ಖುಮಾ ಥೀಕ್ಗೆ ಮಣಿಪುರದ ಚುರಾಚಂದ್ಪುರ ಜಿಲ್ಲೆಯಲ್ಲಿರುವ ತನ್ನ ಹಳ್ಳಿ ಲ್ಯಾಂಗ್ಜಾಗೆ ಮರಳುವುದನ್ನು ನೆನೆಸಿಕೊಂಡಗಾಲೇ ಮೈ ಅದುರಿಹೋಗುತ್ತದೆ. 64 ವರ್ಷ ಪ್ರಾಯದ ಈ ರೈತನಿಗೆ ಲ್ಯಾಂಗ್ಜಾ 30 ವರ್ಷಗಳಿಂದ ನೆಲೆಯನ್ನು ನೀಡಿದೆ. ತನ್ನ ಮಗ ಡೇವಿಡ್ನನ್ನು ಬೆಳೆಸಿದ, ಅವನಿಗಾಗಿ ಶಾಲೆಗೆ ಮಧ್ಯಾಹ್ನದ ಊಟಕ್ಕೆ ಬುತ್ತಿಯನ್ನು ಕಟ್ಟಿದ, ತನ್ನ ಭತ್ತದ ಗದ್ದೆಯಲ್ಲಿ ಒಟ್ಟಾಗಿ ಕೆಲಸ ಮಾಡಿದ ಈ ಹಳ್ಳಿಯಲ್ಲಿ ಅವರು ಬೆಚ್ಚಗಿನ ಬದುಕನ್ನು ಕಟ್ಟಿಕೊಂಡಿದ್ದರು. ಮೊದಲ ಬಾರಿಗೆ ಅಜ್ಜನೆಂದು ಕರೆಸಿಕೊಂಡದ್ದು ಇಲ್ಲೇ. ಲಾಂಗ್ಜಾವೇ ಖುಮಾ ಅವರ ಪ್ರಪಂಚವಾಗಿತ್ತು. ಅದು ಅವರು ತೃಪ್ತನಾಗಿ ಬದುಕಿದ ಜಗತ್ತು.
ಇದು ಜುಲೈ 2, 2023ರವರೆಗಿನ ಕತೆ.
ಆ ಒಂದು ದಿನ ಅವರ ಜೀವಮಾನದ ಇಡೀ ನೆನಪುಗಳನ್ನು ನಿರ್ದಯವಾಗಿ ಅಳಿಸಿಹಾಕಿತ್ತು. ಅವರು ಹೊರಬರಲಾಗದಂತಹ ಒಂದು ಚಿತ್ರವನ್ನು ಅವರ ಮೆದುಳಿನಲ್ಲಿ ಉಳಿಸಿಹೋಗಿತ್ತು. ಅದು ಅವರನ್ನು ಮತ್ತೆಂದು ನೆಮ್ಮದಿಯಿಂದ ಮಲಗಲು ಬಿಡದ ಚಿತ್ರ. ಮತ್ತೆಂದೂ ಅವರು ಎದ್ದು ನಿಲ್ಲದಂತೆ ಮಾಡಿದ ಚಿತ್ರ. ಅದು ಲಾಂಗ್ಜಾದ ಹೆಬ್ಬಾಗಿಲ ಬಳಿ ಬಿದಿರಿನ ಬೇಲಿಯ ಮೇಲೆ ಇರಿಸಲಾದ ದೇಹದಿಂದ ಬೇರ್ಪಟ್ಟ ಅವರ ಮಗನ ತಲೆಯ ಚಿತ್ರ.
ಭಾರತದ ಈಶಾನ್ಯದಲ್ಲಿರುವ ಖುಮಾ ಅವರ ತವರು ರಾಜ್ಯ ಮಣಿಪುರವು ಮೇ 3, 2023ರಿಂದ ಜನಾಂಗೀಯ ಹಿಂಸಾಚಾರದಲ್ಲಿ ಸಿಲುಕಿ ಹೈರಾಣಾಗಿ ಹೋಗಿದೆ. ಮಾರ್ಚ್ ತಿಂಗಳ ಕೊನೆಯಲ್ಲಿ ಮಣಿಪುರ ಹೈಕೋರ್ಟ್ ಅಲ್ಲಿನ ಪ್ರಬಲ ಸಮುದಾಯವಾದ ಮೈತೇಯಿಗಳಿಗೆ “ಬುಡಕಟ್ಟು ಸ್ಥಾನಮಾನ” ನೀಡಿತು. ಇದು ಅವರಿಗೆ ಆರ್ಥಿಕ ಪ್ರಯೋಜನಗಳು ಮತ್ತು ಕೋಟಾ ಮೂಲಕ ಸರ್ಕಾರಿ ಉದ್ಯೋಗಗಳನ್ನು ಪಡೆಯುವ ಅವಕಾಶವನ್ನು ನೀಡುತ್ತದೆ. ಈ ತೀರ್ಪಿನಿಂದ ಕುಕಿ ಬುಡಕಟ್ಟು ಜನಾಂಗದವರು ಹೇರಳವಾಗಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಮೈತೇಯಿಗಳು ಭೂಮಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ನಂತರ ಈ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.
ರಾಜ್ಯದ ಜನಸಂಖ್ಯೆಯ ಶೇಕಡಾ 28ರಷ್ಟಿರುವ ಕುಕಿಗಳು ಈ ತೀರ್ಪಿನ ಫಲವಾಗಿ ಈಗಾಗಲೇ 53 ಶೇಕಡಾ ಇರುವ ಮೈತೇಯಿಗಳು ರಾಜ್ಯದ ಮೇಲೆ ತಮ್ಮ ಪ್ರಾಬಲ್ಯವನ್ನು ಇನ್ನೂ ಹೆಚ್ಚು ಬಲಪಡಿಸಿಕೊಳ್ಳುತ್ತಾರೆ ಎಂದು ನಂಬಿದ್ದಾರೆ.
ಮೇ 3 ರಂದು, ಕುಕಿ ಸಮುದಾಯದ ಕೆಲವರು ನ್ಯಾಯಾಲಯದ ಈ ತೀರ್ಪನ್ನು ಪ್ರತಿಭಟಿಸಿ ಚುರಾಚಂದ್ಪುರ ಜಿಲ್ಲೆಯಲ್ಲಿ ರ್ಯಾಲಿ ನಡೆಸಿದರು.
ಈ ಪ್ರತಿಭಟನೆಯ ನಂತರ 1917 ರಲ್ಲಿ ಚುರಾಚಂದ್ಪುರದಲ್ಲಿ ವಸಾಹತುಶಾಹಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಕುಕಿಗಳು ದಂಗೆ ಎದ್ದ ಸ್ಮಾರಕವಾದ ಆಂಗ್ಲೋ-ಕುಕಿ ಯುದ್ಧದ ಮೆಮೋರಿಯಲ್ ಗೇಟ್ಗೆ ಮೈತೇಯಿಗಳು ಬೆಂಕಿ ಹಚ್ಚಿದರು. ಇದು ದೊಡ್ಡ ಗಲಭೆಗೆ ಕಾರಣವಾಗಿ ಮೊದಲ ನಾಲ್ಕು ದಿನಗಳಲ್ಲಿಯೇ 60 ಜನರನ್ನು ಬಲಿತೆಗೆದುಕೊಂಡಿತು.
ಇಲ್ಲಿಂದ ಆರಂಭವಾದ ಅಮಾನುಷ ಕೊಲೆಗಳು, ಶಿರಚ್ಛೇದಗಳು, ಸಾಮೂಹಿಕ ಅತ್ಯಾಚಾರಗಳು ಮತ್ತು ಬೆಂಕಿ ಹಚ್ಚುವುದು ಮೊದಲಾದ ಹಿಂಸಾಚಾರ ಕಾಳ್ಗಿಚ್ಚಿನಂತೆ ಇಡೀ ಮಣಿಪುರವನ್ನು ವ್ಯಾಪಿಸಿತು. ಇಲ್ಲಿಯವರೆಗೆ ಸುಮಾರು 190 ಜನರ ಕೊಲೆಯಾಗಿದೆ ಮತ್ತು 60,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಕುಕಿಗಳು. ಹೆಚ್ಚಿನವರು ಈ ಆಂತರಿಕ ಯುದ್ಧದಲ್ಲಿ ರಾಜ್ಯ ಮತ್ತು ಪೋಲೀಸರು ಮೈತೇಯಿ ಉಗ್ರಗಾಮಿಗಳಿಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಮಾತನಾಡುತ್ತಿದ್ದಾರೆ.
ಎರಡು ಸಮುದಾಯಗಳೂ ತಮ್ಮ ನಡುವೆ ನಂಬಿಕೆಯನ್ನು ಕಳೆದುಕೊಂಡು ಒಂದೊಮ್ಮೆ ತಮ್ಮ ನೆರೆಮನೆಯವರಾಗಿದ್ದ ಶತ್ರುಗಳ ವಿರುದ್ದ ಕಾಡಾಡಲು ತಮ್ಮದೇ ಸ್ವಂತ ಗ್ರಾಮ ರಕ್ಷಣಾ ಪಡೆಗಳನ್ನು ಕಟ್ಟುತ್ತಿವೆ.
ಜುಲೈ 2ರ ಬೆಳ್ಳಂಬೆಳಗ್ಗೆ ಖುಮಾ ಅವರ ಮಗ 33 ವರ್ಷದ ಡೇವಿಡ್ ಲ್ಯಾಂಗ್ಜಾದ ಕುಕಿ ಗ್ರಾಮದ ಕಾವಲು ಕಾಯುತ್ತಿದ್ದವರ ಜೊತೆಗೆ ಇದ್ದಾಗ ಸಶಸ್ತ್ರ ಸಜ್ಜಿತ ಮೈತೇಯಿ ಗುಂಪು ಹಠಾತ್ತನೆ ದಾಳಿ ಮಾಡಿತು. ಲ್ಯಾಂಗ್ಜಾ ಕುಕಿ ಪ್ರಾಬಲ್ಯದ ಚುರಾಚಂದ್ಪುರ ಜಿಲ್ಲೆ ಮತ್ತು ಮೈತೇಯಿ ಪ್ರಾಬಲ್ಯದ ಇಂಫಾಲ್ ಕಣಿವೆಯ ಗಡಿಭಾಗದಲ್ಲಿದ್ದು ಅತ್ಯಂತ ಇದು ಸೂಕ್ಷ್ಮ ಪ್ರದೇಶವಾಗಿದೆ.
ಸಶಸ್ತ್ರ ಸಜ್ಜಿತ ಉದ್ರಿಕ್ತ ಗುಂಪು ಧಾಳಿ ಇಡುತ್ತಿದ್ದಂತೆ ಆ ಪ್ರದೇಶದ ಜನರ ಬಳಿ ಹೆಚ್ಚಿನ ಸಮುಯವಿಲ್ಲ ಎಂಬುದನ್ನು ಅರಿತ ಡೇವಿಡ್ ಜನರ ಬಳಿ ಹೋಗಿ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗುವಂತೆ ಹೇಳಿದರು. "ಕೈಗೆ ಸಿಕ್ಕದ್ದನ್ನೆಲ್ಲಾ ಎತ್ತಿಕೊಂಡು ನಮ್ಮ ಬುಡಕಟ್ಟು ಜನರು ಹೆಚ್ಚಿರುವ ಬೆಟ್ಟ ಪ್ರದೇಶಗಳ ಒಳಗೆ ಓಡಿಹೋದೆವು," ಎಂದು ಖುಮಾ ಹೇಳುತ್ತಾರೆ. "ಡೇವಿಡ್ ಬೇಗನೇ ಅದೇ ದಾರಿಯಲ್ಲಿ ಬರುವುದಾಗಿ ಮಾತುಕೊಟ್ಟಿದ್ದ. ಅವನ ಬಳಿ ಒಂದು ಸ್ಕೂಟರ್ ಕೂಡ ಇತ್ತು.”
ಡೇವಿಡ್ ಮತ್ತು ಇತರ ಕಾವಲುಗಾರರು ಇವರ ಕುಟುಂಬ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ತಮ್ಮ ಸಮಯವನ್ನು ನೀಡಿದರು. ಆದರೆ ತಮಗಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ಡೇವಿಡ್ ತನ್ನ ಸ್ಕೂಟರ್ನಲ್ಲಿ ಬರುವ ಮೊದಲೇ ಅವರನ್ನು ಉದ್ರಿಕ್ತ ಗುಂಪು ಹಿಂಬಾಲಿಸಿ ಗ್ರಾಮದಲ್ಲಿಯೇ ಅವರ ತಲೆ ಕಡಿದು ಹಾಕಿತು. ಅವರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸುಟ್ಟಿತು.
"ಆ ದಿನದಿಂದ ಈಗಲೂ ನಾನು ಶಾಕ್ನಲ್ಲಿಯೇ ಇದ್ದೇನೆ" ಎಂದು ಹೇಳುವ ಖುಮಾ ಈಗ ತಮ್ಮ ಸಹೋದರನೊಂದಿಗೆ ಚುರಚಂದಪುರ ಜಿಲ್ಲೆಯ ಬೆಟ್ಟಗಳ ಆಳ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. “ನಾನು ಆಗಾಗ್ಗೆ ಮಧ್ಯರಾತ್ರಿಯಲ್ಲಿ ತಟ್ಟನೆ ಎದ್ದು ನಡುಗಲಾರಂಭಿಸುತ್ತೇನೆ. ನನಗೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಮಗನ ಕತ್ತರಿಸಿದ ತಲೆಯೊಂದಿಗೆ ನಡೆದುಕೊಂಡು ಹೋಗುತ್ತಿರುವ ಆ ವ್ಯಕ್ತಿಯ ಚಿತ್ರ ಇನ್ನೂ ಕಣ್ಣಮುಂದಿದೆ. ನಾನು ಅದನ್ನು ನನ್ನ ತಲೆಯಿಂದ ತೆಗೆದುಹಾಕಲು ಎಂದಿಗೂ ಸಾಧ್ಯವಿಲ್ಲ,” ಎನ್ನುತ್ತಾರೆ.
ಮಣಿಪುರದಾದ್ಯಂತ ಖುಮಾ ಅವರಂತಹ ಸಾವಿರಾರು ಜನರು ತಮ್ಮ ಪ್ರದೇಶಗಳನ್ನು ಬಿಟ್ಟು ಪಲಾಯನ ಮಾಡಿದ್ದಾರೆ. ಅವರು ಹಿಂದೆ ಮನೆ ಎಂದು ಕರೆಯುತ್ತಿದ್ದ ಕಟ್ಟಡವನ್ನು ಇಂದು ಗುರುತಿಸಲೂ ಸಾಧ್ಯವಿಲ್ಲ. ಬರಿಗೈಗಳೊಂದಿಗೆ ಆಘಾತಕಾರಿ ನೆನಪುಗಳೊಂದಿಗೆ ಹೋರಾಡುತ್ತಿರುವ ಅಂತರಿಕ ಯುದ್ಧಕ್ಕೆ ಬಲಿಯಾದ ಇವರು ತಮ್ಮ ಉದಾರಿ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಚ್ಯಾರಿಟಿಗಳು ನಡೆಸುತ್ತಿರುವ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಚುರಾಚಂದ್ಪುರ ಜಿಲ್ಲೆಯ ಲಮ್ಕಾ ತಹಸಿಲ್ನ ಲಿಂಗ್ಸಿಫೈ ಗ್ರಾಮದ 35 ವರ್ಷದ ಬೋಶಿ ಥಾಂಗ್ ತಮ್ಮ 3 ರಿಂದ 12 ವರ್ಷದ ನಾಲ್ವರು ಮಕ್ಕಳೊಂದಿಗೆ ಮೇ 3 ರ ದಾಳಿಯ ನಂತರ ಕಾಂಗ್ಪೋಪಿ ಜಿಲ್ಲೆಯ ಹಾವೊ ಖೋಂಗ್ ಚಿಂಗ್ ಗ್ರಾಮದ ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. "ಮೈತೇಯಿಗಳ ಗುಂಪು ಹತ್ತಿರದ ಮೂರು ಹಳ್ಳಿಗಳನ್ನು ಸುಟ್ಟುಹಾಕಿ ನಮ್ಮ ಬಳಿ ಬರುತ್ತಿತ್ತು. ನಮಲ್ಲಿ ಹೆಚ್ಚಿನ ಸಮಯವಿಲ್ಲವಾದ್ದರಿಂದ ಮಕ್ಕಳು ಮತ್ತು ಮಹಿಳೆಯರನ್ನು ಮೊದಲು ಹೊರಡಲು ಹೇಳಿದೆವು," ಎಂದು ಅವರು ಹೇಳುತ್ತಾರೆ.
ಕಾಡಿನೊಳಗೆ ಇರುವ ನಾಗಾ ಗ್ರಾಮಕ್ಕೆ ಬೋಶಿ ತಪ್ಪಿಸಿಕೊಂಡು ಹೋದರೂ ಅವರ ಪತಿ 34 ವರ್ಷ ಪ್ರಾಯದ ಲಾಲ್ ಟಿನ್ ಥಾಂಗ್ ಇತರ ಪುರುಷರೊಂದಿಗೆ ಹಳ್ಳಿಯಲ್ಲಿಯೇ ಉಳಿದುಕೊಂಡರು. ನಾಗಾ ಬುಡಕಟ್ಟು ಜನರು ಅವರಿಗೆ ಮತ್ತು ಮಕ್ಕಳಿಗೆ ಆಶ್ರಯ ನೀಡಿದರು. ಬೋಶಿ ಅಲ್ಲಿಯೇ ರಾತ್ರಿಯಿಡೀ ತನ್ನ ಗಂಡನಿಗಾಗಿ ಕಾಯುತ್ತಾ ಕುಳಿತರು.
ನಾಗಾ ವ್ಯಕ್ತಿಯೊಬ್ಬರು ಲಾಲ್ ಟಿನ್ ಥಾಂಗ್ ಸುರಕ್ಷಿತವಾಗಿದ್ದಾರೆಯೇ ಎಂದು ನೋಡಲು ಅವರ ಗ್ರಾಮಕ್ಕೆ ಹೋದರು. ಆದರೆ ಹಿಂತಿರುಗಿ ಬರುವಾಗ ಬೋಶಿಯರಿಗೆ ಹೃದಯವಿದ್ರಾವಕ ಸುದ್ದಿಯೊಂದನ್ನು ತಂದಿದ್ದರು. ಆಕೆಯ ಪತಿಯನ್ನು ಹಿಡಿದು ಚಿತ್ರಹಿಂಸೆ ನೀಡಿ ಜೀವಂತವಾಗಿ ಸುಟ್ಟು ಹಾಕಲಾಗಿತ್ತು. "ನನ್ನ ಗಂಡನ ಸಾವಿಗೆ ಅಳಲು, ಆ ಸುದ್ದಿಯನ್ನು ಜೀರ್ಣಿಸಿಕೊಳ್ಳಲು ನನ್ನಲ್ಲಿ ಸಮಯವಿರಲಿಲ್ಲ" ಎಂದು ಬೋಶಿ ಹೇಳುತ್ತಾರೆ. “ನನ್ನ ಮಕ್ಕಳನ್ನು ಸುರಕ್ಷಿತವಾಗಿಡುವುದರಲ್ಲಿಯೇ ನಾನು ನಿರತಳಾಗಿದ್ದೆ. ಮರುದಿನ ಬೆಳಿಗ್ಗೆ ನಾಗಾ ಜನರು ನಮ್ಮನ್ನು ಕುಕಿಗಳ ಹಳ್ಳಿಗೆ ಕರೆದುಕೊಂಡು ಹೋದರು. ಅಲ್ಲಿಂದ ನಾನು ಚುರಾಚಾಂದಪುರಕ್ಕೆ ಬಂದೆ. ನಾನು ನನ್ನ ಮನೆಗೆ ಮತ್ತೆ ಹೋಗುತ್ತೇನೆ ಎಂಬ ನಂಬಿಕೆ ನನಗಿಲ್ಲ. ಬದುಕು ಕಟ್ಟುವುದು ಹೇಗೆ ಎಂಬುದಕ್ಕಿಂತ ಜೀವ ಉಳಿಸಿಕೊಳ್ಳುವುದೇ ಮುಖ್ಯವಾಗಿದೆ,” ಎಂದು ಅವರು ಹೇಳುತ್ತಾರೆ.
ಬೋಶಿ ಮತ್ತು ಅವರ ಪತಿಗೆ ಗ್ರಾಮದಲ್ಲಿ ಐದು ಎಕರೆ ಭತ್ತದ ಗದ್ದೆಯಿತ್ತು, ಅದೇ ಅವರ ಕುಟುಂಬಕ್ಕೆ ಅನ್ನವನ್ನು ನೀಡುತ್ತಿದ್ದದ್ದು. ಆದರೆ ಈಗ ಮತ್ತೆ ಅಲ್ಲಿಗೆ ಹಿಂತಿರುಗುವುದನ್ನು ಕಲ್ಪಿಸಿಕೊಳ್ಳಲೂ ಬೋಶಿಯವರಿಗೆ ಸಾಧ್ಯವಿಲ್ಲ. ಚುರಚಂದಪುರವು ಸದ್ಯ ಕುಕಿಗಳಿಗೆ ಸುರಕ್ಷಿತ ಸ್ಥಳ, ಏಕೆಂದರೆ ಸುತ್ತಮುತ್ತ ಯಾವುದೇ ಮೈತೇಯಿಗಳು ಇಲ್ಲ. ಮೈತೇಯಿ ಹಳ್ಳಿಗಳ ಸಮೀಪ ತನ್ನ ಜೀವನವನ್ನು ನಡೆಸುತ್ತಿದ್ದ ಬೋಶಿಯಂತ ಮಹಿಳೆಗೆ ಮೈತೇಯಿಗಳೊಂದಿಗೆ ಬೆರೆಯುವ ಆಲೋಚನೆಯೇ ಭಯವನ್ನು ಹುಟ್ಟಿಸುತ್ತದೆ. "ನಮ್ಮ ಹಳ್ಳಿ ಸುತ್ತಮುತ್ತ ಹಲವಾರು ಮೈತೇಯಿ ಹಳ್ಳಿಗಳಿದ್ದವು. ಅವರು ಬಜಾರ್ಗಳನ್ನು ನಡೆಸುತ್ತಿದ್ದರು ಮತ್ತು ನಾವು ಅವರ ಗ್ರಾಹಕರಾಗಿದ್ದೇವೆ. ಒಂದು ಸೌಹಾರ್ದಯುತ ಸಂಬಂಧವಿತ್ತು,” ಎಂದು ನೆನಪಿಸಿಕೊಳ್ಳುತ್ತಾರೆ ಬೋಶಿ.
ಆದರೆ ಇಂದು ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ಇದ್ದ ಈ ನಂಬಿಕೆ ಸಂಪೂರ್ಣ ಕುಸಿದಿದೆ. ರಾಜ್ಯವು ಇಂಫಾಲ್ ಕಣಿವೆಯ ಮೈತೇಯಿಗಳು ಮತ್ತು ಕಣಿವೆಯ ಸುತ್ತಲಿನ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಕುಕಿಗಳ ನಡುವೆ ವಿಭಜಿಸಲ್ಪಟ್ಟಿದೆ. ಒಬ್ಬರು ಇಬ್ಬೊಬ್ಬರ ಸೀಮೆಗೆ ನುಗ್ಗಿದರೆ ಮರಣದಂಡನೆಯೇ ಗತಿ. ಇಂಫಾಲದಲ್ಲಿರುವ ಕುಕಿ ಪ್ರದೇಶಗಳು ಸಂಪೂರ್ಣವಾಗಿ ನಿರ್ಜನವಾಗಿವೆ. ಕುಕಿ ಪ್ರಾಬಲ್ಯದ ಜಿಲ್ಲೆಗಳಲ್ಲಿ ಮೈತೇಯಿಗಳನ್ನು ಬೆಟ್ಟಗಳಿಂದ ಹೊರಹಾಕಲಾಗಿದೆ.
ಇಂಫಾಲ್ನ ಮೈತೇಯಿ ಪರಿಹಾರ ಶಿಬಿರದಲ್ಲಿರುವ 50 ವರ್ಷ ಪ್ರಾಯದ ಹೇಮಾ ಬಾಟಿ ಮೊಯಿರಾಂಗ್ಥೆಮ್ ಅವರು ಕುಕಿ ಜನರ ಉದ್ರಿಕ್ತ ಗುಂಪು ಮೊರೆಹ್ ಪಟ್ಟಣದ ಮೇಲೆ ದಾಳಿ ಮಾಡಿದಾಗ ತನ್ನ ಪಾರ್ಶ್ವವಾಯು ಪೀಡಿತ ಸಹೋದರನೊಂದಿಗೆ ಹೇಗೆ ತಪ್ಪಿಸಿಕೊಂಡರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. "ನನ್ನ ಒಂದು ಕೋಣೆಯ ಮನೆಯನ್ನು ಸಹ ಸುಟ್ಟು ಹಾಕಿದರು. ನನ್ನ ಸೋದರಳಿಯ ಪೊಲೀಸರಿಗೆ ಕರೆ ಮಾಡಿದ. ನಾವು ಬೆಂಕಿ ಹಿಡಿದು ಸುಟ್ಟು ಸಾಯುವ ಮೊದಲಾದರೂ ಅವರು ಬರಲಿ ಎಂದು ಬೇಡಿದ್ದೆವು,” ಎಂದು ಅವರು ಹೇಳುತ್ತಾರೆ.
ಉದ್ರಿಕ್ತ ಕುಕಿ ಗುಂಪು ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಮೋರೆಹ್ ಪಟ್ಟಣವನ್ನು ಸುತ್ತಿವರಿದಾಗ ಹೇಮಾ ಅವರಿಗೆ ತನ್ನ ನಡೆಯಲೂ ಸಾಧ್ಯವಿಲ್ಲದ ಸಹೋದರನೊಂದಿಗೆ ಓಡಿಹೋಗಲು ಸಾಧ್ಯವಿರಲಿಲ್ಲ. "ಅವನು ತನ್ನನ್ನು ಅಲ್ಲೇ ಬಿಟ್ಟು ಹೋಗುವಂತೆ ಹೇಳಿದ. ಹಾಗೇನಾದರೂ ಮಾಡಿದ್ದರೆ ನನಗೆ ಕ್ಷಮೆಯೇ ಇರುತ್ತಿರಲಿಲ್ಲ" ಎಂದು ಅವರು ಹೇಳುತ್ತಾರೆ.
ಹೇಮಾರವರ ಪತಿ ಅಪಘಾತದಲ್ಲಿ ಸಾವನ್ನಪ್ಪಿದ ನಂತರ 10 ವರ್ಷಗಳಿಂದ ಈ ಮೂವರು ಪರಸ್ಪರರಿಗೆ ಒದಗಿ ಬಂದಿದ್ದರು. ಇನ್ನೊಬ್ಬರ ಸುರಕ್ಷತೆಗಾಗಿ ಮತ್ತೊಬ್ಬರು ತ್ಯಾಗ ಮಾಡುವುದು ಎಂದಿಗೂ ಅವರ ಆಯ್ಕೆಯಾಗಿರಲಿಲ್ಲ. ಏನೇ ಆದರೂ ಅದು ಮೂವರಿಗೂ ಒಟ್ಟಿಗೆ ಆಗಬೇಕಿತ್ತು.
ಪೊಲೀಸರು ಸ್ಥಳಕ್ಕೆ ಬಂದಾಗ ಹೇಮಾ ತಮ್ಮ ಸೋದರಳಿಯನೊಂದಿಗೆ ಉರಿಯುತ್ತಿದ್ದ ಮನೆಯಿಂದ ತಮ್ಮ ಸಹೋದರನನ್ನು ಎತ್ತಿಕೊಂಡು ಪೊಲೀಸ್ ಕಾರಿಗೆ ತಂದು ಹಾಕಿದರು. ಪೊಲೀಸರು ಮೂವರನ್ನು 110 ಕಿಲೋಮೀಟರ್ ದೂರದಲ್ಲಿರುವ ಇಂಫಾಲ್ಗೆ ಸುರಕ್ಷಿತವಾಗಿ ಕರೆತಂದರು. "ಅಂದಿನಿಂದ ನಾನು ಈ ಪರಿಹಾರ ಶಿಬಿರದಲ್ಲಿ ಇದ್ದೇನೆ. ನನ್ನ ಸೋದರಳಿಯ ಮತ್ತು ಸಹೋದರ ನಮ್ಮ ಸಂಬಂಧಿಕರೊಬ್ಬರೊಂದಿಗೆ ಇದ್ದಾರೆ,” ಎಂದು ಅವರು ಹೇಳುತ್ತಾರೆ
ಮೊರೇಹ್ನಲ್ಲಿ ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದ ಹೇಮಾ ಈಗ ಬದುಕಲು ಚ್ಯಾರಿಟಿಯವರ ಮೊರೆಹೋಗಿದ್ದಾರೆ. ಇವರು 20 ಜನ ಅಪರಿಚಿತರೊಂದಿಗೆ ಹಾಸ್ಟೆಲ್ ರೂಮಿನಂತ ಸಣ್ಣ ಕೋಣೆಯಲ್ಲಿ ಮಲಗುತ್ತಿದ್ದಾರೆ. ಎಲ್ಲರಿಗೂ ಇಲ್ಲಿಯೇ ತಯಾರಿಸಿಕೊಡುವ ಊಟವನ್ನು ಅವರೂ ತಿನ್ನುತ್ತಾರೆ ಮತ್ತು ಬೇರೆಯವರು ದಾನವಾಗಿ ನೀಡಿದ ಬಟ್ಟೆಗಳನ್ನು ಧರಿಸುತ್ತಾರೆ. "ಇದು ನನಗೆ ಸರಿಯೆನಿಸುವುದಿಲ್ಲ. ನನ್ನ ಪತಿ ತೀರಿಕೊಂಡ ನಂತರವೂ ನಾನು ಸ್ವಾವಲಂಬಿಯಾಗಿ ಬದುಕಿದವಳು. ನನ್ನ ಅಣ್ಣನನ್ನೂ ನಾನು ನೋಡಿಕೊಂಡಿದ್ದೇನೆ. ನಾವು ಎಷ್ಟು ದಿನ ಈ ರೀತಿ ಬದುಕಬೇಕೋ ಗೊತ್ತಿಲ್ಲ,” ಅವರು ಹೇಳುತ್ತಾರೆ.
ಮಣಿಪುರದಾದ್ಯಂತ ನಾಗರಿಕರು ನಿಧಾನವಾಗಿ ತಮ್ಮ ಮನೆಮಠ, ಜೀವನೋಪಾಯ ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬರುತ್ತಿದ್ದಾರೆ.
ಖುಮಾ ಅವರಿಗೆ ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು ಹೊಸದೇನಲ್ಲವಾದರೂ ಡೇವಿಡ್ ಮರಣವನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗಿತ್ತು. ಸುಮಾರು 30 ವರ್ಷಗಳ ಹಿಂದೆ ಅವರು ಕಾಲರಾದಿಂದಾಗಿ ತಮ್ಮ ಎರಡು ವರ್ಷದ ಮಗಳನ್ನು ಕಳೆದುಕೊಂಡಿದ್ದರು. ಅವರ ಪತ್ನಿ 25 ವರ್ಷಗಳ ಹಿಂದೆ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು. ಆದರೆ ಇನ್ನೂ ಯುವಕನಾಗಿದ್ದ ಮಗ ಡೇವಿಡ್ ಮರಣವು ಅವರಲ್ಲಿ ಬದುಕಿನಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ.
ಖುಮಾ ತಮ್ಮ ಮಗ ಡೇವಿಡ್ನನ್ನು ಅವರಿಗೆ ಬೇಕಾದಂತೆ ಬೆಳೆಸಿದ್ದರು. ಶಾಲೆಯ ಪೋಷಕ-ಶಿಕ್ಷಕರ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಹೈಸ್ಕೂಲ್ ಮುಗಿಸಿದ ನಂತರ ಯಾವ ಕಾಲೇಜಿಗೆ ಸೇರಬೇಕು ಎಂದು ಸಲಹೆಯನ್ನೂ ನೀಡಿದ್ದರು. ಡೇವಿಡ್ ಮದುವೆಯಾಗಲು ಬಯಸಿದಾಗ ಅವನ ಜೊತೆಗೆ ನಿಂತರು.
ಇಷ್ಟು ವರ್ಷಗಳ ಕಾಲ ಒಬ್ಬರಿಗೊಬ್ಬರು ಬದುಕಿದ ಇವರ ಕುಟುಂಬವು ಮತ್ತೊಮ್ಮೆ ಬೆಳೆಯಲು ಪ್ರಾರಂಭಿಸಿತು. ಡೇವಿಡ್ ಮೂರು ವರ್ಷಗಳ ಹಿಂದೆ ವಿವಾಹವಾದರು. ಅವರಿಗೆ ಒಂದು ವರ್ಷದ ನಂತರ ಮಗು ಹುಟ್ಟಿತು. ಖುಮಾ ತನ್ನ ಮೊಮ್ಮಗನೊಂದಿಗೆ ಆಟವಾಡಿದ್ದನ್ನು ಮತ್ತು ಅವನನ್ನು ಬೆಳೆಸಿದ್ದನ್ನು ನೆನಪಿಸಿಕೊಂಡರು. ಆದರೆ ಈಗ ಕುಟುಂಬ ಛಿದ್ರ ಛಿದ್ರವಾಗಿ ಹೋಗಿದೆ. ಡೇವಿಡ್ರವರ ಹೆಂಡತಿ ಮಗುವಿನೊಂದಿಗೆ ತನ್ನ ತಾಯಿಯ ಜೊತೆಗೆ ಮತ್ತೊಂದು ಹಳ್ಳಿಯಲ್ಲಿದ್ದಾರೆ. ಈ ಕಡೆ ಖುಮಾ ತನ್ನ ಸಹೋದರನೊಂದಿಗೆ ಇದ್ದಾರೆ. ಅವರಲ್ಲಿ ಉಳಿದಿರುವುದು ನೆನಪುಗಳು ಮಾತ್ರ. ಅವುಗಳಲ್ಲಿ ಕೆಲವನ್ನು ಉಳಿಸಿಕೊಳ್ಳಲು ಬಯಸಿದರೆ, ಕೆಲವನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ.
ಕನ್ನಡಕ್ಕೆ: ಚರಣ್ ಐವರ್ನಾಡು