ಅಂಧೇರಿ ನಿಲ್ದಾಣದಲ್ಲಿ ಹತ್ತಿಳಿಯುವ ಜನರ ಗದ್ದಲದ ನಡುವೆ ಹಳಿಗಳ ಮೇಲಿನ ರೈಲು ಸ್ತಬ್ಧವಾಗಿ ನಿಂತಿತ್ತು. ರೈಲಿನ ಒಳಗೆ ಬಂದ ಜನರು ಸೀಟಿನ ಹಿಡಿ, ಮೇಲಿನ ಕಂಬಿ ಹೀಗೆ ಕೈಗೆ ಸಿಕ್ಕಿದ್ದನ್ನು ಆಧಾರವಾಗಿ ಹಿಡಿದು ನಿಂತಿದ್ದರು. ಇನ್ನೂ ಕೆಲವರು ಸೀಟಿಗಾಗಿ ಚೌಕಾಶಿ ನಡೆಸುತ್ತಿದ್ದರೆ ಉಳಿದವರು ಖಾಲಿ ಸೀಟು ಹುಡುಕುತ್ತಾ ಈಗಾಗಲೇ ಕುಳಿತವರನ್ನು ಪಕ್ಕಕ್ಕೆ ಸರಿಸಿ ಸೀಟು ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದರು.
ಆ ಜಂಗುಳಿಯ ನಡುವೆ 31 ವರ್ಷದ ಕಿಶನ್ ಜೋಗಿ ಮತ್ತು ಸಮುದ್ರ ನೀಲಿ ಬಣ್ಣದ ರಾಜಸ್ಥಾನಿ ಲಂಗ ಮತ್ತು ರವಿಕೆ ತೊಟ್ಟಿದ್ದ ಅವರ ಹತ್ತು ವರ್ಷದ ಮಗಳು ಭಾರತಿ ಕೂಡಾ ಅದೇ ರೈಲಿನಲ್ಲಿ ಜಾಗ ಗಿಟ್ಟಿಸಿಕೊಂಡರು. ಆಗ ಸಂಜೆ ಏಳು ಗಂಟೆಯಾಗಿತ್ತು. ಮುಂಬಯಿ ವೆಸ್ಟರ್ನ್ ಸಬರ್ಬ್ ಲೈನ್ ರೈಲು ಏರಿದ್ದ ಅವರಿಗೆ ಇದು ಈ ದಿನದ ಐದನೇ ರೈಲಾಗಿತ್ತು.
ರೈಲು ವೇಗವನ್ನು ಪಡೆಯುತ್ತಿದ್ದಂತೆ ರೈಲಿನೊಳಗೆ ಜನರು ಒಂದು ಹಂತಕ್ಕೆ ಶಾಂತರಾಗುತ್ತಿರುವಂತೆ ಕಂಡುಬಂದಾಗ ಕಿಶನ್ ಅವರ ಸಾರಂಗಿಯ ಮಾಧುರ್ಯ ರೈಲಿನ ಬೋಗಿಗಳನ್ನು ತುಂಬತೊಡಗಿತು.
“ತೇರಿ ಆಂಖೇ ಭೂಲ್ ಭುಲಯ್ಯಾ… ಬಾತೇಂ ಹೈ ಭೂಲ್ ಭುಲಯ್ಯಾ…”
ಅವರ ಕೈಯಲ್ಲಿದ್ದ ಕಮಾನಿನಂತಹ ಉಪಕರಣವನ್ನು ಅವರು ಚಕಚಕನೆ ಸಾರಂಗಿಯ ತಂತಿಗಳ ಮೇಲಾಡಿಸುತ್ತಿದ್ದರು. ಅದು ಮಧುರ ಸ್ವರವನ್ನು ಏರಿಳಿತಗಳನ್ನು ಅನುಸರಿಸಿ ಹೊರಡಿಸುತ್ತಿತ್ತು. ಸಾರಂಗಿಯ ಇನ್ನೊಂದು ತುದಿ ಅವರ ಎದೆ ಮತ್ತು ಎಡ ಹೆಗಲಿನ ಬಳಿ ವಿರಮಿಸಿತ್ತು. ಅವರು ಸಾರಂಗಿಯಿಂದ ಹೊರಡುತ್ತಿದ್ದ 2022ರ ಭೂಲ್ ಭುಲಯ್ಯಾ ಸಿನೆಮಾ ಹಾಡು ಇನ್ನಷ್ಟು ತೀಕ್ಷ್ಣವಾಗಿ ಜನರನ್ನು ಬೇಟೆಯಾಡುವಂತಿತ್ತು.
ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ಅಲ್ಲಿನ ಗದ್ದಲದಿಂದ ಹೊರಬಂದು ಕೆಲವು ಕ್ಷಣ ಮಧುರ ಸಂಗೀತದಲ್ಲಿ ಮನಸ್ಸನ್ನು ತಲ್ಲೀನಗೊಳಿಸಿದರು. ಇನ್ನೂ ಕೆಲವರು ತಮ್ಮ ಫೋನ್ ಹೊರತೆಗೆದು ರೆಕಾರ್ಡ್ ಮಾಡತೊಡಗಿದರು. ಇನ್ನೂ ಕೆಲವರು ಸುಮ್ಮನೆ ನಗುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ ಪುಟ್ಟ ಜ್ಯೋತಿ ಹಣ ಬೇಡಲು ಕಂಪಾರ್ಟ್‌ಮೆಂಟ್ ಒಳಗೆ ಓಡಾಡೊಡಗಿದಂತೆ ಜನರು ತಮ್ಮ ಇಯರ್ ಫೋನನ್ನು ಕಿವಿಗೆ ಸಿಕ್ಕಿಸಿಕೊಂಡು ಇನ್ನೆಲ್ಲೋ ನೋಡತೊಡಗಿದರು.










