ದವು. ಜೊತೆಗೆ ಇಲಿಯಂತಹ ಜೀವಿಗಳು ಆಹಾರ ಧಾನ್ಯಗಳನ್ನು ನಾಶ ಮಾಡದಂತೆ ತಡೆಯುವ ಸಲುವಾಗಿ ಅಕ್ಕಿ ಹಾಗೂ ಕೆಲವು ಇತರ ಅಗತ್ಯ ವಸ್ತುಗಳನ್ನು ಬಿಗಿಯಾದ ಮುಚ್ಚಳವನ್ನು ಹೊಂದಿರುವ ಪ್ಲಾಸ್ಟಿಕ್ ಬಕೆಟ್, ವಿವಿಧ ಗಾತ್ರದ ಕೆಲವು ಪ್ಲಾಸ್ಟಿಕ್ ನೀರಿನ ಕ್ಯಾನುಗಳಲ್ಲಿ ಹಾಕಿ ಇರಿಸಲಾಗಿತ್ತು. ಅವೆಲ್ಲವೂ ಬೆಂಚಿನ ಮೇಲೇ ಇದ್ದವು. ನೆಲದಲ್ಲಿ ಹೂಡಲಾಗಿದ್ದ ಒಲೆಯು ಆ ಪ್ರದೇಶವನ್ನು ಅಡುಗೆಮನೆಯೆಂದು ಘೋಷಿಸುತ್ತಿತ್ತು.
ಅಲ್ಲಲ್ಲಿ ಕೆಲವು ಬಟ್ಟೆಗಳು ನೇತಾಡುತ್ತಿದ್ದವು, ಇನ್ನೊಂದು ಮೂಲೆಯಲ್ಲಿ ಗೋಡೆಯಲ್ಲಿ ಕನ್ನಡಿ ಮತ್ತು ಬಾಚಣಿಗೆ, ಮಡಚಿಟ್ಟ ಪ್ಲಾಸ್ಟಿಕ್ ಚಾಪೆ, ಸೊಳ್ಳೆ ಪರದೆ ಮತ್ತು ಹಳೆಯ ಕಂಬಳಿ - ಇವೆಲ್ಲವೂ ಒಂದು ಗೋಡೆಯಿಂದ ಇನ್ನೊಂದು ಗೋಡೆಯ ನಡುವೆ ಹಾಕಲಾಗಿದ್ದ ಬಿದಿರಿನ ಮೇಲೆ ನಿಂತಿದ್ದವು. ಕಠಿಣ ಪರಿಶ್ರಮ ಯಶಸ್ಸು ತರುತ್ತದೆಯೆನ್ನುವುದು ಒಂದು ಸುಳ್ಳು ಎನ್ನುವುದನ್ನು ಇಲ್ಲಿನ ಪರಿಸ್ಥಿತಿ ಸ್ಪಷ್ಟಪಡಿಸುತ್ತಿತ್ತು. ತಂದೆ ಮತ್ತು ಅವರ ಹದಿಹರೆಯದ ಮಗಳ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿರುವ ಇಲ್ಲಿಮ ಒಂದು ವಿಷಯವೆಂದರೆ ಈರುಳ್ಳಿ - ಅದು ನೆಲದ ಮೇಲೆ ಬಿದ್ದಿದ್ದರೆ ಮಾಡಿನಿಂದ ನೇತಾಡುತ್ತಿತ್ತು.
ಒಳಗೆ ಬರುತ್ತಿದ್ದಂತೆ ಸೋನಾಲಿ, "ನಿಮಗೆ ನಮ್ಮ ಶೌಚಾಲಯವನ್ನು ತೋರಿಸುತ್ತೇನೆ" ಎಂದು ಹೇಳಿದಳು. ನಾನು ಅವಳನ್ನು ಹಿಂಬಾಲಿಸಿದೆ. ಅಲ್ಲಿಂದ ಕೆಲವು ಗುಡಿಸಲುಗಳನ್ನು ದಾಟಿದ ನಂತರ, ಅಲ್ಲಿ ಒಂದು ಮೂಲೆಯಲ್ಲಿ 32 ಅಡಿ ಉದ್ದದ ಕಿರಿದಾದ ಪ್ರದೇಶವನ್ನು ತಲುಪಿದೆ. ಹೊಲಿದ ಪ್ಲಾಸ್ಟಿಕ್ ಚೀಲಗಳಿಂದ ಆವೃತವಾದ ತೆರೆದ 4 x 4 ಅಡಿ ಜಾಗವು ಅವರ 'ಶೌಚಾಲಯ'ದ ಗೋಡೆಯನ್ನು ರೂಪಿಸುತ್ತದೆ. "ಇಲ್ಲಿ ನಾವು ಮೂತ್ರ ವಿಸರ್ಜಿಸುತ್ತೇವೆ ಮತ್ತು ಮಲವಿಸರ್ಜನೆ ಮಾಡಲು ಇಲ್ಲಿಂದ ಸ್ವಲ್ಪ ದೂರದಲ್ಲಿರುವ ತೆರೆದ ಸ್ಥಳಗಳನ್ನು ಬಳಸುತ್ತೇವೆ" ಎಂದು ಅವಳು ಹೇಳಿದಳು. ನಾನು ಒಂದು ಹೆಜ್ಜೆ ಮುಂದೆ ಹೋಗಲು ಪ್ರಯತ್ನಿಸುತ್ತಿರುವಾಗ, ಕಾಲು ಗಲೀಜಾಗಬಹುದು ನೋಡಿಕೊಂಡು ಹೆಜ್ಜೆಯಿಡಿ ಎಂದು ಸೋನಾಲಿ ಎಚ್ಚರಿಸಿದಳು.
ಈ ಮಾಲ್ ಪಹಾಡಿಯ ಬಸ್ತಿಯಲ್ಲಿನ ಶೌಚಾಲಯದ ಕೊರತೆಯು ನಾನು ಇಲ್ಲಿಗೆ ಬರುವಾಗ ದಾರಿಯಲ್ಲಿ ನೋಡಿದ ಮಿಷನ್ ನಿರ್ಮಲ್ ಬಾಂಗ್ಲಾದ ವರ್ಣರಂಜಿತ ಸಂದೇಶಗಳನ್ನು ನೆನಪಿಸಿತು. ಈ ಪೋಸ್ಟರುಗಳು ರಾಜ್ಯ ಸರ್ಕಾರದ ನೈರ್ಮಲ್ಯ ಯೋಜನೆ ಮತ್ತು ಬಯಲು ಮಲವಿಸರ್ಜನೆ ಮುಕ್ತ ಮಡ್ಡಾ ಗ್ರಾಮ ಪಂಚಾಯತ್ ಬಗ್ಗೆ ಹೆಮ್ಮೆಪಡುತ್ತವೆ.
“ಮುಟ್ಟಿನ ಸಮಯದಲ್ಲಿ ಬಹಳ ಕಷ್ಟವಾಗುತ್ತದೆ. ಕೆಲವೊಮ್ಮೆ ಸೋಂಕು ಉಂಟಾಗುವುದು ಸಹ ಇರುತ್ತದೆ. ನೀರಿಲ್ಲದೆ ಹೇಗೆ ನೈರ್ಮಲ್ಯ ಕಾಪಾಡಿಕೊಳ್ಳಲು ಸಾಧ್ಯ? ಕೊಳದ ನೀರು ಸಹ ಕೆಸರಿನಿಂದ ಕೊಳಕಾಗಿದೆ” ಎಂದು ಸೋನಾಲಿ ತನ್ನ ಹಿಂಜರಿಕೆ ಮತ್ತು ನಾಚಿಕೆ ಬದಿಗಿಟ್ಟು ಹೇಳುತ್ತಾಳೆ.
ಕುಡಿಯಲು ನೀರನ್ನು ಎಲ್ಲಿಂದ ತರುತ್ತೀರಿ?
“[ಖಾಸಗಿ] ನೀರು ಸರಬರಾಜುದಾರರಿಂದ ಖರೀದಿಸುತ್ತೇವೆ. 20 ಲೀಟರ್ ಕ್ಯಾನ್ ತುಂಬಿಸಲು ಅವರು 10 ರೂಪಾಯಿ ತೆಗೆದುಕೊಳ್ಳುತ್ತಾರೆ. ಅವನು ಸಂಜೆ ಬಂದು ಮುಖ್ಯ ರಸ್ತೆಯಲ್ಲಿ ಕಾಯುತ್ತಾನೆ. ನಾವು ಆ ದೊಡ್ಡ ಜಾಡಿಗಳನ್ನು ನಮ್ಮ ಗುಡಿಸಲುಗಳಿಗೆ ಹೊತ್ತೊಯ್ಯಬೇಕು."
“ನನ್ನ ಸ್ನೇಹಿತೆಯನ್ನು ಭೇಟಿಯಾಗುವಿರಾ?” ಎಂದು ಅವಳು ನನ್ನನ್ನು ಉತ್ಸಾಹದಿಂದ ಕೇಳಿದಳು. "ಇವಳು ಪಾಯಲ್. ಅವಳು ನನಗಿಂತ ದೊಡ್ಡವಳು. ಆದರೆ ನಾವು ಸ್ನೇಹಿತರು" ಎನ್ನುತ್ತಾ ಸೋನಾಲಿ ತನ್ನ ನವವಿವಾಹಿತ 18 ವರ್ಷದ ಸ್ನೇಹಿತೆಗೆ ನನ್ನನ್ನು ಪರಿಚಯಿಸಿದಳು. ಪಾಯಲ್ ತನ್ನ ಗುಡಿಸಲಿನ ಅಡುಗೆ ಪ್ರದೇಶದಲ್ಲಿ ನೆಲದ ಮೇಲೆ ಕುಳಿತು ಡುಗೆಸಿದ್ಧಪಡಿಸುತ್ತಿದ್ದರು. ಪಾಯಲ್ ಮಾಲ್ ಅವರ ಪತಿ ಬೆಂಗಳೂರಿನಲ್ಲಿ ನಿರ್ಮಾಣ ಸ್ಥಳಗಳಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.
“ನಾನು ಇಲ್ಲಿಗೆ ಬಂದು ಹೋಗುತ್ತಿರುತ್ತೇನೆ. ನನ್ನ ಅತ್ತೆ ಇಲ್ಲಿರುತ್ತಾರೆ” ಎನ್ನುತ್ತಾರೆ ಪಾಯಲ್. “ಗೋವಾಸ್‌ನಲ್ಲಿ ಒಂಟಿತನ ಕಾಡುತ್ತದೆ. ಹೀಗಾಗಿ ನಾನು ಇಲ್ಲಿಗೆ ಬಂದು ಹೋಗುತ್ತಿರುತ್ತೇನೆ. ನನ್ನ ಗಂಡ ಬಹಳ ಸಮಯದಿಂದ ಹೊರಗಿದ್ದಾರೆ. ಮನೆಯಲ್ಲಿ ಒಂಟಿತನ ಕಾಡುತ್ತದೆ. ಅವರು ಯಾವಾಗ ಬರುತ್ತಾರೆ ಗೊತ್ತಿಲ್ಲ. ಬಹುಶಃ ಚುನಾವಣೆಗೆ ಬರಬಹುದು” ಎನ್ನುವ ಪಾಯಲ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಐದು ತಿಂಗಳು ಕಳೆದಿದೆ ಎಂದು ಅವರು ನಾಚಿಕೊಂಡರು.
ನಿಮಗೆ ಇಲ್ಲಿ ಪೂರಕಾಂಶಗಳು ಮತ್ತು ಔಷಧಿ ಸಿಗುತ್ತದೆಯೇ?
"ಹೌದು, ನಾನು ಆಶಾ ದೀದಿಯೊಬ್ಬರಿಂದ ಕಬ್ಬಿಣದ ಮಾತ್ರೆಗಳನ್ನು ಪಡೆಯುತ್ತೇನೆ" ಎಂದು ಅವರು ಉತ್ತರಿಸಿದರು. "ನನ್ನ ಅತ್ತೆ ನನ್ನನ್ನು [ಐಸಿಡಿಎಸ್] ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಕೆಲವು ಔಷಧಿಗಳನ್ನು ನೀಡಿದರು. ಆಗಾಗ ನನ್ನ ಪಾದಗಳು ಊದಿಕೊಳ್ಳುತ್ತಿರುತ್ತವೆ. ಇಲ್ಲಿ ತಪಾಸಣೆ ಮಾಡುವುದಕ್ಕೂ ಯಾರಿಲ್ಲ. ಈರುಳ್ಳಿ ಕೆಲಸ ಮುಗಿದ ನಂತರ ಊರಿಗೆ ಮರಳಬೇಕು."
ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಇಲ್ಲಿನ ಮಹಿಳೆಯರು ಇಲ್ಲಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಬೆಲ್ದಂಗಾ ಪಟ್ಟಣಕ್ಕೆ ಧಾವಿಸುತ್ತಾರೆ. ಓವರ್-ದಿ-ಕೌಂಟರ್ ಔಷಧಿಗಳು ಮತ್ತು ಪ್ರಥಮ ಚಿಕಿತ್ಸಾ ಸಾಮಗ್ರಿಗಳಿಗಾಗಿ ಅವರು ತಾವು ನೆಲೆಸಿರುವ ಪ್ರದೇಶದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಮಕ್ರಾಂಪುರ ಮಾರುಕಟ್ಟೆಗೆ ಹೋಗಬೇಕು. ಪಾಯಲ್ ಮತ್ತು ಸೋನಾಲಿ ಇಬ್ಬರ ಕುಟುಂಬಗಳೂ ಸ್ವಾಸ್ಥ್ಯ ಸಾಥಿ ಕಾರ್ಡುಗಳನ್ನು ಹೊಂದಿವೆ, ಆದರೆ ಅವರು "ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯುವಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತೇವೆ" ಎಂದು ಹೇಳುತ್ತಾರೆ.
ನಾವು ಮಾತನಾಡುವಾಗ, ಅಲ್ಲಿನ ಮಕ್ಕಳು ನಮ್ಮ ಸುತ್ತಲೂ ಓಡಾಡುತ್ತಿದ್ದರು. ಅಂಕಿತಾ ಮತ್ತು ಮಿಲೋನ್ ಇಬ್ಬರೂ 3 ವರ್ಷ ವಯಸ್ಸಿನವರು ಮತ್ತು 6 ವರ್ಷದ ದೇಬ್ರಾಜ್ ತನ್ನ ಆಟಿಕೆಗಳನ್ನು ನಮಗೆ ತೋರಿಸಿದ. ವರು ತಮ್ಮದೇ ಆದ ಆಲೋಚನೆಗಳನ್ನು ಬಳಸಿ ತಮ್ಮ ಪುಟ್ಟ ಮಾಂತ್ರಿಕ ಕೈಗಳಿಂದ ಆ ಆಟಿಕೆಯನ್ನು ತಯಾರಿಸಿದ್ದರು. "ನಮಗೆ ಇಲ್ಲಿ ಟಿವಿಯಿಲ್ಲ. ಕೆಲವೊಮ್ಮೆ ನನ್ನ ಬಾಬಾ ಅವರ ಮೊಬೈಲಿನಲ್ಲಿ ಆಟಗಳನ್ನು ಆಡುತ್ತೇನೆ. ಕಾರ್ಟೂನುಗಳ ನೆನಪು ನನ್ನನ್ನು ಬಹಳ ಕಾಡುತ್ತದೆ" ಎಂದು ನೀಲಿ ಮತ್ತು ಬಿಳಿ ಬಣ್ಣದ ಅರ್ಜೆಂಟೀನಾ ಫುಟ್ಬಾಲ್ ತಂಡದ ಟೀ ಶರ್ಟ್ ಧರಿಸಿದ ದೇಬ್ರಾಜ್ ದೂರುತ್ತಾನೆ.
ಈ ಬಸ್ತಿಯಲ್ಲಿನ ಮಕ್ಕಳೆಲ್ಲವೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. “"ಅವರು ಯಾವಾಗಲೂ ಜ್ವರ ಮತ್ತು ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಎಂದು ಪಾಯಲ್ ಹೇಳುತ್ತಾರೆ. "ಮತ್ತು ಸೊಳ್ಳೆಗಳು ಇಲ್ಲಿನ ಮತ್ತೊಂದು ಸಮಸ್ಯೆ" ಎನ್ನುತ್ತಾಳೆ ಸೋನಾಲಿ. "ಒಮ್ಮೆ ನಾವು ಸೊಳ್ಳೆ ಪರದೆಯೊಳಗೆ ಸೇರಿಕೊಂಡ ನಂತರ ನಮ್ಮ ತಲೆಯ ಮೇಲೆ ನರಕ ಬಿದ್ದರೂ ಹೊರಬರುವುದಿಲ್ಲ" ಎಂದು ಇಬ್ಬರೂ ಸ್ನೇಹಿತೆಯರು ಜೋರಾಗಿ ನಕ್ಕರು. ಮಧುಮಿತಾ ಕೂಡಾ ಅವರೊಂದಿಗೆ ಸೇರಿಕೊಂಡರು.
ನಾನು ಮತ್ತೊಮ್ಮೆ ಚುನಾವಣೆಯ ಬಗ್ಗೆ ಅವರನ್ನು ಕೇಳಲು ಪ್ರಯತ್ನಿಸಿದೆ. "ನಾವು ಹೋಗುತ್ತೇವೆ. ಆದರೆ ನಿಮಗೆ ಗೊತ್ತು, ನಮ್ಮನ್ನು ಭೇಟಿಯಾಗಲು ಯಾರೂ ಇಲ್ಲಿಗೆ ಬರುವುದಿಲ್ಲ. ಮತದಾನ ಮುಖ್ಯ ಎಂದು ನಮ್ಮ ಹಿರಿಯರು ಭಾವಿಸುವುದರಿಂದಾಗಿ ನಾವು ಮತ ಹಾಕಲು ಹೋಗುತ್ತೇವೆ” ಎನ್ನುತ್ತಾ ಮಧುಮಿತಾ ಪ್ರಾಮಾಣಿಕವಾಗಿ ಮಾತನಾಡುತ್ತಾರೆ. ಇದು ಅವರ ಮೊದಲ ಬಾರಿಯ ಮತದಾನ. ಪಾಯಲ್ ಅವರಿಗೆ ಈಗಷ್ಟೇ 18 ವರ್ಷ ತುಂಬಿರುವುದರಿಂದ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇನ್ನೂ ಬಂದಿಲ್ಲ. "ನಾಲ್ಕು ವರ್ಷಗಳ ನಂತರ ನಾನು ಅವರಂತೆ ಆಗುತ್ತೇನೆ" ಎಂದು ಸೋನಾಲಿ ಹೇಳುತ್ತಾಳೆ. ಆಗ ನಾನೂ ಮತ ಹಾಕುತ್ತೇನೆ. ಆದರೆ ಅವರಂತೆ ನಾನು ಅಷ್ಟು ಬೇಗ ಮದುವೆಯಾಗುವುದಿಲ್ಲ” ಎಂದು ಅವಳು ಹೇಳುತ್ತಿದ್ದಂತೆ ಅಲ್ಲಿ ಮತ್ತೊಂದು ಸುತ್ತಿನ ನಗು ಅರಳಿತು.
ನಾನು ಆ ಪ್ರದೇಶದಿಂದ ಹೊರಡುತ್ತಿದ್ದಂತೆ ಈ ಯುವತಿಯರ ನಗು, ಮಕ್ಕಳ ತಮಾಷೆಯ ಕೂಗುಗಳು ಮಸುಕಾಗತೊಡಗಿದವು. ಸ್ವಲ್ಪ ಹೊತ್ತಿನಲ್ಲೇ ಅಲ್ಲಿ ಈರುಳ್ಳಿ ಬಿಡಿಸುತ್ತಿದ್ದ ಮಹಿಳೆಯರ ದೊಡ್ಡ ದನಿಗಳು ಆ ಮೌನವನ್ನು ಆವರಿಸಿಕೊಂಢವು. ಅವರ ಆ ದಿನದ ಕೆಲಸ ಮುಗಿಯುವ ಹೊತ್ತು ಬಂದಿತ್ತು.
"ನಿಮ್ಮ ಬಸ್ತಿಯಲ್ಲಿ ನಿಮ್ಮ ಮಾಲ್ ಪಹಾಡಿಯಾ ಭಾಷೆಯನ್ನು ಮಾತನಾಡಬಲ್ಲವರು ಯಾರಾದರೂ ಇದ್ದಾರೆಯೇ?" ಎಂದು ನಾನು ಅವರಲ್ಲಿ ಕೇಳಿದೆ.
"ಸ್ವಲ್ಪ ಹರಿಯಾ (ಹುದುಗಿಸಿದ ಅಕ್ಕಿಯಿಂದ ತಯಾರಿಸಿದ ಸಾಂಪ್ರದಾಯಿಕ ಮದ್ಯ) ಮತ್ತು ಕುರುಕಲು ತಿಂಡಿಯನ್ನ ತನ್ನಿ. ಪಹಾಡಿಯಾ ಭಾಷೆಯಲ್ಲಿ ಒಂದು ಹಾಡನ್ನೇ ಹಾಡಿಬಿಡುತ್ತೇನೆ" ಎಂದು ಭಾನು ಮಾಲ್ ತಮಾಷೆಯಾಗಿ ಹೇಳಿದರು. 65 ವರ್ಷದ ಈ ಕೃಷಿ ಕೂಲಿ ವಿಧವೆ ತನ್ನ ಭಾಷೆಯಲ್ಲಿ ಕೆಲವು ಸಾಲುಗಳನ್ನು ಮಾತನಾಡಿದರು ಮತ್ತು ನಂತರ ಒಂದಷ್ಟು ಪ್ರೀತಿ ಬೆರೆಸಿದ ದನಿಯಲ್ಲಿ, "ನಮ್ಮ ಭಾಷೆಯನ್ನು ಕೇಳಲು ಬಯಸಿದರೆ ಗೋವಾಸ್‌ಗೆ ಬನ್ನಿ" ಎಂದು ಆಹ್ವಾನಿಸಿದರು.
“ನಿಮಗೆ ಪಹಾಡಿಯಾ ಭಾಷೆ ಬರುತ್ತದೆಯೇ? ಎಂದು ನಾನು ಅಂಜಲಿಯವರತ್ತ ತಿರುಗಿ ಕೇಳಿದೆ. ಅವರಿಗೆ ತನ್ನ ಭಾಷೆಯ ಕುರಿತಾಗಿ ಎದುರಾದ ಈ ಅಸಾಮಾನ್ಯ ಪ್ರಶ್ನೆಯಿಂದ ಒಂದು ಕ್ಷಣ ಗಲಿಬಿಲಿಯಾಯಿತು. “ನಮ್ಮ ಭಾಷೆಯೇ? ಇಲ್ಲ. ಗೋವಾಸ್‌ನಲ್ಲಿನ ಕೆಲವು ಹಿರಿಯರು ಮಾತ್ರ ಮಾತನಾಡುತ್ತಾರೆ. ಇಲ್ಲಿ ಜನರು ನಮ್ಮನ್ನು ನೋಡಿ ನಗುತ್ತಾರೆ. ನಾವು ನಮ್ಮ ಭಾಷೆಯನ್ನು ಮರೆತಿದ್ದೇವೆ. ಹೀಗಾಗಿ ನಾವು ಬಾಂಗ್ಲಾ ಭಾಷೆಯನ್ನು ಮಾತ್ರ ಮಾತನಾಡುತ್ತೇವೆ.”
"ಗೋವಾಸ್‌ನಲ್ಲಿ, ನಮಗೆ ಮನೆ ಮತ್ತು ಎಲ್ಲವೂ ಇದೆ, ಮತ್ತು ಇಲ್ಲಿ ನಮಗೆ ಕೆಲಸವಿದೆ. ಆಗೆ ಭಾತ್... ವೋಟ್, ಭಾಸಾ ಸಬ್ ತಾರ್ ಪೋರೆ [ಮೊದಲು ಅನ್ನ, ನಂತರ ಮತ, ಭಾಷೆ ಇತ್ಯಾದಿ]” ಎನ್ನುತ್ತಾ ಅಂಜಲಿ ಬಸ್ತಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಉಳಿದ ಮಹಿಳೆಯರೊಂದಿಗೆ ಸೇರಿಕೊಂಡರು.
ಅನುವಾದ: ಶಂಕರ. ಎನ್. ಕೆಂಚನೂರು