ತರುಣನೊಬ್ಬ ತೆರೆಯ ಹಿಂದೆ ದೀಪ ಆರಿಹೋಗದಂತೆ ಜಾಗ್ರತೆಯಿಂದ ಕೈಯನ್ನು ಕುಣಿಸುತ್ತಿದ್ದಾನೆ. ಸುಮಾರು ಒಂದು ಗಂಟೆಯ ಪ್ರದರ್ಶನದಲ್ಲಿ ಅನೇಕ ಬಾರಿ ಕೈಗಳನ್ನು ಕುಣಿಸುವಾಗ ಸಾಧನಕ್ಕೆ ಯಾವುದೇ ಹಾನಿಯಾಗದಂತೆ, ತನ್ನ ಜೊತೆಗಾರರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತಾನೆ.
ಇವೆರೆಲ್ಲರೂ ಪ್ರೇಕ್ಷಕರ ಕಣ್ಣಿಗೆ ಬೀಳದೆ ಅಗೋಚರವಾಗಿರುವ ತೋಲ್ಪಾವಕೂತ್ ಗೊಂಬೆಯಾಡಿಸುವ ಕಲಾವಿದರು.
ಬಿಳಿಬಣ್ಣದ ಹತ್ತಿ ಬಟ್ಟೆಯ ಪರದೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಈ ತೊಗಲುಬೊಂಬೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೊಂಬೆಯಾಡಿಸುವವರು ಚಲಿಸುತ್ತಾರೆ. ಅವರ ಪಾದಗಳ ಬಳಿ 50-60 ಬೊಂಬೆಗಳು ತಮ್ಮ ಸರದಿಗಾಗಿ ಸಾಲಾಗಿ ಕಾಯುತ್ತಿರುತ್ತವೆ. ಕಥೆಯನ್ನು ಸ್ಪೀಕರ್ಗಳ ಮೂಲಕ ಹೇಳುತ್ತಾ ನೆರಳಿನ ಮೂಲಕ ಪ್ರದರ್ಶಿಸಲಾಗುತ್ತದೆ.
ಈ ಕಲೆಯ ವೈಶಿಷ್ಟ್ಯವೆಂದರೆ ನಿಜವಾಗಿ ಪ್ರದರ್ಶನ ಮಾಡುವ ಕಲಾವಿದರು ಅಗೋಚರವಾಗಿರುವುದು. ಬೊಂಬೆಯಾಟದ ಕಲಾವಿದ ರಾಮಚಂದ್ರ ಪುಲವರ್ ಅವರಿಗೆ 2021ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಸಿಕ್ಕಿದಾಗ, ಅದೊಂದು ಸಂಭ್ರಮವಾಗಿತ್ತು ಮತ್ತು ಕಲೆಗೆ ಹೆಚ್ಚಿನ ಪ್ರಚಾರ ಸಿಕ್ಕಿತು. ತೋಲ್ಪಾವಕೂತ್ ಕಲಾವಿದ ರಾಮಚಂದ್ರ ಅವರು ತಮ್ಮ ಭಾಷಣದಲ್ಲಿ, "ಈ ಮನ್ನಣೆ ... ಇದು ಬೊಂಬೆಯಾಟದ ರಂಗಭೂಮಿಯನ್ನು ಉಳಿಸಲು ಇಡೀ ತಂಡ ಅನೇಕ ವರ್ಷಗಳಿಂದ ಮಾಡಿರುವ ಸಾಮೂಹಿಕ ಪ್ರಯತ್ನಕ್ಕೆ ಸಿಕ್ಕಿದ ಮನ್ನಣೆ," ಎಂದು ಹೇಳಿದರು.
ಪುಲವರ್ ಮತ್ತು ಅವರ ತಂಡದ ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ. ಆದರೆ ವಿಮರ್ಶಕರು ಹಾಗೂ ಭಕ್ತರು ಕಲೆಯನ್ನು ಇವರು ವ್ಯಾಪಾರಕ್ಕಾಗಿ ಬಳಸುತ್ತಿದ್ದಾರೆ ಎಂದು ಟೀಕಿಸುತ್ತಾರೆ. ಆದರೆ ರಾಮಚಂದ್ರ ಆವರು ಈ ಟೀಕೆಗಳಿಗೆ ತಲೆಕೆಡಿಸಿಕೊಂಡಿಲ್ಲ. “ಹೊಟ್ಟೆ ತುಂಬಿಸಿಕೊಳ್ಳಲು ಮತ್ತು ಬದುಕಲು ಇದೊಂದು ವ್ಯಾಪಾರವೇ ಆಗಿದೆ,” ಎಂದು ಅವರು ಹೇಳುತ್ತಾರೆ. “ನಟರಿಗೆ ಹಾಗೂ ನರ್ತಕರಿಗೆ ನಾವು ಹಣ ಕೊಡುತ್ತೇವೆ ಎಂದಾದರೆ, ಗೊಂಬೆಯಾಡಿಸುವ ಕಲಾವಿದರಿಗೆ ಯಾಕೆ ಕೊಡಬಾರದು?” ಎಂದು ಅವರು ಪ್ರಶ್ನಿಸುತ್ತಾರೆ.




